ಸೈಬರ್ ವೋಯರಿಸಂ ಕ್ರೈಮ್: ನೀವು ತಿಳಿಯಲೇಬೇಕಾದ ವಿಷಯ
ಇತ್ತೀಚಿನ ಕೆಲವು ಸುದ್ದಿಗಳನ್ನು ನೋಡೋಣ :
- ಭಾರತದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಟೀನ್ ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಪ್ರತಿ ದಿನ ಮಹಿಳೆಯರ ಹಾಸ್ಟೆಲ್ಲಿನ ಸ್ನಾನಗೃಹದಲ್ಲಿ ತನ್ನ ಮೊಬೈಲ್ ಫೋನ್ ಕ್ಯಾಮೆರಾ ಬಳಸಿ ಅಲ್ಲಿ ಒಳಗೆ ನಡೆಯುವ ದೃಶ್ಯಗಳನ್ನು ಸೆರೆ ಹಿಡಿಯುತ್ತಿರುತ್ತಾನೆ, ನಂತರ ಅದು ಪತ್ತೆಯಾಗಿ ಅವನ ಬಂಧನವಾಗುತ್ತದೆ.
- ಕೇಂದ್ರದ ಮಹಿಳಾ ಸಚಿವರೊಬ್ಬರು ಗೋವಾದ ಪ್ರತಿಷ್ಠಿತ ಮಾಲ್ ಒಂದರ ಬಟ್ಟೆ ಅಂಗಡಿಯ ಟ್ರಯಲ್ ರೂಮ್ ಒಂದರಲ್ಲಿ ಕ್ಯಾಮೆರಾ ಇರುವುದನ್ನು ವರದಿ ಮಾಡಿದ್ದರು.
- ಸಾಫ್ಟ್ವೇರ್ ಇಂಜಿನಿಯರ್ ಒಬ್ಬ ಮುನ್ನೂರಕ್ಕು ಹೆಚ್ಚು ಕಂಪ್ಯೂಟರನ್ನು ಹ್ಯಾಕ್ ಮಾಡಿ ಅದರಲ್ಲಿನ ಕ್ಯಾಮೆರಾ ಮುಖಾಂತರ ಅನೇಕ ಖಾಸಗಿ ದೃಶ್ಯಗಳನ್ನು ಯಾರಿಗೂ ತಿಳಿಯದಂತೆ ರೆಕಾರ್ಡ್ ಮಾಡಿದ್ದನು.
- ಯುವತಿಯೊಬ್ಬಳಿಗೆ ಉಡುಗೊರೆಯಾಗಿ ಒಂದು ಆಟೋಮ್ಯಾಟಿಕ್ ಶಾಂಪೂ ಡಿಸ್ಪೆನ್ಸೆರ್ ಸಿಗುತ್ತದೆ, ಆಮೇಲೆ ಗೊತ್ತಾಗುತ್ತದೆ ಅದರಲ್ಲಿ ಸಣ್ಣ ಕ್ಯಾಮೆರಾ ಮತ್ತು wifi ಟ್ರಾನ್ಸ್ಮಿಟ್ಟರ್ ಇರುವುದು .
ಈ ಮೇಲಿನ ಎಲ್ಲ ಪ್ರಕರಣಗಳು ಸೈಬರ್ ವೋಯರಿಸಂ ಸೈಬರ್ ಅಪರಾಧದ ವಿವಿಧ ಮುಖಗಳು.
