SIR

ಚುನಾವಣಾ ಆಯೋಗದ ‘SIR 2026’ ಹೆಸರಲ್ಲಿ ನಡೀತಿದೆ ಸೈಬರ್ ವಂಚನೆಗಳು

SIR 2026 ನೆಪದಲ್ಲಿ ಸೈಬರ್ ವಂಚಕರು, ಸಾಮಾನ್ಯ ಜನರ ಮುಗ್ಧತೆ, ಗೊಂದಲ, ಅಜ್ಞಾನ ಮತ್ತು ಆತಂಕವನ್ನು ದುರುಪಯೋಗಿಸಿಕೊಂಡು ಯಾವೆಲ್ಲಾ ದಾರಿಗಳ ಮೂಲಕ ನಿಮ್ಮನ್ನು ತಲುಪುತ್ತಾರೆ? ನೀವೆಲ್ಲ ಹೇಗೆ ಎಚ್ಚರದಿಂದಿರಬೇಕು ಮತ್ತು ದುರದೃಷ್ಟವಶಾತ್ ವಂಚನೆಗೊಳಗಾದರೆ ಏನು ಮಾಡಬೇಕು ಎಂಬುದರ ಬಗ್ಗೆ ನಾನು ಈ ಅಂಕಣದಲ್ಲಿ ತಿಳಿಸಿಕೊಡಲಿದ್ದೇನೆ.

ಈ ತಿಂಗಳು ಕರ್ನಾಟಕದ ಎಲ್ಲೆಡೆ ಚುನಾವಣಾ ಆಯೋಗದ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision – SIR 2026)ದೇ ಹವಾ. ಒಂದೆಡೆ ಮನೆ ಮನೆಗೆ ಬರುವ ಚುನಾವಣಾ ಆಯೋಗದ ಅಧಿಕಾರಿಗಳು ಮತದಾರರ ಪಟ್ಟಿಯನ್ನು ಸರಿಪಡಿಸುತ್ತಿದ್ದರೆ ಇನ್ನೊಂದೆಡೆ ಸೈಬರ್ ವಂಚಕರು, ಸಾಮಾನ್ಯ ಜನರ ಮುಗ್ಧತೆ, ಗೊಂದಲ, ಅಜ್ಞಾನ ಮತ್ತು ಆತಂಕವನ್ನು ದುರುಪಯೋಗಪಡಿಸಿಕೊಳ್ಳಲು ಹೊಸ ಜಾಲ ಹೆಣೆದಿದ್ದಾರೆ. ನಮ್ಮ ರಾಜ್ಯದ ಗ್ರಾಮೀಣ ಭಾಗ ಮತ್ತು ನಗರ ಪ್ರದೇಶದ ಸಾಮಾನ್ಯ ಜನರೇ ಇವರ ಮುಖ್ಯ ಟಾರ್ಗೆಟ್. ಇಲ್ಲಿ ಸಾಮಾನ್ಯ ಜನರಿಗೆ ತಮ್ಮ ಮತದಾನದ ಅದಿಕಾರವನ್ನು ಕಳೆದುಕ್ಕೊಳ್ಳುವ ಆತಂಕ ಒಂದು ಕಡೆ ಇದ್ದರೆ ಅದರಿಂದ ಸರಕಾರಿ ಭಾಗ್ಯಗಳು ಮತ್ತು ಇತರ ಪ್ರಯೋಜನಗಳಿಂದ ವಂಚಿತರಾಗುವ ಭಯ ಇನ್ನೊಂದು ಕಡೆಯದಾಗಿದೆ. ಹಾಗಾದರೆ ಈ ವಂಚಕರು ಯಾವೆಲ್ಲಾ ದಾರಿಗಳ ಮೂಲಕ ನಿಮ್ಮನ್ನು ತಲುಪುತ್ತಾರೆ? ನೀವೆಲ್ಲ ಹೇಗೆ ಎಚ್ಚರದಿಂದಿರಬೇಕು ಮತ್ತು ದುರದೃಷ್ಟವಶಾತ್ ವಂಚನೆಗೊಳಗಾದರೆ ಏನು ಮಾಡಬೇಕು ಎಂಬುದರ ಬಗ್ಗೆ ನಾನು ಈ ಅಂಕಣದಲ್ಲಿ ತಿಳಿಸಿಕೊಡಲಿದ್ದೇನೆ.

