Election

ಚುನಾವಣೆ ಸಂಬಂಧಿತ ಸೈಬರ್ ವಂಚನೆಗಳ ಬಗ್ಗೆ ಎಚ್ಚರದಿಂದಿರಿ

ಈ ಅಂಕಣ ಚುನಾವಣೆ ಸಂಬಂಧಿತ ಸೈಬರ್ ವಂಚನೆಗಳ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.

ಹ್ಯಾರಿಸ್ ತಮ್ಮ ಶಾಲೆಯ ವಾಟ್ಸಾಪ್ ಗುಂಪಿನಲ್ಲಿ ತಮ್ಮ ಸ್ನೇಹಿತ ಹಾಕಿದ ವಾಟ್ಸಾಪ್ ಸಂದೇಶ – “ಬಿಜೆಪಿ ಉಚಿತ ರೀಚಾರ್ಜ್ ಯೋಜನೆ, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಭಾರತೀಯ ಬಳಕೆದಾರರಿಗೆ 3 ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ. ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು 3 ತಿಂಗಳ *ಉಚಿತ ರೀಚಾರ್ಜ್*(ಕೊನೆಯ ದಿನಾಂಕ – 15 ಮಾರ್ಚ್ 2024) ಪಡೆಯಿರಿ” ಓದಿ ಅದನ್ನು ನಂಬಿದರು ಮತ್ತು ಲಿಂಕ್ ಅನ್ನು ಕ್ಲಿಕ್ ಮಾಡಿದರು. ಅದರಿಂದ ಅವರ ಫೋನ್ ಹ್ಯಾಕ್ ಆಗುತ್ತದೆ ಮತ್ತು ಅವರು ಗಮನಿಸಿದ ಮೊದಲ ವಿಷಯವೆಂದರೆ ಮೇಲಿನ ಸಂದೇಶವು ಅವರ ವಾಟ್ಸಾಪ್‌ನಲ್ಲಿರುವ ಎಲ್ಲಾ ಸಂಪರ್ಕಗಳು ಮತ್ತು ಗುಂಪುಗಳಿಗೆ ಕಳುಹಿಸಲಾಗಿದೆ ಎಂದು.

ರಾಷ್ಟ್ರೀಯ ಚುನಾವಣಾ ಪ್ರಚಾರ ಪ್ರಾರಂಭವಾಗಿದೆ ಮತ್ತು ಮೇಲಿನ ಸೈಬರ್ ಹಗರಣದಂತೆಯೇ ಅನೇಕ ಇತರ ಚುನಾವಣಾ ಸಂಬಂಧಿತ ಹಗರಣಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿವೆ. ಸುದ್ದಿಯಲ್ಲಿರುವ ಇತರ ಕೆಲವು ಪ್ರಮುಖ ಸೈಬರ್ ವಂಚನೆಗಳು ಹೀಗಿವೆ :