ಸರಳ ಪದಗಳಲ್ಲಿ, ಯಾರಾದರೂ ರಹಸ್ಯವಾಗಿ ಆ ವ್ಯಕ್ತಿಯ ಒಪ್ಪಿಗೆಯಿಲ್ಲದೆ ಅವರ ವಿವಸ್ತ್ರಗೊಳಿಸುವಿಕೆ, ಲೈಂಗಿಕ ಚಟುವಟಿಕೆ ಮತ್ತು ಅದರ ನಿಕಟ ಕ್ರಿಯೆಗಳ ವೀಕ್ಷಣೆಯಿಂದ ಆನಂದವನ್ನು ಪಡೆಯುವಂತಹ ವಿಕೃತ ಮನಸ್ಥಿತಿಗೆ ವೋಯರಿಸಂ ಅನ್ನುತ್ತಾರೆ. ವೋಯರಿಸಂ ಅನ್ನು ಗೌಪ್ಯತೆಗೆ ಒಳನುಗ್ಗುವಿಕೆ ಅಥವಾ ಲೈಂಗಿಕ ದರ್ಶನ ತೃಪ್ತ ಎಂದು ಕೂಡ ಕರೆಯುತ್ತಾರೆ. ಖಾಸಗಿ ಸನ್ನಿವೇಶದಲ್ಲಿ ಅವರ ಸಮ್ಮತಿ ಅಥವಾ ಜ್ಞಾನವಿಲ್ಲದೆ ಅವರ ಚಿತ್ರಗಳನ್ನು ವೀಕ್ಷಿಸುವುದು, ಸೆರೆಹಿಡಿಯುವುದು ಅಥವಾ ವಿತರಿಸುವುದು ಇದರಲ್ಲಿ ಸೇರಿದೆ. ತಂತ್ರಜ್ಞಾನದ ಪ್ರಗತಿಯೊಂದಿಗೆ, ಡಿಜಿಟಲ್ ಕ್ಯಾಮೆರಾಗಳು, ಸ್ಮಾರ್ಟ್ಫೋನ್ಗಳು ಇತ್ಯಾದಿಗಳನ್ನು ವಸ್ತ್ರ ಬದಲಾಯಿಸುವ ಕೊಠಡಿಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಅವರ ಖಾಸಗಿ ಕೊಠಡಿಗಳಾದ ಮಲಗುವ ಕೋಣೆ, ಸ್ನಾನ ಗೃಹ ಅಥವಾ ಎಲ್ಲಿ ವ್ಯಕ್ತಿಗಳು ಸಾಮಾನ್ಯವಾಗಿ ಗೌಪ್ಯತೆಯನ್ನು ನಿರೀಕ್ಷಿಸುತ್ತಾರೋ ಅಂತ ಜಾಗದಲ್ಲಿ ಡಿಜಿಟಲ್ ಕ್ಯಾಮೆರಾ ಮುಖಾಂತರ ಚಿತ್ರ ಅಥವಾ ವಿಡಿಯೋ ಸೆರೆಹಿಡಿಯುವುದಕ್ಕೆ ಸೈಬರ್ ಅಥವಾ ಡಿಜಿಟಲ್ ವಾಯರಿಸಂ ಸೈಬರ್ಕ್ರೈಮ್ ಎನ್ನುತ್ತಾರೆ. ಅಂತಹ ಸೈಬರ್ ಅಪರಾಧಿಗಳ ಉದ್ದೇಶವು ಸುಲಭವಾಗಿ ಹಣ ಸಂಪಾದಿಸುವುದು, ಅಸೂಯೆ, ಗೀಳು, ಸೇಡು ಅಥವಾ ದ್ವೇಷವನ್ನು ಒಳಗೊಂಡಿರಬಹುದು.
ಸೈಬರ್ ವೋಯರಿಸಂ ಸೈಬರ್ ಕ್ರೈಮ್ಗಳಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು:-
- ನಿಮ್ಮ ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನಿನ ಕ್ಯಾಮೆರಾ ಬಳಸುವ ಪರ್ಮಿಷನ್ ಗಳನ್ನು ತೀರಾ ಅಗತ್ಯವಿದ್ದರೆ ಮಾತ್ರ ಆಪ್/ಅಪ್ಲಿಕೇಶನ್ ಗಳಿಗೆ ಕೊಡಿ, ಸಾದ್ಯವಾದರೆ ಕ್ಯಾಮೆರವನ್ನು ಡಿಸೆಬಲ್ ಮಾಡಿ ಇಡಿ ಮತ್ತು ಬೇಕಾದಾಗ ಎನೆಬಲ್ ಮಾಡಿ.
- ಅಪರಿಚಿತರು ಕಳುಹಿಸುವ ಹೈಪರ್ ಲಿಂಕನ್ನು ಕ್ಲಿಕ್ ಮಾಡಬೇಡಿ, QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ, ಮತ್ತು ಯಾವುದೇ ಆಪ್/ಅಪ್ಲಿಕೇಶನ್ ಇನ್ಸ್ಟಾಲ್ ಮಾಡಬೇಡಿ.
- ಯಾವಾಗಲೂ ಬಲವಾದ ಪಾಸ್ವರ್ಡ್ಗಳನ್ನು ಬಳಸಿ ಮತ್ತು ಅವುಗಳನ್ನು ಆಗಾಗ್ಗೆ ಬದಲಾಯಿಸುತ್ತಿರಿ.
- ಉತ್ತಮ ಆಂಟಿವೈರಸ್ ಮತ್ತು ಫೈರ್ ವಾಲ್ ಸಾಫ್ಟ್ವೇರ್ ಬಳಸಿ ಮತ್ತು ಆಗಾಗ ಅದನ್ನು ನವೀಕರಿಸುತ್ತೀರಿ.
- vpn ಸಾಫ್ಟ್ವೇರ್ ಬಳಸಿ, ಅದು ನೀವಿರುವ ಸ್ಥಳದ ಕುರಿತಾದ ಮಾಹಿತಿಯನ್ನು ಬೇರೆಯವರಿಂದ ಮರೆಮಾಚುತ್ತದೆ.
