lost smartphone

ಸ್ಮಾರ್ಟ್‌ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಏನು ಮಾಡಬೇಕು?

ಈ ಅಂಕಣದಲ್ಲಿ ಸ್ಮಾರ್ಟ್‌ಫೋನ್ ಕಳೆದುಹೋಗುವ ಮುನ್ನ ತೆಗೆಯುಕೊಳ್ಳಬಹುದಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು, ಕಳೆದ ಎರಡು ವರ್ಷಗಳಲ್ಲಿ ಆಗಿರುವ ಬದಲಾವಣೆಗಳು ಮತ್ತು ಪತ್ತೆಹಚ್ಚಲು ಲಭ್ಯವಿರುವ ಹೊಸ ಸಾಧನಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಎಂದರೆ ಕೇವಲ ಒಂದು ಸಾಧನವಲ್ಲ — ಅದು ನಮ್ಮ ಬ್ಯಾಂಕ್ ಖಾತೆ, ಫೋಟೋ ಆಲ್ಬಮ್, ಆಫೀಸ್ ಮೇಲ್ ಮತ್ತು ಗುರುತಿನ ಚೀಟಿಗಳಂತಹ ಸೂಕ್ಷ್ಮ ಹಾಗೂ ಗೌಪ್ಯ ಮಾಹಿತಿಗಳ ಸಂಗ್ರಹವೂ ಆಗಿದೆ. ಹಾಗಾಗಿ ಫೋನ್ ಕಳೆದುಹೋದಾಗ ಅಥವಾ ಕಳ್ಳತನವಾದಾಗ ಗಾಬರಿಯಾಗುವುದು ಸಹಜ. ಆದರೆ ಗಾಬರಿಗಿಂತ ಮುಖ್ಯವಾದದ್ದು ವೇಗ; ಮೊದಲ ಅರ್ಧ ಗಂಟೆಯಲ್ಲಿ ನೀವು ತೆಗೆದುಕೊಳ್ಳುವ ಕ್ರಮಗಳೇ ಫೋನ್ ಮರಳಿ ಸಿಗುವ ಅಥವಾ ನಿಮ್ಮ ದತ್ತಾಂಶ (ಡೇಟಾ) ಸುರಕ್ಷಿತವಾಗಿರುವ ಸಾಧ್ಯತೆಯನ್ನು ನಿರ್ಧರಿಸುತ್ತದೆ. ನಾನು ಈ ಹಿಂದೆ 2024ರಲ್ಲಿ ಇದೇ ವಿಷಯದ ಬಗ್ಗೆ ಇಲ್ಲೇ ಅಂಕಣ ಬರೆದಿದ್ದೆ; ಅದನ್ನು ಓದಲು ಮತ್ತು ಸಂಚಾರ್ ಸಾಥಿ ಬಗ್ಗೆ ತಿಳಿದುಕೊಳ್ಳಲು ನೀವು ನನ್ನ ದ್ವಿಭಾಷಾ ಬ್ಲಾಗ್ www.cybermithra.in ಸಂದರ್ಶಿಸಬಹುದು. ಈ ಅಂಕಣದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು, ಕಳೆದ ಎರಡು ವರ್ಷಗಳಲ್ಲಿ ಆಗಿರುವ ಬದಲಾವಣೆಗಳು ಮತ್ತು ಲಭ್ಯವಿರುವ ಹೊಸ ಸಾಧನಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.

ಫೋನ್ ಕಳೆದುಹೋಗುವ ಮುನ್ನವೇ ಮಾಡಿಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆಗಳು :-

