ಇರಾನ್–ಅಮೆರಿಕಾ ಯುದ್ಧಕ್ಕಿಂತ ಭಯಾನಕ ಈ ಸೈಬರ್ ವಂಚನೆಗಳು
ಫೆಬ್ರವರಿ ೨೮, ೨೦೨೬. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಬಾಂಬ್ ದಾಳಿ ನಡೆಸಿದ ದಿನ. ಆ ರಾತ್ರಿಯೇ, ಮಂಗಳೂರಿನ ಒಬ್ಬ ಸಾಫ್ಟ್‌ವೇರ್ ಉದ್ಯೋಗಿಗೆ ಒಂದು ವಾಟ್ಸ್ಆಪ್ ಸಂದೇಶ ಬಂತು: “ಇರಾನ್ ಯುದ್ಧದಿಂದ ತೈಲ ಬೆಲೆ ಮೂರು ಪಟ್ಟು ಏರಲಿದೆ. ಈಗಲೇ ಈ ಆ್ಯಪ್‌ನಲ್ಲಿ ಕ್ರೂಡ್ ಆಯಿಲ್ ಫ್ಯೂಚರ್ಸ್ ಖರೀದಿಸಿ, ಲಕ್ಷ ಗಳಿಸಿ.” ಆ ಲಿಂಕ್ ಕ್ಲಿಕ್ ಮಾಡಿದ ಆತ ಎರಡು ದಿನಗಳಲ್ಲಿ ₹೩ ಲಕ್ಷ ಕಳೆದುಕೊಂಡ. ಇದು ಒಂದು ಕಾಲ್ಪನಿಕ ಕಥೆಯಲ್ಲ. ಇಂದು ಕರ್ನಾಟಕ ಮತ್ತು ಭಾರತದ ಉದ್ದಗಲಕ್ಕೂ ಇಂತಹ ನೂರಾರು ಪ್ರಕರಣಗಳು ನಡೆಯುತ್ತಿವೆ.
ಅತ್ತ ಇರಾನ್ ಮತ್ತು ಇಸ್ರೇಲ್ /ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದ್ದರೆ, ಇತ್ತ ನಮ್ಮ ಕರ್ನಾಟಕ ಮತ್ತು ಭಾರತದ ಸಾಮಾನ್ಯ ನಾಗರಿಕರ ಮೇಲೆ ಸೈಬರ್ ಅಪರಾಧಿಗಳು ಇದೆ ಯುದ್ದವನ್ನು ತಮ್ಮ ಬಂಡವಾಳವನ್ನಾಗಿಸಿಕ್ಕೊಂಡು ಅನೇಕ ರೀತಿಯ ಸೈಬರ್ ಅಪರಾಧಗಳನ್ನೆಸಗುತ್ತಿದ್ದಾರೆ. ನಾನು ಈ ಲೇಖನದಲ್ಲಿ ಯುದ್ಧದ ಹೆಸರಿನಲ್ಲಿ ನಡೆಯುತ್ತಿರುವ ವಿವಿಧ ಸೈಬರ್ ವಂಚನೆಗಳು, ಅದರಿಂದ ನೀವು ಹೇಗೆ ನಿಮ್ಮನ್ನು ಕಾಪಾಡಿಕೊಳ್ಳಬಹುದು, ನೀವೇನಾದರು ಈ ಸೈಬರ್ ಅಪರಾಧಕ್ಕೆ ಬಲಿಯಾದರೆ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
ಯುದ್ಧದ ಹೆಸರಿನಲ್ಲಿ ನಡೆಯುತ್ತಿರುವ ಪ್ರಮುಖ ಸೈಬರ್ ವಂಚನೆಗಳು:-
- ಫಿಶಿಂಗ್ ಅಪರಾದಗಳು : ಇತ್ತೀಚೆಗೆ ಜನರಿಗೆ “ನಿಮ್ಮ ಬ್ಯಾಂಕ್ ಖಾತೆ ಸುರಕ್ಷತೆ ಪರಿಶೀಲನೆ”, “ಯುದ್ಧದ ಪರಿಣಾಮದಿಂದ ನಿಮ್ಮ ಪ್ರಯಾಣ ರದ್ದು” ಎಂಬ sms/ಇಮೇಲ್ ಸಂದೇಶಗಳು ಬರುತ್ತಿವೆ. ಇವುಗಳಲ್ಲಿ ಇರುವ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ, ನಿಮ್ಮ ಮೊಬೈಲ್ ವೈರಸ್ ದಾಳಿಗೆ ತುತ್ತಾಗಿ ನಿಮ್ಮ ಖಾಸಗಿ ಮಾಹಿತಿ ಅಥವಾ ಹಣ ಹೋಗಬಹುದು.
