ಪಹಲ್ಗಾಮ್ ಭಯೋತ್ಪಾದಕ ಘಟನೆಯ ನಂತರದ ಸೈಬರ್ ದಾಳಿಗಳು
ಇಂದಿನ ಯುದ್ಧಭೂಮಿಗಳು ಕೇವಲ ಗುಂಡುಗಳು ಮತ್ತು ಬಾಂಬ್ ದಾಳಿಗಳಿಗಷ್ಟೇ ಅಲ್ಲಾ, ಅದು ಸೈಬರ್ ದಾಳಿಗಳಿಗೂ ವಿಸ್ತರಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಡಿಜಿಟಲ್ ಕ್ಷೇತ್ರಕ್ಕೂ ಹರಡಿದೆ, ಅಲ್ಲಿ ಪ್ರಾಯೋಜಿತ ಹ್ಯಾಕರ್ ಗುಂಪುಗಳು ಹಲವಾರು ಪ್ರಮುಖ ಸೈಬರ್ ದಾಳಿಗಳನ್ನು ಪ್ರಾರಂಭಿಸಿವೆ. ಮಹಾರಾಷ್ಟ್ರ ಸೈಬರ್ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಯಶಸ್ವಿ ಯಾದವ್ ಅವರ ಪ್ರಕಾರ, ಪಹಲ್ಗಾಮ್ ದಾಳಿಯ ನಂತರ ಭಾರತದ ಮೇಲೆ 10 ಲಕ್ಷಕ್ಕೂ ಹೆಚ್ಚು ಸೈಬರ್ ದಾಳಿಗಳು ನಡೆದಿವೆ. ಈ ಹೆಚ್ಚಳವು ಸರ್ಕಾರಿ ಮತ್ತು ಮಿಲಿಟರಿ ಗುರಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಸೈಬರ್ ವಂಚನೆ ಪತ್ತೆ ಸಂಸ್ಥೆಯಾದ ಎಂಫಿಲ್ಟರ್‌ಇಟ್‌ನ ಸಹ-ಸಂಸ್ಥಾಪಕ ಧೀರಜ್ ಗುಪ್ತಾ ಪ್ರಕಾರ, ಸಾಮಾಜಿಕ ಮಾಧ್ಯಮ ಬಾಟ್‌ಗಳು ಮತ್ತು ದುರುದ್ದೇಶಪೂರಿತ ಜಾಹೀರಾತುಗಳನ್ನು, ನಿರೂಪಣೆಯನ್ನು ರೂಪಿಸಲು ಮತ್ತು ಅವ್ಯವಸ್ಥೆಯನ್ನು ಹರಡಲು ಹೆಚ್ಚಾಗಿ ಬಳಸಲಾಗುತ್ತಿದೆ. ಈ ಮೇ ತಿಂಗಳ ಮೊದಲವಾರದಲ್ಲಷ್ಟೇ OTT ಮತ್ತು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ದುರುದ್ದೇಶಪೂರಿತ ಜಾಹೀರಾತು ನಿಯೋಜನೆಯಲ್ಲಿ 10-15% ಹೆಚ್ಚಳವಾಗಿದೆ, ಮತ್ತು ಅವರ ಗ್ರಾಹಕರ ಪೈಕಿ 70% ರಷ್ಟು ಜನರು ದಾರಿತಪ್ಪಿಸುವ ಜಾಹೀರಾತುಗಳಿಂದ ಪ್ರಭಾವಿತರಾಗಿದ್ದಾರೆ. ಶತ್ರು ರಾಜ್ಯ ಸಂಸ್ಥೆಗಳು ಬಳಸುವ ವಿವಿಧ ಸೈಬರ್ ಯುದ್ಧ ತಂತ್ರಗಳ ಬಗ್ಗೆ ನಾನು ಈ ಹಿಂದೆ ಎರಡು ಲೇಖನಗಳಲ್ಲಿ ಬರೆದಿದ್ದೆ.