ಸೈಬರ್ ವಂಚಕರು ಬಳಸುವ ಅಪಾಯಕಾರಿ ತಂತ್ರಗಳು :-

  • ನಕಲಿ ಅಪ್ಲಿಕೇಶನ್ ಮತ್ತು ಎಪಿಕೆ (APK) ಲಿಂಕ್‌ಗಳು : ನಿಮ್ಮ ಮೊಬೈಲ್‌ಗೆ ವಾಟ್ಸಾಪ್ ಅಥವಾ ಎಸ್‌ಎಮ್‌ಎಸ್ ಮೂಲಕ ಒಂದು ಲಿಂಕ್ ಬರುತ್ತದೆ. “ಚುನಾವಣಾ ಆಯೋಗದ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ, ನಿಮ್ಮ ವೋಟರ್ ಐಡಿ ಪರಿಷ್ಕರಿಸಿ” ಅಥವಾ “2002ರ ಚುನಾವಣಾ ಆಯೋಗದ ಪಟ್ಟಿಯಲ್ಲಿ ನಿಮ್ಮ ಮಾಹಿತಿ ಹುಡಿಕಿ” ಎಂಬ ಒಕ್ಕಣೆ ಇರುತ್ತದೆ. ನೀವು ಆ ಲಿಂಕ್ ಕ್ಲಿಕ್ ಮಾಡಿ ಆ್ಯಪ್ ಇನ್‌ಸ್ಟಾಲ್ ಮಾಡಿದ ತಕ್ಷಣ, ನಿಮ್ಮ ಫೋನ್‌ನ ಸಂಪೂರ್ಣ ನಿಯಂತ್ರಣ (ಮೆಸೇಜ್, ಬ್ಯಾಂಕಿಂಗ್ ಪಾಸ್‌ವರ್ಡ್, ಒಟಿಪಿ) ವಂಚಕರ ಕೈ ಸೇರುತ್ತದೆ.
  • ಓಟಿಪಿ (OTP) ದೋಖಾ : “ನಾನು ನಿಮ್ಮ ಬೂತ್ ಲೆವೆಲ್ ಅಧಿಕಾರಿ” ಎಂದು ಪರಿಚಯಿಸಿಕೊಳ್ಳುವ ವ್ಯಕ್ತಿ ಮೊಬೈಲ್ ಕರೆ ಮಾಡುತ್ತಾನೆ. ನಿಮ್ಮ ಮತದಾರರ ವಿವರ ಪರಿಶೀಲಿಸುವ ನೆಪದಲ್ಲಿ ಆಧಾರ್ ಸಂಖ್ಯೆ, ಜನ್ಮ ದಿನಾಂಕ, ಕುಟುಂಬದ ವಿವರಗಳನ್ನು ಕೇಳುತ್ತಾನೆ. ಕೊನೆಯಲ್ಲಿ OTP ಕೇಳುತ್ತಾನೆ ಮತ್ತು ಆ ಮಾಹಿತಿ ಪಡೆದು ನಿಮನ್ನು ವಂಚಿಸುತ್ತಾರೆ. 
