Data

ಮಾಹಿತಿಯ ಮಹತ್ವ, ಗೌಪ್ಯತೆ, ಸೋರಿಕೆ ಮತ್ತು ದಂಡ

ಈ ಅಂಕಣದಲ್ಲಿ ನಾನು ಇಪ್ಪತ್ತೊಂದನೇ ಶತಮಾನದಲ್ಲಿ ಮಾಹಿತಿಯ ಮಹತ್ವ, ಅದರ ಗೌಪ್ಯದ ಪ್ರಾಮುಖ್ಯತೆ, 2024 ರಲ್ಲಿ ಭಾರತದಲ್ಲಿ ನಡೆದ ಮೂರು ಪ್ರಮುಖ ಮಾಹಿತಿ ಸೋರಿಕೆಗಳು ಮತ್ತು ಮಾಹಿತಿ ಸೋರಿಕೆಗಾಗಿ ವಿವಿಧ ದೇಶಗಳು ವಿಧಿಸಿದ ಮೂರು ದೊಡ್ಡ ಮೊತ್ತದ ದಂಡಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.

ಮಾಹಿತಿ ಇಪ್ಪತ್ತೊಂದನೇ ಶತಮಾನದ ತೈಲ, ಅಂದರೆ ಇಪ್ಪತ್ತನೇ ಶತಮಾನದಲ್ಲಿ ತೈಲ ಹೇಗೆ ದೇಶಗಳ ಅಭಿವೃದ್ಧಿ ಮತ್ತು ಆರ್ಥಿಕತೆಗೆ ಕಾರಣವಾಗಿತ್ತೋ ಹಾಗೆ ಮಾಹಿತಿ ಇಪ್ಪತ್ತೊಂದನೇ ಶತಮಾನದಲ್ಲಿ ದೇಶಗಳ ಅಭಿವೃದ್ಧಿ ಮತ್ತು ಆರ್ಥಿಕತೆಗೆ ಕಾರಣವಾಗಲಿದೆ. ಹೇಗೆ ಇಪ್ಪತ್ತನೇ ಶತಮಾನ ಯಂತ್ರ ಮತ್ತು ವಾಹನಗಳ ಯುಗವಾಗಿದ್ದು ಮತ್ತು ಅದಕ್ಕೆ ಆಹಾರ ತೈಲವಾಗಿತ್ತೋ, ಹಾಗೆ ಇಪ್ಪತ್ತೊಂದನೇ ಶತಮಾನ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(AI) ಯುಗವಾಗಲಿದ್ದು ಮತ್ತು ಅದರ ಮುಖ್ಯ ಆಹಾರ “ಮಾಹಿತಿ”ಯಾಗಿರುತ್ತದೆ,  ಹಾಗಾಗಿ ಮಾಹಿತಿಯ ಪ್ರಾಮುಖ್ಯತೆ ಜಾಸ್ತಿಯಾಗಲಿದೆ. ನಮ್ಮ ದೇಶದಲ್ಲಿರುವ ಜನಸಂಖ್ಯ, ಭಾಷ , ಆಹಾರ, ಜಾತಿ ವೈವಿದ್ಯತೆ ಮತ್ತು ಜನಸಂಖ್ಯೆ ಕಾರಣಕ್ಕಾಗಿ ವಿಶ್ವದ ಎಲ್ಲಾ AI ಸಂಸ್ಥೆಗಳಿಗೆ ಭಾರತದ ಮಾಹಿತಿ ಸಂಗ್ರಹ ಒಂದು ಅಮೂಲ್ಯ ಖಜಾನೆಯಾಗಿದೆ. ಹಾಗೆಯೇ ಸೈಬರ್ ಅಪರಾದಿಗಳಿಗೂ ಕೂಡ ಮಾಹಿತಿ ತಮ್ಮ ಸೈಬರ್ ಅಪರಾಧಗಳಿಗೆ ತುಂಬ ಅಮೂಲ್ಯವಾಗಿರುತ್ತದೆ.

