ಕರ್ನಾಟಕದ “ಜವಾಬ್ದಾರಿಯುತ ಡಿಜಿಟಲ್ ಬಳಕೆ” ಕರಡು ನೀತಿ ಅವಲೋಕನ
ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳ ಜೀವನವು ಸ್ಮಾರ್ಟ್‌ಫೋನ್, ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಗೇಮಿಂಗ್‌ಗಳೊಂದಿಗೆ ಬೆಸೆದುಕೊಂಡಿದೆ. ಕೊರೊನಾ ನಂತರದ ಕಾಲದಲ್ಲಿ ಶಾಲಾ-ಕಾಲೇಜುಗಳು ಆನ್‌ಲೈನ್ ತರಗತಿಗಳಿಗೆ ತಿರುಗಿದ್ದರಿಂದ ವಿದ್ಯಾರ್ಥಿಗಳ ಸ್ಕ್ರೀನ್ ಸಮಯ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆ, ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಡಿಜಿಟಲ್ ವ್ಯಸನ, ಮಾನಸಿಕ ಒತ್ತಡ, ಧ್ಯಾನ ಕೊರತೆ, ಮತ್ತು ಶೈಕ್ಷಣಿಕ ಸಾಧನೆ ಕುಸಿತ ಎಂಬ ಸಮಸ್ಯೆಗಳು ಗಂಭೀರವಾಗಿ ಬೆಳೆಯುತ್ತಿರುವುದು ಗಮನಾರ್ಹ. ಇದರ ಪರಿಣಾಮವಾಗಿ ಮಾನಸಿಕ ಆರೋಗ್ಯ ಸಮಸ್ಯೆಗಳು, ನಿದ್ರಾ ಕೊರತೆ, ಶೈಕ್ಷಣಿಕ ಕುಸಿತ ಮತ್ತು ಸಾಮಾಜಿಕ ಒಂಟಿತನ ಹೆಚ್ಚಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಕಳೆದ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವ 2026–27ರ ಬಜೆಟ್ ಪ್ರಸ್ತಾವನೆಯನ್ನು ಮಂಡಿಸಿದರು, ನಂತರ ಜವಾಬ್ದಾರಿಯುತ ಡಿಜಿಟಲ್ ಬಳಕೆಗಾಗಿ ಕರಡು ನೀತಿಯನ್ನು ಇದೆ ಏಪ್ರಿಲ್ ಒಂದರಂದು ಬಿಡುಗಡೆ ಮಾಡಲಾಯಿತು. ಈ ನೀತಿಯು ಕೇವಲ ನಿಯಮಗಳ ಪಟ್ಟಿಯಲ್ಲ, ಬದಲಾಗಿ ನಮ್ಮ ನಾಳಿನ ಪ್ರಜೆಗಳ ಮಾನಸಿಕ ಆರೋಗ್ಯ ಮತ್ತು ಬೌದ್ಧಿಕ ಬೆಳವಣಿಗೆಯನ್ನು ರಕ್ಷಿಸುವ ಒಂದು ಮಹತ್ವದ ಹೆಜ್ಜೆಯಾಗಿದೆ.
ಈ ಲೇಖನದಲ್ಲಿ ನಾನು ಈ ಕರಡು ನೀತಿಯ ಹಿನ್ನಲೆ, ಪ್ರಮುಖ ಉದ್ದೇಶ ಮತ್ತು ಗುರಿಗಳು, ಈ ಕರಡು ನೀತಿಯ ಸಾಧಕ ಬಾಧಕಗಳೇನು ಮತ್ತು ಈ ವಿಷಯದ ಕುರಿತು ಬೇರೆ ಸರಕಾರಗಳು ಮತ್ತು ದೇಶಗಳು ಏನು ಮಾಡುತ್ತಿವೆ ಹಾಗು ನನ್ನ ಮತ್ತು ಇತರ ತಜ್ಞರ ಅಭಿಪ್ರಾಯಗಳ ಬಗ್ಗೆ ತಿಳಿಸಿಕೊಡಲಿದ್ದೇನೆ. ಮಕ್ಕಳ ಮೇಲೆ ಎಸಗುವ ಅನೇಕ ಸೈಬರ್ ಅಪರಾಧಗಳ ಕುರಿತು ಅನೇಕ ಲೇಖನಗಳನ್ನು ಈ ಹಿಂದೆ ನಾನು ಬರೆದಿದ್ದೇನೆ, ಅದನ್ನು ಓದಲು ನೀವು ನನ್ನ ದ್ವಿಭಾಷಾ ಬ್ಲಾಗ್ ಸಂದರ್ಶಿಸಿ.
