Right to Think

“ಯೋಚಿಸುವ ಹಕ್ಕು”: ಎಐ ಯುಗದ ಹೊಸ ಮಾನವ ಹಕ್ಕು

ತಿ ವ್ಯಕ್ತಿಗೂ ತನ್ನ ತಲೆ (ಮೆದಳು) ಬಳಸಿ ಸ್ವತಂತ್ರವಾಗಿ ಯೋಚಿಸುವ ಹಕ್ಕು ಇದೆ ಮತ್ತು ಆ ಹಕ್ಕನ್ನು ಯಾರೂ ಕಸಿದುಕೊಳ್ಳಬಾರದು, ಅದಕ್ಕೆ ಸರಕಾರ/ಕಾನೂನು ರಕ್ಷಣೆ ಬೇಕು. ಇದನ್ನೇ ನಾನು ನನ್ನ ಈ ಲೇಖನದಲ್ಲಿ ಪ್ರತಿಪಾದಿಸುತ್ತಿರುವುದು.

ಕಳೆದ ಭಾನುವಾರ “AI(Artificial Intelligence – ಕೃತಕ ಬುದ್ದಿಮತ್ತೆ) ಯುಗದಲ್ಲಿ ಶಿಕ್ಷಣ” ಎಂಬ ಸಂವಾದದಲ್ಲಿ ಡಾ. ಗುರುರಾಜ್ ಕರ್ಜಗಿಯವರಿಗೆ ಸಭಿಕರೊಬ್ಬರು AI ಬಳಕೆಯಿಂದ ನಮ್ಮ(ವಿದ್ಯಾರ್ಥಿಗಳ) ಸ್ವತಂತ್ರ ಆಲೋಚನಾ ಶಕ್ತಿಗೆ ಕುಂದು ಬರುತ್ತಿದ್ದೀಯೆ ಎಂದು ಪ್ರಶ್ನಿಸಿದರು. ಹಾಗೆ ನಾನು ನನ್ನ ಲಿಂಕ್ಡ್ ಇನ್ ನಲ್ಲಿ ನೋಡುತ್ತಿದ್ದಾಗ ಅದರಲ್ಲಿ ಹಿರಿಯ ವಕೀಲರಾದ ಡಾ. ಪ್ರಶಾಂತ್ ಮಾಲಿ ಅವರು ಬರೆದ “ಯೋಚಿಸುವ ಹಕ್ಕು: AI ಯುಗದಲ್ಲಿ ಅರಿವಿನ ಸ್ವಾತಂತ್ರ್ಯವು ಮೂಲಭೂತ ಹಕ್ಕಾಗಲಿದೆ” ಎಂಬ ಲೇಖನವನ್ನು ಓದಿದೆ. ನಮ್ಮ ಸಂವಿದಾನ ನಮಗೆ ಆರು ಮೂಲಭೂತ ಹಕ್ಕುಗಳನ್ನು ನೀಡಿದೆ, ನಮ್ಮ ಸರ್ವೋಚ್ಚ ನ್ಯಾಯಾಲಯವು ತಮ್ಮ ವಿವಿಧ ತೀರ್ಪಿನ ಮೂಲಕ ಇನ್ನು ಅನೇಕ ಹಕ್ಕುಗಳನ್ನು ನೀಡಿದೆ. ಈ AI ಯುಗದಲ್ಲಿ ನಮಗೆ ಲಭ್ಯವಿರುವ ಹಕ್ಕುಗಳ ಸಾಲಿನಲ್ಲಿ “ಯೋಚಿಸುವ ಹಕ್ಕು” ಕೂಡ ಸೇರ್ಪಡೆಯಾಗುವ ಕಾಲ ದೂರವಿಲ್ಲಾ ಅಂತ ನನಗೆ ಅನಿಸುತ್ತದೆ.

