ಸಚೇತ್ : ಹಣಕಾಸು ಮೋಸಗಳ ವಿರುದ್ಧ RBI ರಕ್ಷಣಾ ಕವಚ
“ಹತ್ತು ದಿನಗಳಲ್ಲಿ ಹಣ ದುಪ್ಪಟ್ಟು”, “ಅತಿ ಕಡಿಮೆ ಬಡ್ಡಿಗೆ ಸಾಲ”, “ಮನೆ ಕುಳಿತೇ ಲಕ್ಷಾಂತರ ಸಂಪಾದನೆ” – ಇಂತಹ ಆಕರ್ಷಕ ಜಾಹೀರಾತುಗಳಿಗೆ ಮರುಳಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಎಷ್ಟೋ ಸಾಮಾನ್ಯ ಜನರ ಕಥೆಗಳು ನಾವು ಪ್ರತಿದಿನ ಪತ್ರಿಕೆಯಲ್ಲಿ ಓದುತ್ತಲೇ ಇರುತ್ತೇವೆ. ಹೀಗೆ ಅಕ್ರಮವಾಗಿ ಹಣ ಸಂಗ್ರಹಿಸುವ ಸಂಸ್ಥೆಗಳು ಮತ್ತು ಮೋಸದ ಹೂಡಿಕೆ ಯೋಜನೆಗಳಿಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಕೇಂದ್ರ ಸರ್ಕಾರ ಸೇರಿ ಒಂದು ಅದ್ಭುತ ಅಸ್ತ್ರವನ್ನು ಸಿದ್ಧಪಡಿಸಿವೆ. ಅದೇ ‘ಸಚೇತ್’ (sachet.rbi.org.in) ಪೋರ್ಟಲ್. ಏನಿದು ಸಚೇತ್? ಇದು ನಮಗೆ ಹೇಗೆ ನೆರವಾಗುತ್ತದೆ? ಇದನ್ನು ಹೇಗೆ ನಾವು ಬಳಸಬಹುದು ಎಂಬುದರ ಬಗ್ಗೆ ಈ ಲೇಖನದಲ್ಲಿ ನಾನು ತಿಳಿಸಿಕೊಡಲಿದ್ದೇನೆ. ಹೂಡಿಕೆ ವಂಚನೆಗಳು, FRI ಇತ್ಯಾದಿಗಳಂತಹ ವಿವಿಧ ರೀತಿಯ ಹಣಕಾಸು ವಂಚನೆಗಳ ಬಗ್ಗೆ ನಾನು ಈ ಹಿಂದೆ ಬರೆದಿದ್ದೇನೆ. ದಯವಿಟ್ಟು ಅವುಗಳನ್ನು ಪರಿಶೀಲಿಸಿ…
ಏನಿದು ‘ಸಚೇತ್’ ಪೋರ್ಟಲ್?
ಹಿಂದಿಯಲ್ಲಿ ‘ಸಚೇತ್’ ಎಂದರೆ ‘ಎಚ್ಚರಿಕೆ’ ಎಂದರ್ಥ. ಹೆಸರೇ ಸೂಚಿಸುವಂತೆ, ಹೂಡಿಕೆದಾರರನ್ನು ವಿವಿಧ ರೀತಿಯ ವಂಚನೆ/ವಂಚಕರ ಬಗ್ಗೆ ಎಚ್ಚರಿಸಲು, ಹಣಕಾಸು ವಂಚನೆ ನಡೆದಾಗ ತ್ವರಿತವಾಗಿ ದೂರು ನೀಡಲು ಮತ್ತು ಆ ದೂರಿನ ಪ್ರಸ್ತುತ ಸ್ಥಿತಿಯನ್ನು ತಿಳಿಯಲು ನಿರ್ಮಿಸಲಾದ ಏಕಗವಾಕ್ಷಿ ಪೋರ್ಟಲ್/ಜಾಲತಾಣ ಇದು. ಸಾಮಾನ್ಯವಾಗಿ ನಮಗೆ ಹಣಕಾಸು ವಂಚನೆಯಾದಾಗ ಎಲ್ಲಿ(ಬ್ಯಾಂಕಿನಲ್ಲಾ/SEBI/RBI/ಪೊಲೀಸ್) ದೂರು ನೀಡಬೇಕು ಎಂಬ ಗೊಂದಲವಿರುತ್ತದೆ. ಈ ಗೊಂದಲ ನಿವಾರಿಸಲು RBI ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ವಿವಿಧ ನಿಯಂತ್ರಕ ಸಂಸ್ಥೆಗಳೊಂದಿಗೆ ಕೈಜೋಡಿಸಿ ಈ ಪೋರ್ಟಲ್ ರೂಪಿಸಿದೆ.
