ಮಾಹಿತಿ ತಿಳಿಯಲು ನಂಬರ್ ಕೊಡುವುದೇಕೆ? ವಿಮಾ ಲೋಕದ ‘ಕತ್ತಲ ತಂತ್ರ’ಕ್ಕೆ ಬಿದ್ದ ಲಗಾಮು
ಕಳೆದ ವಾರವಷ್ಟೇ ನನ್ನ ಮಿತ್ರರೊಬ್ಬರು ಕೋಪದಿಂದ ಫೋನ್ ಮಾಡಿದ್ದರು. “ಏನ್ ಮಾರಾಯ್ರೇ, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯೊಂದರ ಪ್ರೀಮಿಯಂ ದರ ಎಷ್ಟು ಅಂತ ಆನ್ಲೈನ್ನಲ್ಲಿ ಸುಮ್ಮನೆ ನೋಡೋಣ ಅಂತ ಹೋದೆ. ಪಾಲಿಸಿ ವಿವರ ನೋಡಬೇಕಿದ್ದರೆ ಮೊದಲು ನಿಮ್ಮ ಹೆಸರು, ಮೊಬೈಲ್ ನಂಬರ್, ಇಮೇಲ್ ಐಡಿ ಹಾಕಿ ಅಂದ್ರು. ಸರಿ, ನೋಡೋ ಕುತೂಹಲಕ್ಕೆ ನಂಬರ್ ಕೊಟ್ಟಿದ್ದೇ ತಪ್ಪಾಯ್ತು! ದಿನಕ್ಕೆ ನಾಲ್ಕು ಜನ ಏಜೆಂಟರು ಕರೆ ಮಾಡ್ತಾರೆ, ಮೆಸೇಜ್ ಸುರಿಮಳೆ… ಊಟ ಮಾಡೋಕೂ ನೆಮ್ಮದಿಯಿಲ್ಲದಂತಾಗಿದೆ!”
ಇದು ಕೇವಲ ನನ್ನ ಮಿತ್ರನೊಬ್ಬನ ಗೋಳಲ್ಲ. ಇವತ್ತು ಇಂಟರ್ನೆಟ್ ಜಗತ್ತಿನಲ್ಲಿ ವಿಮೆ ಅಥವಾ ಹಣಕಾಸಿನ ಯೋಜನೆಗಳ ಬಗ್ಗೆ ಹುಡುಕಾಡುವ ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ದಿನನಿತ್ಯದ ಸಂಕಟ. ಒಂದು ಅಂಗಡಿಗೆ ಹೋಗಿ ಬಟ್ಟೆಯ ಬೆಲೆ ಎಷ್ಟು ಎಂದು ವಿಚಾರಿಸಲು ನಿಮ್ಮ ಮನೆಯ ವಿಳಾಸವನ್ನೋ, ಫೋನ್ ನಂಬರನ್ನೋ ಯಾರಾದರೂ ಕೇಳ್ತಾರಾ? ಖಂಡಿತ ಇಲ್ಲ. ಮುಕ್ತ ಮಾರುಕಟ್ಟೆಯ ಪ್ರಾಥಮಿಕ ನಿಯಮವೇ ಅದು: ಗ್ರಾಹಕನಿಗೆ ಬೆಲೆ ಮತ್ತು ಗುಣಮಟ್ಟ ತಿಳಿಯುವ ಸಂಪೂರ್ಣ ಹಕ್ಕಿರುತ್ತದೆ. ಆದರೆ, ಇನ್ಶೂರೆನ್ಸ್ ವೆಬ್ಸೈಟ್ಗಳು ಮತ್ತು ಅಗ್ರಿಗೇಟರ್ಗಳ ಪ್ರಪಂಚದಲ್ಲಿ ಮಾತ್ರ ಈ ನಿಯಮ ತಲೆಕೆಳಗಾಗಿತ್ತು. ಅಲ್ಲಿ ಪಾಲಿಸಿಯ ವೈಶಿಷ್ಟ್ಯ ಮತ್ತು ಪ್ರೀಮಿಯಂ ಬೆಲೆ ತಿಳಿಯಬೇಕೆಂದರೆ, ಮೊದಲು ನಿಮ್ಮ ಖಾಸಗಿ ಮಾಹಿತಿಯನ್ನು ‘ಪ್ರವೇಶ ಶುಲ್ಕ’ದಂತೆ (Entry Fee) ಒಪ್ಪಿಸಬೇಕಿತ್ತು! ಆ ಕ್ಷಣದಿಂದ ನೀವು ಆ ಕಂಪನಿಗಳ ದೃಷ್ಟಿಯಲ್ಲಿ ಗ್ರಾಹಕರಲ್ಲ, ಬದಲಿಗೆ ದಿನವಿಡೀ ಬೇಟೆಯಾಡಬೇಕಾದ ‘ಸೇಲ್ಸ್ ಲೀಡ್’.
