ಭಾರತದ AI ಸಮ್ಮೇಳನ : ಡಿಜಿಟಲ್ ಭಾರತಕ್ಕೆ AI ಆಧಾರಿತ ಭದ್ರತಾ ರಕ್ಷಾಕವಚ
ಫೆಬ್ರುವರಿ 16ರಿಂದ 20ರವರೆಗೆ ನವದೆಹಲಿಯ ಭಾರತ್ ಮಂಡಪಂನಲ್ಲಿ ನಡೆದ ಇಂಡಿಯಾ AI ಇಂಪ್ಯಾಕ್ಟ್ ಸಮ್ಮೇಳನ 2026 (India AI Impact Summit 2026) ಒಂದು ಮಹತ್ವದ ಘಟನೆಯಾಗಿತ್ತು. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರಾನ್, ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ, ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ಗೂಗಲ್ನ ಸುಂದರ್ ಪಿಚಾಯ್, ಓಪನ್ AI ನ ಸ್ಯಾಮ್ ಆಲ್ಟ್ಮನ್ ಸೇರಿದಂತೆ ೧೦೦ಕ್ಕೂ ಹೆಚ್ಚು ದೇಶಗಳಿಂದ ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ ಈ ಸಭೆಯು, ಜಾಗತಿಕ ಮಟ್ಟದ AI ಶೃಂಗಸಭೆಯೊಂದನ್ನು ಆಯೋಜಿಸಿದ ಮೊದಲ ಅಭಿವೃದ್ಧಿಶೀಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಈ ಸಮ್ಮೇಳನದಲ್ಲಿ ಸೈಬರ್ ಭದ್ರತೆಗೆ ಸಂಬಂಧಿಸಿದ ಹಲವು ಹೊಸ ಎಐ ಸಾಧನಗಳು ಮತ್ತು ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು ಅಥವಾ ಪ್ರದರ್ಶಿಸಲಾಯಿತು. ಇದು ಭಾರತದ ಡಿಜಿಟಲ್ ಭದ್ರತೆಯನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಲೇಖನದಲ್ಲಿ ನಾನು ಸ್ಥೂಲವಾಗಿ ಕಳೆದ ವಾರದ AI ಇಂಪ್ಯಾಕ್ಟ್ ಸಮ್ಮೇಳನದಲ್ಲಿ ಸೈಬರ್ಸುರಕ್ಷತೆ ಸಂಬಂಧವಾಗಿ ಬಿಡುಗಡೆಯಾದ ಹೊಸ AI ಉಪಕರಣಗಳು, ಉತ್ಪನ್ನಗಳು ಮತ್ತು ನೀತಿ ಪ್ರಸ್ತಾಪಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
AI ಇಂಪ್ಯಾಕ್ಟ್ ಸಮ್ಮೇಳನದಲ್ಲಿ ಸೈಬರ್ ಸುರಕ್ಷತೆ ಏಕೆ ಕೇಂದ್ರ ವಿಷಯವಾಯಿತು?
