Dasara

ದಸರಾ, ನವದುರ್ಗೆಯರು ಮತ್ತು ಸೈಬರ್ ರಾಕ್ಷಸರು!

ಈ ಲೇಖನದಲ್ಲಿ ನಾನು ದಸರ ಹಬ್ಬದ ಈ ಸಂದರ್ಭದಲ್ಲಿ, ನವ ದುರ್ಗೆಯರ ಉದಾಹರಣೆ ಬಳಸಿ ಸೈಬರ್ ಅಪರಾಧಗಳನ್ನು ತಡೆಗಟ್ಟುವ ಉಪಾಯಗಳ ಬಗ್ಗೆ ತಿಳಿಸಿಕೊಡಲಿದ್ದೇನೆ

ಎಲ್ಲರಿಗೂ ದಸರಾ/ನವರಾತ್ರಿ ಹಬ್ಬದ ಶುಭಾಶಯಗಳು.. ಮೈಸೂರು ಅಂದ್ರೆ ದಸರಾ, ದಸರಾ ಅಂದ್ರೆ ಮೈಸೂರು! ನವರಾತ್ರಿಯ ಒಂಬತ್ತು ದಿನವೂ ನವದುರ್ಗೆಯರ ಪೂಜೆ, ಬೋಂಬೆ, ನಗರದುದ್ದಕ್ಕೂ ದೀಪಾಲಂಕಾರ, ಚಾಮುಂಡಿ ಮಹಿಷಾಸುರನನ್ನು ಮರ್ದಿಸಿದ ವಿಜಯದಶಮಿಯಂದು ಅರಮನೆಯಲ್ಲಿ ಜಂಬೂ ಸವಾರಿ, ಹತ್ತಾರು ಬಗೆಯ ಸಿಹಿ ತಿಂಡಿ, ಹಬ್ಬದ ಸಂಭ್ರಮಕ್ಕೆ ಮಿತಿ ಇಲ್ಲ. ಕಾಲ ಬದಲಾಗಿದೆ, ಈಗಿನ ದಿನಗಳಲ್ಲಿ ಮಹಿಷಾಸುರರು ಕೋಡಿನಿಂದ ಬರೋದಿಲ್ಲ. ಒಂದು ಮೊಬೈಲ್, ಲ್ಯಾಪ್‌ಟಾಪ್, ಮತ್ತು ಇಂಟರ್‌ನೆಟ್ ಸಂಪರ್ಕ ಇದ್ದರೆ ಸಾಕು, ನಮ್ಮ ಕಷ್ಟಪಟ್ಟು ಸಂಪಾದಿಸಿದ ದುಡ್ಡನ್ನ, ನಮ್ಮ ಖಾಸಗಿ ಮಾಹಿತಿಯನ್ನ ಸುಲಭವಾಗಿ ದೋಚಿಕೊಂಡು ಹೋಗುತ್ತಾರೆ. ಇವರೇ ರೀ, ಸೈಬರ್ ರಾಕ್ಷಸರು! ಇವರನ್ನು ಹೇಗೆ ಎದುರಿಸೋದು ಅಂತ ತಿಳಿಯೋಣ ಬನ್ನಿ, ನವದುರ್ಗೆಯರ ಅವತಾರಗಳ ಉದಾಹರಣೆಯೊಂದಿಗೆ.

  1. ಶೈಲಪುತ್ರಿ – ಎಚ್ಚರಿಕೆಯ ಪ್ರಥಮ ಹೆಜ್ಜೆ : ಇವರು ಪರ್ವತಗಳ ರಾಜ ಹಿಮವಂತನ ಮಗಳು, ಪರ್ವತದ ತರಹವೇ ಮಜಬೂತಾಗಿ ನಮ್ಮ ಸೈಬರ್ ಸೇಫ್ಟಿ ಇರಬೇಕು. ಅಂದರೆ ನಮ್ಮ ಖಾಸಗಿ ಮಾಹಿತಿ, ಪಾಸ್ವರ್ಡ್ ಮತ್ತು ಪಿನ್ ಸೈಬರ್ ಖದೀಮರಿಗೆ ಸಿಗದಂತೆ ಅಥವಾ ಊಹಿಸಲು ಸಾಧ್ಯವಾಗದಂತೆ ಭದ್ರವಾಗಿಡಬೇಕು.
  2. ಬ್ರಹ್ಮಚಾರಿಣಿ – ಏಕಾಗ್ರತೆ : ಬ್ರಹ್ಮಚಾರಿಣಿ ದೇವಿಯಂತೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ, ನಿಮಗೆ ಬರುವ ಅನಾಮದೇಯ ಕರೆ, ಸಂದೇಶ ಮತ್ತು ಇಮೇಲ್ ಗಳಿಗೆ ನೀವು ಕೂಡಲೇ  ಪ್ರತಿಕ್ರಿಯಸಬೇಡಿ, ಸಾವಧಾನವಾಗಿ ಅರ್ಥ ಮಾಡಿಕೊಂಡ ನಂತರವೇ ನಿಮ್ಮ ಉತ್ತರ ಬರಲಿ. ಅಂದರೆ ಎಲ್ಲಾ ಡಿಜಿಟಲ್ ವಹಿವಾಟುಗಳಿಗೆ ಯಾವಾಗಲೂ ‘ತಾಳ್ಮೆ, ಶೂನ್ಯ ನಂಬಿಕೆ ಮತ್ತು ದೃಢೀಕರಣ’ ತತ್ವವನ್ನು ಅನುಸರಿಸಿ, ಉದಾಹರಣೆಗೆ OTP ಯಾವ ಕಾರಣಕ್ಕೆ ತಿಳಿದು ನೀಡಿ.   
  3. ಚಂದ್ರಘಂಟ – ಅಲರ್ಟ್ ಆಗಿ : ಹ್ಯಾಕರ್‌ಗಳು ನಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತಾರೆ. ಅನಾಮಧೇಯ ವೈಫೈಗಳನ್ನು ಬಳಸುವಾಗ, ಪಬ್ಲಿಕ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಬಳಸುವಾಗ ಚಂದ್ರಘಂಟ ದೇವಿಯಂತೆ ನಿಮ್ಮ ಸ್ಮಾರ್ಟ್‌ಫೋನ್/ಕಂಪ್ಯೂಟರ್ ಹ್ಯಾಕ್ ಆಗದಂತೆ  ಎಚ್ಚರದಿಂದ ಇರಿ.
  4. ಕುಷ್ಮಾಂಡಾ – ಸೃಷ್ಟಿಕರ್ತೆ : ಸೈಬರ್ ಖದೀಮರು AI ಬಳಸಿ ಪ್ರಚಲಿತವಿರುವ ಮತ್ತು ನವೀನ ಸುದ್ದಿಯ ಡೀಪ್‌ಫೇಕ್ ಚಿತ್ರ ಅಥವಾ ವಿಡಿಯೋ ಅಥವಾ ಆಡಿಯೋ ಸೃಷ್ಟಿಸಿ ನಿಮ್ಮ ನಂಬಿಕೆಯನ್ನು ಗಳಿಸಿ ನಿಮ್ಮನ್ನು ವಂಚಿಸುತ್ತಾರೆ. ನೀವು ಕುಷ್ಮಾಂಡಾ ದೇವಿಯ ಸೃಷ್ಟಿಯಲ್ಲಿರುವಂತೆ ಅದು ಒಳ್ಳೆಯದ/ನಿಜವಾದ ಅಥವಾ ಕೆಟ್ಟದ/ಫೇಕ್/ನಕಲಿಯ ಎಂದು ಫ್ಯಾಕ್ಟ್ ಚೆಕ್ ಮಾಡಿದ ನಂತರವೇ ನಂಬಿ ಪ್ರತಿಕ್ರಿಯಿಸಿ.