ಈ ಅನ್ಯಾಯಕ್ಕೆ, ಈ ಡಿಜಿಟಲ್ ಕಿರುಕುಳಕ್ಕೆ ಈಗ ಕೊನೆಗೂ ದೇಶದ ವಿಮಾ ನಿಯಂತ್ರಣ ಪ್ರಾಧಿಕಾರವಾದ ಐಆರ್ಡಿಎಐ (IRDAI) ಕತ್ತರಿ ಹಾಕಲು ಮುಂದಾಗಿದೆ. ಇತ್ತೀಚೆಗೆ ಐಆರ್ಡಿಎಐ ಬಿಡುಗಡೆ ಮಾಡಿರುವ ‘Recalibrating Economics of Insurance Distribution’ (ವಿಮಾ ವಿತರಣಾ ಆರ್ಥಿಕತೆಯ ಮರುಹೊಂದಾಣಿಕೆ) ಎಂಬ ಸಮಾಲೋಚನಾ ವರದಿಯಲ್ಲಿ ಅತ್ಯಂತ ಸ್ಪಷ್ಟ ಮತ್ತು ಖಡಕ್ ಮಾತುಗಳನ್ನು ಆಡಿದೆ. ಕಂಪನಿಗಳು ತಮ್ಮ ಗ್ರಾಹಕರನ್ನು ಬಲೆಗೆ ಬೀಳಿಸಲು ಅನುಸರಿಸುತ್ತಿರುವ ಇಂತಹ ಮಾರ್ಗಗಳನ್ನು ಪ್ರಾಧಿಕಾರವು ‘ಡಾರ್ಕ್ ಪ್ಯಾಟರ್ನ್’ಅಥವಾ ಮೋಸದ ತಂತ್ರಜ್ಞಾನ ಎಂದು ಕರೆದಿದೆ.
ವಿಮಾ ಕ್ಷೇತ್ರದಲ್ಲಿ ‘ಡಾರ್ಕ್ ಪ್ಯಾಟರ್ನ್’ (ಮೋಸದ ತಂತ್ರಜ್ಞಾನ) ಎಂದರೆ ಗ್ರಾಹಕರನ್ನು ತಮಗೆ ಅರಿವಿಲ್ಲದಂತೆ ನಿರ್ಧಾರ ಕೈಗೊಳ್ಳುವಂತೆ ಮಾಡುವ ಕುತಂತ್ರ. ಇವುಗಳನ್ನು ಗುರುತಿಸುವ ಬಗೆ ಹೀಗಿದೆ:
- ಮಾಹಿತಿಗೆ ನಂಬರ್ ಕಡ್ಡಾಯ: ಪಾಲಿಸಿ ಬೆಲೆ ಅಥವಾ ನಿಯಮಗಳನ್ನು ನೋಡುವ ಮುನ್ನವೇ ಮೊಬೈಲ್ ನಂಬರ್, ಇಮೇಲ್ ವಿವರ ಕೇಳಿ ಬಲೆ ಬೀಸುವುದು.
- ಪೂರ್ವಭಾವಿ ಆಯ್ಕೆ: ಪಾಲಿಸಿ ಕೊಳ್ಳುವಾಗ ನಮಗೆ ಬೇಡವಾದ ರೈಡರ್ಗಳು ಅಥವಾ ಆಡ್-ಆನ್ಗಳನ್ನು ಮೊದಲೇ ‘ಟಿಕ್’ ಮಾಡಿ ಹೆಚ್ಚಿನ ಹಣ ವಸೂಲಿ ಮಾಡುವುದು.
- ಸುಳ್ಳು ತುರ್ತು ಸೃಷ್ಟಿ: “ಕೇವಲ 2 ಗಂಟೆಗಳ ಆಫರ್”, “ಇಂದು ಮುಗಿಯಲಿದೆ” ಎಂದು ಆತಂಕ ಸೃಷ್ಟಿಸಿ ಆತುರದ ನಿರ್ಧಾರಕ್ಕೆ ತಳ್ಳುವುದು.