AI ತಂತ್ರಜ್ಞಾನ ಒಂದು ಎರಡು ಅಲಗಿನ ಕತ್ತಿಯಿದ್ದಂತೆ. ಇದು ನಮ್ಮ ಆಸ್ಪತ್ರೆ, ಶಾಲೆ, ಕೃಷಿ ಕ್ಷೇತ್ರಗಳನ್ನು ಉತ್ತಮಪಡಿಸಬಲ್ಲದು. ಅದೇ ಸಮಯದಲ್ಲಿ, ಇದನ್ನು ಅಪರಾಧಿಗಳು ನಕಲಿ ವಿಡಿಯೊ ತಯಾರಿಸಲು, ಬ್ಯಾಂಕ್ ವಂಚನೆ ನಡೆಸಲು, ವೈಯಕ್ತಿಕ ಮಾಹಿತಿ ಕದಿಯಲು ದುರ್ಬಳಕೆ ಮಾಡಬಹುದು. ಹಾಗಾಗಿ ಶೃಂಗಸಭೆಯಲ್ಲಿ “AI ಸಕ್ರಿಯ ಭಾರತ: ಡೀಪ್ಫೇಕ್, ಡಾರ್ಕ್ ವೆಬ್ ಮತ್ತು ಸೈಬರ್ ವಂಚನೆಗಳ ವಿರುದ್ಧ ಹೋರಾಟ” ಎಂಬ ವಿಶೇಷ ಅಧಿವೇಶನ ಫೆಬ್ರವರಿ ೧೭ ರಂದು ನಡೆಯಿತು. AI ಅನ್ನು ರಕ್ಷಣೆಗೆ ಬಳಸಬೇಕು, ಅದರ ದುರ್ಬಳಕೆಯನ್ನು ತಡೆಯಬೇಕು ಮತ್ತು “AI ಯನ್ನು AI ಯಿಂದಲೇ ಎದುರಿಸಬೇಕು” ಎಂಬ ಸ್ಪಷ್ಟ ಸಂದೇಶ ಈ ಸಭೆ ನೀಡಿತು.
AI ಇಂಪ್ಯಾಕ್ಟ್ ಸಮ್ಮೇಳನದಲ್ಲಿ ಬಿಡುಗಡೆಯಾದ ಪ್ರಮುಖ AI ಉಪಕರಣಗಳು ಮತ್ತು ಉತ್ಪನ್ನಗಳು :-
೧. ‘ಜೀರೋ ಟ್ರಸ್ಟ್ AI ಸೆಕ್ಯುರಿಟಿ’ ಚೌಕಟ್ಟು : ಜಾಗತಿಕ ಸೈಬರ್ ಸುರಕ್ಷತಾ ಕಂಪನಿ Zscaler ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೇ ಚೌಧರಿ ಅವರು ಈ ಶೃಂಗಸಭೆಯಲ್ಲಿ ಅತ್ಯಂತ ಗಮನ ಸೆಳೆದ ಹೇಳಿಕೆ ನೀಡಿದರು – ‘ಜೀರೋ ಟ್ರಸ್ಟ್ ಸೆಕ್ಯುರಿಟಿ’. ಸರಳವಾಗಿ ಹೇಳುವುದಾದರೆ — ಯಾವ ವ್ಯಕ್ತಿ ಅಥವಾ ತಂತ್ರಾಂಶವೂ ಸ್ವಯಂಚಾಲಿತವಾಗಿ ವಿಶ್ವಾಸಕ್ಕೆ ಅರ್ಹವಲ್ಲ; ಪ್ರತಿ ಬಾರಿ ಗುರುತು ಸಾಬೀತು ಮಾಡಬೇಕು. ದೊಡ್ಡ ಒಂದು ಬೇಲಿ ಹಾಕಿ ಒಳಗಿನವರೆಲ್ಲ ಸುರಕ್ಷಿತ ಎಂದು ನಂಬುವ ಹಳೆಯ ವಿಧಾನ ಬಿಟ್ಟು, ಪ್ರತಿ ಹೆಜ್ಜೆಯಲ್ಲೂ ಪರಿಶೀಲನೆ ಮಾಡುವ ವ್ಯವಸ್ಥೆ ಇದು. ಭಾರತದ ಹಲವು ಪ್ರಮುಖ ಬ್ಯಾಂಕ್ಗಳು ಮತ್ತು ದೊಡ್ಡ ಕಾರ್ಪೊರೇಟ್ ಕಂಪನಿಗಳು ಈ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿವೆ ಎಂದು ಚೌಧರಿ ತಿಳಿಸಿದರು. ಭಾರತದ ಬ್ಯಾಂಕ್ಗಳು ಸೈಬರ್ ಸುರಕ್ಷತೆಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ಬ್ಯಾಂಕ್ಗಳಿಗಿಂತ ಮುಂದಿವೆ ಎಂದು ಅವರು ಶ್ಲಾಘಿಸಿದರು.
