ಆಧಾರ್ ದುರ್ಬಳಕೆಯನ್ನು ತಡೆಯುವುದು ಹೇಗೆ?
ಆಧಾರ್ ಕಾರ್ಡಿನ ದುರುಪಯೋಗ/ದುರ್ಬಳಕೆ/ವಂಚನೆ ಪ್ರಕರಣಗಳು ಹೆಚ್ಚುತ್ತಿವೆ, ಕಳೆದ ವಾರ ನನ್ನ ಸಂಬಂಧಿಕರೊಬ್ಬರು ನನಗೆ ಕರೆ ಮಾಡಿದರು ಮತ್ತು ಅವರ ಗಮನಕ್ಕೆ ಬಾರದೆ ಅವರ ಆಧಾರ್ ಕಾರ್ಡ್ ಬಳಸಿ ಅವರ ಮೊಬೈಲ್ ನಂಬರಿನ ನಕಲಿ ಇ-ಸಿಮ್ ಕಾರ್ಡ್ ಬೇರಾರಿಗೂ ನೀಡಲಾಗಿದೆ ಎಂದು ಆತಂಕದಿಂದ ಹೇಳಿದರು ಮತ್ತು ಅವರು ಭವಿಷ್ಯದಲ್ಲಿ ಅವರ ಆಧಾರ್ ಕಾರ್ಡ್ ದುರ್ಬಳಕೆಯಾಗದಂತೆ ತಡೆಯಲು ಏನು ಮಾಡಬಹುದು ಎಂದು ತಿಳಿಯಲು ಬಯಸಿದ್ದರು.
ಕಳೆದ ವರ್ಷದ ಕೊನೆಯಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನಿಂದ ಬೃಹತ್ ಡೇಟಾ ಸೋರಿಕೆಯಿಂದಾಗಿ 81.5 ಕೋಟಿ ಭಾರತೀಯರ ಆಧಾರ್ ವಿವರಗಳ ಸೋರಿಕೆಯ ಬಗ್ಗೆ ವರದಿಯಾಗಿತ್ತು ಮತ್ತು ಅದನ್ನು ಡಾರ್ಕ್‌ವೆಬ್‌ನಲ್ಲಿ ಹರಾಜು ಮಾರಾಟಕ್ಕೆ ಇರಿಸಲಾಗಿತ್ತು. ನಾವೆಲ್ಲರೂ ಹೋಟೆಲ್ ಕೊಠಡಿ ಕಾಯ್ದಿರಿಸುವಿಕೆ, ಸಾಲ ಅಥವಾ ಇತರ ಬ್ಯಾಂಕಿಂಗ್ ಸೇವೆಗಳು, ಹೊಸ ಸಿಮ್ ಕಾರ್ಡ್, ಶಾಲಾ/ಕಾಲೇಜು ಪ್ರವೇಶ ಇತ್ಯಾದಿಗಳಿಗಾಗಿ ವಿವಿಧ ಏಜೆನ್ಸಿಗಳು ಮತ್ತು ವ್ಯವಹಾರಗಳಿಗೆ ಆಧಾರ್ ಕಾರ್ಡ್ ಫೋಟೋಕಾಪಿ ಅಥವಾ ಸ್ಕ್ಯಾನ್ ಮಾಡಿದ ಪ್ರತಿಯನ್ನು ನೀಡುತ್ತೇವೆ, ಅದು ಅಲ್ಲಿಂದ ಸೋರಿಕೆಯಾಗಬಹುದು ಮತ್ತು ಅಪರಾಧಿಗಳಿಗೆ ಮಾರಾಟವಾಗಬಹುದು. ನನ್ನ ಈ ಹಿಂದೆ ಅಂತಹ ಸೋರಿಕೆಯಾದ ಅಥವಾ ಕದ್ದ ಆಧಾರ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ಮಾಡಿದ ವಿವಿಧ ವಂಚನೆಗಳನ್ನು ಪಟ್ಟಿ ಮಾಡಿದ್ದೇನೆ, ದಯವಿಟ್ಟು ಅದನ್ನು ಪರಿಶೀಲಿಸಿ.
