ಶಂಕಿತ ಸೈಬರ್ ವಂಚಕರ ಬಗ್ಗೆ ಎಲ್ಲಿ ವರದಿ ಮಾಡಬಹುದು ಅಥವಾ ಹುಡುಕಬಹುದು ?
- ಕಳೆದ ವಾರ, ನನ್ನ ಸಂಬಂಧಿಕರೊಬ್ಬರು ನನಗೆ ಕರೆ ಮಾಡಿ, ಸೈಬರ್ ವಂಚಕರಿಂದ ಹೂಡಿಕೆ ಯೋಜನೆಗಳ ಬಗ್ಗೆ ನಿರಂತರವಾಗಿ ಕರೆಗಳು ಬರುತ್ತಿವೆ ಎಂದು ಹೇಳಿದರು. ಇವರ ಬಗ್ಗೆ ಎಲ್ಲಾದರೂ ವರದಿ ಮಾಡಬಹುದಾ ಎಂದು ಕೇಳಿದರು.
- ನಾನು ನನ್ನ ಸ್ನೇಹಿತೆಯೊಂದಿಗೆ ಮಾತನಾಡುತ್ತಿದ್ದೆ, ಅವಳು ಸಾಮಾಜಿಕ ಮಾಧ್ಯಮದಲ್ಲಿ ನಿರ್ದಿಷ್ಟ ವ್ಯಕ್ತಿಯಿಂದ ಸಾಕಷ್ಟು ನಿಂದನೆಗಳನ್ನು ಪಡೆಯುತ್ತಿದ್ದಳು ಮತ್ತು ದೂರು ನೀಡಿದರು ಆ ಸಾಮಾಜಿಕ ಮಾಧ್ಯಮ ವೇದಿಕೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಪೊಲೀಸ್ ಠಾಣೆಗೆ ಹೋಗದೆ ಆ ವ್ಯಕ್ತಿಯನ್ನು ಎಲ್ಲಿಯಾದರೂ ವರದಿ ಮಾಡಬಹುದೇ ಎಂದು ತಿಳಿಯ ಬಯಸಿದ್ದಳು.
- ನಾನು ಸಾಫ್ಟ್ವೇರ್ ಉದ್ಯಮದಲ್ಲಿ ಕೆಲಸ ಮಾಡುವ ಇನ್ನೊಬ್ಬ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದೆ ಮತ್ತು ವಂಚನೆಯ ಬಗ್ಗೆ ಸಂದೇಹವಿರುವ ಯಾರಾದರೂ ತಮ್ಮ ಅನುಮಾನಗಳನ್ನು ಪರಿಶೀಲಿಸಲು ಹುಡುಕಬಹುದಾದ ವಂಚನೆಯ ಫೋನ್ ಸಂಖ್ಯೆಗಳು ಅಥವಾ ಇಮೇಲ್ ಐಡಿ ಅಥವಾ ಸಾಮಾಜಿಕ ಮಾಧ್ಯಮ ಪ್ರೊಫೈಲ್ಗಳ ಡೇಟಾಬೇಸ್ ಅನ್ನು ರಚಿಸುವುದು ತುಂಬಾ ಸುಲಭ ಸರಕಾರ ಯಾಕೆ ಏನು ಮಾಡುತ್ತಿಲ್ಲಾ ಎಂದು ಪರಿತಪಿಸುತ್ತಿದ್ದರು.
