‘OTP ಬಾಂಬಿಂಗ್’ ಎಂಬ ಹೊಸ ಸೈಬರ್ ವಂಚನೆ
ನನ್ನ ಆತ್ಮೀಯ ಗೆಳೆಯರೊಬ್ಬರು ಕಳೆದ ವಾರ ಮನೆಗೆ ಬಂದಿದ್ದರು, ಹಾಗೆ ಮಾತನಾಡುತ್ತ ನಂಗೆ ಕಳೆದ ಎರಡು ದಿನಗಳಿಂದ ಪ್ರತಿ ದಿನ ಬೆಳಗ್ಗೆ ಒಂಬತ್ತರಿಂದ ಸಂಜೆ ಆರರ ಮದ್ಯೆ ನೂರಕ್ಕೂ ಹೆಚ್ಚು OTP ಸಂದೇಶಗಳು ಬಂದಿವೆ. ನಾನು ಯಾವುದೇ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಲ್ಲ. ಆದರೂ ಬ್ಯಾಂಕ್, ಇ-ಕಾಮರ್ಸ್, ಫುಡ್ ಡೆಲಿವರಿ, ಸಾಲದ ಕಂಪನಿಗಳು, ವಿಮೆ ಸಂಸ್ಥೆಗಳು, ಸಾಮಾಜಿಕ ಜಾಲತಾಣಗಳು—ಹೀಗೆ ವಿವಿಧ ಸಂಸ್ಥೆಗಳ ಹೆಸರಿನಲ್ಲಿ ನಿರಂತರ OTPಗಳು ಬರುತ್ತಿವೆ, ಏನು ಮಾಡುವುದು ಎಂದು ಕೇಳಿದರು. ನಾನು ಆ ಸಂದೇಶಗಳಲ್ಲಿ ಪ್ರತಿಷ್ಠಿತ ಲಾಗಿನ್ ಆಗಲು ಬಂದಿರುವ OTP ಸಂಬಂದಿಸಿದ ವಿಮೆ ಸಂಸ್ಥೆಯೊಂದಕ್ಕೆ ಕರೆ ಮಾಡಿದೆ, ಅವರು “ಸರ್, ಇದು ನಮಗೆ ಕೂಡ ದೊಡ್ಡ ಸಮಸ್ಯೆಯಾಗಿದೆ..ನಿಮ್ಮ ತರಹದವರೇ ಅನೇಕರು ಈ ಸಂಬಂಧ ಕಳೆದ ವಾರದಿಂದ ಕರೆ ಮಾಡಿದ್ದಾರೆ, ನಾವು ಏನು ಮಾಡಲಾಗುವುದಿಲ್ಲ. ನೀವು ಸೈಬರ್ ಸಹಾಯವಾಣಿ 1930 ಫೋನ್ ನಂಬರಿಗೆ ಕರೆ ಮಾಡಿ ದೂರು ನೀಡಿ” ಎಂದರು. ಇಂತಹ ದೂರುಗಳು ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಹೆಚ್ಚಾಗುತ್ತಿವೆ. ಅನೇಕರು ಇದನ್ನು ಮೊಬೈಲ್ ದೋಷ ಅಥವಾ ನೆಟ್ವರ್ಕ್ ಸಮಸ್ಯೆ ಅಥವಾ ಯಾರೋ ತಮಾಷಿ ಮಾಡತಾಯಿದಾರೆ ಎಂದು ಭಾವಿಸುತ್ತಾರೆ. ಆದರೆ ಸೈಬರ್ ಭದ್ರತಾ ತಜ್ಞರ ಪ್ರಕಾರ ಇದು “OTP Bombing” ಅಥವಾ “OTP Flood Attack” ಎಂಬ ಹೊಸ ರೀತಿಯ ಸೈಬರ್ ದಾಳಿಯ ಲಕ್ಷಣವಾಗಿರಬಹುದು.
OTP ಬಾಂಬಿಂಗ್ ಎಂದರೇನು?