  1. ಬಲವಾದ ಸ್ಕ್ರೀನ್ ಲಾಕ್ ಬಳಸಿ: ಕನಿಷ್ಠ 6 ಅಂಕಿಗಳ ಪಿನ್ ಅಥವಾ ಬಲವಾದ ಪಾಸ್‌ವರ್ಡ್ ಜೊತೆಗೆ ಫಿಂಗರ್‌ಪ್ರಿಂಟ್/ಫೇಸ್ ಐಡಿ ಬಳಸಿ ಮತ್ತು ಸಾಧ್ಯವಾದಲ್ಲಿ ಟೂ/ಮಲ್ಟಿ-ಫ್ಯಾಕ್ಟರ್ ಅಥೆಂಟಿಕೇಶನ್ (2FA) ಸಕ್ರಿಯಗೊಳಿಸಿ.
  2. ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸಕ್ರಿಯಗೊಳಿಸಿ: ಆಂಡ್ರಾಯ್ಡ್ ಫೋನ್‌ನಲ್ಲಿ ಗೂಗಲ್‌ನ Find Hub ಮತ್ತು ಐಫೋನ್‌ನಲ್ಲಿ Find My ಆ್ಯಪ್ ಅಳವಡಿಸಿ ಹಾಗೂ ಸಕ್ರಿಯಗೊಳಿಸಿ. ಇದು ಫೋನ್ ಸ್ಥಳ ಪತ್ತೆಹಚ್ಚಲು, ರಿಂಗ್ ಮಾಡಲು, ದೂರದಿಂದಲೇ ಲಾಕ್ ಮಾಡಲು ಹಾಗೂ ಅಗತ್ಯವಿದ್ದರೆ ಡೇಟಾ ಅಳಿಸಲು ಸಹಾಯ ಮಾಡುತ್ತದೆ.
  3. ಆಫ್‌ಲೈನ್ ಪತ್ತೆ ಸೆಟ್ಟಿಂಗ್ ಸಕ್ರಿಯಗೊಳಿಸಿ: ಆಂಡ್ರಾಯ್ಡ್‌ನಲ್ಲಿ Find Hub ಮತ್ತು ಐಫೋನ್‌ನಲ್ಲಿ Find My ನೆಟ್‌ವರ್ಕ್ ವ್ಯವಸ್ಥೆ ಸಕ್ರಿಯವಾಗಿದ್ದರೆ, ಫೋನ್ ಇಂಟರ್ನೆಟ್‌ಗೆ ಸಂಪರ್ಕದಲ್ಲಿಲ್ಲದ ಸಂದರ್ಭದಲ್ಲೂ ಹತ್ತಿರದ ಸಾಧನಗಳ ನೆರವಿನಿಂದ ಅದರ ಸ್ಥಳ ಪತ್ತೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆ ಸೆಟ್ಟಿಂಗ್ ಅನ್ನು ಆನ್ ಮಾಡಿಟ್ಟುಕೊಳ್ಳಿ. ಸ್ಯಾಮ್‌ಸಂಗ್ ಬಳಕೆದಾರರು Samsung Find ಅಳವಡಿಸಿಕೊಳ್ಳಿ ಮತ್ತು ಐಫೋನ್ ಬಳಕೆದಾರರು Stolen Device Protection ಫೀಚರ್ ಸಕ್ರಿಯಗೊಳಿಸಿ. ಇದರೊಂದಿಗೆ, ಆಂಡ್ರಾಯ್ಡ್ ಫೋನ್ ಸೆಟ್ಟಿಂಗ್ಸ್‌ನಲ್ಲಿ Offline Device