ಸಂತ್ರಸ್ಥ

ಸೈಬರ್ ಅಪರಾಧಗಳ ಸಂತ್ರಸ್ಥರು ಹೇಗೆ ಸುಖಾಂತ್ಯವನ್ನು ಪಡೆಯಬಹುದು

ಈ ಅಂಕಣ ಸೈಬರ್ ಅಪರಾಧಗಳ ಸಂತ್ರಸ್ಥರಿಗೆ ಏನು ಮಾಡಿದರೆ ಅವರ ಪರಿಸ್ಥಿತಿಗೆ ಸುಖಾಂತ್ಯವನ್ನು ಪಡೆಯಬಹುದು ಎಂಬುದನ್ನು ನಾಲ್ಕು ನಿಜ ಜೀವನ ವೃಥಾಂತಗಳ ಮೂಲಕ ತಿಳಿಸಲು ಪ್ರಯತ್ನಿಸುತ್ತದೆ.

ಇದು ನನ್ನ ೨೫ನೇ ಮುದ್ರಿತವಾದ ಅಂಕಣ, ಬರೆಯಲು ಪ್ರೇರೇಪಿಸಿದ, ಪ್ರೋತ್ಸಾಹಿಸಿದ ಮತ್ತು ಮುದ್ರಿಸಲು ಅನುವು ಮಾಡಿಕೊಟ್ಟ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. 

ಬಹುಪಾಲು ಸೈಬರ್ ಅಪರಾಧಗಳ ಸಂತ್ರಸ್ಥರಿಗಿರುವ ಮೊದಲ ಪ್ರಶ್ನೆ ಏನೆಂದರೆ “ನಮ್ಮ ದುಡ್ಡು ವಾಪಸ್ ಸಿಗತ್ತಾ?”. “ಸೈಬರ್ ಖದೀಮರು 2023ರ ಮೊದಲ ಆರು ತಿಂಗಳ ಅವಧಿಯಲ್ಲಿ ಸುಮಾರು 65 ಕೋಟಿ ರೂ. ವಂಚಿಸಿದ್ದಾರೆ. ಆದರೆ ವಂಚನೆಗೊಳಗಾದವರು ಮತ್ತು ಪೊಲೀಸರ ಸಮಯೋಚಿತ ಕ್ರಮದಿಂದಾಗಿ ಸುಮಾರು 17 ಕೋಟಿ ರೂ. (ಶೇ.26) ಸೈಬರ್ ಕಳ್ಳರ ಪಾಲಾಗದಂತೆ ತಡೆಯಲಾಗಿದೆ ಮತ್ತು ಅದರಲ್ಲಿ ಈ ವರ್ಷದ ಜನವರಿ 1 ರಿಂದ ಜೂ. 30 ರವರೆಗೆ ಸಂತ್ರಸ್ತರಿಗೆ ಸುಮಾರು 65 ಲಕ್ಷ ರೂಪಾಯಿಗಳನ್ನು ಹಿಂದಿರುಗಿಸಿದ್ದೇವೆ “ಎಂದು ಕರ್ನಾಟಕದ ಗೃಹ ಸಚಿವ ಸದನದಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಇದರಿಂದ ಏನು ತಿಳಿಯುತ್ತದೆಂದರೆ, ಹಣ ವಾಪಸ್ ದೊರೆಯುವುದು ಅಷ್ಟು ಸುಲಭವಲ್ಲಾ, ಆದರೆ ನಿರಾಶೆ ಹೊಂದುವಷ್ಟು ಅಸಾಧ್ಯವೂ ಅಲ್ಲಾ. ಸೈಬರ್ ಅಪರಾಧಗಳ ಸಂತ್ರಸ್ಥರಿಗಿರುವ ಎರಡನೇ ಅತಿ ಸಾಮಾನ್ಯ ಪ್ರಶ್ನೆ ಏನೆಂದರೆ “ಹೇಗೆ ಸೈಬರ್ ಅಪರಾಧಿಗಳ ಬ್ಲ್ಯಾಕ್ಮೇಲ್ ಅಥವಾ ಬೆದರಿಕೆಯಿಂದ ಹೊರ ಬರುವುದು?”  

