Cyber Security Policy

ಕರ್ನಾಟಕದ ಹೊಸ ಸೈಬರ್ ಭದ್ರತಾ ನೀತಿಯ ಕಿರು ಪರಿಚಯ

ಈ ಅಂಕಣದಲ್ಲಿ ನಾನು ಕರ್ನಾಟಕದ ಹೊಸ ಸೈಬರ್ ಸೆಕ್ಯೂರಿಟಿ ನೀತಿಯ ಒಂದು ಕಿರು ಪರಿಚಯ ನೀಡುತ್ತಿದ್ದೇನೆ, ಮತ್ತು ಈ ನೀತಿಯಲ್ಲಿ ಸೈಬರ್ ಸೆಕ್ಯುರಿಟಿ ವಿದ್ಯಾರ್ಥಿಗಳು ಮತ್ತು ಅದರಲ್ಲಿ ಕೆಲಸ ಮಾಡುವವರಿಗೆ ಅನೇಕ ಸವಲತ್ತುಗಳನ್ನು ಕರ್ನಾಟಕ ಸರಕಾರ ಕೆಲವು ಖಾಸಗಿ ಸಂಸ್ಥೆಗಳ ಜೊತೆ ನೀಡುತ್ತಿದೆ.

ಹಾರ್ಡ್‌ವೇರ್, ಸಾಫ್ಟ್ವೇರ್ ಅಥವಾ ಡೇಟಾದ ಕಳ್ಳತನ, ಅನಧಿಕೃತ ಮಾಹಿತಿ ಬಹಿರಂಗಪಡಿಸುವಿಕೆ ಮುಂತಾದ ಬೆದರಿಕೆಗಳಿಂದ ಕಂಪ್ಯೂಟರ್ ಸಿಸ್ಟಮ್‌ಗಳು ಮತ್ತು ನೆಟ್‌ವರ್ಕ್‌ಗಳ ರಕ್ಷಣೆಗಾಗಿ ರಚಿಸಿರುವ ವಿಜ್ಞಾನ/ತಂತ್ರಜ್ಞಾನದ ಅಂಗಕ್ಕೆ ಸೈಬರ್ ಭದ್ರತೆ ಎನ್ನುತ್ತಾರೆ. ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ಎದುರಿಸಲು ಮತ್ತು ಅದಕ್ಕೆ ಬೇಕಾದ ಕೌಶಲ್ಯಗಳನ್ನು ಬೆಳೆಸಲು, ಅದರ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಿಸಲು, ಸಾರ್ವಜನಿಕ-ಖಾಸಗಿ ಸಹಯೋಗವನ್ನು ಹೆಚ್ಚಿಸಲು ಹಾಗು ರಾಜ್ಯ ಮತ್ತು ನಾಗರಿಕರ ಒಡೆತನದ ಎಲ್ಲಾ ಡಿಜಿಟಲ್ ಮೂಲಸೌಕರ್ಯಗಳನ್ನು ರಕ್ಷಿಸಲು ಬೇಕಾದ ತಂತ್ರಜ್ಞಾನಗಳನ್ನು ನಿಯೋಜಿಸಲು ಕರ್ನಾಟಕ ಸರ್ಕಾರ ಸೈಬರ್ ಭದ್ರತಾ ನೀತಿ, 2023 ಅನ್ನು ಕಳೆದ ವಾರ ಅನಾವರಣಗೊಳಿಸಿದೆ.