ಡಿಜಿಟಲ್ ಯುಗದ ಅಪಾಯ ಮತ್ತು ನೀತಿ ರೂಪೀಕರಣದ ಹಿನ್ನೆಲೆ :-
ಇಂದು ಭಾರತದ ಪ್ರತಿಯೊಂದು ಕುಟುಂಬದಲ್ಲಿ ಒಂದು ದೃಶ್ಯ ಸಾಮಾನ್ಯವಾಗಿ ಕಾಣಿಸುತ್ತದೆ — ಮನೆಯ ಮಗು ಊಟ ಮಾಡುವಾಗಲೂ, ಮಲಗುವ ಮೊದಲೂ, ಎಚ್ಚರವಾಗುತ್ತಿದ್ದಂತೆಯೂ ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಹಿಡಿದು ಕುಳಿತಿರುತ್ತದೆ. ಶಾಲೆ ಮುಗಿದ ತಕ್ಷಣ ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಅಥವಾ ಆನ್‌ಲೈನ್ ಗೇಮಿಂಗ್‌ನಲ್ಲಿ ಮುಳುಗಿಹೋಗುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಕೇವಲ ಪಾಲಕರ ಆತಂಕಕ್ಕೆ ಮಾತ್ರ ಸೀಮಿತವಾಗದೆ, ಈಗ ಸರ್ಕಾರದ ಗಮನವನ್ನೂ ಸೆಳೆದಿದೆ.
ಡಿಜಿಟಲ್ ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಉಂಟಾಗುವ ಮಾನಸಿಕ ಒತ್ತಡ, ಶೈಕ್ಷಣಿಕ ಅವನತಿ, ಸಾಮಾಜಿಕ ಪ್ರತ್ಯೇಕತೆ ಮತ್ತು ಸೈಬರ್ ಅಪಾಯಗಳು ಇಂದು ಗಂಭೀರ ಸಾಮಾಜಿಕ ಸಮಸ್ಯೆಗಳಾಗಿ ಬೆಳೆದಿವೆ. NIMHANS ಅಂಕಿಅಂಶಗಳ ಪ್ರಕಾರ, ಕರ್ನಾಟಕದ ಶೇಕಡ ೨೫ ಹದಿಹರೆಯದ ವಿದ್ಯಾರ್ಥಿಗಳು ಇಂಟರ್ನೆಟ್ ಚಟದ ಲಕ್ಷಣಗಳನ್ನು ತೋರಿಸುತ್ತಿದ್ದಾರೆ. ಇದರ ಜೊತೆ ನಿದ್ರಾ ಅಸ್ವಸ್ಥತೆ, ಆತಂಕ, ಖಿನ್ನತೆ, ಸಾಮಾಜಿಕ ಏಕಾಂಗಿತನ ಮತ್ತು ಶೈಕ್ಷಣಿಕ ಅವನತಿ ವ್ಯಾಪಕವಾಗಿ ಕಾಣಿಸುತ್ತಿದೆ. ಸೈಬರ್‌ಬುಲ್ಲಿಯಿಂಗ್, ಅನಾರೋಗ್ಯಕರ ಶರೀರ ಚಿತ್ರಣ, ಮತ್ತು ಅಪರಿಚಿತರಿಂದ ಲೈಂಗಿಕ ಶೋಷಣೆಯ ಸಂದರ್ಭಗಳೂ ಹೆಚ್ಚುತ್ತಿವೆ. ಪಾಲಕರ ದೃಷ್ಟಿಕೋನ ನೋಡಿದರೆ, ಹೆಚ್ಚಿನ ತಂದೆತಾಯಿಗಳು ಒಂದು ಸಂಕಟದಲ್ಲಿದ್ದಾರೆ. ‘ಮಗುವಿಗೆ ಫೋನ್ ಕೊಡದಿದ್ದರೆ ಆನ್‌ಲೈನ್ ಪಾಠ/ಕಲಿಕೆ ಕಳೆದುಕೊಳ್ಳುತ್ತಾನೆ, ಕೊಟ್ಟರೆ ಗಂಟೆಗಟ್ಟಲೆ ರೀಲ್ ನೋಡುತ್ತಾನೆ’ — ಇದು ಮಧ್ಯಮ ವರ್ಗದ ಅನೇಕ ಕುಟುಂಬಗಳ ನೋವು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಏಪ್ರಿಲ್ ೨೦೨೬ರ ಮೊದಲ ವಾರದಲ್ಲಿ ಒಂದು ಮಹತ್ವದ ಕ್ರಮ ಕೈಗೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) ಜಂಟಿಯಾಗಿ ವಿದ್ಯಾರ್ಥಿಗಳ ಜವಾಬ್ದಾರಿಯುತ ಡಿಜಿಟಲ್ ಬಳಕೆಗೆ ಸಂಬಂಧಿಸಿದ ಕರಡು ನೀತಿಯನ್ನು ಬಿಡುಗಡೆ ಮಾಡಿವೆ. ಈ ನೀತಿಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಅವರು ಮಾಧ್ಯಮಕ್ಕೆ ಪರಿಚಯಿಸಿದರು. ನೀತಿ ಇನ್ನೂ ಕರಡು ಹಂತದಲ್ಲಿದ್ದು, ಸಾರ್ವಜನಿಕರ ಅಭಿಪ್ರಾಯಕ್ಕಾಗಿ ತೆರೆದಿಡಲಾಗಿದೆ.
“ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ಡಿಜಿಟಲ್ ಬಳಕೆ” ಕರಡು ನೀತಿಯ ಪ್ರಮುಖ ಉದ್ದೇಶ ಮತ್ತು ಗುರಿಗಳು :-
ಈ ಕರಡು ನೀತಿಯು ಮುಖ್ಯವಾಗಿ ೯ ಮತ್ತು ೧೦ನೇ ತರಗತಿಯ ಶಾಲಾ ವಿದ್ಯಾರ್ಥಿಗಳನ್ನು ಹಾಗೂ ೧೧ ಮತ್ತು ೧೨ನೇ ತರಗತಿಯ ಪ್ರೌಢ ಶಿಕ್ಷಣ ವಿದ್ಯಾರ್ಥಿಗಳನ್ನು ಗುರಿಯಾಗಿಸಿದೆ. ಇದು ಕೇವಲ ಮೊಬೈಲ್ ಬ್ಯಾನ್ ಅಥವಾ ನಿಷೇಧದ ಕುರಿತಾದ ನೀತಿಯಲ್ಲ. ಬದಲಾಗಿ, ಇದು ಶಾಲಾ ವ್ಯವಸ್ಥೆ, ಶಿಕ್ಷಕರು, ಪಾಲಕರು ಮತ್ತು ಸರ್ಕಾರ — ಎಲ್ಲರ ಸಮ್ಮಿಲಿತ ಪ್ರಯತ್ನದ ಮೂಲಕ ಡಿಜಿಟಲ್ ಆರೋಗ್ಯ ಸಾಧಿಸುವ ಒಂದು ಸಮಗ್ರ ಚೌಕಟ್ಟು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ನಿಮ್ಹಾನ್ಸ್ ಮತ್ತು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಈ ನೀತಿಯನ್ನು ರೂಪಿಸಿದೆ. ಡಿಜಿಟಲ್ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸುರಕ್ಷಿತವಾಗಿರುವಂತೆ ಮಾಡುವುದು ಮತ್ತು ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಉಂಟಾಗುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಇದರ ಮೂಲ ಉದ್ದೇಶವಾಗಿದೆ.
ನೀತಿಯ ಪ್ರಮುಖ ಗುರಿಗಳು :
- ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಯೋಗಕ್ಷೇಮ ಮತ್ತು ಭಾವನಾತ್ಮಕ ಸ್ಥಿತಿಸ್ಥಾಪಕತ್ವವನ್ನು ಬೆಳೆಸುವುದು.
