ಡಿಜಿಟಲ್ ಅರೆಸ್ಟ್ ಹಾವಳಿಗೆ ಬ್ರೇಕ್ : UPI ಮಾದರಿಯ ‘ಸಿಮ್ ಬೈಂಡಿಂಗ್’ ಸುರಕ್ಷತಾ ನಿಯಮ ಜಾರಿ
ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ 100 ಕೋಟಿಗೂ ಅಧಿಕವಾಗಿದ್ದು, ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸಿಗ್ನಲ್ ನಂತಹ ಆ್ಯಪ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ, ಈ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸೈಬರ್ ಅಪರಾಧಗಳೂ ಕೂಡ ಹೊಸ ರೂಪವನ್ನು ಪಡೆದುಕೊಂಡಿವೆ. ವಿಶೇಷವಾಗಿ ‘ಡಿಜಿಟಲ್ ಅರೆಸ್ಟ್’, ಆನ್‌ಲೈನ್ ವಂಚನೆಗಳು ಮತ್ತು ನಕಲಿ ಗುರುತಿನ ಮೂಲಕ ನಡೆಯುವ ಅಪರಾಧಗಳು ಹೆಚ್ಚಾಗಿವೆ. ಇದರ ಬಗ್ಗೆ ಭಾರತೀಯ ಸರ್ವೋಚ್ಚ ನ್ಯಾಯಾಲಯ, ವಿವಿಧ ರಾಜ್ಯದ ಉಚ್ಚ ನ್ಯಾಯಾಲಯಗಳಲ್ಲಿ, ಸಂಸತ್ತಿನಲ್ಲಿ ಮತ್ತು ವಿವಿಧ ರಾಜ್ಯಗಳ ಶಾಸಕಾಂಗ ಸಭೆಗಳಲ್ಲಿ ಅನೇಕ ಬಾರಿ ಅದನ್ನು ಹತ್ತಿಕ್ಕಲು ಕ್ರಮ ತೆಗೆದುಕ್ಕೊಳ್ಳುವ ಬಗ್ಗೆ ಚರ್ಚೆಗಳಾಗಿವೆ. ಇದರ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಹೊಸದಾಗಿ ಜಾರಿಗೆ ತಂದಿರುವ “ಟೆಲಿಕಮ್ಯುನಿಕೇಷನ್ಸ್ (ಟೆಲಿಕಾಂ ಸೈಬರ್ ಸೆಕ್ಯುರಿಟಿ) ರೂಲ್ಸ್, 2024” ಅಡಿಯಲ್ಲಿ, ಅನೇಕ ಕಠಿಣ ನಿಯಮಗಳನ್ನು ಇದೆ ನವೆಂಬರ್ 28 ರಂದು ಪ್ರಕಟಿಸಿದೆ. ಈ ಲೇಖನದಲ್ಲಿ, ಪ್ರಸ್ತುತ ವ್ಯವಸ್ಥೆಯ ಲೋಪದೋಷಗಳು, ‘ಸಿಮ್ ಬೈಂಡಿಂಗ್’ ಎಂದರೇನು? ಈ ಹೊಸ ನಿಯಮಗಳೇನು? ಮತ್ತು ಇದು ನಿಮ್ಮ ದಿನನಿತ್ಯದ ಮೊಬೈಲ್ ಬಳಕೆಯ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಅತ್ಯಂತ ಸರಳವಾಗಿ ವಿವರಿಸಲಾಗಿದೆ.
