2025: ಸೈಬರ್ ಸುರಕ್ಷತೆಯ ವರ್ಷ – ಒಂದು ಅವಲೋಕನ
ಡಿಜಿಟಲ್ ಇಂಡಿಯಾದ ಕನಸು ನನಸಾಗುತ್ತಿರುವ ಖುಷಿ ಒಂದು ಕಡೆ ಇದ್ದರೆ ಇನ್ನೊಂದೆಡೆ ಸೈಬರ್ ಅಪರಾಧಗಳ ಪ್ರಮಾಣವು ಹೆಚ್ಚಾಗುತ್ತಿವೆ. 2025ರ ವರ್ಷವು ಭಾರತಕ್ಕೆ ಸೈಬರ್ ಭದ್ರತೆಯ ದೃಷ್ಟಿಯಿಂದ ನಿರ್ಣಾಯಕ ವರ್ಷವಾಗಿತ್ತು. ಒಂದು ಕಡೆ ಸೈಬರ್ ಅಪರಾಧಗಳು ದಾಖಲೆಯ ಮಟ್ಟವನ್ನು ತಲುಪಿದರೆ, ಮತ್ತೊಂದು ಕಡೆ ಸರ್ಕಾರವು ಇದನ್ನು ತಡೆಗಟ್ಟಲು ಅನೇಕ ಪ್ರಮುಖ ಕ್ರಮಗಳನ್ನು ಕೈಗೊಂಡಿತ್ತು. 2025ರಲ್ಲಿ ನಾನು ಗಮನಿಸಿದ ಒಂದು ಪ್ರಮುಖ ಬದಲಾವಣೆಯೆಂದರೆ, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕೇವಲ ‘ಪ್ರತಿಕ್ರಿಯಾತ್ಮಕ’ ಕ್ರಮಗಳಿಗಿಂತ ಹೆಚ್ಚಾಗಿ ‘ಮುನ್ನೆಚ್ಚರಿಕೆ’ ಕ್ರಮಗಳಿಗೆ ಆದ್ಯತೆ ನೀಡಿದ್ದು. ಈ ಲೇಖನದಲ್ಲಿ 2025ರಲ್ಲಿ ಭಾರತ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಪ್ರಮುಖ ಕ್ರಮಗಳು, ಜಾರಿಗೆ ತಂದ ಹೊಸ ಕಾನೂನುಗಳು, ಅದರಿಂದಾದ ಪರಿಣಾಮಗಳು ಹಾಗೂ ಸೈಬರ್ ಕ್ರೈಂ ಅಂಕಿಅಂಶಗಳ ಸಮಗ್ರ ಅವಲೋಕನ ಮಾಡೋಣ.
ಸೈಬರ್ ಅಪರಾಧಗಳ ಅಂಕಿಅಂಶಗಳು : 2024 vs 2025 :-
ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಮತ್ತು ಇತರ ಮೂಲಗಳ ಪ್ರಕಾರ, 2024ರಲ್ಲಿ ಸುಮಾರು 22.7 ಲಕ್ಷ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಆದರೆ ನವೆಂಬರ್ 2025ರ ವರಗೆ ಈ ಸಂಖ್ಯೆ ಸುಮಾರು 25 ಲಕ್ಷಕ್ಕೆ ಏರಿಕೆಯಾಗಿದೆ, ಅಂದರೆ ಇದು ಇವರೆಗೆ 10% ಹೆಚ್ಚಳವಾಗಿರುತ್ತದೆ. ಹಣಕಾಸು ನಷ್ಟದ ಬಗ್ಗೆ ಮಾತನಾಡುತ್ತಾ, 2024ರಲ್ಲಿ ಸೈಬರ್ ಅಪರಾಧಗಳಿಂದ ಭಾರತಕ್ಕೆ ಸುಮಾರು ರೂ. 22,845 ಕೋಟಿ ಮತ್ತು ನವೆಂಬರ್ 2025ರವರೆಗೆ ಸುಮಾರು ರೂ. 