ಪೊಲೀಸರು ನನ್ನ ಬ್ಯಾಂಕ್ ಖಾತೆ ಫ್ರೀಜ್ ಮಾಡಿದ್ದಾರೆ, ಏನು ಮಾಡೋದು?
ನಮ್ಮ ಮನೆಯ ಹತ್ತಿರದ ಚಿಕ್ಕ ತರಕಾರಿ ಅಂಗಡಿ ಮಾಲೀಕ ರಮೇಶ, ನಾನು UPI ನಲ್ಲಿ ಹಣ ಪಾವತಿಸಲು ಹೋದಾಗ “ಸರ್, ನನ್ನ ಬ್ಯಾಂಕ್ ಖಾತೇನ ಪೊಲೀಸರು ಫ್ರೀಜ್ ಮಾಡಿದ್ದಾರೆ, ದಯವಿಟ್ಟು ನಗದು ಹಣ ನೀಡಿ” ಎಂದರು. ವಿಚಾರಿಸಿದಾಗ ಗೊತ್ತಾಯಿತು ಯಾವುದೊ ಸೈಬರ್ ಹಗರಣದ ಹೆಸರಿನಲ್ಲಿ ಪಾಪ ಏನು ಗೊತ್ತಿಲ್ಲದ ರಮೇಶನ ಬ್ಯಾಂಕ್ ಖಾತೆಯನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ ಅಂತ. ಇಂತಹ ಪ್ರಕರಣಗಳು ಈ ನಡುವೆ ಜಾಸ್ತಿಯಾಗ್ತಾ ಇದೆ, ಮಾನ್ಯ ನ್ಯಾಯಾಲಯಗಳು ಅನೇಕ ಇಂತಹ ಪ್ರಕರಣಗಳಲ್ಲಿ ಪೂರ್ತಿ ಖಾತೆಯನ್ನು ಫ್ರೀಜ್ ಮಾಡುವಂತಿಲ್ಲಾ, ಸಂಬಂಧಪಟ್ಟ ಹಣಕಷ್ಟೇ ಫ್ರೀಜ್ ಮಾಡಬೇಕು ಹಾಗು ಫ್ರೀಜ್ ಮಾಡುವುದಕ್ಕೆ ಸ್ಪಷ್ಟ ಕಾರಣವನ್ನು ಮತ್ತು ಅದರ ವಿರುದ್ಧ ತಮ್ಮ ನಿಲುವನ್ನು ವ್ಯಕ್ತಪಡಿಸಲು ಸಂತ್ರಸ್ಥ ವ್ಯಕ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ನಿರ್ದೇಶನಗಳನ್ನು ಕೊಟ್ಟಿದೆ. ಬ್ಯಾಂಕ್ ಖಾತೆಗಳನ್ನು ವಿವೇಚನಾರಹಿತವಾಗಿ ಫ್ರೀಜ್ ಮಾಡುವುದರಿಂದ ಸಣ್ಣ ವ್ಯವಹಾರಗಳ ಆರ್ಥಿಕ ನಾಶ, ಕಾರ್ಪೊರೇಟ್ ಸಂಸ್ಥೆಗಳಿಗೆ ಕಾರ್ಯಾಚರಣೆಯಲ್ಲಿ ಅಡೆತಡೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ನಂಬಿಕೆಯ ಕುಸಿತ, ಸರಿಯಾದ ಪ್ರಕ್ರಿಯೆ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಂತಹ ಹಲವಾರು ಗಂಭೀರ ಪರಿಣಾಮಗಲಾಗುತ್ತವೆ.
