UPI

ತಪ್ಪು ಫೋನ್ ಸಂಖ್ಯೆ ಅಥವಾ UPI ಐಡಿ(VBA)ಗೆ ಕಳುಹಿಸಿದ ಹಣವನ್ನು ವಾಪಾಸ್ ಪಡೆಯಲು ಏನು ಮಾಡಬೇಕು?

ಈ ಅಂಕಣ ತಪ್ಪು ಫೋನ್ ಸಂಖ್ಯೆ ಅಥವಾ UPI ಐಡಿ(VBA)ಗೆ ಕಳುಹಿಸಿದ ಹಣವನ್ನು ವಾಪಾಸ್ ಪಡೆಯಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ವಿವರಿಸಲಾಗಿದೆ.

ನನ್ನ ಸ್ನೇಹಿತರೊಬ್ಬರು 15000 ರೂಪಾಯಿಗಳನ್ನು ತಪ್ಪು UPI ಐಡಿಗೆ (ಫೋನ್ ಸಂಖ್ಯೆ) ಕಳುಹಿಸಿದ್ದೇನೆ ಎಂದು ಉದ್ವಿಗ್ನ ಧ್ವನಿಯಲ್ಲಿ ನನಗೆ ಕರೆ ಮಾಡಿದರು. ಆ ಫೋನ್ ಸಂಖ್ಯೆಯ ಮಾಲೀಕರು ಪದೇ ಪದೇ ಕರೆ ಮಾಡಿದರೂ ಪ್ರತಿಕ್ರಿಯಿಸದ ಕಾರಣ ಅವರು ತಮ್ಮ ಹಣವನ್ನು ಹಿಂಪಡೆಯಲು ಏನು ಮಾಡಬೇಕು ಎಂದು ಆತಂಕದಿಂದ ಕೇಳಿದರು. ಹಣವನ್ನು ಹಿಂಪಡೆಯಲು ಅವರು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ನಾನು ವಿವರಿಸಿದಾಗ ಅವರು ಸ್ವಲ್ಪ ಸಮಾಧಾನಗೊಂಡರು, ಅದನ್ನು ನಾನು ಕೆಳಗೆ ವಿವರಿಸಿದ್ದೇನೆ.

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಡಿಜಿಟಲ್ ಮತ್ತು ನೈಜ-ಸಮಯದ ಪಾವತಿ ವ್ಯವಸ್ಥೆಯಾಗಿದ್ದು, ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದೆ ಮತ್ತು ಇದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಯಂತ್ರಿಸುತ್ತದೆ. ಸರಳ ಪದಗಳಲ್ಲಿ ಹೇಳುವುದಾದರೆ UPI ಭಾರತದಲ್ಲಿ ನೈಜ-ಸಮಯದ ಹಣ ಪಾವತಿ ವ್ಯವಸ್ಥೆಯಾಗಿದ್ದು, ಅದು ಮೊಬೈಲ್ ಸಾಧನದ ಮೂಲಕ ಸುಲಭವಾಗಿ, ತ್ವರಿತವಾಗಿ ಮತ್ತು ಉಚಿತವಾಗಿ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದಕ್ಕೆ ತಡೆರಹಿತ ಹಣ ವರ್ಗಾವಣೆಯನ್ನು ಮಾಡಲು ಅನುವು ಮಾಡುತ್ತದೆ. UPI ವ್ಯಕ್ತಿಗಳು ಮತ್ತು ಸಂಸ್ಥೆಗಳ ನಡುವೆ ಹಣವನ್ನು ಕಳುಹಿಸಲು/ಸ್ವೀಕರಿಸಲು, QR ಕೋಡ್‌ಗಳು, VPA ಗಳು ಅಥವಾ UPI ನೋಂದಾಯಿತ ಮೊಬೈಲ್ ಸಂಖ್ಯೆಗಳ ಮೂಲಕ ಆನ್‌ಲೈನ್ ಖರೀದಿಗಳನ್ನು ಮಾಡಲು, ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ಮತ್ತು ಅಂಗಡಿಗಳಲ್ಲಿ ಶಾಪಿಂಗ್ ಮಾಡಲು ವ್ಯಕ್ತಿಗಳಿಗೆ ಅನುವು ಮಾಡಿಕೊಡುತ್ತದೆ.