ರಾಷ್ಟ್ರೀಯ ಮಟ್ಟದಲ್ಲಿ ಶಂಕಿತ ವಂಚಕರ ವಿವರಗಳನ್ನು ವರದಿ ಮಾಡುವ ಅಥವಾ ಪರಿಶೀಲಿಸುವ ವ್ಯವಸ್ಥೆ ಈಗ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ (www.cybercrime.gov.in) ನ ಹೊಸ ವೈಶಿಷ್ಟ್ಯದೊಂದಿಗೆ ಸಾಧ್ಯವಾಗಿದೆ. ಆ ಜಾಲತಾಣದಲ್ಲಿ ಶಂಕಿತ ವಂಚಕರನ್ನು ಪರಿಶೀಲಿಸಲು ಅಥವಾ ಶಂಕಿತ ವಂಚಕರನ್ನು ವರದಿ ಮಾಡಲು ಕೇಂದ್ರ ಸರ್ಕಾರವು ಪರಿಚಯಿಸಿರುವ ಹೊಸ ವೈಶಿಷ್ಟ್ಯಗಳ ವಿವರಗಳನ್ನು ನಾನು ಕೆಳಗೆ ಪಟ್ಟಿ ಮಾಡುತ್ತಿದ್ದೇನೆ:
ಶಂಕಿತ ಸೈಬರ್ ವಂಚಕರನ್ನು ಪರಿಶೀಲಿಸಿ :-
www.cybercrime.gov.in ವೆಬ್ಸೈಟ್ನಲ್ಲಿ, ನೀವು “ಸಂಶಯಿತ ವಂಚಕರನ್ನು ವರದಿ ಮಾಡಿ ಮತ್ತು ಪರಿಶೀಲಿಸಿ” ಟ್ಯಾಬ್ ಆಯ್ಕೆಮಾಡಿ ಮತ್ತು ಅದರ ಅಡಿಯಲ್ಲಿ, ಶಂಕಿತ ವಂಚಕನ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ವಿಳಾಸ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ಅಥವಾ UPI ಐಡಿ ಅಥವಾ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಐಡಿಯನ್ನು ಪರಿಶೀಲಿಸಲು ನೀವು ಬಯಸಿದರೆ “ಸಂಶಯಿತ (ಮೊಬೈಲ್/ಇಮೇಲ್ ಇತ್ಯಾದಿ) ಪರಿಶೀಲಿಸಿ” ಉಪಮೆನು ಆಯ್ಕೆಮಾಡಿ. ನೀವು ಶಂಕಿತ ವಂಚಕ ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಶೀಲಿಸಲು ಬಯಸಿದರೆ “ಸಂಶಯಿತ (ವೆಬ್ಸೈಟ್/ಆ್ಯಪ್) ಪರಿಶೀಲಿಸಿ” ಸಬ್ ಮೆನು ಆಯ್ಕೆಮಾಡಿ. ಇದು ಸಾರ್ವಜನಿಕರು ಒದಗಿಸಿದ ಡೇಟಾ ಅಥವಾ ಮಾಹಿತಿಯನ್ನು ಆಧರಿಸಿದೆ, ಅಲ್ಲಿ ಅವರು ತಮ್ಮ ಮೊಬೈಲ್ ನಲ್ಲಿ ಅಥವಾ SMS/ಇಮೇಲ್ನಲ್ಲಿ ಪಡೆಯುವ ಮಾಹಿತಿ ಅಥವಾ ಅವರ ಅನುಭವಗಳ ಆಧಾರದ ಮೇಲೆ ತಮ್ಮ ಅನುಮಾನಗಳನ್ನು ವರದಿ ಮಾಡಿರುತ್ತಾರೆ, ಆದ್ದರಿಂದ ಇದು ಎಲ್ಲಾ ಸಮಯದಲ್ಲೂ 100% ನಿಖರವಾಗಿರುವುದಿಲ್ಲ.
ಶಂಕಿತ ಸೈಬರ್ ವಂಚಕರನ್ನು ವರದಿ ಮಾಡಿ :–
- www.cybercrime.gov.in ವೆಬ್ಸೈಟ್ನಲ್ಲಿ, “ಸಂಶಯಾಸ್ಪದ ವ್ಯಕ್ತಿಯನ್ನು ವರದಿ ಮಾಡಿ ಮತ್ತು ಪರಿಶೀಲಿಸಿ” ಟ್ಯಾಬ್ ಆಯ್ಕೆಮಾಡಿ ಮತ್ತು ಅದರ ಅಡಿಯಲ್ಲಿ, “ಸಂಶಯಾಸ್ಪದ ವ್ಯಕ್ತಿಯನ್ನು ವರದಿ ಮಾಡಿ” ಉಪಮೆನು ಆಯ್ಕೆಯನ್ನು ಆರಿಸಿ. ಅದರ ಅಡಿಯಲ್ಲಿ :-
- “ಸಂಶಯಾಸ್ಪದ ವ್ಯಕ್ತಿಯನ್ನು ವರದಿ ಮಾಡಿ I4C ಗೆ” ಉಪಮೆನು ಆಯ್ಕೆಯ ಅಡಿಯಲ್ಲಿ ಅನುಮಾನಾಸ್ಪದ ಜಾಲತಾಣಗಳ URL ಗಳು, WhatsApp ಸಂಖ್ಯೆಗಳು/Telegram ಹ್ಯಾಂಡಲ್ಗಳು, ಫೋನ್ ಸಂಖ್ಯೆಗಳು, ಇಮೇಲ್-ಐಡಿಗಳು, SMS ಶೀರ್ಷಿಕೆಗಳು/ ಸಂಖ್ಯೆಗಳು ಮತ್ತು ಸಾಮಾಜಿಕ ಮಾಧ್ಯಮದ URL ಗಳು ಇತ್ಯಾದಿಗಳನ್ನು ಬಳಸಿಕೊಂಡು ಸೈಬರ್ ಅಪರಾಧ ಮಾಡಲು ಮಾಡಿದ ಪ್ರಯತ್ನಗಳನ್ನು ನೀವು ತ್ವರಿತವಾಗಿ ವರದಿ ಮಾಡಬಹುದು.
