ನ್ಯಾಯದ ಹೋರಾಟಕ್ಕೆ ಬಂಡವಾಳ: ‘ಲಿಟಿಗೇಶನ್ ಫಂಡಿಂಗ್’

ಈ ಲೇಖನದಲ್ಲಿ ನಾನು ಲಿಟಿಗೇಶನ್ ಫಂಡಿಂಗ್ ಅಂದರೆ ಏನು? ಭಾರತದಲ್ಲಿ ಲಿಟಿಗೇಶನ್ ಫಂಡಿಂಗ್ ಬಗ್ಗೆಗಿನ ಕಾನೂನು ನಿಲುವು ಮತ್ತು ಲಿಟಿಗೇಶನ್ ಫಂಡಿಂಗ್ ನ ನೈತಿಕ ಸಂಕಷ್ಟಗಳ ಬಗ್ಗೆ ತಿಳಿಸಿಕೊಡಲಿದ್ದೇನೆ

ಭಾರತದಲ್ಲಿ ಸಿವಿಲ್ ಮೊಖದಮ್ಮೆಗಳ ಬಗ್ಗೆ ಒಂದು ಮಾತಿದೆ, “ಗೆದ್ದವನು ಸೋತ, ಸೋತವನು ಸತ್ತ”. ಒಂದು ವರದಿಯ ಪ್ರಕಾರ ನಮ್ಮ ದೇಶದಲ್ಲಿ ದಾವೆದಾರರು ಕಳೆದ ವರ್ಷ ವಕೀಲರ ಶುಲ್ಕ ಹಾಗೂ ಕೋರ್ಟ್ ವೆಚ್ಚಗಳಿಗಾಗಿ ಬರೋಬ್ಬರಿ ₹63,000 ಕೋಟಿಗೂ ಅಧಿಕ ಹಣ ಖರ್ಚು ಮಾಡಿದ್ದಾರೆ ಎಂಬ ಅಂದಾಜಿದೆ. ಸತ್ಯ ಮತ್ತು ನ್ಯಾಯ ಎಷ್ಟೇ ಬಲವಾಗಿದ್ದರೂ, ನ್ಯಾಯಾಲಯದ ಸುದೀರ್ಘ ಹೋರಾಟವನ್ನು ತಡೆದುಕೊಳ್ಳುವ ಆರ್ಥಿಕ ಶಕ್ತಿ ಪ್ರತಿಯೊಬ್ಬರಿಗೂ ಇರುವುದಿಲ್ಲ. ಒಂದು ಸಣ್ಣ ಉದಾಹರಣೆ ನೋಡೋಣ – ರಮೇಶ್ ಎಂಬ ಯುವ ಉದ್ಯಮಿ ವರ್ಷಗಟ್ಟಲೆ ಬೆವರು ಸುರಿಸಿ ಒಂದು ಹೊಸ ಸಾಫ್ಟ್‌ವೇರ್ ಆವಿಷ್ಕರಿಸಿದ. ಆದರೆ, ಒಂದು ಬೃಹತ್ ಬಹುರಾಷ್ಟ್ರೀಯ ಕಂಪನಿ ಅವನ ತಂತ್ರಜ್ಞಾನವನ್ನು ಕದ್ದು ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಂಡಿತು. ರಮೇಶನ ಬಳಿ ನ್ಯಾಯಾಲಯಕ್ಕೆ ಸಲ್ಲಿಸಲು ಪುರಾವೆಗಳಿದ್ದವು, ಸತ್ಯವೂ ಇತ್ತು. ಆದರೆ ಎದುರಾಳಿ ಕಂಪನಿಯ ಬಳಿ ದೇಶದ ಅತ್ಯುನ್ನತ ವಕೀಲರ ಪಡೆ ಹಾಗೂ ಅಪಾರ ಸಂಪತ್ತಿತ್ತು. ಕೇಸು ಹತ್ತು ವರ್ಷ ನಡೆದರೆ ರಮೇಶನ ಜೇಬು ಖಾಲಿಯಾಗಿ, ಉದ್ಯಮವೇ ಮುಳುಗಿಹೋಗುತ್ತಿತ್ತು. ಇಂತಹ ಅಸಮಾನ ಹೋರಾಟದಲ್ಲಿ ದುರ್ಬಲನ ಕೈಹಿಡಿಯಲು ಇತ್ತೀಚೆಗೆ ಭಾರತದ ಕಾನೂನು ವಲಯದಲ್ಲಿ ಚರ್ಚೆಗೆ ಬಂದಿರುವ ಪರಿಕಲ್ಪನೆಯೇ ‘ಲಿಟಿಗೇಶನ್ ಫಂಡಿಂಗ್’ ಅಥವಾ ‘ಮೂರನೇ ವ್ಯಕ್ತಿಯ ವ್ಯಾಜ್ಯ ಧನಸಹಾಯ’.

