2026

2026: ಸೈಬರ್ ಅಪರಾಧ ಮತ್ತು ಸೈಬರ್ ಸುರಕ್ಷತೆಯ ಹೊಸ ಯುಗ

ಇಂದಿನ ಅಂಕಣದಲ್ಲಿ ನಾನು 2026ರಲ್ಲಿ ನಮ್ಮನ್ನು ಕಾಡಲಿರುವ ಹೊಸ ಸೈಬರ್ ಅಪರಾಧಗಳ ಬಗ್ಗೆ, ಕೇಂದ್ರ ಹಾಗು ರಾಜ್ಯ ಸರ್ಕಾರದ ಸೈಬರ್ ವಂಚನೆಗಳ ತಡೆಗಟ್ಟುವಿಕೆಗೆ ತೆಗೆದುಕ್ಕೊಳ್ಳಲಿರುವ ಕಠಿಣ ಕ್ರಮಗಳು ಮತ್ತು ಹೊಸ ಕಾನೂನುಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.

ಕಳೆದ ದಶಕದಲ್ಲಿ ನಾವು ಸೈಬರ್ ಅಪರಾಧ ಎಂದರೆ ಬರಿ ಲಿಂಕ್ ಕ್ಲಿಕ್ ಮಾಡುವುದು ಅಥವಾ OTP ಹಂಚಿಕೊಳ್ಳುವುದು ಎಂದು ಭಾವಿಸಿದ್ದೆವು. ಆದರೆ 2026ರ ಈ ಕಾಲಘಟ್ಟದಲ್ಲಿ ಸೈಬರ್ ಅಪರಾಧಿಗಳು ಕೃತಕ ಬುದ್ದಿಮತ್ತೆ(AI) ಬಳಸಿ ‘ಸ್ಮಾರ್ಟ್’ ಆಗಿದ್ದಾರೆ. ತಂತ್ರಜ್ಞಾನದ ನಾಗಾಲೋಟ ನಮ್ಮ ಬದುಕನ್ನು ಸುಲಭಗೊಳಿಸಿರುವುದು ಎಷ್ಟು ನಿಜವೋ, ಅಷ್ಟೇ ವೇಗವಾಗಿ ನಮ್ಮನ್ನು ‘ಡಿಜಿಟಲ್ ಸುಲಿಗೆ’ಯ ಸುಳಿಗೆ ತಳ್ಳುತ್ತಿರುವುದು ಕೂಡ ಅಷ್ಟೇ ಕಹಿ ಸತ್ಯ. ಕಳೆದ ಎರಡು ವಾರಗಳ ಲೇಖನಗಳಲ್ಲಿ, ನಾನು 2025ರಲ್ಲಿ ಭಾರತ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಪ್ರಮುಖ ಕ್ರಮಗಳು, ಜಾರಿಗೆ ತಂದ ಹೊಸ ಕಾನೂನುಗಳು, ಅದರಿಂದಾದ ಪರಿಣಾಮಗಳು ಹಾಗೂ ಸೈಬರ್ ಕ್ರೈಂ ಅಂಕಿಅಂಶಗಳ ಸಮಗ್ರ ಅವಲೋಕನ ಮಾಡಿದ್ದೆ. ಇಂದಿನ ಅಂಕಣದಲ್ಲಿ ನಾನು 2026ರಲ್ಲಿ ನಮ್ಮನ್ನು ಕಾಡಲಿರುವ ಹೊಸ ಸೈಬರ್ ಅಪರಾಧಗಳ ಬಗ್ಗೆ, ಕೇಂದ್ರ ಹಾಗು ರಾಜ್ಯ ಸರ್ಕಾರದ ಸೈಬರ್ ವಂಚನೆಗಳ ತಡೆಗಟ್ಟುವಿಕೆಗೆ ತೆಗೆದುಕ್ಕೊಳ್ಳಲಿರುವ ಕಠಿಣ ಕ್ರಮಗಳು ಮತ್ತು ಹೊಸ ಕಾನೂನುಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.

