CCTNS

ಆಧುನಿಕ ಪೊಲೀಸ್‌ ವ್ಯವಸ್ಥೆಯ ಬೆನ್ನೆಲುಬು: CCTNS

ಈ ಅಂಕಣದಲ್ಲಿನ ನಾನು ಆಧುನಿಕ ಪೊಲೀಸ್‌ ವ್ಯವಸ್ಥೆಯ ಬೆನ್ನೆಲುಬಾಗಿರುವ CCTNS(Crime and Criminal Tracking Network & Systems) ಯೋಜನೆಯ ಬಗ್ಗೆ, ಅದರ ವೈಶಿಷ್ಟಗಳ ಬಗ್ಗೆ ಮತ್ತು ವಿವಿಧ ರಾಜ್ಯಗಳು ಅದನ್ನು ಸ್ಥಳೀಯ ಸಾರ್ವಜನಿಕರ, ವಕೀಲರ ಮತ್ತು ಪೋಲೀಸರ ಅಗತ್ಯಗಳಿಗೆ ತಕ್ಕಂತೆ ಮಾರ್ಪಡಿಸಲು ಹೇಗೆ ವಿಸ್ತರಿಸಿದ್ದಾರೆ ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.

ಕಳೆದ ಕೆಲವು ವಾರಗಳಿಂದ ನಾನು AI ಅಥವಾ ಕೃತಕ ಬುದ್ದಿಮತ್ತೆ ಹೇಗೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲೆ ಪ್ರಭಾವ ಬೀರಿದೆ ಎಂಬುದರ ಬಗ್ಗೆ ತಿಳಿಸಕೊಡುತ್ತಿದ್ದೇನೆ. ಅದರ ಮುಂದುವರೆದ ಭಾಗವಾಗಿ ಇಂದು ನಾನು ಭಾರತದಾದ್ಯಂತ ಪೊಲೀಸ್‌ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತಂದಿರುವ ಒಂದು ಪ್ರಮುಖ ಯೋಜನೆ ಮತ್ತು ಆಧುನಿಕ ಪೊಲೀಸ್‌ ವ್ಯವಸ್ಥೆಯ ಬೆನ್ನೆಲುಬಾಗಿರುವ CCTNS ಅಥವಾ “ಕ್ರೈಮ್‌ ಅಂಡ್‌ ಕ್ರಿಮಿನಲ್‌ ಟ್ರ್ಯಾಕಿಂಗ್‌ ನೆಟ್‌ವರ್ಕ್‌ ಆಂಡ್ ಸಿಸ್ಟಮ್ಸ್” ಅಂದರೆ ಅಪರಾಧ ಮತ್ತು ಅಪರಾಧಿಗಳ ಪತ್ತೆ ಹಚ್ಚುವ ನೆಟ್‌ವರ್ಕ್‌ ಬಗ್ಗೆ ತಿಳಿಸಿಕೊಡಲಿದ್ದೇನೆ.

ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಈ CCTNS ಯೋಜನೆಯ ಮುಖ್ಯ ಗುರಿ ಏನೆಂದರೆ, ತಂತ್ರಜ್ಞಾನವನ್ನು ಬಳಸಿ ಪೊಲೀಸ್ ಇಲಾಖೆಯ ಕೆಲಸವನ್ನು ಇನ್ನಷ್ಟು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುವುದು. ಈ ಯೋಜನೆ, “ಅಪರಾಧಗಳ ತನಿಖೆ ಮತ್ತು ಅಪರಾಧಿಗಳ ಪತ್ತೆ”ಗಾಗಿ ದೇಶಾದ್ಯಂತ ಒಂದು ದೊಡ್ಡ ನೆಟ್‌ವರ್ಕ್ ಮತ್ತು ಆಧುನಿಕ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸಿದ್ಧಪಡಿಸುತ್ತಿದೆ. ಅಪರಾಧ ಮತ್ತು ಅಪರಾಧಿಗಳ ದಾಖಲೆಗಳನ್ನು ಒಂದುಗೂಡಿಸಿ, ದೇಶದ ಎಲ್ಲಾ ಪೊಲೀಸ್ ಠಾಣೆಗಳನ್ನು ಸಂಪರ್ಕಿಸುವ ಈ ಯೋಜನೆ, ಪೊಲೀಸರಿಗೆ ಅಪರಾಧ ತನಿಖೆಯನ್ನು ಸುಲಭಗೊಳಿಸಿದೆ. ಆದರೆ, ಈ ಯೋಜನೆಯನ್ನು ಕರ್ನಾಟಕ ಮತ್ತು ಇತರ ರಾಜ್ಯಗಳು ಕೇವಲ ತಂತ್ರಜ್ಞಾನವಾಗಿ ನೋಡದೆ, ಅದನ್ನು ಸ್ಥಳೀಯ ಸಾರ್ವಜನಿಕರ, ವಕೀಲರ ಮತ್ತು ಪೋಲೀಸರ ಅಗತ್ಯಗಳಿಗೆ ತಕ್ಕಂತೆ ಮಾರ್ಪಡಿಸಲು ಹೇಗೆ ವಿಸ್ತರಿಸಿದ್ದಾರೆ ಎಂಬುದನ್ನು ಕೂಡ ಈ ಅಂಕಣದಲ್ಲಿ ನಾನು ತಿಳಿಸಿಕೊಡಲಿದ್ದೇನೆ.