ನೀವು ಇಂದು ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಹಿಡಿದು ಸ್ಕ್ರಾಲ್ ಮಾಡಿದ್ದಿರಾ? ಯೂಟ್ಯೂಬ್‌ನಲ್ಲಿ ಒಂದು ವೀಡಿಯೊ ನೋಡಿದ ಬಳಿಕ ಮತ್ತೊಂದು, ಮತ್ತೊಂದು… ಹೀಗೆ ಗಂಟೆಗಟ್ಟಲೆ ಕಳೆದು ಹೋಗಿದ್ದು ಗೊತ್ತಾಗಲಿಲ್ಲವೇ? ಇನ್‌ಸ್ಟಾಗ್ರಾಮ್‌/ಫೇಸ್ಬುಕ್ ನಲ್ಲಿ ನಿಮಗೆ ಯಾವ ವಿಷಯ ಹಿಡಿಸುತ್ತದೆ ಎಂದು ಅದು ನಿಮಗಿಂತ ಮೊದಲೇ ತಿಳಿದಂತೆ ತೋರುತ್ತದೆಯೇ? ಹಾಗಾದರೆ, ನಿಮ್ಮ ಆಲೋಚನೆಗಳು ನಿಜಕ್ಕೂ ನಿಮ್ಮವೇ, ಅಥವಾ ಯಾರೋ ಒಂದು ಕಂಪ್ಯೂಟರ್ ಪ್ರೋಗ್ರಾಮ್ ನಿಮ್ಮ ಪರವಾಗಿ ಯೋಚಿಸಿ ನಿಮಗೆ ತಿಳಿಸುತ್ತಿದೆಯೇ? ಇದು ಕೇವಲ ತಾತ್ವಿಕ ಪ್ರಶ್ನೆಯಲ್ಲ. ಇದು ಇಂದು ನಾವು ಎದುರಿಸುತ್ತಿರುವ ಅತ್ಯಂತ ತುರ್ತು ಸಾಮಾಜಿಕ ಬಿಕ್ಕಟ್ಟು. ಕೃತಕ ಬುದ್ಧಿಮತ್ತೆ ಮತ್ತು ಅದರ ಅಲ್ಗಾರಿದಮ್‌ಗಳು ಇಂದು ನಮ್ಮ ದೈನಂದಿನ ಜೀವನದ ಪ್ರತಿ ಮೂಲೆಯಲ್ಲೂ ತೂರಿಕೊಂಡಿದ್ದು, ನಾವು ಅರಿಯದೆಯೇ ನಮ್ಮ ನಿಲುವುಗಳನ್ನು, ನಮ್ಮ ಭಾವನೆಗಳನ್ನು, ನಮ್ಮ ರಾಜಕೀಯ ದೃಷ್ಟಿಕೋನಗಳನ್ನು ರೂಪಿಸುತ್ತಿವೆ. ಇದಕ್ಕೆ ತಡೆಯೊಡ್ಡದಿದ್ದರೆ, ಮನುಷ್ಯನ ಇತಿಹಾಸದಲ್ಲೇ ಅತ್ಯಂತ ಗಹನ ಸ್ವಾತಂತ್ರ್ಯ ಹರಣ ನಡೆಯಲಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