- “ಸಾಮಾಜಿಕ ಮಾಧ್ಯಮಕ್ಕೆ ದುರುಪಯೋಗವನ್ನು ವರದಿ ಮಾಡಿ” ಉಪಮೆನು ಆಯ್ಕೆಯ ಅಡಿಯಲ್ಲಿ ನೀವು ಯಾವುದೇ ಆನ್ಲೈನ್ ಕಾನೂನುಬಾಹಿರ ಚಟುವಟಿಕೆಯನ್ನು ನೇರವಾಗಿ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗೆ (WhatsApp, Facebook, Google, Twitter/X, Instagram, YouTube, Telegram, Public & Koo ನಂತಹ ಕಂಪನಿಗಳು) ವರದಿ ಮಾಡಬಹುದು.
- “NCMEC ಗೆ ದುರುಪಯೋಗವನ್ನು ವರದಿ ಮಾಡಿ” ಉಪಮೆನು ಆಯ್ಕೆಯನ್ನು ಆರಿಸುವ ಮೂಲಕ ನೀವು ವೆಬ್/ಇಂಟರ್ನೆಟ್ನಿಂದ ನಗ್ನ, ಭಾಗಶಃ ನಗ್ನ ಅಥವಾ ಲೈಂಗಿಕವಾಗಿ ಸ್ಪಷ್ಟವಾದ ವಿಷಯವನ್ನು ಹೊಂದಿರುವ ನಿಮ್ಮ ಫೋಟೋಗಳು ಅಥವಾ ವೀಡಿಯೊಗಳನ್ನು ತೆಗೆದುಹಾಕಬಹುದು. ನೀವು ಈ ವಿವರಗಳನ್ನು ಅನಾಮಧೇಯವಾಗಿಯೂ ಸಲ್ಲಿಸಬಹುದು ಮತ್ತು ನೀವು ಅಪ್ಲೋಡ್ ಮಾಡುವ ಫೋಟೋಗಳು ಮತ್ತು ವಿಡಿಯೋಗಳನ್ನು ಖಾಸಗಿಯಾಗಿ ಇರಿಸಲಾಗುತ್ತದೆ ಮತ್ತು ಹೋಲಿಕೆಗಾಗಿ ಚಿತ್ರ ಅಥವಾ ವೀಡಿಯೊದ ಹ್ಯಾಶ್ ಮೌಲ್ಯವನ್ನು ಮಾತ್ರ ಬಳಸುವುದರಿಂದ ಆ ಫೋಟೋಗಳು ಮತ್ತು ವಿಡಿಯೋಗಳು ನಿಮ್ಮ ಸಾಧನದಿಂದ ಹೊರ ಹೋಗುವುದಿಲ್ಲಾ.
- ನಿಮ್ಮ ದೂರಿನ ಕುರಿತು ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಂದ ಬಂದ ಪ್ರತಿಕ್ರಿಯೆಯಿಂದ ನೀವು ತೃಪ್ತರಾಗದಿದ್ದರೆ, “GAC ಯೊಂದಿಗೆ ಮೇಲ್ಮನವಿ ಸಲ್ಲಿಸಿ” ಆಯ್ಕೆಯನ್ನು ಆರಿಸುವ ಮೂಲಕ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಂದ ಸಂವಹನವನ್ನು ಸ್ವೀಕರಿಸಿದ 30 ದಿನಗಳ ಒಳಗೆ ನೀವು ಕುಂದುಕೊರತೆ ಮೇಲ್ಮನವಿ ಸಮಿತಿಗೆ ಅವರ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು.
ಈ ಹಿಂದೆ ನಾನು ಭಾರತ ಸರಕಾರದ ಸಂಚಾರ ಸಾಥಿ ಜಾಲತಾಣದ ಅಡಿಯಲ್ಲಿ ಇರುವ “ಚಕ್ಷು” – ಶಂಕಿತ ವಂಚನೆ ಸಂವಹನವನ್ನು ವರದಿ ಮಾಡುವ ವ್ಯವಸ್ಥೆಯ ಬಗ್ಗೆ ತಿಳಿಸಿಕೊಟ್ಟಿದ್ದೆ, ಅದರ ಬಗ್ಗೆ ತಿಳಿದುಕೊಳ್ಳಲು ನೀವು ನನ್ನ ಆ ಅಂಕಣ ಓದಿ.