ಆಧಾರ್ ಎಂಬುದು 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದ್ದು, ಇದನ್ನು ಭಾರತದ ಎಲ್ಲಾ ನಿವಾಸಿಗಳು ಸ್ವಯಂಪ್ರೇರಣೆಯಿಂದ ತಮ್ಮ ಬಯೋಮೆಟ್ರಿಕ್ಸ್ (10 ಫಿಂಗರ್ ಪ್ರಿಂಟ್‌ಗಳು, 2 ಐರಿಸ್ ಪ್ರಿಂಟ್‌ಗಳು ಮತ್ತು ಮುಖದ ಫೋಟೋ) ಮತ್ತು ಇತರ ವಿವರಗಳನ್ನು ನೀಡಿ ಪಡೆಯಬಹುದು. ಆಧಾರ್ ಉದ್ದೇಶವು ಭಾರತದಲ್ಲಿ ನೆಲೆಸಿರುವ ನಿವಾಸಿಗಳಿಗೆ/ವೈಯಕ್ತಿಕ ವ್ಯಕ್ತಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡುವ ಮೂಲಕ ಮತ್ತು ಅದನ್ನು ಯಾವುದೇ ಸಮಯದಲ್ಲಿಯೂ ಯಾವುದೇ ಸ್ಥಳದಲ್ಲಿಯೂ ಯಾರಾದರೂ ಸುಲಭವಾಗಿ ದೃಢೀಕರಿಸುವ ಮತ್ತು ಸರಕಾರದ ಸಹಾಯಧನಗಳು, ಪ್ರಯೋಜನಗಳು ಮತ್ತು ಸೇವೆಗಳನ್ನು ಉತ್ತಮವಾಗಿ ನಿರ್ವಹಿಸುವ ಸಲುವಾಗಿ, ದಕ್ಷ ಹಾಗೂ ಪಾರದರ್ಶಕ ರೀತಿಯಲ್ಲಿ ಆಡಳಿತ ನಿರ್ವಹಣೆಯನ್ನು ಒದಗಿಸುವುದಾಗಿರುತ್ತದೆ. ನಂತರ ಇದು ಮೊಬೈಲ್ ಸಿಮ್ ಕಾರ್ಡ್‌ಗಳು, ಬ್ಯಾಂಕ್ ಖಾತೆಗಳು, ಸಾವಿನ ನೋಂದಣಿ, ಭೂ ನೋಂದಣಿ, ವಾಹನ ನೋಂದಣಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಮತ್ತು ದೊಡ್ಡ ಮೊತ್ತವನ್ನು ಒಳಗೊಂಡಂತೆ ಭಾರತದ ನಿವಾಸಿಗಳಿಗೆ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಯಾಗಿ ವಿಸ್ತರಿಸಲಾಯಿತು.
ಆಧಾರ್ ದುರ್ಬಳಕೆ ಅಥವಾ ವಂಚನೆಗಳನ್ನು ತಡೆಗಟ್ಟಲು ಒಬ್ಬರು ತೆಗೆದುಕೊಳ್ಳಬಹುದಾದ ಕ್ರಮಗಳು :-
- ನಿಮ್ಮ ಆಧಾರ್ ಕಾರ್ಡಿನ ಚಿತ್ರವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ನೀವು ಹಂಚಿಕೊಳ್ಳಲೇ ಬೇಕಾದರೆ, ಅದರ ಕಪ್ಪು-ಬಿಳುಪಿನ ಫೋಟೋಕಾಪಿಯ(ಜೆರಾಕ್ಸ್) ಚಿತ್ರವನ್ನು ಹಂಚಿಕೊಳ್ಳಿ ಮತ್ತು ಅದರ ಮೇಲೆ ಅರ್ಜಿಯ ದಿನಾಂಕದೊಂದಿಗೆ ನೀಡುವ ಕಾರಣವನ್ನು ಬರೆಯಿರಿ.