  • QR ಕೋಡ್ ಮೋಸ : “ನಿಮ್ಮ ಮತದಾರರ ಗುರುತಿನ ಚೀಟಿ ಸಕ್ರಿಯಗೊಳಿಸಲು QR Scan ಮಾಡಿ” ಎಂದು ಹೇಳುತ್ತಾರೆ. QR ಸ್ಕ್ಯಾನ್ ಮಾಡಿದರೆ ಯಾವುದೇ ಸರ್ಕಾರಿ ಸೇವೆ ಸಕ್ರಿಯವಾಗುವುದಿಲ್ಲ, ಬದಲಾಗಿ ನಿಮ್ಮ ಹಣ ವರ್ಗಾವಣೆ ಅಥವಾ ಮೊಬೈಲ್/ಕಂಪ್ಯೂಟರ್ ಗೇ ಒಂದು ಕೀಲಾಗ್ಗೆರ್ ತರಹದ ಸಾಫ್ಟ್ವೇರ್ ಮಾಲ್ವರ್/ವೈರಸ್ ಸ್ಥಾಪಿಸಿ ಅದರ ಮೂಲಕ ನಿಮ್ಮನ್ನು ವಂಚಿಸುತ್ತಾರೆ.
  • Deepfake ಅಧಿಕಾರಿಗಳು : AI ತಂತ್ರಜ್ಞಾನದಿಂದ ಅಧಿಕಾರಿಗಳ ಧ್ವನಿ ಹೋಲುವಂತೆ ವಿಡಿಯೊಗಳನ್ನು ಸೃಷ್ಟಿಸಿ ಜನರನ್ನು ನಂಬಿಸುವ ಪ್ರಯತ್ನವೂ ಆರಂಭವಾಗಿದೆ. ವಿಡಿಯೊದಲ್ಲಿರುವ ವ್ಯಕ್ತಿ ನಿಜವಾಗಿಯೂ ಸರ್ಕಾರಿ ಅಧಿಕಾರಿ ಎಂದು ತಿಳಿದು ನೀವು ಅವರು ಹೇಳುವ ಹಾಗೇ ಯಾವುದೊ ಹೈಪರ್ ಲಿಂಕ್ ಕ್ಲಿಕ್ ಮಾಡುತ್ತೀರಾ ಅಥವಾ ಅವರು ಹೇಳುವ ಆಪ್ ಇನ್ಸ್ಟಾಲ್ ಮಾಡುತ್ತೀರಾ, ಅದರ ಮೂಲಕ ನಿಮ್ಮ ಮಾಹಿತಿಯನ್ನು ಕದ್ದು ನಿಮ್ಮನ್ನು ವಂಚಿಸುತ್ತಾರೆ.
  • ನಕಲಿ ಅಪ್ಲಿಕೇಶನ್/ಜಾಲತಾಣ : ನಿಮ್ಮ ಗೂಗಲ್ ಪ್ಲೇಸ್ಟೋರ್ ಅಥವಾ ಆಪಲ್ ಸ್ಟೋರ್ ನಲ್ಲಿ ‘SIR 2026′ ಅಥವಾ “ವೋಟರ್ ಲಿಸ್ಟ್  2002’ ಹೆಸರಲ್ಲಿ ಒಂದು ಅಪ್ಲಿಕೇಶನ್ ಅಥವಾ ಜಾಲತಾಣವನ್ನು ಸೃಷ್ಟಿಸುತ್ತಾರೆ ಮತ್ತು ನೀವೇನಾದರೂ ಅದನ್ನು ಬಳಸಿದರೆ ಅದರ ಮೂಲಖ ನಿಮ್ಮ ಖಾಸಗಿ ಮಾಹಿತಿಯನ್ನು ಕದ್ದು ನಿಮ್ಮನ್ನು ವಂಚಿಸುತ್ತಾರೆ.

