Cyber ​​Incident Responder and Cryptographer

ಸೈಬರ್ ಇನ್ಸಿಡೆಂಟ್ ರೆಸ್ಪಾಂಡರ್ ಮತ್ತು ಕ್ರಿಪ್ಟೋಗ್ರಾಫರ್ ಉದ್ಯೋಗಾವಕಾಶಗಳ ಕಿರು ಪರಿಚಯ

ಈ ಅಂಕಣದಲ್ಲಿ ನಾನು ಹತ್ತು ಪ್ರವೇಶ ಮಟ್ಟದ ಉದ್ಯೋಗಾವಕಾಶಗಳ ಪೈಕಿ ಎರಡು ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳಾದ ಇನ್ಸಿಡೆಂಟ್ ರೆಸ್ಪಾಂಡರ್ ಮತ್ತು ಕ್ರಿಪ್ಟೋಗ್ರಾಫರ್ ಬಗ್ಗೆ ತಿಳಿಸಿಕೊಡಲಿದ್ದೇನೆ, ಮುಖ್ಯವಾಗಿ ಆ ಉದ್ಯೋಗದ ಲಕ್ಷಣಗಳು/ಜವಾಬ್ದಾರಿಗಳು, ಕೌಶಲ್ಯಗಳು, ವಿದ್ಯಾರ್ಹತೆ, ಸರ್ಟಿಫಿಕೇಷನ್ಸ್, ಸಂಬಳ, ಸಿಗುವ ಕೆಲಸದ ಶೀರ್ಷಿಕೆಗಳು(ಜಾಬ್ ಟೈಟಲ್) ಮತ್ತು ವೃತ್ತಿ ಬೆಳವಣಿಗೆ(ಕೆರಿಯರ್ ಪ್ರೊಗ್ರೆಶನ್ಸ್) ಬಗ್ಗೆ ಸ್ಥೂಲವಾಗಿ ತಿಳಿಸಿಕೊಡಲಿದ್ದೇನೆ.

ಕಳೆದ ಕೆಲವು ಅಂಕಣದಿಂದ ನಾನು ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಡುತ್ತಿದ್ದೇನೆ. ಕಳೆದ ವಾರದ ಅಂಕಣದಲ್ಲಿ, ನಾನು ಹತ್ತು ಪ್ರವೇಶ ಮಟ್ಟದ ಉದ್ಯೋಗಾವಕಾಶಗಳ ಪೈಕಿ ಮೊದಲ ಎರಡು ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳಾದ ಸೈಬರ್ ಸೆಕ್ಯೂರಿಟಿ ಅನಲಿಸ್ಟ್ ಮತ್ತು ಸೈಬರ್ ಸೆಕ್ಯೂರಿಟಿ ಸ್ಪೆಷಲಿಸ್ಟ್ ಬಗ್ಗೆ ತಿಳಿಸಿಕೊಟಿದ್ದೆ. ಇಂದಿನ ಅಂಕಣದಲ್ಲಿ ನಾನು ಮತ್ತೆರಡು ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳಾದ ಇನ್ಸಿಡೆಂಟ್ ರೆಸ್ಪಾಂಡರ್ ಮತ್ತು ಕ್ರಿಪ್ಟೋಗ್ರಾಫರ್ ಬಗ್ಗೆ ತಿಳಿಸಿಕೊಡಲಿದ್ದೇನೆ, ಮುಖ್ಯವಾಗಿ ಆ ಉದ್ಯೋಗದ ಲಕ್ಷಣಗಳು/ಜವಾಬ್ದಾರಿಗಳು, ಕೌಶಲ್ಯಗಳು, ವಿದ್ಯಾರ್ಹತೆ, ಸರ್ಟಿಫಿಕೇಷನ್ಸ್, ಸಂಬಳ, ಸಿಗುವ ಕೆಲಸದ ಶೀರ್ಷಿಕೆಗಳು(ಜಾಬ್ ಟೈಟಲ್) ಮತ್ತು ವೃತ್ತಿ ಬೆಳವಣಿಗೆ(ಕೆರಿಯರ್ ಪ್ರೊಗ್ರೆಶನ್ಸ್) ಬಗ್ಗೆ ಸ್ಥೂಲವಾಗಿ ತಿಳಿಸಿಕೊಡಲಿದ್ದೇನೆ.

