ವಾಯ್ಸ್ ಕ್ಲೋನಿಂಗ್

ವಾಯ್ಸ್ ಕ್ಲೋನಿಂಗ್ ಹಗರಣದ ಬಗ್ಗೆ, ನೀವು ತಿಳಿದುಕೊಳ್ಳಲೇ ಬೇಕಾದದ್ದು

ಈ ಅಂಕಣ ವಾಯ್ಸ್ ಕ್ಲೋನಿಂಗ್ ಬಳಸಿ ನಡೆಸುವ ವಿವಿಧ ಸೈಬರ್ ಅಪರಾಧಗಳ ಬಗ್ಗೆ ತಿಳಿಸಿ ಕೊಡುತ್ತದೆ, ಮತ್ತು ಅದನ್ನು ಹೇಗೆ ಮಾಡಲಾಗುತ್ತದೆ, ಅದರಿಂದ ನಿಮ್ಮನ್ನು ನೀವು ಹೇಗೆ ಕಾಪಾಡಿಕೊಳ್ಳಬಹುದು ಮತ್ತು ನೀವು ವಂಚನೆಗೊಳಗಾಗಿದ್ದರೆ ಏನು ಮಾಡ ಬಹುದು ಎಂಬುದನ್ನು ಸ್ಥೂಲವಾಗಿ ತಿಳಿಸಿಕೊಡುತ್ತದೆ.

ಹಿರಿಯ ನಾಗರಿಕರಾದ ಲಕ್ಷ್ಮಿ ಚಂದ್ ಚಾವ್ಲಾ ಅವರಿಗೆ ಬಂದ ಅನಾಮದೇಯ ಸಂಖ್ಯೆಯ ವಾಟ್ಸಾಪ್ ಸಂದೇಶದಲ್ಲಿ, ನಿಮ್ಮ ಮಗನನ್ನು ನಾವು ಅಪಹರಣ ಮಾಡಿದ್ದೇವೆ, ಅವರನ್ನು ಹಿಂದಿರುಗಿಸಲು ₹ 5 ಲಕ್ಷ ಕೊಡಲು ತಿಳಿಸಿರುತ್ತಾರೆ, ಜೊತೆಗೆ ಪೊಲೀಸರನ್ನು ಸಂಪರ್ಕಿಸಬೇಡಿ ಮತ್ತು ಹಣವನ್ನು  ಕೂಡಲೇ ಕಳಿಸಿ ಎಂಬ ಅವರ ಮಗನ ಧ್ವನಿಯನ್ನು ಒಳಗೊಂಡ ಸಂದೇಶವನ್ನು  ಕಳುಹಿಸುತ್ತಾರೆ. ಗಾಬರಿಗೊಂಡ ಚಾವ್ಲಾ ಅವರು ತಕ್ಷಣವೇ PayTm ಮೂಲಕ ₹1 ಲಕ್ಷ ಅವರು ತಿಳಿಸಿದ ಬ್ಯಾಂಕ್ ಅಕೌಂಟ್ ಗೆ ವರ್ಗಾಯಿಸಿದರು ಮತ್ತು ಉಳಿದ ಮೊತ್ತವನ್ನು ಕಳುಹಿಸಲು ಸಮಯವನ್ನು ವಿನಂತಿಸಿದರು. ನಂತರ ಅವರಿಗೆ ತಮ್ಮ ಮಗ ಅಪಹರಣವಾಗೇ ಇರಲಿಲ್ಲಾ ಮತ್ತು ತಾವು ವಾಯ್ಸ್ ಕ್ಲೋನಿಂಗ್‌ ಸೈಬರ್ ಅಪರಾಧಕ್ಕೆ  ಬಲಿಯಾಗಿದ್ದೇವೆ ಎಂದು ತಿಳಿಯುತ್ತದೆ.

