Bank Account Hack

ನನ್ನ ಬ್ಯಾಂಕ್ ಖಾತೆ ಹ್ಯಾಕ್ ಆಗಿದೆ, ಏನು ಮಾಡೋದು ?

ಈ ಲೇಖನದಲ್ಲಿ, ನಿಮ್ಮ ಬ್ಯಾಂಕ್ ಖಾತೆಯನ್ನು ಹೇಗೆ ಹ್ಯಾಕ್ ಮಾಡಬಹುದು, ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಎಂದು ತಿಳಿಯುವ ಲಕ್ಷಣಗಳು ಯಾವುವು, ಬ್ಯಾಂಕ್ ಖಾತೆ ಹ್ಯಾಕ್ ಆದಲ್ಲಿ ಮುಂದಿನ ಕ್ರಮಗಳು ಯಾವುವು, ನೀವು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಅಂತಿಮವಾಗಿ ಬ್ಯಾಂಕ್ ಖಾತೆ ಹ್ಯಾಕ್ ಆ ಸಂದರ್ಭದಲ್ಲಿ ಆರ್‌ಬಿಐ ಏನು ಹೇಳುತ್ತದೆ ಎಂಬುದರ ಕುರಿತು ನಾನು ತಿಳಿಸಿಕೊಡಲಿದ್ದೇನೆ.

ಹೋದ ವಾರ ನನಗೆ ನನ್ನ ಅಂಕಣ ಓದುಗನೊಬ್ಬ ಆತಂಕದಿಂದ ಕರೆ ಮಾಡಿ – ” ನನ್ನ ಬ್ಯಾಂಕ್ ಖಾತೆ ಹ್ಯಾಕ್ ಆಗಿದೆ ಅನ್ಸತ್ತೆ, ಏನು ಮಾಡೋದು ಸಾರ್?” ಅಂದರು. ವಿಚಾರಿಸಿದಾಗ ಅವರು ನಾನು ಯಾವುದೇ ಆನ್ಲೈನ್ ವಹಿವಾಟು ನಡೆಸಿಲ್ಲಾ, ಚೆಕ್ ಕೊಟ್ಟಿಲ್ಲಾ, UPI ಬಳಸಿಲ್ಲಾ ಮತ್ತು ನನಗೆ ಯಾವುದೇ ವಹಿವಾಟಿನ sms ಬಂದಿಲ್ಲ ಆದರೆ ನಾನು ಇವತ್ತು ಹಣ ತೆಗೆಯಲು ಹೋದಾಗ ಗೊತ್ತಾಯಿತು ನನ್ನ ಬ್ಯಾಂಕ್ ಖಾತೆಯಿಂದ  ಯಾರೋ ನೆನ್ನೆ 43,000 ರುಪಾಯೀ ಹಣವನ್ನು ಎರಡು ಕಂತುಗಳಲ್ಲಿ ತೆಗೆದಿದ್ದಾರೆ, ನನ್ನ ಹಣ ನನಗೆ ವಾಪಾಸ್ ಬರುತ್ತಾ ಎಂದು ಆತಂಕದಿಂದ ಕೇಳಿದರು. ಇನ್ನು ಸ್ವಲ್ಪ ವಿಚಾರಿಸಿ ಪರಿಶೀಲಿಸಿದಾಗ ಗೊತ್ತಾಯಿತು ಅವರು ಕಳೆದ ವಾರದಲ್ಲಿ ಯಾವುದೊ ಒಂದು ಜಾಲತಾಣದಲ್ಲಿ ಖರೀದಿಸಲು ತಮ್ಮ ಬ್ಯಾಂಕ್ ರುಜುವಾತನ್ನು(ಯೂಸರ್ ಐಡಿ ಮತ್ತು ಪಾಸ್ವರ್ಡ್) ಬಳಸಿದ್ದಾಗಿ ಹೇಳಿದರು, ಭಾಗಶಃ ಇದೆ ಅವರ ಬ್ಯಾಂಕ್ ಖಾತೆ ಹ್ಯಾಕ್ ಆಗಲು ಕಾರಣವಾಗಿತ್ತು.