‘ಸಚೇತ್’ ಪೋರ್ಟಲ್ನ ಪ್ರಮುಖ ವೈಶಿಷ್ಟ್ಯಗಳು :-
- ನೋಂದಾಯಿತ ಸಂಸ್ಥೆಗಳ ಪರಿಶೀಲನೆ : ನೀವು ಹಣ ಹೂಡಿಕೆ ಮಾಡಲು ಬಯಸುವ ಕಂಪನಿಯು SEBI, RBI ಅಥವಾ ಇನ್ಯಾವುದೇ ಸರ್ಕಾರಿ ಸಂಸ್ಥೆಯಲ್ಲಿ ನೋಂದಾಯಿತವಾಗಿದೆಯೇ ಎಂದು ಇಲ್ಲಿ ಪರಿಶೀಲಿಸಬಹುದು ಮತ್ತು ಅವು ಪ್ರಕಟಿಸಿದ ಎಲ್ಲಾ ಸೂಚನೆ ಮತ್ತು ಮಾಹಿತಿಗಳ ಬಗ್ಗೆ ತಿಳಿಯಬಹುದು.
- ಅನಾಮಧೇಯ ಮಾಹಿತಿ ಹಂಚಿಕೆ : ಯಾವುದಾದರೂ ಕಂಪನಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದೆ ಎಂದು ನಿಮಗೆ ಅನುಮಾನ ಬಂದರೆ, ನಿಮ್ಮ ಹೆಸರನ್ನು ಬಹಿರಂಗಪಡಿಸದೆಯೇ ಸರ್ಕಾರಕ್ಕೆ ಮಾಹಿತಿ ನೀಡಬಹುದು.
- ಬಹುಭಾಷಾ ದೂರು ಸೌಲಭ್ಯ : ಇದು ಕನ್ನಡ ಸೇರಿದಂತೆ ದೇಶದ 13 ಪ್ರಮುಖ ಭಾಷೆಗಳಲ್ಲಿ ಲಭ್ಯವಿದೆ. ನೀವು ನಿಮ್ಮ ಬಾಷೆಯಲ್ಲಿ ದೂರು ನೀಡಬಹುದು ಮತ್ತು ಅದರ ಪ್ರಸ್ತುತ ಸ್ಥಿತಿಯನ್ನು ತಿಳಿದುಕೊಳ್ಳಬಹುದು.
- ತ್ವರಿತ ವರ್ಗಾವಣೆ : ನೀವು ನೀಡಿದ ದೂರು ಯಾವ ಇಲಾಖೆಗೆ ಸೇರಬೇಕೋ (ಉದಾಹರಣೆಗೆ: ಪೊಲೀಸ್ ಅಥವಾ SEBI) ಅಲ್ಲಿಗೆ ಈ ಪೋರ್ಟಲ್ ಸ್ವಯಂಚಾಲಿತವಾಗಿ ವರ್ಗಾಯಿಸುತ್ತದೆ.
- ಸಮಯ ಮಿತಿ ಪರಿಹಾರ : ಸಚೇತ್ ಮೂಲಕ ನೋಂದಾಯಿಸಿದ ದೂರುಗಳನ್ನು ನಿಗದಿತ ಸಮಯದೊಳಗೆ ಪರಿಹರಿಸಬೇಕು ಎಂಬ ನಿಯಮವಿದೆ. ಸಾಮಾನ್ಯವಾಗಿ 30 ಕಾರ್ಯ ದಿನಗಳಲ್ಲಿ ಪರಿಹಾರ ಸಿಗುತ್ತದೆ.
- ವಿವಿಧ ಪಾವತಿ ವ್ಯವಸ್ಥೆಗಳಿಗೆ ಬೆಂಬಲ : UPI, NEFT, RTGS, IMPS, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್ ಮುಂತಾದ ಎಲ್ಲಾ ಡಿಜಿಟಲ್ ಪಾವತಿ ವಿಧಾನಗಳ ದೂರುಗಳಿಗೆ ಸಚೇತ್ ಬೆಂಬಲ ನೀಡುತ್ತದೆ.
ಸಚೇತ್ ಪೋರ್ಟಲ್ ಬಳಸುವ ವಿಧಾನ :-
- ವೆಬ್‌ಸೈಟ್‌ಗೆ ಭೇಟಿ ನೀಡಿ : ಮೊದಲು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ sachet.rbi.org.in ವಿಳಾಸಕ್ಕೆ ಹೋಗಿ.
- ನೋಂದಣಿ ಮಾಡಿಕೊಳ್ಳಿ: ಮೊದಲ ಬಾರಿಗೆ ಬಳಸುವವರು “Register” ಎಂಬ ಆಯ್ಕೆಯನ್ನು ಆರಿಸಬೇಕು. ನಿಮ್ಮ ವಿವರಗಳಾದ ಹೆಸರು, ಮೊಬೈಲ್ ನಂಬರ್, ಇಮೇಲ್ ವಿಳಾಸ ಇತ್ಯಾದಿಗಳನ್ನು ನೀಡಬೇಕು. ನೋಂದಣಿ ಒಮ್ಮೆ ಮಾತ್ರ ಮಾಡಿದರೆ ಸಾಕು.