- ನಿಮ್ಮ ಹೆಸರು, ವಯಸ್ಸು ಅಥವಾ ವಿಳಾಸದ ಪರಿಶೀಲನೆಗಾಗಿ ಆಧಾರ್ ಬದಲಿಗೆ ಡ್ರೈವಿಂಗ್ ಲೈಸೆನ್ಸ್ ಅಥವಾ ವೋಟರ್ ಐಡಿ ಬಳಸಿ.
- ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಥವಾ ಇಮೇಲ್ ಅಡ್ರೆಸ್ ಬದಲಾಯಿಸಿದಲ್ಲಿ ಅದನ್ನು ನೀವು ಆಧಾರ್ ಗೆ ಲಿಂಕ್ ಮಾಡಲಾದ ಹೊಸ ಮೊಬೈಲ್ ಸಂಖ್ಯೆಯನ್ನು ಅಥವಾ ಇಮೇಲ್ ಅಡ್ದ್ರೆಸ್ಸನ್ನು ನವೀಕರಿಸಿ, ನಿಮ್ಮ ಆಧಾರ್ ಸಂಖ್ಯೆಯಲ್ಲಿ ಯಾವುದೇ ಪರಿಶೀಲನೆ ಸಂಭವಿಸಿದಲ್ಲಿ ನೀವು ಮೊಬೈಲ್ ಸಂಖ್ಯೆ ಮತ್ತುಇಮೇಲ್ ಎರಡರಲ್ಲೂ ಸಂದೇಶಗಳನ್ನು ಪಡೆಯಬಹುದು.
- ನಿಯಮಿತವಾಗಿ uidai.gov.in ವೆಬ್ಸೈಟ್ನಲ್ಲಿ ನಿಮ್ಮ ಆಧಾರ್ ದೃಢೀಕರಣ ಇತಿಹಾಸದ ವರದಿಯನ್ನು ಅನಿರೀಕ್ಷಿತ ಪರಿಶೀಲನೆಗಳಿಗಾಗಿ ಪರಿಶೀಲಿಸಿ.
- ಆಧಾರ್ ವೆಬ್ಸೈಟ್ನಲ್ಲಿ ಅಥವಾ mAadhaar ಆಪ್ನಲ್ಲಿ ನಿಮ್ಮ ಆಧಾರ್ ಕಾರ್ಡಿನ ಬಯೋಮೆಟ್ರಿಕ್ ಪರಿಶೀಲನೆಯನ್ನು ಲಾಕ್ ಮಾಡಿ ಮತ್ತು ನಿಮಗೆ ಬೇಕಾದಾಗ ಅದನ್ನು ಅನ್ಲಾಕ್ ಮಾಡಿ.
- ನೀವು ಆಧಾರ್ ವೆಬ್ಸೈಟ್ನಲ್ಲಿ ಆಧಾರ್ ಕಾರ್ಡ್ ವರ್ಚುಯಲ್ ಐಡಿಯನ್ನು ರಚಿಸಬಹುದು ಮತ್ತು ಅದನ್ನು ಪರಿಶೀಲನೆಗಾಗಿ ಬಳಸಬಹುದು ಮತ್ತು ಪರಿಶೀಲನೆಯ ನಂತರ ಅದನ್ನು ಬದಲಾಯಿಸಬಹುದು.
- ನೀವು UIDAI ವೆಬ್ಸೈಟ್ನಿಂದ ಮಾಸ್ಕೇಡ್ ಆಧಾರ್(ಕೇವಲ ಕೊನೆಯ ನಾಲ್ಕು ಸಂಖ್ಯೆ ತೋರಿಸಲಾಗುತ್ತದೆ) ಪ್ರತಿಯನ್ನು ಡೌನ್ಲೋಡ್ ಮಾಡಬಹುದು ಮತ್ತು ಅದನ್ನು ಪರಿಶೀಲನೆಗಾಗಿ ಬಳಸಬಹುದು.
