E-Courts ನಿಂದ AI ವರೆಗೆ: ಭಾರತದ ನ್ಯಾಯ ವ್ಯವಸ್ಥೆಯ ಹೊಸ AI ಯುಗ
ಭಾರತದ ನ್ಯಾಯಾಂಗ ವ್ಯವಸ್ಥೆಯು ವಿಶ್ವದಲ್ಲೇ ಅತಿ ದೊಡ್ಡ ಮತ್ತು ಸಂಕೀರ್ಣ ವ್ಯವಸ್ಥೆಗಳಲ್ಲಿ ಒಂದಾಗಿದೆ ಮತ್ತು ಭಾರತದ ನ್ಯಾಯಾಲಯಗಳಲ್ಲಿ ಲಕ್ಷಾಂತರ ಪ್ರಕರಣಗಳು ವಿಚಾರಣೆಗಾಗಿ ಕಾಯುತ್ತಿದ್ದು, ನ್ಯಾಯ ವಿಳಂಬವು ಒಂದು ದೊಡ್ಡ ಸವಾಲಾಗಿದೆ. ಸಾಮಾನ್ಯ ಜನರಿಗೆ ಕೋರ್ಟ್‌ಗೆ ಹೋಗುವುದು ಅಂದರೆ ದೀರ್ಘಕಾಲದ ನಿರೀಕ್ಷೆ, ಸಮಯ ಹಾಗೂ ಹಣದ ವ್ಯಯ ಎಂಬ ಕಲ್ಪನೆ ಇದೆ. ಇಂತಹ ಸಂದರ್ಭದಲ್ಲಿ ತಂತ್ರಜ್ಞಾನ, ವಿಶೇಷವಾಗಿ ಕೃತಕ ಬುದ್ಧಿಮತ್ತೆ (Artificial Intelligence – AI), ಒಂದು ದೊಡ್ಡ ಸಹಾಯಗಾರನಾಗಿ ಹೊರಹೊಮ್ಮಿದೆ. ತಂತ್ರಜ್ಞಾನದ ಆಗಮನವು ಜಗತ್ತಿನ ಎಲ್ಲಾ ಕ್ಷೇತ್ರಗಳನ್ನು ಪರಿವರ್ತಿಸಿದಂತೆ, ಭಾರತೀಯ ನ್ಯಾಯಾಲಯ ವ್ಯವಸ್ಥೆಯನ್ನು ಕ್ರಾಂತಿಕಾರಿ ಮಾದರಿಯಲ್ಲಿ ಒಳ್ಳೆಯದಕ್ಕಾಗಿ ಬದಲಾಯಿಸುತ್ತಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ತಂತ್ರಜ್ಞಾನವು ಭಾರತದ ನ್ಯಾಯವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ, ದಕ್ಷ ಮತ್ತು ಸುಲಭವಾಗಿ ಒದಗಿಸುವ ದಿಕ್ಕಿನಲ್ಲಿ ಸಾಗುತ್ತಿದೆ. E-Courts ಯೋಜನೆ, AI ಆಧಾರಿತ ಪ್ರಯೋಗಗಳಾದ SUPACE (Supreme Court Portal for Assistance in Courts Efficiency) ಮತ್ತು SUVAS (Supreme Court Vidhik Anuvaad Software) ನಂತಹ ತಾಂತ್ರಿಕ ಆವಿಷ್ಕಾರಗಳು ನ್ಯಾಯಾಲಯಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ.
ನಾನು ಕಳೆದ ಕೆಲವು ವಾರಗಳಿಂದ ಡಿಜಿಟಲ್ ತಂತ್ರಜ್ಞಾನ ಮತ್ತು AI – ಭಾರತದ ನ್ಯಾಯಾಂಗ ವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆಯ ಮೇಲೆ ಮೇಲೆ ಮಾಡುತ್ತಿರುವ ಪರಿಣಾಮಗಳ ಬಗ್ಗೆ ತಿಳಿಸಿಕೊಟ್ಟಿದ್ದೆ, ಹೆಚ್ಚಿನ ಮಾಹಿತಿಗಾಗಿ ಅದನ್ನೊಮ್ಮೆ ಸಂದರ್ಶಿಸಿ ಓದಿ. ಈ ಲೇಖನದಲ್ಲಿ ನಾನು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೊದಲ ದೊಡ್ಡ ಮಟ್ಟದ ಡಿಜಿಟಲ್ ಪ್ರಯೋಗವಾದ E-Courts ಅಪ್ಲಿಕೇಶನ್, ಭಾರತೀಯ ನ್ಯಾಯಾಂಗದಲ್ಲಿ AIಯ ಪಾತ್ರ, SUPACE ಮತ್ತು SUVAS ಎಂಬ ಎರಡೂ ಪ್ರಮುಖ ವ್ಯವಸ್ಥೆಗಳ ಅವಲೋಕನ, SUPACE ಮತ್ತು SUVAS ನಲ್ಲಿ AIಯ ಪಾತ್ರ ಹಾಗು ಜನಸಾಮಾನ್ಯರು, ವಕೀಲರು ಮತ್ತು ನ್ಯಾಯಾಧೀಶರು ಅವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಡಲಿದ್ದೇನೆ.