2018ರಲ್ಲಿ ಒಂದು ಆಘಾತಕಾರಿ ಸತ್ಯ ಹೊರಬಂದಿತ್ತು. ‘ಕ್ಯಾಂಬ್ರಿಡ್ಜ್ ಅನಾಲಿಟಿಕಾ’ ಎಂಬ ಕಂಪೆನಿ, ಫೇಸ್‌ಬುಕ್ ಮೂಲಕ ಸುಮಾರು 8.7 ಕೋಟಿ ಬಳಕೆದಾರರ ಮನಸ್ಸಿನ ಪ್ರೊಫೈಲ್ ತಯಾರಿಸಿ, ಅಮೆರಿಕ ಚುನಾವಣೆ ಮತ್ತು ಬ್ರೆಕ್ಸಿಟ್ ಮತದಾನದ ಮೇಲೆ ಪ್ರಭಾವ ಬೀರಿತ್ತು. ನೀವು ಫೇಸ್‌ಬುಕ್‌ನಲ್ಲಿ ಯಾವ ಪೇಜ್‌ಗಳಿಗೆ ‘ಲೈಕ್’ ಒತ್ತಿದ್ದೀರಿ, ಯಾವ ಲಿಂಕ್‌ ಕ್ಲಿಕ್ ಮಾಡಿದ್ದೀರಿ — ಇದರಿಂದ ಅವರು ನಿಮ್ಮ ಬೌದ್ಧಿಕ ದುರ್ಬಲ ಜಾಗಗಳನ್ನು ಕಂಡುಹಿಡಿದು, ಅಲ್ಲಿಗೇ ಗುರಿ ಇಟ್ಟ ಜಾಹೀರಾತು ತೋರಿಸಿ, ನಿಮ್ಮ ಮತ ಯಾರಿಗೆ ಹಾಕಬೇಕು ಎಂದು ನಿರ್ಧರಿಸಿದ್ದರು! ಇದು ಕೇವಲ ಡೇಟಾ ಕಳ್ಳತನವಲ್ಲ — ಇದು ನಿಮ್ಮ ಆಲೋಚನೆಯ ಕಳ್ಳತನ. ಆ ಕಂಪೆನಿ ನಿಮ್ಮ ಮನಸ್ಸಿನ ಒಳಗೆ ಹೊಕ್ಕು, ನೀವು ಏನನ್ನು ನಂಬಬೇಕು ಎಂದು ನಿಮಗೆ ಅರಿಯದಂತೆ ನಿರ್ಧರಿಸಿತ್ತು. ಇಂಥ ಅಪಾಯಕ್ಕೆ ಅಮೆರಿಕದ ಫೆಡರಲ್ ಟ್ರೇಡ್ ಕಮಿಷನ್ ಫೇಸ್‌ಬುಕ್ ಮಾಲೀಕ ಮೆಟಾ ಕಂಪೆನಿಗೆ ₹41,000 ಕೋಟಿ ದಂಡ ವಿಧಿಸಿತು. ಇದು ಭಾರತದಲ್ಲೂ ಜೋರಾಗೆ ಸುದ್ದಿಮಾಡಿತ್ತು, ಇದರ ಬಗ್ಗೆ ದೀರ್ಘ CBI ತನಿಖೆ ಕೂಡ ಆಗಿತ್ತು. ಭಾರತದಲ್ಲಿ ಈ  ‘ಯೋಚಿಸುವ ಹಕ್ಕನ್ನು’ ಉಲ್ಲಂಘಿಸಿದ ಅಪರಾಧಕ್ಕೆ ಯಾವುದೇ ಶಿಕ್ಷೆ ಸಾದ್ಯವಿಲ್ಲಾ ಯಾಕೆಂದರೆ ಅದು ಸಂವಿಧಾನ ಅಥವಾ ಸರ್ವೋಚ್ಚ ನ್ಯಾಯಾಲಯದ ಪ್ರಕಾರ ನಮಗೆ ಲಭ್ಯವಿರುವ ಹಕ್ಕುಗಳಲ್ಲಿ ಒಂದಲ್ಲಾ.

ಇನ್ನೊಂದೆಡೆ, ಎಲೋನ್ ಮಾಸ್ಕ್ ಅವರ ‘ನ್ಯೂರೋಲಿಂಕ್’ ನಂತಹ ತಂತ್ರಜ್ಞಾನಗಳು ನೇರವಾಗಿ ಮನುಷ್ಯನ ಮೆದುಳಿಗೆ ಚಿಪ್ ಅಳವಡಿಸಿ ನಮ್ಮ ಬುದ್ದಿಯನ್ನು ಕಂಪ್ಯೂಟರ್ ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿವೆ. ಇದು ಪಾರ್ಶ್ವವಾಯು ಪೀಡಿತರಿಗೆ ವರವಾಗಬಹುದಾದರೂ, ನಮ್ಮ ಮೆದುಳಿನ ಅರಿವಿನ ಗೌಪ್ಯತೆ ಏನಾಗಬಹುದು ಎಂಬ ಆತಂಕವಿದೆ. ಮೆದುಳಿನ ಸಂಕೇತಗಳನ್ನು ಯಾರಾದರೂ ಹ್ಯಾಕ್ ಮಾಡಿದರೆ ಅಥವಾ ಆ ಮಾಹಿತಿಯನ್ನು ಕಂಪನಿಗಳಿಗೆ ಮಾರಾಟ ಮಾಡಿದರೆ, ನಮ್ಮ ಆಲೋಚನೆಗಳಿಗೆ ಬೆಲೆಯೇ ಇರುವುದಿಲ್ಲ.