- ಸೈಬರ್ ಅಪರಾಧ, ಆನ್‌ಲೈನ್ ದುರುಪಯೋಗದಿಂದ ವಿದ್ಯಾರ್ಥಿಗಳನ್ನು ರಕ್ಷಿಸುವುದು.
- ವಿದ್ಯಾರ್ಥಿಗಳ ಶಾಲಾ ಪಠ್ಯಕ್ರಮದಲ್ಲಿ ಡಿಜಿಟಲ್ ಸಾಕ್ಷರತೆ, ಸೈಬರ್ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯ ಜಾಗೃತಿ ಮತ್ತು ಜವಾಬ್ದಾರಿಯುತ ಆನ್‌ಲೈನ್ ನಡವಳಿಕೆಯ ಬಗ್ಗೆ ಅರಿವು ಮೂಡಿಸುವುದು.
- ವಿದ್ಯಾರ್ಥಿಗಳಲ್ಲಿ ಡಿಜಿಟಲ್ ವ್ಯಸನವನ್ನು ಕಡಿಮೆ ಮಾಡುವುದು.
- ವಿದ್ಯಾರ್ಥಿಗಳಲ್ಲಿ ಡಿಜಿಟಲ್ ವ್ಯಸನದ ಆರಂಭಿಕ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ಶಿಕ್ಷಕರು ಮತ್ತು ಪೋಷಕರಿಗೆ ತರಬೇತಿ ನೀಡುವುದು.
- ಶೈಕ್ಷಣಿಕ ಚಟುವಟಿಕೆಗಳಿಗೆ ಡಿಜಿಟಲ್ ಉಪಕರಣಗಳನ್ನು ಸರಿಯಾದ ರೀತಿಯಲ್ಲಿ ಬಳಸುವಂತೆ ಮಾರ್ಗದರ್ಶನ ನೀಡುವುದು.
- ಪ್ರತಿ ಶಾಲೆಯಲ್ಲೂ ಡಿಜಿಟಲ್ ಸುರಕ್ಷತೆ ಮತ್ತು ಕ್ಷೇಮ ಸಮಿತಿಗಳ ಸ್ಥಾಪನೆ.
- ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಸಹಕಾರದ ವ್ಯವಸ್ಥೆ ನಿರ್ಮಾಣ.
- ವಿದ್ಯಾರ್ಥಿಗಳಿಗೆ ಮನರಂಜನೆಗಾಗಿ ದಿನಕ್ಕೆ ಗರಿಷ್ಠ ಒಂದು ಗಂಟೆ ಸ್ಕ್ರೀನ್ ಟೈಮ್ ಮಿತಿ.
- ರಾತ್ರಿ ೭ ಗಂಟೆಯ ನಂತರ ಇಂಟರ್ನೆಟ್ ಬಳಕೆ ನಿರ್ಬಂಧಿಸುವ ಸಲಹೆ.
- ಮಕ್ಕಳ ವಯಸ್ಸಿಗೆ ತಕ್ಕಂತಹ ಫೋನ್ ಮತ್ತು ಆಪ್ ವಿನ್ಯಾಸ ಹಾಗು ಆಧಾರ್ ಆಧಾರಿತ ವಯಸ್ಸಿನ ದೃಢೀಕರಣ.
ಈ ನೀತಿಯ ಯಶಸ್ಸಿಗಾಗಿ, ಪಾಲಕರು ಮನೆಯಲ್ಲಿ ತಂತ್ರಜ್ಞಾನ ಬಳಕೆಯನ್ನು ನಿಯಂತ್ರಿಸಬೇಕು; ಶಾಲೆಗಳು ಬೆಂಬಲ ವ್ಯವಸ್ಥೆಗಳನ್ನು ಜಾರಿಗೊಳಿಸಬೇಕು; ಮತ್ತು ಸರ್ಕಾರ ಮಾರ್ಗಸೂಚಿ, ಅನುದಾನ ಮತ್ತು ಮೇಲ್ವಿಚಾರಣೆ ಒದಗಿಸಬೇಕು.