- ಹೊಸ ಖಾಸಗಿ ಜಾಗಗಳಲ್ಲಿ ನೀವು ಕ್ಯಾಮೆರಗಾಗಿ ಒಮ್ಮೆ ಪರೀಕ್ಷಿಸಿ, ಮತ್ತು ಅಲ್ಲಿ ಬ್ಯಾಟರಿ/ಎಲೆಕ್ಟ್ರಿಸಿಟಿ ಚಾಲಿತ ಯಾವುದೇ ವಸ್ತುವನ್ನು ಇಡುವುದಕ್ಕೆ ಮುಂಚೆ ಕ್ಯಾಮೆರಾ ಇದೆಯಾ ಎಂದು ಪರೀಕ್ಷಿಸಿ.
ನೀವು ಅಂತಹ ಸೈಬರ್ ಅಪರಾಧಕ್ಕೆ ಬಲಿಯಾಗಿದ್ದರೆ :-
ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ಅಥವಾ ಸೈಬರ್ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ. ಅಂತಹ ವಂಚಕರು ಮತ್ತು ವಂಚನೆಯ ಬಗ್ಗೆ ಸಂಬಂಧಿತ ಪ್ರಾಧಿಕಾರ ಅಥವಾ ಸಾಮಾಜಿಕ ಮಾಧ್ಯಮ ಜಾಲತಾಣಕ್ಕೆ ದೂರು ನೀಡಿ. ಆ ವಂಚಕ ಬಳಕೆದಾರರನ್ನು ನಿರ್ಬಂಧಿಸಿ ಆದರೆ ಸಂಬಂದಿತ ಯಾವುದೇ ಮಾಹಿತಿಯನ್ನು ಅಳಿಸಬೇಡಿ, ಅದನ್ನು ಅಪರಾಧಿಗಳ ವಿರುದ್ಧ ಪುರಾವೆಯಾಗಿ ಬಳಸಬಹುದು. ಅಪರಿಚಿತರು ಕೊಟ್ಟ ಯಾವುದೇ ಸಾಫ್ಟ್ವೇರ್ ಅನ್ನು ನೀವು ಸ್ಥಾಪಿಸಿದ್ದರೆ ಅಥವಾ ಹೈಪರ್ ಲಿಂಕ್ ಅನ್ನು ಕ್ಲಿಕ್ ಮಾಡಿದ್ದರೆ ಅಥವಾ ಒದಗಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡಿದ್ದರೆ, ಆ ಸಾಫ್ಟ್ವೇರ್ ಅನ್ನು ಅನ್ಇನ್ಸ್ಟಾಲ್ ಮಾಡಿ. ನಿಮ್ಮ ಎಲ್ಲಾ ಪ್ರಮುಖ ಬ್ಯಾಂಕಿಂಗ್, ಇಮೇಲ್ ಇತ್ಯಾದಿಗಳಂತಹ ಖಾತೆಗಳ ಪಾಸ್ವರ್ಡ್ಗಳು / ಪಿನ್ಗಳನ್ನು ಬದಲಾಯಿಸಿ. ನಿಮ್ಮ ಸಾಧನವನ್ನು ಫ್ಯಾಕ್ಟರಿ ರೀಸೆಟ್ ಅಥವಾ ಫಾರ್ಮ್ಯಾಟ್ ಮಾಡುವುದು ಉತ್ತಮ.