ಕರ್ನಾಟಕ ಸರ್ಕಾರ ಸೈಬರ್ ಭದ್ರತಾ ನೀತಿಯು ಎರಡು ಭಾಗಗಳನ್ನು ಹೊಂದಿದೆ. ಸಾರ್ವಜನಿಕವಾಗಿ ಲಭ್ಯವಿರುವ ಮೊದಲ ಭಾಗವು ಸಾರ್ವಜನಿಕ, ಶೈಕ್ಷಣಿಕ, ಉದ್ಯಮ, ಸ್ಟಾರ್ಟ್-ಅಪ್‌ಗಳು ಮತ್ತು ಸರ್ಕಾರದ ವಿವಿಧ ವಿಭಾಗಗಳು ಸೇರಿದಂತೆ ಸಮಾಜದ ಎಲ್ಲಾ ವಿಭಾಗಗಳಲ್ಲಿ ಬಲವಾದ ಸೈಬರ್ ಭದ್ರತಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ನೀತಿಯ ಎರಡನೇ ಭಾಗವು ರಾಜ್ಯದ ಐಟಿ ಸ್ವತ್ತುಗಳ ಸೈಬರ್ ಭದ್ರತೆಯನ್ನು ಬಲಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಇದು ರಾಜ್ಯದ ಐಟಿ ತಂಡಗಳು ಮತ್ತು ಇಲಾಖೆಗಳ ಐಟಿ ಅನುಷ್ಠಾನಗಳಿಗೆ ಮಾತ್ರ ಆಂತರಿಕವಾಗಿರುತ್ತದೆ.

ಕರ್ನಾಟಕ ಸರ್ಕಾರ ಸೈಬರ್ ಭದ್ರತಾ ನೀತಿಯ ಮೂಲ ಉದ್ದೇಶವು,  ಎಲ್ಲಾ ಸರ್ಕಾರದ ನಿರ್ಣಾಯಕ ಐಟಿ ಮೂಲಸೌಕರ್ಯ ಯೋಜನೆಗಳಿಗೆ ವರದಿ ಮಾಡಲಾದ ಎಲ್ಲಾ ಬೆದರಿಕೆಗಳು, ಘಟನೆಗಳು ಮತ್ತು ಅದರ ತನಿಖೆ  ಸಂಬಂಧಿಸಿದ ಕಾರ್ಯತಂತ್ರದ ಮಾಹಿತಿಯನ್ನು ವರ್ಷದ ಎಲ್ಲಾ  ಸಮಯದಲ್ಲೂ ಪಡೆಯಲು ಮತ್ತು ಅದರ ಆಧಾರದ ಮೇಲೆ ಮುನ್ಸೂಚಕ, ತಡೆಗಟ್ಟುವ, ರಕ್ಷಣಾತ್ಮಕ, ಪ್ರತಿಕ್ರಿಯೆ ಮತ್ತು ಚೇತರಿಕೆ ಕ್ರಮಗಳನ್ನು  ತೆಗೆದುಕ್ಕೊಳಲು ಒಂದು ಭದ್ರತಾ ಕಾರ್ಯಾಚರಣೆ ಕೇಂದ್ರವನ್ನು (SOC) ಸ್ಥಾಪಿಸುವುದು ಆಗಿರುತ್ತದೆ. ಈ ನೀತಿಯು ಎಲ್ಲಾ ಸರ್ಕಾರದಿಂದ-ಸರ್ಕಾರಕ್ಕೆ (G2G), ಸರ್ಕಾರದಿಂದ-ವ್ಯಾಪಾರಕ್ಕೆ (G2B) ಮತ್ತು ರಾಜ್ಯ ಸರ್ಕಾರದ ಸರ್ಕಾರದಿಂದ-ಗ್ರಾಹಕರ (G2C) ಸೇವೆಗಳಿಗೆ ಕ್ರಿಯಾತ್ಮಕ, ಸುರಕ್ಷಿತ ಮತ್ತು ಸ್ಥಿತಿಸ್ಥಾಪಕ ಸೈಬರ್‌ ಜಗತ್ತನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಈ ಸೈಬರ್ ಭದ್ರತಾ ನೀತಿಯ ಅನುಷ್ಠಾನಕ್ಕಾಗಿ ಐದು ವರ್ಷಗಳ ಕಾಲದಲ್ಲಿ ಒಟ್ಟು ಹಣಕಾಸಿನ ಹೊರಹರಿವು ಸುಮಾರು 103.87 ಕೋಟಿ ರೂ ಎಂದು ಅಂದಾಜಿಸಲಾಗಿದೆ, ಮತ್ತು ಇದನ್ನು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಬಜೆಟ್ ಹಂಚಿಕೆಗಳಿಂದ ಭರಿಸಲಾಗುವುದು. ಇದರಲ್ಲಿ 23.74 ಕೋಟಿ ರೂ.ಗಳು ವಿವಿಧ ಪ್ರೋತ್ಸಾಹ ಮತ್ತು ರಿಯಾಯತಿಗಳನ್ನು ಒದಗಿಸುವ ಸಲುವಾಗಿ ಮೀಸಲಾಗಿರುತ್ತದೆ.