ಇಲ್ಲಿ ಇನ್ನೊಂದು ದೃಷ್ಟಿಯಿಂದ ನೋಡಿದರೆ ಸೈಬರ್ ಅಪರಾಧಗಳಲ್ಲಿ ಬಹುಪಾಲು ವಶಪಡಿಸಿಕ್ಕೊಂಡ ಹಣ, ಸೈಬರ್ ಖದೀಮರ ಬ್ಯಾಂಕ್ ಖಾತೆಯ ಮೇಲೆ ವಿಧಿಸಲಾದ ಡೆಬಿಟ್ ಫ್ರೀಜ್ ಮೂಲಕ ಬಂದಿದ್ದಾಗಿರುತ್ತದೆ. ಹಾಗಾಗಿ ಸೈಬರ್ ಪೊಲೀಸರು ಯಾರಾದರೂ ಸೈಬರ್ ಅಪರಾಧಕ್ಕೆ ಹಣ ಕಳೆದುಕೊಂಡಿದ್ದೇವೆಂದು ದೂರು ದಾಖಲಿಸಿದ ಕೂಡಲೇ ರವಾನಿಸಿದ ಖಾತೆ, ಮತ್ತು ಆ ಖಾತೆಯಿಂದ ಹಣ ಮುಂದೆ ರವಾನಿಸಲ್ಪಟ್ಟ ಖಾತೆಗಳು ಮತ್ತು ಅಲ್ಲಿಂದನು ಇನ್ನು ಮುಂದೆ ರವಾನಿಸಲ್ಪಟ್ಟ ಖಾತೆಗಳು ಹೀಗೆ ಅನೇಕ ಸಂಬಂಧ ಪಟ್ಟ ಖಾತೆಗಳ ಮೇಲೆ ಡೆಬಿಟ್ ಫ್ರೀಜ್ ಅಳವಡಿಸುತ್ತಾರೆ. ಇದರಿಂದ ಖದೀಮರು ಆ ಖಾತೆಯಿಂದ ರವಾನಿಸದೆ ಉಳಿದ ಹಣವನ್ನು ಮತ್ತು ಇನ್ನು ಮುಂದೆ ಆ ಖಾತೆಗೆ ಬರುವ ಹಣವನ್ನು ಸೈಬರ್ ಅಪರಾಧದ ಸಂತ್ರಸ್ಥನಿಗೆ ವಾಪಸ್ ಮಾಡಲು ಬಳಸುತ್ತಾರೆ.
ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಆಗಲು ಕಾರಣಗಳೇನು :-
- ಅನಧಿಕೃತ ವಹಿವಾಟುಗಳು, ಗುರುತಿನ ಕಳ್ಳತನ ಅಥವಾ ಇತರ ರೀತಿಯ ಹಣಕಾಸು ವಂಚನಾ ಚಟುವಟಿಕೆ.
- ನ್ಯಾಯಾಲಯ ಅಥವಾ ಸರ್ಕಾರಿ ಸಂಸ್ಥೆ ಅಥವಾ ಕಾನೂನು ಜಾರಿ ಸಂಸ್ಥೆ ಆದೇಶಗಳು
- ಹಣ ಅಕ್ರಮ ವರ್ಗಾವಣೆ(ಮನಿ ಲಾಂಡರಿಂಗ್) ಅಥವಾ ಭಯೋತ್ಪಾದಕರಿಗೆ ಹಣ ಪೂರೈಕೆ.
- KYC ನವೀಕರಣ ಅಥವಾ ನಕಾರಾತ್ಮಕ ಬ್ಯಾಲೆನ್ಸ್ನಂತಹ ಖಾತೆ ನಿರ್ವಹಣೆ ಅವಶ್ಯಕತೆಗಳನ್ನು ಅನುಸರಿಸಲು ವಿಫಲತೆ ತೋರಿದರೆ.
- ದೊಡ್ಡ ಅಥವಾ ಅಸಾಮಾನ್ಯ ವಹಿವಾಟುಗಳು, ಖಾತೆ ಚಟುವಟಿಕೆಯಲ್ಲಿ ಹಠಾತ್ ಹೆಚ್ಚಳ ಅಥವಾ ಖರ್ಚು ಮಾದರಿಗಳಲ್ಲಿ ಅನಿರೀಕ್ಷಿತ ಬದಲಾವಣೆಗಳಂತಹ ಅಸಾಮಾನ್ಯ ಖಾತೆ ಚಟುವಟಿಕೆಗಾಗಿ.
- ಪಾವತಿಸದ ಸರಕಾರಿ ತೆರಿಗೆಯ ವಸೂಲಿಗಾಗಿ.