E-Courts ಅಪ್ಲಿಕೇಶನ್‌ನ ಕಿರು ಪರಿಚಯ :-
ಒಂದು ವರದಿಯ ಪ್ರಕಾರ, ಭಾರತದ ನ್ಯಾಯಾಲಯಗಳಲ್ಲಿ 5 ಕೋಟಿಗೂ ಹೆಚ್ಚು ಪ್ರಕರಣಗಳು ನ್ಯಾಯ ತೀರ್ಮಾನಕ್ಕಾಗಿ ಇನ್ನು ಕಾಯುತ್ತಿವೆ. ಈ ಬಾಕಿ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ಮತ್ತು ನ್ಯಾಯದಾನವನ್ನು ತ್ವರಿತಗೊಳಿಸಲು E-Courts ಯೋಜನೆಯನ್ನು 2005ರಲ್ಲಿ ಆರಂಭಿಸಲಾಯಿತು. ಈ ಯೋಜನೆಯ ಮೂರನೇ ಹಂತ (2023-2027) ಈಗ ಜಾರಿಯಲ್ಲಿದ್ದು, 7,210 ಕೋಟಿ ರೂಪಾಯಿಗಳ ಬಂಡವಾಳವನ್ನು ಹೊಂದಿದೆ. E-Courts ಅಪ್ಲಿಕೇಶನ್ ಎಂದರೆ ನಮ್ಮ ದೇಶದ ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿನ ಪ್ರಕರಣಗಳ ಮಾಹಿತಿಗಳನ್ನು ನಮ್ಮ ಬೆರಳ ತುದಿಯಲ್ಲಿಯೇ ನೋಡಲು ಇರುವ ಒಂದು ಅಪ್ಲಿಕೇಶನ್ ಆಗಿದ್ದು, ಇದನ್ನು ನೀವು ಮೊಬೈಲ್ ಆಪ್ ಆಗಿ ಅಥವಾ ಜಾಲತಾಣದ ರೂಪದಲ್ಲಿ ಬಳಸಬಹುದು. ಈ ಅಪ್ಲಿಕೇಶನ್‌ನ ಮುಖ್ಯ ಉದ್ದೇಶ – ಸಾಮಾನ್ಯ ಜನ, ವಕೀಲರು ಮತ್ತು ನ್ಯಾಯಾಧೀಶರಿಗೆ ನ್ಯಾಯಾಲಯದ ಕೆಲಸಗಳನ್ನು ಸುಲಭವಾಗಿ, ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಿರ್ವಹಿಸಲು ಸಹಾಯ ಮಾಡುವುದಾಗಿರುತ್ತದೆ.
ಸಾಮಾನ್ಯ ಜನರಿಗೆ E-Courts ಆಪ್‌ನ ಉಪಯೋಗ :-
ಸಾಮಾನ್ಯ ಜನರಿಗೆ, ಈ ಆಪ್ ಒಂದು ದೊಡ್ಡ ವರದಾನ. ಒಂದು ಕಾಲದಲ್ಲಿ ಕೋರ್ಟ್‌ಗೆ ಹೋಗಿ, ಗಂಟೆಗಟ್ಟಲೆ ಕಾಯಬೇಕಿತ್ತು, ಕಾಗದದ ದಾಖಲೆಗಳನ್ನು ಒಯ್ಯಬೇಕಿತ್ತು. ಆದರೆ ಈಗ ಇ-ಕೋರ್ಟ್ಸ್ ಆಪ್‌ನಿಂದ ಮನೆಯಿಂದಲೇ ಈ ಕೆಳಗೆ ವಿವರಿಸಿರುವ ಕೆಲಸಗಳನ್ನು ಮಾಡಬಹುದು.
- ನಿಮ್ಮ ಪ್ರಕರಣದ ಮಾಹಿತಿ ನಿಮ್ಮ ಕೈಯಲ್ಲಿ: ನಿಮ್ಮ ಪ್ರಕರಣದ ಸ್ಥಿತಿಗತಿ ಏನು, ಮುಂದಿನ ವಿಚಾರಣೆ ಯಾವಾಗ, ಯಾವ ಕೋರ್ಟ್‌ನಲ್ಲಿ ನಡೆಯುತ್ತದೆ ಎಂಬುದನ್ನು ನಿಮ್ಮ ಪ್ರಕರಣದ ಸಿಎನ್‌ಆರ್ (CNR – Case Number Registration) ಸಂಖ್ಯೆ ಅಥವಾ ಪಕ್ಷಗಾರರ ಹೆಸರು ಅಥವಾ ವಕೀಲರ ಹೆಸರನ್ನು ಬಳಸಿ ಹುಡುಕಬಹುದು.
