AI rule

AI, ಡೀಪ್‌ಫೇಕ್ ಹಾವಳಿ : ನಿಮ್ಮ ಸುರಕ್ಷತೆಗಾಗಿ ಭಾರತದ ಹೊಸ ‘AI ಕಾನೂನು’

ಈ ಅಂಕಣದಲ್ಲಿ ನಾನು ಡೀಪ್‌ಫೇಕ್ ಪಿಡುಗನ್ನು ತಡೆಗಟ್ಟಲು ಮತ್ತು ಸುರಕ್ಷಿತ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದ ಅನುಭವಕ್ಕಾಗಿ ಭಾರತ ಸರಕಾರವು ಬಿಡುಗಡೆ ಮಾಡಿರುವ ಹೊಸ ಕರಡು AI ಕಾನೂನಿನ ಬಗ್ಗೆ ತಿಳಿಸಿಕೊಡಲಿದ್ದೇನೆ.

ಇಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (Artificial Intelligence — AI) ಸಹಾಯದಿಂದ ಸುಲಭವಾಗಿ ವೀಡಿಯೋ, ಆಡಿಯೋ, ಚಿತ್ರಗಳನ್ನು ತಯಾರಿಸಬಹುದು. ಇದರ ಬಳಕೆಯಿಂದ ಕೆಲವು ಒಳ್ಳೆಯ ಉಪಯೋಗಗಗಳು(ಚಲನಚಿತ್ರ, ಜಾಹಿರಾತು, ಅನಿಮೇಷನ್ ಇತ್ಯಾದಿ) ಕಂಡುಬಂದರು, ಹೆಚ್ಚಾಗಿ ಇದರ ದುರುಪಯೋಗವೇ(ಡೀಪ್‌ಫೇಕ್‌, ಸೈಬರ್ ಅಪರಾಧಗಳಿಗೆ, ಚುನಾವಣೆ ಅಕ್ರಮಗಳು, ಗೌರವ ಹಾನಿ ಇತ್ಯಾದಿ) ಆಗಿದೆ. ಡೀಪ್‌ಫೇಕ್‌ ಕುರಿತು ನಾನು ಅನೇಕ ಲೇಖನಗಳನ್ನು ಬರೆದಿದ್ದೇನೆ, ಅದನ್ನು ಓದಲು ನೀವು ನನ್ನ ದ್ವಿಭಾಷಾ ಬ್ಲಾಗ್ ಸಂದರ್ಶಿಸಿ. ಈ ಅಪಾಯವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರಕಾರ, ಇಂಟರ್‌ನೆಟ್ ಜಗತ್ತಿನ ದೈತ್ಯ ಕಂಪನಿಗಳಾದ ಗೂಗಲ್, ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಿಗೆ (ಇವುಗಳನ್ನು ‘ಮಧ್ಯವರ್ತಿಗಳು’ ಎನ್ನುತ್ತಾರೆ) ಮತ್ತು AI ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಕಂಪನಿಗಳಿಗೆ ಕಟ್ಟುನಿಟ್ಟಿನ ಹೊಸ ಕರಡು ನಿಯಮಗಳನ್ನು 2021ರಲ್ಲಿ ಜಾರಿಗೆ ಬಂದಿದ್ದ “ಇಂಟರ್‌ಮೀಡಿಯರಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿನಿಯಮಗಳು” ಗೆ ತಿದ್ದುಪಡಿ ರೂಪದಲ್ಲಿ ಕಳೆದ ಅಕ್ಟೋಬರ್ 22 ರಂದು ಜಾರಿಗೆ ತಂದಿದೆ. ಈ ಹೊಸ ಕರಡು ನಿಯಮದ ಬಗ್ಗೆ ನಿಮಗೇನಾದರು ಹೇಳುವುದಿದ್ದರೆ ಅದನ್ನು ನೀವು itrules.consultation@meity.gov.in ಇಮೇಲ್ ವಿಳಾಸಕ್ಕೆ msword ಅಥವಾ pdf ರೂಪದಲ್ಲಿ ಮುಂಬರುವ ನವೆಂಬರ್ 6 ರ ಒಳಗೆ ಕಳುಹಿಸಿ.