ವಂಚಕರು, ವಿಶೇಷವಾಗಿ ವಿದೇಶಗಳಲ್ಲಿ ಕುಳಿತಿರುವವರು, ಭಾರತೀಯ ಮೊಬೈಲ್ ಸಂಖ್ಯೆಗಳನ್ನು ಅಕ್ರಮವಾಗಿ ಪಡೆಯುತ್ತಾರೆ. ಆ ಸಂಖ್ಯೆಗಳಿಗೆ ಬರುವ ಒಟಿಪಿ ಬಳಸಿ ವಾಟ್ಸಾಪ್ ಖಾತೆ ತೆರೆಯುತ್ತಾರೆ. ನಂತರ ಆ ಸಿಮ್ ಕಾರ್ಡ್ ಅನ್ನು ಎಸೆದುಬಿಡುತ್ತಾರೆ ಅಥವಾ ಸ್ವಿಚ್ ಆಫ್ ಮಾಡುತ್ತಾರೆ. ಆದರೆ ವಾಟ್ಸಾಪ್ ಖಾತೆ ಮಾತ್ರ ಸಕ್ರಿಯವಾಗಿರುತ್ತದೆ. ಇದನ್ನು ಬಳಸಿ ಅವರು ಭಾರತೀಯರಿಗೆ ಕರೆ ಮಾಡಿ, ಬೆದರಿಸಿ ಹಣ ಸುಲಿಗೆ ಮಾಡುತ್ತಾರೆ. ಸಿಮ್ ಕಾರ್ಡ್ ಫೋನ್‌ನಲ್ಲಿ ಇಲ್ಲದ ಕಾರಣ, ಪೋಲೀಸರಿಗೆ ಅಥವಾ ತನಿಖಾ ಸಂಸ್ಥೆಗಳಿಗೆ ಲೊಕೇಶನ್ ಟ್ರ್ಯಾಕ್ ಮಾಡುವುದು ಅಥವಾ ಅಪರಾಧಿಯನ್ನು ಪತ್ತೆ ಹಚ್ಚುವುದು ಅಸಾಧ್ಯವಾಗುತ್ತದೆ. ಇನ್ನು ಡಿಜಿಟಲ್ ಅರೆಸ್ಟ್ ಸೈಬರ್ ಅಪರಾಧಗಳಲ್ಲಿ ವಂಚಕರು ವಾಟ್ಸಾಪ್ ಅಥವಾ ಸ್ಕೈಪ್ ಮೂಲಕ ವಿಡಿಯೋ ಕರೆ ಮಾಡುತ್ತಾರೆ. “ನಿಮ್ಮ ಹೆಸರಿನಲ್ಲಿ ಬಂದಿರುವ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇದೆ” ಅಥವಾ “ನಿಮ್ಮ ಆಧಾರ್ ಕಾರ್ಡ್ ಅಕ್ರಮ ಹಣ ವರ್ಗಾವಣೆಗೆ ಬಳಕೆಯಾಗಿದೆ” ಎಂದು ಸುಳ್ಳು ಹೇಳಿ ಬೆದರಿಸಿ ನಿಮ್ಮನ್ನು ಆನ್‌ಲೈನ್‌ನಲ್ಲೇ “ಬಂಧನ”ದಲ್ಲಿ ಇಡುತ್ತಾರೆ. ಜೈಲಿಗೆ ಹೋಗುವುದನ್ನು ತಪ್ಪಿಸಲು ಹಣ ಕೊಡುವಂತೆ ಒತ್ತಾಯಿಸಿ ಲಕ್ಷಾಂತರ ರೂಪಾಯಿ ದೋಚುತ್ತಾರೆ. .
ಸಿಮ್ ಬೈಂಡಿಂಗ್ ಎಂದರೇನು?