20,000 ಕೋಟಿ ನಷ್ಟವಾಗಿತ್ತು ಅದು ವರ್ಷದ ಕೋನೆಯವರೆಗೆ 2024ರ ಮಟ್ಟಕ್ಕೆ ಹೋದರು ಹೋಗಬಹುದು. ಕರ್ನಾಟಕದ ಅಂಕಿಅಂಶಗಳು ಹೆಚ್ಚು ಆಶಾದಾಯಕವಾಗಿದ್ದು, ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ 2025ರಲ್ಲಿ ಕಡಿಮೆಯಾಗಿದೆ. 2024ರಲ್ಲಿ 22,479 ಪ್ರಕರಣಗಳು ದಾಖಲಾಗಿದ್ದವು, ಆದ ನಷ್ಟ ರೂ. 2,500 ಕೋಟಿಗಿಂತ ಹೆಚ್ಚು. ನವೆಂಬರ್ 2025ರವರೆಗೆ ದಾಖಲಾದ ಪ್ರಕರಣಗಳು 13,599ಕ್ಕೆ ಇಳಿದಿವೆ ಮತ್ತು ನಷ್ಟ ₹2,038 ಕೋಟಿಗೆ ಇಳಿದಿದೆ. ಅಂದರೆ ಪ್ರಕಣಗಳ ಸಂಖ್ಯೆ ಕಡಿಮೆಯಾದರೂ ನಷ್ಟದ ಮೊತ್ತ ತುಂಬಾ ಏನು ಕಡಿಮೆಯಾಗಿಲ್ಲಾ. ಆತಂಕದ ವಿಷಯವೇನೆಂದರೆ ಮರಳಿ ಪಡೆದ ಮೊತ್ತ ಇನ್ನು ದೇಶವ್ಯಾಪಿ 10-12% ಯಷ್ಟೆಯಾಗಿದೆ.
2025ರಲ್ಲಿ ಭಾರತವನ್ನು ಕಾಡಿದ ಪ್ರಮುಖ ಸೈಬರ್ ಅಪರಾಧಗಳು – ಡಿಜಿಟಲ್ ಅರೆಸ್ಟ್, ಕೃತಕ ಬುದ್ಧಿಮತ್ತೆ (AI) ಬಳಸಿ ನಡೆಸಿದ ಡೀಪ್ಫೇಕ್ ಮತ್ತು ವಾಯ್ಸ್ ಕ್ಲೋನಿಂಗ್, ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಮತ್ತು ಹೂಡಿಕೆ ವಂಚನೆಗಳು, ಯುಪಿಐ ಪಾವತಿ ವಂಚನೆ, ಬ್ರ್ಯಾಂಡ್ ಇಂಪರ್ಸನೇಷನ್ ಮತ್ತು ಸೋಶಿಯಲ್ ಇಂಜಿನಿಯರಿಂಗ್ (ಅಂದರೆ ಸುದ್ದಿಯಲ್ಲಿರುವ ವಿಷಯವನ್ನು ಬಳಸಿ, ನಿಮ್ಮ ನಂಬಿಕೆ ಗಳಿಸಿ ನಂತರ ವಂಚಿಸುವ ವಿವಿಧ ಅಪರಾಧಗಳು).
2025ರಲ್ಲಿ ಭಾರತ ಮತ್ತು ಕರ್ನಾಟಕ ಸರ್ಕಾರ ಕೈಗೊಂಡ ಪ್ರಮುಖ ಕ್ರಮಗಳು :-
- ಇ-ಝೀರೋ ಎಫ್ಐಆರ್ ವ್ಯವಸ್ಥೆ: ಕೇಂದ್ರ ಗೃಹ ಸಚಿವಾಲಯವು 2025ರ ಮೇ ತಿಂಗಳಲ್ಲಿ ಈ ಕ್ರಾಂತಿಕಾರಿ ವ್ಯವಸ್ಥೆಯನ್ನು ಪರಿಚಯಿಸಿತು. 10 ಲಕ್ಷ ರೂಪಾಯಿಗಿಂತ ಹೆಚ್ಚಿನ ವಂಚನೆಯ ಪ್ರಕರಣಗಳಲ್ಲಿ, 1930 ಸಹಾಯವಾಣಿ ಮೂಲಕ ದೂರು ನೀಡಿದ ತಕ್ಷಣ ಅದು ಸ್ವಯಂಚಾಲಿತವಾಗಿ ‘ಝೀರೋ ಎಫ್ಐಆರ್’ ಆಗಿ ದಾಖಲಾಗುತ್ತದೆ. ಇದು ಪೊಲೀಸ್ ಠಾಣೆಯ ವ್ಯಾಪ್ತಿಯ ಮಿತಿಯಿಲ್ಲದೆ ತನಿಖೆ ಆರಂಭಿಸಲು ಸಹಕಾರಿಯಾಗಿದೆ.