Lock ಮತ್ತು Theft Protection ಲಭ್ಯವಿದ್ದಲ್ಲಿ ಸಕ್ರಿಯಗೊಳಿಸಿ. ಇದು ಫೋನ್ ಆಫ್‌ಲೈನ್‌ನಲ್ಲಿದ್ದರೂ (ಸ್ವಿಚ್ ಆಫ್ ಆಗಿದ್ದರೂ ಅಥವಾ ಸಿಮ್ ತೆಗೆದಿದ್ದರೂ) ಪತ್ತೆ ಮಾಡಲು ನೆರವಾಗುತ್ತದೆ.
  4. ಲಾಕ್ ಸ್ಕ್ರೀನ್‌ನಲ್ಲಿ ಸೂಕ್ಷ್ಮ ವಿವರಗಳ ವೀಕ್ಷಣೆ ನಿಲ್ಲಿಸಿ: ನಿಮ್ಮ ಫೋನಿನ ಲಾಕ್ ಸ್ಕ್ರೀನ್‌ನಲ್ಲಿ ಒಟಿಪಿ, ಬ್ಯಾಂಕಿಂಗ್ ನೋಟಿಫಿಕೇಶನ್‌ಗಳು, ವಾಟ್ಸಾಪ್ ಸಂದೇಶಗಳು ಅಥವಾ ಇ-ಮೇಲ್‌ಗಳ ಪೂರ್ಣ ವಿವರಗಳು ಕಾಣಿಸದಂತೆ (ಹೈಡ್) ಮಾಡಿ.
  5. ನಿಯಮಿತವಾಗಿ ಬ್ಯಾಕಪ್ ತೆಗೆದುಕೊಳ್ಳಿ: ನಿಮ್ಮ ಫೋನಿನಲ್ಲಿರುವ ಫೋಟೋಗಳು, ಕಾಂಟ್ಯಾಕ್ಟ್‌ಗಳು, ವಾಟ್ಸಾಪ್ ಡೇಟಾ ಮತ್ತು ಪ್ರಮುಖ ದಾಖಲೆಗಳನ್ನು ನಿಯಮಿತವಾಗಿ ಬ್ಯಾಕಪ್ ಮಾಡಿಟ್ಟುಕೊಳ್ಳಿ.
  6. ಐಎಂಇಐ (IMEI) ಸಂಖ್ಯೆಯನ್ನು ಸುರಕ್ಷಿತವಾಗಿ ಬರೆದಿಡಿ: ನಿಮ್ಮ ಫೋನಿನ ಐಎಂಇಐ ಸಂಖ್ಯೆಗಳನ್ನು ಸುರಕ್ಷಿತ ಸ್ಥಳದಲ್ಲಿ ದಾಖಲಿಸಿಟ್ಟುಕೊಳ್ಳಿ.
  7. ಲಾಕ್ ಸ್ಕ್ರೀನ್ ಮೆಸೇಜ್ ಸೆಟ್ ಮಾಡಿ: ಫೋನ್‌ನ ‘Lock Screen Message’ ಸೆಟ್ಟಿಂಗ್‌ಗೆ ಹೋಗಿ ನಿಮ್ಮ ಕುಟುಂಬದವರ ಪರ್ಯಾಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿಡಿ.
  8. ಪ್ರಮುಖ ಆ್ಯಪ್‌ಗಳಿಗೆ ಪ್ರತ್ಯೇಕ ಲಾಕ್ ಹಾಕಿ: ಬ್ಯಾಂಕಿಂಗ್, ಯುಪಿಐ ಮತ್ತು ವಾಟ್ಸಾಪ್‌ನಂತಹ ಆ್ಯಪ್‌ಗಳಿಗೆ ಪ್ರತ್ಯೇಕ ಆ್ಯಪ್ ಲಾಕ್ ಅಥವಾ ಬಯೋಮೆಟ್ರಿಕ್ ದೃಢೀಕರಣವನ್ನು ಅಳವಡಿಸಿ.

