new criminal laws

ಡಿಜಿಟಲ್ ಪ್ರಪಂಚದ ಮೇಲೆ ಹೊಸ ಕ್ರಿಮಿನಲ್ ಕಾನೂನುಗಳ ಪ್ರಭಾವ (ಭಾಗ ೧)

ಈ ಮೊದಲ ಭಾಗದ ಲೇಖನದಲ್ಲಿ, ನಾನು ಮುಖ್ಯವಾಗಿ ಡಿಜಿಟಲ್ ಜಗತ್ತಿನಲ್ಲಿ ಹೊಸ ಕ್ರಿಮಿನಲ್ ಕಾನೂನು ಭಾರತೀಯ ನ್ಯಾಯ ಸಂಹಿತಾ (BNS), 2023 ಪರಿಚಯಿಸಿದ ಬದಲಾವಣೆಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.

ಕಳೆದ ವಾರದ ಲೇಖನದಲ್ಲಿ, ನಾನು ಡಿಜಿಟಲ್ ಅಥವಾ ಸೈಬರ್ ಜಗತ್ತನ್ನು ನಿಯಂತ್ರಿಸುವ ವಿವಿಧ ಭಾರತದ ಕಾನೂನುಗಳ ಕುರಿತು ತಿಳಿಸಿಕೊಟ್ಟಿದ್ದೆ ಮತ್ತು ಈ ವಾರ, ಡಿಜಿಟಲ್ ಪ್ರಪಂಚದ ಮೇಲೆ ಜುಲೈ 1, 2024 ರಿಂದ ಜಾರಿಗೆ ಬಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಪ್ರಭಾವದ ಬಗ್ಗೆ ಸ್ಥೂಲವಾಗಿ ತಿಳಿಸಿಕೊಡಲಿದ್ದೇನೆ. ನಿಮಗೆ ತಿಳಿದಿರುವಂತೆ, NDA ಸರ್ಕಾರವು ತನ್ನ ಕೊನೆಯ ಅವಧಿಯಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಿತ್ತು, ಅದಾವುದೆಂದರೆ ಭಾರತೀಯ ದಂಡ ಸಂಹಿತೆ(IPC),1860 ಜಾಗಕ್ಕೆ ಬಂದ ಹೊಸ ಪ್ರಾಥಮಿಕ ಕ್ರಿಮಿನಲ್ ಕೋಡ್ ಆಗಿ ಭಾರತೀಯ ನ್ಯಾಯ ಸಂಹಿತಾ (BNS), 2023, ಭಾರತೀಯ ಸಾಕ್ಷ್ಯ ಕಾಯಿದೆ, 1872 ಅನ್ನು ಹೊಸ ಪ್ರಾಥಮಿಕ ಸಾಕ್ಷ್ಯ ಕಾಯ್ದೆಯಾಗಿ ಬದಲಿಸಿದ ಭಾರತೀಯ ಸಾಕ್ಷ್ಯ (ಎರಡನೇ) ಮಸೂದೆ, 2023 ಮತ್ತು ಕ್ರಿಮಿನಲ್ ಪ್ರೊಸೀಜರ್ ಕೋಡ್, 1973 ಅನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS), 2023 ಎನ್ನುವ ಹೊಸ ಪ್ರಾಥಮಿಕ ಕ್ರಿಮಿನಲ್ ಪ್ರೊಸೀಜರ್ ಕೋಡ್ ಬದಲಾಯಿಸಿತು. ಈ ಹೊಸ ಕ್ರಿಮಿನಲ್ ಕಾನೂನುಗಳನ್ನು 1947 ರಲ್ಲಿ ಭಾರತವು ಸ್ವಾತಂತ್ರ್ಯ ಪಡೆದ ನಂತರದ ಅತಿದೊಡ್ಡ ಕ್ರಿಮಿನಲ್ ಕಾನೂನು ಸುಧಾರಣೆ ಎಂದು ಪ್ರಶಂಸಿಸಲಾಗಿದೆ ಏಕೆಂದರೆ ಅವೆಲ್ಲವೂ 19 ನೇ ಶತಮಾನದಲ್ಲಿ ಜಾರಿಗೆ ಬಂದ ಕಾನೂನುಗಳಾಗಿದ್ದವು ಮತ್ತು ಇದರಲ್ಲಿ ಶಿಕ್ಷೆಯನ್ನು ನೀಡುವುದಕ್ಕೆ ಇದ್ದ ಪ್ರಾಮುಖ್ಯತೆಯನ್ನು ನ್ಯಾಯ ಒದಗಿಸುವ ಕಡೆಗೆ ನೀಡಲಾಗಿದೆ. ಸಾಮಾನ್ಯ ಜನರಿಗೆ ಪ್ರಮುಖವಾದ ಸುದ್ದಿ ಏನೆಂದರೆ, ಈ ಹೊಸ ಕಾನೂನುಗಳು ಜುಲೈ 1, 2024 ರ ನಂತರ ದಾಖಲಾದ ಹೊಸ ಕ್ರಿಮಿನಲ್ ಪ್ರಕರಣಗಳಿಗೆ ಅನ್ವಯಿಸುತ್ತವೆ ಮತ್ತು ಅದಕ್ಕೂ ಮೊದಲು ದಾಖಲಾದ ಹಳೆಯ ಪ್ರಕರಣಗಳನ್ನು ಹಳೆಯ ಕಾನೂನುಗಳ ಅಡಿಯಲ್ಲಿ ನಿರ್ವಹಿಸಲಾಗುತ್ತದೆ. ಈ ಮೊದಲ ಭಾಗದ ಲೇಖನದಲ್ಲಿ, ನಾನು ಮುಖ್ಯವಾಗಿ ಡಿಜಿಟಲ್ ಜಗತ್ತಿನಲ್ಲಿ ಭಾರತೀಯ ನ್ಯಾಯ ಸಂಹಿತಾ (BNS), 2023 ಪರಿಚಯಿಸಿದ ಬದಲಾವಣೆಗಳ ಬಗ್ಗೆ ತಿಳಿಸಿಕೊಡಲಿದ್ದೇನೆ. ಈ ಸರಣಿಯ ಕೊನೆಯಲ್ಲಿ ಪೊಲೀಸ್, ನ್ಯಾಯಾಂಗ ಮತ್ತು ಸಾಮಾನ್ಯ ಜನರ ಮೇಲೆ ಈ ಬದಲಾವಣೆಯ ಉಪಯೋಗಗಳು ಮತ್ತು ಪರಿಚಯಿಸಿದ ಹೊಸ ಸವಾಲುಗಳ ಕುರಿತು ನನ್ನ ಅಭಿಪ್ರಾಯ ತಿಳಿಸಿಕೊಡುವೆ.