ನೀವು ಫೋನ್ ಪೇ, ಗೂಗಲ್ ಪೇ ಅಥವಾ ಭೀಮ್ ನಂತಹ ಯುಪಿಐ ಆ್ಯಪ್‌ಗಳನ್ನು ಬಳಸುತ್ತಿದ್ದೀರಾ? ಆ ಆ್ಯಪ್‌ಗಳು ಕೆಲಸ ಮಾಡಬೇಕಾದರೆ, ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಸಿಮ್ ಕಾರ್ಡ್ ಅದೇ ಮೊಬೈಲ್‌ನಲ್ಲಿ ಇರಲೇಬೇಕು. ಒಮ್ಮೆ ನೀವು ಸಿಮ್ ತೆಗೆದರೆ, ಯುಪಿಐ ಆ್ಯಪ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇದನ್ನು ‘ಸಿಮ್ ಬೈಂಡಿಂಗ್’ ಎನ್ನುತ್ತಾರೆ. ಸಿಮ್ ಬೈಂಡಿಂಗ್ ತಂತ್ರಜ್ಞಾನವು ಕೇವಲ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯಲ್ಲ, ಇದು ಹಾರ್ಡ್‌ವೇರ್ ಆಧಾರಿತ ಭದ್ರತಾ ಕ್ರಮವಾಗಿದೆ, ಉದಾಹರಣೆಗೆ ಪ್ರತಿ ಸಿಮ್ ಕಾರ್ಡ್ ಅನನ್ಯವಾದ ಕ್ರಿಪ್ಟೋಗ್ರಾಫಿಕ್ ಕೀಗಳನ್ನು ಹೊಂದಿರುತ್ತದೆ. ನೀವು ಆ್ಯಪ್ ಇನ್‌ಸ್ಟಾಲ್ ಮಾಡಿದಾಗ, ಆ್ಯಪ್ ಈ ಕೀಗಳನ್ನು ಓದುತ್ತದೆ ಮತ್ತು ತನ್ನ ಸರ್ವರ್ ಜೊತೆ ಜೋಡಿಸುತ್ತದೆ. ಅಂದರೆ, ನಿಮ್ಮ ಫೋನ್ ನಂಬರ್ ಕೇವಲ ಒಂದು ಸಂಖ್ಯೆಯಲ್ಲ, ಅದು ನಿಮ್ಮ ಭೌತಿಕ ಸಿಮ್ ಕಾರ್ಡ್‌ಗೆ ಬೆಸೆದುಕೊಂಡಿರುವ ಒಂದು ಗುರುತು.
ಈ ತಂತ್ರಜ್ಞಾನ ಹೊಸದೇನಲ್ಲ. ನಾವು ಬಳಸುವ ಯುಪಿಐ ಆ್ಯಪ್‌ಗಳಾದ ಗೂಗಲ್ ಪೇ, ಭೀಮ್ ಅಥವಾ ಬ್ಯಾಂಕಿಂಗ್ ಆ್ಯಪ್‌ಗಳು ಈಗಾಗಲೇ ಈ ತಂತ್ರಜ್ಞಾನವನ್ನು ಬಳಸುತ್ತಿವೆ. ನೀವು ಗಮನಿಸಿರಬಹುದು, ನಿಮ್ಮ ಫೋನ್‌ನಲ್ಲಿ ಬ್ಯಾಂಕ್‌ಗೆ ಲಿಂಕ್ ಆಗಿರುವ ಸಿಮ್ ಇಲ್ಲದಿದ್ದರೆ, ನೀವು ಹಣ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಇದೇ ಮಾದರಿಯ ಭದ್ರತೆಯನ್ನು ಈಗ ಈ ನಿಯಮಗಳ ಪ್ರಕಾರ ವಾಟ್ಸಾಪ್ ಮತ್ತು ಟೆಲಿಗ್ರಾಮ್‌ಗಳಿಗೂ ವಿಸ್ತರಿಸಲಾಗುತ್ತಿದೆ.