ಸಾಮಾನ್ಯವಾಗಿ ನಾವು ಬ್ಯಾಂಕ್ ವ್ಯವಹಾರ ಮಾಡುವಾಗ, ಲಾಗಿನ್ ಮಾಡುವಾಗ, ಹೊಸ ವೆಬ್ಸೈಟ್ನಲ್ಲಿ ನೋಂದಣಿ ಮಾಡುವಾಗ ಅಥವಾ ಪಾಸ್ವರ್ಡ್ ಬದಲಾಯಿಸುವಾಗ OTP ಬರುತ್ತದೆ. ಆದರೆ OTP ಬಾಂಬಿಂಗ್ನಲ್ಲಿ ಸೈಬರ್ ಅಪರಾಧಿಗಳು ಸ್ವಯಂಚಾಲಿತ ತಂತ್ರಾಂಶಗಳನ್ನು (www.bombitup.net/www.smsbomber.net ಅಥವಾ ಆಪ್) ಬಳಸಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೂರಾರು ವೆಬ್ಸೈಟ್ಗಳಲ್ಲಿ ಅಥವಾ ಅಪ್ಲಿಕೇಶನ್ಗಳಲ್ಲಿ ದಾಖಲಿಸುತ್ತಾರೆ ಮತ್ತು ನಿಮ್ಮ ಮೊಬೈಲ್ ಸಂಖ್ಯೆಗೆ ನಕಲಿ OTP ವಿನಂತಿಗಳನ್ನು ಕಳುಹಿಸುತ್ತಾರೆ.. ಪರಿಣಾಮವಾಗಿ ದಿನದಲ್ಲಿ ನಿಮ್ಮ ಮೊಬೈಲ್ಗೆ ನೂರಾರು OTPಗಳು ಬರಲಾರಂಭಿಸುತ್ತವೆ. ಬಹುತೇಕಬಾರಿ ಈ ಸಂದೇಶಗಳು ನಖಲಿ ಸಂದೇಶಗಳಾಗಿದ್ದು, ಅಸಲಿ ಸಂದೇಶದಂತೆ ಇರುತ್ತವೆ ಮತ್ತು ಇವು ನಿಜವಾದ ಬ್ಯಾಂಕ್ ಸಂಖ್ಯೆಯಿಂದಲೇ ಬಂದಂತೆ ಕಂಡುಬರುತ್ತವೆ. ಇದು ಕೇವಲ ಕಿರಿಕಿರಿ ಉಂಟುಮಾಡುವುದಕ್ಕಷ್ಟೇ ಅಲ್ಲ; ಅನೇಕ ಬಾರಿ ಇದರ ಹಿಂದೆ ದೊಡ್ಡ ಮೋಸದ ಸಂಚು ಅಡಗಿರುತ್ತದೆ. ನೀವು OTP ನೋಟಿಫಿಕೇಷನ್ಸ್ ನಿಲ್ಲಸಬಹುದು ಅಥವಾ ಬರುವ ಸಂದೇಶಗಳನ್ನು ಗಮನಿಸುವುದನ್ನು ನಿಲ್ಲಿಸಿದಾಗ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ದೋಚುತ್ತಾರೆ.
ಸೈಬರ್ ವಂಚಕರು ಇದನ್ನು ಏಕೆ /ಹೇಗೆ ಮಾಡುತ್ತಾರೆ?
