cyberlaws

ಸೈಬರ್‌ ಕಾನೂನುಗಳ ಒಂದು ಕಿರು ಪರಿಚಯ

ಈ ಅಂಕಣದಲ್ಲಿ ನಾನು ಸೈಬರ್‌ಕ್ರೈಮ್‌ಗಳನ್ನು ನಿಯಂತ್ರಿಸುವ ಸೈಬರ್ ಕಾನೂನುಗಳ ಬಗ್ಗೆ ಮತ್ತು ಪ್ರಪಂಚದಾದ್ಯಂತ ಮತ್ತು ಭಾರತದ ಮುಖ್ಯ ಸೈಬರ್‌ ಕಾನೂನುಗಳನ್ನು ಸಂಕ್ಷಿಪ್ತವಾಗಿ ನಿಮಗೆ ಪರಿಚಯಿಸಲಿದ್ದೇನೆ.

ಇಂದಿನ ಅಂಕಣದಲ್ಲಿ, ನಾನು ಸೈಬರ್‌ಕ್ರೈಮ್‌ಗಳನ್ನು ನಿಯಂತ್ರಿಸುವ ಕಾನೂನುಗಳ ಬಗ್ಗೆ ಮತ್ತು ಪ್ರಪಂಚದಾದ್ಯಂತ ಮತ್ತು ಭಾರತದ ಮುಖ್ಯ ಸೈಬರ್‌ ಕಾನೂನುಗಳನ್ನು ಸಂಕ್ಷಿಪ್ತವಾಗಿ ನಿಮಗೆ ಪರಿಚಯಿಸಲಿದ್ದೇನೆ. ಇಂಟರ್ನೆಟ್ ಅಥವಾ ಡಿಜಿಟಲ್ ಅಥವಾ ಮಾಹಿತಿ ತಂತ್ರಜ್ಞಾನ ಕಾನೂನು ಎಂದೂ ಕರೆಯಲ್ಪಡುವ ಸೈಬರ್ ಕಾನೂನು, ಇಲೆಕ್ಟ್ರಾನಿಕ್ ಸಾಧನಗಳು ಮತ್ತು ನೆಟ್‌ವರ್ಕ್‌ಗಳನ್ನು ಅಪರಾಧಗಳ ಗುರಿಯಾಗಿ ಅಥವಾ ಆಯುಧವಾಗಿ ಅಥವಾ ಸಹಾಯಕವಾಗಿ ಬಳಸಿ ನಡೆಸಿದ ಅಪರಾಧಗಳನ್ನು ನಿಯಂತ್ರಿಸುವ ಕಾನೂನುಗಳಾಗಿದೆ. ಇಲ್ಲಿ ನೆಟ್‌ವರ್ಕ್‌ಗಳು ಅಂದರೆ ಇಂಟರ್ನೆಟ್, ಇಂಟ್ರಾನೆಟ್, ಟೆಲಿಕಮ್ಯುನಿಕೇಶನ್ ಮತ್ತು ಇತರ ನೆಟ್‌ವರ್ಕ್‌ಗಳಾಗಿರುತ್ತವೆ ಮತ್ತು ಎಲೆಕ್ಟ್ರಾನಿಕ್ ಸಾದನಗಳು ಅಂದರೆ ಕಂಪ್ಯೂಟಿಂಗ್ ಸಾದನಗಳು, ಫೋನ್‌ಗಳು, ಸೆನ್ಸರ್, ಸಿಸಿಟಿವಿ, ರೆಕಾರ್ಡಿಂಗ್ ಸಾಧನಗಳಾಗಿರುತ್ತದೆ. ಸೈಬರ್‌ ಕಾನೂನುಗಳು ಆನ್‌ಲೈನ್ ಸಂವಹನ, ಇ-ಕಾಮರ್ಸ್, ಡಿಜಿಟಲ್ ಗೌಪ್ಯತೆ ಮತ್ತು ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಮತ್ತು ಅಪರಾಧಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ ಸೈಬರ್ ಕಾನೂನುಗಳು ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಸೈಬರ್ ಬೆದರಿಕೆಗಳಿಂದ ರಕ್ಷಿಸಲು, ಡಿಜಿಟಲ್ ವಹಿವಾಟುಗಳ/ಮಾಹಿತಿಯ ಗೌಪ್ಯತೆ ಹಾಗು ಸುರಕ್ಷತೆಯನ್ನು ಖಾತ್ರಿಪಡಿಸಲು ಮತ್ತು ಸೈಬರ್‌ಜಗತ್ತಿನಲ್ಲಿ ನಡವಳಿಕೆಗಾಗಿ ಕಾನೂನು ಮಾರ್ಗಸೂಚಿಗಳನ್ನು ಸ್ಥಾಪಿಸಲು ಒಂದು ಚೌಕಟ್ಟನ್ನು ಒದಗಿಸುತ್ತದೆ.