ಹೊಸ ನಿಯಮಗಳ ಪ್ರಮುಖ ಅಂಶಗಳು :-
ಕೇಂದ್ರ ದೂರಸಂಪರ್ಕ ಇಲಾಖೆಯು ವಾಟ್ಸಾಪ್, ಟೆಲಿಗ್ರಾಮ್ ನಂತಹ ಒಟಿಟಿ ಮೆಸೇಜಿಂಗ್ ಆ್ಯಪ್‌ಗಳಿಗೆ ಒಂದು ಕಡಕ್ ಆದೇಶ ನೀಡಿದೆ. ಸರಳವಾಗಿ ಹೇಳಬೇಕಾದರೆ ಇದರ ಪ್ರಕಾರ, ಇನ್ನು ಮುಂದೆ ಈ ಆ್ಯಪ್‌ಗಳು ಕೆಲಸ ಮಾಡಬೇಕಾದರೆ ನಿಮ್ಮ ಫೋನ್‌ನಲ್ಲಿ ಸಕ್ರಿಯವಾದ ಸಿಮ್ ಕಾರ್ಡ್ ಇರಲೇಬೇಕು. ‘ಸಿಮ್ ಬೈಂಡಿಂಗ್’ ತಂತ್ರಜ್ಞಾನವನ್ನು ಈಗ ವಾಟ್ಸಾಪ್ ಮತ್ತು ಟೆಲಿಗ್ರಾಮ್‌ಗೂ ಕಡ್ಡಾಯ ಮಾಡಲಾಗಿದೆ. ಇನ್ಮುಂದೆ ನೀವು ಯಾವ ನಂಬರ್‌ನಿಂದ ವಾಟ್ಸಾಪ್ ಓಪನ್ ಮಾಡಿದ್ದೀರೋ, ಆ ಸಿಮ್ ಕಾರ್ಡ್ ಫೋನ್‌ನಲ್ಲೇ ಇರಬೇಕು. ಸಿಮ್ ತೆಗೆದರೆ, ವಾಟ್ಸಾಪ್ ಬಂದ್ ಆಗುತ್ತದೆ. ಈ ಬದಲಾವಣೆಗಳನ್ನು ಜಾರಿಗೆ ತರಲು ಕಂಪನಿಗಳಿಗೆ ಸರ್ಕಾರವು 90 ದಿನಗಳ ಗಡುವು ನೀಡಿದೆ.
ಸರ್ಕಾರದ ಅಧಿಸೂಚನೆಯ ಪ್ರಕಾರ, ಪ್ರಮುಖ ಬದಲಾವಣೆಗಳು ಇಂತಿವೆ :–
- ಬಳಕೆಗೆ ಸಿಮ್ ಕಡ್ಡಾಯ : ನೀವು ವಾಟ್ಸಾಪ್ ಖಾತೆ ತೆರೆದ ನಂತರ ಆ ಸಿಮ್ ಕಾರ್ಡ್ ಅನ್ನು ಮೊಬೈಲ್‌ನಿಂದ ತೆಗೆಯುವಂತಿಲ್ಲ. ಸಿಮ್ ತೆಗೆದ ತಕ್ಷಣ ಆ್ಯಪ್ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಹಳೆಯ ಫೋನ್‌ನಲ್ಲಿ ಸಿಮ್ ಇಲ್ಲದೆ ವೈ-ಫೈ ಮೂಲಕ ವಾಟ್ಸಾಪ್ ಬಳಸುವ ಅಭ್ಯಾಸಕ್ಕೆ ಇನ್ನು ಬ್ರೇಕ್ ಬೀಳಲಿದೆ.
- ಸಿಮ್ ಬದಲಾವಣೆ : ನೀವು ಸಿಮ್ ಬದಲಾಯಿಸಿದರೆ, ವಾಟ್ಸಾಪ್ ತಾನಾಗಿಯೇ ಲಾಗ್-ಔಟ್ ಆಗಬಹುದು ಮತ್ತು ಹೊಸ ಸಿಮ್‌ಗೆ ಮರು-ನೋಂದಣಿ ಮಾಡಿಕೊಳ್ಳಲು ಕೇಳಬಹುದು.
- ಲ್ಯಾಪ್‌ಟಾಪ್/ಕಂಪ್ಯೂಟರ್ ಬಳಕೆದಾರರ ಲಾಗೌಟ್ : ನೀವು ಕಚೇರಿಯಲ್ಲಿ ವಾಟ್ಸಾಪ್ ವೆಬ್ ಬಳಸುತ್ತೀರಾ? ಇನ್ನು ಮುಂದೆ ಪ್ರತಿ 6 ಗಂಟೆಗಳಿಗೊಮ್ಮೆ ಅದು ಆಟೋಮ್ಯಾಟಿಕ್ ಆಗಿ ಲಾಗೌಟ್ ಆಗುತ್ತದೆ. ನೀವು ಮತ್ತೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಲಾಗಿನ್ ಆಗಬೇಕಾಗುತ್ತದೆ.
- ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಬಳಕೆ : ಸಾಮಾನ್ಯವಾಗಿ ವಿದೇಶಕ್ಕೆ ಹೋದಾಗ ಜನರು ಭಾರತದ ಸಿಮ್ ತೆಗೆದು, ಆ ದೇಶದ ಲೋಕಲ್ ಸಿಮ್ ಹಾಕುತ್ತಾರೆ, ಆದರೆ ವಾಟ್ಸಾಪ್ ಹಳೆಯ ಭಾರತದ ನಂಬರ್‌ನಲ್ಲೇ ಬಳಸುತ್ತಾರೆ. ಇನ್ನು ಮುಂದೆ ವಿದೇಶದಲ್ಲಿ ವಾಟ್ಸಾಪ್ ಬಳಸಲು ಭಾರತದ ಸಿಮ್ ಅನ್ನು ಫೋನ್‌ನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಮತ್ತು ರೋಮಿಂಗ್ ಬಳಸಬೇಕಾಗಬಹುದು ಅಥವಾ ಡ್ಯುಯಲ್ ಸಿಮ್ ಫೋನ್ ಬಳಸಬೇಕಾಗುತ್ತದೆ.
- ವಿದೇಶದಿಂದ ವಂಚನೆಗೆ ಕಡಿವಾಣ : ಸೈಬರ್ ವಂಚಕರು ಭಾರತೀಯ ಸಿಮ್ ಕಾರ್ಡ್‌ಗಳನ್ನು ಬಳಸಿ ವಿದೇಶದಲ್ಲಿ ಕುಳಿತುಕೊಂಡು ವಂಚನೆ ಮಾಡುವುದನ್ನು ತಡೆಯಲು, ಸಿಮ್ ಇಲ್ಲದ ಡಿವೈಸ್‌ಗಳಲ್ಲಿ ಆ್ಯಪ್ ನಿಷೇಧಿಸಲಾಗುತ್ತದೆ.
- ಟೆಲಿಕಾಂ ಕಂಪನಿಗಳ ಕರ್ತವ್ಯಗಳು : ಪ್ರತಿ ಕಂಪನಿ ಸೈಬರ್ ಭದ್ರತಾ ನೀತಿ ಅಳವಡಿಸಬೇಕು. 6 ಗಂಟೆಗಳೊಳಗೆ ಭದ್ರತಾ ಘಟನೆಗಳ ಕಡ್ಡಾಯ ವರದಿ ಮತ್ತು 24 ಗಂಟೆಗಳಲ್ಲಿ ಸರ್ಕಾರಕ್ಕೆ ದೀರ್ಘ ವರದಿ ಮಾಡಬೇಕು. ಭಾರತೀಯ ನಾಗರೀಕರನ್ನು ಮುಖ್ಯ ಭದ್ರತಾ ಅಧಿಕಾರಿಯನ್ನಾಗಿ ನೇಮಿಸಬೇಕು.
- IMEI ನೋಂದಣಿ ಕಡ್ಡಾಯ : ಭಾರತದಲ್ಲಿ ತಯಾರಾಗುವ ಪ್ರತಿಯೊಂದು ಫೋನ್‌ನ ಮತ್ತು ಭಾರತದೊಳಗೆ ಇಂಪೋರ್ಟ್ ಆಗುವ ಫೋನ್‌ಗಳಿಗೂ ಆಮದುಗೂ ಮುಂಚೆ IMEI ನೋಂದಣಿ ಕಡ್ಡಾಯ. ಡೂಪ್ಲಿಕೇಟ್ IMEI, ಕ್ಲೋನ್ IMEI ಬಳಸಿ ಸೇವೆ ಪಡೆಯಲು ಪ್ರಯತ್ನಿಸಿದರೆ, ಅದನ್ನು ನೆಟ್ವರ್ಕ್‌ನಲ್ಲಿ ತಕ್ಷಣ ಬ್ಯಾನ್ ಮಾಡಬೇಕು.