ಏನಿದು “ಯೋಚಿಸುವ ಹಕ್ಕು”?

ಸಾಮಾನ್ಯವಾಗಿ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ತಿಳಿದಿದೆ. ಅಂದರೆ ನಮ್ಮ ಮನಸ್ಸಿನಲ್ಲಿರುವ ವಿಚಾರವನ್ನು ಹೊರಹಾಕುವ ಹಕ್ಕು. ಆದರೆ “ಯೋಚಿಸುವ ಹಕ್ಕು” ಇದಕ್ಕಿಂತ ಭಿನ್ನವಾದುದು. ಇದು ವಿಚಾರಗಳು ಹೊರಬರುವ ಮೊದಲಿನ ಹಂತ, ಇದು ನಮ್ಮ ಮನಸ್ಸಿನೊಳಗೆ ಒಂದು ಅಭಿಪ್ರಾಯ ಅಥವಾ ನಂಬಿಕೆ ರೂಪುಗೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದ್ದು. ಯಾವುದೇ ತಾಂತ್ರಿಕ ಒತ್ತಡ, ಮ್ಯಾನಿಪ್ಯುಲೇಷನ್ ಅಥವಾ ನಮ್ಮ ದೌರ್ಬಲ್ಯಗಳನ್ನು ಬಳಸಿಕೊಳ್ಳುವ ತಂತ್ರಜ್ಞಾನಗಳಿಂದ ಮುಕ್ತವಾಗಿ ನಮಗೆ ಬೇಕಾದುದನ್ನು ನಾವು ಯೋಚಿಸುವಂತಿರಬೇಕು. ಡಾ. ಮಾಲಿ ಅವರ ಪ್ರಕಾರ, ಯೋಚಿಸುವ ಹಕ್ಕು (Right to Think ಅಥವಾ Cognitive Liberty) ಎಂದರೆ ನಮ್ಮ ಮನಸ್ಸಿನ ಸ್ವಯಂ ನಿರ್ಧಾರದ ಹಕ್ಕು. AI ಅಥವಾ ಅಲ್ಗಾರಿದಮ್ ನಮ್ಮ ಯೋಚನೆಗಳನ್ನು ಬದಲಾಯಿಸದಂತೆ ರಕ್ಷಿಸುವುದು, ಇದು ಜೀವನದ ಹಕ್ಕು, ಗೌಪ್ಯತೆ, ಮಾತನಾಡುವ ಸ್ವಾತಂತ್ರ್ಯ ಮುಂತಾದ  ಹಕ್ಕುಗಳಿಗಿಂತ ಬೇರೆ. ಇದು ಮನಸ್ಸಿನ ಒಳಗಿನ ‘ಪೂರ್ವ-ಅಭಿವ್ಯಕ್ತಿ’ ಹಂತವನ್ನು ರಕ್ಷಿಸುತ್ತದೆ.

ಡಾ. ಪ್ರಶಾಂತ್ ಮಾಲಿ ಅವರ ಲೇಖನದಲ್ಲಿ, ಈ ಹಕ್ಕು ಐದು ಪ್ರಮುಖ ಸ್ತಂಭಗಳ ಮೇಲೆ ನಿಂತಿದೆ:

  • ಮಾನಸಿಕ ಹಸ್ತಕ್ಷೇಪ ನಿಷೇಧ : ಜಾಹೀರಾತುಗಳು ಅಥವಾ AI ಅಲ್ಗಾರಿದಮ್‌ಗಳು ನಮ್ಮ ಸುಪ್ತ ಮನಸ್ಸನ್ನು ನಿಯಂತ್ರಿಸಬಾರದು. ಅಂದರೆ ನಮ್ಮ ಅರಿವಿಗೆ ಬಾರದಂತೆ ನಮ್ಮ ನಿಲುವು ಬದಲಿಸುವ AI ತಂತ್ರಗಳಿಗೆ ಸಂಪೂರ್ಣ ನಿಷಿದ್ಧ.
  • ಅರಿವಿನ ಗೌಪ್ಯತೆ : ನಮ್ಮ ಮೆದುಳಿನ ಡೇಟಾ ಅಥವಾ ಆಲೋಚನೆಗಳ ಮಾದರಿಗಳು ಅತ್ಯಂತ ಖಾಸಗಿಯಾಗಿರಬೇಕು ಹಾಗಾಗಿ ಅದರ ರಕ್ಷಣೆ ಮುಖ್ಯ ಮತ್ತು ಅದರ ಉಲ್ಲಂಘನೆ ಶಿಕ್ಷಾರ್ಹ ಅಪರಾಧವಾಗಬೇಕು.
  • ಸ್ವತಂತ್ರ ಜ್ಞಾನಾರ್ಜನೆ : ನಮಗೆ ಕೇವಲ ಒಂದು ರೀತಿಯ ಮಾಹಿತಿಯನ್ನೇ ತೋರಿಸಿ ನಮ್ಮ ದೃಷ್ಟಿಕೋನವನ್ನು ಕುಗ್ಗಿಸಬಾರದು. ವಿಭಿನ್ನ ಅಭಿಪ್ರಾಯಗಳನ್ನು ನೋಡುವ ಹಕ್ಕು ನಮಗಿರಬೇಕು.
  • ಮಾನಸಿಕ ಸಮಗ್ರತೆ ಮತ್ತು ಸುಸ್ಥಿತಿ : ನಮ್ಮ ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುವಂತಹ ತಂತ್ರಜ್ಞಾನಗಳಿಂದ ರಕ್ಷಣೆ ಮತ್ತು ಉದ್ದೇಶಪೂರ್ವಕವಾಗಿ ಮಾನಸಿಕ ಹಾನಿ ಮಾಡುವ AI ವ್ಯವಸ್ಥೆ ನಿಷೇಧಾರ್ಹವಾಗಬೇಕು.
  • ಸ್ವಯಂ ನಿರ್ಧಾರದ ಹಕ್ಕು : ನಮ್ಮ ಬದುಕಿನ ನಿರ್ಧಾರಗಳಲ್ಲಿ AI ಎಷ್ಟು ಹಸ್ತಕ್ಷೇಪ ಮಾಡಬೇಕು ಎಂಬುದನ್ನು ನಾವೇ ನಿರ್ಧರಿಸಬೇಕು. ನಮ್ಮ ಮಹತ್ತರ ತೀರ್ಮಾನಗಳಲ್ಲಿ AI ಸಲಹೆ/ನಿರ್ಧಾರಗಳನ್ನು ತೆಗೆದುಕೊಳ್ಳಲು ನಿರಾಕರಿಸುವ ಹಕ್ಕು ನಮಗಿರಬೆಕು.

“ಯೋಚಿಸುವ ಹಕ್ಕು”ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು. ಪ್ರತಿ ವ್ಯಕ್ತಿಗೂ ತನ್ನದೇ ಆದ ಆಲೋಚನೆಗಳು, ಅಭಿಪ್ರಾಯಗಳು ಮತ್ತು ನಂಬಿಕೆಗಳನ್ನು ರೂಪಿಸಿಕೊಳ್ಳುವ ಹಕ್ಕು ಇದೆ. ಅವನು ಅದನ್ನು ಇಟ್ಟುಕೊಳ್ಳಬಹುದು, ಬೇಕಾದರೆ ಬದಲಾಯಿಸಬಹುದು. ಯಾರೂ ವ್ಯಕ್ತಿಯ ಮನಸ್ಸನ್ನು ಮೋಸದಿಂದ, ಒತ್ತಡದಿಂದ ಅಥವಾ ಗುಪ್ತವಾಗಿ ತಂತ್ರಜ್ಞಾನ ಬಳಸಿ ಬದಲಾಯಿಸಬಾರದು. ಮನುಷ್ಯನಿಗೆ ತಿಳಿಯದೆ ಅವನ ಮನಸ್ಸಿನ ದುರ್ಬಲತೆಗಳನ್ನು ಬಳಸಿಕೊಂಡು ಆಲೋಚನೆಗಳನ್ನು ಬದಲಾಯಿಸುವುದು ತಪ್ಪು. ಪ್ರತಿ ವ್ಯಕ್ತಿಗೂ ತನ್ನ ತಲೆ (ಮೆದಳು) ಬಳಸಿ ಸ್ವತಂತ್ರವಾಗಿ ಯೋಚಿಸುವ ಹಕ್ಕು ಇದೆ ಮತ್ತು ಆ ಹಕ್ಕನ್ನು ಯಾರೂ ಕಸಿದುಕೊಳ್ಳಬಾರದು, ಅದಕ್ಕೆ ಸರಕಾರ/ಕಾನೂನು ರಕ್ಷಣೆ ಬೇಕು. ಇದನ್ನೇ ನಾನು ನನ್ನ ಈ ಲೇಖನದಲ್ಲಿ ಪ್ರತಿಪಾದಿಸುತ್ತಿರುವುದು.