ಪ್ರಾಚೀನ ಸಮಸ್ಯೆಗೆ ಆಧುನಿಕ ಪರಿಹಾರ: CCTNS ಏಕೆ ಬೇಕಿತ್ತು?

ಕೆಲವು ವರ್ಷಗಳ ಹಿಂದೆ, ನೀವು ಯಾವುದೇ ಒಂದು ಪೊಲೀಸ್‌ ಠಾಣೆಗೆ ದೂರು ನೀಡಲು ಹೋದರೆ, ಅಲ್ಲಿ ಎಲ್ಲವೂ ಕೈಬರಹದ ರಿಜಿಸ್ಟರ್‌ಗಳಲ್ಲಿ ದಾಖಲಾಗುತ್ತಿತ್ತು. ಎಫ್‌ಐಆರ್‌ಗಳು, ಅಪರಾಧಿಗಳ ವಿವರಗಳು, ಪ್ರಕರಣದ ನಡಾವಳಿಗಳು – ಇವೆಲ್ಲವೂ ಕಾಗದಪತ್ರಗಳ ರೂಪದಲ್ಲಿ ಇರುತ್ತಿದ್ದವು. ಒಂದು ಪೊಲೀಸ್‌ ಠಾಣೆಗೆ ಸೀಮಿತವಾದ ಈ ಮಾಹಿತಿ, ಮತ್ತೊಂದು ಜಿಲ್ಲೆ ಅಥವಾ ರಾಜ್ಯದ ಪೊಲೀಸ್‌ ಠಾಣೆಗೆ ಸುಲಭವಾಗಿ ಲಭ್ಯವಾಗುತ್ತಿರಲಿಲ್ಲ. ಒಂದು ಕೊಲೆ ಅಥವಾ ದರೋಡೆ ಪ್ರಕರಣದಲ್ಲಿ ಅಪರಾಧಿಯು ಬೇರೊಂದು ರಾಜ್ಯದಲ್ಲಿ ಅಡಗಿ ಕುಳಿತಿದ್ದರೆ, ಆತನ ಹಿಂದಿನ ಅಪರಾಧಗಳ ದಾಖಲೆಗಳನ್ನು ಪಡೆಯಲು ತಿಂಗಳುಗಟ್ಟಲೆ ಕಾಯಬೇಕಾಗುತ್ತಿತ್ತು. ಇದು ಪೊಲೀಸರ ಕಾರ್ಯಕ್ಷಮತೆಯನ್ನು ಕಡಿಮೆ ಮಾಡಿ, ಅಪರಾಧ ತನಿಖೆಯನ್ನು ನಿಧಾನಗೊಳಿಸುತ್ತಿತ್ತು.
ಇದಕ್ಕೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ, ಕೇಂದ್ರ ಗೃಹ ಸಚಿವಾಲಯವು 2009ರಲ್ಲಿ CCTNS ಯೋಜನೆಯನ್ನು ಪ್ರಾರಂಭಿಸಿತು. ಇದರ ಮುಖ್ಯ ಉದ್ದೇಶವೆಂದರೆ, ದೇಶದ ಎಲ್ಲಾ 15,000ಕ್ಕೂ ಹೆಚ್ಚು ಪೊಲೀಸ್‌ ಠಾಣೆಗಳು ಮತ್ತು 5,000ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳ ಕಚೇರಿಗಳನ್ನು ಒಂದು ಸಾಮಾನ್ಯ ಡಿಜಿಟಲ್‌ ನೆಟ್‌ವರ್ಕ್‌ ಅಡಿಯಲ್ಲಿ ತರುವುದು. ಇದರ ಮೂಲಕ ಯಾವುದೇ ಒಂದು ಠಾಣೆಯಲ್ಲಿ ದಾಖಲಾದ ಮಾಹಿತಿ, ಇಡೀ ದೇಶದ ಪೊಲೀಸರಿಗೆ ತಕ್ಷಣವೇ ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಹಿಂದಿನ ಮೂಲ ಕಲ್ಪನೆಯಾಗಿತ್ತು. ಇದರ ಅನುಷ್ಠಾನಕ್ಕೆ 2008 ರಲ್ಲಿ ಮುಂಬೈ ನಗರದಲ್ಲಿ ನಡೆದ ಅಮಾನುಷ ಭಯೋತ್ಪಾದಕ ದಾಳಿ ನಂತರ, ಮುಂದೆ ಇಂತಹ ದಾಳಿಯನ್ನು ತಡೆಯಲು ಏನು ಮಾಡಬೇಕು ಎಂಬುದರ ಕುರಿತು ರಚಿಸಿದ ಸಮಿತಿಯ ಸಲಹೆಯು ಕಾರಣವಾಗಿತ್ತು.