ಸಂತ್ರಸ್ತರಿಗೆ ಕಾನೂನುಬದ್ಧವಾಗಿ(ಭಾರತದಲ್ಲಿ) ಲಭ್ಯವಿರುವ ಪರಿಹಾರಗಳು :-
ನಿಮ್ಮ ಹತ್ತಿರದ ಸೈಬರ್ ಅಥವಾ ಸಾಮಾನ್ಯ ಪೊಲೀಸ್ ಠಾಣೆಯಲ್ಲಿ ನೀವು ಕ್ರಿಮಿನಲ್ ಪ್ರಕರಣವನ್ನು ಈ ಕೆಳಗಿನ ಕಾನೂನು ಮತ್ತು ಸೆಕ್ಷನ್ಗಳ ಅಡಿಯಲ್ಲಿ ಅಥವಾ ನಿಮ್ಮ ಪ್ರಕರಣದ ಆಧಾರದ ಮೇಲೆ ಪೊಲೀಸರು ಸೂಚಿಸಿದ ಸೆಕ್ಷನ್ಗಳ ಅಡಿಯಲ್ಲಿ ದಾಖಲಿಸಬಹುದು :
- ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 292-294 (ಅಶ್ಲೀಲ ವಸ್ತುಗಳ ವಿತರಣೆ ಅಥವಾ ಚಲಾವಣೆ), ಸೆಕ್ಷನ್ 354 (ಮಹಿಳೆಯ ಮೇಲೆ ಆಕ್ರಮಣ ಮಾಡುವ ಉದ್ದೇಶದಿಂದ ಅವಳನ್ನು ಅವಮಾನಿಸುವ ಮತ್ತು ಆಕೆಯ ನಮ್ರತೆಯನ್ನು ಆಕ್ರೋಶಗೊಳಿಸುವುದು), ಸೆಕ್ಷನ್ 354A-D (ಲೈಂಗಿಕ ಕಿರುಕುಳ ಮತ್ತು ಶಿಕ್ಷೆ), ಸೆಕ್ಷನ್ 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆಗಾಗಿ ಶಿಕ್ಷೆ), ಸೆಕ್ಷನ್ 419 (ಸೋಗು ಹಾಕುವ ವಂಚನೆಗಾಗಿ ಶಿಕ್ಷೆ), ಸೆಕ್ಷನ್ 420 (ವಂಚನೆ), ಸೆಕ್ಷನ್ 424 (ಮಾಹಿತಿಯ ಕಾನೂನುಬಾಹಿರ ಹೊರತೆಗೆಯುವಿಕೆ), ಸೆಕ್ಷನ್ 441 (ಕ್ರಿಮಿನಲ್ ಅತಿಕ್ರಮಣ), ಸೆಕ್ಷನ್ 499 (ಮಾನನಷ್ಟ), ಸೆಕ್ಷನ್ 500 (ಮಾನನಷ್ಟಕ್ಕಾಗಿ ಶಿಕ್ಷೆ), ಸೆಕ್ಷನ್ 503 (ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆ ತರುವ ಬೆದರಿಕೆಗಳು), ಸೆಕ್ಷನ್ 507 (ಕ್ರಿಮಿನಲ್ ಬೆದರಿಕೆ), ಸೆಕ್ಷನ್ 509 (ಖಾಸಗಿತನ ಮತ್ತು ನಮ್ರತೆಗೆ ಅವಮಾನ).
- ಮಾಹಿತಿ ತಂತ್ರಜ್ಞಾನ ಕಾಯಿದೆ 2000/08, ಸೆಕ್ಷನ್ 43 (ಕಂಪ್ಯೂಟರ್, ಕಂಪ್ಯೂಟರ್ ಸಿಸ್ಟಮ್, ಇತ್ಯಾದಿಗಳ ಹಾನಿಗಾಗಿ ದಂಡ ಮತ್ತು ಪರಿಹಾರ), ಸೆಕ್ಷನ್ 66 (ಕಂಪ್ಯೂಟರ್ ಸಂಬಂಧಿತ ಅಪರಾಧಗಳಿಗೆ ಶಿಕ್ಷೆ – ಡೇಟಾದ ಕಳ್ಳತನ, ಸಿಸ್ಟಮ್ಗೆ ವೈರಸ್ ಹರಡುವಿಕೆ, ಡೇಟಾ ನಾಶ, ಹ್ಯಾಕಿಂಗ್ ಅಥವಾ ಅಧಿಕೃತ ವ್ಯಕ್ತಿಗೆ ಕಂಪ್ಯೂಟರ್ ಅಥವಾ ನೆಟ್ವರ್ಕ್ಗೆ ಪ್ರವೇಶ), ಸೆಕ್ಷನ್ 66C (ಗುರುತಿನ ಕಳ್ಳತನ ಮತ್ತು ಗುರುತಿನ ಮಾಹಿತಿಯ ಮೋಸದ ಅಥವಾ ಅಪ್ರಾಮಾಣಿಕ ಬಳಕೆಗಾಗಿ ದಂಡ), ಸೆಕ್ಷನ್ 66D (ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ಸೋಗು ಹಾಕುವ ವಂಚನೆಗೆ ಶಿಕ್ಷೆ), ಸೆಕ್ಷನ್ 66E (ಗೌಪ್ಯತೆ ಉಲ್ಲಂಘನೆ), ಸೆಕ್ಷನ್ 67 (ವಿದ್ಯುನ್ಮಾನ ಮಾಧ್ಯಮದಲ್ಲಿ ಅಶ್ಲೀಲ ಮತ್ತು ಲೈಂಗಿಕ ವಿಷಯವನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು), ಸೆಕ್ಷನ್ 67A (ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ವಸ್ತುಗಳ ಪ್ರಕಟಣೆ).
- ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯಿದೆ, 1986 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012 ರ ಅಡಿಯಲ್ಲಿ ವಿವಿಧ ಸೆಕ್ಷನ್ಗಳು.