ಭಾರತದ ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣಾ(DPDP) ಕಾಯಿದೆಯ ಪರಿಚಯ
ಕಳೆದ ಅಂಕಣದಿಂದ ನಾನು ವೈಯಕ್ತಿಕ ಮಾಹಿತಿಯ ಮಹತ್ವ, ಗೌಪ್ಯತೆ, ಸೋರಿಕೆ ಮತ್ತು ದಂಡಗಳ ಬಗ್ಗೆ ಸ್ತೂಲವಾಗಿ ತಿಳಿಸಿಕೊಟ್ಟಿದ್ದೆ. ಇಂದಿನ ಲೇಖನದಲ್ಲಿ ನಾನು ಆಗಸ್ಟ್ 11, 2023 ರಂದು ಜಾರಿಗೊಳಿಸಿದ ಭಾರತದ ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾಯಿದೆ, 2023 (” DPDP ಕಾಯಿದೆ “) ಯ ಬಗ್ಗೆ ತಿಳಿಸಿಕೊಡಲಿದ್ದೇನೆ. ಇದು ಒಂದು ಸಮಗ್ರ ಗೌಪ್ಯತೆ ಮತ್ತು ಮಾಹಿತಿ ಸಂರಕ್ಷಣಾ ಕಾನೂನಾಗಿದ್ದು, ಬೇರೆ ಎಲ್ಲ ಸಂಬಂದಿತ ಕಾನೂನುಗಳು, ನಿಯಮಗಳು ಮತ್ತು ಅದಿನಿಯಮಗಳು ಈ ಕಾಯಿದೆಯ ಅಂಶಗಳನ್ನು ಅನುಸರಿಸಬೇಕಾಗತ್ತದೆ. 2017ರಲ್ಲಿ ಭಾರತದ ಸಂವಿಧಾನದ ಅಡಿಯಲ್ಲಿ ಗೌಪ್ಯತೆಯ ಹಕ್ಕನ್ನು ರಕ್ಷಿಸಲಾಗಿದೆ ಎಂದು ಭಾರತೀಯ ಸುಪ್ರೀಂ ಕೋರ್ಟ್ ಆಧಾರ್ ಮೊಕದ್ದಮೆಯಲ್ಲಿ ತೀರ್ಪು ನೀಡಿದಾಗ ಪ್ರಾರಂಭವಾದ ಏಳು ವರ್ಷಗಳ ಪ್ರಯಾಣವನ್ನು ಈ ಕಾನೂನು ಮುಕ್ತಾಯಗೊಳಿಸುತ್ತದೆ.
ಇದು ಡಿಜಿಟಲ್ ಯುಗ, ಅಂದರೆ ಸಾಮಾಜಿಕ ಜಾಲತಾಣಗಳು, ಥರಹೇವಾರಿ ಅಪ್ಲಿಕೇಷನ್ನುಗಳು ಪ್ರವರ್ಧಮಾನಕ್ಕೆ ಬಂದಮೇಲೆ ನಮ್ಮ ವೈಯಕ್ತಿಕ ವಿವರ ಡಿಜಿಟಲ್ ಜಗತ್ತಿನಲ್ಲಿ ಎಲ್ಲೆಲ್ಲೋ ದಿಕ್ಕಾಪಾಲಾಗಿ ಚದುರಿದೆ. ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುವಾಗ ಆರಂಭದಲ್ಲಿ ಕೇಳುವ ‘Allow’ ಎಂಬ ಆಯ್ಕೆ ನಮ್ಮ ಮಾಹಿತಿಯ ಬಹುದೊಡ್ಡ ಕಳ್ಳ ಎನ್ನುವುದು ಹಲವರ ಗಮನಕ್ಕೆ ಬರುವುದೇ ಇಲ್ಲ. ಅಂದರೆ, ನಿಮ್ಮ ಮೊಬೈಲ್ನಲ್ಲಿ ನೀವು ಯಾವುದೋ ಕಂಪನಿಯ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವಾಗ ಅದು ಕ್ಯಾಮೆರಾ, ಗ್ಯಾಲರಿ, ಸಂಪರ್ಕ (ಕಾಂಟ್ಯಾಕ್ಟ್), ಜಿಪಿಎಸ್ನಂಥ ಇತರ ವಿಭಾಗಗಳ ಪ್ರವೇಶಿಸುವ ಕುರಿತೂ ಅನುಮತಿ ಕೇಳುತ್ತದೆ. ನೀವು ಇದಕ್ಕೆ ಅನುಮತಿಸಿದರೆ, ನಿಮ್ಮ ವೈಯಕ್ತಿಕ ಮಾಹಿತಿಗಳೆಲ್ಲ ಆ ಕಂಪನಿಗಳು ತಮ್ಮ ಸರ್ವರ್ಗಳಿಗೆ ಅಪ್ಲೋಡ್ ಮಾಡುತ್ತವೆ. ಚುನಾವಣೆ, ವ್ಯವಹಾರ ಅಥವಾ ಬೇರಾವುದೋ ಸಂದರ್ಭಗಳಲ್ಲಿ ಈ ಮಾಹಿತಿಗಳನ್ನು ಆ ಕಂಪನಿಗಳು ಹಣಕ್ಕೆ ಮಾರಿಕೊಳ್ಳುವುದು ನಮಗೆ ಅರಿವಿಗೇ ಬರುವುದಿಲ್ಲ. ಈ ದುರ್ಬಳಕೆ, ಸಂಕಟ, ಗೊಂದಲಗಳಿಗೆ ತೆರೆ ಎಳೆಯುವುದಕ್ಕಾಗಿಯೇ ಕೇಂದ್ರ ಸರಕಾರ DPDP ಕಾಯಿದೆಯನ್ನು ಜಾರಿ ಮಾಡಿದೆ.