- ಸಮಯ ಹಾಗು ಹಣದ ಉಳಿತಾಯ : ವಿಚಾರಣೆ ದಿನಾಂಕಕ್ಕಾಗಿ ನ್ಯಾಯಾಲಯದ ಬಳಿ ಹೋಗಿ ಗಂಟೆಗಟ್ಟಲೆ ಕಾಯಬೇಕಾಗಿಲ್ಲ. ಆ್ಯಪ್‌ನಲ್ಲಿಯೇ ಇವತ್ತು ಯಾವ ಕೇಸ್‌ಗಳು ವಿಚಾರಣೆಗೆ ಇವೆ ಎಂಬ “ಕಾರಣ ಪಟ್ಟಿ” (Cause List)ಯನ್ನು ನೋಡಬಹುದು. ಇದರಿಂದ ನಿಮ್ಮ ಕೇಸ್ ಯಾವಾಗ ಬರುತ್ತೆ ಎಂದು ಮೊದಲೇ ತಿಳಿದುಕೊಂಡು ಹೋಗಬಹುದು.
- ತೀರ್ಪು ಮತ್ತು ಆದೇಶಗಳು ಸುಲಭವಾಗಿ ಲಭ್ಯ: ನ್ಯಾಯಾಲಯಗಳು ನೀಡಿದ ಆದೇಶಗಳು ಮತ್ತು ತೀರ್ಪುಗಳನ್ನು ಈ ಅಪ್ಲಿಕೇಶನ್‌ನಲ್ಲಿಯೇ ಓದಬಹುದು. ಹೀಗಾಗಿ, ತೀರ್ಪಿನ ಪ್ರತಿಯನ್ನು ಪಡೆಯಲು ಕಚೇರಿಗೆ ಅಲೆದಾಡುವ ಅವಶ್ಯಕತೆ ಇಲ್ಲ.
ವಕೀಲರಿಗೆ ಮತ್ತು ನ್ಯಾಯಾಧೀಶರಿಗೆ E-Courts ಆಪ್‌ನ ಉಪಯೋಗ :-
- ವಕೀಲರಿಗೆ : E-Courts ಆ್ಯಪ್ ವಕೀಲರಿಗೆ ಒಂದು ಡಿಜಿಟಲ್ ಡೈರಿಯಂತೆ ಕೆಲಸ ಮಾಡುತ್ತದೆ. ಅವರು ತಮ್ಮ ಎಲ್ಲಾ ಪ್ರಕರಣಗಳ ಪಟ್ಟಿಯನ್ನು ಆ್ಯಪ್‌ನಲ್ಲಿ ಸೇವ್ ಮಾಡಿಕೊಳ್ಳಬಹುದು. ನಿರ್ದಿಷ್ಟ ದಿನದಂದು ಯಾವೆಲ್ಲ ಪ್ರಕರಣಗಳ ವಿಚಾರಣೆ ಇವೆ, ಯಾವ ಕೋರ್ಟ್‌ನಲ್ಲಿ ಇವೆ ಎಂಬುದನ್ನು ಒಂದೇ ಕಡೆ ನೋಡಬಹುದು ಮತ್ತು ಆನ್‌ಲೈನ್‌ನಲ್ಲೇ ದಾಖಲೆಗಳನ್ನು ಸಲ್ಲಿಸಬಹುದು. ಇದು ಅವರ ಕೆಲಸವನ್ನು ಬಹಳ ಸುಲಭಗೊಳಿಸುತ್ತದೆ, ಸಮಯವನ್ನು ಉಳಿಸುತ್ತದೆ ಹಾಗು ಹಲವು ಪ್ರಕರಣಗಳನ್ನು ದಕ್ಷತೆಯಿಂದ ನಡೆಸಬಹುದಾಗುತ್ತದೆ.