ಮೊದಲ ಸೈಬರ್‌ ಕಾನೂನನ್ನು ಅಮೇರಿಕಾದಲ್ಲಿ, ಕಂಪ್ಯೂಟರ್ ವಂಚನೆ ಮತ್ತು ದುರ್ಬಳಕೆ ಕಾಯ್ದೆಯ ರೂಪದಲ್ಲಿ 1986 ರಲ್ಲಿ ಜಾರಿಗೊಳಿಸಲಾಯಿತು. ಭಾರತದಲ್ಲಿ, ಮೊದಲ ಸೈಬರ್ ಕಾನೂನು 2000 ರ ಅಕ್ಟೋಬರ್ 17 ರಂದು ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ರೂಪದಲ್ಲಿ ಜಾರಿಗೆ ಬಂದಿತು, ಇದನ್ನು IT ಆಕ್ಟ್, 2000 ಎಂದೂ ಕರೆಯುತ್ತಾರೆ. ಈ ಕಾಯಿದೆಯು, ವಿದ್ಯುನ್ಮಾನ ದಾಖಲೆಗಳು ಮತ್ತು ಡಿಜಿಟಲ್ ಸಹಿಗಳಿಗೆ ಮಾನ್ಯತೆ ನೀಡುವ ಮೂಲಕ ವಿದ್ಯುನ್ಮಾನ ಆಡಳಿತಕ್ಕೆ ಕಾನೂನು ಚೌಕಟ್ಟನ್ನು ಒದಗಿಸುತ್ತದೆ ಹಾಗು ಸೈಬರ್ ಅಪರಾಧಗಳನ್ನು ವ್ಯಾಖ್ಯಾನಿಸುತ್ತದೆ ಮತ್ತು ಅದಕ್ಕೆ ದಂಡವನ್ನು ಸೂಚಿಸುತ್ತದೆ. ಇದಲ್ಲದೆ ಡಿಜಿಟಲ್ ಸಹಿಗಳ ವಿತರಣೆಯನ್ನು ನಿಯಂತ್ರಿಸಲು ಕಂಟ್ರೋಲರ್ ಆಫ್ ಸರ್ಟಿಫೈಯಿಂಗ್ ಪ್ರಾಧಿಕಾರವನ್ನು ರಚಿಸಾಲು ಮತ್ತು ಭಾರತೀಯ ದಂಡ ಸಂಹಿತೆ 1860, ಇಂಡಿಯನ್ ಎವಿಡೆನ್ಸ್ ಆಕ್ಟ್ 1872, ಬ್ಯಾಂಕರ್ಸ್ ಬುಕ್ ಎವಿಡೆನ್ಸ್ ಆಕ್ಟ್ 1891 ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್ 1934 ಅನ್ನು ಎಲೆಕ್ಟ್ರಾನಿಕ್ ಧಾಖಲೆಗಳನ್ನು ಅಂಗೀಕರಿಸಲು ಮತ್ತು ಸೈಬರ್ ಅಪರಾಧಗಳನ್ನು ಗುರುತಿಸಲು ತಿದ್ದುಪಡಿ ಮಾಡಲು ರಚಿಸಲಾಯಿತು. ನಂತರ ಡಿಸೆಂಬರ್ 2008 ರಲ್ಲಿ ಈ ಕಾನೂನನ್ನು ತಾಂತ್ರಿಕವಾಗಿ ತಟಸ್ಥವಾಗಿಸಲು, ಸುಧಾರಿತ ಡೇಟಾ ರಕ್ಷಣೆ ವೈಶಿಷ್ಟ್ಯಗಳು, ಕಾರ್ಪೊರೇಟ್ ಜವಾಬ್ದಾರಿಗಳನ್ನು ವ್ಯಾಖ್ಯಾನಿಸಲು ಮತ್ತು ಹೆಚ್ಚಿನ ಸೈಬರ್ ಅಪರಾಧಗಳನ್ನು ಈ ಕಾಯಿದೆಯ ವ್ಯಾಪ್ತಿಯಲ್ಲಿ ತರಲು ಮಾರ್ಪಡಿಸಲಾಯಿತು. ಹೊಸ ಮಾಹಿತಿ ತಂತ್ರಜ್ಞಾನ ಕಾಯಿದೆ, ಡಿಜಿಟಲ್ ಇಂಡಿಯಾ ಕಾಯಿದೆಯನ್ನು 2024 ರಲ್ಲಿ ಸಂಸತ್ತಿನ ಮುಂದೆ ತರುವ ಬಗ್ಗೆ ಸುದ್ದಿಯಿದೆ. ಇದರಲ್ಲಿ ಹೊಸ ಸೈಬರ್ ಅಪರಾಧಗಳನ್ನು ತಡೆಗಟ್ಟುವುದು, ಡಿಜಿಟಲ್ ಪ್ರಪಂಚದಲ್ಲಿ ಹೊಸ ನಿಯಂತ್ರಕವನ್ನು ಪ್ರಸ್ತಾಪಿಸುವುದು ಮತ್ತು ಕೃತಕ ಬುದ್ಧಿಮತ್ತೆ(AI), ಮೆಟಾವರ್ಸ್ ಮತ್ತು ಬ್ಲಾಕ್‌ಚೈನ್‌ನಂತಹ ತಂತ್ರಜ್ಞಾನಗಳಿಗೆ ಆಡಳಿತದ ನಿಬಂಧನೆಗಳನ್ನು ಸೂಚಿಸುವ ನಿರೀಕ್ಷೆಯಿದೆ.
ಭಾರತದ ಅಧಿಕೃತ ಕ್ರಿಮಿನಲ್ ಕೋಡ್ ಆದ ಭಾರತೀಯ ದಂಡ ಸಂಹಿತೆ (IPC) ಯನ್ನು 1860 ರಲ್ಲಿ ರಚಿಸಲಾಗಿತ್ತು ಮತ್ತು ಇದನ್ನು ಸೈಬರ್ ಅಪರಾಧಿಗಳ ವಿಚಾರಣೆಗೆ IT ಕಾಯಿದೆಯ ಜೊತೆಗೆ ಬಳಸಲಾಗುತ್ತದೆ. ಅದೇ ರೀತಿ ಭಾರತೀಯ ಸಾಕ್ಷಿ ಕಾಯಿದೆ, 1872, ಭಾರತೀಯ ನ್ಯಾಯಾಲಯಗಳಲ್ಲಿ ಸಲ್ಲಿಸಲಾದ ಸಾಕ್ಷಿಗಳ ಸ್ವೀಕಾರ, ಪ್ರಸ್ತುತತೆ ಮತ್ತು ವಿಶ್ವಾಸಾರ್ಹತೆಯನ್ನು ನಿಯಂತ್ರಿಸುವ ಒಂದು ನಿರ್ಣಾಯಕ ಶಾಸನವಾಗಿದೆ. ಐಟಿ ಆಕ್ಟ್ 2000 ರ ಅಂಗೀಕಾರದ ಭಾಗವಾಗಿ, ಎಲೆಕ್ಟ್ರಾನಿಕ್ ರೂಪದಲ್ಲಿ ಮಾಡಿದ ಅಪರಾಧವನ್ನು ನಿಯಂತ್ರಿಸಲು, ಎಲೆಕ್ಟ್ರಾನಿಕ್/ಡಿಜಿಟಲ್ ಸಹಿ ಮತ್ತು ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಾಕ್ಷಿಯಾಗಿ ಒಪ್ಪಿಕೊಳ್ಳಲು IPC ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಯನ್ನು ಮಾರ್ಪಡಿಸಲಾಗಿದೆ. ಐಟಿ ಕಾಯಿದೆಯ ಹೆಚ್ಚಿನ ಸೆಕ್ಷನ್‌ಗಳು