ಹೊಸ ಕರುಡು AI ಕಾನೂನಿನ ಮುಖ್ಯ ಅಂಶಗಳು :-

  • ‘ಡೀಪ್‌ಫೇಕ್’ ಅಥವಾ ‘AI ನಿಂದ ಸೃಷ್ಟಿಸಿದ’ ಕಂಟೆಂಟ್‌ಗೆ ಬಂತು ಹೊಸ ಕಾನೂನಿನ ಹೆಸರು: ‘ಸಿಂಥೆಟಿಕಲಿ ಜೆನೆರೇಟೆಡ್ ಇನ್ಫರ್ಮೇಷನ್’ ಅಥವಾ ಕನ್ನಡದಲ್ಲಿ ‘ಸಂಶ್ಲೇಷಿತ ಮಾಹಿತಿ’.
  • AI ಬಳಸಿ ಸೃಷ್ಟಿಯಾದ ಯಾವುದೇ ಕಂಟೆಂಟ್ (ಫೋಟೋ, ವಿಡಿಯೋ, ಆಡಿಯೋ) ಅನ್ನು ಬಳಕೆದಾರರಿಗೆ ತೋರಿಸಿದರೆ, ಅದರ ಮೇಲೆ “ಇದು AI ನಿಂದ ಸೃಷ್ಟಿಸಲ್ಪಟ್ಟಿದೆ” ಅಥವಾ “AI ನಿಂದ ಬದಲಾಯಿಸಲಾದ ವಿಡಿಯೋ” ಎಂದು ಸ್ಪಷ್ಟವಾಗಿ, ಸುಲಭವಾಗಿ ಕಾಣುವಂತೆ ‘ಲೇಬಲ್’ ಹಾಕಲೇಬೇಕು.
  • ಎಲ್ಲಾ ಮಧ್ಯವರ್ತಿ ಕಂಪನಿಗಳು ತಮ್ಮ ಬಳಕೆದಾರರಿಗೆ ಸ್ಪಷ್ಟವಾಗಿ ತಿಳಿಸಬೇಕು – “ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನೀವು ಡೀಪ್‌ಫೇಕ್, ಅಶ್ಲೀಲ, ಹಿಂಸಾತ್ಮಕ, ಅಥವಾ ದೇಶದ ಕಾನೂನು ಮುರಿಯುವ ಯಾವುದೇ ವಿಷಯವನ್ನು ಹಾಕುವಂತಿಲ್ಲ.”
  • ಯಾರಾದರೂ ತಮ್ಮ ಬಗ್ಗೆ ನಕಲಿ, ಅಶ್ಲೀಲ ಅಥವಾ ಮಾನಹಾನಿಕರವಾದ ಡೀಪ್‌ಫೇಕ್ ವಿಡಿಯೋ ಅಥವಾ ಫೋಟೋ ಬಗ್ಗೆ ದೂರು ನೀಡಿದರೆ, ಆ ಕಂಪನಿಯು (ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಇತ್ಯಾದಿ) ಆ ದೂರು ಸ್ವೀಕರಿಸಿದ 24 ಗಂಟೆಗಳ ಒಳಗೆ ಆ ಕಂಟೆಂಟ್‌ನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು.
  • ಯಾವುದೇ ಕಂಪನಿ ತನ್ನ ಹೊಸ AI ಮಾಡೆಲ್ ಅನ್ನು (ಉದಾ: ChatGPT-5 ಅಥವಾ Gemini 2.0) ಪೂರ್ತಿಯಾಗಿ ಪರೀಕ್ಷೆ ಮಾಡದೆ, ‘ಪರೀಕ್ಷಾರ್ಥ’ ಅಥವಾ ‘ಭರವಸೆಯಿಲ್ಲದ’ ಹಂತದಲ್ಲಿ ಕೇಂದ್ರ ಸರಕಾರದ ಅನುಮತಿಯಿಲ್ಲದೆ ಸಾರ್ವಜನಿಕರಿಗೆ ಬಿಡುಗಡೆ ಮಾಡುವಂತಿಲ್ಲ.
  • AI ಬಳಸಿ ಸೃಷ್ಟಿಸಲಾದ ಪ್ರತಿಯೊಂದು ಫೋಟೋ, ವಿಡಿಯೋ ಅಥವಾ ಆಡಿಯೋದಲ್ಲಿ, ಅದನ್ನು ಯಾರು, ಯಾವಾಗ, ಹೇಗೆ ಸೃಷ್ಟಿಸಿದರು ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗುವಂತಹ ಒಂದು ‘ಡಿಜಿಟಲ್ ಸಹಿ’ ಅಥವಾ ‘ವಾಟರ್‌ಮಾರ್ಕ್’ ಅನ್ನು ಅಳವಡಿಸಬೇಕು.
  • ಯಾವುದೇ ನಿಯಮಗಳನ್ನು ಪಾಲಿಸಲು ಗೂಗಲ್, ಫೇಸ್‌ಬುಕ್‌ನಂತಹ ಕಂಪನಿಗಳು ವಿಫಲವಾದರೆ, ಅವುಗಳಿಗೆ ಭಾರತೀಯ ಕಾನೂನಿನ ಅಡಿಯಲ್ಲಿ ಸಿಗುತ್ತಿದ್ದ ‘ಸುರಕ್ಷಿತ ರಕ್ಷಣೆ’ ಯನ್ನು ರದ್ದುಪಡಿಸಲಾಗುವುದು, ಮತ್ತು ಆ ಕಂಪನಿಯನ್ನೂ ಸಹ ಆರೋಪಿಯನ್ನಾಗಿ ಮಾಡಿ, ಕೋರ್ಟಿಗೆ ಎಳೆಯಬಹುದು.