ಬಹಳಷ್ಟು ಜನರಿಗೆ ಕಾಡುವ ಪ್ರಶ್ನೆಯೆಂದರೆ, “ನಾನು OTP ಹಂಚಿಕೊಳ್ಳದಿದ್ದರೆ ಅವರಿಗೆ ನನ್ನ ಹಣ ಹೇಗೆ ಸಿಗುತ್ತದೆ?” ಇಲ್ಲಿದೆ ವಂಚಕರ ಅಸಲಿ ಬುದ್ಧಿವಂತಿಕೆ:
೧. ಗಮನವನ್ನು ಬೇರೆಡೆ ಸೆಳೆಯುವುದು (Distraction) : ವಂಚಕರು ಈಗಾಗಲೇ ನಿಮ್ಮ ಇಮೇಲ್, ಬ್ಯಾಂಕ್ ಖಾತೆಯ ಪಾಸ್ವರ್ಡ್ ಅಥವಾ ಯೂಸರ್ ಐಡಿಯನ್ನು ಬೇರೆ ಯಾವುದೋ ಮೂಲದಿಂದ ಕದ್ದಿರುತ್ತಾರೆ. ಅವರು ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಲು ಪ್ರಯತ್ನಿಸುವಾಗ ಬರುವ ‘ಅಸಲಿ ಬ್ಯಾಂಕ್ OTP’ ನಿಮಗೆ ತಿಳಿಯಬಾರದು ಎಂಬ ಕಾರಣಕ್ಕೆ ಈ ನಕಲಿ OTP ಗಳ ಮಳೆಯನ್ನು ಸುರಿಸುತ್ತಾರೆ. ನೂರಾರು ನಕಲಿ ಸಂದೇಶಗಳ ನಡುವೆ ಆ ಒಂದು ಅಸಲಿ ಬ್ಯಾಂಕ್ ಸಂದೇಶ ನಿಮ್ಮ ಕಣ್ಣಿಗೆ ಬೀಳುವುದೇ ಇಲ್ಲ.
೨. ಗಾಬರಿಯಲ್ಲಿ OTP ಪಡೆಯುವುದು(Confusion) : ಸತತ ಸಂದೇಶಗಳಿಂದ ಬೇಸತ್ತು ನೀವು ಫೋನ್ ನೋಡುತ್ತಿರುವಾಗ ಸೈಬರ್ ಕಳ್ಳರು ಬ್ಯಾಂಕ್ ಅಧಿಕಾರಿಗಳಂತೆ ನಟಿಸಿ ಕರೆ ಮಾಡುತ್ತಾರೆ. “ನಿಮ್ಮ ಫೋನ್ಗೆ ಯಾರೋ ಹ್ಯಾಕ್ ಮಾಡಲು ಯತ್ನಿಸುತ್ತಿದ್ದಾರೆ, ಅದನ್ನು ತಡೆಯಲು ಕೊನೆಯದಾಗಿ ಬಂದ OTP ಸಂಖ್ಯೆಯನ್ನು ತಿಳಿಸಿ” ಎಂದು ನಂಬಿಸುತ್ತಾರೆ. ಗಾಬರಿಯಲ್ಲಿ ಜನರು ಆ ಅಸಲಿ OTP ಯನ್ನು ಹೇಳಿಬಿಡುತ್ತಾರೆ.
೩. ಮಿಥ್ಯಾ ಕರೆಗಳು (Fake/Missed Calls) : OTP ಮಳೆಯ ನಡುವೆಯೇ ಬ್ಯಾಂಕ್ ಖಾತೆಯ ಇ-ಸಿಮ್ (e-SIM) ಬದಲಾಯಿಸಲು ಅಥವಾ ಸಂಖ್ಯೆ ಬದಲಾಯಿಸಲು ಕೆಲವು ಮಿಸ್ಡ್ ಕಾಲ್ಗಳನ್ನು ನೀಡಿ ನಿಮ್ಮ ಸಿಮ್ ಕಾರ್ಡ್ ಅನ್ನೇ ನಿಷ್ಕ್ರಿಯಗೊಳಿಸುವ ತಂತ್ರವನ್ನೂ ಇವರು ಮಾಡುತ್ತಾರೆ.
OTP ಬಾಂಬಿಂಗ್ ದಾಳಿಗೆ ಒಳಗಾದರೆ ಏನು ಮಾಡಬೇಕು?
೧. ಯಾವುದೇ ಕಾರಣಕ್ಕೂ ಹೆದರಬೇಡಿ, ಗಾಬರಿಯಾಗಬೇಡಿ, ಮತ್ತು ಆತುರದಿಂದಾ ಪ್ರತಿಕ್ರಿಯಿಸಬೇಡಿ.