 • ನಿಮ್ಮ ವೋಟರ್ ಐಡಿ ವಿವರಗಳನ್ನು ಪರಿಶೀಲಿಸಲು ಅಥವಾ ನಿಮ್ಮ ವೋಟರ್ ಐಡಿ ನಿಷ್ಕ್ರಿಯಗೊಳ್ಳುತ್ತದೆ, ತಡೆಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಎಂಬ ಸಾಮಾಜಿಕ ಎಂಜಿನಿಯರಿಂಗ್ ವಿಧಾನಗಳನ್ನು ಬಳಸಿ ನಡೆಸುವ ಫಿಶಿಂಗ್ ದಾಳಿಗಳು ಜಾಸ್ತಿಯಾಗುತ್ತಿವೆ, ಇಲ್ಲಿ ಮತದಾರರು ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ಮಾಲ್‌ವೇರ್ ಅನ್ನು ಸ್ಥಾಪಿಸುವುದು ಅಥವಾ ಅವರಿಂದ ಫೋನ್ ಸಂಖ್ಯೆ, ಆಧಾರ್, ವೋಟರ್ ಐಡಿ ಮತ್ತು ಇತರ ಅವರ ವೈಯಕ್ತಿಕ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸಲು ಪ್ರೇರೇಪಿಸಲಾಗುತ್ತದೆ.
 • ರಾಜಕೀಯ ನಾಯಕರ ಆಳವಾದ ನಕಲಿ(ಡೀಪ್ ಫೇಕ್) ವೀಡಿಯೊಗಳು ಅಥವಾ ನಕಲಿ ಸಮೀಕ್ಷೆಯ ಫಲಿತಾಂಶಗಳನ್ನು ಮತದಾನದ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಅಥವಾ ಕೋಮುಗಲಭೆಯನ್ನು ಪ್ರಚೋದಿಸಲು ವೈರಲ್ ಮಾಡಲಾಗುತ್ತದೆ.
 • ಮುಗ್ಧ ಅನುಯಾಯಿಗಳನ್ನು ಲೂಟಿ ಮಾಡುವ ಅಥವಾ ವಂಚಿಸುವ ಉದ್ದೇಶದಿಂದ ಅವರಿಗೆ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳ ಪರವಾಗಿ ಲಿಂಕ್‌ಗಳು ಅಥವಾ QR ಕೋಡ್‌ಗಳೊಂದಿಗೆ ನಕಲಿ ನಿಧಿ ಸಂಗ್ರಹಿಸುವ ಇಮೇಲ್‌ಗಳನ್ನು ಪ್ರಸಾರ ಮಾಡಲಾಗುತ್ತದೆ.
 • DDoS ಸೈಬರ್ ದಾಳಿಗಳು ಅಥವಾ Ransomware ದಾಳಿಗಳ ಮೂಲಕ ನಿರ್ಣಾಯಕ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಅಡ್ಡಿಪಡಿಸುವ ಪ್ರಯತ್ನ ಮಾಡುತ್ತಾರೆ.

ತುಂಬಾ ವೈರಲ್ಲಾದ ಸುಳ್ಳು ಸುದ್ದಿಯೊಂದರ ಕುರಿತು ಬಿಬಿಸಿ, ಕರ್ನಾಟಕದಲ್ಲಿ ಯಾವುದೇ ಚುನಾವಣಾ ಪೂರ್ವ ಸಮೀಕ್ಷೆಯನ್ನು ನಿಯೋಜಿಸಿಲ್ಲ ಎಂದು ಸ್ಪಷ್ಟೀಕರಣವನ್ನು ನೀಡಬೇಕಾಯಿತು. ಚುನಾವಣಾ ಆಯೋಗವು cVijil ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದು, ಅದರಲ್ಲಿ ಈ ಮೇಲಿನ ಯಾವುದೇ ಸಮಸ್ಯೆಗಳನ್ನು ಸಾರ್ವಜನಿಕರು ವರದಿ ಮಾಡುವ ಅವಕಾಶವಿರುತ್ತದೆ.