- ದೂರು ನೀಡಿ : ಮುಖಪುಟದಲ್ಲಿರುವ ‘ದೂರು ನೀಡಿ’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಮಾಹಿತಿ ಭರ್ತಿ ಮಾಡಿ : ಇಲ್ಲಿ ನಿಮಗೆ ಎಲ್ಲಿ ದೂರು ನೀಡಬೇಕು ಎಂದು ತಿಳಿದಿದ್ದರೆ ಸಂಬಂಧಪಟ್ಟ ಲಿಂಕ್ ಕ್ಲಿಕ್ ಮಾಡಿ, ಅಲ್ಲಿ ದೂರು ಸಲ್ಲಿಸಿ, ನಿಮಗೆ ಗೊಂದಲವಿದ್ದರೆ ಕೊನೆಯ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ನೀಡಬೇಕಾಗುತ್ತದೆ. ನಂತರ ಯಾವ ಕಂಪನಿ ಅಥವಾ ವ್ಯಕ್ತಿ ನಿಮಗೆ ವಂಚಿಸಿದ್ದಾರೆ ಅವರ ವಿವರಗಳನ್ನು ಭರ್ತಿ ಮಾಡಿ.
- ದಾಖಲೆಗಳನ್ನು ಲಗತ್ತಿಸಿ : ನಿಮ್ಮ ಬಳಿ ಇರುವ ಹಣ ಪಾವತಿಸಿದ ರಸೀದಿಗಳು ಅಥವಾ ವಂಚನೆಗೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳನ್ನು ಅಪ್‌ಲೋಡ್ ಮಾಡಿ.
- ಒಟಿಪಿ ದೃಢೀಕರಣ : ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ನಮೂದಿಸಿ ದೂರನ್ನು ಸಲ್ಲಿಸಿ.
- ಟ್ರ್ಯಾಕಿಂಗ್ : ದೂರು ನೀಡಿದ ನಂತರ ನಿಮಗೆ ಒಂದು ಉಲ್ಲೇಖ ಸಂಖ್ಯೆ ಸಿಗುತ್ತದೆ. ಅದರ ಮೂಲಕ ಅಥವಾ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಮೂಲಕ, ನಿಮ್ಮ ದೂರಿನ ಸ್ಥಿತಿಗತಿಯನ್ನು ಯಾವುದೇ ಸಮಯದಲ್ಲಿ ಪರಿಶೀಲಿಸಬಹುದು.
ಕೊನೆಯ ಮಾತು :-
ಸಾವಿರ ರೂಪಾಯಿ ಸಂಪಾದನೆಗೆ ಗಂಟೆಗಟ್ಲೆ ಶ್ರಮ ಪಡಬೇಕು, ಆದರೆ ಆ ಹಣವನ್ನು ಕಳೆದುಕೊಳ್ಳಲು ಕೇವಲ ಒಂದು ನಿಮಿಷದ ಅಜಾಗರೂಕತೆ ಸಾಕು. ಯಾವುದೇ ಕಂಪನಿ ಬ್ಯಾಂಕ್‌ಗಿಂತ ತುಂಬಾ ಹೆಚ್ಚಿನ ಬಡ್ಡಿ ನೀಡುತ್ತೇವೆ ಎಂದರೆ ಅಲ್ಲಿ ಮೋಸವಿರುವ ಸಾಧ್ಯತೆ ಹೆಚ್ಚು. ಹೂಡಿಕೆ ಮಾಡುವ ಮುನ್ನ ಒಮ್ಮೆ ‘ಸಚೇತ್’ ಪೋರ್ಟಲ್ ನೋಡಿ ಖಚಿತಪಡಿಸಿಕೊಳ್ಳಿ. ನಿಮ್ಮ ಸುತ್ತಮುತ್ತ ಯಾರಾದರೂ ಇಂತಹ ಜಾಲಕ್ಕೆ ಸಿಲುಕಿದ್ದರೆ ಅವರಿಗೆ ಈ ಮಾಹಿತಿ ತಲುಪಿಸಿ. ಕೊನೆಯಲ್ಲಿ, ಸಚೇತ್ ಪೋರ್ಟಲ್ ಸಾಮಾನ್ಯ ಜನರಿಗೆ ಒಂದು ಶಕ್ತಿಶಾಲಿ ಉಪಕರಣ. ಇದನ್ನು ಬಳಸಿ ಜಾಗೃತರಾಗಿ, ಮೋಸಗಳಿಂದ ರಕ್ಷಣೆ ಪಡೆಯಿರಿ.