೨. ಬಂದ ಯಾವುದೇ ಎಸ್ಎಮ್ಎಸ್ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಅದಕ್ಕೆ ರಿಪ್ಲೈ ಮಾಡಬೇಡಿ.
೩. ನಿಮ್ಮ ಫೋನ್ ಅನ್ನು ಯಾವುದೇ ಕಾರಣಕ್ಕೂ ಫ್ಲೈಟ್ ಮೋಡ್ ಅಥವಾ ಆಫ್ ಮಾಡಬೇಡಿ. ವಂಚಕರು ಇದನ್ನೇ ಇಷ್ಟಪಡುತ್ತಾರೆ.
೪. ನಿಮಗೆ ಬರುವ ಸಂದೇಶಗಳಲ್ಲಿ ಯಾವುದೇ ಅನುಮಾನಾಸ್ಪದ ಬ್ಯಾಂಕ್ ವ್ಯವಹಾರಕ್ಕಾಗಿ ಗಮನಿಸಿ.
೫. ನಿಮ್ಮ ಎಲ್ಲಾ ಬ್ಯಾಂಕ್ ಅಕೌಂಟ್ ಪಾಸ್ವರ್ಡ್ ಮತ್ತು ಪಿನ್ ಕೋಡ್ ಅನ್ನು ಬದಲಾಯಿಸಿ.
೬. ಅಪರಿಚಿತ ಕರೆಗಳನ್ನು ಸ್ವೀಕರಿಸಬೇಡಿ, ಸ್ವೀಕರಿಸಿದರು OTP ಅಥವಾ ಯಾವುದೇ ಖಾಸಗಿ ಮಾಹಿತಿಯನ್ನು ಕೊಡಬೇಡಿ ಅಥವಾ ಅವರು ಹೇಳುವ ಲಿಂಕ್ ಕ್ಲಿಕ್ ಮಾಡಬೇಡಿ, QR ಕೋಡ್ ಸ್ಕ್ಯಾನ್ ಮಾಡಬೇಡಿ ಅಥವಾ ಯಾವುದೇ ಆಪ್ ಅನ್ನು ಇನ್ಸ್ಟಾಲ್ ಮಾಡಬೇಡಿ.
೭. 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ.
೮. ನಿಮ್ಮ ದೂರವಾಣಿ ಸಂಸ್ಥೆಗೆ ತಕ್ಷಣ ಕರೆ ಮಾಡಿ, ನಡೆದ ವಿಷಯ ತಿಳಿಸಿ.
೯. ನೀವು ಆಧಾರ್ ಕಾರ್ಡ್ ಮಾಹಿತಿ ಅಥವಾ ನಕಲು ಪ್ರತಿಯನ್ನು ಹಂಚಿಕೊಂಡಿದ್ದರೆ, ನಿಮ್ಮ ಆಧಾರ್ ಕಾರ್ಡ್ ಅನ್ನು ಆಧಾರ್ ವೆಬ್ಸೈಟ್ ಅಥವಾ mAadhaar ಅಪ್ಲಿಕೇಶನ್ನಲ್ಲಿ ನಿರ್ಬಂಧಿಸಿ. ೧೦. ನಿಮ್ಮ ಯಾವುದೊ ಲಿಂಕ್ ಕ್ಲಿಕ್ ಮಾಡೋ ಅಥವಾ ಆಪ್ ಇನ್ಸ್ಟಾಲ್ ಮಾಡಿದ್ದರಿಂದ ನಿಮ್ಮ ಸಾಧನವು ಮಾಲ್ವೇರ್ ಸೋಂಕಿಗೆ ಒಳಗಾಗಿದೆ ಎಂದು ನೀವು ಭಾವಿಸಿದರೆ, ಅದನ್ನು ಬ್ಯಾಕಪ್ ತೆಗೆದುಕೊಂಡ ನಂತರ ಫಾರ್ಮ್ಯಾಟ್ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.