ಇವೆರಡು ಪ್ರಶ್ನೆಗೆ ನನ್ನ ಅಲ್ಪ ಅನುಭವದಲ್ಲಿ ಬಂದ ನಾಲ್ಕು ನಿಜ ಜೀವನದಲ್ಲಿ ಸುಖಾಂತ್ಯಕ್ಕೆ ತಲುಪಿದ ಪ್ರತಿ ಪ್ರಶ್ನೆಗೆ ಎರಡು ಅನುಭವಗಳನ್ನು ನಿಮಗೆ ಕೆಳಗೆ ತಿಳಿಸುವೆ. ಇದರಲ್ಲಿ ನನ್ನ ಮೂಲ ಉದ್ದೇಶ – “ಸೈಬರ್ ಅಪರಾಧಗಳ ಸಂತ್ರಸ್ಥರಿಗೆ ಏನು ಮಾಡಿದರೆ ಇವರಂತೆ ನೀವು ಕೂಡ ನಿಮ್ಮ ಪರಿಸ್ಥಿತಿಗೆ ಸುಖಾಂತ್ಯವನ್ನು ಪಡೆಯಬಹುದು”.

ಮೈಸೂರಿನ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಶನಿವಾರದಂದು ಒಂದು ಕರೆ ಬರತ್ತೆ, ಆ ನಂಬರಿನ ಪ್ರೊಫೈಲ್ ಫೋಟೋ ಬ್ಯಾಂಕಿನದ್ದಾಗಿರುತ್ತದೆ ಮತ್ತು ಕರೆಯಲ್ಲಿ ಅವರಿಗೆ ನಿಮ್ಮ ಅಕೌಂಟ್ KYC ಆಗಿಲ್ಲಾ ಅದರಿಂದ ಬ್ಲಾಕ್ ಆಗುವುದನ್ನು ತಪ್ಪಿಸಲು ಈ ಕರೆ, ಅಂತ ತಿಳಿಸಿ ಅವರ ಕೆಲವು ಸ್ಥೂಲ ಮಾಹಿತಿಯನ್ನು ಸರಿಯಾಗಿ ಹೇಳಿ ಅವರ ನಂಬಿಕೆ ಗಳಿಸುತ್ತಾರೆ, ನಂತರ KYC ಅಪ್ಡೇಟ್ ಮಾಡಲು ಸಹಾಯ ಮಾಡುತ್ತೀನೆಂದು ಅವರ ಡೆಬಿಟ್ ಕಾರ್ಡ್ ಮಾಹಿತಿಯನ್ನು ಮತ್ತು OTP ಯನ್ನು ಪಡಿಯುತ್ತಾರೆ, ಇವರಿಗೆ ಒಂದು ಲಕ್ಷ ರೂಪಾಯಿ ಅವರ ಅಕೌಂಟಿನಿಂದ ಡೆಬಿಟ್ ಆಗಿದೆ ಎಂಬ ಮೆಸೇಜ್ ಬಂದಾಗ ಗೊತ್ತಾಗತ್ತೆ ತಾವು Impersonation ಅಥವಾ “ಸೋಗು ಹಾಕುವಿಕೆ” ಮತ್ತು ಸೋಶಿಯಲ್ ಇಂಜಿನಿಯರಿಂಗ್ ಎಂಬ ಸೈಬರ್ ಕ್ರೈಂ ಗೆ ಬಲಿಯಾಗಿದ್ದೇನೆಂದು. ಅವರು ಕೂಡಲೇ ಸೈಬರ್ ಸಹಾಯವಾಣಿ ೧೯೩೦ ಗೆ ಕರೆ ಮಾಡಿ ದೂರು ದಾಖಲಿಸುತ್ತಾರೆ ಮತ್ತು ಬ್ಯಾಂಕಿಗೆ ಕರೆ ಮಾಡಿ ಅಕೌಂಟ್ ಮತ್ತು ಕಾರ್ಡನ್ನು ಬ್ಲಾಕ್ ಮಾಡುತ್ತಾರೆ, ನಂತರ ಬ್ಯಾಂಕಿನಲ್ಲಿ ಇನ್ಶೂರೆನ್ಸ್ ಫಾರ್ಮ್ಗಳನ್ನು ತುಂಬುತ್ತಾರೆ, ಅವರಿಗೆ ಅವರ ಪೂರ್ತಿ ಹಣ ಕೆಲವೇ ದಿನದಲ್ಲಿ ಅಕೌಂಟ್ಗೆ ವಾಪಸಾಗುತ್ತದೆ.