CCTNS ನ ಪ್ರಮುಖ ವೈಶಿಷ್ಟ್ಯಗಳು ಮತ್ತು ಅವು ಹೇಗೆ ಕೆಲಸ ಮಾಡುತ್ತವೆ?

ಸಾಮಾನ್ಯ ನಾಗರಿಕರಿಗೆ CCTNS ಹಲವು ಪ್ರಯೋಜನಗಳನ್ನು ನೀಡುತ್ತದೆ. ಅವುಗಳಲ್ಲಿ ಕೆಲವು ಮುಖ್ಯ ವೈಶಿಷ್ಟ್ಯಗಳು ಇಲ್ಲಿವೆ:

  1. ಆನ್‌ಲೈನ್‌ ಎಫ್‌ಐಆರ್‌ ಸಲ್ಲಿಕೆ/ಪರಿಶೀಲನೆ : ಈಗ ನೀವು ಒಂದು ದೂರು ನೀಡಲು ಪೊಲೀಸ್‌ ಠಾಣೆಗೆ ಹೋಗಬೇಕಾಗಿಲ್ಲ. ಆನ್‌ಲೈನ್‌ ಪೋರ್ಟಲ್‌ ಮೂಲಕವೇ ನಿಮ್ಮ ದೂರು ಅಥವಾ ಎಫ್‌ಐಆರ್‌ ದಾಖಲಿಸಬಹುದು ಮತ್ತು ಪರಿಶೀಲಿಸಬಹುದು. ಇದರಿಂದ ಸಮಯ ಉಳಿತಾಯವಾಗುವುದಲ್ಲದೆ, ದೂರುದಾರರು ಅನಗತ್ಯ ಅಲೆದಾಟ ತಪ್ಪಿಸಬಹುದು.
  2. ಪ್ರಕರಣಗಳ ಸ್ಥಿತಿ ಪರಿಶೀಲನೆ : ನೀವು ದಾಖಲಿಸಿದ ದೂರಿನ ಸ್ಥಿತಿ ಏನಾಗಿದೆ ಎಂಬುದನ್ನು ಆನ್‌ಲೈನ್‌ನಲ್ಲಿಯೇ ಪರಿಶೀಲಿಸಬಹುದು. ಇದರಿಂದ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂದು ತಿಳಿದುಕೊಳ್ಳುವುದು ಸುಲಭವಾಗುತ್ತದೆ.
  3. ಅಪರಾಧಿಗಳ ಕೇಂದ್ರೀಕೃತ ದತ್ತಾಂಶ : ಇದೇ CCTNS ನ ನಿಜವಾದ ಶಕ್ತಿ. ಇದರಲ್ಲಿ ಅಪರಾಧಿಗಳ ಹೆಸರು, ಅವರ ಅಪರಾಧದ ಇತಿಹಾಸ, ಭಾವಚಿತ್ರಗಳು, ಬೆರಳಚ್ಚು, ಮತ್ತು ಇತರ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಈ ದತ್ತಾಂಶವು ದೇಶದ ಎಲ್ಲಾ ಪೊಲೀಸರಿಗೆ ಲಭ್ಯವಿರುತ್ತದೆ.
  4. ಪೊಲೀಸ್‌ ಪರಿಶೀಲನಾ ಸೇವೆಗಳು : ಪಾಸ್‌ಪೋರ್ಟ್‌ ಪರಿಶೀಲನೆ, ಮನೆಗೆಲಸದವರ ಅಥವಾ ಬಾಡಿಗೆದಾರರ ಪರಿಶೀಲನೆ, ಚಾರಿತ್ರ್ಯ ಪ್ರಮಾಣಪತ್ರ (Character Certificate) ಮುಂತಾದ ಸೇವೆಗಳಿಗೆ ಅರ್ಜಿ ಸಲ್ಲಿಸುವುದು ಈಗ ತುಂಬಾ ಸರಳವಾಗಿದೆ. ಈ ಸೇವೆಗಳಿಗೆ ಅರ್ಜಿ ಹಾಕಿದರೆ, ಪೊಲೀಸ್‌ ಪರಿಶೀಲನೆಯನ್ನು CCTNS ಮೂಲಕವೇ ಮಾಡಲಾಗುತ್ತದೆ, ಇದರಿಂದ ಅನಗತ್ಯ ವಿಳಂಬ ತಪ್ಪುತ್ತದೆ.
  5. ಕಳೆದುಹೋದ ವಸ್ತುಗಳ ವರದಿ : ನಿಮ್ಮ ಮೊಬೈಲ್‌ ಫೋನ್‌, ದಾಖಲೆ ಪತ್ರಗಳು ಅಥವಾ ಇತರ ವಸ್ತುಗಳು ಕಳೆದುಹೋದರೆ, ನೀವು ಆನ್‌ಲೈನ್‌ ಮೂಲಕವೇ ದೂರು ನೀಡಬಹುದು. ಈ ವರದಿಯು ಡಿಜಿಟಲ್‌ ರೂಪದಲ್ಲಿ ದಾಖಲಾಗುವುದರಿಂದ ಮುಂದೆ ಇದು ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