- ದಂಡ ಮತ್ತು ಅನುಸರಣೆ : ಆ್ಯಪ್ ಆಧಾರಿತ ಸಂವಹನ ಸೇವೆಗಳು 120 ದಿನಗಳ ಒಳಗೆ ಅನುಸರಣಾ ವರದಿಯನ್ನು ದೂರಸಂಪರ್ಕ ಇಲಾಖೆಗೆ ಸಲ್ಲಿಸಬೇಕು. ನಿಯಮಗಳನ್ನು ಪಾಲಿಸದಿದ್ದರೆ, ದೂರಸಂಪರ್ಕ ಕಾಯ್ದೆ 2023 ರ ಅಡಿಯಲ್ಲಿ ಭಾರೀ ದಂಡ ಅಥವಾ ಸೇವೆಯನ್ನು ನಿಷೇಧಿಸುವ ಕ್ರಮಗಳನ್ನು ಕೈಗೊಳ್ಳಬಹುದು.
- ಮೊಬೈಲ್ ನಂಬರ್ ದೃಢೀಕರಣ ವೇದಿಕೆ : ಬ್ಯಾಂಕುಗಳು ಅಥವಾ ಆ್ಯಪ್‌ಗಳು, ಒಬ್ಬ ಬಳಕೆದಾರ ನೀಡಿದ ಮೊಬೈಲ್ ಸಂಖ್ಯೆ ನಿಜವಾಗಿಯೂ ಅವರ ಹೆಸರಿನಲ್ಲೇ ಇದೆಯೇ ಎಂಬುದನ್ನು ಪರಿಶೀಲಿಸಲು ಕೇಂದ್ರ ಸರಕಾರವು ಸಂಚಾರ ಸಾಥಿ ಅಪ್ಲಿಕೇಶನ್ ಅನ್ನು ಸುಧಾರಿಸಲು ಅಥವಾ ಒಂದು ಹೊಸ ಕೇಂದ್ರೀಕೃತ ವ್ಯವಸ್ಥೆಯನ್ನು ರೂಪಿಸಲು ಈ ನಿಯಮದಲ್ಲಿ ಆದೇಶಿಸಲಾಗಿದೆ.
ಸಾಮಾನ್ಯ ಜನರ ಮೇಲೆ ಇದರ ಪರಿಣಾಮಗಳೇನು?
ಈ ನಿಯಮದಿಂದ ನಮ್ಮ ದಿನನಿತ್ಯದ ಜೀವನದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು :
- ಮಲ್ಟಿಪಲ್ ಡಿವೈಸ್ ಬಳಕೆ : ಕೆಲವರು ಒಂದೇ ವಾಟ್ಸಾಪ್ ಖಾತೆಯನ್ನು ಮೊಬೈಲ್ ಮತ್ತು ಟ್ಯಾಬ್ಲೆಟ್ ಎರಡರಲ್ಲೂ ಬಳಸುತ್ತಾರೆ. ಟ್ಯಾಬ್ಲೆಟ್‌ನಲ್ಲಿ ಸಿಮ್ ಇಲ್ಲದಿದ್ದರೂ ವೈ-ಫೈ ಮೂಲಕ ವಾಟ್ಸಾಪ್ ಬಳಸುತ್ತಿದ್ದರು. ಇನ್ನು ಮುಂದೆ ಅದು ಕಷ್ಟವಾಗಬಹುದು.
- ವಿದೇಶ ಪ್ರಯಾಣ : ನೀವು ವಿದೇಶಕ್ಕೆ ಹೋದಾಗ ಭಾರತದ ಸಿಮ್ ತೆಗೆದು, ಆ ದೇಶದ ಸಿಮ್ ಹಾಕುತ್ತೀರಿ. ಆಗ ನಿಮ್ಮ ಹಳೆಯ ವಾಟ್ಸಾಪ್ ನಂಬರ್ ಕೆಲಸ ಮಾಡುವುದನ್ನು ನಿಲ್ಲಿಸಬಹುದು. ಇದು ಪ್ರವಾಸಿಗರಿಗೆ ದೊಡ್ಡ ತಲೆನೋವಾಗಲಿದೆ.
- ಆಫೀಸ್ ಕೆಲಸ : ಆಫೀಸ್‌ನಲ್ಲಿ ಕಂಪ್ಯೂಟರ್‌ನಲ್ಲಿ ವಾಟ್ಸಾಪ್ ವೆಬ್ ಬಳಸುವವರು ದಿನಕ್ಕೆ ಕನಿಷ್ಠ 2-3 ಬಾರಿಯಾದರೂ ಲಾಗಿನ್ ಆಗಬೇಕಾಗುತ್ತದೆ. ಇದು ಕಿರಿಕಿರಿ ಉಂಟುಮಾಡಬಹುದು.