- ಸಂಚಾರ್ ಸಾಥಿ ಮೊಬೈಲ್ ಆಪ್ ಚಾಲನೆ : ದೂರಸಂಪರ್ಕ ಇಲಾಖೆಯು ‘ಸಂಚಾರ್ ಸಾಥಿ’ ಆಪ್ ಅನ್ನು ಜನವರಿ 2025ರಲ್ಲಿ ಬಿಡುಗಡೆ ಮಾಡಿತು. ಈ ಮೂಲಕ ನಾಗರಿಕರು ತಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ಗಳಿವೆ ಎಂದು ತಿಳಿಯಬಹುದು ಮತ್ತು ಕಳೆದುಹೋದ ಮೊಬೈಲ್ಗಳನ್ನು ತಕ್ಷಣವೇ ಬ್ಲಾಕ್ ಮಾಡಬಹುದು.
- ಸೈಬರ್ ಫ್ರಾಡ್ ರಿಸ್ಕ್ ಇಂಡಿಕೇಟರ್ : ಆರ್ಬಿಐ ಮತ್ತು ಸರ್ಕಾರ ಜಂಟಿಯಾಗಿ ಈ ವ್ಯವಸ್ಥೆಯನ್ನು ಜಾರಿಗೆ ತಂದಿವೆ. ಇದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಡೆಯುವ ಅನುಮಾನಾಸ್ಪದ ವಹಿವಾಟುಗಳನ್ನು ನೈಜ ಸಮಯದಲ್ಲಿ ಪತ್ತೆಹಚ್ಚಿ ವಂಚನೆ ನಡೆಯುವ ಮುನ್ನವೇ ಹಣ ವರ್ಗಾವಣೆಯನ್ನು ತಡೆಯುತ್ತದೆ.
- ಸೈಬರ್ ಕಮಾಂಡೋ ಪೋರ್ಸ್ : ಕೇಂದ್ರ ಸರ್ಕಾರವು 5,000 ತರಬೇತಿ ಪಡೆದ ‘ಸೈಬರ್ ಕಮಾಂಡೋ’ಗಳ ಪಡೆಯನ್ನು ಸಿದ್ಧಪಡಿಸಿದೆ. ಇವರು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ದೊಡ್ಡ ಮಟ್ಟದ ಸೈಬರ್ ದಾಳಿಗಳನ್ನು ಎದುರಿಸಲು ವಿಶೇಷ ತರಬೇತಿ ಪಡೆದಿದ್ದಾರೆ.
- ಸೈಬರ್ ಕಮಾಂಡ್ ಸೆಂಟರ್ : ಬೆಂಗಳೂರಿನಲ್ಲಿ ದೇಶದ ಅತ್ಯಾಧುನಿಕ ಸೈಬರ್ ಕಮಾಂಡ್ ಸೆಂಟರ್ ಅನ್ನು ಈ ವರ್ಷ ಕಾರ್ಯಗತಗೊಳಿಸಲಾಗಿದೆ. ಇದು ಕೃತಕ ಬುದ್ಧಿಮತ್ತೆಯನ್ನು ಬಳಸಿ ಹಣ ವರ್ಗಾವಣೆಯ ಜಾಲವನ್ನು ಪತ್ತೆಹಚ್ಚುತ್ತದೆ.
- ಬ್ಯಾಂಕ್ ನೋಡೆಲ್ ಆಫೀಸರ್ಗಳ ನೇಮಕ : ರಾಜ್ಯದ ಪ್ರಮುಖ ಸೈಬರ್ ಠಾಣೆಗಳಲ್ಲಿ ಬ್ಯಾಂಕ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದರಿಂದಾಗಿ ದೂರು ಬಂದ ತಕ್ಷಣ ಹಣವನ್ನು ‘ಫ್ರೀಜ್’ ಮಾಡಲು ಬ್ಯಾಂಕ್ಗಳ ಜೊತೆ ನೇರ ಸಂಪರ್ಕ ಸಾಧ್ಯವಾಗಿದೆ.