- ಹೆಚ್ಚಿನ ಹೊತ್ತು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಯಾವುದೇ ವಹಿವಾಟು ನಡೆಯದಿದ್ದರೆ
- ಕೆಲವೊಮ್ಮೆ, ಹಣವನ್ನು ನಿಮ್ಮ ಖಾತೆಗೆ ತಪ್ಪಾಗಿ ವರ್ಗಾಯಿಸಲಾಗುತ್ತದೆ. ಈ ಹಣವನ್ನು ಕಾನೂನುಬಾಹಿರ ಚಟುವಟಿಕೆಗಳಿಗೆ ಲಿಂಕ್ ಮಾಡಿದ್ದರೆ, ನಿಮ್ಮ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ.
ನಿಮ್ಮ ಬ್ಯಾಂಕ್ ಖಾತೆಯ ಮೇಲಿರುವ ಫ್ರೀಜ್ ತೆಗೆಯಲು ನೀವು :-
- ಮೊದಲನೆಯದಾಗಿ, ಯಾವುದೇ ಸೈಬರ್ ಅಪರಾಧ ದೂರಿನಿಂದಾಗಿ ನಿಮ್ಮ ಖಾತೆಯನ್ನು ಪೊಲೀಸರು ಸ್ಥಗಿತಗೊಳಿಸಿದರೆ ಹಾಗು ನೀವು ಯಾವುದೇ ತಪ್ಪು ಮಾಡಿಲ್ಲದಿದ್ದರೆ, ಭಯಪಡುವ ಅಗತ್ಯವಿಲ್ಲ.
- ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಮತ್ತು ಖಾತೆ ಫ್ರೀಜ್ ಆಗಲು ಇರುವ ಅಸಲು ಕಾರಣವನ್ನು ತಿಳಿಯಿರಿ, ಹಾಗೆ ಪರಿಹಾರವನ್ನು ತಿಳಿಯಿರಿ.
- KYC ಅಥವಾ ಯಾವುದೇ ಸಂಶಯಾಸ್ಪದ ವಹಿವಾಟಿನ ಕಾರಣವಿದ್ದರೆ ಸೂಕ್ತ ದಾಖಲೆಯನ್ನು ಕೊಟ್ಟು ಫ್ರೀಜ್ ತೆಗೆಸಿರಿ.
- ದೀರ್ಘ ಕಾಲ ವಹಿವಾಟಿಲ್ಲದ ಕರಣ ಫ್ರೀಜ್ ಆಗಿದ್ದರೆ ಹಣ ಪಾವತಿಸಿ ನಿಮ್ಮ ಖಾತೆ ಮೇಲಿನ ಫ್ರೀಜ್ ತೆರೆವುಗೊಳಿಸಿ.
- ಪೊಲೀಸ್ ಅಥವಾ ನ್ಯಾಯಾಲಯ ಅಥವಾ ಯಾವುದೇ ಸರಕಾರಿ ಸಂಸ್ಥೆಯ ನಿರ್ದೇಶನದಂತೆ ಬ್ಯಾಂಕ್ ಖಾತೆ ಫ್ರೀಜ್ ಆಗಿದ್ದರೆ, ವಕೀಲರನ್ನು ಸಂಪರ್ಕಿಸಿ ಅವರ ಸಲಹೆಯಂತೆ ಸೂಕ್ತ ದಾಖಲೆ ಸಮೇತ ಸಮಸ್ಯೆಯನ್ನು ಕಾನೂನು ರೀತಿ ಪರಿಹರಿಸಿ ಬ್ಯಾಂಕ್ ಖಾತೆ ಫ್ರೀಜ್ ತೆಗೆಸಿ.
- ಫ್ರೀಜ್ ಸರ್ಕಾರದ ತನಿಖೆ ಅಥವಾ ಕಾನೂನು ಜಾರಿ ವಿಚಾರಣೆಗೆ ಸಂಬಂಧಿಸಿದ್ದರೆ, ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಿ ಮತ್ತು ಸಮಸ್ಯೆಯ ಪರಿಹಾರವನ್ನು ತ್ವರಿತಗೊಳಿಸಲು ಹಾಗು ಅವರು ವಿನಂತಿಸಿದ ಮಾಹಿತಿ ಅಥವಾ ದಾಖಲಾತಿಯನ್ನು ಒದಗಿಸಿ. ಇಲ್ಲೂ ಕೂಡ ನಿಮ್ಮ ವಕೀಲರ ಸಲಹೆ ಪಡೆದೆ ಮುಂದುವರಿಸಿ.
