ಹೊಸ HSRP ನಂಬರ್ ಪ್ಲೇಟ್ ಸೈಬರ್ ವಂಚನೆಗಳ ಬಗ್ಗೆ ಎಚ್ಚರದಿಂದಿರಿ
63 ವರ್ಷ ವಯಸ್ಸಿನ ರವಿ ಅವರು 2019 ರ ಮೊದಲು ಹೋಂಡಾ ಕಾರು ಮತ್ತು ಹೋಂಡಾ ಆಕ್ಟಿವ ದ್ವಿಚಕ್ರ ವಾಹನವನ್ನು ಖರೀದಿಸಿದ್ದರು. ಅವರ ಫೋನ್ಗೆ ಸಂದೇಶ ಬರುತ್ತದೆ – “ದಂಡವನ್ನು ತಪ್ಪಿಸಲು ಫೆಬ್ರವರಿ 17 ರ ಮೊದಲು ನಿಮ್ಮ ವಾಹನಗಳ ನಂಬರ್ ಪ್ಲೇಟ್ ಅನ್ನು ಹೊಸ HSRP ನಂಬರ್ ಪ್ಲೇಟ್ಗೆ ಬದಲಾಯಿಸಿ. ಹೊಸ HSRP ನಂಬರ್ ಪ್ಲೇಟ್ ಗಾಗಿ ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ”. ರವಿ ಆ ಲಿಂಕ್ ಅನ್ನು ಕ್ಲಿಕ್ ಮಾಡಿದರು, ಅಲ್ಲಿ ಅವರು ತಮ್ಮ ಎರಡೂ ವಾಹನಗಳಿಗೆ ಸಂಬಂಧಿಸಿದ ವಿವರಗಳನ್ನು ನಮೂದಿಸಿ, ಹೊಸ ನಂಬರ್ ಪ್ಲೇಟ್ ಗಾಗಿ 1400 ರೂಪಾಯಿಗಳನ್ನು ಪಾವತಿಸಿದರು ಮತ್ತು ಅವರು ತ್ವರಿತ ವಿತರಣೆಗಾಗಿ ಇನ್ನೂ 1000 ರೂಪಾಯಿಗಳನ್ನು ಪಾವತಿಸಿದರು. ನಂತರ ಅವರಿಗೆ ಗೊತ್ತಾಗುತ್ತದೆ, ತಾವು ನಮೂದಿಸಿದ ವೆಬ್ಸೈಟ್ ನಕಲಿ ಎಂದು ಮತ್ತು ತಾವು ಪಾವತಿಸಿದ್ದ ಹಣ ಕಳೆದುಕೊಂಡಿದ್ದೇನೆಂದು.
ಸೈಬರ್ ಕ್ರಿಮಿನಲ್ ಗಳು ಸರ್ಕಾರ ನಿಗದಿಪಡಿಸಿದ ಗಡುವಿನೊಳಗೆ ತಮ್ಮ ವಾಹನದ ನಂಬರ್ ಪ್ಲೇಟ್ ಅನ್ನು HSRP ನಂಬರ್ ಪ್ಲೇಟ್ಗೆ ಬದಲಾಯಿಸಲು ಜನರು ತೋರಿಸುತ್ತಿರುವ ಧಾವಂತವನ್ನು ಮೋಸ ಮಾಡುವ ಅವಕಾಶವನ್ನಾಗಿ ಬಳಸುತ್ತಿದ್ದಾರೆ. ಸೈಬರ್ ಅಪರಾಧಿಗಳು ನೋಂದಣಿಗೆ ಅನುಮತಿಸಲಾದ ಅಸಲಿ ವೆಬ್ಸೈಟ್ ಗಳನ್ನು ಹೋಲುವ ಮೋಸದ ನಕಲಿ ವೆಬ್ಸೈಟ್ ಗಳ ಲಿಂಕನ್ನು ಜನರಿಗೆ ಕಳುಹಿಸುತ್ತಾರೆ ಅಥವಾ ಸೋಶಿಯಲ್ ಮೀಡಿಯಾನಲ್ಲಿ ಜಾಹಿರಾತನ್ನು ಹಾಕುತ್ತಾರೆ, ನಂಬಿ ಒಳಬಂದ ಜನರಿಂದ ಹಣ ಮತ್ತು ಅವರ ಸೂಕ್ಷ್ಮ ಖಾಸಗಿ ಮಾಹಿತಿಯನ್ನು ಪಡೆದು ಮೋಸ ಮಾಡುತ್ತಾರೆ. ಅನುಮತಿಸಲಾದ ವೆಬ್ಸೈಟ್ ಗಳು ಹೆಚ್ಚಿನ ಬೇಡಿಕೆಯಿಂದಾಗಿ ತುಂಬಾ ನಿಧಾನವಾಗಿರುವುದರಿಂದ ಅಥವಾ ಟೈಂಔಟ್ ಆಗುತ್ತಿರುವುದರಿಂದ, ದಂಡವನ್ನು ತಪ್ಪಿಸಲು ಗಡುವಿನ ಮೊದಲು ಹೊಸ HSRP ನಂಬರ್ ಪ್ಲೇಟ್ ಪಡೆಯಲು ನೋಂದಾಯಿಸಿಕೊಳ್ಳಬಹುದಾದ ಪರ್ಯಾಯ ವೆಬ್ಸೈಟ್ ಗಳ ಹುಡುಕಾಟದಲ್ಲಿ ಜನರು ಬಲಿಯಾಗುತ್ತಿದ್ದಾರೆ.
ಕರ್ನಾಟಕ ಸರ್ಕಾರದ ಅಧಿಸೂಚನೆಯ ಪ್ರಕಾರ, ಎಲ್ಲಾ ವಾಹನ ಮಾಲೀಕರು ತಮ್ಮ HSRP ನಂಬರ್ ಪ್ಲೇಟ್ ಅನ್ನು https://transport.karnataka.gov.in ಅಥವಾ www.siam.in ಮೂಲಕ ಮಾತ್ರ ಬುಕ್ ಮಾಡಲು ಸೂಚಿಸಲಾಗಿದೆ. ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸುದ್ದಿ ವಾಹಿನಿಯೊಂದಕ್ಕೆ ಇತ್ತೀಚೆಗೆ ನೀಡಿದ ಹೇಳಿಕೆಯಂತೆ, ಫೆಬ್ರವರಿ 17 ರ ಗಡುವನ್ನು ವಿಸ್ತರಿಸುವ ಸಾಧ್ಯತೆಯಿದೆ. HSRP ಅಥವಾ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಎಂಬುದು ಟ್ಯಾಂಪರ್ ಪ್ರೂಫ್ ಮತ್ತು ಮರುಬಳಕೆ ಮಾಡಲಾಗದ ಲಾಕ್ ಗಳ ಹೊಸ ರೂಪದ ನಂಬರ್ ಪ್ಲೇಟ್ ಆಗಿದ್ದು, ಅದು ಹೆಚ್ಚು ಸುರಕ್ಷತೆ, ಪತ್ತೆಹಚ್ಚಲು ಸಹಾಯ ಮತ್ತು ಏಕರೂಪತೆಯನ್ನು ತರುತ್ತದೆ.
HSRP ವಂಚನೆಗಳಿಂದ ನಿಮನ್ನು ನೀವು ರಕ್ಷಿಸಿಕ್ಕೊಳಲು :-
- ಅಪರಿಚಿತ ಸಂಖ್ಯೆಗಳಿಂದ ಬರುವ ಎಲ್ಲಾ ಕರೆ/ಸಂದೇಶಗಳು/ಆಫರ್ ಮತ್ತು ಡಿಜಿಟಲ್ ವಹಿವಾಟುಗಳಲ್ಲಿ ಯಾವಾಗಲೂ ‘ಶೂನ್ಯ ವಿಶ್ವಾಸ, ತಾಳ್ಮೆ ಮತ್ತು ದೃಢೀಕರಣ’ ತತ್ವವನ್ನು ಅನುಸರಿಸಿ.