ಕರ್ನಾಟಕದ CCTNS ಮಾರ್ಪಾಡುಗಳು :-

  • ಇ-ಬೀಟ್ ವ್ಯವಸ್ಥೆ: ಬೀಟ್ ಪೊಲೀಸರಿಗೆ ಸ್ಮಾರ್ಟ್‌ಫೋನ್‌ಗಳನ್ನು ಒದಗಿಸಿ, ಅವರು ಗಸ್ತು ಹೋಗುವ ಸ್ಥಳಗಳು ಮತ್ತು ತಮ್ಮ ಕರ್ತವ್ಯಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
  • ಸುರಕ್ಷಾ ಆಪ್ : ಮಹಿಳೆಯರ ಸುರಕ್ಷತೆಗಾಗಿ ವಿನ್ಯಾಸಗೊಳಿಸಲಾದ ಈ ಮೊಬೈಲ್ ಅಪ್ಲಿಕೇಶನ್, ತುರ್ತು ಸಂದರ್ಭದಲ್ಲಿ ಒಂದು ಬಟನ್ ಒತ್ತಿದರೆ ಬಳಕೆದಾರರ ಸ್ಥಳವನ್ನು CCTNS ವ್ಯವಸ್ಥೆಗೆ ಕಳುಹಿಸುತ್ತದೆ, ತಕ್ಷಣವೇ ಹತ್ತಿರದ ಪೊಲೀಸರಿಗೆ ಮಾಹಿತಿ ತಲುಪುತ್ತದೆ.
  • ಪೊಲೀಸ್ ಕ್ಲಿಯರೆನ್ಸ್ ಆನ್‌ಲೈನ್ ಪ್ರಮಾಣಪತ್ರ : ಪಾಸ್‌ಪೋರ್ಟ್, ಉದ್ಯೋಗ ಅಥವಾ ವಿದೇಶ ಪ್ರವಾಸದಂತಹ ಉದ್ದೇಶಗಳಿಗಾಗಿ ಅಗತ್ಯವಿರುವ ಪೊಲೀಸ್ ಪರಿಶೀಲನಾ ಪ್ರಮಾಣಪತ್ರವನ್ನು ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಜಾರಿಗೆ ತರಲಾಗಿದೆ.
  • ಬಾಡಿಗೆದಾರರು ಮತ್ತು ನೌಕರರ ಆನ್‌ಲೈನ್ ಪರಿಶೀಲನೆ : ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ, ಬಾಡಿಗೆದಾರರು ಮತ್ತು ಮನೆಗೆಲಸದವರ ಹಿನ್ನೆಲೆ ಪರಿಶೀಲನೆಗಳನ್ನು CCTNS ಮೂಲಕ ಆನ್‌ಲೈನ್‌ನಲ್ಲಿಯೇ ಮಾಡಲು ಅವಕಾಶ ಕಲ್ಪಿಸಲಾಗಿದೆ.
  • ಕಾಣೆಯಾದ ವಸ್ತುಗಳ ಡಿಜಿಟಲ್ ವರದಿ : ಮೊಬೈಲ್, ದಾಖಲೆಗಳು, ಅಥವಾ ಇತರೆ ಬೆಲೆಬಾಳುವ ವಸ್ತುಗಳು ಕಳೆದುಹೋದಾಗ, ಪೊಲೀಸ್ ಠಾಣೆಗೆ ಹೋಗದೆ ಆನ್‌ಲೈನ್‌ನಲ್ಲಿ ವರದಿ ದಾಖಲಿಸುವ ವ್ಯವಸ್ಥೆ.