- ಸೈಬರ್ ಸುರಕ್ಷಾ ಅಭಿಯಾನ 2.0 : ಶಾಲಾ-ಕಾಲೇಜು ಹಂತದಲ್ಲೇ ಡಿಜಿಟಲ್ ಸಾಕ್ಷರತೆ ಮೂಡಿಸಲು ರಾಜ್ಯ ಶಿಕ್ಷಣ ಇಲಾಖೆಯೊಂದಿಗೆ ಸೈಬರ್ ಸುರಕ್ಷತೆಯನ್ನು ಪಠ್ಯದ ಭಾಗವಾಗಿ ಮಾಡಲಾಗಿದೆ.
2025ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಮುಖ ಕಾನೂನು ಕ್ರಮಗಳು :-
- ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ (DPDPA) ನಿಯಮಗಳು 2025 : 2023ರಲ್ಲಿ ಜಾರಿಗೆ ಬಂದ DPDP ಕಾಯ್ದೆಯ ನಿಯಮಗಳು(DPDP Rules, 2025) ಈ ವರ್ಷ ಹೊರತರಲಾಯಿತು. ಇದರ ಅಡಿಯಲ್ಲಿ ಜನರ ಖಾಸಗಿ ಮಾಹಿತಿಯನ್ನು ಸೋರಿಕೆ ಮಾಡುವ ಅಥವಾ ಸುರಕ್ಷಿತವಾಗಿರಿಸದ ಕಂಪನಿಗಳಿಗೆ ₹250 ಕೋಟಿವರೆಗೆ ದಂಡ ವಿಧಿಸುವ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರಲಾಗಿದೆ.
- ಆನ್ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ನಿಷೇಧ ಮಸೂದೆ : ಕೇಂದ್ರ ಸರ್ಕಾರವು ಆಗಸ್ಟ್ 2025ರಲ್ಲಿ ಜಾರಿಗೆ ತಂದ ಹೊಸ ನಿಯಮದಂತೆ, ಪರವಾನಗಿ ಇಲ್ಲದ ವಿದೇಶಿ ಬೆಟ್ಟಿಂಗ್ ಆಪ್ಗಳನ್ನು ಭಾರತದಲ್ಲಿ ಬಳಸುವುದನ್ನು ಶಿಕ್ಷಾರ್ಹ ಅಪರಾಧವೆಂದು ಘೋಷಿಸಲಾಗಿದೆ ಮತ್ತು ಆನ್ಲೈನ್ ಹಣದ ಗೇಮಿಂಗ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕರ್ನಾಟಕವು ತನ್ನ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ಇಂತಹ ಆಪ್ಗಳ ಪ್ರಚಾರವನ್ನೂ ನಿಷೇಧಿಸಿದೆ.
- ಡೀಪ್ಫೇಕ್ ಮತ್ತು ಎಐ ನಿಯಂತ್ರಣ ಮಾರ್ಗಸೂಚಿ : ಐಟಿ ಕಾಯ್ದೆ 2000ಕ್ಕೆ ಹೊಸ ತಿದ್ದುಪಡಿಯನ್ನು 2025ರಲ್ಲಿ ಜಾರಿಗೆ ತಂದಿದ್ದು, ಅದರಲ್ಲಿ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ಅಶ್ಲೀಲ ಅಥವಾ ಸುಳ್ಳು ಮಾಹಿತಿಯ ವಿಡಿಯೋಗಳನ್ನು (Deepfakes) ಹಂಚುವುದು ಜಾಮೀನು ರಹಿತ ಅಪರಾಧವೆಂದು ಘೋಷಿಸಲಾಗಿದೆ.