ಏನಿದು ಲಿಟಿಗೇಶನ್ ಫಂಡಿಂಗ್?

ಸರಳವಾಗಿ ಹೇಳಬೇಕೆಂದರೆ, ಮೊಕದ್ದಮೆಯಲ್ಲಿ ಯಾವುದೇ ನೇರ ಹಿತಾಸಕ್ತಿ ಇಲ್ಲದ ಮೂರನೇ ವ್ಯಕ್ತಿ, ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ಗಳು ಅಥವಾ ಹೂಡಿಕೆ ನಿಧಿಗಳು ವಾದಿಯ ಪರವಾಗಿ ಕೋರ್ಟ್ ಶುಲ್ಕ, ವಕೀಲರ ಶುಲ್ಕ ಹಾಗೂ ತಜ್ಞ ಸಾಕ್ಷಿಗಳ ವೆಚ್ಚಗಳನ್ನು ಭರಿಸುತ್ತವೆ. ಒಂದು ವೇಳೆ ಕೇಸು ಗೆದ್ದು ಹಣಕಾಸಿನ ಪರಿಹಾರ ಬಂದರೆ, ಹೂಡಿಕೆದಾರನಿಗೆ ಮೊದಲೇ ಒಪ್ಪಂದ ಮಾಡಿಕೊಂಡ ನಿರ್ದಿಷ್ಟ ಲಾಭಾಂಶ ಸಿಗುತ್ತದೆ, ಹಾಗೆ ಕೇಸು ಸೋತರೆ, ವಾದಿ ಹೂಡಿಕೆದಾರನಿಗೆ ಹಣ ವಾಪಸ್ ಕೊಡಬೇಕಿಲ್ಲ. ನಷ್ಟವೆಲ್ಲವೂ ಹೂಡಿಕೆದಾರನ ತಲೆಗೆ. ಇದು ಹಣದ ಕೊರತೆಯಿಂದ ನ್ಯಾಯ ಕೇಳಲಾಗದ ಸಾಮಾನ್ಯ ಸಂಸ್ಥೆಗೆ ಅಥವಾ ವ್ಯಕ್ತಿಗೆ ಆನೆಬಲ ತಂದುಕೊಡುತ್ತದೆ.

ಮೊದಲ ನೋಟಕ್ಕೆ ಇದು ವಿಚಿತ್ರವಾಗಿ ಕಾಣಬಹುದು. “ಬೇರೊಬ್ಬರ ಪ್ರಕರಣಕ್ಕೆ ಯಾರಾದರೂ ಏಕೆ ಹಣ ಹಾಕಬೇಕು?” ಎಂಬ ಪ್ರಶ್ನೆ ಸಹಜ. ಉತ್ತರ ಸರಳ—ಹೂಡಿಕೆ. ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಭವಿಷ್ಯದ ಬೆಳವಣಿಗೆಯನ್ನು ನಂಬಿ ಹಣ ಹೂಡುವಂತೆ, ಲಿಟಿಗೇಶನ್ ಫಂಡರ್ ಒಂದು ಕಾನೂನು ಹಕ್ಕಿನ ಭವಿಷ್ಯದ ಫಲಿತಾಂಶವನ್ನು ಅಂದಾಜಿಸಿ ಹಣ ಹೂಡುತ್ತಾನೆ. ಪ್ರಕರಣ ಗೆದ್ದರೆ ಲಾಭ; ಸೋತರೆ ನಷ್ಟ. ಭಾರತದಲ್ಲಿ ಈ ವ್ಯವಸ್ಥೆ ಸಂಪೂರ್ಣ ಹೊಸದಲ್ಲ. ಆದರೆ ಈಗ ಅದು ಹೆಚ್ಚು ಸಂಘಟಿತ ರೂಪ ಪಡೆಯುತ್ತಿದೆ. ವಾಣಿಜ್ಯ ವಿವಾದಗಳು, ಮಧ್ಯಸ್ಥಿಕೆ ಪ್ರಕರಣಗಳು ಮತ್ತು ದಿವಾಳಿತನಕ್ಕೆ ಸಂಬಂಧಿಸಿದ ಕೆಲವು ಪ್ರಕರಣಗಳಲ್ಲಿ ಹೊರಗಿನ ಹಣಕಾಸಿನ ನೆರವಿನ ಬಳಕೆ ಹೆಚ್ಚುತ್ತಿರುವುದಾಗಿ ಕಾನೂನು ಕ್ಷೇತ್ರದ ವರದಿಗಳು ಸೂಚಿಸುತ್ತವೆ.