‘ಜವಾಬ್ದಾರಿಯುತ ಡಿಜಿಟಲ್ ಬಳಕೆ’ ಕರಡು ನೀತಿ ಸಾಧಕಗಳೇನು :-
1. ವಿದ್ಯಾರ್ಥಿಗಳ ಆರೋಗ್ಯದ ಕಡೆ ಗಮನ : ಈ ನೀತಿ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಹೆಚ್ಚು ಡಿಜಿಟಲ್ ಬಳಕೆ ಕಣ್ಣು, ನಿದ್ರೆ ಮತ್ತು ಮನೋಸ್ಥಿತಿಗೆ ಹಾನಿ ಮಾಡುತ್ತದೆ.
2. ಡಿಜಿಟಲ್ ವ್ಯಸನ ನಿಯಂತ್ರಣ : ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಗೇಮಿಂಗ್ ಮತ್ತು ಸೋಶಿಯಲ್ ಮೀಡಿಯಾ ವ್ಯಸನವನ್ನು ನಿಯಂತ್ರಿಸಲು ಇದು ಪ್ರಯತ್ನಿಸುತ್ತದೆ.
3. ಪೋಷಕರು-ಶಾಲೆಗಳ ಸಹಕಾರ : ಈ ನೀತಿ ಪೋಷಕರು ಮತ್ತು ಶಾಲೆಯ ನಡುವೆ ವಿದ್ಯಾರ್ಥಿಗಳ ಡಿಜಿಟಲ್ ಬಳಕೆ ನಿಯಂತ್ರಿಸಲು ಸಹಕಾರವನ್ನು ಉತ್ತೇಜಿಸುತ್ತದೆ.
4. ಸೈಬರ್ ಅಪಾಯಗಳ ವಿರುದ್ಧ ರಕ್ಷಣೆ : ಈ ನೀತಿ ವಿದ್ಯಾರ್ಥಿಗಳ ಮೇಲೆ ನಡೆಯುವ ಸೈಬರ್ ಅಪರಾಧಗಳ ತಡೆಗೆ ಮತ್ತು ನಿಯಂತ್ರಣಕ್ಕೆ ಪ್ರಯತ್ನಿಸುತ್ತದೆ.
5. ಶಿಕ್ಷಣದ ಮೇಲೆ ಒತ್ತು : ಡಿಜಿಟಲ್ ಸಾಧನಗಳನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ವಿದ್ಯಾರ್ಥಿಗಳ ಕಲಿಕೆ ಗುಣಮಟ್ಟ ಹೆಚ್ಚಬಹುದು.
‘ಜವಾಬ್ದಾರಿಯುತ ಡಿಜಿಟಲ್ ಬಳಕೆ’ ಕರಡು ನೀತಿ ಬಾಧಕಗಳು ಮತ್ತು ಟೀಕೆಗಳೇನು :-
1. ಅತಿಯಾದ ನಿಯಂತ್ರಣದ ಭೀತಿ : ಕೆಲವರು ತಜ್ಞರು ಈ ನೀತಿ ವಿದ್ಯಾರ್ಥಿಗಳ ಅತಿಯಾದ ನಿಯಂತ್ರಣಕ್ಕೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
2. ಅನುಷ್ಠಾನ ಸವಾಲು : ನಗರ ಮತ್ತು ಗ್ರಾಮೀಣ ಶಾಲೆಗಳ ನಡುವೆ ವ್ಯತ್ಯಾಸ ಇರುವುದರಿಂದ, ಈ ನೀತಿಯನ್ನು ಸಮಾನವಾಗಿ ಜಾರಿಗೊಳಿಸುವುದು ಕಷ್ಟ.
3. ಡಿಜಿಟಲ್ ಶಿಕ್ಷಣಕ್ಕೆ ಅಡ್ಡಿ : ಕೆಲವರು ಹೇಳುವಂತೆ, ಮೊಬೈಲ್ ನಿಯಂತ್ರಣವು ಡಿಜಿಟಲ್ ಕಲಿಕೆಗೆ ಅಡ್ಡಿಯಾಗಬಹುದು.
4. ಪೋಷಕರ ಅರಿವು ಕೊರತೆ : ಎಲ್ಲ ಪೋಷಕರಿಗೂ ಡಿಜಿಟಲ್ ಜ್ಞಾನ ಇರುವುದಿಲ್ಲ. ಇದು ನೀತಿಯ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಬಹುದು.