ಸೇನೆ, ನೌಕಾಪಡೆ ಮತ್ತು ವಾಯುಪಡೆಯ ನಂತರ ರಾಜ್ಯ ಪ್ರಾಯೋಜಿತ ಸೈಬರ್ ದಾಳಿ ಮತ್ತು ರಕ್ಷಣಾ ಪಡೆಗಳನ್ನು ಈಗ ಯುದ್ಧದ ನಾಲ್ಕನೇ ಆಯಾಮದ ಭಾಗವೆಂದು ಪರಿಗಣಿಸಲಾಗಿದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಸೈಬರ್ ರಕ್ಷಣಾ ಮತ್ತು ಆಕ್ರಮಣಕಾರಿ ದಾಳಿ ಗುಂಪುಗಳು/ಸಂಸ್ಥೆಗಳು ತಮ್ಮ ರಾಷ್ಟ್ರೀಯ ಹಿತಾಸಕ್ತಿಗಾಗಿ ಕೆಲಸ ಮಾಡುತ್ತವೆ. ಉತ್ತರ ಕೊರಿಯಾ ಸೈಬರ್ ದಾಳಿ, ಸೈಬರ್ ಯುದ್ಧ, ಕಾರ್ಪೊರೇಟ್ ಮತ್ತು ಕೈಗಾರಿಕಾ ಸೈಬರ್ ಸುಲಿಗೆಯನ್ನು ನಡೆಸುವ ಅತ್ಯಂತ ಪ್ರಬಲ ರಾಜ್ಯ ಪ್ರಾಯೋಜಿತ ಸೈಬರ್ ದಾಳಿ ಪಡೆ ಹೊಂದಿದೆ ಎಂದು ಸೈಬರ್ ಸುರಕ್ಷಾ ವಲಯದಲ್ಲಿ ಸಾಮಾನ್ಯ ಸುದ್ದಿ. ಪಾಕಿಸ್ತಾನವು ತನ್ನದೇ ಆದ ಸೈಬರ್ ಆಕ್ರಮಣಕಾರಿ ಗುಂಪಿನೊಂದಿಗೆ ತನ್ನ ಸ್ನೇಹಪರ ರಾಷ್ಟ್ರಗಳಾದ ಉತ್ತರ ಕೊರಿಯಾ, ಚೀನಾ ಮತ್ತು ಟರ್ಕಿಯ ಸೈಬರ್ ಆಕ್ರಮಣಕಾರಿ ಗುಂಪುಗಳನ್ನು ತನ್ನ ದೂರುದ್ದೇಶಪೂರಿತ ಕೆಲಸಗಳಿಗಾಗಿ ಬಳಸಿಕೊಳ್ಳಬಹುದು, ಇತ್ತೀಚೆಗೆ ಭಾರತೀಯ ಸರ್ಕಾರಿ ಘಟಕದ ಮೇಲೆ ನಡೆದ ದಾಳಿಯಲ್ಲಿ ಕಂಡುಬಂದಂತೆ, ದಾಳಿಯು ಉತ್ತರ ಕೊರಿಯಾದ ಸರ್ವರ್‌ನಿಂದ ಬಂದಿದೆ ಎಂದು ತೋರುತ್ತಿದ್ದರು ಆದರೆ ಹಿನ್ನೆಲೆಯಲ್ಲಿ ಆದ ಪಾವತಿ ಪಾಕಿಸ್ತಾನ ಘಟಕಕ್ಕೆ ಹೋಗಿದ್ದು ದಾಳಿಯ ಹಿಂದೆ ಸೂತ್ರದಾರರು ಯಾರು ಎಂದು ತಿಳಿಸುತ್ತದೆ.
ಪಾಕಿಸ್ತಾನ ಭಾರತದ ಮೇಲೆ ಪಹಲ್ಗಾಮ್ ನಂತರ ಮಾಡಿದ ಪ್ರಮುಖ ಸೈಬರ್ ದಾಳಿಗಳು :-
- ಕಳೆದ ಏಪ್ರಿಲ್ ಕೊನೆಯ ವಾರದಲ್ಲಿ, ಶ್ರೀನಗರದ ಸೇನಾ ಸಾರ್ವಜನಿಕ ಶಾಲೆ (APS), ರಾಣಿಖೇತ್ ನ ಸೇನಾ ಕಲ್ಯಾಣ ವಸತಿ ಸಂಸ್ಥೆ (AWHO) ಮತ್ತು ಭಾರತೀಯ ವಾಯುಪಡೆಯ ಉದ್ಯೋಗ ಸಂಸ್ಥೆಯ ಪೋರ್ಟಲ್‌ನ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲಾಗಿತ್ತು ಮತ್ತು ಲ್ಯಾಂಡಿಂಗ್ ಪುಟವನ್ನು ಬದಲಾಯಿಸಲಾಗಿತ್ತು. ಪಾಕಿಸ್ತಾನ ಮೂಲದ ಹ್ಯಾಕರ್ ಗುಂಪುಗಳಾದ ‘ಸೈಬರ್ ಗ್ರೂಪ್ HOAX1337’ ಮತ್ತು ‘ನ್ಯಾಷನಲ್ ಸೈಬರ್ ಕ್ರೂ’ ಈ ದಾಳಿಯ ಹೊಣೆ ಹೊತ್ತಿವೆ.
- ಮೇ ಮೊದಲ ವಾರದಲ್ಲಿ, ಆರ್ಮರ್ಡ್ ವೆಹಿಕಲ್ ನಿಗಮ್ ಲಿಮಿಟೆಡ್ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಲಾಯಿತು ಮತ್ತು ಮುಖಪುಟದಲ್ಲಿರುವ ಭಾರತೀಯ ಟ್ಯಾಂಕ್‌ನ ಚಿತ್ರವನ್ನು ಪಾಕಿಸ್ತಾನಿ ಟ್ಯಾಂಕ್‌ನಿಂದ ಬದಲಾಯಿಸಲಾಗಿತ್ತು.