ಇತರ ರಾಜ್ಯಗಳ CCTNS ಮಾರ್ಪಾಡುಗಳು :-

  • ಗುಜರಾತ್ – ಡಿಜಿಟಲ್ ಡೈರಿ : ಗುಜರಾತ್ ಪೊಲೀಸರು ತಮ್ಮ ದೈನಂದಿನ ಚಟುವಟಿಕೆಗಳು ಮತ್ತು ಘಟನೆಗಳನ್ನು ದಾಖಲಿಸಲು ಕಾಗದದ ಬದಲು “ಡಿಜಿಟಲ್ ಡೈರಿ” ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. 
  • ಮಹಾರಾಷ್ಟ್ರ – ಮೊಬೈಲ್ ಡೇಟಾ ಟರ್ಮಿನಲ್ಸ್ : ಪೊಲೀಸ್ ವಾಹನಗಳಿಗೆ ಮೊಬೈಲ್ ಡೇಟಾ ಟರ್ಮಿನಲ್ಸ್‌ಗಳನ್ನು ಅಳವಡಿಸಲಾಗಿದೆ. ಇವುಗಳು CCTNS ಡೇಟಾಬೇಸ್‌ಗೆ ನೇರ ಸಂಪರ್ಕ ಹೊಂದಿವೆ. ಇದರಿಂದ ಗಸ್ತು ತಿರುಗುವ ಅಧಿಕಾರಿಗಳು ಯಾವುದೇ ಸ್ಥಳದಲ್ಲಿ ಅಪರಾಧಿಗಳ ವಿವರಗಳನ್ನು, ವಾಹನದ ಮಾಹಿತಿಗಳನ್ನು ಮತ್ತು ಹಿಂದಿನ ಅಪರಾಧಗಳ ದಾಖಲೆಗಳನ್ನು ತಕ್ಷಣವೇ ಪರಿಶೀಲಿಸಬಹುದು.
  • ಹಿಮಾಚಲ ಪ್ರದೇಶ – ಪ್ರವಾಸಿಗರಿಗೆ ಸೇವೆಗಳು : ವಾಸಿಗರು ಕಳೆದುಹೋದ ವಸ್ತುಗಳ ವರದಿ ಮಾಡುವುದು, ಮತ್ತು ತುರ್ತು ಮಾಹಿತಿಯನ್ನು ಪಡೆಯಲು CCTNS ವ್ಯವಸ್ಥೆಯು ಸಹಾಯ ಮಾಡುತ್ತದೆ.
  • ಜಾರ್ಖಂಡ್ – ಅಪರಾಧಿಗಳ ಪ್ರೊಫೈಲ್ ಹುಡುಕಾಟ : ಅಪರಾಧಿಗಳ ಅಪರಾಧದ ವಿಧಾನ (Modus Operandi), ಅವರ ಇತಿಹಾಸ ಮತ್ತು ಬೆರಳಚ್ಚುಗಳ ಆಧಾರದ ಮೇಲೆ ಹುಡುಕಾಟ ನಡೆಸಲು CCTNS ಸುಧಾರಿತ ಪ್ರೊಫೈಲ್ ಹುಡುಕಾಟ ವ್ಯವಸ್ಥೆಅವಕಾಶ ನೀಡುತ್ತದೆ.
  • ಒಡಿಶಾ – ಆನ್‌ಲೈನ್ ವಾಹನ ಕಳ್ಳತನ ವರದಿ : ಇಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದ ದೂರುಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಿದ ತಕ್ಷಣವೇ CCTNS ಗೆ ಸೇರುತ್ತದೆ ಮತ್ತು ರಾಜ್ಯದಾದ್ಯಂತ ಎಲ್ಲಾ ಪೊಲೀಸ್ ಠಾಣೆಗಳಿಗೆ ಎಚ್ಚರಿಕೆಯ ಸಂದೇಶ ಹೋಗುತ್ತದೆ, ಇದರಿಂದ ವಾಹನವನ್ನು ಪತ್ತೆ ಹಚ್ಚುವ ಸಾಧ್ಯತೆ ಹೆಚ್ಚಾಗುತ್ತದೆ.