- ಗುಪ್ತ ಶುಲ್ಕಗಳು: ಕೊನೆಯ ಹಂತದಲ್ಲಿ ಜಿಎಸ್ಟಿ ಅಥವಾ ಹೆಚ್ಚುವರಿ ಸೇವಾ ಶುಲ್ಕಗಳನ್ನು ಸೇರಿಸಿ ಅಸಲಿ ವೆಚ್ಚವನ್ನು ಬಚ್ಚಿಡುವುದು.
- ರದ್ದು ಮಾಡಲು ಅಡೆತಡೆ: ಪಾಲಿಸಿ ಕೊಳ್ಳುವುದು ಸುಲಭ, ಆದರೆ ನವೀಕರಣ ನಿಲ್ಲಿಸುವುದು ಅಥವಾ ರದ್ದುಪಡಿಸುವುದನ್ನು ಅತ್ಯಂತ ಜಟಿಲಗೊಳಿಸುವುದು.
ಐಆರ್ಡಿಎಐ ಎತ್ತಿರುವ ಮುಖ್ಯ ವಾದ ಸರಳವಾಗಿದೆ: “ವಿಮಾ ಪಾಲಿಸಿಯ ಮೂಲಭೂತ ವಿವರ, ಪ್ರೀಮಿಯಂ ಬೆಲೆ ಹಾಗೂ ಕ್ಲೈಮ್ ನಿಯಮಗಳನ್ನು ತಿಳಿದುಕೊಳ್ಳುವುದು ಗ್ರಾಹಕನ ಹಕ್ಕು. ಅದಕ್ಕಾಗಿ ಅವನು ತನ್ನ ವೈಯಕ್ತಿಕ ವಿವರಗಳನ್ನು ಒತ್ತೆ ಇಡುವ ಅಗತ್ಯವಿಲ್ಲ”. ಕಂಪನಿಗಳು ತಮ್ಮ ಮಾಹಿತಿ ಪತ್ರಗಳು, ದರಪಟ್ಟಿ ಹಾಗೂ ಸೇವಾ ವಿವರಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ, ಸಾರ್ವಜನಿಕವಾಗಿ ತೆರೆದಿಡಬೇಕು. ಯಾವುದೇ ಫೋನ್ ನಂಬರ್ ಅಥವಾ ಒಟಿಪಿ ಕೇಳದೆ ಯಾರು ಬೇಕಾದರೂ ಪಾಲಿಸಿಗಳನ್ನು ಪರಸ್ಪರ ಹೋಲಿಕೆ ಮಾಡಿ ನೋಡುವ ಸ್ವಾತಂತ್ರ್ಯ ಸಿಗಬೇಕು. ಐಆರ್ಡಿಎಐ ಮುಂದಿಟ್ಟಿರುವ ಈ ಪ್ರಸ್ತಾವನೆ ಜಾರಿಯಾದರೆ, ಡಿಜಿಟಲ್ ವಿಮಾ ರಂಗದಲ್ಲಿ ದೊಡ್ಡ ಕ್ರಾಂತಿಯೇ ಆಗಲಿದೆ. ಗ್ರಾಹಕನಿಗೆ ಮೊದಲ ಸ್ಥಾನ ಮತ್ತು ಗೌಪ್ಯತೆಗೆ ತಕ್ಕ ಮರ್ಯಾದೆ ಸಿಗುವಂತಾಗಲು ಇಂತಹ ದಿಟ್ಟ ಹೆಜ್ಜೆಯ ಅಗತ್ಯ ಬಹಳ ದಿನಗಳಿಂದ ಇತ್ತು. ಈ ಸಮಾಲೋಚನಾ ಪತ್ರ ಇನ್ನೂ ಅಂತಿಮ ನಿಯಮವಲ್ಲ. ಸಾರ್ವಜನಿಕರು, ವಿಮಾ ಕಂಪನಿಗಳು ಮತ್ತು ಇತರ ಸಂಬಂಧಪಟ್ಟ ಸಂಸ್ಥೆಗಳಿಂದ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ. ಅಕ್ಟೋಬರ್ 25, 2026ರವರೆಗೆ ಅಭಿಪ್ರಾಯ ಸಲ್ಲಿಸಲು ಅವಕಾಶವಿದೆ.
