ಖಾತೆ ಫ್ರೀಜ್

ಬ್ಯಾಂಕ್ ಖಾತೆ ಫ್ರೀಜ್ ತೆರೆಯಲು ಸರಕಾರದ ಹೊಸ SOP

ಇಂದಿನ ಲೇಖನದಲ್ಲಿ, ನಿಮ್ಮ ಖಾತೆ ಫ್ರೀಜ್ ಆಗಿದ್ದರೆ ಮೊದಲು ಏನು ಮಾಡಬೇಕು, ಖಾತೆಯನ್ನು ಅನ್‌ಫ್ರೀಜ್ ಮಾಡುವ ಹಂತಗಳು ಮತ್ತು ಲಭ್ಯವಿರುವ ಕಾನೂನು ಆಯ್ಕೆಗಳು ಮತ್ತು ಫಾರ್ಮ್‌ಗಳ ಬಗ್ಗೆ ತಿಳಿದುಕ್ಕೊಳ್ಳೋಣ.

ಈಗ ಸಾಮಾನ್ಯ ಜನರಲ್ಲಿ ಸೈಬರ್ ವಂಚನೆ ಅಂದರೆ “ಹಣ ಹೋಯಿತು”ಎಂಬ ಮನಸ್ಥಿತಿ ಇದೆ, ಈ ಮಾರ್ಗದರ್ಶಿ(SOP – Standard operating procedure) ಆ ಮನಸ್ಥಿತಿಯನ್ನು ಬದಲಾಯಿಸುವ ಪ್ರಯತ್ನವಾಗಿದೆ. ನೀವು ತಕ್ಷಣ ದೂರು ನೀಡಿದರೆ, ನಿಮ್ಮ ಹಣವನ್ನು ತಡೆಹಿಡಿದು ನಿಮಗೆ ವಾಪಸ್ ಕೊಡುವ ಎಲ್ಲ ಪ್ರಯತ್ನ ಮಾಡಲಾಗುವುದು.  ಕಳೆದ ಲೇಖನಗಳಲ್ಲಿ ನಾನು ಈ SOP ಯ ಮುಖ್ಯ ಉದ್ದೇಶ, ಯಾರಿಗೆ ಇದು ಅನ್ವಯಿಸುತ್ತದೆ, ಮಾರ್ಗದರ್ಶಿ ತತ್ವಗಳ ಬಗ್ಗೆ, ದೂರನ್ನು ದಾಖಲಿಸುವ ಪ್ರಕ್ರಿಯೆ ಮತ್ತು ದೂರು ಪರಿಹಾರ ವ್ಯವಸ್ಥೆಯನ್ನು ತಿಳಿಸಿಕೊಟ್ಟಿದ್ದೆ.