- ಅಪರಿಚಿತರಿಂದ ಬರುವ ಹೈಪರ್ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ ಅಥವಾ ಸಂದೇಶ/ಇಮೇಲ್ನಲ್ಲಿ ಒದಗಿಸಲಾದ ಯಾವುದೇ ಅಪ್ಲಿಕೇಶನ್ ಅನ್ನು ಸ್ಥಾಪಿಸಬೇಡಿ.
- ಆಧಾರ್ ಅಥವಾ ಪ್ಯಾನ್ ವಿವರಗಳು ಅಥವಾ ನಿಮ್ಮ ಬ್ಯಾಂಕ್ ಖಾತೆ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳಂತಹ ವೈಯಕ್ತಿಕ ಸೂಕ್ಷ್ಮ ಮಾಹಿತಿಯನ್ನು ಎಂದಿಗೂ ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ.
- ಹೆಚ್ಚುವರಿ ಹಣಕ್ಕಾಗಿ HSRP ನಂಬರ್ ಪ್ಲೇಟ್ ಗಳನ್ನು ವೇಗವಾಗಿ ತಲುಪಿಸುವುದಾಗಿ ಅವರು ಹೇಳಿಕೊಂಡರೆ, ಅದು ಹಗರಣವಾಗಿರಬಹುದು.
- ವೆಬ್ ಸೈಟ್ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಿ. ಅಂದರೆ ವೆಬ್ಸೈಟ್ ನ url ‘https’ ನೊಂದಿಗೆ ಪ್ರಾರಂಭವಾಗಬೇಕು, ಇಲ್ಲದಿದ್ದರೆ ಅದು ಹಗರಣವಾಗಿರಬಹುದು.
- ಕರ್ನಾಟಕ ಸರ್ಕಾರವು ಸೂಚಿಸಿದ ವೆಬ್ಸೈಟ್ ಗಳಿಂದ ಮಾತ್ರ HSRP ನಂಬರ್ ಪ್ಲೇಟ್ ಖರೀದಿಸಿ.
ನೀವು ಅಂತಹ ವಂಚನೆಗೆ ಬಲಿಯಾಗಿದ್ದರೆ :-
ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ವೆಬ್ಸೈಟ್ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ನೀವು ಆಧಾರ್ ಕಾರ್ಡ್ ಮಾಹಿತಿ ಅಥವಾ ನಕಲು ಪ್ರತಿಯನ್ನು ಹಂಚಿಕೊಂಡಿದ್ದರೆ, ನಿಮ್ಮ ಆಧಾರ್ ಕಾರ್ಡ್ ಅನ್ನು ಆಧಾರ್ ವೆಬ್ಸೈಟ್ ಅಥವಾ mAadhaar ಅಪ್ಲಿಕೇಶನ್ನಲ್ಲಿ ನಿರ್ಬಂಧಿಸಿ. ನಿಮ್ಮ ಸಾಧನವು ಮಾಲ್ವೇರ್ ಸೋಂಕಿಗೆ ಒಳಗಾಗಿದೆ ಎಂದು ನೀವು ಭಾವಿಸಿದರೆ, ಅದನ್ನು ಬ್ಯಾಕಪ್ ತೆಗೆದುಕೊಂಡ ನಂತರ ಫಾರ್ಮ್ಯಾಟ್ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.
ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಪರಿಹಾರಗಳು :-
ನಿಮ್ಮ ಹತ್ತಿರದ ಸೈಬರ್ ಅಥವಾ ಸಾಮಾನ್ಯ ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ನೀವು ಕ್ರಿಮಿನಲ್ ಪ್ರಕರಣವನ್ನು ಈ ಕೆಳಗಿನ ಕಾನೂನು ಸೆಕ್ಷನ್ ಅಥವಾ ನಿಮ್ಮ ಪ್ರಕರಣದ ಆಧಾರದ ಮೇಲೆ ಪೊಲೀಸರು ಸೂಚಿಸಿದ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಿಸಬಹುದು:
- ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 378(ಕಳ್ಳತನ), 419 (ಸೋಗು ಹಾಕುವ ಮೂಲಕ ವಂಚನೆಗೆ ಶಿಕ್ಷೆ) ಮತ್ತು 420 (ವಂಚನೆ), ಸೆಕ್ಷನ್ 424(ಕಾನೂನುಬಾಹಿರವಾಗಿ ಡೇಟಾವನ್ನು ಹೊರತೆಗೆಯುವುದು), ಸೆಕ್ಷನ್ 441(ಕ್ರಿಮಿನಲ್ ಅತಿಕ್ರಮಣ), ಸೆಕ್ಷನ್ 467(ಫೋರ್ಜರಿ), ಸೆಕ್ಷನ್ 468( ಫೋರ್ಜರಿ/ನಕಲಿಗಾಗಿ ಶಿಕ್ಷೆ), ಮತ್ತು ಸೆಕ್ಷನ್ 471 (ಫೋರ್ಜರಿ/ನಕಲಿ ದಾಖಲೆಯ ಬಳಕೆ).
- ಮಾಹಿತಿ ತಂತ್ರಜ್ಞಾನ ಕಾಯಿದೆ (IT) ಕಾಯಿದೆ 2000/08 ಸೆಕ್ಷನ್ 43 (ಕಂಪ್ಯೂಟರ್, ಕಂಪ್ಯೂಟಿಂಗ್ ಸಾಧನ ಇತ್ಯಾದಿಗಳಿಗೆ ಹಾನಿಗಾಗಿ ದಂಡ ಮತ್ತು ಪರಿಹಾರ), ಸೆಕ್ಷನ್ 65 (ಕಂಪ್ಯೂಟರ್ ಅನ್ನು ಹಾಳುಮಾಡುವುದು), ಸೆಕ್ಷನ್ 66 (ಕಂಪ್ಯೂಟರ್ ಸಂಬಂಧಿತ ಅಪರಾಧಗಳಿಗೆ ಶಿಕ್ಷೆ – ಡೇಟಾ ಕಳ್ಳತನ ಮಾಡುವ ವ್ಯಕ್ತಿ, ಸಿಸ್ಟಮ್ಗೆ ವೈರಸ್ ಹರಡುವುದು, ಡೇಟಾ ನಾಶಪಡಿಸುವುದು, ಹ್ಯಾಕಿಂಗ್ , ಅಥವಾ ಅಧಿಕೃತ ವ್ಯಕ್ತಿಗೆ ಕಂಪ್ಯೂಟರ್ ಅಥವಾ ನೆಟ್ವರ್ಕ್ಗೆ ಪ್ರವೇಶವನ್ನು ನಿರಾಕರಿಸುವುದು), ಸೆಕ್ಷನ್ 66C (ಇದು ಗುರುತಿನ ಕಳ್ಳತನಕ್ಕೆ ದಂಡವನ್ನು ಸೂಚಿಸುತ್ತದೆ ಮತ್ತು ವ್ಯಕ್ತಿಯ ಗುರುತಿನ ಮಾಹಿತಿಯನ್ನು ಮೋಸದಿಂದ ಅಥವಾ ಅಪ್ರಾಮಾಣಿಕವಾಗಿ ಬಳಸುವುದು) ಮತ್ತು ಸೆಕ್ಷನ್ 66D (ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ಸೋಗು ಹಾಕುವ ಮೂಲಕ ಮಾಡಿದ ವಂಚನೆಗೆ ಶಿಕ್ಷೆ).