ಬೆಂಗಳೂರಿನ ಮಹಿಳೆಯೊಬ್ಬಳಿಗೆ ಒಂದು sms ಬರತ್ತೆ, ಅದರಲ್ಲಿ “ಬಾಕಿ ಉಳಿದಿರುವುದರಿಂದ ನಿಮ್ಮ ವಿದ್ಯುತ್ ಕನೆಕ್ಷನ್ ಇವತ್ತಿನಿಂದ ಕಡಿತಗೊಳಿಸಲಾಗುತ್ತದೆ, ಸರಿಪಡಿಸಲು ಈ ಸಂಖ್ಯೆಗೆ ಕರೆ ಮಾಡಿ”  ಎಂದಿರುತ್ತದೆ. ಅವರು ಕರೆ ಮಾಡಿದಾಗ, ಆ ಕಡೆಯ ವ್ಯಕ್ತಿ ೧೫ ರೂಪಾಯಿ ಬ್ಯಾಲೆನ್ಸ್ ಇದೆ, ನೀವು ಈ ಕೂಡಲೇ ಪಾವತಿಸಿದರೆ ಕಡಿತಗೊಳಿಸುವುದನ್ನು ತಡೆಯಬಹುದು ಎನ್ನುತ್ತಾರೆ ಮತ್ತು ಪಾವತಿಸಲು ಒಂದು ಹೈಪರ್ ಲಿಂಕ್ ಅನ್ನು ಮತ್ತು ಸಹಾಯ ಮಾಡಲು ರಿಮೋಟ್ ಕಂಟ್ರೋಲ್ ಆಪ್ ಒಂದನ್ನು ಇನ್ಸ್ಟಾಲ್ ಮಾಡಲು ಹೇಳುತ್ತಾರೆ. ಇವರು ಆಪನ್ನು ಸ್ಥಾಪಿಸಿ ಆ ಹೈಪರ್ ಲಿಂಕ್ ನಲ್ಲಿ  ತೆರೆದ ಜಾಲತಾಣದಲ್ಲಿ ಹಣ ಪಾವತಿಸಲು ತಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಬಳಸುತ್ತಾರೆ, ಅವರಿಗೆ ೭೫೦೦೦ ರೂಪಾಯಿ ಅವರ ಅಕೌಂಟಿನಿಂದ ಡೆಬಿಟ್ ಆಗಿದೆ ಎಂಬ ಮೆಸೇಜ್ ಬಂದಾಗ ಗೊತ್ತಾಗತ್ತೆ ತಾವು Impersonation ಅಥವಾ “ಸೋಗು ಹಾಕುವಿಕೆ” ಮತ್ತು ಸೋಶಿಯಲ್ ಇಂಜಿನಿಯರಿಂಗ್ ಎಂಬ ಸೈಬರ್ ಕ್ರೈಂ ಗೆ ಬಲಿಯಾಗಿರುವೆನೆಂದು. ಕೂಡಲೇ ಅವರು ಆಪನ್ನು uninstall ಮಾಡುತ್ತಾರೆ, ಸೈಬರ್ ಸಹಾಯವಾಣಿ ೧೯೩೦ ಗೆ ಕರೆ ಮಾಡಿ ದೂರು ದಾಖಲಿಸುತ್ತಾರೆ ಮತ್ತು ಬ್ಯಾಂಕಿಗೂ ಕರೆ ಮಾಡಿ ಅಕೌಂಟ್ ಬ್ಲಾಕ್ ಮಾಡುತ್ತಾರೆ, ನಂತರ ಹತ್ತಿರದ ಪೊಲೀಸ್ ಠಾಣೆಯಲ್ಲಿ FIR ದಾಖಲಿಸುತ್ತಾರೆ. ಪೊಲೀಸ್ ತನಿಖೆಯಿಂದ ಗೊತ್ತಾಗುತ್ತದೆ ಅದು ಉತ್ತರ ಪ್ರದೇಶದ ವಿದ್ಯುತ್ ಸಂಸ್ಥೆಯ ಅಕೌಂಟ್ ಒಂದಕ್ಕೆ ಹಣ ಕ್ರೆಡಿಟ್ ಆಗಿರುವುದೆಂದು, ಮತ್ತು ಆ ವ್ಯಕ್ತಿಯನ್ನು ವಿಚಾರಿಸಿದಾಗ, ಅವನು ಹೆದರಿ ಈ ಮಹಿಳೆಗೆ ಕರೆ ಮಾಡುತ್ತಾನೆ ಮತ್ತು ಪೂರ್ತಿ ಹಣವನ್ನು ಹಿಂದಿರುಗಿಸುತ್ತಾನೆ.