೨. IBM ಮತ್ತು ಭಾರತ ಸರ್ಕಾರದ ಐತಿಹಾಸಿಕ ಒಡಂಬಡಿಕೆ : ಶೃಂಗಸಭೆಯ ಅತ್ಯಂತ ಮಹತ್ವದ ಘೋಷಣೆಗಳಲ್ಲಿ ಒಂದೆಂದರೆ — IBM ಮತ್ತು ಭಾರತ ಸರ್ಕಾರದ ನಡುವಿನ ಒಪ್ಪಂದ. ಈ ಒಪ್ಪಂದದ ಪ್ರಕಾರ, ದೇಶದ ಒಂದು ಲಕ್ಷ ಯುವಕ-ಯುವತಿಯರಿಗೆ AI, ಸೈಬರ್ ಸುರಕ್ಷತೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ತರಬೇತಿ IBM ನಿಂದ ನೀಡಲಾಗುವುದು.
೩. ಗೋಪ್ಯತಾ ರಕ್ಷಣೆಯ AI : ‘ಇಂಡಿಯಾ AI ಎಕ್ಸ್ಪೋ’ದಲ್ಲಿ ಗಮನ ಸೆಳೆದ ಸ್ಟಾರ್ಟ್ಅಪ್ಗಳಲ್ಲಿ PrivaSapien Technologies ಒಂದು. ಇವರ ತಂತ್ರಜ್ಞಾನ ಏನು ಮಾಡುತ್ತದೆ ಎಂದರೆ — ನಿಮ್ಮ ವೈಯಕ್ತಿಕ ಮಾಹಿತಿ ಬಹಿರಂಗಪಡಿಸದೆ, ಆ ಮಾಹಿತಿಯನ್ನು ಸಂಶೋಧನೆ ಅಥವಾ ಇತರ ಉದ್ದೇಶಗಳಿಗೆ ಬಳಸಲು ಸಾಧ್ಯ ಮಾಡುತ್ತದೆ. ಸರಳ ಉದಾಹರಣೆ ಹೇಳುವುದಾದರೆ: ಯಾರು ರೋಗಿಯ ಹೆಸರು-ವಿಳಾಸ ತಿಳಿಯದೆ, ಅವರ ಆರೋಗ್ಯ ದತ್ತಾಂಶ ವೈದ್ಯಕೀಯ ಸಂಶೋಧನೆಗೆ ಬಳಸಬಹುದು.
೪. ಭಾರತೀಯ ಉದ್ದಿಮೆಗಳಿಗಾಗಿ AI ಸುರಕ್ಷತೆ : Secure Blink ಎಂಬ ಭಾರತೀಯ ಸ್ಟಾರ್ಟ್ಅಪ್ ಕಂಪನಿ ತನ್ನ AI ಆಧಾರಿತ ಸೈಬರ್ ಸುರಕ್ಷತಾ ಉಪಕರಣಗಳನ್ನು ಶೃಂಗಸಭೆಯಲ್ಲಿ ಪ್ರದರ್ಶಿಸಿತು. ಇವರ ತಂತ್ರಾಂಶ ಸ್ವಯಂಚಾಲಿತವಾಗಿ ಕಂಪನಿಗಳ ಕಂಪ್ಯೂಟರ್ ವ್ಯವಸ್ಥೆಗಳಲ್ಲಿನ ಭದ್ರತಾ ಲೋಪಗಳನ್ನು ಪತ್ತೆ ಮಾಡುತ್ತದೆ. ದೊಡ್ಡ IT ತಂಡ ಇಲ್ಲದ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳಿಗೆ ಇದು ಅತ್ಯಂತ ಉಪಯುಕ್ತ. ಒಂದು ರೀತಿಯಲ್ಲಿ ಇದು ನಿಮ್ಮ ಮನೆ ಬೀಗಗಳು ಸರಿಯಾಗಿದೆಯೇ ಎಂದು ನಿಯಮಿತವಾಗಿ ಪರೀಕ್ಷಿಸುವ ಜಾಣ ಕಾವಲುಗಾರನಂತೆ.
