ಪಿನ್ ಕೋಡ್ಗಳಿಗೆ ವಿದಾಯ ಹೇಳಿ: DIGIPIN ಅನ್ನು ಸ್ವಾಗತಿಸಿ
DIGIPIN ಎಂಬುದು ಅಂಚೆ ಇಲಾಖೆಯು IIT ಹೈದರಾಬಾದ್ ಮತ್ತು NRSC, ISRO ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ರಾಷ್ಟ್ರವ್ಯಾಪಿ ಜಿಯೋಕೋಡೆಡ್ ವಿಳಾಸ ವ್ಯವಸ್ಥೆಯಾಗಿದೆ. ಇದು ಭಾರತವನ್ನು ಸರಿಸುಮಾರು 4m x 4m ಗ್ರಿಡ್ಗಳಾಗಿ (ಮನೆಗಳು, ಕಚೇರಿಗಳು, ಸಂಸ್ಥೆಗಳು, ಇತ್ಯಾದಿ) ವಿಭಜಿಸುತ್ತದೆ ಮತ್ತು ಪ್ರತಿ ಗ್ರಿಡ್ಗಳ ಅಕ್ಷಾಂಶ(latitude) ಮತ್ತು ರೇಖಾಂಶ(longitude) ನಿರ್ದೇಶಾಂಕಗಳ ಆಧಾರದ ಮೇಲೆ ವಿಶಿಷ್ಟವಾದ 10-ಅಕ್ಷರಗಳ ಆಲ್ಫಾನ್ಯೂಮರಿಕ್ DIGIPIN ಕೋಡ್ ಅನ್ನು ನಿಯೋಜಿಸುತ್ತದೆ. ದೊಡ್ಡ ಪ್ರದೇಶಗಳನ್ನು ಒಳಗೊಂಡಿರುವ ಸಾಂಪ್ರದಾಯಿಕ ಪಿನ್ ಕೋಡ್ಗಳಿಗಿಂತ ಭಿನ್ನವಾಗಿ, DIGIPIN ಆಸ್ತಿಯ ನಿಖರವಾದ ಸ್ಥಳವನ್ನು ಗುರುತಿಸುವ ವಿಶಿಷ್ಟ ಕೋಡ್ ಅನ್ನು ನೀಡುತ್ತದೆ. DIGIPIN ವ್ಯವಸ್ಥೆಯು ಪಿನ್ ಕೋಡ್ ದೋಷಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ದಕ್ಷತೆಯನ್ನು ಹೆಚ್ಚಿಸುವ ಮೂಲಕ ಆನ್ಲೈನ್ ಖರೀದಿದಾರರು, ಲಾಜಿಸ್ಟಿಕ್ಸ್(ಟ್ರಾವೆಲ್ಸ್, ಕೊರಿಯರ್ ಇತ್ಯಾದಿ) ಪೂರೈಕೆದಾರರು ಮತ್ತು ತುರ್ತು ಪ್ರತಿಕ್ರಿಯೆ ನೀಡುವವರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ನಿಖರ ಮತ್ತು ವೇಗದ ವಿತರಣೆಗಳನ್ನು ಖಚಿತಪಡಿಸಿಕೊಳ್ಳಲು ಬಳಕೆದಾರರು ತಮ್ಮ DIGIPIN ಅನ್ನು ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ನಂತಹ ಆನ್ಲೈನ್ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳೊಂದಿಗೆ ಹಂಚಿಕೊಳ್ಳಬಹುದು.