AI ನಮ್ಮ ಚಿಂತನೆಯನ್ನು ಹೇಗೆ ನಿಯಂತ್ರಿಸುತ್ತಿದೆ?

ChatGPT ಅಥವಾ Google Gemini ಯಂಥ ಜನರೇಟಿವ್ AI ಪರಿಕರಗಳನ್ನು ಹೆಚ್ಚಾಗಿ ಬಳಸುವ ಜನರಲ್ಲಿ ಸ್ವತಃ ಆಳವಾಗಿ ಯೋಚಿಸುವ, ವಿಶ್ಲೇಷಿಸುವ ಶಕ್ತಿ ಕ್ರಮೇಣ ಕಡಿಮೆಯಾಗುತ್ತಿದೆ. ಇದನ್ನು ತಜ್ಞರು ‘ಕಾಗ್ನಿಟಿವ್ ಅಟ್ರಾಫಿ’ ಎಂದು ಕರೆಯುತ್ತಾರೆ — ಅಂದರೆ ಮಿದುಳಿನ ‘ಸ್ನಾಯು’ ಸಡಿಲಗೊಳ್ಳುವಿಕೆ. , ಗೂಗಲ್‌ನಲ್ಲಿ ಹಲವು ಮೂಲಗಳನ್ನು ತಾಳೆ ಮಾಡಿ ತಿರ್ಮಾನ ತೆಗೆದುಕೊಳ್ಳುವ ಕ್ರಿಯೆ ನಮ್ಮ ಮಿದುಳಿಗೆ ವ್ಯಾಯಾಮ ನೀಡುತ್ತಿತ್ತು, ಆದರೆ Perplexity, SearchGPT ಅಥವಾ Microsoft Copilot ನಂಥ ಹೊಸ AI ಹುಡುಕಾಟ ಪ್ರಣಾಳಿಗಳು ನಿಮಗೆ ನೇರ ಉತ್ತರ ನೀಡುತ್ತವೆ. AI ಆ ಕೆಲಸ ಮಾಡಿದಾಗ, ನಮ್ಮ ಮಿದುಳು ನಿಷ್ಕ್ರಿಯವಾಗುತ್ತದೆ. ಇದರ ಜತೆ, ‘ಎಕೋ ಚೇಂಬರ್’ ಎಫೆಕ್ಟ್ ಎಂಬ ಅಪಾಯವೂ ಇದೆ. ನೀವು ಯಾವ ವಿಚಾರವನ್ನು ಒಪ್ಪಿದ್ದೀರೊ ಅದಕ್ಕೆ ಸಂಬಂಧಿಸಿದ ವಿಷಯಗಳನ್ನೇ AI ಅಲ್ಗಾರಿದಮ್ ನಿಮಗೆ ತೋರಿಸುತ್ತ ಹೋಗುತ್ತದೆ. ಕ್ರಮೇಣ  ನಿಮ್ಮ ಆಲೋಚನ ಶಕ್ತಿ ದಿನ ಕಳೆದಂತೆ ಕಿರಿದಾಗುತ್ತ ಹೋಗುತ್ತದೆ, ಇತರ ದೃಷ್ಟಿಕೋನಗಳ ಸಂಪರ್ಕ ಕಡಿದುಕೊಳ್ಳುತ್ತದೆ.

ವಿಶ್ವದಲ್ಲಿ ಮತ್ತು ಭಾರತದಲ್ಲಿ ಏನು ನಡೆಯುತ್ತಿದೆ ಮತ್ತು ಏನು ಮಾಡಬೇಕು?

