Sanchar Saathi

ರಕ್ಷಣೆಗೋ ಅಥವಾ ಕಣ್ಗಾವಲಿಗೋ? ‘ಸಂಚಾರ್ ಸಾಥಿ’ ಕಡ್ಡಾಯದ ಸುತ್ತ ಎದ್ದ ವಿವಾದ ಮತ್ತು ಸರ್ಕಾರದ ಯೂ-ಟರ್ನ್

ಕಳೆದ ವಾರ ‘ಸಂಚಾರ್ ಸಾಥಿ’ ಆ್ಯಪ್ ಅಳವಡಿಕೆಯ ಸರ್ಕಾರದ ನಡೆಯಲ್ಲಿ ಆದದ್ದು ಏನು ಮತ್ತು ಹೇಗೆ ಅದನ್ನು ತಡೆಯಬಹುದಾಗಿತ್ತು ಎಂಬುದರ ನನ್ನ ಅನಿಸಿಕೆಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ.

ಕಳೆದ ವಾರ ದೇಶದ ರಾಜಧಾನಿಯಲ್ಲಿ ಚಳಿಗಾಳಿಯ ಅಬ್ಬರವಿತ್ತೋ ಇಲ್ಲವೋ, ಸಂಸತ್ತಿನಲ್ಲಿ ಮಾತ್ರ ಬಿಸಿಬಿಸಿ ವಾತಾವರಣ ಸೃಷ್ಟಿಯಾಗಿತ್ತು. ಅದಕ್ಕೆ ಮುಖ್ಯ ಕಾರಣ ಕೇಂದ್ರ ಸರ್ಕಾರವು ಸ್ಮಾರ್ಟ್‌ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್ ಅಳವಡಿಕೆಯನ್ನು ಕಡ್ಡಾಯಗೊಳಿಸಲು ಮುಂದಾಗಿದ್ದು. “ಇದು ಜನರ ರಕ್ಷಣೆಗಾಗಿ” ಎಂದು ಸರ್ಕಾರ ಹೇಳಿದರೆ, “ಇದು ಜನರ ಮೇಲೆ ಕಣ್ಗಾವಲು ಇಡುವ ತಂತ್ರ ” ಎಂದು ವಿರೋಧ ಪಕ್ಷಗಳು ಮುಗಿಬಿದ್ದವು. ಅಂತಿಮವಾಗಿ, ತೀವ್ರ ವಿರೋಧದ ಬಳಿಕ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಅಷ್ಟಕ್ಕೂ ಕಳೆದ ವಾರ ಆದದ್ದು ಏನು ಮತ್ತು ಹೇಗೆ ಅದನ್ನು ತಡೆಯಬಹುದಾಗಿತ್ತು ಎಂಬುದರ ನನ್ನ ಅನಿಸಿಕೆಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ.

ವಿವಾದದ ನಡುವೆಯೂ ಸಂಚಾರ್ ಸಾಥಿ ಆ್ಯಪ್‌ನ ಉಪಯುಕ್ತತೆಯನ್ನು ಅಲ್ಲಗಳೆಯುವಂತಿಲ್ಲ. ಇದು ಕೇಂದ್ರ ಸರ್ಕಾರದ ಒಂದು ಮಹತ್ವಾಕಾಂಕ್ಷಿ ಡಿಜಿಟಲ್ ಉಪಕ್ರಮವಾಗಿದ್ದು, ಮೂರು ಪ್ರಮುಖ ಸೇವೆಗಳನ್ನು ಒದಗಿಸುತ್ತದೆ:

  • ನಿಮ್ಮ ಮೊಬೈಲ್ ಕಳೆದುಹೋದರೆ, ಅದನ್ನು ಬ್ಲಾಕ್ ಮಾಡಲು ಮತ್ತು ಪತ್ತೆಹಚ್ಚಲು ಇದು ನೆರವಾಗುತ್ತದೆ.
  • ನಿಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ನಿಮಗೆ ತಿಳಿಯದಂತೆ ಸಿಮ್ ಕಾರ್ಡ್ ಪಡೆದಿದ್ದಾರೆಯೇ ಎಂದು ಪರೀಕ್ಷಿಸಲು ಇದು ಅನುವು ಮಾಡಿಕೊಡುತ್ತದೆ.
  • ಸಂಶಯಾಸ್ಪದ ಕರೆಗಳು ಅಥವಾ ಮೆಸೇಜ್‌ಗಳು ಬಂದರೆ ಅದನ್ನು ನೇರವಾಗಿ ಸರ್ಕಾರಕ್ಕೆ ವರದಿ ಮಾಡಲು ಇದರಲ್ಲಿ ಅವಕಾಶವಿದೆ.

ಸಂಚಾರ್ ಸಾಥಿ ಕಡ್ಡಾಯಗೊಳಿಸುವ ಪ್ರಯತ್ನದ ಹಿನ್ನಲೆ ಏನು?