IBM ಸಂಸ್ಥೆಯ ಡೇಟಾ ಬ್ರೀಚ್(ಮಾಹಿತಿ ಸೋರಿಕೆ) ವಾರ್ಷಿಕ ವರದಿಯ ಪ್ರಕಾರ, ಭಾರತದಲ್ಲಿ ಸಂಸ್ಥೆಗಳಿಗೆ ಮಾಹಿತಿ ಉಲ್ಲಂಘನೆಯ ಸರಾಸರಿ ವೆಚ್ಚವು 2024 ರಲ್ಲಿ ₹195 ಲಕ್ಷ ರೂಪಾಯಿಯಾಗಿದ್ದು ಮತ್ತದು ಇದುವರೆಗಿನ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಅದು 2020 ರಿಂದ 39% ಹೆಚ್ಚಳ ಮತ್ತು ಹಿಂದಿನ ವರ್ಷದಿಂದ 9% ಹೆಚ್ಚು ವೇಗದಲ್ಲಿ ಬೆಳೆಯುತ್ತಿದೆ. ಸೈಬರ್ ಸೆಕ್ಯುರಿಟಿ ವೆಂಚರ್ಸ್ ಸಂಸ್ಥೆಯ ಒಂದು ವರದಿಯ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಸೈಬರ್ ಅಪರಾಧದಲ್ಲಿ 15% ವಾರ್ಷಿಕ ಬೆಳವಣಿಗೆಯ ನಿರೀಕ್ಷೆಯಿದೆ, ಮತ್ತು ಇದು 2025 ರ ವೇಳೆಗೆ 10.5 ಟ್ರಿಲಿಯನ್ ಡಾಲರ್ ತಲುಪಬಹುದು. ನೀತಿ ಆಯೋಗದ ವರದಿಯ ಪ್ರಕಾರ ಮಾಹಿತಿ ಸೋರಿಕೆ ಸಂಬಂದಿತ ಸೈಬರ್ ಅಪರಾಧಗಳು ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ 18.33% ವೇಗದಲ್ಲಿ ಬೆಳೆಯಲಿದೆ.

2024 ರಲ್ಲಿ ಭಾರತದಲ್ಲಿ ನಡೆದ ಮೂರು ಅತಿದೊಡ್ಡ ಮಾಹಿತಿ ಸೋರಿಕೆಗಳು :-

  • 2024 ರ ಆರಂಭದಲ್ಲಿ ಭಾರತದ ಪ್ರಮುಖ ಕ್ರಿಪ್ಟೋ ವಿನಿಮಯ ಕೇಂದ್ರವಾದ WazirX ಮಾಹಿತಿ ಉಲ್ಲಂಘನೆಯನ್ನು ಅನುಭವಿಸಿತು, ಇದರ ಪರಿಣಾಮವಾಗಿ 2000 ಕೋಟಿ  ರೂಪಾಯಿಗಳಷ್ಟು ಹೂಡಿಕೆದಾರರ  ಹಣ ಕಳ್ಳತನವಾಗಿದೆ.
  • ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಮೇ 2024 ರಲ್ಲಿ ಲಕ್ಷಾಂತರ ಭಾರತೀಯ ಬಳಕೆದಾರರ ಸೂಕ್ಷ್ಮ ಮಾಹಿತಿ ಸೋರಿಕೆಯಂತಹ  ಪ್ರಮುಖ ಮಾಹಿತಿ ಉಲ್ಲಂಘನೆಯನ್ನು ಅನುಭವಿಸಿತ್ತು.
  • ಭಾರತೀಯ ಗ್ರಾಹಕ ಧರಿಸಬಹುದಾದ ಬ್ರ್ಯಾಂಡ್ ಬೋಟ್ ಪ್ರಮುಖ ಮಾಹಿತಿ ಉಲ್ಲಂಘನೆಯನ್ನು ಅನುಭವಿಸಿತ್ತು, ಅದರಿಂದ 75 ಲಕ್ಷ ಬಳಕೆದಾರರ ವೈಯಕ್ತಿಕ ಮಾಹಿತಿ ಬಹಿರಂಗಗೊಂಡಿದೆ.