ಪ್ರಧಾನ ಮಂತ್ರಿ ಜನ ಧನ್ ಯೋಜನೆ ಮತ್ತು ಡಿಜಿಟಲ್ ಇಂಡಿಯಾದಿಂದಾಗಿ, ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಹೆಚ್ಚುತ್ತಿದೆ. ಡಿಜಿಟಲ್ ಪಾವತಿಗಳು ಮತ್ತು ನೆಟ್‌ಬ್ಯಾಂಕಿಂಗ್ ವಹಿವಾಟುಗಳ ಹೆಚ್ಚಳದೊಂದಿಗೆ, ಹ್ಯಾಕಿಂಗ್ ಮತ್ತು ಇತರ ರೀತಿಯ ಆನ್‌ಲೈನ್ ವಂಚನೆಯ ಬೆದರಿಕೆಯೂ ಹೆಚ್ಚಾಗಿದೆ. “ಹ್ಯಾಕ್” ಎಂದರೆ ವಂಚನೆಗೆ ಒಳಗಾಗುವುದಕ್ಕೆ ಸಮನಲ್ಲ, ಅಲ್ಲಿ ಯಾರಾದರೂ ನಿಮ್ಮನ್ನು ಮೋಸಗೊಳಿಸಿ ಅವರಿಗೆ ಹಣ/OTP ನೀಡುವಂತೆ ಅಥವಾ ನಿಮ್ಮ ಡೆಬಿಟ್ / ಕ್ರೆಡಿಟ್ ಕಾರ್ಡ್ ಅನ್ನು ಭೌತಿಕವಾಗಿ ಕದಿಯುತ್ತಾರೆ. ಖಾತೆ ಹ್ಯಾಕ್ ಎಂದರೆ ಮನೆ ಕಳ್ಳತನಕ್ಕೆ ಸಮನಾಗಿರುತ್ತದೆ: ಯಾರಾದರೂ ನಿಮ್ಮ ಬ್ಯಾಂಕ್ ಖಾತೆಗೆ ನುಸುಳಿ ಹಣವನ್ನು ಆನ್‌ಲೈನ್‌ನಲ್ಲಿ ನಿಮ್ಮ ಖಾತೆಯಿಂದ ಕದಿಯುತ್ತಾರೆ.

ಬ್ಯಾಂಕ್ ಖಾತೆ ಹ್ಯಾಕ್ ಆಗಿರುವ ಲಕ್ಷಣಗಳು :-

  • ನೀವು ಸರಿಯಾದ ರುಜುವಾತುಗಳನ್ನು ನಮೂದಿಸುತ್ತಿದ್ದರೂ ಸಹ ನಿಮ್ಮ ಬ್ಯಾಂಕ್ ಖಾತೆಗೆ ಲಾಗಿನ್ ಆಗಲು ಸಾಧ್ಯವಿಲ್ಲ.
  • ನಿಮ್ಮ ಖಾತೆಯನ್ನು ನೀವು ಪ್ರವೇಶಿಸಲು ಸಾಧ್ಯವಾದರೆ, ನೀವು ಅಸಾಮಾನ್ಯ ವಹಿವಾಟುಗಳನ್ನು ಗಮನಿಸುತ್ತೀರಿ.
  • ಅನಧಿಕೃತ ಬಳಕೆದಾರರಿಂದ ಅನುಮಾನಾಸ್ಪದ ಚಟುವಟಿಕೆಯ ಕುರಿತು ನೀವು ಸಂದೇಶಗಳನ್ನು ಸ್ವೀಕರಿಸುತ್ತೀರಿ.
  • ನೀವು ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಲು ಪ್ರಯತ್ನಿಸಿದಾಗ ಬ್ಯಾಂಕ್ ಅದನ್ನು ನಿರಾಕರಿಸುತ್ತದೆ.
  • ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವು ಖಾಲಿಯಾಗಿರುತ್ತದೆ.