2023 ರಲ್ಲಿ UPI ಮೂಲಕ ಪ್ರಕ್ರಿಯೆಗೊಳಿಸಲಾದ ಒಟ್ಟು ವಹಿವಾಟುಗಳು 182 ಲಕ್ಷ ಕೋಟಿ ರೂಪಾಯಿಗಳಾಗಿವೆ. UPI ಅನುಕೂಲಕರವಾಗಿದೆ, ಬಳಸಲು ಸುಲಭವಾಗಿದೆ, ನಗದು ಸಾಗಿಸುವ ಅಗತ್ಯವನ್ನು ನಿವಾರಿಸುತ್ತದೆ, ಚೆಕ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ತೊಂದರೆಗಳನ್ನು ನಿವಾರಿಸುತ್ತದೆ ಆದರೆ ಮನುಷ್ಯನ ಸ್ವಯಂಕೃತ ತಪ್ಪಿನಿಂದ ಅಥವಾ ಅಜಾಗರೂಕತೆಯಿಂದ ಹಣವನ್ನು ತಪ್ಪು UPI ID ಗೆ ಕಳುಹಿಸಬಹುದು.

ತಪ್ಪು ಫೋನ್ ಸಂಖ್ಯೆ ಅಥವಾ UPI ID ಗೆ ಹಣವನ್ನು ವರ್ಗಾಯಿಸಲು ಕಾರಣಗಳು :-

  • ನೀವು ನಿಮ್ಮ ಸಂಪರ್ಕದ ಹಳೆಯ ಮೊಬೈಲ್ ಸಂಖ್ಯೆಗೆ ಹಣವನ್ನು ಕಳುಹಿಸಿರುವಿರಿ, ಆದರೆ ಆ ಸಂಖ್ಯೆ ಬಳಕೆ ಅಥವಾ ರೀಚಾರ್ಜ್  ಮಾಡದಿರುವುದು ಅಥವಾ ಇತರ ಕಾರಣಗಳಿಂದಾಗಿ ಸೇವಾ ಪೂರೈಕೆದಾರರು ಅದನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಿರುತ್ತಾರೆ.
  • ನೀವು ಫೋನ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿರುತ್ತೀರಿ.
  • ನೀವು ಕಾಂಟಾಕ್ಟ್ ಲಿಸ್ಟ್ ಅಥವಾ ಇತ್ತೀಚಿನ ವರ್ಗಾವಣೆಗಳಿಂದ ತಪ್ಪು ಸಂಪರ್ಕವನ್ನು ಆಯ್ಕೆ ಮಾಡಿದ್ದೀರಿ.
  • ಕಾಗುಣಿತ ದೋಷ ಅಥವಾ ನಿಮಗೆ ದೊರೆತ ತಪ್ಪಾದ ವರ್ಚುವಲ್ ಪಾವತಿ ವಿಳಾಸವನ್ನು (VPA) ನಮೂದಿಸಿರುತ್ತೀರಿ.
  • ನಿಷ್ಕ್ರಿಯವಾಗಿರುವ ಅಥವಾ ಮುಚ್ಚಿರುವ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆಗೆ ಹಣವನ್ನು ಕಳುಹಿಸುವುದು.