DPDP ಕಾಯಿದೆಯ ಮುಖ್ಯಾಂಶಗಳು :-
- ಅನ್ವಯಿಸುವಿಕೆ : DPDP ಕಾಯಿದೆಯು ಭಾರತದಲ್ಲಿ ಮೂಲತಃ ಆನ್ಲೈನ್ ಅಥವಾ ಆಫ್ಲೈನ್ ಮತ್ತು ನಂತರ ಡಿಜಿಟೈಸ್ ಆಗಿರುವ ಎಲ್ಲಾ ಮಾಹಿತಿಗೆ ಅನ್ವಯಿಸುತ್ತದೆ. ಹೆಚ್ಚುವರಿಯಾಗಿ, ಈ ಕಾಯಿದೆಯು ಭಾರತದ ಗಡಿಯ ಆಚೆಗಿನ ಡಿಜಿಟಲ್ ವೈಯಕ್ತಿಕ ಮಾಹಿತಿಯ ಪ್ರಕ್ರಿಯೆಗೆ ಅನ್ವಯಿಸುತ್ತದೆ, ಯಾವಾಗ ಅದು ಭಾರತೀಯ ಪ್ರದೇಶದೊಳಗಿನ ವ್ಯಕ್ತಿಗಳಿಗೆ ಸರಕುಗಳು ಅಥವಾ ಸೇವೆಗಳನ್ನು ಒದಗಿಸುವುದನ್ನು ಒಳಗೊಳ್ಳುತ್ತದೆ.
- ವೈಯಕ್ತಿಕ ಮಾಹಿತಿ ಉಲ್ಲಂಘನೆ ವ್ಯಾಖ್ಯಾನ : ವೈಯಕ್ತಿಕ ಮಾಹಿತಿಯ ಯಾವುದೇ ಅನಧಿಕೃತ ಪ್ರಕ್ರಿಯೆ ಅಥವಾ ಆಕಸ್ಮಿಕ ಬಹಿರಂಗಪಡಿಸುವಿಕೆ, ಸ್ವಾಧೀನ, ಹಂಚಿಕೆ, ಬಳಕೆ, ಬದಲಾವಣೆ, ನಾಶ ಅಥವಾ ವೈಯಕ್ತಿಕ ಮಾಹಿತಿಯ ಗೌಪ್ಯತೆ, ಸಮಗ್ರತೆ ಅಥವಾ ಲಭ್ಯತೆಯನ್ನು ರಾಜಿ ಮಾಡಿಕೊಂಡಾಗ ಈ ಕಾಯಿದೆ ಅನ್ವಯಿಸುತ್ತದೆ.
- ಮಾಹಿತಿ ಮತ್ತು ಮಾಹಿತಿಯ ಪ್ರಧಾನ ಹಕ್ಕುಗಳನ್ನು ಬಳಸಲು ವೈಯಕ್ತಿಕ ಸಮ್ಮತಿ : ಹೊಸ ಶಾಸನದ ಅಡಿಯಲ್ಲಿ, ರಾಷ್ಟ್ರೀಯ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ನಿರ್ದಿಷ್ಟ ಸಂದರ್ಭಗಳು ಇಲ್ಲದಿದ್ದರೆ ಅಗತ್ಯವಿದ್ದಲ್ಲಿ ವೈಯಕ್ತಿಕ ಮಾಹಿತಿಯನ್ನು ಆ ವ್ಯಕ್ತಿಯ ಸ್ಪಷ್ಟ ಒಪ್ಪಿಗೆಯೊಂದಿಗೆ ಮಾತ್ರ ಬಳಸಲಾಗುತ್ತದೆ ಮತ್ತು ಪ್ರಕ್ರಿಯೆಗೊಳಿಸಲಾಗುತ್ತದೆ.