  5. ಸ್ಕಂದಮಾತಾ – ರಕ್ಷಣೆ/ಕಾಳಜಿ : ಪೋಷಕರು ಸ್ಕಂದಮಾತೆಯಂತೆ ತಮ್ಮ ಮಕ್ಕಳ ಆನ್ಲೈನ್ ಚಟುವಟಿಕೆಗಳ ಕಾವಲುಗಾರರಾಗಬೇಕು. ನೀವು ಮಕ್ಕಳ ಮೇಲಾಗುವ ಸೈಬರ್ ಬೆದರಿಸುವಿಕೆ/ಕಿರುಕುಳ/ಮಾನಹಾನಿ/ಸ್ಟಾಕಿಂಗ್/ವೋಯರಿಸಂ, ಸೇಡಿನ ಅಶ್ಲೀಲತೆ, ಡಾಕ್ಸಿಂಗ್, ಕ್ಯಾಟ್‌ ಫಿಶಿಂಗ್ ಇತ್ಯಾದಿ ಸೈಬರ್ ಅಪರಾಧಗಳಿಂದ ಅವರನ್ನು ರಕ್ಷಿಸಬೇಕು.
  6. ಕಾತ್ಯಾಯಿನಿ – ಯೋಧೆ : ಕಾತ್ಯಾಯಿನಿಯ ಕತ್ತಿಯಂತೆ, ಕಾನೂನನ್ನು ನಿಮ್ಮ ಕವಚವನ್ನಾಗಿ ಬಳಸಿ. ನೀವೇನಾದರೂ ಸೈಬರ್ ಅಪರಾಧಕ್ಕೆ ಬಲಿಯಾದರೆ ನಿಮ್ಮ ವಿಧಿಯ ಬಗ್ಗೆ ಮರುಗದೆ, ಹೆದರದೆ ಕಾತ್ಯಾಯಿನಿ ಯೋಧೆಯಂತೆ ಕೂಡಲೇ ಸೈಬರ್ ಸಹಾಯವಾಣಿ 1930 ಅಥವಾ cybercrime.gov.in ಜಾಲತಾಣದಲ್ಲಿ ಅಥವಾ ಹತ್ತಿರದ ಪೊಲಿಯೇ ಠಾಣೆಯಲ್ಲಿ ವರದಿ ಮಾಡಿ ಹಣ ವಾಪಸ್ ಬರುವ ತನಕ ಹೋರಾಡಿ.
  7. ಕಾಲರಾತ್ರಿ – ಕತ್ತಲ ನಾಶ : ಕತ್ತಲು ನಾಶವಾಗಲು ಬೆಳಕು ಬೇಕು, ಹಾಗೆಯೇ ಸೈಬರ್ ಅಪರಾಧದಿಂದ ಬಚಾವಾಗಲು ಅಥವಾ ಅದನ್ನು ನಾಶ ಮಾಡಲು ಇರುವ ಸುಲಭ ಉಪಾಯವೆಂದರೆ ಅದರ ಬಗ್ಗೆ ಜ್ಞಾನವನ್ನು ವೃದ್ದಿಸಿಕ್ಕೊಳ್ಳುವುದು. ನಾನು ಸೈಬರ್ ಅಪರಾಧ ಜಾಗೃತಿಯ ಬಗ್ಗೆ ಪುಸ್ತಕ ಮತ್ತು  120ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದೇನೆ, 80ಕ್ಕೂ ಹೆಚ್ಚು ವಿಡಿಯೋ ಮಾಡಿದ್ದೇನೆ. ಅದನ್ನೆಲ್ಲಾ ನೀವು ನನ್ನ ಜಾಲತಾಣ www.cybermithra.in ದಲ್ಲಿ ಓದಬಹುದು ಮತ್ತು ನಿಮ್ಮ ಜ್ಞಾನವನ್ನು ವೃದ್ದಿಸಿಕ್ಕೊಳ್ಳಬಹುದು.