- ದೂರಸಂಪರ್ಕ ಸೈಬರ್ ಭದ್ರತಾ ತಿದ್ದುಪಡಿ ನಿಯಮಗಳು, 2025 : 2025ರ ಅಕ್ಟೋಬರ್ 22ರಂದು ಅಧಿಸೂಚಿಸಲಾದ ಈ ನಿಯಮಗಳು ಸೈಬರ್ ಅಪರಾಧ ತಡೆಗಟ್ಟುವಿಕೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದರ ಪ್ರಕಾರ ಕಳ್ಳತನವಾದ ಅಥವಾ ಕ್ಲೋನ್ ಮಾಡಿದ ಫೋನ್ಗಳ ದುರುಪಯೋಗವನ್ನು ತಡೆಯಲು, ಬಳಸಿದ ಮೊಬೈಲ್ ಫೋನ್ಗಳ ಮಾರಾಟ-ಖರೀದಿಗೆ ಮುನ್ನ IMEI ಸಂಖ್ಯೆಯನ್ನು ಸರ್ಕಾರದ ಡೇಟಾಬೇಸ್ನಲ್ಲಿ ದಾಖಲಿಸುವುದು/ಪರಿಶೀಲಿಸುವುದು ಕಡ್ಡಾಯವಾಗಿದೆ. ಸರ್ಕಾರವು ಕೇಂದ್ರೀಕೃತ ಮೊಬೈಲ್ ಸಂಖ್ಯೆ ಪರಿಶೀಲನಾ ವ್ಯವಸ್ಥೆಯನ್ನು ಸ್ಥಾಪಿಸಿದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಅಗತ್ಯವಿದ್ದರೆ, ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆಯಿಲ್ಲದೆ ಮೊಬೈಲ್ ಸಂಖ್ಯೆ ಅಥವಾ ಬಳಕೆದಾರರ ಖಾತೆಗಳನ್ನು ತಕ್ಷಣ ಅಮಾನತುಗೊಳಿಸಬಹುದು.
- ರಾಷ್ಟ್ರೀಯ ಸೈಬರ್ ಸುರಕ್ಷತಾ ನೀತಿ , 2025 : ಈ ನೀತಿಯಲ್ಲಿ ಸೈಬರ್ ಅಪರಾಧ ತಡೆಗಟ್ಟುವಿಕೆಗಾಗಿ CERT-In ಬಲಪಡಿಸುವುದು, ಘಟನೆ ವರದಿ ಕಡ್ಡಾಯಗೊಳಿಸುವುದು ಮತ್ತು AI-ಆಧಾರಿತ ಬೆದರಿಕೆಗಳನ್ನು ಎದುರಿಸುವುದನ್ನು ಒಳಗೊಂಡಿದೆ.
- ಕರ್ನಾಟಕ ಸೈಬರ್ ಸೆಕ್ಯುರಿಟಿ ಪಾಲಿಸಿ 2024-25 : ಕರ್ನಾಟಕ ಸರ್ಕಾರವು ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಮಟ್ಟದ ‘ಸೈಬರ್ ಸೆಕ್ಯುರಿಟಿ ಪಾಲಿಸಿ’ಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ದತ್ತಾಂಶ ಕೇಂದ್ರಗಳಿಗೆ ಕಡ್ಡಾಯ ‘ಸೈಬರ್ ಆಡಿಟ್’ ಮತ್ತು ಭದ್ರತಾ ತಪಾಸಣೆಯನ್ನು ಕಾನೂನುಬದ್ಧಗೊಳಿಸಲಾಗಿದೆ.
- ವರ್ಚುಯಲ್ ಡಿಜಿಟಲ್ ಕ್ರೈಮ್ ಆಸೆಟ್ಸ್ ಇನ್ವೆಸ್ಟಿಗೇಷನ್ ಗೈಡ್ 2025 : ಮಾರ್ಚ್ 2025ರಲ್ಲಿ ಈ ಹೊಸ ಮಾರ್ಗದರ್ಶಿಯನ್ನು ಕರ್ನಾಟಕ ಸರಕಾರ ಬಿಡುಗಡೆ ಮಾಡಿದ್ದು, ಈ ಮಾರ್ಗದರ್ಶಿಯು ಕ್ರಿಪ್ಟೋಕರೆನ್ಸಿ, ವರ್ಚುಯಲ್ ಡಿಜಿಟಲ್ ಆಸೆಟ್ಸ್ (VDA) ಸಂಬಂಧಿತ ಸೈಬರ್ ಅಪರಾಧಗಳ ತನಿಖೆಗೆ ವಿಶೇಷವಾಗಿ ರಚಿಸಲಾಗಿದೆ. ಇದು ಡಿಜಿಟಲ್ ವಾಲೆಟ್ಗಳ ಟ್ರೇಸಿಂಗ್, ಬ್ಲಾಕ್ಚೈನ್ ವಿಶ್ಲೇಷಣೆ, ಮನಿ ಲಾಂಡರಿಂಗ್ ಪತ್ತೆಹಚ್ಚುವಿಕೆ, AI-ಆಧಾರಿತ ಟೂಲ್ಗಳ ಬಳಕೆ ಮತ್ತು ಕೇಸ್ ಸ್ಟಡೀಗಳನ್ನು ಒಳಗೊಂಡಿದೆ.