ಭಾರತೀಯ ನ್ಯಾಯ ಸಂಹಿತಾ(BNS), 2023 ನಮ್ಮ ಕ್ರಿಮಿನಲ್ ಕೋಡ್ ಅನ್ನು ಸರಳ ಮತ್ತು ಸುವ್ಯವಸ್ಥಿತಗೊಳಿಸಿದೆ, ಸೆಕ್ಷನ್ ಗಳ ಸಂಖ್ಯೆಯನ್ನು 511 ರಿಂದ 358 ಕ್ಕೆ ಇಳಿಸಿದೆ. ಆದಾಗ್ಯೂ, 21 ನೇ ಶತಮಾನದಲ್ಲಿ ಬದಲಾಗುತ್ತಿರುವ ಅಪರಾಧದ ಸ್ವರೂಪವನ್ನು ಪ್ರತಿಬಿಂಬಿಸುವ 21 ಹೊಸ ಅಪರಾಧಗಳನ್ನು ಪರಿಚಯಿಸಿದೆ. ಡಿಜಿಟಲ್ ಪ್ರಪಂಚದ ದೃಷ್ಟಿಕೋನದಿಂದ BNS ನಲ್ಲಿ ಮಾಡಿದ ಕೆಲವು ಗಮನಾರ್ಹ ಬದಲಾವಣೆಗಳು ಇಂತಿವೆ :-