2026ರಲ್ಲಿ ನಮ್ಮನ್ನು ಕಾಡಲಿರುವ ಹೊಸ ಸೈಬರ್ ಅಪರಾಧಗಳು :-

  • ಡೀಪ್‌ಫೇಕ್ ಮತ್ತು ಧ್ವನಿ ಅನುಕರಣೆ (ವಾಯ್ಸ್ ಕ್ಲೋನಿಂಗ್) : ಕೇವಲ 30 ಸೆಕೆಂಡ್‌ಗಳ ನಿಮ್ಮ ಧ್ವನಿಯನ್ನು ಬಳಸಿ, ಎಐ ತಂತ್ರಜ್ಞಾನವು ನಿಮ್ಮಂತೆಯೇ ಮಾತನಾಡುವ ಆಡಿಯೋ ಸೃಷ್ಟಿಸುತ್ತದೆ. ನಿಮ್ಮ ಮನೆಯವರಿಗೆ ನಿಮ್ಮದೇ ಧ್ವನಿಯಲ್ಲಿ ಕರೆ ಮಾಡಿ “ನಾನು ಸಂಕಷ್ಟದಲ್ಲಿದ್ದೇನೆ, ಹಣ ಕಳುಹಿಸಿ” ಎಂದು ಕೇಳುವ ವಂಚನೆಗಳು 2026ರಲ್ಲಿ ಸಾಮಾನ್ಯವಾಗಲಿವೆ. ಹಾಗೆಯೇ ನಿಜವಾದ ಮತ್ತು ನಕಲಿ ನಡುವೆ ವ್ಯತ್ಯಾಸ ಗುರುತಿಸಲು ಅಸಾಧ್ಯವೆನಿಸುವಂಥ  AI ನಿಂದ ರಚಿತವಾದ ಡೀಪ್‌ಫೇಕ್ ಚಿತ್ರ ಅಥವಾ ವಿಡಿಯೋಗಳ ಸಂಖ್ಯೆ ಜಾಸ್ತಿಯಾಗಲಿದೆ ಮತ್ತು ಅದನ್ನು ಬಳಸಿ ನಡೆಸುವ ವಂಚನೆಗಳ ಸಂಖ್ಯೆಯು ಜಾಸ್ತಿಯಾಗಲಿದೆ.
  • ಸ್ಮಾರ್ಟ್ ಸಾಧನಗಳ ಹ್ಯಾಕಿಂಗ್ (IoT Attacks) : ನಮ್ಮ ಮನೆಯಲ್ಲಿರುವ ಸ್ಮಾರ್ಟ್ ಲೈಟ್, ಫ್ರಿಜ್, ಎಸಿ ಅಥವಾ ಕಾರ್‌ಗಳ ಸಾಫ್ಟ್‌ವೇರ್ ಹ್ಯಾಕ್ ಮಾಡಿ, ಆ ಮೂಲಕ ವೈಯಕ್ತಿಕ ಮಾಹಿತಿಯನ್ನು ಕದಿಯುವ ತಂತ್ರಗಳು ಹೆಚ್ಚಲಿದೆ.
  • AI ಬಳಸಿ ನಡೆಸುವ ಗುರುತಿನ ವಂಚನೆಗಳು : AI-ಟೂಲ್ಸ್ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ನಿಮ್ಮ ನಂಬಿಕೆಗಳಿಸಿ ನಿಮ್ಮ ಮಾಹಿತಿ ಕದ್ದು ನಿಮ್ಮ ಹೆಸರಿನಲ್ಲಿ ಬ್ಯಾಂಕ್-ಲೋನ್, ಕ್ರೆಡಿಟ್-ಕಾರ್ಡ್ ಗಳನ್ನು ಪಡೆಯುವ ಹೊಸ ಸೋಗು ಹಾಕುವ ಮತ್ತು ಗುರುತಿನ ವಂಚನೆಗಳು ಹೆಚ್ಚಲಿದೆ.

ಸೈಬರ್ ವಂಚನೆ ತಡೆಗಟ್ಟಲು ಕೇಂದ್ರ/ರಾಜ್ಯ ಸರ್ಕಾರದ ಕ್ರಮಗಳು ಮತ್ತು ಕಾನೂನುಗಳು :-

  • ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ(DPDP) ನಿಯಮಗಳು : 2026 ರಲ್ಲಿ ಭಾರತದ ಮಾಹಿತಿ ಸಂರಕ್ಷಣಾ ಕಾಯ್ದೆ ಜಾರಿಗೆ ಬರಲಿದೆ. ಇದು ದತ್ತಾಂಶ ಸೋರಿಕೆಯಾದರೆ ಕಂಪನಿಗಳಿಗೆ 250 ಕೋಟಿ ರೂಪಾಯಿಗಳವರೆಗೆ ಭಾರಿ ದಂಡ ವಿಧಿಸುವ ಅಧಿಕಾರವನ್ನು ‘ಡೇಟಾ ಪ್ರೊಟೆಕ್ಷನ್ ಬೋರ್ಡ್ ಆಫ್ ಇಂಡಿಯಾ’ಗೆ ನೀಡಲಾಗಿದೆ.
  • TRAI ಕ್ರಮಗಳು : ಇನ್ನು ಮುಂದೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಮಾಡುವ ಕರೆಗಳು ಕಡ್ಡಾಯವಾಗಿ +91-1600 ಇಂದ ಆರಂಭವಾಗಬೇಕು. ಇದು ಜನರಿಗೆ ಅಸಲಿ ಮತ್ತು ನಕಲಿ ಕರೆಗಳನ್ನು ಗುರುತಿಸಲು ಸುಲಭವಾಗಲಿದೆ. ಜನವರಿ ಒಂದರಿಂದ ನಿಮಗೆ ಬರುವ ಕರೆ ಯಾರಿಂದ ಬರುತಿದೆ ಎಂಬುದನ್ನು ತಿಳಿಸಲು ನಂಬರ್ ಜೊತೆ ಹೆಸರು ಬರುವ TRAI ಆಜ್ಞೆ ಜಾರಿಗೆ ಬರಲಿದೆ.
  • ಸೈಬರ್ ಭದ್ರತಾ ನೀತಿ : ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸೈಬರ್ ಸುರಕ್ಷತೆಗಾಗಿ ಸುಮಾರು 103.87 ಕೋಟಿ ರೂಪಾಯಿಗಳನ್ನು ಕರ್ನಾಟಕ ಸರ್ಕಾರ ಖರ್ಚು ಮಾಡಲಿದೆ. ರಾಜ್ಯದ 43 ಸೈಬರ್ ಕ್ರೈಂ ಪೊಲೀಸ್ ಠಾಣೆಗಳನ್ನು (CEN) ಆಧುನೀಕರಿಸುವ ಯೋಜನೆಯಿದೆ.
  • ಫ್ಯಾಕ್ಟ್ ಚೆಕ್ ಯುನಿಟ್ : ಕರ್ನಾಟಕ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ (ನಿಷೇಧ) ಮಸೂದೆ, 2025 ಪ್ರಕಾರ 2026 ರಲ್ಲಿ ಸುಳ್ಳು ಸುದ್ದಿ ಮತ್ತು ಡೀಪ್‌ಫೇಕ್ ವಿಡಿಯೋಗಳನ್ನು ಪತ್ತೆಹಚ್ಚಲು ಕರ್ನಾಟಕ ಸರ್ಕಾರವು ತನ್ನದೇ ಆದ ವಿಶೇಷ ಘಟಕವನ್ನು ಸಕ್ರಿಯಗೊಳಿಸಿದೆ. ಇದು ಚುನಾವಣಾ ಅಕ್ರಮಗಳು ಮತ್ತು ಸಾಮಾಜಿಕ ಅಶಾಂತಿಯನ್ನು ತಡೆಯಲು ಸಹಕಾರಿಯಾಗಿದೆ. ಇದರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಅಥವಾ ಡೀಪ್‌ಫೇಕ್ ಹಂಚಿಕೊಂಡರೆ 2 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ.
  • ಕೌಶಲ್ಯ ಅಭಿವೃದ್ಧಿ: 2026 ರಲ್ಲಿ ಸಿಸ್ಕೋ ನಂತಹ ಸಂಸ್ಥೆಗಳ ಜೊತೆಗೂಡಿ 40,000ಕ್ಕೂ ಹೆಚ್ಚು ಜನರಿಗೆ ಸೈಬರ್ ಭದ್ರತೆಯ ತರಬೇತಿ ನೀಡಲಾಗುತ್ತಿದೆ. ಶಾಲೆಗಳಲ್ಲಿ 10 ಲಕ್ಷ ಮಕ್ಕಳಿಗೆ ‘ಡಿಜಿಟಲ್ ಸುರಕ್ಷತೆ’ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