ಭಾರತದಲ್ಲಿ ಲಿಟಿಗೇಶನ್ ಫಂಡಿಂಗ್ ಬಗ್ಗೆಗಿನ ಕಾನೂನು ನಿಲುವು :-

ಭಾರತದಲ್ಲಿ ಮೂರನೇ ವ್ಯಕ್ತಿ ಕಾನೂನು ಹೋರಾಟಕ್ಕೆ ಹಣ ನೀಡುವುದನ್ನು ಸಾಮಾನ್ಯವಾಗಿ ಕಾನೂನು ನಿಷೇಧಿಸಿಲ್ಲ. 2018ರ Bar Council of India v. A.K. Balaji ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ವಕೀಲರ ಹೊರತಾದ ಮೂರನೇ ವ್ಯಕ್ತಿಗಳು ಪ್ರಕರಣಗಳಿಗೆ ಹಣ ಒದಗಿಸುವುದಕ್ಕೆ ಸಾಮಾನ್ಯ ಕಾನೂನು ತಡೆ ಇಲ್ಲ ಎಂಬ ನಿಲುವನ್ನು ದಾಖಲಿಸಿತ್ತು. ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ ರಾಜ್ಯಗಳು ತಮ್ಮ ಸಿವಿಲ್ ಪ್ರಕ್ರಿಯಾ ಸಂಹಿತೆಯಲ್ಲಿ ಇಂಥ ಹಣಕಾಸು ಒದಗಿಸುವವರ ಪಾತ್ರವನ್ನು ಉಲ್ಲೇಖಿಸಿವೆ. ಸಿಂಗಪುರ, ಹಾಂಗ್‌ಕಾಂಗ್‌ಗಳಂತೂ ಮಧ್ಯಸ್ಥಿಕೆ ವಿವಾದಗಳಲ್ಲಿ ಇದಕ್ಕೆ ಕಾನೂನಿನ ಮುದ್ರೆಯನ್ನೇ ಒತ್ತಿವೆ. ಆದರೆ ವಕೀಲರು ತಮ್ಮ ಕಕ್ಷಿದಾರರ ಪ್ರಕರಣಕ್ಕೆ ಹಣ ಹಾಕುವುದು ಅಥವಾ ಫಲಿತಾಂಶದ ಆಧಾರದ ಮೇಲೆ ಶುಲ್ಕ ಪಡೆಯುವುದಕ್ಕೆ ವೃತ್ತಿನಿಯಮಗಳಲ್ಲಿ ನಿರ್ಬಂಧಗಳಿವೆ. ನಮ್ಮಲ್ಲಿ ಇದಕ್ಕೆಂದೇ ಪ್ರತ್ಯೇಕ ಕಾಯ್ದೆ ಇಲ್ಲ, ಹೀಗಾಗಿ ಒಪ್ಪಂದದ ಷರತ್ತುಗಳು, ಸಾಮಾನ್ಯ ಗುತ್ತಿಗೆ ಕಾನೂನು, ನ್ಯಾಯಾಲಯಗಳ ತೀರ್ಪುಗಳು ಮತ್ತು ವೃತ್ತಿನಿಯಮಗಳು ಪ್ರಮುಖವಾಗುತ್ತವೆ.

ಲಿಟಿಗೇಶನ್ ಫಂಡಿಂಗ್ ನ ನೈತಿಕ ಸಂಕಷ್ಟಗಳು :-

  • ಕೇಸಿನ ನಿಯಂತ್ರಣ: ರಾಜಿ ಮಾಡಿಕೊಳ್ಳಬೇಕೋ ಅಥವಾ ಕೇಸು ಮುಂದುವರಿಸಬೇಕೋ ಎಂಬ ನಿರ್ಧಾರವನ್ನು ಅಸಲಿ ವಾದಿ ತೆಗೆದುಕೊಳ್ಳುತ್ತಾನೋ ಅಥವಾ ಲಾಭದ ಕಣ್ಣಿಟ್ಟಿರುವ ಹೂಡಿಕೆದಾರ ನಿರ್ಧರಿಸುತ್ತಾನೋ?  
  • ಗೌಪ್ಯತೆಯ ಸವಾಲು: ಹೂಡಿಕೆದಾರರೊಂದಿಗೆ ಕೇಸಿನ ವಿವರ ಹಂಚಿಕೊಳ್ಳುವಾಗ ವಕೀಲ-ಕಕ್ಷಿದಾರರ ನಡುವಿನ ಗೌಪ್ಯತೆ  ಮುರಿಯುವ ಆತಂಕವಿರುತ್ತದೆ.  
  • ಅಸಮಾನ ಲಾಭಾಂಶ: ಕಷ್ಟದಲ್ಲಿರುವ ವಾದಿಯ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಹೂಡಿಕೆದಾರರು ಅತಿಯಾದ ಪಾಲು ವಸೂಲಿ ಮಾಡುವ ಅಪಾಯವೂ ಇರುತ್ತದೆ.