2025ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರಮಗಳ ಪರಿಣಾಮಗಳು :-
- ಸಂಚಾರ್ ಸಾಥಿ ಮತ್ತು ಇತರ ಕ್ರಮಗಳ ಮೂಲಕ ಸೈಬರ್ ಅಪರಾಧಗಳಿಗೆ ಬಳಸುತ್ತಿದ್ದ 11.14 ಲಕ್ಷ ಸಿಮ್ ಕಾರ್ಡ್ಗಳು ಮತ್ತು 2.96 ಲಕ್ಷ ಐಎಂಇಐ (IMEI) ಸಂಖ್ಯೆಗಳನ್ನು ಸರ್ಕಾರ ಈ ವರ್ಷ ಬ್ಲಾಕ್ ಮಾಡಿದೆ.
- 2025ರ ಅಕ್ಟೋಬರ್ 31ರ ವೇಳೆಗೆ, ‘ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್’ (CFCFRMS) ಮೂಲಕ ಸುಮಾರು ₹7,130 ಕೋಟಿ ಹಣವನ್ನು ವಂಚಕರ ಕೈ ಸೇರದಂತೆ ಉಳಿಸಲಾಗಿದೆ. ಇದು 23 ಲಕ್ಷಕ್ಕೂ ಹೆಚ್ಚು ದೂರುಗಳ ಫಲಿತಾಂಶವಾಗಿದೆ.
- ‘ಪ್ರತಿಬಿಂಬ’ ತಂತ್ರಜ್ಞಾನವನ್ನು ಬಳಸಿ ದೇಶಾದ್ಯಂತ ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಸುಮಾರು 16,840 ಆರೋಪಿಗಳನ್ನು ಬಂಧಿಸಲಾಗಿದೆ.
- ಸೈಬರ್ ಅಪರಾಧಕ್ಕೆ ಬಳಕೆಯಾಗುತ್ತಿದ್ದ 83,668 ವಾಟ್ಸಾಪ್ ಖಾತೆಗಳು ಮತ್ತು 3,962 ಸ್ಕೈಪ್ ಐಡಿಗಳನ್ನು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ವತಿಯಿಂದ ರದ್ದುಗೊಳಿಸಲಾಗಿದೆ.
- ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಸ್ಪೆಕ್ಟ್ ರಿಜಿಸ್ಟ್ರಿ ಮೂಲಕ 18.43 ಲಕ್ಷ ಶಂಕಿತರ ಮಾಹಿತಿಯನ್ನು ಸಂಗ್ರಹಿಸಿ, 24.67 ಲಕ್ಷ ಮ್ಯೂಲ್ ಅಕೌಂಟ್ಗಳನ್ನು ಮುಚ್ಚಲಾಗಿದ್ದು, ಅದರಲ್ಲಿ ಹಂಚಿಕೊಂಡು ರೂ. 8,031.56 ಕೋಟಿ ವಹಿವಾಟುಗಳನ್ನು ನಿರಾಕರಿಸಲಾಗಿದೆ ಮತ್ತು ಅನುಮಾನಾಸ್ಪದ ಹಣ ವರ್ಗಾವಣೆಯನ್ನು ನೈಜ ಸಮಯದಲ್ಲಿ ಪತ್ತೆಹಚ್ಚಿ ಸುಮಾರು ₹475 ಕೋಟಿ ನಷ್ಟವಾಗುವುದನ್ನು ತಡೆದಿದೆ.
- ಕರ್ನಾಟಕದಲ್ಲಿ 2025ರಲ್ಲಿ ಸುಮಾರು 24,600 ಪೊಲೀಸ್ ಅಧಿಕಾರಿಗಳು ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಸೈಬರ್ ವಿಧಿವಿಜ್ಞಾನದ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ.
- ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಸೈಬರ್ ಕಮಾಂಡ್ ಸೆಂಟರ್ ಮಾಲ್ವೇರ್ ವಿಶ್ಲೇಷಣೆ ನಡೆಸಿ ಪ್ರತಿ ದಿನ ಸರಾಸರಿ 31,388 ಸೈಬರ್ ಬೆದರಿಕೆಗಳನ್ನು ಪತ್ತೆಹಚ್ಚುತ್ತಿದೆ.
ಸಾರಾಂಶ ಮತ್ತು 2026ರ ಮುನ್ನೋಟ :-
2025ನೇ ವರ್ಷವು ಭಾರತದ ಡಿಜಿಟಲ್ ಇತಿಹಾಸದಲ್ಲಿ ‘ಸೈಬರ್ ಸಂರಕ್ಷಣಾ ವರ್ಷ’ವಾಗಿ ದಾಖಲಾಗಿದೆ. ಕೇಂದ್ರ ಸರ್ಕಾರದ ಇ-ಝೀರೋ ಎಫ್ಐಆರ್, ಸೈಬರ್ ಕಮಾಂಡೋ ಫೋರ್ಸ್ ಮತ್ತು ಕರ್ನಾಟಕ ಸರ್ಕಾರದ ಸೈಬರ್ ಕಮಾಂಡ್ ಸೆಂಟರ್ ಅಂತಹ ಕ್ರಾಂತಿಕಾರಿ ಕ್ರಮಗಳು ವಂಚಕರಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿವೆ. ಈ ವರ್ಷ ಜಾರಿಯಾದ DPDPA ನಿಯಮಗಳು ಮತ್ತು ದೂರಸಂಪರ್ಕ ತಿದ್ದುಪಡಿ ನಿಯಮಗಳು ಕಾನೂನು ಚೌಕಟ್ಟನ್ನು ಮತ್ತಷ್ಟು ಬಲಪಡಿಸಿವೆ. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. 2026ರಲ್ಲಿ ಸೈಬರ್ ಅಪರಾಧಿಗಳು ಎಐ ತಂತ್ರಜ್ಞಾನವನ್ನು ಹೆಚ್ಚು ಬಳಸಲಿದ್ದು, ಅದನ್ನು ಎದುರಿಸಲು ಸರ್ಕಾರವು ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ತನಿಖಾ ಸಾಧನಗಳನ್ನು ದೊಡ್ಡ ಮಟ್ಟದಲ್ಲಿ ಅಳವಡಿಸಿಕೊಳ್ಳಲಿದೆ. ಕ್ರಿಪ್ಟೋಕರೆನ್ಸಿ ಮತ್ತು ವರ್ಚುಯಲ್ ಡಿಜಿಟಲ್ ಆಸ್ತಿಗಳ ಮೂಲಕ ನಡೆಯುವ ವಂಚನೆಗಳನ್ನು ತಡೆಯಲು ಹೆಚ್ಚಿನ ತಾಂತ್ರಿಕ ನೈಪುಣ್ಯತೆ ಮತ್ತು ಹೊಸ ಮಾರ್ಗಸೂಚಿಗಳು ಜಾರಿಗೆ ಬರಲಿವೆ. ಸಸ್ಪೆಕ್ಟ್ ರಿಜಿಸ್ಟ್ರಿ ಮತ್ತು ಬ್ಯಾಂಕಿಂಗ್ ವಲಯದ ನಡುವೆ ಹೆಚ್ಚಿನ ಸಮನ್ವಯ ಏರ್ಪಟ್ಟು, ಮ್ಯೂಲ್ ಅಕೌಂಟ್ಗಳ ಪತ್ತೆಹಚ್ಚುವಿಕೆ ಇನ್ನು ಕ್ಷಿಪ್ರವಾಗಲಿದೆ ಮತ್ತು ನಿಮ್ಮ ಹಣ ವಂಚಕರ ಪಾಲಿಗೆ ಸಿಗದಂತೆ ತಡೆಯುವ ವ್ಯವಸ್ಥೆ ಇನ್ನು ಬಲಗೊಳ್ಳಲಿದೆ. ಒಟ್ಟಾರೆಯಾಗಿ, 2026ರಲ್ಲಿ ತಂತ್ರಜ್ಞಾನವು ನಾಗರಿಕರ ಸುರಕ್ಷಾ ಕವಚವಾಗಿ ಮತ್ತಷ್ಟು ವಿಕಸನಗೊಳ್ಳಲಿದೆ.