UPI  ಮೂಲಕ ಹಣ ವರ್ಗಾವಣೆ ಮಾಡುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು :-

  • ದೊಡ್ಡ ಮೊತ್ತವನ್ನು ಕಳುಹಿಸುವ ಮೊದಲು ತಾಳ್ಮೆಯಿಂದ ಎಲ್ಲ ವಿವರಗಳನ್ನು ಪರೀಕ್ಷಿಸಿ, ಯಾರ ಅನಗತ್ಯ ಒತ್ತಡಕ್ಕು ಬಲಿಯಾಗಬೇಡಿ.
  • ಹಣವನ್ನು ವರ್ಗಾಯಿಸುವ ಮೊದಲು ನಮೂದಿಸಿದ ಮೊಬೈಲ್ ಸಂಖ್ಯೆಗೆ ಸಂಬಂದಿಸಿದ ಪ್ರದರ್ಶಿಸಲಾದ ಹೆಸರನ್ನು ಕಳುಹಿಸಬೇಕಾದ  ವ್ಯಕ್ತಿಯೊಂದಿಗೆ ಯಾವಾಗಲೂ ಪರಿಶೀಲಿಸಿ.
  • ನೀವು ನಮೂದಿಸಿದ ಮೊತ್ತವನ್ನು ಯಾವಾಗಲೂ ಪರಿಶೀಲಿಸಿ ಮತ್ತು ಕಳುಹಿಸಬೇಕಾದ ವ್ಯಕ್ತಿಯೊಂದಿಗೆ ದೃಢೀಕರಿಸಿ.
  • ನೀವು QR ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಹಣವನ್ನು ವರ್ಗಾಯಿಸುವ ಮೊದಲು ಯಾವಾಗಲೂ ಪ್ರದರ್ಶಿಸಲಾದ ಹೆಸರು ಮತ್ತು ಮೊತ್ತವನ್ನು ಪರಿಶೀಲಿಸಿ.
  • ಹಣವನ್ನು ವರ್ಗಾವಣೆ ಮಾಡುವ ಮೊದಲು ಯಾವಾಗಲೂ ನಮೂದಿಸಿದ VPA ಅನ್ನು ಕಳುಹಿಸಬೇಕಾದ ವ್ಯಕ್ತಿಯೊಂದಿಗೆ ಪರಿಶೀಲಿಸಿ.
  • ಅದು ದೊಡ್ಡ ಮೊತ್ತ ಮತ್ತು ಹೊಸ ಪಾವತಿದಾರರನ್ನು ಒಳಗೊಂಡಿದ್ದರೆ, ಮೊದಲು ಸಣ್ಣ ಮೊತ್ತಕ್ಕೆ ಪರೀಕ್ಷಾ ವರ್ಗಾವಣೆಯನ್ನು ಮಾಡಿ.

ತಪ್ಪು ಫೋನ್ ಸಂಖ್ಯೆ ಅಥವಾ UPI ಐಡಿಗೆ ಹಣವನ್ನು ಕಳುಹಿಸಿದ ನಂತರ ತೆಗೆದುಕೊಳ್ಳಬೇಕಾದ ಕ್ರಮಗಳು:-

