BNSS

ಡಿಜಿಟಲ್ ಪ್ರಪಂಚದ ಮೇಲೆ ಹೊಸ ಕ್ರಿಮಿನಲ್ ಕಾನೂನುಗಳ ಪ್ರಭಾವ (ಭಾಗ 2) – BNSS

ಈ ವಾರದ ಲೇಖನದಲ್ಲಿ, ಸೈಬರ್ ಅಥವಾ ಡಿಜಿಟಲ್ ಪ್ರಪಂಚದ ಮೇಲೆ ಪ್ರಭಾವ ಬೀರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ(BNSS), 2023 ನಲ್ಲಿ ಪರಿಚಯಿಸಲಾದ ಬದಲಾವಣೆಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.

ಕಳೆದ ಎರಡು ಲೇಖನಗಳಿಂದ, ನಾನು ಭಾರತದ ಸೈಬರ್ ಕಾನೂನುಗಳು ಮತ್ತು ಸೈಬರ್  ಜಗತ್ತಿನ ಮೇಲೆ ಹೊಸ ಕ್ರಿಮಿನಲ್ ಕಾನೂನುಗಳ ಪ್ರಭಾವದ ಬಗ್ಗೆ ತಿಳಿಸಿಕೊಟ್ಟಿದ್ದೆ. ಕಳೆದ ವಾರ ನಿರ್ದಿಷ್ಟವಾಗಿ ನಾನು ಭಾರತೀಯ ನ್ಯಾಯ ಸಂಹಿತಾ (BNS) ದಲ್ಲಿ ಪರಿಚಯಿಸಲಾದ ಬದಲಾವಣೆಗಳ ಬಗ್ಗೆ ತಿಳಿಸಿಕೊಟ್ಟಿದ್ದೆ. ಈ ವಾರದ ಲೇಖನದಲ್ಲಿ, ನಾನು ಸೈಬರ್ ಅಥವಾ ಡಿಜಿಟಲ್ ಜಗತ್ತಿನ ಮೇಲೆ ಪರಿಣಾಮ ಬೀರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಯಲ್ಲಿ ಪರಿಚಯಿಸಲಾದ ಬದಲಾವಣೆಗಳ ಬಗ್ಗೆ ಮತ್ತು ಮುಂದಿನ ವಾರದ ಅಂಕಣದಲ್ಲಿ ಭಾರತೀಯ ಸಾಕ್ಷಿ ಅಧಿನಿಯಮ್ (BSA) ನಲ್ಲಿ ಪರಿಚಯಿಸಲಾದ ಬದಲಾವಣೆಗಳ ಬಗ್ಗೆ ತಿಳಿಸಿಕೊಡಲಿದ್ದೇನೆ. ಹೊಸ ಕ್ರಿಮಿನಲ್ ಪ್ರೊಸೀಜರ್ ಕೋಡ್ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS), 2023 ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ (CrPC), 1898 ಅನ್ನು ಮತ್ತು ಭಾರತೀಯ ಸಾಕ್ಷಿ ಅಧಿನಿಯಮ್ (BSA), 2023  ಭಾರತೀಯ ಸಾಕ್ಷ್ಯ ಕಾಯಿದೆ, 1872 ಯ ಬದಲಿಗೆ ಹೊಸ ಪುರಾವೆ ಕಾನೂನಾಗಿ ಜಾರಿಗೆ ಬಂದಿದೆ. ಈ ಕಾನೂನುಗಳು ಜುಲೈ 1, 2024 ರಿಂದ ಜಾರಿಗೆ ಬಂದವು ಮತ್ತು ಆ ದಿನಾಂಕದಿಂದ ದಾಖಲಾದ ಎಲ್ಲಾ ಹೊಸ ಕ್ರಿಮಿನಲ್ ಪ್ರಕರಣಗಳಿಗೆ ಇದು ಅನ್ವಯಿಸುತ್ತದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023 (BNSS) ನಲ್ಲಿ ಡಿಜಿಟಲ್ ಪ್ರಪಂಚದ ಮೇಲೆ ಪರಿಣಾಮ ಬೀರುವ ಕೆಲವು ಪ್ರಮುಖ ಬದಲಾವಣೆಗಳು

ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023, ತನಿಖಾ ಮತ್ತು ಪ್ರಯೋಗ ಪ್ರಕ್ರಿಯೆಗಳನ್ನು ಆಧುನೀಕರಿಸುವುದು, ಕಾನೂನು ಜಾರಿಯ ದಕ್ಷತೆ ಮತ್ತು ಪಾರದರ್ಶಕತೆಯನ್ನು ಸುಧಾರಿಸುವುದು, ಕಾರ್ಯವಿಧಾನದ ವಿಳಂಬಗಳನ್ನು ತೊಡೆದುಹಾಕುವುದು ಮತ್ತು ಅಧಿಕಾರಶಾಹಿ ಅಡೆತಡೆಗಳನ್ನು ಕಡಿಮೆ ಮಾಡುವ ಮೂಲಕ ತ್ವರಿತ ನ್ಯಾಯದ ವಿತರಣೆಯನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಹೆಚ್ಚು ಗಮನ ಕೊಡುತ್ತಿದೆ. BNSS ನಲ್ಲಿ ಡಿಜಿಟಲ್ ಪ್ರಪಂಚದ ಮೇಲೆ ಪರಿಣಾಮ ಬೀರುವ ಕೆಲವು ಪ್ರಮುಖ ಬದಲಾವಣೆಗಳು ಇಂತಿವೆ :-