- ನಕಲಿ ದೇಣಿಗೆ ಸಂಗ್ರಹಣೆ : “ಯುದ್ಧದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಿ”, “ಇರಾನ್ ಜನರಿಗೆ ದೇಣಿಗೆ ನೀಡಿ” ಎಂಬ ಸಂದೇಶಗಳು WhatsApp, Telegram ಮೂಲಕ ಹರಡುತ್ತಿವೆ. ಆದರೆ ಈ ಹಣವು ಬಡವರ ಕೈಗೆ ಹೋಗುವುದಿಲ್ಲ; ಅದು ನೇರವಾಗಿ ಮೋಸಗಾರರ ಖಾತೆಗೆ ಸೇರುತ್ತದೆ.
- ಹೂಡಿಕೆ ಮೋಸಗಳು : “ತೈಲ/ಚಿನ್ನ ಬೆಲೆ ಏರಲಿದೆ, ಈ ಟ್ರೇಡಿಂಗ್ ಆ್ಯಪ್‌ನಲ್ಲಿ ಹಣ ಹಾಕಿ, ದ್ವಿಗುಣಗೊಳಿಸಿ” ಎಂಬ ಸಂದೇಶಗಳು ಹರಡುತ್ತವೆ. Facebook, WhatsApp, Telegram ಗ್ರೂಪ್‌ಗಳಲ್ಲಿ ಪ್ರಸಾರವಾಗುವ ಈ ನಕಲಿ ಆ್ಯಪ್‌ಗಳು ಆರಂಭದಲ್ಲಿ ಸ್ವಲ್ಪ ಲಾಭ ತೋರಿಸಿ ನಂತರ ಇಡೀ ಮೊತ್ತವನ್ನು ನುಂಗಿ ಬಿಡುತ್ತವೆ.
- ಡೀಪ್‌ಫೇಕ್ ಮತ್ತು ಸುಳ್ಳು ಸುದ್ದಿ : ಸೋಷಿಯಲ್ ಮೀಡಿಯಾ ಅಲ್ಗಾರಿದಮ್‌ಗಳು ಯುದ್ಧದ ಭೀಕರ ಡೀಪ್‌ಫೇಕ್ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವ ವಿಡಿಯೋಗಳನ್ನು ಸತತವಾಗಿ ತೋರಿಸುವ ಮೂಲಕ ನಮ್ಮನ್ನು ಆತಂಕದ ಸುಳಿಗೆ ತಳ್ಳುತ್ತಿವೆ. ಇದು ಜನರನ್ನು ಭಯಗೊಳಿಸಿ ಅವರನ್ನು ಹತಾಶೆಯ ಮಟ್ಟಕ್ಕೆ ತಲುಪಿಸಬಲ್ಲವು.
- ನಕಲಿ ಆಪ್‌ಗಳು : “war news alert app”, “US-Iran Conflict Tracker” ಎಂಬ ಹೆಸರಿನಲ್ಲಿ ಕೆಲವು ಅಪ್ಲಿಕೇಶನ್‌ಗಳು ಹರಡುತ್ತಿವೆ. ಇವುಗಳನ್ನು ಇನ್‌ಸ್ಟಾಲ್ ಮಾಡಿದರೆ, ನಿಮ್ಮ SMS, OTP, ಬ್ಯಾಂಕ್ ಮಾಹಿತಿ ಎಲ್ಲವೂ ಹ್ಯಾಕರ್‌ಗಳಿಗೆ ಸಿಗುತ್ತದೆ.
ಇಂತಹ ವಂಚನೆಯಿಂದ ಬಚಾವಾಗಲು ನೀವು :-
- ಎಲ್ಲಾ ಡಿಜಿಟಲ್ ವಹಿವಾಟುಗಳಿಗೆ ‘ಶೂನ್ಯ ಟ್ರಸ್ಟ್, ತಾಳ್ಮೆ ಮತ್ತು ದೃಢೀಕರಣ’ ತತ್ವವನ್ನು ಯಾವಾಗಲೂ ಅನುಸರಿಸಿ, ಮೂಲಭೂತವಾಗಿ ಪರಿಶೀಲನೆಯ ನಂತರವೇ ಪ್ರತಿಕ್ರಿಯಿಸಿ.