ಭಾರತದಲ್ಲಿ ಸೈಬರ್ ಕ್ರೈಮ್‌ಗಳು ದಿನ ಹೊಸ ರೂಪ ತೆಗೆದುಕೊಳ್ಳುತ್ತಿವೆ. ನಿಮಗೆ ಗೊತ್ತಿಲ್ಲದಂತೆ ನಿಮ್ಮ ಆಧಾರ್ ಬಳಸಿ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಅಥವಾ/ಮತ್ತು ಬ್ಯಾಂಕ್ ಅಕೌಂಟ್ ತೆರೆದು ಅದನ್ನು ಬಳಸಿ ನಡೆಸಿದ ಸೈಬರ್ ಅಪರಾಧಗಳ ಸಂಖ್ಯೆ ದಿನದಿಂದ ದಿನ ಜಾಸ್ತಿಯಾಗುತ್ತಲೇ ಇದೆ. ನಾಗರಿಕರಿಗೆ ಸೈಬರ್ ಸುರಕ್ಷತೆಯನ್ನು ಸುಲಭವಾಗಿ ಒದಗಿಸಲು, ಮೋಸ ಮತ್ತು ಕಳ್ಳತನ ತಡೆಯಲು ಕಳೆದ ನವೆಂಬರ್ 28 ರಂದು ದೂರಸಂಪರ್ಕ ಇಲಾಖೆ “ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್ ಅನ್ನು ಮುಂಚಿತವಾಗಿಯೇ ಅಳವಡಿಸಿರಬೇಕು ಮತ್ತು ಹಳೆಯ ಫೋನ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಇದನ್ನು ತಲುಪಿಸಬೇಕು” ಎಂದು ಆದೇಶ ಹೊರಡಿಸಿತ್ತು. ಅಷ್ಟೇ ಅಲ್ಲ, ಈ ಆ್ಯಪ್ ಅನ್ನು ಡಿಲೀಟ್ ಮಾಡಲು ಸಾಧ್ಯವಾಗದಂತೆ ನೋಡಿಕೊಳ್ಳಬೇಕು ಎಂದೂ ಹೇಳಲಾಗಿತ್ತು ಎಂಬ ವರದಿಗಳು ಬಂದವು. ಕಳೆದ ವಾರ ಸಂಸತ್ತು ಸೇರಿದಾಗ, ಈ ವಿಷಯವೇ ವಿರೋದ ಪಕ್ಷಗಳಿಗೆ ಪ್ರಮುಖ ಅಸ್ತ್ರವಾಯಿತು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, “ಇದು ಸರ್ವಾಧಿಕಾರದ ನಡೆ. ಜನರ ಖಾಸಗಿತನದ ಹಕ್ಕನ್ನು ಕಸಿದುಕೊಳ್ಳುವ ಮತ್ತೊಂದು ಪೆಗಾಸಸ್ ತಂತ್ರವಿದು,” ಎಂದು ಕಿಡಿಕಾರಿದರು. ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ, “ಯಾವುದೇ ಆ್ಯಪ್ ಅನ್ನು ಬಲವಂತವಾಗಿ ಹೇರುವುದು ಅಸಂವಿಧಾನಿಕ,” ಎಂದು ಸಂಸತ್ತಿನಲ್ಲಿ ಗುಡುಗಿದರು.

ಸರ್ಕಾರದ ಸಮರ್ಥನೆ ಮತ್ತು ಯೂ-ಟರ್ನ್ :-

ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಂಸತ್ತಿನಲ್ಲಿ ಮತ್ತು ಹೊರಗೆ ಸರ್ಕಾರದ ನಡೆಯನ್ನು “ವಿರೋಧ ಪಕ್ಷಗಳು ಅನಗತ್ಯ ಭ್ರಮೆಗಳನ್ನು ಹುಟ್ಟುಹಾಕುತ್ತಿವೆ. ಈ ಆ್ಯಪ್ ಕೇವಲ ಸೈಬರ್ ಸುರಕ್ಷತೆಗಾಗಿಯೇ ಹೊರತು ಗೂಢಚರ್ಯೆಗಲ್ಲ” ಎಂದು ಬಲವಾಗಿ ಸಮರ್ಥಿಸಿಕೊಂಡರು.  ಅವರ ಪ್ರಕಾರ, ಈ ಆ್ಯಪ್ ಇನ್‌ಸ್ಟಾಲ್ ಆಗಿದ್ದರೂ, ಬಳಕೆದಾರರು ಅದರಲ್ಲಿ ನೋಂದಣಿ ಮಾಡಿಕೊಳ್ಳದಿದ್ದರೆ ಅದು ಕಾರ್ಯನಿರ್ವಹಿಸುವುದಿಲ್ಲ. “ನಮ್ಮ ಸರ್ಕಾರ ಜನರ ಸುರಕ್ಷತೆಗೆ ಬದ್ಧವಾಗಿದೆ. ಕಳೆದುಹೋದ ಫೋನ್ ಪತ್ತೆಹಚ್ಚಲು ಮತ್ತು ವಂಚನೆ ತಡೆಯಲು ಇದು ಸಹಕಾರಿ” ಎಂದು ಅವರು ವಾದಿಸಿದರು. ವಿರೋಧ ಪಕ್ಷಗಳ ತೀವ್ರ ಒತ್ತಡ ಮತ್ತು ಟೆಲಿಕಾಂ ಕಂಪನಿಗಳ ಆಕ್ಷೇಪದ ಹಿನ್ನೆಲೆಯಲ್ಲಿ, ಡಿಸೆಂಬರ್ 3 ರಂದು ಕಡ್ಡಾಯವಾಗಿ ಸಂಚಾರ್ ಸಾಥಿ ಪ್ರೀ-ಇನ್‌ಸ್ಟಾಲ್ ಮಾಡುವ ಆದೇಶವನ್ನು ಹಿಂಪಡೆಯಿತು.