2021ರಲ್ಲಿ ಚಿಲಿ ದೇಶ ತನ್ನ ಸಂವಿಧಾನದಲ್ಲಿ ‘ನ್ಯೂರೋ ರೈಟ್ಸ್’ (ಮಿದುಳಿನ ಹಕ್ಕುಗಳು) ಅನ್ನು ಮೂಲಭೂತ ಹಕ್ಕಾಗಿ ಸೇರಿಸಿದ ವಿಶ್ವದ ಮೊಟ್ಟ ಮೊದಲ ದೇಶವಾಯಿತು, ಅದರಲ್ಲಿ ಮಿದುಳಿನ ಚಟುವಟಿಕೆ ಮತ್ತು ಅದರಿಂದ ಪಡೆಯಲಾದ ಡೇಟಾ ಕಾನೂನಿನ ರಕ್ಷಣೆಗೆ ಅರ್ಹ ಎಂದು ಹೇಳಲಾಗಿದೆ. 2024ರಲ್ಲಿ ಚಿಲಿ ಸರ್ವೋಚ್ಛ ನ್ಯಾಯಾಲಯ, ಗ್ರಾಹಕರ ಮಿದುಳು ಸಂಬಂಧಿ ಡೇಟಾ ಸಂಗ್ರಹಿಸಿದ ಪ್ರಕರಣದಲ್ಲಿ ಶಿಕ್ಷೆ ಕೂಡ ಒಂದು ಕಂಪೆನಿಗೆ ವಿಧಿಸಿತ್ತು. ಯುರೋಪ್ ಒಕ್ಕೂಟ 2024ರ ಕೃತಕ ಬುದ್ಧಿಮತ್ತೆ ಕಾಯ್ದೆ (EU AI Act) ಮೂಲಕ ಕೆಳಗಿನ ಚಟುವಟಿಕೆಗಳನ್ನು ನಿಷೇಧಿಸಿದೆ: ಮಾನಸಿಕ ದುರ್ಬಲ ಜಾಗಗಳನ್ನು ದುರ್ಬಳಕೆ ಮಾಡಿಕೊಳ್ಳುವ AI, ಸುಪ್ತ ಮನಸ್ಸಿಗೆ ತಲುಪುವ ತಂತ್ರಗಳ ಮೂಲಕ ಜನರ ನಡವಳಿಕೆ ಬದಲಿಸುವ AI ಮತ್ತು ಮಕ್ಕಳ ಮನೋ ದೌರ್ಬಲ್ಯ ಶೋಷಿಸುವ AI ವ್ಯವಸ್ಥೆಗಳು. ಅಮೆರಿಕದ ಮಿನ್ನೆಸೋಟ ರಾಜ್ಯ 2024ರಲ್ಲಿ ‘ಮಾನಸಿಕ ಗೋಪ್ಯತೆ ಹಕ್ಕು’ ಮತ್ತು ‘ಕಾಗ್ನಿಟಿವ್ ಲಿಬರ್ಟಿ’ಯನ್ನು ತನ್ನ ಕಾನೂನಿನಲ್ಲಿ ಮಾನ್ಯ ಮಾಡಿತು.