ನಿಮ್ಮ ಆಧಾರ್ ಕಾರ್ಡ್‌ನ ದುರುಪಯೋಗದ ಬಗ್ಗೆ ನಿಮಗೆ ತಿಳಿದಾಗ ನೀವು ತೆಗೆದುಕೊಳ್ಳಬಹುದಾದ ಕ್ರಮಗಳು :-
- ಮತ್ತಷ್ಟು ದುರುಪಯೋಗವನ್ನು ತಡೆಗಟ್ಟಲು, ನಿಮ್ಮ ಆಧಾರ್ ಬಯೋಮೆಟ್ರಿಕ್ ಅಥವಾ ನಿಮ್ಮ ಆಧಾರ್ ಕಾರ್ಡ್ ಅನ್ನು mAadhaar ಅಪ್ಲಿಕೇಶನ್‌ನಲ್ಲಿ ಅಥವಾ ಆಧಾರ್ ವೆಬ್ಸೈಟ್ ನಲ್ಲಿ ಲಾಕ್ ಮಾಡಿ ಮತ್ತು ನಂತರದ ದಿನಾಂಕದಲ್ಲಿ ನಿಮಗೆ ಅಗತ್ಯವಿರುವಾಗ ಮಾತ್ರ ಅದನ್ನು ಅನ್ಲಾಕ್ ಮಾಡಿ.
- ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ ದುರುಪಯೋಗದ ಕುರಿತು cybercrime.gov.in ವೆಬ್‌ಸೈಟ್‌ನಲ್ಲಿ ಅಥವಾ ನಿಮ್ಮ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ.
- 1947 ಆಧಾರ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅಥವಾ help@uidai.gov.in ಗೆ ಇಮೇಲ್ ಮಾಡಿ ಅಥವಾ ನಿಮ್ಮ ಆಧಾರ್ ಕಾರ್ಡ್‌ನ ಮೋಸದ ಚಟುವಟಿಕೆಗಳನ್ನು ವರದಿ ಮಾಡಲು UIDAI ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸಿ.
- ಸೂಕ್ತ ಪರಿಶೀಲನೆ ನಡೆಸದೆ ವಂಚನೆಗೆ ಅವಕಾಶ ನೀಡಿದ ಸರಕಾರ ಅಥವಾ ಇತರೆ ಸಂಸ್ಥೆಗಳ ವಿರುದ್ಧ ದೂರು ದಾಖಲಿಸಿ ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ.
ಬಲಿಪಶುವಿಗೆ ಲಭ್ಯವಿರುವ ಕಾನೂನು (ಭಾರತೀಯ) ಪರಿಹಾರಗಳು:-
ನಿಮ್ಮ ಹತ್ತಿರದ ಸೈಬರ್ ಅಥವಾ ಸಾಮಾನ್ಯ ಪೊಲೀಸ್ ಠಾಣೆಯಲ್ಲಿ, ಈ ಕೆಳಗಿನ ಕಾನೂನು ವಿಭಾಗಗಳ ಅಡಿಯಲ್ಲಿ ಅಥವಾ ನಿಮ್ಮ ಪ್ರಕರಣದ ಪ್ರಕಾರ ಪೊಲೀಸರು ಸೂಚಿಸಿದಂತೆ ಕಾಯಿದೆಗಳು ಮತ್ತು ಸೆಕ್ಷನ್‌ಗಳ ಅಡಿಯಲ್ಲಿ ನೀವು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬಹುದು :
- ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 378(ಕಳ್ಳತನ), ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 405/406(ನಂಬಿಕೆ ದ್ರೋಹ), ಸೆಕ್ಷನ್ 415/416/417(ಮೋಸ), ಸೆಕ್ಷನ್ 419 (ಸೋಗು ಹಾಕುವ ವಂಚನೆಗೆ ಶಿಕ್ಷೆ), ಸೆಕ್ಷನ್ 420 (ವಂಚನೆ), ಸೆಕ್ಷನ್ 424 (ಕಾನೂನುಬಾಹಿರವಾಗಿ ಡೇಟಾವನ್ನು ಹೊರತೆಗೆಯುವುದು), ಮತ್ತು ಸೆಕ್ಷನ್ 441 (ಕ್ರಿಮಿನಲ್ ಅತಿಕ್ರಮಣ).