- ನಿಮ್ಮ ಪರಿಸ್ಥಿತಿ ಮತ್ತು ಕಾನೂನು ಸಲಹೆಯನ್ನು ಅವಲಂಬಿಸಿ, ಖಾತೆ ಸ್ಥಗಿತವನ್ನು ಪ್ರಶ್ನಿಸಲು ಮತ್ತು ಪರಿಹಾರವನ್ನು ಪಡೆಯಲು ನೀವು ಸೂಕ್ತ ನ್ಯಾಯಾಲಯ ಅಥವಾ ಪ್ರಾಧಿಕಾರಕ್ಕೆ ಅರ್ಜಿ ಅಥವಾ ಪ್ರಾತಿನಿಧ್ಯವನ್ನು ಸಲ್ಲಿಸಿ ನಿಮ್ಮ ಬ್ಯಾಂಕ್ ಖಾತೆ ಮೇಲಿರುವ ಫ್ರೀಜ್ ತೆರೆಯಲು ಮನವಿ ಮಾಡಿ.
ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಆಗದಂತೆ ತಡೆಯಲು ನೀವು :-
- ಯಾವುದೇ ಅಸಾಮಾನ್ಯ ಅಥವಾ ಅನಧಿಕೃತ ಚಟುವಟಿಕೆಗಾಗಿ ನಿಮ್ಮ ಖಾತೆ ಹೇಳಿಕೆಗಳು ಮತ್ತು ವಹಿವಾಟು ಇತಿಹಾಸವನ್ನು ನಿಯಮಿತವಾಗಿ ಪರಿಶೀಲಿಸಿ.
- ನಿಮ್ಮ ಸಂಪರ್ಕ ಮಾಹಿತಿ, ಫೋನ್ ಸಂಖ್ಯೆ ಮತ್ತು ಇಮೇಲ್ ವಿಳಾಸ ಮಾಹಿತಿಯನ್ನು ನಿಮ್ಮ ಬ್ಯಾಂಕಿನೊಂದಿಗೆ ನವೀಕೃತಗೊಳಿಸಿ, ಇದರಿಂದ ಅವರು ಅಗತ್ಯವಿದ್ದಾಗ ನಿಮ್ಮನ್ನು ತ್ವರಿತವಾಗಿ ಸಂಪರ್ಕಿಸಬಹುದು.
- ನಿಮ್ಮ ಬ್ಯಾಂಕಿನಿಂದ ಬರುವ ಯಾವುದೇ ಸೂಚನೆಗಳು ಅಥವಾ ವಿನಂತಿಗಳನ್ನು ತಕ್ಷಣವೇ ಪರಿಹರಿಸಿ.
- ಬಿಟ್ಕಾಯಿನ್ P2P ಟ್ರೇಡಿಂಗ್, ಕ್ಯಾಶುಯಲ್ ವಹಿವಾಟುಗಳು ಅಥವಾ ಅದನ್ನು ನಿಮ್ಮ UPI ಗೆ ಲಿಂಕ್ ಮಾಡಲು ನಿಮ್ಮ ಪ್ರಾಥಮಿಕ ಖಾತೆಯನ್ನು ಬಳಸುವುದನ್ನು ತಡೆಯಿರಿ.
- ಪರಿಶೀಲಿಸದ ಪ್ಲಾಟ್ಫಾರ್ಮ್ಗಳಲ್ಲಿ ದೊಡ್ಡ ವಹಿವಾಟುಗಳನ್ನು ತಪ್ಪಿಸಿ
- ನಿಮ್ಮ ಖಾತೆ ಮಾಹಿತಿ ಮತ್ತು ಪಾಸ್ವರ್ಡ್ಗಳನ್ನು ರಕ್ಷಿಸಿ ಹಾಗು ಬ್ಯಾಂಕ್ ಮಾಹಿತಿಯನ್ನು ಆನ್ಲೈನ್ನಲ್ಲಿ ಅಥವಾ ಫೋನ್ ಮೂಲಕ ಹಂಚಿಕೊಳ್ಳುವಾಗ ಜಾಗರೂಕರಾಗಿರಿ.