ಸೈಬರ್ ಸೆಕ್ಯುರಿಟಿ ವಿದ್ಯಾರ್ಥಿಗಳು ಮತ್ತು ಅದರಲ್ಲಿ ಕೆಲಸ ಮಾಡುವವರಿಗೆ, ಕರ್ನಾಟಕದ ಸೈಬರ್ ಭದ್ರತಾ ನೀತಿಯಲ್ಲಿರುವ ಕೆಲವು ಒಳ್ಳೆಯ ಸುದ್ದಿಗಳು :-

ಈ ನೀತಿಯ ಅವಧಿಯಲ್ಲಿ, 600 ಪದವಿಪೂರ್ವ ಇಂಟರ್ನಿಗಳು ಮತ್ತು 120 ಸ್ನಾತಕೋತ್ತರ ಇಂಟರ್ನ್‌ ಗಳಿಗೆ ಅನುಕೂಲವಾಗುವ ಗುರಿಯೊಂದಿಗೆ ವಿವಿಧ ವಿದ್ಯಾರ್ಥಿಗಳ ಸೈಬರ್ ಸೆಕ್ಯುರಿಟಿ ಇಂಟರ್ನ್‌ಶಿಪ್‌ಗಳನ್ನು ಪ್ರಸ್ತಾಪಿಸುತ್ತದೆ. ಇದು ಕರ್ನಾಟಕ ಮೂಲದ ಪದವಿಪೂರ್ವ ಮತ್ತು ಸ್ನಾತಕೋತ್ತರ ಇಂಟರ್ನ್‌ಗಳಿಗೆ ತಿಂಗಳಿಗೆ ರೂ 10,000 ರಿಂದ ರೂ 15,000 ವರೆಗೆ ಸ್ಟೈಫಂಡ್ ಗರಿಷ್ಠ ಮೂರು ತಿಂಗಳವರೆಗೆ ನೀಡುತ್ತದೆ. ಸೈಬರ್‌ ಸೆಕ್ಯುರಿಟಿ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿ (R&D) ಯೋಜನೆಗಳಿಗೆ, ಮುಖ್ಯವಾಗಿ ಕರ್ನಾಟಕ ಮೂಲದ ಸ್ಟಾರ್ಟ್‌ಅಪ್‌ಗಳು ಮತ್ತು ಕರ್ನಾಟಕ ಮೂಲದ ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ, ಯೋಜನೆಯ ಒಟ್ಟು R&D ವೆಚ್ಚದ 50 ಪ್ರತಿಶತದಷ್ಟು ಅನುದಾನವನ್ನು ಈ ನೀತಿಯು 50 ಲಕ್ಷ ರೂ. ವರಗೆ ನೀಡುತ್ತದೆ. ಸೈಬರ್‌ ಸೆಕ್ಯುರಿಟಿ ಆಡಿಟ್‌ಗಾಗಿ ಕರ್ನಾಟಕ ಸ್ಟಾರ್ಟ್ಅಪ್ ಸೆಲ್‌ನಲ್ಲಿ ನೋಂದಾಯಿಸಲಾದ ಕರ್ನಾಟಕ ಮೂಲದ ಸ್ಟಾರ್ಟ್ಅಪ್‌ಗಳಿಗೆ, CERT-In ಎಂಪನೆಲ್ಡ್ ಸೇವಾ ಪೂರೈಕೆದಾರರ ತೊಡಗಿಸಿಕೊಳ್ಳುವಿಕೆಗೆ ಗರಿಷ್ಠ ರೂ 1 ಲಕ್ಷದ ಮರುಪಾವತಿಯನ್ನು ಸಹ ಪಾಲಿಸಿ ಒಳಗೊಂಡಿದೆ. 