ಕೊನೆಯ ಮಾತು :-

ಹಣ ಹಾಕಿದ ವ್ಯಕ್ತಿ ತನ್ನ ಹೂಡಿಕೆಯ ರಕ್ಷಣೆಗಾಗಿ ಪ್ರಕರಣದ ತಂತ್ರ, ರಾಜಿ ಅಥವಾ ಮುಂದುವರಿಸುವ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಆರಂಭಿಸಿದರೆ ಸಮಸ್ಯೆ ಉಂಟಾಗಬಹುದು. 2023ರ Tomorrow Sales Agency v. SBS Holdings ಪ್ರಕರಣದಲ್ಲಿ ದೆಹಲಿ ಹೈಕೋರ್ಟ್, ಪ್ರಕರಣದ ಪಕ್ಷಕಾರನಲ್ಲದ ಫಂಡರ್ ಮೇಲೆ ಕೇವಲ ಆ ಕಾರಣಕ್ಕೆ ಪ್ರಕರಣದ ಸೋಲಿನ ವೆಚ್ಚದ ಹೊಣೆ ಹೊರಿಸಲಾಗುವುದಿಲ್ಲ ಎಂಬ ಮಹತ್ವದ ನಿಲುವು ತೆಗೆದುಕೊಂಡಿತ್ತು. ಅದೇ ಸಂದರ್ಭದಲ್ಲಿ ನ್ಯಾಯಾಲಯವು ಪಾರದರ್ಶಕತೆ ಮತ್ತು ಶೋಷಣೆಯಿಲ್ಲದ ವ್ಯವಸ್ಥೆಯ ಅಗತ್ಯವನ್ನೂ ಒತ್ತಿಹೇಳಿತು. ಹೀಗಾಗಿ ಲಿಟಿಗೇಶನ್ ಫಂಡಿಂಗ್ ಅನ್ನು ಕೇವಲ “ನ್ಯಾಯಕ್ಕೆ ಹಣ” ಎಂದು ನೋಡುವುದೂ ಸರಿಯಲ್ಲ; “ಪ್ರಕರಣದಲ್ಲಿ ಹೂಡಿಕೆ” ಎಂದು ಮಾತ್ರ ನೋಡುವುದೂ ಅಪೂರ್ಣ. ಇದು ನ್ಯಾಯ ಮತ್ತು ಮಾರುಕಟ್ಟೆ—ಎರಡರ ನಡುವಿನ ಹೊಸ ಸಂಗಮ. ಕಾನೂನು ಹೋರಾಟ ಕೇವಲ ಸಿರಿವಂತರ ಸ್ವತ್ತಾಗಬಾರದು; ಹಣದ ಕೊರತೆಯಿಂದಾಗಿ ಯಾರೊಬ್ಬರ ನ್ಯಾಯದ ಹಕ್ಕು ಹತ್ತಿಕ್ಕಲ್ಪಡಬಾರದು. ಆದರೆ, ಇದು ಬಂಡವಾಳಶಾಹಿಗಳ ಮತ್ತೊಂದು ಜೂಜಾಟವಾಗದಂತೆ ತಡೆಯಲು ಪಾರದರ್ಶಕ ನಿಯಮಾವಳಿಗಳನ್ನು ರೂಪಿಸುವುದು ಇಂದಿನ ತುರ್ತು ಅಗತ್ಯ. ಹಣವಿದ್ದವರಿಗೆ ಮಾತ್ರ ನ್ಯಾಯ ಸಿಗುವ ವ್ಯವಸ್ಥೆಗಿಂತ, ನ್ಯಾಯಕ್ಕಾಗಿ ಹಣ ಒದಗುವ ಸಮತೋಲಿತ ವ್ಯವಸ್ಥೆ ನಿರ್ಮಾಣವಾದರೆ ಅದು ಪ್ರಜಾಪ್ರಭುತ್ವದ ನಿಜವಾದ ಗೆಲುವು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