- ನಿಯಮಿತವಾಗಿ ನಿಮ್ಮ ಖಾತೆಯಲ್ಲಿ ವಹಿವಾಟು ನಡೆಯುವಂತೆ ನೋಡಿಕೊಳ್ಳಿ.
ಬ್ಯಾಂಕ್ ಖಾತೆ ಫ್ರೀಜ್ ಬಗ್ಗೆ ಭಾರತದ ಕಾನೂನು ಏನು ಹೇಳುತ್ತದೆ :-
ಭಾರತೀಯ ನಾಗರಿಕ್ ಸುರಕ್ಷಾ ಸಂಹಿತಾ (BNSS) ನ ಸೆಕ್ಷನ್ 106 ರ ಅಡಿಯಲ್ಲಿ ಬ್ಯಾಂಕ್ ಖಾತೆಗಳನ್ನು “ಆಸ್ತಿ” ಎಂದು ಪರಿಗಣಿಸಲಾಗುತ್ತದೆ, ಇದು ಅಧಿಕಾರಿಗಳಿಗೆ ತನಿಖೆಯ ಸಮಯದಲ್ಲಿ ಅವುಗಳನ್ನು ಫ್ರೀಜ್ ಮಾಡಬಹುದು. ಭಾರತೀಯ ನ್ಯಾಯ ಸಂಹಿತಾ, 2023 (BNS), ಸೆಕ್ಷನ್ 318(4)[3] ಅಡಿಯಲ್ಲಿ, ಮೋಸದ ಹಣಕಾಸು ಚಟುವಟಿಕೆಗಳನ್ನು ತಿಳಿಸುತ್ತದೆ ಮತ್ತು ಈ ನಿಬಂಧನೆಯು ಅಂತಹ ಮೋಸದ ಚಟುವಟಿಕೆಗಳಲ್ಲಿ ಒಳಗೊಂಡಿರುವ ಖಾತೆಗಳನ್ನು ಫ್ರೀಜ್ ಮಾಡಲು ಒಂದು ಚೌಕಟ್ಟನ್ನು ಒದಗಿಸುತ್ತದೆ, ಅದು ತನಿಖೆಗಳು ನಡೆಯುತ್ತಿರುವಾಗ ಜವಾಬ್ದಾರಿಯುತರು ಹಣಕಾಸಿನ ವ್ಯವಸ್ಥೆಯನ್ನು ಮತ್ತಷ್ಟು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಖಚಿತಪಡಿಸುತ್ತದೆ. ಮನಿ ಲಾಂಡರಿಂಗ್ ಆಕ್ಟ್, 2002 (PMLA) ಸೆಕ್ಷನ್ 17(1)(iv) ಅಡಿಯಲ್ಲಿ ಮನಿ ಲಾಂಡರಿಂಗ್ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಬಹುದು. ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 (ಐಟಿ ಕಾಯ್ದೆ) ಸೆಕ್ಷನ್ 66 ಅಡಿಯಲ್ಲಿ, ಹ್ಯಾಕಿಂಗ್, ಫಿಶಿಂಗ್ ಮತ್ತು ಗುರುತಿನ ಕಳ್ಳತನದಂತಹ ವಿವಿಧ ಸೈಬರ್ ಅಪರಾಧಗಳಲ್ಲಿ ಬ್ಯಾಂಕ್ ಖಾತೆಯು ಭಾಗಿಯಾಗಿದೆ ಎಂದು ಶಂಕಿಸಿದಾಗ, ಮತ್ತಷ್ಟು ಕಾನೂನುಬಾಹಿರ ವಹಿವಾಟುಗಳನ್ನು ತಡೆಗಟ್ಟಲು ತನಿಖಾ ಪ್ರಕ್ರಿಯೆಯ ಭಾಗವಾಗಿ ಅಧಿಕಾರಿಗಳು ಅದನ್ನು ಫ್ರೀಜ್ ಮಾಡಬಹುದು. ಭಾರತದ ಸೈಬರ್ ಕಾನೂನುಗಳ ಬಗ್ಗೆ ಹೆಚ್ಚಾಗಿ ತಿಳಿದು ಕೊಳ್ಳಲು ನೀವು ನಾನು ಈ ಹಿಂದೆ ಬರೆದ ಅಂಕಣವನ್ನು ಓದಿ.