ನಿಮ್ಮ ಬ್ಯಾಂಕ್ ಖಾತೆ ಹ್ಯಾಕ್ ಆಗಿದೆ ಅಂತ ತಿಳಿದ ತಕ್ಷಣ ನೀವು :-

  1. ನಿಮ್ಮ ಬ್ಯಾಂಕನ್ನು ಸಂಪರ್ಕಿಸಿ ಇದರ ಬಗ್ಗೆ ತಿಳಿಸಿ, ನಿಮ್ಮದಲ್ಲದ ವಹಿವಾಟು(ಟ್ರಾನ್ಸಾಕ್ಷನ್ಸ್) ಗಳನ್ನೂ ದಾಖಲಿಸಿ.
  2. ನಿಮ್ಮ ಎಲ್ಲಾ ಬ್ಯಾಂಕ್ ಅಕೌಂಟ್ ನ ಪಾಸ್ವರ್ಡ್ ಮತ್ತು ಪಿನ್ ಬದಲಾಯಿಸಿ.
  3. ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ ವಂಚನೆ ಮಾಡಿದ್ದರೆ ಅದನ್ನು ಬ್ಲಾಕ್ ಮಾಡಿ.
  4. ನಿಮ್ಮ ಬ್ಯಾಂಕ್ ಟೂ ಫ್ಯಾಕ್ಟರ್ ಅಥವಾ ಮಲ್ಟಿ ಫ್ಯಾಕ್ಟರ್ ಆಥೆಂಟಿಕೇಷನ್ ವ್ಯವಸ್ಥೆಯನ್ನು ಬೆಂಬಲಿಸುತ್ತಿದ್ದರೆ ಕೂಡಲೇ ಅಳವಡಿಸಿ.
  5. ಇತ್ತೀಚಿಗೆ ಇನ್ಸ್ಟಾಲ್ ಮಾಡಿದ ಎಲ್ಲ ಆಪ್ಗಳನ್ನು ಅನಿನ್ಸ್ಟಾಲ್ ಮಾಡಿ.
  6. ನಿಮ್ಮ ಮೊಬೈಲ್ ಮತ್ತು ಕಂಪ್ಯೂಟರ್ ನಲ್ಲಿ ಮಾಲ್ವೇರ್ ಮತ್ತು ಆಂಟಿವೈರಸ್ ಸ್ಕ್ಯಾನ್ ಮಾಡಿ.
  7. ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಜಾಗೃತರಾಗಿ ಮತ್ತು ನಿಗಾ ಇಡುವುದನ್ನು ಮುಂದುವರಿಸಿ.
  8. ಬ್ಯಾಂಕ್ ನಿರ್ದೇಶನಗಳ ಪ್ರಕಾರ ಹತ್ತಿರದ ಸೈಬರ್ ಅಥವಾ ಸಾಮಾನ್ಯ ಪೊಲೀಸ್ ಠಾಣೆಯಲ್ಲಿ ಈ ಹ್ಯಾಕ್ ಬಗ್ಗೆ FIR ದೂರು ದಾಖಲಿಸಿ.
  9. ಕಳೆದುಹೋದ ಹಣವನ್ನು ಮರುಪಡೆಯಲು ನೀವು ತೆಗೆದುಕೊಳ್ಳಬಹುದಾದ ಕೆಲವು ಕ್ರಮಗಳಿಗಾಗಿ ಕಳೆದುಹೋದ ಹಣವನ್ನು ಮರುಪಡೆಯಲು ನನ್ನ ಇತರ ಲೇಖನಗಳನ್ನು ಪರಿಶೀಲಿಸಿ.