ಸೈಬರ್ ಅಪರಾಧಗಳ ಈ ಕಾಲದಲ್ಲಿ, ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಡಿಜಿಟಲ್ ಪಾವತಿಗಳನ್ನು ಬಳಸುತ್ತೇವೆ. ಆದರೆ, ಇತ್ತೀಚೆಗೆ ಅನೇಕ ನಾಗರಿಕರು ಎದುರಿಸುತ್ತಿರುವ ಒಂದು ದೊಡ್ಡ ಆತಂಕವೆಂದರೆ – ‘ಬ್ಯಾಂಕ್ ಖಾತೆ ಫ್ರೀಜ್’ ಆಗುವುದು. ನೀವು ಯಾವುದೇ ತಪ್ಪು ಮಾಡದಿದ್ದರೂ, ನಿಮ್ಮ ಖಾತೆಗೆ ಎಲ್ಲೋ ಮೂಲೆಯಿಂದ ವಂಚನೆಯ ಹಣ ಬಂದಿದೆ ಎಂಬ ಕಾರಣಕ್ಕೆ ಪೊಲೀಸರು ಇಡೀ ಖಾತೆಯನ್ನೇ ಸ್ಥಗಿತಗೊಳಿಸಿದರೆ – ನಿಮ್ಮ ಸಂಬಳ, ಬಾಡಿಗೆ ಅಥವಾ ತುರ್ತು ಚಿಕಿತ್ಸೆಯ ಹಣವೂ ನಿಮಗೆ ಸಿಗದಂತಾಗಬಹುದು. ಇಂತಹ ಸಂಕಷ್ಟಕ್ಕೆ ಸಿಲುಕಿದ ಅಮಾಯಕ ಜನರಿಗೆ ನೆರವಾಗಲು ಭಾರತ ಸರ್ಕಾರದ ಗೃಹ ಸಚಿವಾಲಯವು ಹೊಸ ಮಾರ್ಗದರ್ಶಿ (SOP) ಬಿಡುಗಡೆ ಮಾಡಿದೆ. ಈ SOP ಒಂದು ಮಹತ್ವದ ತತ್ವವನ್ನು ಹೇಳುತ್ತದೆ: “ನಿರಪರಾಧ ವ್ಯಕ್ತಿಗೆ ಅನಗತ್ಯ ತೊಂದರೆ ಆಗಬಾರದು.” ಇಂದಿನ ಲೇಖನದಲ್ಲಿ, ನಿಮ್ಮ ಖಾತೆ ಫ್ರೀಜ್ ಆಗಿದ್ದರೆ ಮೊದಲು ಏನು ಮಾಡಬೇಕು, ಖಾತೆಯನ್ನು ಅನ್‌ಫ್ರೀಜ್ ಮಾಡುವ ಹಂತಗಳು ಮತ್ತು ಲಭ್ಯವಿರುವ ಕಾನೂನು ಆಯ್ಕೆಗಳು ಮತ್ತು ಫಾರ್ಮ್‌ಗಳ ಬಗ್ಗೆ ತಿಳಿದುಕ್ಕೊಳ್ಳೋಣ.

ನಿಮ್ಮ ಖಾತೆ ಫ್ರೀಜ್ ಆಗಿದ್ದರೆ ಏನು ಮಾಡಬೇಕು?