  • ಡಿಜಿಟಲ್ ಎವಿಡೆನ್ಸ್ : ಇಮೇಲ್‌ಗಳು, ಸರ್ವರ್ ಲಾಗ್‌ಗಳು, ಸಂದೇಶಗಳು, ಸ್ಥಳ ಮಾಹಿತಿ ಮತ್ತು ವಾಯ್ಸ್ ಮೇಲ್‌ಗಳಂತಹ ಡಿಜಿಟಲ್ ದಾಖಲೆಗಳನ್ನು ಈಗ ಸಾಕ್ಷಿಯಾಗಿ ಗುರುತಿಸಲಾಗಿದೆ. ಐಟಿ ಕಾಯಿದೆ 2000 ತಿದ್ದುಪಡಿಯ ಭಾಗವಾಗಿ ಐಪಿಸಿಗೆ ಡಿಜಿಟಲ್ ಪುರಾವೆಗಳನ್ನು ಸೇರಿಸಲಾಗಿದ್ದರೂ ಈಗ ಹೊಸ ಕಾನೂನಿನಲ್ಲಿ ಇತರ ಪುರಾವೆಗಳ ಸಮಾನವಾಗಿ ಡಿಜಿಟಲ್ ಪುರಾವೆಗಳನ್ನು ಗುರುತಿಸಲಾಗಿದೆ.
  • ಸಮುದಾಯ ಸೇವಾ ಶಿಕ್ಷೆ : ಸಣ್ಣಪುಟ್ಟ ಅಪರಾಧಗಳಿಗಾಗಿ ಜೈಲುಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಸಮುದಾಯ ಸೇವೆ ಎಂಬ ಹೊಸ ರೀತಿಯ ಶಿಕ್ಷೆಯನ್ನು ಆರನೇ ವಿಧದ ಶಿಕ್ಷೆಯಾಗಿ ಸೇರಿಸಲಾಗಿದೆ. ಮಾನಹಾನಿ ಮತ್ತು ಆಸ್ತಿಯ ದುರ್ಬಳಕೆ ಅಪರಾಧಗಳಂತಹ ಕೆಲವು ಸೈಬರ್ ಅಪರಾಧಗಳಿಗೆ ಈಗ ಶಿಕ್ಷೆಯಾಗಿ ಸಮುದಾಯ ಸೇವೆಯನ್ನು ವಿಧಿಸಬಹುದು.
  • ಸಂಘಟಿತ ಅಪರಾಧ: ಸಂಘಟಿತ (ಗಂಭೀರ ಮತ್ತು ಸಣ್ಣ) ಅಪರಾಧವನ್ನು ಪರಿಹರಿಸಲು ಎರಡು ಹೊಸ ಸೆಕ್ಷನ್ ಗಳನ್ನು ಸೇರಿಸಲಾಗಿದೆ,  ವ್ಯಕ್ತಿಯ ಸಾವಿಗೆ ಕಾರಣವಾದ ಸೈಬರ್ ಅಪರಾಧಗಳು ಮತ್ತು ಡಿಜಿಟಲ್ ಮಾಧ್ಯಮವನ್ನು ಬಳಸಿ ಮಾಡಿದ ಆರ್ಥಿಕ ಅಪರಾಧಗಳಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಮತ್ತು 10 ಲಕ್ಷ ರೂಪಾಯಿಗಳಿಗಿಂತ ಕಡಿಮೆಯಿಲ್ಲದ ದಂಡ ವಿಧಿಸಬಹುದು, ಸಾವಾಗಿಲ್ಲದಿದ್ದರೆ ಜೀವಾವಧಿ ಶಿಕ್ಷೆ ಮತ್ತು 5 ಲಕ್ಷ ರೂಪಾಯಿಗಳಿಗಿಂತ ಕಡಿಮೆಯಿಲ್ಲದ ದಂಡ ವಿಧಿಸಬಹುದು.
  • ಭಯೋತ್ಪಾದನೆ: ಸೈಬರ್ ಭಯೋತ್ಪಾದನೆಸೇರಿದಂತೆ ದೇಶ ಅಥವಾ ಪ್ರಮುಖ ಸಂಸ್ಥೆಗಳ ವಿರುದ್ಧದ ಬೆದರಿಕೆಗಳು ಮತ್ತು ಭಯೋತ್ಪಾದನಾ ಕೃತ್ಯಗಳನ್ನು ಶಿಕ್ಷಿಸಲು ಹೊಸ ಸೆಕ್ಷನ್ ಒಂದನ್ನು ಸೇರಿಸಲಾಗಿದೆ, ಈ ಅಪರಾಧಕ್ಕೆ ಗಲ್ಲು ಅಥವಾ ಜೀವಾವಧಿ ಶಿಕ್ಷೆಯನ್ನು ದಂಡವಾಗಿ ವಿಧಿಸಬಹುದು.
  • ಹೊಸ ಸೈಬರ್ ಅಪರಾಧಗಳು:  ಗುರುತಿನ ಕಳ್ಳತನ, ಸೋಗು ಹಾಕುವಿಕೆ, ಸುಲಿಗೆ, ಆಸ್ತಿಯ ದುರುಪಯೋಗ, ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ, ಕಾರ್ಡ್ ಸ್ಕಿಮ್ಮಿಂಗ್, ATM ಕಳ್ಳತನ, ಮೋಸ, ಹೆಂಗಸರು ಮತ್ತು ಮಕ್ಕಳ ಮೇಲೆ ಎಸಗುವ ವಿವಿಧ ಸೈಬರ್ ಅಪರಾಧಗಳನ್ನು BNS ಗುರುತಿಸುತ್ತದೆ ಮತ್ತು  ಅಪರಾಧದ ತೀವ್ರತೆಗೆ ಅನುಗುಣವಾಗಿ ಶಿಕ್ಷೆಯನ್ನು ವಿಧಿಸುತ್ತದೆ.
ಹೊಸ ಕ್ರಿಮಿನಲ್ ಕಾನೂನು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