  • ನೀವು ತಪ್ಪಾಗಿ ಹಣವನ್ನು ವರ್ಗಾಯಿಸಿದ ವ್ಯಕ್ತಿಯೊಂದಿಗೆ ಮಾತನಾಡಲು ಪ್ರಯತ್ನಿಸಿ, ಹೆಚ್ಚಿನವರು ಹಣವನ್ನು ಹಿಂದಿರುಗಿಸುತ್ತಾರೆ.
  • ನೀವು ಬಳಸುತ್ತಿರುವ UPI ಅಪ್ಲಿಕೇಶನ್‌ನ ಗ್ರಾಹಕ ಆರೈಕೆ ಬೆಂಬಲ ತಂಡಕ್ಕೆ ತಪ್ಪು ವಹಿವಾಟಿನ ಸಮಸ್ಯೆಯನ್ನು ವರದಿ ಮಾಡಿ ಹಣ ಮರುಪಡೆಯಲು ಸಹಾಯ ಪಡೆಯಿರಿ.
  • ನಿಮ್ಮ ಬ್ಯಾಂಕ್ ಅನ್ನು ನೇರವಾಗಿ ಸಂಪರ್ಕಿಸಿ ಮತ್ತು ಪಾವತಿಯ ವಿಶಿಷ್ಟ ವಹಿವಾಟು ಉಲ್ಲೇಖ (UTR) ಸಂಖ್ಯೆಯೊಂದಿಗೆ ತಪ್ಪಾದ ಕ್ರೆಡಿಟ್ ಚಾರ್ಜ್‌ಬ್ಯಾಕ್ ಅನ್ನು ಲಗತ್ತಿಸಿ. ಹಣ ಸ್ವೀಕರಿಸಿದ ಖಾತೆಯು ಅದೇ ಬ್ಯಾಂಕ್‌ನಲ್ಲಿದ್ದರೆ, ಬ್ಯಾಂಕ್ ಖಾತೆಯ ಮಾಲೀಕರನ್ನು ಸಂಪರ್ಕಿಸುತ್ತದೆ ಮತ್ತು ಅವರು ಒಪ್ಪಿದರೆ, ನಿಮ್ಮ ಖಾತೆಗೆ ಮೊತ್ತವನ್ನು ಹಿಂತಿರುಗಿಸುತ್ತದೆ. ಖಾತೆಯು ಬೇರೆ ಬ್ಯಾಂಕ್‌ಗೆ ಸೇರಿದ್ದರೆ, ನಿಮ್ಮ ಬ್ಯಾಂಕ್ ಫೆಸಿಲಿಟೇಟರ್ ಆಗಿ ಕಾರ್ಯನಿರ್ವಹಿಸಬಹುದು ಮತ್ತು ಇತರ ಬ್ಯಾಂಕ್ ಖಾತೆಯಲ್ಲಿ ಆ ಮೊತ್ತದ ಮೇಲೆ ಲೀನ್ ಅಥವಾ ಡೆಬಿಟ್ ಫ್ರೀಜ್ ಅನ್ನು ಲಗತ್ತಿಸಬಹುದು. ಖಾತೆಯ ಮಾಲೀಕರ ಅನುಮೋದನೆಯೊಂದಿಗೆ ಮೊತ್ತವನ್ನು ನಿಮ್ಮ ಖಾತೆಗೆ ಹಿಂತಿರುಗಿಸಲಾಗುತ್ತದೆ.
  • ಬ್ಯಾಂಕ್ ನಿಮ್ಮ ವಿನಂತಿಗೆ ಪ್ರತಿಕ್ರಿಯಿಸಲು ವಿಫಲವಾದಲ್ಲಿ ಅಥವಾ ಯಾವುದೇ ಕ್ರಮವನ್ನು ತೆಗೆದುಕೊಳ್ಳದಿದ್ದರೆ, ಪರಿಹಾರಕ್ಕಾಗಿ ಬ್ಯಾಂಕ್‌ನ ಒಂಬುಡ್ಸ್‌ಮನ್ ಅನ್ನು ಸಂಪರ್ಕಿಸಬಹುದು.
  • ಸ್ವೀಕರಿಸುವವರು ನಿಮ್ಮ ವಿನಂತಿಗೆ ಪ್ರತಿಕ್ರಿಯಿಸದಿದ್ದರೆ ಅಥವಾ ಬ್ಯಾಂಕ್ ನಿಮ್ಮ ಮೊತ್ತವನ್ನು ಹಿಂಪಡೆಯಲು ಸಹಾಯ ಮಾಡದಿದ್ದರೆ ಅಥವಾ ವಿಫಲವಾದರೆ, ನೀವು NPCI ಜಾಲತಾಣದಲ್ಲಿ (https://www.npci.org.in/what-we-do/upi/dispute-redressal-mechanism) ದೂರು ಸಲ್ಲಿಸಬಹುದು.
UPI

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