  • ಬ್ಯಾಂಕ್ ಭೇಟಿ ಮಾಡಿ : ಮೊದಲು ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಮಾಹಿತಿ ಕೇಳಿ. ಪೊಲೀಸರು ಅಥವಾ ಯಾವ ತನಿಖಾ ಸಂಸ್ಥೆ ಖಾತೆಯನ್ನು ಫ್ರೀಜ್ ಮಾಡಲು ಸೂಚಿಸಿದೆ ಎಂಬುದನ್ನು ಬ್ಯಾಂಕ್ ನಿಮಗೆ ತಿಳಿಸಬೇಕು. ಬ್ಯಾಂಕ್ ಅಧಿಕಾರಿಗಳು ನಿಮ್ಮ ಗುರುತಿನ ಚೀಟಿ ಮತ್ತು ವಹಿವಾಟಿನ ಬಗ್ಗೆ ಮಾಹಿತಿ ಕೇಳುತ್ತಾರೆ. ನೀವು ಸರಿಯಾದ ದಾಖಲೆಗಳನ್ನು ನೀಡಿದಾಗ, ಬ್ಯಾಂಕ್ ನಿಮ್ಮ ವಹಿವಾಟು ಸರಿಯಾಗಿದೆ ಎಂದು ಮನವರಿಕೆ ಮಾಡಿಕೊಂಡು 7 ದಿನಗಳೊಳಗೆ ‘ಕುಂದುಕೊರತೆ ನಿವಾರಣಾ ಪೋರ್ಟಲ್’ನಲ್ಲಿ ದೂರು ದಾಖಲಿಸುತ್ತದೆ.
  • ಪೊಲೀಸ್ ಪರಿಶೀಲನೆ : ಸಂಬಂಧಿಸಿದ ತನಿಖಾಧಿಕಾರಿ ನಿಮ್ಮ ದೂರನ್ನು ಪರಿಶೀಲಿಸುತ್ತಾರೆ, ಹೆಚ್ಚಿನ ಸಂದರ್ಭಗಳಲ್ಲಿ ವೀಡಿಯೊ ಕಾಲ್ ಮೂಲಕ ವಿಚಾರಣೆ ನಡೆಸುವ ಅವಕಾಶ ಇದೆ. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು (Addl. SP ಅಥವಾ Dy SP) ಮತ್ತು ರಾಜ್ಯ ಮಟ್ಟದಲ್ಲಿ ಡಿಜಿ ಅಥವಾ ಐಜಿ ದರ್ಜೆಯ ಅಧಿಕಾರಿಗಳನ್ನು ಕುಂದುಕೊರತೆ ನಿವಾರಣೆಗಾಗಿ ನೇಮಿಸಲಾಗಿದೆ.
  • ಹಿರಿಯ ನಾಗರಿಕರು, ಅಂಗವಿಕಲರಿಗೆ ವಿಶೇಷ ಸೌಲಭ್ಯ : ಈ SOP ಪ್ರಕಾರ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಗಂಭೀರ ಅನಾರೋಗ್ಯ ಇರುವವರು ತಮ್ಮ ಪರವಾಗಿ ಮತ್ತೊಬ್ಬರು grievance ಸಲ್ಲಿಸಬಹುದು, ಬ್ಯಾಂಕ್ ಶಾಖೆಗೆ ಬರುವ ಕಷ್ಟ ಇಲ್ಲ.
  • ನಿಮ್ಮದೇ ಖಾತೆ ವಂಚನೆಯ ಬಲಿ ಆದರೆ : ನೀವೇ ವಂಚನೆಯ ಬಲಿಪಶು ಎಂದು ಸಾಬೀತು ಪಡಿಸಿದರೆ ಮತ್ತು ಯಾವುದೇ ಕಾನೂನು ಅಡ್ಡಿ ಇಲ್ಲದಿದ್ದರೆ, ಬ್ಯಾಂಕ್ ಕೂಡಲೇ ನಿಮ್ಮ ಖಾತೆ ಮೇಲಿನ ಫ್ರೀಜ್ ಬಿಡುಗಡೆ ಮಾಡಬೇಕು.
  • ಸಮಯದ ಗಡವು : ನೀವು ದೂರು ನೀಡಿದ 15 ದಿನಗಳಲ್ಲಿ ಉತ್ತರ ಬರದಿದ್ದರೆ, ನಿಮ್ಮ ದೂರು ಸ್ವಯಂಚಾಲಿತವಾಗಿ ಜಿಲ್ಲಾ ದೂರು ನಿವಾರಣಾ ಅಧಿಕಾರಿಗೆ ಹೋಗುತ್ತದೆ. ನಿಮಗೆ ಅವರ ತೀರ್ಪು ಸರಿಯೆನ್ನಿಸದಿದ್ದರೆ ಜಿಲ್ಲಾ ಅಧಿಕಾರಿಯ ನಿರ್ಧಾರ ವಿರುದ್ಧ ರಾಜ್ಯ ದೂರು ನಿವಾರಣಾ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು. ಪ್ರತಿಯೊಂದು ಹಂತಕ್ಕೂ 15 ದಿನಗಳ ಗಡುವು ಇದೆ. ಸಲ್ಲಿಸಿದ 90 ದಿನಗಳ ಒಳಗೆ ಖಾತೆ ಫ್ರೀಜ್ ಆಗಿರಲು ಸ್ಪಷ್ಟ ಕಾನೂನು ಕಾರಣ ಇರಬೇಕು. FIR, ಕೋರ್ಟ್ ಆದೇಶ ಅಥವಾ ಸ್ಪಷ್ಟ ತನಿಖಾ ಅವಶ್ಯಕತೆ ಇವುಗಳಲ್ಲಿ ಏನೂ ಇಲ್ಲದಿದ್ದರೆ, ಬ್ಯಾಂಕ್ ಖಾತೆ ಅನ್ಫ್ರೀಜ್ ಮಾಡಬೇಕು.
  • ಲಭ್ಯವಿರುವ ಕಾನೂನು ಆಯ್ಕೆಗಳು : ಯಾವುದೇ ಹಂತದಲ್ಲಿ ನೀವು ಕೋರ್ಟ್ ಮೊರೆ ಹೋಗಬಹುದು, ಇದು ನಿಮ್ಮ ಮೂಲ ಹಕ್ಕು. ಬಿಎನ್‌ಎಸ್‌ಎಸ್ ಸೆಕ್ಷನ್ ೧೦೬(೩) ಪ್ರಕಾರ ಪೊಲೀಸರು ಮ್ಯಾಜಿಸ್ಟ್ರೇಟ್‌ಗೆ ವರದಿ ನೀಡಿ, ನಿಮ್ಮಿಂದ ಒಂದು ನಷ್ಟ ಪರಿಹಾರ ಬಾಂಡ್ ಪಡೆದು ಖಾತೆಯನ್ನು ಬಿಡುಗಡೆ ಮಾಡಬಹುದು. ನೀವು ಬಿಎನ್‌ಎಸ್‌ಎಸ್ ಸೆಕ್ಷನ್ ೪೯೭ ಅಥವಾ ೫೦೩ ರ ಅಡಿಯಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ನಿಮ್ಮ ಖಾತೆ ಅಥವಾ ಹಣ ಬಿಡುಗಡೆ ಮಾಡುವಂತೆ ಕೇಳಬಹುದು.