ವಾಯ್ಸ್ ಕ್ಲೋನಿಂಗ್ ವಂಚನೆಯಲ್ಲಿ, ಸೈಬರ್ ಖದೀಮರು ಬಲಿಪಶುವಿನ ಪರಿಚಯಸ್ಥರೊಬ್ಬರ ಧ್ವನಿಯನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಾಫ್ಟ್‌ವೇರ್ ಬಳಸಿಕೊಂಡು ತಮಗೆ ಬೇಕಾದ ಸಂದೇಶವನ್ನು ನೀಡಲು ಕ್ಲೋನಿಂಗ್ ಮಾಡುತ್ತಾರೆ. ಆ ಧ್ವನಿ ಸಂದೇಶವನ್ನು ಅಥವಾ ಆ ಧ್ವನಿಯನ್ನು ಬಳಸಿಕೊಂಡು ಬಲಿಪಶುವನ್ನು ಮನವೊಲಿಸಲು ಅಥವಾ ಅವರ ನಂಬಿಕೆಯನ್ನು ಪಡೆಯಲು ಕರೆ ಮಾಡುತ್ತಾರೆ ಮತ್ತು ಹಣಕ್ಕಾಗಿ ಬೇಡಿಕೆಯಿಡಲು ಅಥವಾ ಅವರ ವೈಯಕ್ತಿಕ (ಆಧಾರ್ ಅಥವಾ PAN ವಿವರಗಳು)  ಅಥವಾ ಆರ್ಥಿಕ(ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳು ಅಥವಾ OTP) ಸೂಕ್ಷ್ಮ ಮಾಹಿತಿ ಪಡೆಯಲು ಬಳಸುತ್ತಾರೆ, ನಂತರ ಅದನ್ನು ಬಳಸಿ ವಿವಿಧ ಸೈಬರ್ ಅಪರಾಧಗಳನ್ನು ಮಾಡುತ್ತಾರೆ. ವಂಚಕರು ನಿಮಗೆ ಕರೆ ಮಾಡುವ ಮೂಲಕ ಅಥವಾ ನಿಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ಧ್ವನಿ ಮಾದರಿಗಳನ್ನು ಸಂಗ್ರಹಿಸುತ್ತಾರೆ.

5000 ಜನರ ಒಳಗೊಂಡ ಒಂದು ಸಮೀಕ್ಷೆಯ ಪ್ರಕಾರ, ಪ್ರತಿಕ್ರಿಯಿಸಿದವರಲ್ಲಿ 85% ರಷ್ಟು ಜನರಿಗೆ ತಮ್ಮ ಪೋಷಕರ ಧ್ವನಿ ಅಥವಾ ಸಂಗಾತಿಯ ಧ್ವನಿ ಕರೆ/ಸಂದೇಶವನ್ನು, ಇದು AI ರಚಿತ ಧ್ವನಿ ಎಂದು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ, ಮತ್ತು ಅದರಲ್ಲಿ 48% ಜನರು ಮುಂದೆ ಹೋಗಿ 50000 ವರೆಗೆ ಮೊತ್ತವನ್ನು ಸಂದೇಶದ ಪ್ರಕಾರ ಕಳುಹಿಸಿರುತ್ತಾರೆ.

ನನ್ನ ಹಿಂದಿನ ಲೇಖನಗಳಲ್ಲಿ deepfake AI ಸಾಫ್ಟ್‌ವೇರ್ ಬಳಸಿ ವಾಯ್ಸ್ ಕ್ಲೋನಿಂಗ್ ಅನ್ನು ಹೇಗೆ ಮಾಡಲಾಗುತ್ತದೆ ಎಂಬುದರ ಕುರಿತು ನಾನು ವಿವರವಾಗಿ ಚರ್ಚಿಸಿದ್ದೇನೆ.