ಮುಂಬೈನ ಚಾರ್ಟರ್ಡ್ ಅಕೌಂಟೆಂಟ್ ಯುವಕನೊಬ್ಬನಿಗೆ ಯುವತಿಯೊಬ್ಬಳು ಮ್ಯಾಟ್ರಿಮೋನಿಯಲ್ ಜಾಲತಾಣವೊಂದರಲ್ಲಿ ಪರಿಚಯವಾಗುತ್ತಾಳೆ ಮತ್ತು ಅವರಿಬ್ಬರೂ ವಾಟ್ಸಪ್ಪ್ ನಂಬರ್ ವಿನಿಮಯ ಮಾಡಿ ಕೊಳ್ಳುತ್ತಾರೆ. ಮೊದಲ ಕರೆಯಲ್ಲೇ ಆ ಹುಡುಗಿ ವಿಡಿಯೋ ಕಾಲ್ ಮಾಡೋಣ ಎನ್ನುತ್ತಾಳೆ ಮತ್ತು ವಿಡಿಯೋ ಕಾಲ್ ಶುರುವಿನಲ್ಲೇ ತನ್ನ ವಸ್ತ್ರಗಳನ್ನು ತೆಗೆಯಲು ಶುರು ಮಾಡುತ್ತಾಳೆ, ಕೂಡಲೇ ಯುವಕನು ಕರೆಯನ್ನು ಕಟ್ ಮಾಡುತ್ತಾನೆ. ಆಮೇಲೆ ಮಾರನೇ ದಿನವೇ ಅವನಿಗೆ ಸೆಕ್ಸ್‌ಟಾರ್ಶನ್(ವಿವರಗಳಿಗಾಗಿ ನನ್ನ ಸೆಕ್ಸ್‌ಟಾರ್ಶನ್ ಕುರಿತ ಅಂಕಣವನ್ನು ಓದಿ) ಕರೆಗಳು ಶುರುವಾಗುತ್ತದೆ. ಅವನು ಸೈಬರ್ ಸಹಾಯ ವಾಣಿ ೧೯೩೦ ಗೆ ಕರೆ ಮಾಡಿ ದೂರು ದಾಖಲಿಸುತ್ತಾನೆ ಮತ್ತು ಸೂಚನೆಯಂತೆ ಕರೆಗಳನ್ನು ನಿರಾಕರಿಸುತ್ತಾನೆ ಮತ್ತು ಖದೀಮರ ಯಾವುದೇ ಬೆದರಿಕೆ ಸಂದೇಶಗಳಿಗೆ ಸಂಯಮದಿಂದ ನಿರಾಕರಿಸುತ್ತಾನೆ, ಸ್ವಲ್ಪ ದಿನಕ್ಕೆ ಆ ಬೆದರಿಕೆ ಕರೆಗಳು ತಾವಾಗೇ ನಿಲ್ಲುತ್ತವೆ.