  • ಪ್ರಕರಣಗಳ ದಾಖಲೀಕರಣ ಮತ್ತು ಟ್ರ್ಯಾಕಿಂಗ್ ಅನ್ನು ಸುಗಮಗೊಳಿಸಲು ಡಿಜಿಟಲ್ ದಾಖಲೆಗಳು ಮತ್ತು ಇ-ಆಡಳಿತ ವೇದಿಕೆಗಳ ಬಳಕೆಯನ್ನು BNSS ಕಡ್ಡಾಯಗೊಳಿಸುತ್ತದೆ. ಈ ಕ್ರಮವು ದಾಖಲೆಗಳಲ್ಲಿನ ದೋಷಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ಮತ್ತು ಎಲ್ಲಾ ಭಾಗೀದಾರರಿಗೆ ಪ್ರಕರಣದ ಎಲ್ಲಾ ಮಾಹಿತಿ ಲಭ್ಯತೆಯನ್ನು ಹೆಚ್ಚಿಸುತ್ತದೆ.
  • E-FIR (ಎಲೆಕ್ಟ್ರಾನಿಕ್ – ಪ್ರಥಮ ಮಾಹಿತಿ ವರದಿ) ಅನ್ನು ವ್ಯಕ್ತಿಗಳು ಆನ್‌ಲೈನ್‌ನಲ್ಲಿ ದೂರುಗಳನ್ನು ಸಲ್ಲಿಸಲು ಮತ್ತು ಅನುಮತಿಸಲು ಪರಿಚಯಿಸಲಾಗಿದೆ. ಭಾರತದ ಗೃಹ ಸಚಿವಾಲಯವು ನಾಗರಿಕರಿಗೆ FIR ಪ್ರಕ್ರಿಯೆಯನ್ನು ಸರಳಗೊಳಿಸುವ ಹೊಸ ಕಾರ್ಯಾಚರಣ ಕಾರ್ಯವಿಧಾನಗಳನ್ನು ಜೂಲೈ ೧೪ ರಂದು ಬಿಡುಗಡೆ ಮಾಡಿದೆ, ಅದರಲ್ಲಿ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದ ನಿದರ್ಶನಗಳನ್ನು ಕಡಿಮೆ ಮಾಡುವುದು ಮತ್ತು ಸುಲಭವಾಗಿ ಮೇಲ್ವಿಚಾರಣೆ ಹಾಗು ಪರಿಶೋಧನೆ ಮಾಡಬಹುದಾದ ಡಿಜಿಟಲ್ ಟ್ರಯಲ್ ಅನ್ನು ರಚಿಸಲು ಪ್ರಯತ್ನಿಸಲಾಗಿದೆ. E-FIR ಅನ್ನು ಸ್ಟೇಷನ್ ಮುಖ್ಯಸ್ಥರು ನಿರಾಕರಿಸಿದರೆ, ದೂರುದಾರರು ವಿಷಯವನ್ನು ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಬಹುದು ಅಥವಾ ಮ್ಯಾಜಿಸ್ಟ್ರೇಟ್‌ಗೆ ಅರ್ಜಿ ಸಲ್ಲಿಸಬಹುದು.
  • ಹುಡುಕಾಟ ಮತ್ತು ವಶಪಡಿಸಿಕೊಳ್ಳುವಿಕೆ ಕಾರ್ಯಾಚರಣೆಗಳ ಸಮಗ್ರತೆಯನ್ನು ಹೆಚ್ಚಿಸಲು, BNSS ಅಂತಹ ಕಾರ್ಯವಿಧಾನಗಳ ವೀಡಿಯೊಗ್ರಫಿಯನ್ನು ಕಡ್ಡಾಯಗೊಳಿಸುತ್ತದೆ. ಈ ಕ್ರಮವು ಸಾಕ್ಷಿಯನ್ನು ಮಾರ್ಪಾಡು ಅಥವಾ ನಾಶಪಡಿಸುವುದನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ ಹಾಗು ಕಾರ್ಯಚಣೆಯ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಮತ್ತು ಪೊಲೀಸ್ ಪಡೆಗಳಲ್ಲಿ ಸಾರ್ವಜನಿಕ ನಂಬಿಕೆಯನ್ನು ಬೆಳೆಸುತ್ತದೆ ಎಂದು ನಿರೀಕ್ಷಿಸಲಾಗಿದೆ.
  • ಅತ್ಯಾಚಾರ ಅಥವಾ ಲೈಂಗಿಕ ಅಪರಾಧದ ಸಂತ್ರಸ್ಥರ ಹೇಳಿಕೆಗಳನ್ನು ಈಗ ಮಹಿಳಾ ಪೊಲೀಸ್ ಅಧಿಕಾರಿಯು ತನ್ನ ಮೊಬೈಲ್ ಫೋನ್ ಸೇರಿದಂತೆ ಇತರ ಆಡಿಯೋ-ವಿಡಿಯೋ ವಿಧಾನಗಳ ಮೂಲಕ ರೆಕಾರ್ಡ್ ಮಾಡಬಹುದು.