ವಾಯ್ಸ್ ಕ್ಲೋನಿಂಗ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು :-

  • ಎಲ್ಲಾ ಡಿಜಿಟಲ್ ವಹಿವಾಟುಗಳು ಮತ್ತು ಅಪರಿಚಿತ ಸಂಖ್ಯೆಗಳಿಂದ ಬಂದ ಸಂದೇಶಗಳು/ಕರೆಗಳಿಗಾಗಿ ಯಾವಾಗಲೂ ‘ಶೂನ್ಯ ವಿಶ್ವಾಸ  ಮತ್ತು ದೃಢೀಕರಣ’ ತತ್ವವನ್ನು ಅನುಸರಿಸಿ.
  • ನೀವು ಸ್ವೀಕರಿಸಿದ ಸಂದೇಶವು ಅಧಿಕೃತವಾಗಿದೆಯೇ ಎಂದು ಪರಿಶೀಲಿಸಿ ಮತ್ತು ಅದರ ಮೇಲೆ ಕಾರ್ಯನಿರ್ವಹಿಸುವ ಮೊದಲು ಆ ವ್ಯಕ್ತಿ ಅಥವಾ ಅವನ ನಿಕಟ ಸಂಬಂಧಿ/ಸಹವರ್ತಿಗೆ ಕರೆ ಮಾಡಿ ಖಚಿತ ಪಡಿಸಿಕ್ಕೊಳ್ಳಿ.
  • ಸಂದೇಹ ಬಂದಲ್ಲಿ, ನಂಬುವ ಮೊದಲು ನಿಮ್ಮಿಬ್ಬರಿಗೆ ಮಾತ್ರ ತಿಳಿದಿರುವ ಮಾಹಿತಿಯನ್ನು ಪರಿಶೀಲಿಸಲು ಪ್ರಶ್ನಿಸಿ ಅಥವಾ  ಕೋಡ್‌ವರ್ಡ್ ಬಳಸಿ.
  • ಅಪರಿಚಿತರಿಂದ ಬಂದ ಕರೆ/ಸಂದೇಶದಲ್ಲಿ, ಅಸ್ವಾಭಾವಿಕ ವಿರಾಮಗಳು, ರೊಬೊಟಿಕ್ ಭಾಷಣ ಶೈಲಿಗಳು ಅಥವಾ ಸಂವಹನದಲ್ಲಿನ ಅಸಂಗತತೆಗಳಿಗೆ ಗಮನ ಕೊಡಿ.
  • ನಿಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ಖಾಸಗಿಯಾಗಿಡಿ.
  • VPN, ಫೈರ್‌ವಾಲ್ ಮತ್ತು ಉತ್ತಮ ಆಂಟಿವೈರಸ್ ಸಾಫ್ಟ್‌ವೇರ್‌ನೊಂದಿಗೆ ನಿಮ್ಮ ಆನ್‌ಲೈನ್ ಚಟುವಟಿಕೆಯನ್ನು ಸುರಕ್ಷಿತಗೊಳಿಸಿ ಮತ್ತು ಅದನ್ನು ಯಾವಾಗಲೂ ನವೀಕರಿಸಿ.
  • Phishbowl ಅಥವಾ TrueCaller ಇತ್ಯಾದಿ ಉಚಿತ ಅಪ್ಲಿಕೇಶನ್‌ಗಳು ಅಥವಾ ಹೆಚ್ಚಿನ ರೇಟಿಂಗ್‌ಗಳನ್ನು ಹೊಂದಿರುವ ವೆಬ್‌ಸೈಟ್‌/ಆಪ್ ಗಳಲ್ಲಿ ಇದು ಫಿಶಿಂಗ್ ಅಥವಾ ಸ್ಪ್ಯಾಮ್ ಕರೆಯೇ ಎಂದು ಪರಿಶೀಲಿಸಿ.