- ಅಪರಿಚಿತರಿಂದ ಬರುವ ಕರೆಗಳನ್ನು ಸ್ವೀಕರಿಸಬೇಡಿ, ತುರ್ತು ಕರೆಗಳಾಗಿದ್ದರೆ ಅವರು ಮೆಸೇಜ್ ಮಾಡುತ್ತಾರೆ ಅಥವಾ ವಾಯ್ಸ್ ಮೇಲ್ ಬಿಡುತ್ತಾರೆ.
- ಸ್ಪ್ಯಾಮ್ ಕರೆಗಳನ್ನು ಗುರುತಿಸುವ ಮತ್ತು ಬ್ಲಾಕ್ ಮಾಡುವ ಒಳ್ಳೆ ರೇಟಿಂಗ್/ವಿಮರ್ಶೆಗಳಿರುವ ಕಾಲ್ ಬ್ಲಾಕಿಂಗ್ ಆಪ್ ಬಳಸಿ.
- ಸಂದೇಹಾಸ್ಪದ ಕರೆ ಬಂದರೆ ತಕ್ಷಣ ಕರೆ ಕತ್ತರಿಸಿ ಅಥವಾ ಪರಿಶೀಲಿಸಿದ ನಂತರವೇ ಉತ್ತರಿಸಿ ಅಥವಾ ನೀವು ವಾಪಸ್ ಕರೆ ಮಾಡಿ.
- ಅಪರಿಚಿತರು ಕಳುಹಿಸಿದ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ ಅಥವಾ ಯಾವುದೇ ಅಪ್ಲಿಕೇಶನ್ ಅನ್ನು ಸ್ಥಾಪಿಸಬೇಡಿ.
- ಬ್ಯಾಂಕಿಂಗ್ ಟ್ರಾನ್ಸ್ಯಾಕ್ಷನ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿ. ಅನಿರೀಕ್ಷಿತ ಚಟುವಟಿಕೆ ಕಂಡರೆ ತಕ್ಷಣ ವಿಚಾರಿಸಿ.
- ಆಧಾರ್ ಸಂಖ್ಯೆ, PAN, ಖಾತೆ ಸಂಖ್ಯೆ, CVV, OTP, ಅಥವಾ ಯಾವುದೇ ವೈಯಕ್ತಿಕ ಮಾಹಿತಿಯನ್ನು ತೀರಾ ಅವಶ್ಯಕತೆಯಿದ್ದರೆ ಮಾತ್ರ ಪರಿಶೀಲಿಸಿ ಕೊಡಿ.
ನೀವು ಸೈಬರ್ ವಂಚನೆಗೆ ಒಳಗಾಗಿದ್ದರೆ ಏನು ಮಾಡಬಹುದು :-
ನೀವು ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ವೆಬ್‌ಸೈಟ್ನಲ್ಲಿ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ನಿಮ್ಮ ಬ್ಯಾಂಕ್‌ಗೆ ತಕ್ಷಣ ಕರೆ ಮಾಡಿ, ನಡೆದ ವಿಷಯ ತಿಳಿಸಿ ಮತ್ತು ನಿಮ್ಮ ಖಾತೆ ಹಾಗೂ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿಸಿ ಮತ್ತು ಪಾಸ್ವರ್ಡ್/ಪಿನ್ ಬದಲಾಯಿಸಿ. ನೀವು ಆಧಾರ್ ಕಾರ್ಡ್ ಮಾಹಿತಿ ಅಥವಾ ನಕಲು ಪ್ರತಿಯನ್ನು ಹಂಚಿಕೊಂಡಿದ್ದರೆ, ನಿಮ್ಮ ಆಧಾರ್ ಕಾರ್ಡ್ ಅನ್ನು ಆಧಾರ್ ವೆಬ್ಸೈಟ್ ಅಥವಾ mAadhaar ಅಪ್ಲಿಕೇಶನ್ನಲ್ಲಿ ನಿರ್ಬಂಧಿಸಿ. ನಿಮ್ಮ ಸಾಧನವು ಮಾಲ್ವೇರ್ ಸೋಂಕಿಗೆ ಒಳಗಾಗಿದೆ ಎಂದು ನೀವು ಭಾವಿಸಿದರೆ, ಅದನ್ನು ಬ್ಯಾಕಪ್ ತೆಗೆದುಕೊಂಡ ನಂತರ ಫಾರ್ಮ್ಯಾಟ್ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.