ಸೈಬರ್ ಇನ್ಸಿಡೆಂಟ್ ರೆಸ್ಪಾಂಡರ್ ಉದ್ಯೋಗಾವಕಾಶಗಳ ಕಿರು ಪರಿಚಯ :-

ಸೈಬರ್ ಇನ್ಸಿಡೆಂಟ್ ರೆಸ್ಪಾಂಡರ್ (ಘಟನೆ ಪ್ರತಿಕ್ರಿಯಿಸುವವರು) ಸೈಬರ್ ಭದ್ರತಾ ಬೆದರಿಕೆಗಳನ್ನು ತಡೆಗಟ್ಟುವ ಮತ್ತು ತಗ್ಗಿಸುವ ಮೂಲಕ ಸಂಸ್ಥೆಯ ಭದ್ರತೆಯನ್ನು ರಕ್ಷಿಸುತ್ತಾರೆ ಮತ್ತು ಸುಧಾರಿಸುತ್ತಾರೆ. ಅವರ ಕರ್ತವ್ಯಗಳಲ್ಲಿ ಸಂಭಾವ್ಯ ಸೈಬರ್ ಭದ್ರತಾ ಉಲ್ಲಂಘನೆಗಳನ್ನು ಗುರುತಿಸಲು ಮತ್ತು ಸರಿಪಡಿಸಲು, ಸಂಸ್ಥೆಯ ವ್ಯವಸ್ಥೆ, ಸಾಧನ ಮತ್ತು ಉಪಕರಣಗಳ ಮೇಲ್ವಿಚಾರಣೆ, ಮೌಲ್ಯಮಾಪನ, ಪರೀಕ್ಷೆ ಮತ್ತು ವಿಶ್ಲೇಷಣೆ ಸೇರಿವೆ. ಅವರು ಸೈಬರ್ ಬೆದರಿಕೆಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಬೇಕಾದ ಸೈಬರ್ ಭದ್ರತಾ ಯೋಜನೆಗಳು, ನೀತಿಗಳು ಮತ್ತು ಅದಕ್ಕೆ ಬೇಕಾದ ತರಬೇತಿಯನ್ನು ಸಿದ್ಧಪಡಿಸುತ್ತಾರೆ. ಅವರು ಹ್ಯಾಕಿಂಗ್(ಒಳನುಗ್ಗುವಿಕೆ) ಪತ್ತೆ, ಸೈಬರ್ ಭದ್ರತಾ ಲೆಕ್ಕಪರಿಶೋಧನೆ ಮತ್ತು ಅಪಾಯದ ವಿಶ್ಲೇಷಣೆಯ ಮೂಲಕ ಬೆದರಿಕೆಗಳನ್ನು ನಿರ್ಣಯಿಸಲು ಮತ್ತು ಪ್ರತಿಕ್ರಿಯಿಸಲು ನೆಟ್‌ವರ್ಕ್ ಫೋರೆನ್ಸಿಕ್ಸ್, ರಿವರ್ಸ್ ಇಂಜಿನಿಯರಿಂಗ್ ಮತ್ತು ಹ್ಯಾಕಿಂಗ್ ಕೌಶಲ್ಯಗಳ ಬಳಕೆಯನ್ನು ಮಾಡುತ್ತಾರೆ. ಅವರು ಪೂರ್ವನಿರ್ಧರಿತ ಮಧ್ಯಂತರಗಳಲ್ಲಿ ನಿರ್ವಹಣೆ ಮತ್ತು ಕಾನೂನು ಜಾರಿಗಾಗಿ ಆದ ಸೈಬರ್ ಘಟನೆಗಳು ಮತ್ತು ಅದಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ವರದಿಗಳನ್ನು ರಚಿಸುತ್ತಾರೆ.