ಸುಲಭವಾಗಿ ಜಾಮೀನು ನೀಡಬಹುದಾಗಿರುತ್ತದೆ ಮತ್ತು ಐಟಿ ಕಾಯ್ದೆಗೆ ಹೋಲಿಸಿದರೆ ಐಪಿಸಿ ಸೆಕ್ಷನ್ ಗಳು ಕಠಿಣ ಶಿಕ್ಷೆ ಮತ್ತು ದಂಡವನ್ನು ಹೊಂದಿರುವ ಕಾರಣ ಪೊಲೀಸರು ಸಾಮಾನ್ಯವಾಗಿ ಸೈಬರ್ ಅಪರಾಧದ ವಿರುದ್ಧ IT ಆಕ್ಟ್ ಸೆಕ್ಷನ್‌ಗಳ ಜೊತೆಗೆ IPC ಸೆಕ್ಷನ್‌ಗಳನ್ನು ಬಳಸುತ್ತಾರೆ. ಶರತ್ ಬಾಬು ದಿಗುಮಾರ್ತಿ v/s ದೆಹಲಿಯ NCT ಸರ್ಕಾರ (2016 SCC ಆನ್‌ಲೈನ್ SC 1464, 14.12.2016 ರಂದು ನಿರ್ಧರಿಸಲಾದ) ಪ್ರಕರಣದಲ್ಲಿ, ಅಪರಾಧವು ಎಲೆಕ್ಟ್ರಾನಿಕ್ ದಾಖಲೆಯನ್ನು ಒಳಗೊಂಡಿದ್ದರೆ, ಐಟಿ ಕಾಯ್ದೆಯು IPC ಸೆಕ್ಷನ್‌ಗಳ ಮೇಲೆ ಮೇಲುಗೈ ಸಾಧಿಸುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಭಾರತೀಯ ದಂಡ ಸಂಹಿತೆ (IPC), 1860 ಯ ಬದಲಿಗೆ ಜುಲೈ 1, 2024 ರಿಂದ ಜಾರಿಗೆ ಬರುವ ಭಾರತೀಯ ನ್ಯಾಯ ಸಂಹಿತಾ (BNS), 2023 ಕಾನೂನು ಭಾರತದ ಅಧಿಕೃತ ಕ್ರಿಮಿನಲ್ ಕೋಡ್ ಆಗಲಿದೆ. ಈ ಹೊಸ ಕಾನೂನಿನಿಂದ ಪರಿಚಯಿಸಲಾದ ಬದಲಾವಣೆಗಳು ಮತ್ತು ಸಾಮಾನ್ಯ ಜನರು ಮತ್ತು IT ಕಾಯಿದೆಯ ಮೇಲೆ ಆಗುವ ಪರಿಣಾಮಗಳ ಕುರಿತು ನಾನು ಇನ್ನೊಂದು ಲೇಖನದಲ್ಲಿ ಬರೆಯುತ್ತೇನೆ.
ಈ ಅಂಕಣ ನಿಮಗೆ ಇಷ್ಟವಾದಲ್ಲಿ ಮತ್ತು ನೀವು ವಿವಿದ ಸೈಬರ್ ಕಾನೂನಿನ ಬಗ್ಗೆ ನಾನು ಬರೆಯಬೇಕು ಅಂದರೆ ನನ್ನ ಬ್ಲಾಗ್ www.cybermithra.in ನಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಸೈಬರ್ ಕಾನೂನು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