ನಿಮ್ಮ ಬ್ಯಾಂಕ್ ಖಾತೆ ಹ್ಯಾಕ್ ಆಗದಂತೆ ತಡೆಯಲು ನೀವು :-

  • ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳಿಗೆ, ಕನಿಷ್ಠ 10 ಅಂಕೆಗಳನ್ನು ಹೊಂದಿಸಿ, ಅದರಲ್ಲಿ ಅಕ್ಷರಗಳು, ಸಂಖ್ಯೆಗಳು ಮತ್ತು ವಿಶೇಷ ಅಕ್ಷರಗಳ ಮಿಶ್ರಣವನ್ನು ಪಾಸ್‌ವರ್ಡ್ ಆಗಿ ಹೊಂದಿಸಿ.
  • ನಿಮ್ಮ ಬ್ಯಾಂಕ್ ಟೂ ಫ್ಯಾಕ್ಟರ್ ಅಥವಾ ಮಲ್ಟಿ ಫ್ಯಾಕ್ಟರ್ ಆಥೆಂಟಿಕೇಷನ್ ವ್ಯವಸ್ಥೆಯನ್ನು ಬೆಂಬಲಿಸುತ್ತಿದ್ದರೆ ಕೂಡಲೇ ಅಳವಡಿಸಿ.
  • ನಿಮ್ಮ ಬ್ಯಾಂಕ್ ಖಾತೆಯ ಪ್ರತಿ ವಹಿವಾಟಿನ ವಿವರಗಳನ್ನು ತಕ್ಷಣವೇ ಪಡೆಯಲು ಇರುವ ವ್ಯವಸ್ಥೆಗೆ ನೀವು ಸಾಮಾನ್ಯವಾಗಿ ಬಳಸುವ ಫೋನ್ ನಂಬರ್ ಮತ್ತು ಇಮೇಲ್ ಅಡ್ರೆಸ್ ಅನ್ನು ಅಳವಡಿಸಿ ಮತ್ತು ಅದು ಬದಲಾದರೆ ಕೂಡಲೇ ನವೀಕರಿಸಿ.
  • ನಿಮ್ಮ ಬ್ಯಾಂಕ್ ಖಾತೆಯ ಪಾಸ್ವರ್ಡ್ ಮತ್ತು ಪಿನ್ ಕೋಡ್ ಗಳನ್ನು ಎಲ್ಲೂ(ಅಪರಿಚಿತ ಜಾಲತಾಣಗಳಲ್ಲಿ) ಯಾರೊಂದಿಗೂ ಹಂಚಿಕ್ಕೊಳಬೇಡಿ.
  • ಪಬ್ಲಿಕ್ ವೈಫೈ ಮತ್ತು ಕಂಪ್ಯೂಟರ್ ಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಲಾಗಿನ್ ಆಗಬೇಡಿ.
  • ನಿಮ್ಮ ಎಲ್ಲಾ ಬ್ಯಾಂಕ್ ಖಾತೆ ಹೇಳಿಕೆಗಳನ್ನು ಸೂಕ್ಷ್ಮವಾಗಿ ಯಾವುದೇ ಅನಿರೀಕ್ಷಿತ ಅಥವಾ ಅನಧಿಕೃತ ವಹಿವಾಟಿಗಾಗಿ ಪರೀಕ್ಷಿಸಿ.