40,000 ಜನರಿಗೆ ಸೈಬರ್ ಭದ್ರತಾ ಕೌಶಲ್ಯ ಮತ್ತು ಅರಿವಿನ ಬಗ್ಗೆ ತರಬೇತಿ ನೀಡಲು ಕರ್ನಾಟಕ ರಾಜ್ಯ ಸರ್ಕಾರವು ಬಹುರಾಷ್ಟ್ರೀಯ ಐಟಿ ಸಂಸ್ಥೆ ಸಿಸ್ಕೊದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ. ಸೈಬರ್ ಸೆಕ್ಯುರಿಟಿ ವರ್ಕ್‌ಫೋರ್ಸ್ ಅನ್ನು ವೈವಿಧ್ಯಗೊಳಿಸುವುದು ಮತ್ತು ಟೆಕ್ ವಲಯದಲ್ಲಿ ಸಮಾನ ಅವಕಾಶಗಳನ್ನು ಉತ್ತೇಜಿಸುವುದಕ್ಕಾಗಿ ತರಬೇತಿಗೆ ಆಯ್ಕೆಯಾದವರಲ್ಲಿ ಶೇ.50 ರಷ್ಟು ಮಹಿಳೆಯರು ಇರುತ್ತಾರೆ. ಸಿಸ್ಕೋ ಕೌಶಲ್ಯ ಕಾರ್ಯಕ್ರಮವು ಮೂರು ಭಾಗಗಳನ್ನು ಹೊಂದಿರುತ್ತದೆ. ಇದರಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ, ಸೈಬರ್ ಸೆಕ್ಯುರಿಟಿ ಕಾರ್ಯಾಚರಣೆಗಳಲ್ಲಿ ಪ್ರವೀಣರಾಗಲು ಆಳವಾದ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಒದಗಿಸುತ್ತದೆ ಮತ್ತು ತೇರ್ಗಡೆಯಾದವರಿಗೆ ಸೈಬರ್ ಆಪ್ಸ್ ಅಸೋಸಿಯೇಟ್ (CA) ಪದವೀಧರರು ಎಂಬ ಸರ್ಟಿಫಿಕೇಟ್ ನೀಡಲಾಗುತ್ತದೆ. ಇದಲ್ಲದೆ ಹೆಚ್ಚಿನ ತರಬೇತಿಗಾರರನ್ನು ತಯಾರಿಸಲು ವಿವಿಧ ಕಾಲೇಜು ಉಪನ್ಯಾಸಕರಿಗೆ ಮೂಲಭೂತ ಸೈಬರ್‌ ಸೆಕ್ಯುರಿಟಿ ಜ್ಞಾನದಲ್ಲಿ ಮತ್ತು ಸುಧಾರಿತ ಸೈಬರ್‌ ಸೆಕ್ಯುರಿಟಿ ಪರಿಕಲ್ಪನೆಗಳಲ್ಲಿ ತರಬೇತಿ ನೀಡಲು ಮತ್ತು ಅವರನ್ನು ಇದರಲ್ಲಿ ಪರಿಣತಿರನ್ನಾಗಿ ಮಾಡುವ ಯೋಜನೆಯನ್ನು ರೂಪಿಸಲಾಗಿದೆ.

ಸೈಬರ್ ಭದ್ರತಾ ನೀತಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