ನೀವು ವಂಚನೆಗೆ ಒಳಗಾಗಿದ್ದರೆ :-

ತಕ್ಷಣವೇ 1930 ಸೈಬರ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ದೂರು ಸಲ್ಲಿಸಿ. ನೀವು ಹಣವನ್ನು ಕಳಿಸಿದ್ದರೆ, ಹಣವನ್ನು ಫ್ರೀಜ್ ಮಾಡಲು ಸಂಬಂಧಿಸಿದ ಬ್ಯಾಂಕ್ಗೆ ಕರೆ ಮಾಡಿ ಮತ್ತು ದೂರು ನೀಡಿ. ನೀವು ಯಾರೊಂದಿಗಾದರೂ ಆಧಾರ್ ಅನ್ನು ಹಂಚಿಕೊಂಡಿದ್ದರೆ, uidai.gov.in ನಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಿ. ಬಹಿರಂಗಗೊಂಡ ಬ್ಯಾಂಕಿಂಗ್ ಖಾತೆಗಳ ಬಳಕೆದಾರ ಐಡಿಗಳು ಮತ್ತು ಪಾಸ್ವರ್ಡ್ಗಳು/ಪಿನ್ಗಳನ್ನು ಬದಲಾಯಿಸಿ. ಗಾಬರಿಯಾಗಬೇಡಿ, ಅದು ನಕಲಿ ಧ್ವನಿ, ನಿಮ್ಮನ್ನು ಸುಲಿಗೆ ಅಥವಾ ಮಾನಹಾನಿ ಮಾಡಲು ರಚಿಸಲಾಗಿದೆ ಎಂದು ಸ್ನೇಹಿತರು, ಕುಟುಂಬದವರಿಗೆ ತಿಳಿಸಿ ಮತ್ತು ನಿಮ್ಮ ಸೋಶಿಯಲ್ ಮೀಡಿಯಾ ಸ್ಟೇಟಸ್ ನಲ್ಲಿ ಪೋಸ್ಟ್ ಮಾಡಿ.

ಭಾರತದಲ್ಲಿ ಕಾನೂನುಬದ್ಧವಾಗಿ ಸಂತ್ರಸ್ತರಿಗೆ ಲಭ್ಯವಿರುವ ಪರಿಹಾರಗಳು :-

ನಿಮ್ಮ ಹತ್ತಿರದ ಸೈಬರ್ ಅಥವಾ ಮಕ್ಕಳ ನಿರ್ದಿಷ್ಟ ಅಥವಾ ನಿಯಮಿತ ಪೊಲೀಸ್ ಠಾಣೆಯಲ್ಲಿ ನೀವು ಕ್ರಿಮಿನಲ್ ಪ್ರಕರಣವನ್ನು ಈ ಕೆಳಗಿನ ಕಾನೂನು ಸೆಕ್ಷನ್ ಗಳು ಅಥವಾ ನಿಮ್ಮ ಪ್ರಕರಣದ ಆಧಾರದ ಮೇಲೆ ಪೊಲೀಸರು ಸೂಚಿಸಿದ ಸೆಕ್ಷನ್‌ಗಳ ಪ್ರಕಾರ ದಾಖಲಿಸಬಹುದು :

  • ಸೆಕ್ಷನ್ 419 (ಸೋಗು ಹಾಕುವ ಮೂಲಕ ವಂಚನೆಗೆ ಶಿಕ್ಷೆ) , ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿಯ ವಿತರಣೆಯನ್ನು ಪ್ರೇರೇಪಿಸುವುದು), ಸೆಕ್ಷನ್ 463/464/465 (ಸುಳ್ಳು ದಾಖಲೆ ಅಥವಾ ತಪ್ಪು ಎಲೆಕ್ಟ್ರಾನಿಕ್ ದಾಖಲೆಯನ್ನು ಮಾಡಿ , ಫೋರ್ಜರಿ), ಮತ್ತು ಸೆಕ್ಷನ್ 499/500 (ಮಾನನಷ್ಟ) ಭಾರತೀಯ ದಂಡ ಸಂಹಿತೆ (IPC).
  • ಸೆಕ್ಷನ್ 66D (ಕಂಪ್ಯೂಟರ್ ಬಳಸಿ ಸೋಗು ಹಾಕುವ ಮೂಲಕ ವಂಚನೆಗೆ ಶಿಕ್ಷೆ), ಸೆಕ್ಷನ್ 66E (ಗೌಪ್ಯತೆಯ ಉಲ್ಲಂಘನೆ), ಮತ್ತು ಸೆಕ್ಷನ್ 67A (ಲೈಂಗಿಕವಾಗಿ ಅಶ್ಲೀಲವಾದ ಕೃತ್ಯವನ್ನು ಹೊಂದಿರುವ ವಸ್ತುಗಳನ್ನು ಪ್ರಕಟಿಸಲು ಅಥವಾ ರವಾನಿಸಲು ಶಿಕ್ಷೆ) ಮಾಹಿತಿ ತಂತ್ರಜ್ಞಾನ ಕಾಯಿದೆ (IT) ಕಾಯಿದೆ 2000/08 .
ವಾಯ್ಸ್ ಕ್ಲೋನಿಂಗ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