- ನ್ಯಾಯಾಧೀಶರಿಗೆ : ಇದರಿಂದ ನ್ಯಾಯಾಧೀಶರು ತಮ್ಮ ಕೋರ್ಟ್‌ನಲ್ಲಿ ಯಾವ ಪ್ರಕರಣಗಳು ಬಾಕಿಯಿವೆ, ಯಾವುವು ಆದ್ಯತೆಯ ಮೇಲೆ ತೆಗೆದುಕ್ಕೊಳ್ಳಬೇಕು ಎಂಬುದನ್ನು ಸುಲಭವಾಗಿ ತಿಳಿಯಬಹುದು. ಆ ಪ್ರಕರಣಗಳ ಫೈಲ್‌ಗಳನ್ನು ಹುಡುಕುವ ಬದಲು, ಹಿಂದಿನ ಆದೇಶಗಳು ಮತ್ತು ತೀರ್ಪುಗಳನ್ನು ಡಿಜಿಟಲ್ ರೂಪದಲ್ಲಿ ಕ್ಷಣಮಾತ್ರದಲ್ಲಿ ನೋಡಬಹುದು. ಇದಲ್ಲದೆ, ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯವು ಆಪ್‌ನ ಜೊತೆಗೆ ಲಭ್ಯವಿದ್ದು, ದೂರದ ಕಕ್ಷಿದಾರರು ಅಥವಾ ಸಾಕ್ಷಿಗಳು ಆನ್‌ಲೈನ್‌ನಲ್ಲಿ ವಿಚಾರಣೆಗೆ ಹಾಜರಾಗಬಹುದು. ಇದರಿಂದ ತೀರ್ಪು ನೀಡುವ ಪ್ರಕ್ರಿಯೆ ವೇಗವಾಗುತ್ತದೆ ಮತ್ತು ಹೆಚ್ಚು ಪರಿಣಾಮಕಾರಿಯಾಗುತ್ತದೆ
ಭಾರತೀಯ ನ್ಯಾಯಾಂಗದಲ್ಲಿ AIಯ ಪಾತ್ರ :-
- ಕೇಸ್‌ಗಳ ವೇಗದ ನಿರ್ವಹಣೆ : ಸಾವಿರಾರು ದಾಖಲೆಗಳು, ಸಾಕ್ಷ್ಯಗಳು, ಹಿಂದಿನ ತೀರ್ಪುಗಳನ್ನು ಮನುಷ್ಯರು ಓದುವುದು ಕಷ್ಟ, ಆದರೆ AI ಇದನ್ನು ಕ್ಷಣಗಳಲ್ಲಿ ವಿಶ್ಲೇಷಿಸಿ ನ್ಯಾಯಾಧೀಶರಿಗೆ ಮುಖ್ಯ ಅಂಶಗಳನ್ನು ತೋರಿಸುತ್ತದೆ.
- ಭಾಷಾಂತರ ಮತ್ತು ಸುಲಭ ಬಳಕೆ : ಅನೇಕ ತೀರ್ಪು/ದಾಖಲೆಗಳು ಇಂಗ್ಲಿಷ್‌ನಲ್ಲಿರುತ್ತವೆ, ಸಾಮಾನ್ಯ ಜನರಿಗೆ ಅರ್ಥವಾಗಲು ಅದನ್ನು AI ಅವನ್ನು ಪ್ರಾದೇಶಿಕ ಭಾಷೆಗೆ ಅನುವಾದಿಸುತ್ತದೆ.
- ಡಿಜಿಟಲ್ ಸಂಗ್ರಹಣೆ ಮತ್ತು ವಿಶ್ಲೇಷಣೆ : ಹಳೆಯ ತೀರ್ಪುಗಳು, ಪ್ರಕರಣದ ದಾಖಲೆಗಳನ್ನು AI ಕ್ರಮಬದ್ಧವಾಗಿ ಜೋಡಿಸಿ ಸಂಗ್ರಹಿಸುತ್ತದೆ ವಿಶ್ಲೇಷಿಸುತ್ತದೆ.
- ನಿರ್ಧಾರ ಪ್ರಕ್ರಿಯೆಯಲ್ಲಿ ಸಹಾಯ : AI ತೀರ್ಪು ನೀಡುವುದಿಲ್ಲ, ಆದರೆ ತೀರ್ಪು ತಗೆಯಲು ನ್ಯಾಯಾಧೀಶರಿಗೆ ಅಗತ್ಯ ಮಾಹಿತಿಯನ್ನು ಬೇಗನೆ ಒದಗಿಸುತ್ತದೆ.
- ಸ್ಮಾರ್ಟ್ ಕೇಸ್ ಮ್ಯಾನೇಜ್‌ಮೆಂಟ್ : ನ್ಯಾಯಾಧೀಶರಿಗೆ ಕೆಲಸದ ಹೊರೆ ವಿತರಣೆಯನ್ನು ನಿರ್ವಹಿಸಲು, ಆದ್ಯತೆ, ಸಂಕೀರ್ಣತೆ ಮತ್ತು ಆದ್ಯತೆಯ ಮೂಲಕ ಪ್ರಕರಣಗಳನ್ನು ಸಂಘಟಿಸಲು AI ಸಹಾಯ ಮಾಡುತ್ತದೆ.
SUPACE ಕಿರು ಪರಿಚಯ :-
2021ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಆರಂಭವಾದ ಈ ಪೋರ್ಟಲ್‌ನ ಉದ್ದೇಶ, ನ್ಯಾಯಾಧೀಶರಿಗೆ ಕೇಸ್‌ಗಳ ಅಧ್ಯಯನದಲ್ಲಿ ವೇಗ ಮತ್ತು ಖಚಿತತೆ ತರಿಸುವುದು. ಇದು AI-ಚಾಲಿತ ಸಂಶೋಧನಾ ಪೋರ್ಟಲ್ ಆಗಿದ್ದು, ನ್ಯಾಯಾಧೀಶರು ಮತ್ತು ಕಾನೂನು ಸಂಶೋಧಕರಿಗೆ ಕಾನೂನು ಸಂಶೋಧನೆ ಮತ್ತು ಕೇಸ್ ನಿರ್ವಹಣೆಯಲ್ಲಿ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದು ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯವಸ್ಥೆಯಲ್ಲ, ಬದಲಿಗೆ ನಿರ್ಧಾರ-ಬೆಂಬಲ ವ್ಯವಸ್ಥೆಯಾಗಿದೆ.