2026ರ ನನ್ನ ಮುನ್ನೋಟ :-

2026ರಲ್ಲಿ ಸೈಬರ್ ಅಪರಾಧಿಗಳು ಎಐ ತಂತ್ರಜ್ಞಾನವನ್ನು ಹೆಚ್ಚು ಬಳಸಲಿದ್ದು, ಅದನ್ನು ಎದುರಿಸಲು ಸರ್ಕಾರವು ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ತನಿಖಾ ಸಾಧನಗಳನ್ನು ದೊಡ್ಡ ಮಟ್ಟದಲ್ಲಿ ಅಳವಡಿಸಿಕೊಳ್ಳಲಿದೆ. ಕ್ರಿಪ್ಟೋಕರೆನ್ಸಿ ಮತ್ತು ವರ್ಚುಯಲ್ ಡಿಜಿಟಲ್ ಆಸ್ತಿಗಳ ಮೂಲಕ ನಡೆಯುವ ವಂಚನೆಗಳನ್ನು ತಡೆಯಲು ಹೆಚ್ಚಿನ ತಾಂತ್ರಿಕ ನೈಪುಣ್ಯತೆ ಮತ್ತು ಹೊಸ ಮಾರ್ಗಸೂಚಿಗಳು ಜಾರಿಗೆ ಬರಲಿವೆ. ಸಸ್ಪೆಕ್ಟ್ ರಿಜಿಸ್ಟ್ರಿ ಮತ್ತು ಬ್ಯಾಂಕಿಂಗ್ ವಲಯದ ನಡುವೆ ಹೆಚ್ಚಿನ ಸಮನ್ವಯ ಏರ್ಪಟ್ಟು, ಮ್ಯೂಲ್ ಅಕೌಂಟ್‌ಗಳ ಪತ್ತೆಹಚ್ಚುವಿಕೆ ಇನ್ನು ಕ್ಷಿಪ್ರವಾಗಲಿದೆ ಮತ್ತು ನಿಮ್ಮ ಹಣ ವಂಚಕರ ಪಾಲಿಗೆ ಸಿಗದಂತೆ ತಡೆಯುವ ವ್ಯವಸ್ಥೆ ಇನ್ನು ಬಲಗೊಳ್ಳಲಿದೆ. ಒಟ್ಟಾರೆಯಾಗಿ, 2026ರಲ್ಲಿ ತಂತ್ರಜ್ಞಾನವು ನಾಗರಿಕರ ಸುರಕ್ಷಾ ಕವಚವಾಗಿ ಮತ್ತಷ್ಟು ವಿಕಸನಗೊಳ್ಳಲಿದೆ.

2026

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