ಹೊಸ AI ಕಾನೂನು ಸಾಮಾನ್ಯ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತವೆ :-

  • ಹೆಚ್ಚಿದ ಸುರಕ್ಷತೆ : ಇನ್ನು ಮುಂದೆ ನೀವು ನೋಡುವ ವಿಡಿಯೋ ಅಥವಾ ಫೋಟೋ ನಿಜವೇ, ಸುಳ್ಳೇ ಎಂದು ತಿಳಿಯಲು ‘AI ಲೇಬಲ್’ ನಿಮಗೆ ಸಹಾಯ ಮಾಡುತ್ತದೆ. ಇದರಿಂದ ವಂಚನೆಗೆ ಒಳಗಾಗುವುದು, ಸುಳ್ಳು ಸುದ್ದಿಗಳನ್ನು ನಂಬುವುದು ಕಡಿಮೆಯಾಗುತ್ತದೆ.
  • ಮಹಿಳೆಯರು ಮತ್ತು ಮಕ್ಕಳ ರಕ್ಷಣೆ : ಡೀಪ್‌ಫೇಕ್ ತಂತ್ರಜ್ಞಾನದ ಅತಿ ದೊಡ್ಡ ಸಂತ್ರಸ್ತರು ಮಹಿಳೆಯರು. ಅವರ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಪಡಿಸಿ ಹರಿಬಿಡುವ ಪ್ರಕರಣಗಳು ಹೆಚ್ಚಾಗಿದ್ದವು. ಹೊಸ 24-ಗಂಟೆಯ ‘ಡಿಲೀಟ್’ ನಿಯಮದಿಂದಾಗಿ, ಸಂತ್ರಸ್ತರು ತಕ್ಷಣವೇ ಅಂತಹ ಕಂಟೆಂಟ್‌ಗಳನ್ನು ತೆಗೆಸಬಹುದು.
  • ನೈಜ ಸುದ್ದಿಗಳ ವಿಶ್ವಾಸಾರ್ಹತೆ : ಚುನಾವಣೆ ಸಮಯದಲ್ಲಿ ನಾಯಕರ ನಕಲಿ ಭಾಷಣಗಳನ್ನು ಸೃಷ್ಟಿಸಿ ಗಲಭೆ ಎಬ್ಬಿಸುವ ಸಾಧ್ಯತೆ ಇತ್ತು. ಈಗ ಲೇಬಲಿಂಗ್ ಮತ್ತು ವಾಟರ್‌ಮಾರ್ಕಿಂಗ್‌ನಿಂದಾಗಿ, ಅಂತಹ ಸುಳ್ಳು ಸುದ್ದಿಗಳ ಹರಡುವಿಕೆಗೆ ಕಡಿವಾಣ ಬೀಳುತ್ತದೆ.
  • ಜವಾಬ್ದಾರಿಯುತ ಕಂಪನಿಗಳು : “ನಮಗೇನೂ ಸಂಬಂಧವಿಲ್ಲ” ಎಂದು ಕುಳಿತುಕೊಳ್ಳುತ್ತಿದ್ದ ಫೇಸ್‌ಬುಕ್, ವಾಟ್ಸ್‌ಆ್ಯಪ್‌ ಕಂಪನಿಗಳು, ಈಗ ನಿಮ್ಮ ದೂರುಗಳನ್ನು ಗಂಭೀರವಾಗಿ ಪರಿಗಣಿಸಲೇಬೇಕು. ಇಲ್ಲದಿದ್ದರೆ ಅವರೇ ಕಾನೂನು ಸಂಕಷ್ಟಕ್ಕೆ ಸಿಲುಕುತ್ತಾರೆ.

ಕಡೆಯದಾಗಿ ಇದು ತಂತ್ರಜ್ಞಾನದ ವಿರುದ್ಧದ ಹೋರಾಟವಲ್ಲ, ಬದಲಾಗಿ ತಂತ್ರಜ್ಞಾನವನ್ನು ಮನುಷ್ಯನ ಒಳಿತಿಗಾಗಿ ‘ಜವಾಬ್ದಾರಿಯುತವಾಗಿ’ ಬಳಸುವಂತೆ ಮಾಡುವ ಹೋರಾಟ. ಈ ಹೋರಾಟದಲ್ಲಿ ಸರಕಾರ, ಕಂಪನಿಗಳು ಮತ್ತು ಸಾಮಾನ್ಯ ಜನರೂ ಒಟ್ಟಾಗಿ ಕೈಜೋಡಿಸಬೇಕಿದೆ.

AI ಕಾನೂನು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