SUPACE ನ ಪ್ರಮುಖ ವೈಶಿಷ್ಟ್ಯಗಳು:
- ಡೇಟಾ ಸಂಗ್ರಹಣೆ: ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸ್ವಯಂ ಸಂಗ್ರಹಿಸುತ್ತದೆ.
- ಮಾಹಿತಿ ಫಿಲ್ಟರ್: ಅಸಂಬಂಧಿತ ಮಾಹಿತಿಯನ್ನು ಬೇರ್ಪಡಿಸಿ ಕೇವಲ ಮುಖ್ಯ ಅಂಶಗಳನ್ನು ಒದಗಿಸುತ್ತದೆ.
- ಹಿಂದಿನ ತೀರ್ಪುಗಳ ಉಲ್ಲೇಖ: ಸಂಬಂಧಿತ ತೀರ್ಪುಗಳನ್ನು ತಕ್ಷಣ ಹುಡುಕಿ ತೋರಿಸುತ್ತದೆ.
- ಡಿಜಿಟಲ್ ಸಹಾಯಕ: ನ್ಯಾಯಾಧೀಶರಿಗೆ ‘ವೈಯಕ್ತಿಕ ಸಹಾಯಕ’ನಂತೆ ಕಾರ್ಯನಿರ್ವಹಿಸುತ್ತದೆ.
- ಕಾನೂನು ಸಂಶೋಧನೆ: ಸಂಬಂಧಿತ ಸಂಗತಿಗಳು ಮತ್ತು ಕಾನೂನುಗಳನ್ನು ತ್ವರಿತವಾಗಿ ಸಂಗ್ರಹಿಸುತ್ತದೆ, ವಿಶ್ಲೇಷಿಸುತ್ತದೆ ಮತ್ತು ರಚನಾತ್ಮಕ ಸ್ವರೂಪದಲ್ಲಿ ಪ್ರಸ್ತುತಪಡಿಸುತ್ತದೆ.
SUPACE ನಲ್ಲಿ AI ಪಾತ್ರ :-
- ಮಾಹಿತಿ ಫಿಲ್ಟರ್ : ಸಾವಿರಾರು ಪುಟಗಳ ದಾಖಲೆಗಳನ್ನು ಓದಿ, ಸಂಬಂಧಿತ ಮಾಹಿತಿಯನ್ನು AI ಸಹಾಯದಿಂದ ಬೇರ್ಪಡಿಸುತ್ತದೆ.
- ಬುದ್ದಿವಂತ ವಿಶ್ಲೇಷಣೆ : ತೀರ್ಪಿಗೆ ಸಂಬಂಧಿಸಿದ ಮುಖ್ಯ ಅಂಶಗಳನ್ನು(ದಾಖಲಾತಿ, ಸಾಕ್ಷ್ಯ ಇತ್ಯಾದಿ) ತೋರಿಸುತ್ತದೆ.
- ಹಿಂದಿನ ತೀರ್ಪುಗಳ ಉಲ್ಲೇಖ : ಅದೇ ರೀತಿಯ ಪ್ರಕರಣಗಳಲ್ಲಿ ಬಂದ ತೀರ್ಪುಗಳನ್ನು ತಕ್ಷಣ ತೋರಿಸುತ್ತದೆ.
- ನಿರ್ಣಯದಲ್ಲಿ ನೆರವು : AI ತೀರ್ಪು ನೀಡುವುದಿಲ್ಲ, ಆದರೆ ನ್ಯಾಯಾಧೀಶರಿಗೆ ತ್ವರಿತ ನಿರ್ಧಾರ ಕೈಗೊಳ್ಳಲು ಬೇಕಾದ ತಥ್ಯಗಳನ್ನು ಒದಗಿಸುತ್ತದೆ.
SUPACE ನ ಪ್ರಯೋಜನಗಳು ಮತ್ತು ಬಳಕೆಯ ಸಾಧ್ಯತೆಗಳು : –
- ನ್ಯಾಯಾಧೀಶರಿಗೆ : SUPACE ನ ಪ್ರಾಥಮಿಕ ಬಳಕೆದಾರರು ನ್ಯಾಯಾಧೀಶರು. ತಮ್ಮ ಕೆಲಸದ ಹೊರೆಯನ್ನು ಕಡಿಮೆ ಮಾಡಲು, ಸಂಶೋಧನೆಗಾಗಿ ಬೇಕಾಗುವ ಸಮಯವನ್ನು ಉಳಿಸಲು ಮತ್ತು ಹೆಚ್ಚು ಖಚಿತತೆ ಮತ್ತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ನ್ಯಾಯಾಧೀಶರು AI ಸಹಾಯವನ್ನು ಪಡೆಯುತ್ತಾರೆ.