2024 ರಲ್ಲಿ ವಿಶ್ವದಾದ್ಯಂತ ನಡೆದ ಮಾಹಿತಿ ಸೋರಿಕೆಗಾಗಿ ವಿಧಿಸಿದ ದಂಡಗಳು :-

2024 ರಲ್ಲಿ ಬಳಕೆದಾರರ ಮಾಹಿತಿಯನ್ನು ಸಂರಕ್ಷಿಸಲು ವಿಫಲವಾದ ಕಂಪನಿಗಳು ತಮಗೆ ವಿಧಿಸಿದ ದಂಡದ ಮೊತ್ತದಲ್ಲಿ ಹೆಚ್ಚಳವನ್ನು ಕಂಡವು. US ಮತ್ತು EU ನಾದ್ಯಂತ ಸರ್ಕಾರಗಳು ಗೌಪ್ಯತೆ ಉಲ್ಲಂಘನೆಗಳನ್ನು ದಂಡದ ಮೂಲಕ ಶಿಕ್ಷಿಸುತ್ತವೆ. ಕಳೆದ ವರ್ಷ ವಿಧಿಸಲಾದ ಮೂರು ದೊಡ್ಡ ಮೊತ್ತದ ದಂಡಗಳು ಇಂತಿವೆ :

  • ಫೇಸ್ಬುಕ್ ಮತ್ತು ವಾಟ್ಸಪ್ಪ್ ಮಾಲೀಕ ಸಂಸ್ಥೆ ಮೆಟಾ ಮೇಲೆ ಲಕ್ಷಾಂತರ ನಿವಾಸಿಗಳ ಬಯೋಮೆಟ್ರಿಕ್ ಮಾಹಿತಿಯನ್ನು ಕಾನೂನುಬಾಹಿರವಾಗಿ ವಶಪಡಿಸಿಕೊಂಡಿದ್ದಕ್ಕಾಗಿ, ಅಮೆರಿಕಾದ ಟೆಕ್ಸಾಸ್ ರಾಜ್ಯ $1.4 ಶತಕೋಟಿ ದಂಡವನ್ನು ವಿಧಿಸಿತ್ತು.
  • ಬಳಕೆದಾರರ ಒಪ್ಪಿಗೆಯಿಲ್ಲದೆ ಮೂರನೇ ವ್ಯಕ್ತಿಯ ಮಾಹಿತಿಯನ್ನು ಬಳಸಿದ್ದಕ್ಕಾಗಿ ಐರಿಶ್ ಡೇಟಾ ಪ್ರೊಟೆಕ್ಷನ್ ಕಮಿಷನ್ ಲಿಂಕ್ಡ್‌ಇನ್‌ ಸಂಸ್ಥೆಗೆ 336 ಮಿಲಿಯನ್ ಡಾಲರ್ ದಂಡ ವಿಧಿಸಿತು.
  • ಸಾಕಷ್ಟು ಸುರಕ್ಷತೆಗಳಿಲ್ಲದೆ US ಸರ್ವರ್‌ಗಳಿಗೆ ವರ್ಗಾಯಿಸಲಾದ ವೈಯಕ್ತಿಕ ಗುರುತಿಸುವಿಕೆ ಮತ್ತು ಹಣಕಾಸಿನ ವಿವರಗಳನ್ನು ಒಳಗೊಂಡಂತೆ ಚಾಲಕರ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ವಿಫಲವಾದ ಕಾರಣಕ್ಕಾಗಿ Uber ಗೆ ನೆದರ್‌ಲ್ಯಾಂಡ್‌ನಲ್ಲಿ 324 ಮಿಲಿಯನ್ ಡಾಲರ್‌ಗಳ ದಂಡ ವಿಧಿಸಲಾಯಿತು.

ಭಾರತದಲ್ಲಿ, ಒಮ್ಮೆ ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆಕ್ಟ್, 2023 (DPDP) ಕಾಯಿದೆ ಜಾರಿಗೆ ಬಂದ ನಂತರ, ಅಂತಹ ಪ್ರತಿಯೊಂದು ವೈಯಕ್ತಿಕ ಮಾಹಿತಿ ಉಲ್ಲಂಘನೆಗೆ 200 ಕೋಟಿ ರೂಪಾಯಿಗಳವರೆಗೆ ಶಿಕ್ಷೆ (ದಂಡ) ವಿಧಿಸಬಹುದಾಗಿದೆ. ಮುಂದಿನ ವಾರದ ಲೇಖನದಲ್ಲಿ ಈ ಕಾಯಿದೆಯನ್ನು ವಿವರವಾಗಿ ಚರ್ಚಿಸಲಿದ್ದೇನೆ.

ಮಾಹಿತಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