೫. ಡೀಪ್ಫೇಕ್ ಪತ್ತೆ ತಂತ್ರಜ್ಞಾನ : ಡೀಪ್ಫೇಕ್ ಎಂದರೆ AI ಬಳಸಿ ತಯಾರಿಸಿದ ನಕಲಿ ವಿಡಿಯೊ ಅಥವಾ ಧ್ವನಿ. ಭಾರತ ಸರ್ಕಾರ IIT ಗಳಿಗೆ ವಿಶೇಷ ಅನುದಾನ ನೀಡಿ ಡೀಪ್ಫೇಕ್ ಪತ್ತೆ ಮಾಡುವ ಮತ್ತು AI ತಯಾರಿಸಿದ ವಿಷಯದ ಮೇಲೆ ಡಿಜಿಟಲ್ ಮುದ್ರೆ (‘ವಾಟರ್ಮಾರ್ಕ್’) ಹಾಕುವ ತಂತ್ರಜ್ಞಾನ ಅಭಿವೃದ್ಧಿಗೆ ಸಂಶೋಧನೆ ಆರಂಭಿಸಿದೆ ಎಂದು ಶೃಂಗಸಭೆಯಲ್ಲಿ ಘೋಷಿಸಲಾಯಿತು.
೬. ರಾಷ್ಟ್ರೀಯ AI ಸಂಶೋಧನಾ ಗ್ರಿಡ್ : ಇದು ದೇಶದ ಎಲ್ಲ ವಿಶ್ವವಿದ್ಯಾಲಯಗಳು, ಸ್ಟಾರ್ಟ್ಅಪ್ಗಳು ಮತ್ತು ಸರ್ಕಾರಿ ಸಂಸ್ಥೆಗಳನ್ನು ಒಂದೇ ಅತ್ಯಾಧುನಿಕ ಕಂಪ್ಯೂಟಿಂಗ್ ಮೂಲಸೌಕರ್ಯದ ಅಡಿ ತರಲಿದೆ. ಸೈಬರ್ ಸುರಕ್ಷತೆ ಸಂಶೋಧನೆಗೆ ಈ ಗ್ರಿಡ್ನಲ್ಲಿ ವಿಶೇಷ ಸ್ಥಾನ ನೀಡಲಾಗಿದ್ದು, ಪ್ರತ್ಯೇಕ ದೊಡ್ಡ ಕಂಪ್ಯೂಟರ್ ಇಲ್ಲದ ಸಣ್ಣ ಸಂಸ್ಥೆಗಳೂ ಇದರ ಪ್ರಯೋಜನ ಪಡೆಯಬಹುದು.೭. ಭಾರತೀಯ ಸೇನೆಯ ಎಐ ಸಾಧನಗಳು : ಸೇನೆಯು ಹಲವು AI ದ್ವಿಪ್ರಯೋಜನ ಬಳಕೆ ಸಾಮರ್ಥ್ಯಗಳನ್ನು ಪ್ರದರ್ಶಿಸಿತು. ಅವುಗಳಲ್ಲಿ ಪ್ರಮುಖವಾದವು EKAM(ಸೂಕ್ಷ್ಮ ಮಾಹಿತಿಗಳ ಸುರಕ್ಷಿತ ಬಳಕೆಗೆ), AI-In-A-Box(ದೂರದ ಅಥವಾ ಸಂಪರ್ಕರಹಿತ ಪ್ರದೇಶಗಳಲ್ಲಿ ಸುರಕ್ಷಿತ AI ಬಳಕೆಗೆ) ಮತ್ತು ExFace(ಮುಖ ಗುರುತಿಸುವ ಸಾಧನ – ವ್ಯವಸ್ಥೆಯ ಭದ್ರತೆ ಮತ್ತು ವ್ಯಕ್ತಿ ಗುರುತು ಪರಿಶೀಲನೆಗಾಗಿ).