- ವಕೀಲರಿಗೆ : SUPACE ಸದ್ಯಕ್ಕೆ ನ್ಯಾಯಾಧೀಶರಿಗೆ ಮಾತ್ರ ಲಭ್ಯವಿದೆ, ಮತ್ತು E-Courts ಮೂರನೇ ಹಂತದಲ್ಲಿ ವಕೀಲರಿಗೂ ವಿಸ್ತರಿಸುವ ಯೋಜನೆಯಿದೆ. ಆದರೂ, ವಕೀಲರು ಕೂಡ AI ಬಳಸಿ ತಮ್ಮ ವಾದವನ್ನು ಬಲಪಡಿಸಲು ಶೀಘ್ರ ಮಾಹಿತಿಯನ್ನು, ಸಂಬಂಧಿತ ತೀರ್ಪುಗಳನ್ನು ತಕ್ಷಣ ಹುಡುಕಲು ಬಳಸಬಹುದು ಮತ್ತು ಪ್ರಕರಣಕ್ಕೆ ಸಂಬಂದಿತ ಎಲ್ಲ ಧಾಖಲೆಗಳು, ಸಾಕ್ಷ್ಯಗಳು ಮತ್ತು ನಿರಾಧಾರಗಳು SUPACE ಮೂಲಕ ಒಂದೇಕಡೆ ಸಿಗುವುದರಿಂದ ಅವರು ತಮೆಲ್ಲಾ ಗಮನವನ್ನು ನ್ಯಾಯಕ್ಕಾಗಿ ಮೀಸಲಿಡಬಹುದು. ಪ್ರಕರಣಗಳು ಶೀಘ್ರವಾಗಿ ಇತ್ಯರ್ಥಗೊಳ್ಳುವುದರಿಂದ ಹೆಚ್ಚು ಪ್ರಕರಣಗಳನ್ನು ನಡೆಸಬಹುದು.
- ಸಾಮಾನ್ಯ ಜನರಿಗೆ : SUPACE ನೇರವಾಗಿ ಸಾಮಾನ್ಯ ಜನರಿಗೆ ಲಭ್ಯವಿಲ್ಲ. ಆದರೆ, ಇದು ನ್ಯಾಯಾಧೀಶರ ಕೆಲಸದ ಹೊರೆಯನ್ನು ಕಡಿಮೆ ಮಾಡಿ, ಪ್ರಕರಣಗಳನ್ನು ವೇಗವಾಗಿ ಇತ್ಯರ್ಥಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಅಂತಿಮವಾಗಿ ನ್ಯಾಯಾಂಗ ಪ್ರಕ್ರಿಯೆಗಳ ವಿಳಂಬ ಕಡಿಮೆಯಾಗಿ, ಸಾಮಾನ್ಯ ನಾಗರಿಕರಿಗೂ ತಮ್ಮ ಪ್ರಕರಣಕ್ಕೆ ಬೇಗ ಪರಿಹಾರ ಸಿಗುವುದರಿಂದ ಹಣ ಹಾಗು ಸಮಯದ ಉಳಿತಾಯವಾಗುತ್ತದೆ.
SUVAS ಕಿರು ಪರಿಚಯ :-
SUVAS ಒಂದು ಕೃತಕ ಬುದ್ಧಿಮತ್ತೆ ಆಧಾರಿತ ಅನುವಾದ ಸಾಫ್ಟ್‌ವೇರ್ ಆಗಿದೆ, ಇದನ್ನು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಇಂಗ್ಲಿಷ್‌ನಿಂದ ಭಾರತದ ಪ್ರಾದೇಶಿಕ ಭಾಷೆಗಳಿಗೆ (ಕನ್ನಡ ಸೇರಿದಂತೆ) ಅನುವಾದಿಸಲು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಶೀಘ್ರದಲ್ಲೇ E-Courts ಕಾರ್ಯಕ್ರಮದ ಮೂರನೇ ಹಂತದಲ್ಲಿ ಎಲ್ಲಾ ಹೈ ಕೋರ್ಟುಗಳಲ್ಲೂ ಅಳವಡಿಸುವ ಯೋಜನೆಯಿದೆ.
SUVAS ಕಿರು ಪರಿಚಯ :-
SUVAS ಒಂದು ಕೃತಕ ಬುದ್ಧಿಮತ್ತೆ ಆಧಾರಿತ ಅನುವಾದ ಸಾಫ್ಟ್‌ವೇರ್ ಆಗಿದೆ, ಇದನ್ನು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಇಂಗ್ಲಿಷ್‌ನಿಂದ ಭಾರತದ ಪ್ರಾದೇಶಿಕ ಭಾಷೆಗಳಿಗೆ (ಕನ್ನಡ ಸೇರಿದಂತೆ) ಅನುವಾದಿಸಲು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಶೀಘ್ರದಲ್ಲೇ E-Courts ಕಾರ್ಯಕ್ರಮದ ಮೂರನೇ ಹಂತದಲ್ಲಿ ಎಲ್ಲಾ ಹೈ ಕೋರ್ಟುಗಳಲ್ಲೂ ಅಳವಡಿಸುವ ಯೋಜನೆಯಿದೆ.