  • ತನಿಖಾ ಅಧಿಕಾರಿಯು ಈಗ ಪೋಲೀಸ್ ವರದಿ ಮತ್ತು ಇತರ ದಾಖಲೆಗಳನ್ನು ಎಲೆಕ್ಟ್ರಾನಿಕ್ ಸಂವಹನದ ಮೂಲಕ ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸಬಹುದು ಮತ್ತು ಅದನ್ನು ನ್ಯಾಯಾಲಯವು ಸರಿಯಾಗಿ ಪೂರೈಸಲಾಗಿದೆ ಎಂದು ಪರಿಗಣಿಸುತ್ತದೆ.
  • ವಿಚಾರಣೆಯ ಸಮಯದಲ್ಲಿ, ಸಾಕ್ಷಿಗಳ ಹೇಳಿಕೆಗಳನ್ನು ಆಡಿಯೋ-ವೀಡಿಯೋ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಈಗ ದಾಖಲಿಸಬಹುದು.
  • ಈಗ ಎಲೆಕ್ಟ್ರಾನಿಕ್ ಸಂವಹನದ(ಕಮ್ಯುನಿಕೇಷನ್) ಮೂಲಕವೂ ಸಮನ್ಸ್‌ಗಳನ್ನು ನೀಡಬಹುದು. ಎಲೆಕ್ಟ್ರಾನಿಕ್ ಸಂವಹನದ ಮೂಲಕ ವಿತರಣೆಯ ಸ್ವೀಕೃತಿಗಳು ಅಥವಾ ಪುರಾವೆಗಳನ್ನು ನ್ಯಾಯಾಲಯವು ಸಮನ್ಸ್‌ಗಳ ಸಲ್ಲಿಕೆ ಮತ್ತು ಸ್ವೀಕೃತಿಯ ಪುರಾವೆ ಎಂದು ಪರಿಗಣಿಸುತ್ತದೆ.
  • ಯಾವುದೇ ನ್ಯಾಯಾಲಯ ಅಥವಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯು ಡಿಜಿಟಲ್ ಸಾಕ್ಷ್ಯವನ್ನು ಒಳಗೊಂಡಿರುವ ಎಲೆಕ್ಟ್ರಾನಿಕ್ ಸಂವಹನ ಸಾಧನವನ್ನು ಪ್ರಸ್ತುತ ಪಡಿಸಲು ಆಜ್ಞೆ ಮಾಡಬಹುದು.
  • ಇದರಲ್ಲಿ ಪ್ರತಿ ಪೊಲೀಸ್ ಠಾಣೆಯಲ್ಲಿ ಡಿಜಿಟಲ್ ಫೋರೆನ್ಸಿಕ್ಸ್ ಸೌಲಭ್ಯಗಳ ಸುಧಾರಣೆಗೆ ಮತ್ತು ತರಬೇತಿಗೆ ಒತ್ತು ನೀಡಲಾಗಿದೆ.
  • ASI ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿಯನ್ನು ಪ್ರತಿ ಪೊಲೀಸ್ ಠಾಣೆಯಲ್ಲಿ ನಿಯೋಜಿತ ಪೊಲೀಸ್ ಅಧಿಕಾರಿಯಾಗಿ ನೇಮಿಸಲಾಗುತ್ತದೆ, ಅವರು ಠಾಣೆ ಮತ್ತು ಜಿಲ್ಲಾ ಕೇಂದ್ರ ಪೊಲೀಸ್‌ ಠಾಣೆಯಲ್ಲಿ ಬಂಧಿತ ವ್ಯಕ್ತಿಯ ಹೆಸರು, ವಿಳಾಸ, ಅಪರಾಧದ ಸ್ವರೂಪಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಧಿಕೃತ ಡಿಜಿಟಲ್ ಮಾದ್ಯಮದಲ್ಲಿ ಪ್ರಕಟಿಸುತ್ತಾರೆ.
  • ನ್ಯಾಯಾಲಯಗಳು ತೀರ್ಪಿನ ಡಿಜಿಟಲ್ ಪ್ರತಿಯನ್ನು ಘೋಷಣೆಯ ದಿನಾಂಕದಿಂದ 7 ದಿನಗಳಲ್ಲಿ ಅಪ್‌ಲೋಡ್ ಮಾಡಬೇಕು, ಇದು ಈಗಾಗಲೇ ಹಲವು ನ್ಯಾಯಾಲಯಗಳಲ್ಲಿ ಆಚರಣೆಯಲ್ಲಿದೆ ಆದರೆ ಈಗ BNSS ನಿಂದ ಇದು ಎಲ್ಲಾ ನ್ಯಾಯಾಲಯದ ತೀರ್ಪುಗಳಿಗೆ ಕಡ್ಡಾಯವಾಗಲಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