5. ಶಿಕ್ಷಕರ ಮೇಲೆ ಹೆಚ್ಚುವ ಹೊರೆ : ಈಗಾಗಲೇ ಶಾಲೆಗಳಲ್ಲಿ ಪಠ್ಯ ಬೋಧನೆ, ಆಡಳಿತ ಕೆಲಸ ಮತ್ತು ಪ್ರವಾಸಗಳ ನಡುವೆ ಶಿಕ್ಷಕರು ಹೈರಾಣಾಗಿದ್ದಾರೆ. ಈ ನೀತಿ ಅವರ ಮೇಲೆ ವಿದ್ಯಾರ್ಥಿಗಳ ಡಿಜಿಟಲ್ ಬಳಕೆ ಮೇಲ್ವಿಚಾರಣೆ ಮತ್ತು ಮಾನಸಿಕ ಆರೋಗ್ಯ ತಪಾಸಣೆಯ ಹೊಣೆಗಾರಿಕೆ ಕೂಡ ಹೊರಿಸಿದರೆ ಅದು ಕಾರ್ಯಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ.
ಜಾಗತಿಕ ತುಲನೆ: ಇತರ ದೇಶಗಳು/ಸರಕಾರಗಳು ಏನು ಮಾಡುತ್ತಿವೆ ?
ವಿಶ್ವದ ವಿವಿಧ ದೇಶಗಳು ಈಗಾಗಲೇ ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ :
- ಚೀನಾ : ಮಕ್ಕಳಿಗೆ ಗೇಮಿಂಗ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಗೆ ಸಮಯದ ಮಿತಿ ವಿಧಿಸಿದೆ. ಅಲ್ಲದೆ, ಶಾಲಾ ಕೆಲಸದಲ್ಲಿ AI ಬಳಕೆಯನ್ನು ಶೇ. 10ಕ್ಕಿಂತ ಕಡಿಮೆ ಇರಬೇಕು ಎಂದು ಕಟ್ಟುನಿಟ್ಟಿನ ನಿಯಮ ಮಾಡಿದೆ.
- ದಕ್ಷಿಣ ಕೊರಿಯಾ : ಸ್ಮಾರ್ಟ್‌ಫೋನ್ ವ್ಯಸನವನ್ನು ತಡೆಯಲು ವಿಶೇಷ ‘ಡಿಜಿಟಲ್ ಡಿಟಾಕ್ಸ್’ ಶಿಬಿರಗಳನ್ನು ನಡೆಸುತ್ತದೆ. “Shutdown Law” ಮೂಲಕ ರಾತ್ರಿ ಗೇಮಿಂಗ್ ನಿಷೇದಿಸಲಾಗಿದೆ.
- ಯುರೋಪಿಯನ್ ಒಕ್ಕೂಟ (EU) : EU AI ಕಾಯ್ದೆಯ ಮೂಲಕ ಮಕ್ಕಳ ಮಾನಸಿಕ ದೌರ್ಬಲ್ಯಗಳನ್ನು ಶೋಷಿಸುವ ತಂತ್ರಜ್ಞಾನಗಳನ್ನು ನಿಷೇಧಿಸಿದೆ. ಶಾಲಾ ಮಟ್ಟದಲ್ಲಿ ಡಿಜಿಟಲ್ ಬಳೆಕೆಯ ಕುರಿತು ಕಟ್ಟುನಿಟ್ಟಿನ ನಿಯಮಗಳು ಜಾರಿಗೊಳಿಸಲಾಗಿದೆ.
- ಅಮೆರಿಕ: ರಾಜ್ಯ ಮಟ್ಟದಲ್ಲಿ ವಿವಿಧ ನಿಯಮಗಳಿದ್ದರೂ, ಇತ್ತೀಚೆಗೆ ಸಾಮಾಜಿಕ ಜಾಲತಾಣ ಕಂಪನಿಗಳ ವಿರುದ್ಧ ಮಾನಸಿಕ ಆರೋಗ್ಯ ಹಾನಿಯ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಕಾನೂನು ಸಮರಗಳು ನಡೆಯುತ್ತಿವೆ. ಕೆಲವು ರಾಜ್ಯಗಳಲ್ಲಿ, ಶಾಲೆಗಳಲ್ಲಿ ಮೊಬೈಲ್ ನಿಷೇಧ ವಾಗಿದೆ.