ಕೊನೆಯ ಮಾತು : ಡಿಜಿಟಲ್ ಜಗತ್ತಿನಲ್ಲಿ ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿದೆ. ನಿಮ್ಮ ಬ್ಯಾಂಕ್ ಖಾತೆ ತಪ್ಪಾಗಿ ಫ್ರೀಜ್ ಆಗಿದ್ದರೆ ಭಯಪಡಬೇಡಿ. ಈ ಹೊಸ SOP ನಿಮ್ಮಂತೆಯೇ ಇರುವ ಸಾಮಾನ್ಯ ಜನರ ಹಿತರಕ್ಷಣೆಗಾಗಿಯೇ ಸಿದ್ಧಪಡಿಸಲಾಗಿದೆ. ಕಾನೂನು ಈಗ ನಿಮ್ಮ ಬೆನ್ನಿಗಿದೆ, ಅದರ ಸದುಪಯೋಗ ಪಡಿಸಿಕೊಳ್ಳಿ. ಈ SOP ಯ ಮಹತ್ವವೇನೆಂದರೆ, ಮೊದಲು ಖಾತೆ ಫ್ರೀಜ್ ಅಂದರೆ ಬಲಿಪಶುವಿಗೆ ತಿಂಗಳು – ವರ್ಷಗಳ ನರಕ, ತಮ್ಮ ಕೆಲಸ ಬಿಟ್ಟು ಪೊಲೀಸ್–ಬ್ಯಾಂಕ್ ನಡುವೆ ತಿರುಗಾಟವಿರುತಿತ್ತು. ಈ SOP ನಂತರ, ಬಲಿಪಶುವಿಗೆ ಏನು ಮಾಡಬೇಕೆಂಬ ಸ್ಪಷ್ಟ ಪ್ರಕ್ರಿಯೆ, ಸಮಯ ಮಿತಿ, ಮೇಲ್ಮನವಿ ಹಕ್ಕು ಮತ್ತು ಮಾನವೀಯ ದೃಷ್ಟಿಕೋನ ಸಿಗುವ ಅವಕಾಶವಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