- ಪಾಕಿಸ್ತಾನ ಮೂಲದ ಹ್ಯಾಕರ್ ಗುಂಪು APT36 (ಟ್ರಾನ್ಸ್‌ಪೆರೆಂಟ್ ಟ್ರೈಬ್ ಎಂದೂ ಕರೆಯುತ್ತಾರೆ) ಸೂಕ್ಷ್ಮ ಡೇಟಾವನ್ನು ಕದಿಯಲು ಮತ್ತು ನಿರ್ಣಾಯಕ ಮೂಲಸೌಕರ್ಯವನ್ನು ನಿಯಂತ್ರಿಸಲು ಅತ್ಯಾಧುನಿಕ ಫಿಶಿಂಗ್ ದಾಳಿಗಳ ಮೂಲಕ ಕ್ರಿಮ್ಸನ್‌ರಾಟ್ ಮತ್ತು ಮೆಶ್‌ಅಜೆಂಟ್‌ನಂತಹ ಸುಧಾರಿತ ಮಾಲ್‌ವೇರ್‌ಗಳನ್ನು ಭಾರತದ ಸಂಸ್ಥೆಗಳ ಸಾದನಗಳಲ್ಲಿ ನಿಯೋಜಿಸುತ್ತಿದೆ ಎಂದು ಪತ್ತೆಯಾಗಿದೆ.
- ಸಶಸ್ತ್ರ ಪಡೆ ಸಿಬ್ಬಂದಿ ತಮ್ಮ ಸಂಬಂಧಿಕರು, ಸ್ನೇಹಿತರು, ಶಾಲಾ/ಕಾಲೇಜು ಶಿಕ್ಷಕರು ಮತ್ತು ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಪಾಕಿಸ್ತಾನಿ ಗುಪ್ತಚರರು ಅವರ ಸ್ಥಳ ಮತ್ತು ಇತರ ಸೂಕ್ಷ್ಮ ವಿವರಗಳನ್ನು ಸಂಗ್ರಹಿಸಲು ಅಪರಿಚಿತ ಸಂಖ್ಯೆಗಳಿಂದ ಕರೆಗಳನ್ನು ಮಾಡುತ್ತಿದ್ದಾರೆ.
ಭಾರತ ಪಾಕಿಸ್ತಾನದ ಮೇಲೆ ಇತ್ತೀಚೆಗೆ ನಡೆಸಿದ ಪ್ರಮುಖ ಪ್ರತಿಗಾಮಿ ಸೈಬರ್ ದಾಳಿಗಳು :-
ಭಾರತವು ಮೌನವಾಗಿಲ್ಲ ಮತ್ತು ಅವರು ನಡೆಸಿದ ವಿವಿಧ ದಾಳಿಗಳಲ್ಲಿ ಸಾರ್ವಜನಿಕವಾಗಿ ವರದಿಯಾದ ಕೆಲವು ಇಲ್ಲಿವೆ.
- ಭಾರತ ಪರ ಹ್ಯಾಕ್ಟಿವಿಸ್ಟ್ ಗುಂಪು ‘ಇಂಡಿಯಾ ಸೈಬರ್ ಫೋರ್ಸ್’ ಪಾಕಿಸ್ತಾನಿ ಸರ್ಕಾರ ಮತ್ತು ಖಾಸಗಿ ವಲಯದ ಯುರೋ ಆಯಿಲ್, ಎಜೆಕೆ ಸುಪ್ರೀಂ ಕೋರ್ಟ್, ಬಲೂಚಿಸ್ತಾನ್ ವಿಶ್ವವಿದ್ಯಾಲಯ, ವಾಡಾ ಕಾಲ್ ಏಜೆನ್ಸಿ ಮತ್ತು ಸಿಂಧ್ ಪೊಲೀಸರ ವೆಬ್‌ಸೈಟ್ ಮತ್ತು ಡೇಟಾಬೇಸ್‌ಗಳನ್ನು ಹ್ಯಾಕ್ ಮಾಡಿದೆ ಎಂದು ಹೇಳಿಕೊಂಡಿದೆ.
- ಅದೇ ಗುಂಪು ಪಾಕಿಸ್ತಾನದಾದ್ಯಂತ 1000 ಕ್ಕೂ ಹೆಚ್ಚು ಕಣ್ಗಾವಲು ಸಿಸಿಟಿವಿ ಕ್ಯಾಮೆರಾಗಳನ್ನು ಹ್ಯಾಕ್ ಮಾಡಿದ್ದೇವೆ ಎಂದು ಘೋಷಿಸಿದೆ ಮತ್ತು ಅದರ ಟ್ವಿಟರ್/ಎಕ್ಸ್ ಹ್ಯಾಂಡಲ್‌ನಲ್ಲಿ ಅವುಗಳ ಚಿತ್ರಗಳನ್ನು ಪೋಸ್ಟ್ ಮಾಡಿದೆ.