ಈ ಕ್ರಮ ಯಾಕೆ ಮುಖ್ಯವಾಗುತ್ತದೆಂದರೆ, ನಮ್ಮ ದೇಶದಲ್ಲಿ ವಿಮೆ ಎನ್ನುವುದು ಇವತ್ತಿಗೂ ‘ಕೊಳ್ಳುವ’ ವಸ್ತುವಾಗಿಲ್ಲ; ಬದಲಿಗೆ ‘ಮಾರಾಟಗಾರರು ತಲೆಗೆ ಕಟ್ಟುವ’ ಉತ್ಪನ್ನವಾಗಿದೆ. ಮಧ್ಯವರ್ತಿಗಳಿಗೆ ಮತ್ತು ಕಂಪನಿಗಳಿಗೆ ಗ್ರಾಹಕನ ಮೊಬೈಲ್ ನಂಬರ್ ಸಿಕ್ಕ ಕೂಡಲೇ, ಆತನಿಗೆ ಯಾವ ಪಾಲಿಸಿ ಅಗತ್ಯವಿದೆ ಎನ್ನುವುದಕ್ಕಿಂತ, ಯಾವ ಪಾಲಿಸಿಯನ್ನು ಮಾರಿದರೆ ತಮಗೆ ಹೆಚ್ಚು ಕಮಿಷನ್ ಸಿಗುತ್ತದೆ ಎಂಬುದರ ಆಧಾರದ ಮೇಲೆ ಮಾರಾಟದ ಒತ್ತಡ ಹೇರಲಾಗುತ್ತದೆ. ದಿನಕ್ಕೆ ಹತ್ತು ಕರೆಗಳು ಬಂದಾಗ ಬೇಸತ್ತ ಗ್ರಾಹಕ, ತನಗೆ ಸೂಕ್ತವಲ್ಲದ ಪಾಲಿಸಿಯನ್ನೂ ಖರೀದಿಸಿ ಕೈಸುಟ್ಟುಕೊಳ್ಳುತ್ತಾನೆ.
ಕಡೆಯದಾಗಿ, ಡಿಜಿಟಲ್ ಜಗತ್ತು ಬೆಳೆದಂತೆಲ್ಲ ನಮ್ಮ ವೈಯಕ್ತಿಕ ಗೌಪ್ಯತೆ ಅತ್ಯಂತ ಬೆಲೆಬಾಳುವ ಆಸ್ತಿಯಾಗಿದೆ. ಕೇವಲ ಮಾಹಿತಿ ಪಡೆಯಲು ನಂಬರ್ ಕೊಟ್ಟು, ನಂತರ ಸ್ಪ್ಯಾಮ್ ಕರೆಗಳ ಕಿರಿಕಿರಿಯನ್ನು ಅನುಭವಿಸುವ ಪರಿಸ್ಥಿತಿಯಿಂದ ಗ್ರಾಹಕನಿಗೆ ಬಿಡುಗಡೆ ಸಿಗುವ ಕಾಲ ಬಂದಿದೆ. ಪಾಲಿಸಿ ಕೊಳ್ಳುವ ನಿರ್ಧಾರವನ್ನು ಗ್ರಾಹಕನೇ ಸ್ವತಂತ್ರವಾಗಿ ತೆಗೆದುಕೊಳ್ಳಬೇಕೇ ವಿನಃ, ಅವನ ಕಿವಿಯ ಮೇಲೆ ಕುಳಿತು ನೂರಾರು ಏಜೆಂಟರು ಬಲವಂತ ಮಾಡುವುದಲ್ಲ. ವಿಮೆಯ ಬಗ್ಗೆ ತಿಳಿದುಕೊಳ್ಳುವುದು ಗ್ರಾಹಕರ ಹಕ್ಕು. ಅದಕ್ಕಾಗಿ ತಮ್ಮ ಖಾಸಗಿತನವನ್ನು ಪಣಕ್ಕಿಡಬೇಕಾದ ಅನಿವಾರ್ಯತೆ ಇರಬಾರದು. ವಿಮಾ ಕ್ಷೇತ್ರದ ಸುಧಾರಣೆಯ ಯಶಸ್ಸನ್ನು ಅಳೆಯಬೇಕಾದ ನಿಜವಾದ ಮಾನದಂಡ ಇದೇ. ವಿಮೆಯ ಬೆಲೆ ಎಷ್ಟು ಎಂಬುದನ್ನು ತಿಳಿದುಕೊಳ್ಳಲು ನಿಮ್ಮ ಮೊಬೈಲ್ ಸಂಖ್ಯೆಯನ್ನೇ ಬೆಲೆಯಾಗಿ ನೀಡಬೇಕಾದ ದಿನಗಳು ಮುಗಿಯಲಿ.