ಸುರಕ್ಷಿತ ಭಾರತಕ್ಕಾಗಿ CCTNS ಮುಂದಿನ ಯೋಜನೆಗಳು :-

CCTNS ಕೇವಲ ಒಂದು ಆರಂಭ. ಇದರ ಅಂತಿಮ ಗುರಿ ಭಾರತದ ಸಂಪೂರ್ಣ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಡಿಜಿಟಲ್ ರೂಪಕ್ಕೆ ತರುವುದು. ಮುಂದಿನ ದಿನಗಳಲ್ಲಿ, CCTNS ವ್ಯವಸ್ಥೆಯನ್ನು ಇ-ನ್ಯಾಯಾಲಯಗಳು (e-Courts) ಮತ್ತು ಇ-ಜೈಲುಗಳು (e-Prisons) ಜೊತೆ ಸಂಪರ್ಕಿಸುವ ಯೋಜನೆ ಇದೆ. ಇದರಿಂದ ಒಂದು ಎಫ್‌ಐಆರ್ ದಾಖಲಾದ ತಕ್ಷಣ, ಅದು ನೇರವಾಗಿ ನ್ಯಾಯಾಲಯದ ವ್ಯವಸ್ಥೆಗೆ ರವಾನೆಯಾಗುತ್ತದೆ. ನ್ಯಾಯಾಲಯದ ತೀರ್ಪು ಜೈಲಿನ ವ್ಯವಸ್ಥೆಗೆ ನೇರವಾಗಿ ತಲುಪುತ್ತದೆ. ಇದು ನ್ಯಾಯಾಂಗ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪಾರದರ್ಶಕ ಮತ್ತು ವೇಗವಾಗಿಸುತ್ತದೆ.

ಕೊನೆಯದಾಗಿ, CCTNS ಕೇವಲ ಪೊಲೀಸರಿಗಾಗಿ ಇರುವ ತಂತ್ರಜ್ಞಾನವಲ್ಲ. ಇದು ಸಾರ್ವಜನಿಕರ ಮತ್ತು ಕಾನೂನು ವ್ಯವಸ್ಥೆಯ ನಡುವೆ ಸೇತುವಾಗಿ ಕೆಲಸ ಮಾಡುವ ಒಂದು ನಾಗರಿಕ ಸ್ನೇಹಿ ಉಪಕ್ರಮ. CCTNS ನಂತಹ ಯೋಜನೆಗಳಿಂದಾಗಿ ಭಾರತದ ಪೊಲೀಸ್ ವ್ಯವಸ್ಥೆಯು ನಿಧಾನವಾಗಿ ಕಾಗದಪತ್ರಗಳ ಯುಗದಿಂದ ಹೊರಬಂದು, ಒಂದು ಸ್ಮಾರ್ಟ್, ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಾಗಿ ರೂಪುಗೊಳ್ಳುತ್ತಿದೆ. ಇದು ಸುರಕ್ಷಿತ ಮತ್ತು ಸುಭದ್ರ ಭಾರತದ ನಿರ್ಮಾಣಕ್ಕೆ ದೃಢವಾದ ಹೆಜ್ಜೆಯಾಗಿದೆ.

CCTNS
CCTNS

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