SUVAS ನ ಪ್ರಮುಖ ವೈಶಿಷ್ಟ್ಯಗಳು :-
- ಬಹುಭಾಷಾ ಅನುವಾದ: ಈಗ ಹಿಂದಿ, ಕನ್ನಡ, ಬೆಂಗಾಲಿ, ಗುಜರಾತಿ, ಮಲಯಾಳಂ, ಮರಾಠಿ, ಪಂಜಾಬಿ, ತಮಿಳು ಮತ್ತು ತೆಲುಗು ಸೇರಿದಂತೆ 9 ಭಾರತೀಯ ಭಾಷೆಗಳಲ್ಲಿ ಅನುವಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಮುಂದೆ ಇತರ ಭಾಷೆಗಳನ್ನೂ ಸೇರಿಸುವ ಯೋಜನೆಯಿದೆ.
- ಸರಳ ಭಾಷೆ: ಕಾನೂನು ಶೈಲಿಯನ್ನು ಉಳಿಸಿಕೊಂಡರೂ ಜನರಿಗೆ ಅರ್ಥವಾಗುವ ರೀತಿಯಲ್ಲಿ ಭಾಷಾಂತರ ಮಾಡುತ್ತದೆ.
- ನಿಖರ ಮತ್ತು ವೇಗದ ಅನುವಾದ: AI ತಂತ್ರಜ್ಞಾನವು ತೀರ್ಪುಗಳ ಕಚ್ಚಾ ಅನುವಾದವನ್ನು ನೀಡುತ್ತದೆ, ನಂತರ ಅದನ್ನು ಮಾನವ ಕಾನೂನು ತಜ್ಞರು ಪರಿಶೀಲಿಸುತ್ತಾರೆ ಮತ್ತು ಸುಧಾರಿಸುತ್ತಾರೆ. ಇದು ನಿಖರತೆ ಮತ್ತು ವೇಗವನ್ನು ಒದಗಿಸುತ್ತದೆ.
- ನ್ಯಾಯಕ್ಕೆ ಸುಲಭ ಅವಕಾಶ: ತೀರ್ಪುಗಳನ್ನು ಸ್ಥಳೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡುವ ಮೂಲಕ, ಇದು ಸಾಮಾನ್ಯ ಜನರು ತಮ್ಮ ಪ್ರಕರಣಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
SUVAS ನಲ್ಲಿ AI ಪಾತ್ರ :-
- ಮಾಹಿತಿ ವಿಶ್ಲೇಷಣೆ : ನ್ಯಾಯಾಂಗ ದಾಖಲೆ ಮತ್ತು ತೀರ್ಪುಗಳಲ್ಲಿ ಕಾನೂನು ಪದಗಳನ್ನು ಗುರುತಿಸುತ್ತದೆ ಮತ್ತು ಕಾನೂನು ವಿಷಯದ ವ್ಯಾಕರಣ ರಚನೆ ಹಾಗೂ ಸಂದರ್ಭವನ್ನು AI ಬಳಸಿ ಅರ್ಥಮಾಡಿಕೊಳ್ಳುತ್ತದೆ.
- ಅನುವಾದ ಉತ್ಪಾದನೆ : ನ್ಯಾಯಾಂಗದ ಭಾಷೆಯ ಮೇಲೆ ತರಬೇತಿ ಪಡೆದ ಕಾರಣ, AI ಸಹಾಯದಿಂದ ಸರಿಯಾದ ಕಾನೂನು ಪರಿಭಾಷೆ ಮತ್ತು ವಾಕ್ಯರಚನೆಯನ್ನು ಬಳಸಿ ಅನುವಾದ ಮಾಡುತ್ತದೆ.
- ನಿಖರತೆ ಮತ್ತು ವೇಗ : AI ಮೆಷಿನ್ ಲರ್ನಿಂಗ್ ಮೂಲಕ ಹಳೆಯ ತೀರ್ಪುಗಳಿಂದ ಕಲಿತು, ನಿಖರತೆಯನ್ನು ಹೆಚ್ಚಿಸುತ್ತದೆ ಮತ್ತು ವೇಗವಾಗಿ ಬಹು ಭಾಷೆಗಳಿಗೆ ಒಮ್ಮೆಲೇ ಅನುವಾದ ಮಾಡುತ್ತದೆ.
SUVAS ನ ಪ್ರಯೋಜನಗಳು ಮತ್ತು ಬಳಕೆಯ ಸಾಧ್ಯತೆಗಳು : –
- ನ್ಯಾಯಾಧೀಶರಿಗೆ : ಇದರ ಸಹಾಯದಿಂದ ಶೀಘ್ರವಾಗಿ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನೀಡಲು ಸಾಧ್ಯವಾಗುತ್ತದೆ ಮತ್ತು ಪ್ರಾದೇಶಿಕ ಭಾಷೆಗಳಲ್ಲಿರುವ ನ್ಯಾಯಾಂಗ ದಾಖಲೆ ಮತ್ತು ತೀರ್ಪುಗಳನ್ನು ತಮಗೆ ಅರ್ಥವಾಗುವ ಭಾಷೆಗೆ ಅನುವಾದ ಮಾಡಬಹುದಾಗಿದೆ.
