AI Criminal

AI ಕ್ರಿಮಿನಲ್ ಆದಾಗ : ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು?

ಈ ಅಂಕಣದಲ್ಲಿ ನಾನು AI ಕ್ರಿಮಿನಲ್ ಆದರೆ ಏನು ಮಾಡಬೇಕು ಮತ್ತು ಅಪರಾಧಿಗಳು AI ಅನ್ನು ಸೈಬರ್ ಅಪರಾಧ ಮೊದಲಾದ ಅನೇಕ ವಿಧದ ವಂಚನೆ/ಅಪರಾಧಗಳಿಗೆ ಹೇಗೆ ಬಳಸುತ್ತಿದ್ದಾರೆ ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.

ಕಳೆದ ಕೆಲವು ವಾರಗಳಿಂದ ನಾನು AI(Artificial Intelligence – ಕೃತಕ ಬುದ್ಧಿಮತ್ತೆ) ಬಗ್ಗೆ ಮಾತನಾಡುತ್ತಿದ್ದೇನೆ. ಅದು ನಮ್ಮ ಕೆಲಸಗಳನ್ನು ಹೇಗೆ ಸುಲಭಗೊಳಿಸುತ್ತದೆ, ನ್ಯಾಯಾಲಯಗಳಲ್ಲಿ, ಪೊಲೀಸ್ ಇಲಾಖೆಗಳಲ್ಲಿ ಹಾಗು ವಕೀಲರಿಗೆ ಹೇಗೆ ಸಹಾಯ ಮಾಡುತ್ತದೆ ಮತ್ತು ಅದರ ಬಳಕೆಯಿಂದಾಗುವ ಅನುಕೂಲಗಳು/ಅನಾನುಕೂಲಗಳ ಮತ್ತು AI ChatGPT ಬಳಸಿ ನಡೆಸಿದ ಸೈಬರ್ ಅಪರಾಧಗಳ ಬಗ್ಗೆ ತಿಳಿಸಿದ್ದೆ ಅದನ್ನು ಓದಿ. AI ಎಂದರೆ ನಮ್ಮ ಮೆದುಳಿನಂತೆ ಯೋಚಿಸುವ, ಕಲಿಯುವ ಒಂದು ಕಂಪ್ಯೂಟರ್ ತಂತ್ರಜ್ಞಾನ ಎಂದು ಸರಳವಾಗಿ ಹೇಳಬಹುದು. ಇದು ಒಳ್ಳೆ ಕೆಲಸಗಳಿಗೆ ಹೇಗೆ ಬಳಕೆಯಾಗುತ್ತದೆಯೋ, ಹಾಗೆಯೇ ಕೆಟ್ಟ ಕೆಲಸಗಳಿಗೂ ಬಳಕೆಯಾಗಬಹುದು ಎಂಬ ಚಿಂತೆ ಈಗ ಶುರುವಾಗಿದೆ. “AI ಕ್ರಿಮಿನಲ್ ಆದಾಗ” ಎಂದರೆ AI ತಾನೇ ಅಪರಾಧ ಮಾಡುತ್ತದೆ ಎಂದಲ್ಲ, ಬದಲಿಗೆ ಕೆಟ್ಟ ಉದ್ದೇಶ ಹೊಂದಿರುವವರು AI ಅನ್ನು ಬಳಸಿ ಅಪರಾಧಗಳನ್ನು ಮಾಡಿದಾಗ ಏನಾಗುತ್ತದೆ ಎಂಬುದು ಇದರ ಅರ್ಥ. ಇನ್ನು ಸುಲಭವಾಗಿ ಅರ್ಥವಾಗುವಂತೆ ಹೇಳಬೇಕೆಂದರೆ, ಒಂದು ಚೂರಿ ಇದೆ ಎಂದುಕೊಳ್ಳಿ. ಅದನ್ನು ಅಡುಗೆ ಮಾಡಲು ಬಳಸಿದರೆ ಒಳ್ಳೆಯದು, ಆದರೆ ಯಾರಾದರೂ ಅದನ್ನು ಇನ್ನೊಬ್ಬರಿಗೆ ಹಾನಿ ಮಾಡಲು ಬಳಸಿದರೆ ಅದು ಕೆಟ್ಟದ್ದಾಗುತ್ತದೆ. ಅದೇ ರೀತಿ AI ಕೂಡ ಒಂದು ಸಾಧನ. ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿದರೆ ಮನುಷ್ಯನಿಗೆ ಉಪಕಾರಿ, ಆದರೆ ದುಷ್ಟರು ಅದನ್ನು ಬಳಸಿದರೆ ಅದು ಅಪಾಯಕಾರಿಯಾಗಬಹುದು.