RBI ಬ್ಯಾಂಕ್ ಖಾತೆ ಹ್ಯಾಕ್ ಪರಿಹಾರದ ಬಗ್ಗೆ ಏನು ಹೇಳುತ್ತದೆ :-

ಭಾರತೀಯ ರಿಸರ್ವ್ ಬ್ಯಾಂಕ್ (RBI), ತನ್ನ 2017-2018 ರ ವಾರ್ಷಿಕ ವರದಿಯಲ್ಲಿ, ಎಲ್ಲಾ ಅನಧಿಕೃತ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳ ಸಂದರ್ಭದಲ್ಲಿ ಹಣಕಾಸಿನ ಹೊಣೆಗಾರಿಕೆಯನ್ನು ಯಾರು ಭರಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದೆ. ನಷ್ಟವನ್ನು ನೀವು ಭರಿಸುತ್ತೀರಾ ಅಥವಾ ನಿಮ್ಮ ಬ್ಯಾಂಕ್ ಭರಿಸುತ್ತದಾ ಎಂಬುದು ಪ್ರಕರಣದಲ್ಲಿ ಯಾರ ತಪ್ಪು ಅಥವಾ ನಿರ್ಲಕ್ಷ್ಯವನ್ನು ಅವಲಂಬಿಸಿರುತ್ತದೆ ಮತ್ತು ಗ್ರಾಹಕರ ನಷ್ಟದ ಪ್ರಮಾಣವು ಘಟನೆಯನ್ನು ಅವರು ಬ್ಯಾಂಕಿಗೆ ಎಷ್ಟು ಬೇಗನೆ ವರದಿ ಮಾಡಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

  • ನಷ್ಟವು ಗ್ರಾಹಕನ ಬೇಜವಾಬ್ದಾರಿತನದಿಂದ ಅಥವಾ ನಿರ್ಲಕ್ಷ್ಯದಿಂದ ಆಗಿದ್ದರೆ, ಬ್ಯಾಂಕ್ ನಷ್ಟಕ್ಕೆ ಜವಾಬ್ದಾರಿಯಲ್ಲಾ.
  • ಬ್ಯಾಂಕ್ ಅಥವಾ ಬ್ಯಾಂಕ್ ಸಿಬ್ಬಂದಿಯ ಬೇಜವಾಬ್ದಾರಿತನದಿಂದ ಅಥವಾ ನಿರ್ಲಕ್ಷ್ಯದಿಂದ ನಷ್ಟವಾಗಿದ್ದರೆ :-
  • ಅನಧಿಕೃತ ವಹಿವಾಟಿನ ಬಗ್ಗೆ ಬ್ಯಾಂಕಿನಿಂದ ಮಾಹಿತಿ ಬಂದ 3 ಕೆಲಸದ ದಿನಗಳಲ್ಲಿ ಗ್ರಾಹಕರು ಬ್ಯಾಂಕಿಗೆ ವರದಿ ಮಾಡಿದರೆ ಅವರ ಹೊಣೆಗಾರಿಕೆ ಶೂನ್ಯವಾಗಿರುತ್ತದೆ.
  • ನೀವು 4-7 ಕೆಲಸದ ದಿನಗಳ ವಿಳಂಬದೊಂದಿಗೆ ವರದಿ ಮಾಡಿದರೆ, ಗ್ರಾಹಕರ ಗರಿಷ್ಠ ಹೊಣೆಗಾರಿಕೆಯು ಖಾತೆಯ ಪ್ರಕಾರವನ್ನು ಅವಲಂಬಿಸಿ ₹ 5,000 ರಿಂದ ₹ 25,000 ವರೆಗೆ ಇರುತ್ತದೆ.
  • ನೀವು 7 ಕೆಲಸದ ದಿನಗಳ ನಂತರ ವರದಿ ಮಾಡಿದರೆ, ನಿಮ್ಮ ಹೊಣೆಗಾರಿಕೆಯು ಆಯಾ ಬ್ಯಾಂಕಿನ ನೀತಿಯನ್ನು ಅವಲಂಬಿಸಿರುತ್ತದೆ.

ಗ್ರಾಹಕರು ಅಧಿಸೂಚನೆ ನೀಡಿದ ದಿನಾಂಕದಿಂದ 10 ಕೆಲಸದ ದಿನಗಳಲ್ಲಿ ಬ್ಯಾಂಕ್ ಅನಧಿಕೃತ ಎಲೆಕ್ಟ್ರಾನಿಕ್ ವಹಿವಾಟಿನಲ್ಲಿ ಒಳಗೊಂಡಿರುವ ಮೊತ್ತವನ್ನು ಗ್ರಾಹಕರ ಖಾತೆಗೆ ಜಮಾ ಮಾಡಬೇಕಾಗುತ್ತದೆ.

ಬ್ಯಾಂಕ್ ಖಾತೆ ಹ್ಯಾಕ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