ಈ ಹುದ್ದೆಗೆ ಅವರು ಕಂಪ್ಯೂಟರ್ ಸಂಭಂದಿತ ವಿಷಯದಲ್ಲಿ ಪದವಿ/ಡಿಪ್ಲೋಮ ಹೊಂದಿದ್ದರೆ ಉತ್ತಮ, ಮುಖ್ಯವಾಗಿ ಅವರಿಗೆ ವಿವಿಧ ಆಪರೇಟಿಂಗ್ ಸಿಸ್ಟಮ್, ನೆಟ್‌ವರ್ಕಿಂಗ್ ಮತ್ತು ಸಿಸ್ಟಮ್ ಅಡ್ಮಿನಿಸ್ಟ್ರೇಷನ್, ಸೆಕ್ಯೂರಿಟಿ ಉಪಕರಣ/ಪರಿಕರಗಳ ಜ್ಞಾನ, ಡಿಜಿಟಲ್ ಫೊರೆನ್ಸಿಕ್ಸ್,  ಪ್ರೋಗ್ರಾಮಿಂಗ್ ಮತ್ತು ಸ್ಕ್ರಿಪ್ಟಿಂಗ್ ಕೌಶಲ್ಯಗಳು ಇರಬೇಕು. ಇದರ ಜೊತೆಗೆ  ತಾಂತ್ರಿಕವಲ್ಲದ ಕೌಶಲ್ಯಗಳಾದ ವಿಶ್ಲೇಷಣಾತ್ಮಕ ಚಿಂತನೆ, ಸಮಸ್ಯೆ ಪರಿಹಾರ, ಸಂವಹನ, ತಂಡ ಪ್ರವೃತ್ತಿ ಮತ್ತು ಸೂಕ್ಷ್ಮ ದೃಷ್ಟಿ ಇರಬೇಕು. ಉದ್ಯಮ ಪ್ರಮಾಣೀಕರಣ(ಸರ್ಟಿಫಿಕೇಷನ್ಸ್) ಗಳಾದ  CERT-Certified Computer Security Incident Handler (CERT-CSIH), Certified Computer Examiner (CCE), Certified Computer Forensics Examiner ಮತ್ತು Certified Information Systems Security Professional (CISSP) ನಿಮಗೆ ಉತ್ತಮ ಉದ್ಯೋಗ/ಸಂಬಳ ಪಡೆಯಲು ಸಹಾಯಕವಾಗಬಹುದು. ಈ ಉದ್ಯೋಗಕ್ಕೆ ನೀವು ಮೊದಲ ವರ್ಷದಲ್ಲಿ 3-21ಲಕ್ಷದವರೆಗೆ ಸಂಬಳವನ್ನು ನೀರಿಕ್ಷಿಸಬಹುದು. ಇಲ್ಲಿ ನೀವು ಸೈಬರ್ ಇನ್ಸಿಡೆಂಟ್ ರೆಸ್ಪಾಂಡರ್ ನಿಂದ ಶುರು ಮಾಡಿ ಸೀನಿಯರ್/ಲೀಡ್ ಇನ್ಸಿಡೆಂಟ್ ರೆಸ್ಪಾಂಡರ್ , ಇನ್ಸಿಡೆಂಟ್ ರೆಸ್ಪಾಂಡರ್ ಸ್ಪೆಷಲಿಸ್ಟ್/ಮ್ಯಾನೇಜರ್/ವೈಸ್ ಪ್ರೆಸಿಡೆಂಟ್ ಹುದ್ದೆವರೆಗೂ ಹೋಗಬಹುದು.