- ಮಾಹಿತಿ ತಂತ್ರಜ್ಞಾನ ಕಾಯ್ದೆ(IT Act ), 2000/08 ಸೆಕ್ಷನ್ 43 (ಕಂಪ್ಯೂಟರ್, ಕಂಪ್ಯೂಟರ್ ಸಿಸ್ಟಮ್, ಇತ್ಯಾದಿಗಳ ಹಾನಿಗಾಗಿ ದಂಡ ಮತ್ತು ಪರಿಹಾರ), ಸೆಕ್ಷನ್ 66 (ಕಂಪ್ಯೂಟರ್ ಸಂಬಂಧಿತ ಅಪರಾಧಗಳಿಗೆ ಶಿಕ್ಷೆ – ಡೇಟಾ ಕಳ್ಳತನ ಮಾಡುವ ವ್ಯಕ್ತಿ, ಸಿಸ್ಟಮ್ಗೆ ವೈರಸ್ ಹರಡುವುದು, ಡೇಟಾವನ್ನು ನಾಶಪಡಿಸುವುದು, ಹ್ಯಾಕ್ ಮಾಡುವುದು ಅಥವಾ ಕಂಪ್ಯೂಟರ್ಗೆ ಅಥವಾ ನೆಟ್ವರ್ಕ್ ಗೆ ಅಧಿಕೃತ ವ್ಯಕ್ತಿಗೆ ಪ್ರವೇಶವನ್ನು ನಿರಾಕರಿಸುವುದು), ಸೆಕ್ಷನ್ 66C (ಇದು ಗುರುತಿನ ಕಳ್ಳತನಕ್ಕೆ ದಂಡವನ್ನು ಸೂಚಿಸುತ್ತದೆ ಮತ್ತು ವ್ಯಕ್ತಿಯ ಗುರುತಿನ ಮಾಹಿತಿಯನ್ನು ಮೋಸದಿಂದ ಅಥವಾ ಅಪ್ರಾಮಾಣಿಕವಾಗಿ ಬಳಸುವದಕ್ಕೆ ಶಿಕ್ಷೆ ) ಮತ್ತು ಸೆಕ್ಷನ್ 66D (ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ಸೋಗು ಹಾಕುವ ಮೂಲಕ ವಂಚನೆಗೆ ಶಿಕ್ಷೆ), ಮತ್ತು ಸೆಕ್ಷನ್ 66E (ಗೌಪ್ಯತೆ ಉಲ್ಲಂಘನೆ).
- ಆಧಾರ್ ಕಾಯಿದೆ 2016, ಸೆಕ್ಷನ್ 36 – ಸೋಗು ಹಾಕುವಿಕೆಗೆ ದಂಡ, ಸೆಕ್ಷನ್ 37 – ಗುರುತಿನ ಮಾಹಿತಿಯನ್ನು ಬಹಿರಂಗಪಡಿಸಲು ದಂಡ ಅಥವಾ ಸೆಕ್ಷನ್ 40 – ಅನಧಿಕೃತ ಬಳಕೆಗಾಗಿ ದಂಡ, 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ರೂ. 10,000/1,00,000 ಅಥವಾ ಎರಡೂ ವಿಧಿಸಬಹುದು.