ಇಂತಹ ಚುನಾವಣೆ ಸಂಬಂಧಿತ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು:-

 • ಅಪರಿಚಿತ ಜನರಿಂದ ಬಂದ ಎಲ್ಲಾ ಡಿಜಿಟಲ್ ವಹಿವಾಟುಗಳು ಮತ್ತು ಸಂದೇಶಗಳು/ಆಫರ್‌ಗಳಿಗಾಗಿ ಯಾವಾಗಲೂ ‘ಶೂನ್ಯ ನಂಬಿಕೆ, ತಾಳ್ಮೆ ಮತ್ತು ದೃಢೀಕರಣ’ ತತ್ವವನ್ನು ಅನುಸರಿಸಿ.
 • ನಿಮಗೆ ಬಂದ ಸುದ್ದಿ ಅಥವಾ ಮಾಹಿತಿಯ ಮೇಲೆ ಕಾರ್ಯನಿರ್ವಹಿಸುವ ಮೊದಲು ಯಾವಾಗಲೂ ಮೂಲವನ್ನು ಪರಿಶೀಲಿಸಿ ಮತ್ತು ಸುದ್ದಿ ಅಸಲಿ ಅಥವಾ ನಕಲಿಯೇ ಎಂದು ಪರಿಶೀಲಿಸಿ.
 • ಹೈಪರ್‌ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ ಅಥವಾ ಅಪರಿಚಿತರಿಂದ ಸಂದೇಶ ಅಥವಾ ಮೇಲ್‌ನಲ್ಲಿ ಒದಗಿಸಲಾದ ಯಾವುದೇ ಅಪ್ಲಿಕೇಶನ್ ಅನ್ನು ಸ್ಥಾಪಿಸಬೇಡಿ.
 • ಆಧಾರ್ ಅಥವಾ ಪ್ಯಾನ್ ವಿವರಗಳು ಅಥವಾ ನಿಮ್ಮ ಫೋನ್ ಸಂಖ್ಯೆಯಂತಹ ವೈಯಕ್ತಿಕ ಸೂಕ್ಷ್ಮ ಮಾಹಿತಿಯನ್ನು ಎಂದಿಗೂ ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ.
 • ನಿಮ್ಮ ಸಾಧನಗಳಲ್ಲಿ ಯಾವಾಗಲೂ ಉತ್ತಮ ಆಂಟಿವೈರಸ್, ಫೈರ್‌ವಾಲ್ ಮತ್ತು VPN ಸಾಫ್ಟ್‌ವೇರ್ ಅನ್ನು ಬಳಸಿ ಮತ್ತು ಇತ್ತೀಚಿನ ಭದ್ರತಾ ಪ್ಯಾಚ್‌ಗಳೊಂದಿಗೆ ಅದನ್ನು ನವೀಕರಿಸುತ್ತಿರಿ.
 • ನಿಮ್ಮ ಫೋನ್ ಮತ್ತು ಕಂಪ್ಯೂಟರ್ ನ ಆಪರೇಟಿಂಗ್ ಸಿಸ್ಟಮ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ನಿಯಮಿತವಾಗಿ ನವೀಕರಿಸಿ.

ನೀವು ಅಂತಹ ವಂಚನೆಗೆ ಬಲಿಯಾಗಿದ್ದರೆ :-

ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ವೆಬ್‌ಸೈಟ್ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ವಂಚನೆಯ ಬಗ್ಗೆ ಚುನಾವಣಾ ಆಯೋಗ ಮತ್ತು ಆಯಾ ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌/ಆಪ್ ನಲ್ಲಿ ವರದಿ ಮಾಡಿ ಮತ್ತು ದೂರು ನೀಡಿ. ಪೊಲೀಸರ ಸಹಾಯದಿಂದ ನೀವು ವರ್ಗಾಯಿಸಿದ ಮೊತ್ತದ ಮೇಲೆ ಡೆಬಿಟ್ ಫ್ರೀಜ್ ಮಾಡಿಸಿ. ನಿಮ್ಮ ಸಾಧನವು ಮಾಲ್‌ವೇರ್‌ ಸೋಂಕಿಗೆ ಒಳಗಾಗಿದೆ ಎಂದು ನೀವು ಭಾವಿಸಿದರೆ, ಅದನ್ನು ಡೇಟಾ ಬ್ಯಾಕಪ್ ತೆಗೆದುಕೊಂಡ ನಂತರ ಫಾರ್ಮ್ಯಾಟ್ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.

ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಪರಿಹಾರಗಳು :-

ನಿಮ್ಮ ಹತ್ತಿರದ ಸೈಬರ್ ಅಥವಾ ಸಾಮಾನ್ಯ ಅಡಿಯಲ್ಲಿ  ಪೊಲೀಸ್ ಠಾಣೆಯಲ್ಲಿ ನೀವು ಕ್ರಿಮಿನಲ್ ಪ್ರಕರಣವನ್ನು ಈ ಕೆಳಗಿನ ಕಾನೂನು ಸೆಕ್ಷನ್ ಅಥವಾ ನಿಮ್ಮ ಪ್ರಕರಣದ ಆಧಾರದ ಮೇಲೆ ಪೊಲೀಸರು ಸೂಚಿಸಿದ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಿಸಬಹುದು:

 • ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 378(ಕಳ್ಳತನ), 419 (ಸೋಗು ಹಾಕುವ ಮೂಲಕ ವಂಚನೆಗೆ ಶಿಕ್ಷೆ) ಮತ್ತು 420 (ವಂಚನೆ), ಸೆಕ್ಷನ್ 424(ಕಾನೂನುಬಾಹಿರವಾಗಿ ಡೇಟಾವನ್ನು ಹೊರತೆಗೆಯುವುದು), ಸೆಕ್ಷನ್ 441(ಕ್ರಿಮಿನಲ್ ಅತಿಕ್ರಮಣ), ಸೆಕ್ಷನ್ 467(ಫೋರ್ಜರಿ), ಸೆಕ್ಷನ್ 468( ಫೋರ್ಜರಿ/ನಕಲಿಗಾಗಿ ಶಿಕ್ಷೆ), ಮತ್ತು ಸೆಕ್ಷನ್ 471 (ಫೋರ್ಜರಿ/ನಕಲಿ ದಾಖಲೆಯ ಬಳಕೆ).
 • ಮಾಹಿತಿ ತಂತ್ರಜ್ಞಾನ ಕಾಯಿದೆ (IT) ಕಾಯಿದೆ 2000/08 ಸೆಕ್ಷನ್ 43 (ಕಂಪ್ಯೂಟರ್, ಕಂಪ್ಯೂಟಿಂಗ್ ಸಾಧನ ಇತ್ಯಾದಿಗಳಿಗೆ ಹಾನಿಗಾಗಿ ದಂಡ ಮತ್ತು ಪರಿಹಾರ), ಸೆಕ್ಷನ್ 65 (ಕಂಪ್ಯೂಟರ್ ಅನ್ನು ಹಾಳುಮಾಡುವುದು), ಸೆಕ್ಷನ್ 66 (ಕಂಪ್ಯೂಟರ್ ಸಂಬಂಧಿತ ಅಪರಾಧಗಳಿಗೆ ಶಿಕ್ಷೆ – ಡೇಟಾ ಕಳ್ಳತನ ಮಾಡುವ ವ್ಯಕ್ತಿ, ಸಿಸ್ಟಮ್ಗೆ ವೈರಸ್ ಹರಡುವುದು, ಡೇಟಾ ನಾಶಪಡಿಸುವುದು, ಹ್ಯಾಕಿಂಗ್ , ಅಥವಾ ಅಧಿಕೃತ ವ್ಯಕ್ತಿಗೆ ಕಂಪ್ಯೂಟರ್ ಅಥವಾ ನೆಟ್ವರ್ಕ್ಗೆ ಪ್ರವೇಶವನ್ನು ನಿರಾಕರಿಸುವುದು), ಸೆಕ್ಷನ್ 66C (ಇದು ಗುರುತಿನ ಕಳ್ಳತನಕ್ಕೆ ದಂಡವನ್ನು ಸೂಚಿಸುತ್ತದೆ ಮತ್ತು ವ್ಯಕ್ತಿಯ ಗುರುತಿನ ಮಾಹಿತಿಯನ್ನು ಮೋಸದಿಂದ ಅಥವಾ ಅಪ್ರಾಮಾಣಿಕವಾಗಿ ಬಳಸುವುದು) ಮತ್ತು ಸೆಕ್ಷನ್ 66D (ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ಸೋಗು ಹಾಕುವ ಮೂಲಕ ಮಾಡಿದ ವಂಚನೆಗೆ ಶಿಕ್ಷೆ).
ಚುನಾವಣೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