ಸೈಬರ್ ಕ್ರಿಪ್ಟೋಗ್ರಾಫರ್ ಉದ್ಯೋಗಾವಕಾಶಗಳ ಕಿರು ಪರಿಚಯ :-

ಕ್ರಿಪ್ಟೋಗ್ರಫಿ ಎನ್ನುವುದು ನಿರ್ದಿಷ್ಟ ರೂಪದಲ್ಲಿ ಡೇಟಾವನ್ನು ಸಂಗ್ರಹಿಸುವ ಮತ್ತು ರವಾನಿಸುವ ಮೂಲಕ ಮಾಹಿತಿಯನ್ನು ಸುರಕ್ಷಿತವಾಗಿರಿಸುವ ವಿಜ್ಞಾನವಾಗಿದೆ, ಇದರಿಂದಾಗಿ ಅದು ಉದ್ದೇಶಿಸಿರುವವರು ಮಾತ್ರ ಅದನ್ನು ಓದಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು. ಕ್ರಿಪ್ಟೋಗ್ರಾಫರ್‌ಗಳು ಸಂಸ್ಥೆಯ ಪ್ರಮುಖ ಸೂಕ್ಷ್ಮ ಮಾಹಿತಿಯನ್ನು ಅನಧಿಕೃತ ಹ್ಯಾಕಿಂಗ್, ಬದಲಾವಣೆ, ನಖಲು ಅಥವಾ ಅಳಿಸುವಿಕೆಯಿಂದ ರಕ್ಷಿಸುತ್ತಾರೆ ಮತ್ತು ಸಂಸ್ಥೆಯ ಭದ್ರತಾ ವ್ಯವಸ್ಥೆಗಳು ಮತ್ತು ಅಲ್ಗಾರಿದಮ್‌ಗಳಲ್ಲಿನ ದೌರ್ಬಲ್ಯಗಳನ್ನು ಪತ್ತೆಹಚ್ಚಿ ಅದಕ್ಕೆ ಬಲವಾದ ಭದ್ರತಾ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುತ್ತಾರೆ. ಅದಲ್ಲದೆ ಅವರು ಗಣಿತ, ಅಂಕಿ ಅಂಶ ಮತ್ತು ಸಂಖ್ಯಾಶಾಸ್ತ್ರ ಬಳಸಿ ಮಾಹಿತಿ ಸಂರಕ್ಷಿಸಲು ಸಂಸ್ಥೆಗಾಗಿ ಹೊಸ ಎನ್‌ಕ್ರಿಪ್ಶನ್/ಡಿಕ್ರ್ಯಪ್ಶನ್ ಅಲ್ಗಾರಿದಮ್‌/ತಂತ್ರಗಳನ್ನು ರೂಪಿಸುತ್ತಾರೆ.

ಈ ಹುದ್ದೆಗೆ ಅವರು ಗಣಿತ/ಕಂಪ್ಯೂಟರ್/ಸಂಖ್ಯಾಶಾಸ್ತ್ರ ಸಂಭಂದಿತ  ವಿಷಯದಲ್ಲಿ ಪದವಿ/ಡಿಪ್ಲೋಮ ಹೊಂದಿದ್ದರೆ ಉತ್ತಮ, ಮುಖ್ಯವಾಗಿ ಅವರಿಗೆ ವಿವಿಧ ಆಪರೇಟಿಂಗ್ ಸಿಸ್ಟಮ್, ಲೀನಿಯರ್ ಆಲ್ಜೀಬ್ರಾ, ಕ್ರಿಪ್ಟೋಗ್ರಫಿ, ಸೆಕ್ಯೂರಿಟಿ ಉಪಕರಣ/ಪರಿಕರಗಳ ಜ್ಞಾನ, ಪ್ರೋಗ್ರಾಮಿಂಗ್ ಮತ್ತು ಸ್ಕ್ರಿಪ್ಟಿಂಗ್ ಕೌಶಲ್ಯಗಳು ಇರಬೇಕು. ಇದರ ಜೊತೆಗೆ  ತಾಂತ್ರಿಕವಲ್ಲದ ಕೌಶಲ್ಯಗಳಾದ ವಿಶ್ಲೇಷಣಾತ್ಮಕ ಚಿಂತನೆ, ಸಮಸ್ಯೆ ಪರಿಹಾರ, ಸಂವಹನ, ತಂಡ ಪ್ರವೃತ್ತಿ ಮತ್ತು ಸೂಕ್ಷ್ಮ ದೃಷ್ಟಿ ಇರಬೇಕು. ಉದ್ಯಮ ಪ್ರಮಾಣೀಕರಣಗಳಾದ  Certified Encryption Specialist (ECES), CompTIA Security + ಮತ್ತು Certified Information Systems Security Professional (CISSP) ನಿಮಗೆ ಉತ್ತಮ ಉದ್ಯೋಗ/ಸಂಬಳ ಪಡೆಯಲು ಸಹಾಯಕವಾಗಬಹುದು. ಈ ಉದ್ಯೋಗಕ್ಕೆ ನೀವು ಮೊದಲ ವರ್ಷದಲ್ಲಿ 6-15 ಲಕ್ಷದವರೆಗೆ ಸಂಬಳವನ್ನು ನೀರಿಕ್ಷಿಸಬಹುದು. ಇಲ್ಲಿ ನೀವು ಸೈಬರ್ ಕ್ರಿಪ್ಟೋಗ್ರಾಫರ್ ನಿಂದ ಶುರು ಮಾಡಿ ಸೀನಿಯರ್/ಲೀಡ್ ಕ್ರಿಪ್ಟೋಗ್ರಾಫರ್, ಕ್ರಿಪ್ಟೋಗ್ರಾಫಿಕ್ ಅನಲಿಸ್ಟ್/ಸ್ಪೆಷಲಿಸ್ಟ್/ಕನ್ಸಲ್ಟೆಂಟ್/ರೀಸರ್ಚೆರ್/ಸೈಂಟಿಸ್ಟ್ ಹುದ್ದೆವರೆಗೂ ಹೋಗಬಹುದು.