ಭಾರತ 2023ರ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ (DPDPA) ಮೂಲಕ ದತ್ತಾಂಶ/ಡೇಟಾ ರಕ್ಷಣೆಯ ಕುರಿತು ಒಂದು ಹೆಜ್ಜೆ ಮುಂದೆ ಇಟ್ಟಿದ್ದರೂ, ಅದು ಮಾನಸಿಕ ಸ್ವಾಯತ್ತೆ ಕುರಿತು ಮೌನ ತಳೆದಿದೆ. ಭಾರತದ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳಾದ “ಸ್ವಾತಂತ್ರ್ಯದ ಹಕ್ಕು”, “ಅಭಿವ್ಯಕ್ತಿ ಸ್ವಾತಂತ್ರ್ಯ” ಮತ್ತು “ಶೋಷಣೆಯಿಂದ ರಕ್ಷಣೆಯ ಹಕ್ಕು”,  ನಮಗೆ AI ಅಲ್ಗಾರಿತಮ್ ಮತ್ತು ಜಾಹೀರಾತುಗಳಿಂದ ನಡೆಸುವ  ಆಲೋಚನಾ ಕ್ರಮವನ್ನು ಬದಲಿಸುವ ಪ್ರೋಗ್ರಾಂಗಳಿಂದ ನಮ್ಮನ್ನು ರಕ್ಷಿಸುವುದಿಲ್ಲಾ. ಆದರೂ, 2017ರ ಸುಪ್ರೀಂ ಕೋರ್ಟ್‌ನ ‘ಪುಟ್ಟಸ್ವಾಮಿ’ ತೀರ್ಪಿನಲ್ಲಿ “ಮನಸ್ಸಿನ ಗೌಪ್ಯತೆಯು ದೇಹದ ಗೌಪ್ಯತೆಯಷ್ಟೇ ಮುಖ್ಯ” ಎಂದು ಹೇಳಿರುವುದು ನಮ್ಮ “ಯೋಚಿಸುವ ಹಕ್ಕಿಗೆ” ಸಂವಿಧಾನಾತ್ಮಕ ಅಡಿಪಾಯ ನೀಡಿದೆ. ಈ ತೀರ್ಪನ್ನು ಆಧಾರವಾಗಿ ತೆಗೆದುಕೊಂಡು, ‘ಯೋಚಿಸುವ ಹಕ್ಕನ್ನು’ (Right to Think) ಸಂವಿಧಾನದ 21ನೇ ಮತ್ತು 19(1)(a) ವಿಧಿಗಳ ಅಡಿಯಲ್ಲಿ ಮೂಲಭೂತ ಹಕ್ಕಾಗಿ ಮಾನ್ಯ ಮಾಡುವ ಸಮಯ ಬಂದಿದೆ.

ನಾವು ಏನು ಮಾಡಬೇಕು? ವ್ಯಕ್ತಿಗತ ಮತ್ತು ಸಮಾಜದ ಜವಾಬ್ದಾರಿಗಳು :-

  • ವ್ಯಕ್ತಿಗತ: ಪ್ರೈವಸಿ ಸೆಟ್ಟಿಂಗ್‌ಗಳು ಬದಲಿಸಿ. ಅರಿವು ಮೂಡಿಸಿಕೊಳ್ಳಿ. AI ಚಾಟ್‌ಬಾಟ್‌ಗಳಿಗೆ ವೈಯಕ್ತಿಕ ಮಾಹಿತಿ ಕೊಡಬೇಡಿ. ಮಕ್ಕಳಿಗೆ ಆನ್‌ಲೈನ್ ಸಮಯ ಮಿತಿ ವಿದಿಸಿ. ಡಿಜಿಟಲ್ ಉಪವಾಸ ಪ್ರಯತ್ನಿಸಿ ಮತ್ತು ಕಾನೂನು ರಕ್ಷಣೆಗಾಗಿ ಆಗ್ರಹಿಸಿ.
  • ಸರ್ಕಾರ: ಸಂವಿಧಾನ ಸುಧಾರಣೆ. DPDPAಗೆ ಮಾನಸಿಕ ಸ್ವಾತಂತ್ರ್ಯ ಸೇರಿಸಿ. 1930 ಹೆಲ್ಪ್‌ಲೈನ್‌ಗೆ AI ಸಂಬಂಧಿ ದೂರುಗಳಿಗೆ ವಿಶೇಷ ವಿಭಾಗ ತೆರೆಯುವುದು.
  • ಕಂಪನಿಗಳು: ಡಾರ್ಕ್ ಪ್ಯಾಟರ್ನ್ ನಿಷೇದಿಸುವುದು. ಅಲ್ಗಾರಿದಮ್ ಪಾರದರ್ಶಕತೆ ತರುವುದು. ಮಾನವ ನೀತಿಗಳನ್ನು ಅನುಸರಿಸುವುದು.

ಇದು ಕೇವಲ ಕಾನೂನು ಅಲ್ಲ – ನಮ್ಮ ಮಾನವತ್ವದ ಪ್ರಶ್ನೆ. AI ನಮ್ಮ ಸಹಾಯಕನಾಗಿರಬೇಕು, ಯಜಮಾನನಲ್ಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