ಸ್ಮಾರ್ಟ್‌ಫೋನ್ ಕಳೆದುಕೊಂಡ ತಕ್ಷಣ ತೆಗೆದುಕೊಳ್ಳಬೇಕಾದ ಕ್ರಮಗಳು :-

  • ಮೊದಲು ಆ ಫೋನ್‌ಗೆ ಕರೆ ಮಾಡಿ; ಅದು ನಿಮ್ಮ ಹತ್ತಿರದಲ್ಲೇ ಎಲ್ಲಾದರೂ ಬಿದ್ದಿರಬಹುದು. ಜೊತೆಗೆ, ಮೇಲೆ ತಿಳಿಸಿದ ಟ್ರ್ಯಾಕಿಂಗ್ ಆ್ಯಪ್ ಅಥವಾ ವೆಬ್‌ಸೈಟ್‌ಗಳ ಮೂಲಕ ಫೋನಿನ ಪ್ರಸ್ತುತ ಲೊಕೇಶನ್ ತಿಳಿಯಲು ಪ್ರಯತ್ನಿಸಿ.
  • ಫೋನ್ ಕಳೆದುಹೋಗಿರುವುದು ಖಚಿತವಾದ ತಕ್ಷಣ, ನಿಮ್ಮ ಟೆಲಿಕಾಂ ಸೇವಾದಾರರಿಗೆ ಕರೆ ಮಾಡಿ ಸಿಮ್ ಸಂಖ್ಯೆಯನ್ನು ಬ್ಲಾಕ್ ಮಾಡಿಸಿ; ಇದರಿಂದ ಒಟಿಪಿ ಕಳ್ಳತನಕ್ಕೆ ಸಂಬಂಧಿಸಿದ ಅಪಾಯಗಳು ಗಣನೀಯವಾಗಿ ಕಡಿಮೆಯಾಗುತ್ತವೆ.
  • ತಕ್ಷಣವೇ ನಿಮ್ಮ ಇಮೇಲ್, ಗೂಗಲ್ ಖಾತೆ ಮತ್ತು ಬ್ಯಾಂಕ್ ಖಾತೆಗಳ ಪಾಸ್‌ವರ್ಡ್ ಹಾಗೂ ಪಿನ್ ಬದಲಾಯಿಸಿ, ಜೊತೆಗೆ ಸ್ವಲ್ಪ ಸಮಯದವರೆಗೆ ನಿಮ್ಮ ಖಾತೆಗಳಲ್ಲಿ ಯಾವುದೇ ಅಸಾಮಾನ್ಯ ಹಣಕಾಸು ವಹಿವಾಟುಗಳು ನಡೆಯುತ್ತಿವೆಯೇ ಎಂದು ಗಮನಿಸಿ.
  • ಸೈಬರ್ ಸಹಾಯವಾಣಿ 1930, ವೆಬ್‌ಸೈಟ್ www.cybercrime.gov.in ಅಥವಾ ಹತ್ತಿರದ ಸೈಬರ್/ಸಾಮಾನ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ನಂತರ ceir.sancharsaathi.gov.in ಮೂಲಕ ಕಳೆದುಹೋದ ಮೊಬೈಲ್‌ನ IMEI ಸಂಖ್ಯೆಯನ್ನು ಬ್ಲಾಕ್ ಮಾಡಿ. IMEI ಬ್ಲಾಕ್ ಮಾಡಿದ ನಂತರ ಆ ಹ್ಯಾಂಡ್‌ಸೆಟ್ ಅನ್ನು ಭಾರತದ ಯಾವುದೇ ಮೊಬೈಲ್ ನೆಟ್‌ವರ್ಕ್‌ನಲ್ಲೂ ಬಳಸಲು ಸಾಧ್ಯವಾಗುವುದಿಲ್ಲ. ಮುಖ್ಯವಾಗಿ, CEIRನಲ್ಲಿ IMEI ಬ್ಲಾಕ್ ಮಾಡಿದರೂ ಪೊಲೀಸರಿಗೆ ಆ ಸಾಧನವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಸಂಚಾರ್ ಸಾಥಿ ವ್ಯವಸ್ಥೆಯಲ್ಲಿ, ಕಳ್ಳನು ಆ ಫೋನ್‌ಗೆ ಮತ್ತೊಂದು ಸಿಮ್ ಹಾಕಿ ಬಳಸಲು ಪ್ರಯತ್ನಿಸಿದರೆ ನೆಟ್‌ವರ್ಕ್‌ನಲ್ಲಿ ಅದರ ಮಾಹಿತಿ ದಾಖಲಾಗುತ್ತದೆ ಮತ್ತು ಆ ಮಾಹಿತಿಯನ್ನು ಬಳಸಿ ಪೊಲೀಸರು ಕಳೆದುಹೋದ ಫೋನ್ ಅನ್ನು ಪತ್ತೆ ಮಾಡುತ್ತಾರೆ. ಸಂಚಾರ್ ಸಾಥಿ ಜಾಲತಾಣದ ಪ್ರಕಾರ, ಇಂದಿನವರೆಗೆ 58,71,969 ಫೋನ್‌ಗಳನ್ನು ಬ್ಲಾಕ್ ಮಾಡಲಾಗಿದೆ, 36,56,450 ಮೊಬೈಲ್‌ಗಳನ್ನು ಟ್ರೇಸ್ ಮಾಡಲಾಗಿದೆ ಮತ್ತು 13,28,392 ಸಾಧನಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡು ಮಾಲೀಕರಿಗೆ ಮರಳಿಸಲಾಗಿದೆ.

ಕಡೆಯದಾಗಿ ಹೇಳುವುದಾದರೆ, ಫೋನ್ ಕಳ್ಳತನವಾದ ಮೇಲೆ ಮಾಡುವ ಪ್ರಯತ್ನಗಳಿಗಿಂತ, ಮುಂಚಿತವಾಗಿ ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮಗಳೇ ನಿಮ್ಮ ದತ್ತಾಂಶ ದುರುಪಯೋಗವಾಗದಂತೆ ತಡೆಯಲು ಮತ್ತು ಸಾಧನ ಮರಳಿ ಸಿಗುವ ಸಾಧ್ಯತೆಯನ್ನು ಹೆಚ್ಚಿಸಲು ಹೆಚ್ಚು ಸಹಕಾರಿ.

ಮೊಬೈಲ್ ಕಳೆದುಹೋದಾಗ ನೆನಪಿನಲ್ಲಿಡಬೇಕಾದ ಸರಳ ಸೂತ್ರ:

ಹುಡುಕಿ → ಲಾಕ್ ಮಾಡಿ → ಸಿಮ್ ಬ್ಲಾಕ್ ಮಾಡಿ → ಪೊಲೀಸ್ ದೂರು ನೀಡಿ → CEIRನಲ್ಲಿ IMEI ಬ್ಲಾಕ್ ಮಾಡಿ → ಅಗತ್ಯವಿದ್ದರೆ ಡೇಟಾ ಅಳಿಸಿ.

ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ, ಕಳೆದುಹೋದ ಮೊಬೈಲ್ ಮರಳಿ ಸಿಗುವ ಸಾಧ್ಯತೆ ಮಾತ್ರವಲ್ಲದೆ, ಅದರೊಳಗಿರುವ ನಿಮ್ಮ ಅಮೂಲ್ಯವಾದ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸುವ ಸಾಧ್ಯತೆಯೂ ಹೆಚ್ಚುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