  8. ಮಹಾಗೌರಿ – ಶುದ್ಧತೆ : ಇದನ್ನು ನಾವು ಸೈಬರ್ ಹೈಜಿನ್/ನೈರ್ಮಲ್ಯ ಅಂಥಾನೂ ಗ್ರಹಿಸಬಹುದು. ನಿಮ್ಮ ಸ್ಮಾರ್ಟ್‌ಫೋನ್/ಕಂಪ್ಯೂಟರ್ ನಲ್ಲಿ ಒಳ್ಳೆಯ ಅಂಟಿವೈರಸ್, ಫೈರ್ವಾಲ್ ಮತ್ತು vpn ಸಾಫ್ಟ್ವೇರ್ ಬಳಸಿ ಮತ್ತು ಅದನ್ನು ನಿಯಮಿತವಾಗಿ ನವೀಕರಿಸಿ. ಹಾಗೆ ನಿಮ್ಮ ಪ್ರಮುಖ ಖಾತೆಗಳಿಗೆ ಕಠಿಣ ಪಾಸ್ವರ್ಡ್ ಬಳಸಿ ಮತ್ತು ಮಲ್ಟಿ ಫ್ಯಾಕ್ಟರ್ ಆಥೆಂಟಿಕೇಷನ್ ಅಳವಡಿಸಿ.
  9. ಸಿದ್ಧಿದಾತ್ರಿ – ಸಿದ್ಧಿ ಕೊಡುವವಳು : ಸೈಬರ್ ಅಪರಾಧದ ವಿಷಯದಲ್ಲಿ, ಇದು ನಿರಂತರವಾಗಿ ಕಲಿಯುವುದನ್ನು ಸೂಚಿಸುತ್ತದೆ. ಸೈಬರ್‌ ಅಪರಾಧ ತಂತ್ರಗಳು ಮತ್ತು ವಿಧಾನಗಳು ನಿರಂತರವಾಗಿ ಬದಲಾಗುತ್ತಿರುತ್ತವೆ. ಹೊಸ ವಂಚನೆಗಳು, ವೈರಸ್‌ಗಳು, ಮತ್ತು ಆನ್‌ಲೈನ್ ಸ್ಕ್ಯಾಮ್‌ಗಳು ಪ್ರತಿದಿನವೂ ಸೃಷ್ಟಿಯಾಗುತ್ತವೆ. ಹಾಗಾಗಿ, ಸಿದ್ಧಿಧಾತ್ರಿ ದೇವಿಯಂತೆ, ನಾವು ಜ್ಞಾನಕ್ಕಾಗಿ ಹಾತೊರೆಯಬೇಕು ಮತ್ತು ಹೊಸ ವಂಚನೆಗಳ ಬಗ್ಗೆ ತಿಳಿದುಕ್ಕೊಂಡು ಜಾಗೃತರಾಗಿರಬೇಕು.

ಕಡೆಯದಾಗಿ ನವರಾತ್ರಿಯ ಹಬ್ಬದಂತೆ ನಮ್ಮ ಬದುಕಿನಲ್ಲೂ ನಾವು ಒಳ್ಳೆಯದನ್ನು ಆರಿಸಿಕೊಳ್ಳಬೇಕು. ಸೈಬರ್ ರಾಕ್ಷಸರು ನಮ್ಮ ಬದುಕನ್ನು ಹಾಳುಮಾಡದಂತೆ ನಾವೇ ಎಚ್ಚರಿಕೆ ವಹಿಸಬೇಕು. ದಸರ ಸಮಯದಲ್ಲಿ ಈ ನವದುರ್ಗೆ ಅವತಾರಗಳನ್ನು ನೆನಪಿಸಿ, ವಿಜಯದಶಮಿಯಂದು ಚಾಮುಂಡಿ ಮಹಿಷಾಸುರನ ಸಂಹರಿಸಿದ ಹಾಗೆ ನಾವು ಸೈಬರ್ ಅಪರಾಧಗಳ ಬಗ್ಗೆ ನಮ್ಮ ಜ್ಞಾನವನ್ನು ವೃದ್ದಿಸಿಕ್ಕೊಂಡು, ನಮ್ಮೆಲ್ಲಾ ಡಿಜಿಟಲ್ ವ್ಯವಹಾರಗಳಲ್ಲಿ ಜಾಗೃತೆಯಿಂದಿದ್ದು ಸೈಬರ್ ಅಪರಾಧವೆಂಬ ಮಹಿಷಾಸುರನ ವದೆ ಮಾಡೋಣ.

ದಸರಾ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