- ವಕೀಲರಿಗೆ : ಕಕ್ಷಿದಾರರಿಗೆ ಅವರ ಭಾಷೆಯಲ್ಲಿ ಕೇಸ್ ವಿವರಿಸಲು ಮತ್ತು ಕಕ್ಷಿದಾರರೊಂದಿಗಿನ ಭಾಷಾ ಅಡೆತಡೆ ಕಡಿಮೆಯಾಗಿ ವಕೀಲರ ಮೇಲೆ ನಂಬಿಕೆಯನ್ನು ಹೆಚ್ಚಿಸುತ್ತದೆ.
- ಸಾಮಾನ್ಯ ಜನರಿಗೆ : ತಮ್ಮ ಪ್ರಕರಣಗಳ ತೀರ್ಪುಗಳನ್ನು ತಮ್ಮ ಮಾತೃಭಾಷೆಯಲ್ಲಿ ಓದಲು ಮತ್ತು ಅರ್ಥಮಾಡಿಕೊಳ್ಳಲು ಇದು ಉತ್ತಮ ಸಾಧನವಾಗಿದೆ. ಇದು ನ್ಯಾಯಾಲಯದ ಪ್ರಕ್ರಿಯೆಗಳ ಬಗ್ಗೆ ಸ್ಪಷ್ಟತೆ ಮತ್ತು ನಂಬಿಕೆ ನೀಡುತ್ತದೆ.
ಭಾರತೀಯ ನ್ಯಾಯಾಲಯಗಳಲ್ಲಿ AI – ಮುಂದಿನ ಹಾದಿ :-
ಭಾರತೀಯ ನ್ಯಾಯಾಲಯಗಳಲ್ಲಿ AI – ತಂತ್ರಜ್ಞಾನ ಮತ್ತು ನ್ಯಾಯಾಂಗದ ಸಹಯೋಗದ ಒಂದು ಹೊಸ ಅಧ್ಯಾಯವನ್ನು ತೆರೆಯಲಿದೆ. ಈಗಾಗಲೇ E-COURTS, SUVAS ಮತ್ತು SUPACE ನಂತಹ ಯೋಜನೆಗಳು ಯಶಸ್ಸು ಕಂಡಿದ್ದು, ಮುಂದಿನ ಹೆಜ್ಜೆಗಳು ನ್ಯಾಯ ವಿತರಣೆಯನ್ನು ಸಂಪೂರ್ಣವಾಗಿ ಪರಿವರ್ತಿಸಲಿವೆ. ಇದಲ್ಲದೆ AI ಬಳಸಿ ಪ್ರಿಡಿಕ್ಟಿವ್ ಅನಾಲಿಟಿಕ್ಸ್ ಮೂಲಕ ಒಂದು ಪ್ರಕರಣ ಎಷ್ಟು ದಿನಗಳಲ್ಲಿ ಮುಗಿಯಬಹುದು ಎಂಬ ಅಂದಾಜು ನೀಡುವ ವ್ಯವಸ್ಥೆ ಬರಬಹುದು. ಇದು ಜನರಿಗೆ ತಮ್ಮ ಪ್ರಕರಣದ ಭವಿಷ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ. AI ಚಾಟ್‌ಬಾಟ್‌ಗಳು ನ್ಯಾಯಾಲಯದ ಮೂಲಭೂತ ಪ್ರಕ್ರಿಯೆಗಳ ಕುರಿತು ತಕ್ಷಣ ಮಾಹಿತಿ ನೀಡಬಹುದು. ಭವಿಷ್ಯದಲ್ಲಿ AI ನಿಂದ ವರ್ಚುಯಲ್ ಕೋರ್ಟ್‌ಗಳು ಹೆಚ್ಚಾಗಿ ನಡೆಯಬಹುದು. AI ಬಳಸಿ ಸಾಕ್ಷ್ಯ ವೀಡಿಯೊಗಳ ವಿಶ್ಲೇಷಣೆ, ಸಾಕ್ಷಿದಾರರ ಹೇಳಿಕೆಗಳಲ್ಲಿ ಸುಳ್ಳು/ಅಸಂಗತತೆಯನ್ನು ಪತ್ತೆಹಚ್ಚುವುದು, ಕಾನೂನು ಸಂಶೋಧನೆ ಸ್ವಯಂಚಾಲಿತವಾಗುವುದು ಇತ್ಯಾದಿ ಸೌಲಭ್ಯಗಳಿಂದ ಪ್ರಕರಣಗಳು ಬೇಗ ಇತ್ಯರ್ಥವಾಗಿ, ಎಲ್ಲರೂ ಸಮಯ ಹಾಗು ಹಣದ ಉಳಿತಾಯ ಮಾಡಬಹುದು ಹಾಗೂ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಹೆಚ್ಚಾಗಬಹುದು.