AI ಅನ್ನು ಅಪರಾಧಿಗಳು ಹೇಗೆ ಬಳಸಬಹುದು?

ಇಂದು ಇಂಟರ್ನೆಟ್, ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಭಾಗವಾಗಿವೆ. ಇವುಗಳ ಮೂಲಕ ಅಪರಾಧ ಮಾಡುವವರು ಈಗ AI ಅನ್ನು ತಮ್ಮ ಸಾಧನವನ್ನಾಗಿ ಕೆಳಗೆ ತಿಳಿಸಿರುವ ರೀತಿ ಬಳಸಿಕೊಳ್ಳುತ್ತಿದ್ದಾರೆ:

  • ಸುಳ್ಳು ಮಾಹಿತಿ ಹರಡುವುದು (Deepfakes): AI ಬಳಸಿ ಯಾರದ್ದೋ ಧ್ವನಿ, ವಿಡಿಯೋ ಅಥವಾ ಫೋಟೋವನ್ನು ನೈಜವಾಗಿರುವಂತೆ ಸೃಷ್ಟಿಸಬಹುದು. ಉದಾಹರಣೆಗೆ, ನಿಮ್ಮ ಸಂಬಂಧಿಕರ ಧ್ವನಿಯನ್ನು AI ಮೂಲಕ ಸೃಷ್ಟಿಸಿ, “ನಾನು ತೊಂದರೆಯಲ್ಲಿದ್ದೇನೆ, ತುರ್ತಾಗಿ ಹಣ ಕಳುಹಿಸು” ಎಂದು ಹೇಳಿ ಮೋಸ ಮಾಡಬಹುದು.
  • ಆನ್ಲೈನ್ ವಂಚನೆ (Phishing/Scams): ನಿಮ್ಮ ಇ-ಮೇಲ್‌ಗೆ ಅಥವಾ sms ಗೆ ಒಂದು ಸಂದೇಶ ಬರುತ್ತದೆ, AI ಅನ್ನು ಬಳಸಿ ಆ ಸಂದೇಶಗಳನ್ನು ಅತ್ಯಂತ ನೈಜವಾಗಿ ಕಾಣುವಂತೆ ಮಾಡಲಾಗುತ್ತದೆ. ನೀವು ಅಲ್ಲಿ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿದರೆ ಅಥವಾ ಅಲ್ಲಿ ಕೇಳಿರುವ ಮಾಹಿತಿ ನೀಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕದಿಯಬಹುದು.
  • ಸೈಬರ್ ದಾಳಿಗಳು (Cyberattacks): ಕಂಪ್ಯೂಟರ್ ವ್ಯವಸ್ಥೆಗಳನ್ನು ಹ್ಯಾಕ್ ಮಾಡಲು, ಮಾಹಿತಿ ಕದಿಯಲು AI ಅನ್ನು ಬಳಸಬಹುದು. ಉದಾಹರಣೆಗೆ, ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ಗೆ ವೈರಸ್ ಕಳುಹಿಸಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲು AI ಸಹಾಯ ಮಾಡಬಹುದು.
  • ಆನ್ಲೈನ್ ಬೆದರಿಕೆಗಳು ಮತ್ತು ಕಿರುಕುಳ (Harassment): AI ಬಳಸಿ ವ್ಯಕ್ತಿಗಳ ಕುರಿತು ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಹರಡಬಹುದು, ಅಥವಾ ಅವರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಕಿರುಕುಳ ನೀಡಬಹುದು.
  • ಸ್ವಾಯತ್ತ ವ್ಯವಸ್ಥೆಗಳ ದುರ್ಬಳಕೆ (Autonomous Systems Misuse): ಭವಿಷ್ಯದಲ್ಲಿ AI ಆಧಾರಿತ ರೋಬೋಟ್‌ಗಳು ಅಥವಾ ವಾಹನಗಳು ಹೆಚ್ಚಿದಂತೆ, ಅವುಗಳನ್ನು ಹ್ಯಾಕ್ ಮಾಡಿ ಅಥವಾ ಅವುಗಳ ನಿಯಂತ್ರಣವನ್ನು ತೆಗೆದುಕೊಂಡು ಅಪರಾಧಗಳಿಗೆ ಬಳಸುವ ಸಾಧ್ಯತೆ ಇದೆ.
  • ಹೆಂಗಸರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ (Synthetic Abuse/blackmail):  ಇಲ್ಲಿ ಅಪರಾಧಿಗಳು AI ಬಳಸಿ ಹೆಂಗಸರು ಮತ್ತು ಮಕ್ಕಳ ನಕಲಿ ಅಶ್ಲೀಲ  ಚಿತ್ರಗಳನ್ನೂ ಅಥವಾ ವಿಡಿಯೋವನ್ನೂ ಮಾಡಿ ಅದನ್ನು ಬ್ಲಾಕ್ಮೇಲ್ ಮಾಡಲು ಅಥವಾ ಕಿರುಕುಳ ಕೊಡಲಿಕ್ಕೆ ಬಳಸುತ್ತಾರೆ.