ಈ ನೀತಿಯ ಬಗ್ಗೆ ತಜ್ಞರು ಏನು ಹೇಳುತ್ತಿದ್ದಾರೆ :-
ಶಿಕ್ಷಣ ತಜ್ಞರ ಪ್ರಕಾರ, ತಂತ್ರಜ್ಞಾನವನ್ನು ಸಂಪೂರ್ಣವಾಗಿ ನಿಷೇಧಿಸುವುದು ಪರಿಹಾರವಲ್ಲ. ಬದಲಾಗಿ, ತಂತ್ರಜ್ಞಾನದ ಜೊತೆಗೆ ಹೇಗೆ ಸಂಯಮದಿಂದ ಬದುಕಬೇಕು ಎಂಬುದನ್ನು ಕಲಿಸುವುದು ಮುಖ್ಯ. ಮನಶ್ಶಾಸ್ತ್ರಜ್ಞರು ಹೇಳುವಂತೆ, ಪೋಷಕರು ಸ್ವತಃ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಮಕ್ಕಳಿಗೆ ಮಾದರಿಯಾಗಬೇಕು. ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಮತ್ತು ಅವರ ಆನ್‌ಲೈನ್ ಚಟುವಟಿಕೆಗಳ ಬಗ್ಗೆ ಮುಕ್ತವಾಗಿ ಸಂವಹನ ಮಾಡುವುದು ಅತ್ಯಗತ್ಯ. ಶಿಕ್ಷಕರು ಹೇಳುತ್ತಾರೆ, “ಪಠ್ಯಕ್ರಮದಲ್ಲಿ ಡಿಜಿಟಲ್ ಸಾಕ್ಷರತೆ ಸೇರಿಸುವುದು ವಿದ್ಯಾರ್ಥಿಗಳನ್ನು ಸಬಲರನ್ನಾಗಿ ಮಾಡುತ್ತದೆ”. ಪಾಲಿಸಿ ವಿಶ್ಲೇಷಕರು, “ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ಅಗತ್ಯ, ಇಲ್ಲದಿದ್ದರೆ ನಗರ-ಗ್ರಾಮ ಅಂತರ ಹೆಚ್ಚಾಗುತ್ತದೆ” ಎನ್ನುತ್ತಾರೆ.
ಕಡೆಯದಾಗಿ, ನನ್ನ ಅಭಿಪ್ರಾಯ – ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಪರದೆಗಳಿಂದ ದೂರವಿಡುವುದು ಸಾಧ್ಯವಿಲ್ಲ. ಆದರೆ ಅವರಿಗೆ ಜವಾಬ್ದಾರಿಯುತ ಬಳಕೆ ಕಲಿಸುವುದು ಅತ್ಯಂತ ಅಗತ್ಯ. ಕರ್ನಾಟಕದ ಈ ಕರಡು ನೀತಿ, ಸರಿಯಾದ ರೀತಿಯಲ್ಲಿ ಜಾರಿಯಾದರೆ, ವಿದ್ಯಾರ್ಥಿಗಳ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಬಹುದು. ಈ ನೀತಿಯು ಯಶಸ್ವಿಯಾಗಬೇಕಾದರೆ ಸರ್ಕಾರ, ಶಾಲೆ ಮತ್ತು ಪೋಷಕರು ಒಂದು ತಂಡವಾಗಿ ಕೆಲಸ ಮಾಡಬೇಕಿದೆ. ಕೇವಲ ಕಾನೂನುಗಳಿಂದ ಬದಲಾವಣೆ ಸಾಧ್ಯವಿಲ್ಲ; ಸಾಮಾಜಿಕ ಬದಲಾವಣೆ ಮತ್ತು ಸ್ವಯಂ ಶಿಸ್ತಿನಿಂದ ಮಾತ್ರ ನಮ್ಮ ಮಕ್ಕಳಿಗೆ ಆರೋಗ್ಯಕರ ಡಿಜಿಟಲ್ ಭವಿಷ್ಯವನ್ನು ನೀಡಲು ಸಾಧ್ಯ.