ಮೈಸೂರಿನ ಫೋಟೋಗ್ರಾಫರ್ ಒಬ್ಬ ಕಷ್ಟ ಸಮಯದಲ್ಲಿ ಚೈನೀಸ್ ಲೋನ್ ಆಪ್ ನಿಂದ ೧೫೦೦೦ ರುಪಾಯಿ, ೧೦ ದಿನದ ಸಾಲ ಪಡೆಯುತ್ತಾನೆ, ೮ನೇ ದಿನಕ್ಕೆ ಅವನಿಗೆ ಪೂರ್ತಿ ಹಣ ಪಾವತಿಸಲು ಕರೆಗಳು ಬರಲು ಶುರುವಾಗುತ್ತದೆ. ಕಾಟ ತಡೆಯಲಾಗದೆ ಅವನು ೯ನೇ ದಿನವೇ ಪೂರ್ತಿ ಹಣ ಸಂದಾಯ ಮಾಡುತ್ತಾನೆ, ಆದರೆ ಕರೆಗಳು ನಿಲ್ಲುವುದಿಲ್ಲ ಮತ್ತು ಅವರು ಅದರಲ್ಲಿ ಇನ್ನು ಹೆಚ್ಚು ಹಣವನ್ನು ಪಾವತಿಸು ಇಲ್ಲದಿದ್ದರೆ ಅವನ ಬಂಧು ಮಿತ್ರರಿಗೆ ಇವನ ನಕಲಿ ಅಶ್ಲೀಲ ಚಿತ್ರಗಳನ್ನು ಕಳಿಸುತ್ತೇನೆಂದು ಬೆದರಿಸುತ್ತಾರೆ. ಅವನು ಸೈಬರ್ ಸಹಾಯ ವಾಣಿ ೧೯೩೦ ಗೆ ಕರೆ ಮಾಡಿ ದೂರು ದಾಖಲಿಸುತ್ತಾನೆ ಮತ್ತು ಸೂಚನೆಯಂತೆ ಕರೆಗಳನ್ನು ನಿರಾಕರಿಸುತ್ತಾನೆ ಮತ್ತು ಖದೀಮರ ಯಾವುದೇ ಬೆದರಿಕೆ ಸಂದೇಶಗಳಿಗೆ ಸಂಯಮದಿಂದ ನಿರಾಕರಿಸುತ್ತಾನೆ, ಸ್ವಲ್ಪ ದಿನಕ್ಕೆ ಆ ಬೆದರಿಕೆ ಕರೆಗಳು ತಾವಾಗೇ ನಿಲ್ಲುತ್ತವೆ. ನೀವು ಈ ಸೈಬರ್ ಕ್ರೈಂ ಬಗ್ಗೆ ವಿವರಾಗಿ ತಿಳಿಯಲು ನನ್ನ ಹಿಂದಿನ ಅಂಕಣವನ್ನು ಓದಿ.          

ಇಲ್ಲಿ ಸಂತ್ರಸ್ಥಲ್ಲರೂ ಮಾಡಿದ ತಪ್ಪು ಮತ್ತು ಸರಿ ಕೆಲಸಗಳೇನೆಂದರೆ:

೧. ಯಾವಾಗಲೂ ಎಲ್ಲಾ ಡಿಜಿಟಲ್ ವಹಿವಾಟುಗಳಿಗೆ, ‘ತಾಳ್ಮೆ, ಶೂನ್ಯ ವಿಶ್ವಾಸ ಮತ್ತು ದೃಢೀಕರಣ’ ತತ್ವವನ್ನು ಅನುಸರಿಸದಿರುವುದು.

೨. ಅಪರಿಚಿತರು ಹೇಳುವ ಸಾಫ್ಟ್ವೇರ್ ಅನ್ನು ಸ್ಥಾಪಿಸಿದ್ದು, ಹೈಪರ್ಲಿಂಕ್ ಅನ್ನು ಕ್ಲಿಕ್ ಮಾಡಿದ್ದು.

೩. ಅಪರಿಚಿತರಿಗೆ OTP ಗಳನ್ನು ನೀಡುವ ಮೊದಲು, ಆ OTP ಯಾವುದಕ್ಕಾಗಿ ಎಂಬುದನ್ನು ಓದಿ, ಖಚಿತಪಡಿಸಿಕೊಳ್ಳದಿರುವುದು.

೧. ಕೂಡಲೇ ಅವರು 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದು.

೨. ಸಂಬಂಧಿತ ಬ್ಯಾಂಕಿಗೆ ಕರೆ ಮಾಡಿ ದೂರು ದಾಖಲಿಸಿದ್ದು ಮತ್ತು ಅಕೌಂಟ್ ಬ್ಲಾಕ್ ಮಾಡಿಸಿದ್ದು.

೩. ಹೆದರದೇ ಸೆಕ್ಸ್‌ಟಾರ್ಶನ್ ಅಥವಾ ಬೆದರಿಕೆಗಳ ಬಗ್ಗೆ ಪೊಲೀಸ್ ಮತ್ತು ವಕೀಲರೊಂದಿಗೆ ಚರ್ಚಿಸಿ ಅವರ ಸೂಚನೆಯನ್ನು ಪಾಲಿಸಿದ್ದು.

ಸಂತ್ರಸ್ಥ
ಸೈಬರ್ ಅಪರಾಧಗಳ ಸಂತ್ರಸ್ಥರು ಹೇಗೆ ಸುಖಾಂತ್ಯವನ್ನು ಪಡೆಯಬಹುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