27ನೇ ಮೇ 2025 ರಂದು ಸಂವಹನ ಸಚಿವಾಲಯದ ಅಂಚೆ ಇಲಾಖೆಯು ರಾಷ್ಟ್ರೀಯ ಜಿಯೋಸ್ಪೇಷಿಯಲ್ ನೀತಿ 2022 ಕ್ಕೆ ಅನುಗುಣವಾಗಿ ‘ನಿಮ್ಮ ಡಿಜಿಪಿನ್ ಅನ್ನು ತಿಳಿದುಕೊಳ್ಳಿ’ ಮತ್ತು ‘ನಿಮ್ಮ ಪಿನ್ ಕೋಡ್ ಅನ್ನು ತಿಳಿದುಕೊಳ್ಳಿ’ ಎಂಬ ಎರಡು ಪರಿವರ್ತಕ ಹೊಸ ಡಿಜಿಟಲ್ ವೇದಿಕೆಗಳನ್ನು ಪ್ರಾರಂಭಿಸಿತು. ಇದು ಸುಧಾರಿತ ಜಿಯೋಸ್ಪೇಷಿಯಲ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಸಾರ್ವಜನಿಕ ಸೇವೆಗೆ ಬೆಂಬಲ ನೀಡುತ್ತದೆ. ಇದು ಬಳಕೆದಾರರು, ಸರ್ಕಾರಿ ಘಟಕಗಳು ಮತ್ತು ಖಾಸಗಿ ವಲಯದ ಸಂಸ್ಥೆಗಳ ನಡುವೆ ಸುರಕ್ಷಿತ ಮತ್ತು ಪರಿಣಾಮಕಾರಿ ಸಂವಹನಗಳನ್ನು ಬೆಂಬಲಿಸಲು, ವಿಳಾಸ ಮಾಹಿತಿ ನಿರ್ವಹಣೆಗೆ ಸಂಬಂಧಿಸಿದ ವ್ಯವಸ್ಥೆಯಾದ ಅಡ್ರೆಸ್ ಆಸ್ ಎ ಸರ್ವಿಸ್ (AaaS) ನೀಡುವುದು ಅಂಚೆ ಇಲಾಖೆಯ ದೂರ ದೃಷ್ಟಿಕೋನದ ಮೂಲಾಧಾರಳಲ್ಲೊಂದಾಗಿದೆ. ನಿಖರವಾದ ಸ್ಥಳ-ಆಧಾರಿತ ಗುರುತನ್ನು ಒದಗಿಸುವ ಮೂಲಕ DIGIPIN ವಿಳಾಸ ನಿರ್ವಹಣೆಯನ್ನು ಸರಳಗೊಳಿಸುತ್ತದೆ, ವಿಶೇಷವಾಗಿ ಸ್ಪಷ್ಟವಾಗಿ ಗುರಿತಿಸಲಾಗದ ಅಥವಾ ಬದಲಾಗುತ್ತಿರುವ ವಿಳಾಸಗಳನ್ನು ಹೊಂದಿರುವ ಪ್ರದೇಶಗಳು, ಗ್ರಾಮೀಣ ಪ್ರದೇಶಗಳು, ಕಾಡುಗಳು ಮತ್ತು ಸಾಗರಗಳಂತಹ ಸ್ಪಷ್ಟ ವಿಳಾಸ ಅಸ್ತಿತ್ವದಲ್ಲಿಲ್ಲದ ಪ್ರದೇಶಗಳಲ್ಲಿಯೂ ಇದು ಸಹಾಯ ಮಾಡುತ್ತದೆ.
‘ನಿಮ್ಮ DIGIPIN ಅನ್ನು ತಿಳಿದುಕೊಳ್ಳಿ’ ವೆಬ್ ಅಪ್ಲಿಕೇಶನ್ :-
ಇದು ನೀವು ನಿಖರವಾದ ಭೌಗೋಳಿಕ ಸ್ಥಳೀಕರಣ ಮಾಹಿತಿಯ ಆಧಾರದ ಮೇಲೆ ಅಥವಾ ಅಕ್ಷಾಂಶ ಮತ್ತು ರೇಖಾಂಶ ನಿರ್ದೇಶಾಂಕಗಳನ್ನು ನೀಡಿದಾಗ ಅದಕ್ಕೆ ಅನುಗುಣವಾದ DIGIPIN ಅನ್ನು ನೀಡುತ್ತದೆ. ‘ನಿಮ್ಮ DIGIPIN ಅನ್ನು ತಿಳಿದುಕೊಳ್ಳಿ’ ವೆಬ್ ಅಪ್ಲಿಕೇಶನ್ ತೆರೆಯಲು, ಯಾವುದೇ ವೆಬ್ ಬ್ರೌಸರ್ನಲ್ಲಿ “https://dac.indiapost.gov.in/mydigipin/home” ಎಂದು ಟೈಪ್ ಮಾಡಿ. ಅದರಲ್ಲಿ ನಿಮ್ಮ ಪ್ರಸ್ತುತ ಸ್ಥಳದ DIGIPIN ಅನ್ನು, ಅಕ್ಷಾಂಶ ಮತ್ತು ರೇಖಾಂಶ ವಿವರಗಳೊಂದಿಗೆ ಮತ್ತು ಸ್ಥಳದ ಮಾಹಿತಿ ಎಷ್ಟು ನಿಖರವಾಗಿದೆ ಎಂಬುದನ್ನು ಮೀಟರ್ಗಳಲ್ಲಿ ತೋರಿಸುತ್ತದೆ. ಪ್ರಸ್ತುತ ಈ ಅಪ್ಲಿಕೇಶನ್ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಮಾತ್ರ ಬೆಂಬಲಿಸುತ್ತದೆ. ಇದು ಬಳಕೆದಾರರಿಗೆ ನಿರ್ದಿಷ್ಟ DIGIPIN ಟೈಪ್ ಮಾಡಿ ಅದಕ್ಕೆ ಸಂಬಂದಿಸಿದ ನಿಖರ ಸ್ಥಳವನ್ನು ಹುಡುಕಲು ಅಥವಾ ನಿರ್ದಿಷ್ಟ ಅಕ್ಷಾಂಶ ಮತ್ತು ರೇಖಾಂಶ ವಿವರಗಳನ್ನು ಟೈಪ್ ಮಾಡಿ ಅದಕ್ಕೆ ಸಂಬಂದಿಸಿದ DIGIPIN ಅನ್ನು ಪಡೆಯಲು ಅನುವುಮಾಡಿಕೊಡುತ್ತದೆ. ಈ ವೆಬ್ ಅಪ್ಲಿಕೇಶನ್ ನಿಮಗೆ DIGIPIN ಅನ್ನು ಕಾಪಿ ಮಾಡಲು ಅಥವಾ ಇತರರೊಂದಿಗೆ ಹಂಚಿಕೊಳ್ಳಲು ಅಥವಾ ಅದರ QR ಕೋಡ್ ಅನ್ನು ರಚಿಸಲು ಅನುಮತಿಸುತ್ತದೆ.
‘ನಿಮ್ಮ ಪಿನ್ ಕೋಡ್ ತಿಳಿಯಿರಿ’ ವೆಬ್ ಅಪ್ಲಿಕೇಶನ್:
1972 ರಲ್ಲಿ ಪರಿಚಯಿಸಲಾದ ಆರು-ಅಂಕಿಯ ಪಿನ್ ಕೋಡ್ ವ್ಯವಸ್ಥೆಯು ಭಾರತದ ಅಂಚೆ ವಿತರಣೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದೆ. ಆದಾಗ್ಯೂ, ಅದರ ಭೌಗೋಳಿಕ ನಿಖರತೆಯನ್ನು ಆಧುನೀಕರಿಸುವ ಮತ್ತು ಪರಿಷ್ಕರಿಸುವ ಅಗತ್ಯವನ್ನು ಗುರುತಿಸಿ, ಅಂಚೆ ಇಲಾಖೆಯು ದೇಶದ ಎಲ್ಲಾ ಪಿನ್ ಕೋಡ್ ಗಡಿಗಳನ್ನು ಜಿಯೋ-ರೆಫರೆನ್ಸ್ ಮಾಡಲು ಎಲ್ಲಾ ಅಂಚೆ ನ್ಯಾಯವ್ಯಾಪ್ತಿಗಳಲ್ಲಿ ರಾಷ್ಟ್ರೀಯ ಜಿಯೋಫೆನ್ಸಿಂಗ್ ಕಾರ್ಯಕ್ರಮವನ್ನು ಕೈಗೊಂಡಿತು. ‘ನಿಮ್ಮ ಪಿನ್ ಕೋಡ್ ತಿಳಿಯಿರಿ’ ವೆಬ್ ಅಪ್ಲಿಕೇಶನ್ ಬಳಕೆದಾರರಿಗೆ GNSS ಸ್ಥಳ ವೈಶಿಷ್ಟ್ಯಗಳನ್ನು ಬಳಸಿಕೊಂಡು ಅವರ ಸ್ಥಳವನ್ನು ಆಧರಿಸಿ ಅದಕ್ಕೆ ಸರಿಯಾದ ಪಿನ್ ಕೋಡ್ ಅನ್ನು ಗುರುತಿಸಲು ಮತ್ತು ನೀಡುವ ಪಿನ್ ಕೋಡ್ ತಪ್ಪಿದಲ್ಲಿ ಅದರ ನಿರಂತರ ಪರಿಷ್ಕರಣೆಗಾಗಿ ಪಿನ್ ಕೋಡ್ ನಿಖರತೆಯ ಕುರಿತು ಪ್ರತಿಕ್ರಿಯೆಯನ್ನು ಅಥವಾ ದೂರನ್ನು ಸಲ್ಲಿಸಲು ಅನುವು ಮಾಡಿಓಡುತ್ತದೆ.