ನನ್ನ ಅನಿಸಿಕೆ :-

ದೇಶದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ದಿನದಿಂದ ದಿನ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರಕಾರದ ಸೈಬರ್ ಸುರಕ್ಷತೆಯನ್ನು ಹೆಚ್ಚಿಸುವ ‘ಸಂಚಾರ್ ಸಾಥಿ’ ಆ್ಯಪ್ ಪ್ರಯತ್ನ ನಿಜಕ್ಕೂ ಶ್ಲಾಘನೀಯವೇ. ಆದರೆ ಇಲ್ಲಿ ಅವರ ನಡೆ ಎರಡು ಪ್ರಮುಖ ಕಾರಣಗಳಿಗೆ (ಜನರಿಗೆ ಸಂಚಾರ್ ಸಾಥಿ ಆಪ್ ಅವಶ್ಯಕತೆ ಮತ್ತು ಉಪಯೋಗದ ಬಗ್ಗೆ ಮೊದಲೇ ತಿಳಿಸದಿರುವುದು ಮತ್ತು ಅದು ಸುರಕ್ಷತೆಯ ಹೆಸರಿನಲ್ಲಿ ವ್ಯಕ್ತಿಗತ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನವಲ್ಲಾ ಎಂಬುದರ ಬಗ್ಗೆ ಕೋವಿಡ್ ಸಮಯದ ಆರೋಗ್ಯ-ಸೇತು ಆಪ್ ರೀತಿಯಲ್ಲಿ ಜನರ/ತಂತ್ರಜ್ಞರ  ವಿಶ್ವಾಸ ಗಳಿಸದಿರುವುದು) ಅವರಿಗೆ ಸೋಲುಂಟು ಮಾಡಿತು. ಅವರು ಅದನ್ನು ಕಡ್ಡಾಯಗೊಳಿಸುವ ಮುನ್ನ ಕೆಳಗೆ ತಿಳಿಸಿರುವ ಕ್ರಮಗಳನ್ನು ತೆಗೆದುಕ್ಕೊಂಡಿದ್ದರೆ ಇಷ್ಟು ದೊಡ್ಡ ವಿವಾದವಾಗುತ್ತಿರಲಿಲ್ಲಾ :

  • ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಸೈಬರ್ ಅಪರಾಧಗಳನ್ನು ತಡೆಗಟ್ಟುವಲ್ಲಿ ಮತ್ತು ಕಳೆದುಹೋದ ಮೊಬೈಲ್ ಅನ್ನು ಪತ್ತೆಹಚ್ಚುವಲ್ಲಿ ಆಪ್ ನ ಪಾತ್ರ, ಅವಶ್ಯಕತೆ ಮತ್ತು ಉಪಯೋಗದ ಬಗ್ಗೆ ಪ್ರಚಾರ ಮಾಡಬೇಕು.
  • ಅವರು ಆರೋಗ್ಯ-ಸೇತು ಆಪ್ ಮಾದರಿಯಲ್ಲಿ ಆ ಆಪ್ ನ ಸೊರ್ಸ್ ಕೋಡ್ ಅನ್ನು ಬಹಿರಂಗ(ಓಪನ್ ಸೊರ್ಸ್) ಮಾಡಬೇಕಿತ್ತು, ಇದರಿಂದ ಜನರ/ತಂತ್ರಜ್ಞರ  ವಿಶ್ವಾಸ ಗಳಿಸಬಹುದಿತ್ತು.
  • ಆ ಆಪ್ ನಲ್ಲಿ ಏನಾದರೂ ಬಗ್/ಲೀಕ್ ಇದ್ದರೆ ಅದನ್ನು ಬಗ್ ಬೌಂಟಿ ಮಾದರಿಯಲ್ಲಿ ಸೈಬರ್ ಖದೀಮರು ಈ ಆಪ್ ಅನ್ನು ಬಳಸಿ ಸಾಮಾನ್ಯ ಜನರ ಮೇಲೆ ಸೈಬರ್ ಅಪರಾಧವೆಸಗುವ ಮೊದಲೇ ಅದನ್ನು ದುರುಸ್ತಿಗೊಳಿಸುವುದು.
  • ಆ ಆಪ್ ನ ಸೆಕ್ಯೂರಿಟಿ ಆಡಿಟ್ ವರದಿಯನ್ನು ಬಹಿರಂಗಪಡಿಸುವುದು ಮತ್ತು ನಿಯಮಿತವಾಗಿ ಆಡಿಟ್ ಮಾಡುವುದು.
ಸಂಚಾರ್ ಸಾಥಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