AI ಕ್ರಿಮಿನಲ್ ಕೃತ್ಯಗಳಿಂದ ನಿಮ್ಮನ್ನು ರಕ್ಷಿಸಿಕ್ಕೊಳಲು:

  • ಪ್ರತಿ ಸಂದೇಶವನ್ನು ನಂಬಬೇಡಿ: ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವ ಮೊದಲು, ಅಥವಾ ವೈಯಕ್ತಿಕ ಮಾಹಿತಿ ನೀಡುವ ಮೊದಲು ಎರಡು ಬಾರಿ ಯೋಚಿಸಿ. ನಿಮ್ಮ ಬ್ಯಾಂಕ್, ಸರ್ಕಾರಿ ಕಚೇರಿಗಳು ಎಂದಿಗೂ ಫೋನ್‌ನಲ್ಲಿ ಅಥವಾ ಇ-ಮೇಲ್ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ.
  • ಅಪರಿಚಿತ ಫೋನ್ ಕರೆಗಳು/ಮೆಸೇಜ್ಗಳ ಬಗ್ಗೆ ಎಚ್ಚರ: ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳು ಅಥವಾ ಸಂದೇಶಗಳ ಬಗ್ಗೆ ಜಾಗರೂಕರಾಗಿರಿ. ಯಾರಾದರೂ ಹಣ ಕೇಳಿದರೆ, ಕಳಿಸುವ ಮೊದಲು ಅವರ ಗುರುತನ್ನು ಖಚಿತಪಡಿಸಿಕೊಳ್ಳಿ.
  • ಸಾಮಾಜಿಕ ಮಾಧ್ಯಮದಲ್ಲಿ ಜಾಗರೂಕತೆ: ಸಾಮಾಜಿಕ ಮಾಧ್ಯಮದಲ್ಲಿ ವೈಯಕ್ತಿಕ ಮಾಹಿತಿ, ಫೋಟೋಗಳನ್ನು ಹಂಚಿಕೊಳ್ಳುವಾಗ ಎಚ್ಚರದಿಂದಿರಿ. AI ಬಳಸಿ ಅವುಗಳನ್ನು ದುರ್ಬಳಕೆ ಮಾಡಬಹುದು.
  • ನಿಮ್ಮ ಸಾಧನಗಳನ್ನು ಸುರಕ್ಷಿತವಾಗಿರಿಸಿ: ನಿಮ್ಮ ಫೋನ್, ಕಂಪ್ಯೂಟರ್‌ಗೆ ಉತ್ತಮ ಆಂಟಿವೈರಸ್ ಮತ್ತು ಫೈರವಾಲ್ ಅಳವಡಿಸಿ, ಪಾಸ್‌ವರ್ಡ್‌ಗಳನ್ನು ಬಲವಾಗಿಡಿ ಮತ್ತು ಆಗಾಗ್ಗೆ ಬದಲಾಯಿಸಿ.
  • ಮಾಹಿತಿಯನ್ನು ಪರಿಶೀಲಿಸಿ: ಯಾವುದೇ ಸುದ್ದಿಯನ್ನು ನೋಡಿದಾಗ ಅಥವಾ ಕೇಳಿದಾಗ, ಅದು ನಿಜವೇ ಎಂದು ಪರಿಶೀಲಿಸಿ. ಸುಳ್ಳು ಸುದ್ದಿಗಳನ್ನು ಹರಡಲು AI ಅನ್ನು ಬಳಸಿರಬಹುದು.
AI ಕ್ರಿಮಿನಲ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