‘ನಿಮ್ಮ ಪಿನ್ ಕೋಡ್ ತಿಳಿಯಿರಿ ವೆಬ್ ಅಪ್ಲಿಕೇಶನ್’ ಅನ್ನು ತೆರೆಯಲು, ನಿಮ್ಮ ವೆಬ್ ಬ್ರೌಸರ್ನಲ್ಲಿ https://www.indiapost.gov.in/VAS/Pages/findpincode.aspx ಎಂದು ಟೈಪ್ ಮಾಡಿ. ಅದರಲ್ಲಿ ನೀವು ರಾಜ್ಯ/ಕೇಂದ್ರಾಡಳಿತ ಪ್ರದೇಶ ಮತ್ತು ನಗರ/ಜಿಲ್ಲೆಯನ್ನು ಆಯ್ಕೆ ಮಾಡುವ ಮೂಲಕ ಅಥವಾ ಅಂಚೆ ಕಚೇರಿ ಹೆಸರನ್ನು ನಮೂದಿಸುವ ಮೂಲಕ, ಆ ಮಾನದಂಡದ ಅಡಿಯಲ್ಲಿ ಬರುವ ಎಲ್ಲಾ ಪಿನ್ ಕೋಡ್ಗಳನ್ನು ತಿಳಿದುಕೊಳ್ಳಬಹುದು. ಈ ಪುಟವು ನಿಮಗೆ ಅಖಿಲ ಭಾರತ ಪಿನ್ ಕೋಡ್ ಡೈರೆಕ್ಟರಿ ಡೌನ್ಲೋಡ್ ಮಾಡಲು ಮತ್ತು ಅಂಚೆ ರವಾನೆ ಅಥವಾ ದೂರನ್ನು ಟ್ರ್ಯಾಕ್ ಮಾಡಲು, ನಿಮ್ಮ ಅಂಚೆ ಕಚೇರಿಯನ್ನು ಪತ್ತೆ ಮಾಡಲು ಮತ್ತು ಅಂಚೆಯ ದರವನ್ನು ಲೆಕ್ಕಹಾಕುವಂತಹ ಕೆಲವು ಇತರ ಸೌಲಭ್ಯಗಳನ್ನು ಕೊಡುತ್ತದೆ.
DIGIPIN ಕೋಡ್ನ ಪ್ರಮುಖ ಪ್ರಯೋಜನಗಳು:
- ನಿಖರತೆ: 4-ಮೀಟರ್ ಚೌಕದೊಳಗೆ ನಿಖರವಾದ ಸ್ಥಳ ಗುರುತಿಸುವಿಕೆ.
- ದಕ್ಷತೆ: ಸುವ್ಯವಸ್ಥಿತ ವಿತರಣೆಗಳು ಮತ್ತು ತುರ್ತು ಸೇವೆಗಳು ಸಾಧ್ಯವಾಗಿಸುತ್ತದೆ.
- ಒಳಗೊಳ್ಳುವಿಕೆ: ಗ್ರಾಮೀಣ ಪ್ರದೇಶಗಳು ಸೇರಿದಂತೆ ಔಪಚಾರಿಕ ವ್ಯವಸ್ಥೆಗಳ ಕೊರತೆಯಿರುವ ಪ್ರದೇಶಗಳ ವಿಳಾಸ ನಿಖರವಾಗಿ ತಿಳಿದುಕ್ಕೊಳಬಹುದು.
- ಗೌಪ್ಯತೆ: ಇದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಸಂಗ್ರಹಣೆ ಮಾಡುವುದಿಲ್ಲಾ.
- ಬಳಕೆ: ಆಫ್ಲೈನ್ ಮತ್ತು ಆನ್ಲೈನ್ ಎರಡರಲ್ಲೂ ಇದನ್ನು ಬಳಸಬಹುದು.
- ಓಪನ್ ಸೋರ್ಸ್: ಸಾಫ್ಟ್ವೇರ್ ಡೆವಲಪರ್ಗಳಿಗೆ ಮತ್ತು ಸಂಸ್ಥೆ/ವ್ಯವಹಾರಗಳಿಗೆ ಓಪನ್ ಸೋರ್ಸ್ ಏಕೀಕರಣವನ್ನು ಬೆಂಬಲಿಸುತ್ತದೆ ಮತ್ತು ಇದರ ಸೋರ್ಸ್ ಕೋಡ್ ಅನ್ನು ಗಿಟ್ಹಬ್ನಲ್ಲಿ ಹಂಚಿಕೊಳ್ಳಲಾಗುತ್ತದೆ.