ಸೈಬರ್ ಸೆಕ್ಯೂರಿಟಿ ಕೌಶಲ್ಯಗಳನ್ನು ಎಲ್ಲಿ ಕಲಿಯಬಹುದು?

ನೀವು ಮೇಲೆ ತಿಳಿಸಿದ ತಂತ್ರಿಕ ಮತ್ತು ತಾಂತ್ರಿಕವಲ್ಲದ ಕೌಶಲ್ಯಗಳನ್ನು ಕಲಿಯಲು ನೀವು ಆಫ್‌ಲೈನ್ ಅಥವಾ ಆನ್ಲೈನ್ ಮಾದ್ಯಮದಲ್ಲಿ ಕಲಿಯಬಹುದು. ಆಫ್‌ಲೈನ್ ಮಾದ್ಯಮದಲ್ಲಿ ನೀವು ಕಾಲೇಜುಗಳಲ್ಲಿ (ಕರ್ನಾಟಕ ಮತ್ತು ಭಾರತ) ಮತ್ತು ಆನ್ಲೈನ್ ಮಾಧ್ಯಮದಲ್ಲಿ ಕೂಡ ಕಲಿಯಬಹುದು. ಅದು ಡಿಪ್ಲೋಮ, ಪದವಿ, ಸ್ನಾತಕೋತ್ತರ ಪದವಿ ಅಥವಾ ಸರ್ಟಿಫಿಕೇಷನ್ ಕೋರ್ಸ್ ಆಗಿರಬಹುದು, ಇಂತಹ ಕೋರ್ಸಗಳು ನಿಮಗೆ ಉಚಿತವಾಗಿ (YouTube, udemy, simplilearn ಇತ್ಯಾದಿ) ಕೂಡ ದೊರೆಯುತ್ತದೆ, ಆದರೆ ಕಲಿತ ಜ್ಞಾನದ ಪ್ರಮಾಣೀಕರಣಕ್ಕಾಗಿ ನೀವು ಮೇಲೆ ತಿಳಿಸಿದ ನಿಮ್ಮ ನೇಚ್ಚಿನ ಉದ್ಯೋಗಕ್ಕೆ ಅವಶ್ಯಕವಾದ ಸರ್ಟಿಫಿಕೇಷನ್ಸ್ ಅನ್ನು ಮಾಡಿಕೊಳ್ಳಬೇಕಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