- ವ್ಯಕ್ತಿಗಳು ಮಾಹಿತಿಯ ಪ್ರಧಾನ ಹಕ್ಕುಗಳು : ಈ ಕಾಯಿದೆಯಡಿಯಲ್ಲಿ, ವ್ಯಕ್ತಿಗಳಿಗೆ ತಮ್ಮ ಮಾಹಿತಿಯ ಮೇಲೆ ಹಕ್ಕು, ಅದರ ತಿದ್ದುಪಡಿ ಮತ್ತು ಅಳಿಸುವಿಕೆಗೆ ಹಕ್ಕು, ಕುಂದುಕೊರತೆ ಪರಿಹಾರದ ಹಕ್ಕು ಮತ್ತು ಆ ವ್ಯಕ್ತಿಯ ಮರಣ ಅಥವಾ ಅಸಮರ್ಥತೆಯ ಸಂದರ್ಭದಲ್ಲಿ ಈ ಹಕ್ಕುಗಳನ್ನು ಚಲಾಯಿಸಲು ಇತರ ಯಾವುದೇ ವ್ಯಕ್ತಿಯನ್ನು ನಾಮನಿರ್ದೇಶನ ಮಾಡುವ ಹಕ್ಕನ್ನು ಹೊಂದಿರುತ್ತಾರೆ.
- ಮಾಹಿತಿಯ ಸಂರಕ್ಷಣಾ ಮಂಡಳಿಯ ಸ್ಥಾಪನೆ : ಗೌಪ್ಯತೆ-ಸಂಬಂಧಿತ ಕುಂದುಕೊರತೆಗಳು ಮತ್ತು ಸಂಬಂಧಿತ ಪಕ್ಷಗಳ ನಡುವಿನ ವಿವಾದಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಹೊಂದಿರುವ ನಿಷ್ಪಕ್ಷಪಾತ ತೀರ್ಪುಗಾರ ಸಂಸ್ಥೆಯಾಗಿ ಮಾಹಿತಿಯ ಸಂರಕ್ಷಣಾ ಮಂಡಳಿ ಕಾರ್ಯನಿರ್ವಹಿಸುತ್ತದೆ.
- ಅಪರಾಧ ಮತ್ತು ದಂಡಗಳು : ನಿಬಂಧನೆಗಳನ್ನು ಅನುಸರಿಸಲು ವಿಫಲವಾದ ಕಾರಣ ಮಾಹಿತಿಯ ವಿಶ್ವಾಸಾರ್ಹರು(ಸಂಸ್ಥೆಗಳು) 250 ಕೋಟಿ ರೂಪಾಯಿಗಳವರೆಗೆ ದಂಡವನ್ನು ಎದುರಿಸಬಹುದು. ತಪ್ಪು ಅಥವಾ ದುರುದ್ದೇಶಪೂರಿತ ದೂರುಗಳಿಗಾಗಿ ದೂರುದಾರರಿಗೆ 10,000 ರೂಪಾಯಿಗಳವರಗೆ ದಂಡವನ್ನು ವಿಧಿಸಬಹುದು.
- ವಿನಾಯಿತಿಗಳು : ಅಧಿಸೂಚಿತ ಏಜೆನ್ಸಿಗಳಿಗೆ, ಭದ್ರತೆ, ಸಾರ್ವಭೌಮತ್ವ, ಸಾರ್ವಜನಿಕ ಸುವ್ಯವಸ್ಥೆ ಇತ್ಯಾದಿಗಳ ಹಿತಾಸಕ್ತಿಯಲ್ಲಿ, ಸಂಶೋಧನೆ, ಆರ್ಕೈವಿಂಗ್ ಅಥವಾ ಸಂಖ್ಯಾಶಾಸ್ತ್ರದ ಉದ್ದೇಶಗಳಿಗಾಗಿ, ಕಾನೂನು ಹಕ್ಕುಗಳು ಜಾರಿಗೊಳಿಸಲು, ನ್ಯಾಯಾಂಗ ಅಥವಾ ನಿಯಂತ್ರಕ ಕಾರ್ಯಗಳನ್ನು ನಿರ್ವಹಿಸಲು, ಅಪರಾಧಗಳನ್ನು ತಡೆಗಟ್ಟಲು, ಪತ್ತೆಹಚ್ಚಲು, ತನಿಖೆ ಮಾಡಲು ಅಥವಾ ವಿಚಾರಣೆಗೆ ಒಳಪಡಿಸಲು ಮತ್ತು ಡೀಫಾಲ್ಟರ್ಗಳು ಮತ್ತು ಅವರ ಹಣಕಾಸಿನ ಆಸ್ತಿ ಇತ್ಯಾದಿಗಳನ್ನು ಪತ್ತೆಹಚ್ಚಲು ನಡೆದ ಮಾಹಿತಿ ಉಲ್ಲಂಘನಗಳಿಗೆ ವಿನಾಯಿತಿ ನೀಡಲಾಗಿದೆ.
![](https://cybermithra.in/wp-content/uploads/2025/01/dpdpact-pratinidi-1024x733.jpg)