 ಇಂತಹ ವಂಚನೆಯಿಂದ ಬಚಾವಾಗಲು ನೀವು :-

  • ಎಲ್ಲಾ ಡಿಜಿಟಲ್ ವಹಿವಾಟುಗಳಿಗೆ ‘ಶೂನ್ಯ ಟ್ರಸ್ಟ್, ತಾಳ್ಮೆ ಮತ್ತು ದೃಢೀಕರಣ’ ತತ್ವವನ್ನು ಯಾವಾಗಲೂ ಅನುಸರಿಸಿ, ಮೂಲಭೂತವಾಗಿ ಪರಿಶೀಲನೆಯ ನಂತರವೇ ಪ್ರತಿಕ್ರಿಯಿಸಿ.
  • ಎಲ್ಲ ಸಂದೇಹಗಳಿಗೆ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ voters.eci.gov.in, ceo.karnataka.gov.in ಅಥವಾ nvsp.in ಮತ್ತು ECINET ಆಪ್ ಮಾತ್ರ ಬಳಸಿ.
  • ಆಧಾರ್ ಸಂಖ್ಯೆ, PAN, ಖಾತೆ ಸಂಖ್ಯೆ, CVV, OTP, ಅಥವಾ ಯಾವುದೇ ವೈಯಕ್ತಿಕ ಮಾಹಿತಿಯನ್ನು ತೀರಾ ಅವಶ್ಯಕತೆಯಿದ್ದರೆ ಮಾತ್ರ ಪರಿಶೀಲಿಸಿ ಕೊಡಿ.
  • ಅಪರಿಚಿತರು ಕಳುಹಿಸಿದ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ ಅಥವಾ ಯಾವುದೇ ಅಪ್ಲಿಕೇಶನ್ ಅನ್ನು ಸ್ಥಾಪಿಸಬೇಡಿ.
  • ಬ್ಯಾಂಕಿಂಗ್ ಟ್ರಾನ್ಸ್ಯಾಕ್ಷನ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿ. ಅನಿರೀಕ್ಷಿತ ಚಟುವಟಿಕೆ ಕಂಡರೆ ತಕ್ಷಣ ವಿಚಾರಿಸಿ.
  • ಚುನಾವಣಾ ಆಯೋಗದ ಅಧಿಕೃತ BLO ಅಧಿಕಾರಿ ಮನೆಗೆ ಬಂದರೆ ಅವರ ಐಡಿ ಪರಿಶೀಲಿಸಿದ ನಂತರವೇ ಅವರೊಂದಿಗೆ ವ್ಯವಹರಿಸಿ.

ನೀವು  ಸೈಬರ್ ವಂಚನೆಗೆ ಒಳಗಾಗಿದ್ದರೆ ಏನು ಮಾಡಬಹುದು :-

ನೀವು ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ನಿಮ್ಮ ಬ್ಯಾಂಕ್‌ಗೆ ತಕ್ಷಣ ಕರೆ ಮಾಡಿ, ನಡೆದ ವಿಷಯ ತಿಳಿಸಿ ಮತ್ತು ನಿಮ್ಮ ಖಾತೆ ಹಾಗೂ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿಸಿ ಮತ್ತು ಪಾಸ್ವರ್ಡ್/ಪಿನ್ ಬದಲಾಯಿಸಿ. ನೀವು ಆಧಾರ್ ಕಾರ್ಡ್ ಮಾಹಿತಿ ಅಥವಾ ನಕಲು ಪ್ರತಿಯನ್ನು ಹಂಚಿಕೊಂಡಿದ್ದರೆ, ನಿಮ್ಮ ಆಧಾರ್ ಕಾರ್ಡ್ ಅನ್ನು ಆಧಾರ್ ವೆಬ್ಸೈಟ್ ಅಥವಾ mAadhaar ಅಪ್ಲಿಕೇಶನ್ನಲ್ಲಿ ನಿರ್ಬಂಧಿಸಿ. ನಿಮ್ಮ ಸಾಧನವು ಮಾಲ್ವೇರ್ ಸೋಂಕಿಗೆ ಒಳಗಾಗಿದೆ ಎಂದು ನೀವು ಭಾವಿಸಿದರೆ, ಅದನ್ನು ಬ್ಯಾಕಪ್ ತೆಗೆದುಕೊಂಡ ನಂತರ ಫಾರ್ಮ್ಯಾಟ್ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