- ಸಿಮ್ ಕಾರ್ಡ್ ಜಾಗ್ರತೆ : ಇನ್ನು ಮುಂದೆ ಸಿಮ್ ಕಾರ್ಡ್ ಕೇವಲ ಕರೆ ಮಾಡಲು ಇರುವ ಸಾಧನವಲ್ಲ, ಅದು ನಿಮ್ಮ ‘ಡಿಜಿಟಲ್ ಕೀ’ ಇದ್ದಂತೆ. ನಿಮ್ಮ ಸಿಮ್ ಕಾರ್ಡ್/ಫೋನ್ ಕಳೆದುಹೋದರೆ ತಕ್ಷಣವೇ ಬ್ಲಾಕ್ ಮಾಡಿಸಿ, ಇಲ್ಲದಿದ್ದರೆ ನಿಮ್ಮ ವಾಟ್ಸಾಪ್ ಮತ್ತು ಬ್ಯಾಂಕ್ ಖಾತೆಗಳೆರಡೂ ಅಪಾಯಕ್ಕೆ ಸಿಲುಕಬಹುದು.
ಆರಂಭದಲ್ಲಿ ಸಿಮ್ ಬೈಂಡಿಂಗ್ ಮತ್ತು ಪದೇ ಪದೇ ಲಾಗಿನ್ ಮಾಡುವುದು ಕಿರಿಕಿರಿ ಅನ್ನಿಸಬಹುದು. ಆದರೆ ಇದೆ ನಿಯಮಗಳು ಸಾಮಾನ್ಯ ಜನರನ್ನು ಡಿಜಿಟಲ್ ಅರೆಸ್ಟ್, ಸಿಮ್-ಸ್ವಾಪ್ , ಸಿಮ್ ಕ್ಲೋನಿಂಗ್, ವಾಟ್ಸಪ್ ಸೆಕ್ಸ್‌ಟಾರ್ಶನ್, ವಾಟ್ಸಾಪ್/ಟೆಲಿಗ್ರಾಂ ಹೈಜಾಕ್/ಹ್ಯಾಕಿಂಗ್ ಮುಂತಾದ ಸೈಬರ್ ಅಪರಾಧಗಳಿಂದ ಕಾಪಾಡಲು ಸರಕಾರ ತೆಗೆದುಕೊಂಡ ಸಕಾರಾತ್ಮಕ ಹೆಜ್ಜೆಗಳು.
ಕೊನೆಯ ಮಾತು :-
ಇದು ಇಡೀ ದೇಶದ ಡಿಜಿಟಲ್ ಸಂವಹನವನ್ನು ಮತ್ತೊಂದು ಮಟ್ಟದ ಸುರಕ್ಷತೆಯ ಕಡೆಗೆ ಒಯ್ಯುವ ದೊಡ್ಡ ಹೆಜ್ಜೆ. ಬ್ಯಾಂಕಿಂಗ್ ಆ್ಯಪ್‌ಗಳಂತೆ ವಾಟ್ಸಾಪ್ ಕೂಡ ಸುರಕ್ಷಿತವಾಗಲಿ ಎಂಬುದು ಸರ್ಕಾರದ ಆಶಯ. ಆದರೆ, ಇದರಿಂದ ಸಾಮಾನ್ಯ ಬಳಕೆದಾರರಿಗೆ ಸ್ವಲ್ಪ ಮಟ್ಟಿಗೆ ಅನಾನುಕೂಲವಾಗುವುದು ಖಂಡಿತ. ಜಿಯೋ, ಏರ್‌ಟೆಲ್ ಮತ್ತು ವೋಡಾಫೋನ್ ಪ್ರತಿನಿಧಿಸುವ ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಇದನ್ನು ಸ್ವಾಗತಿಸಿದೆ, ಆದರೆ ಗೂಗಲ್, ಮೆಟಾ (ಫೇಸ್ಬುಕ್, ವಾಟ್ಸಾಪ್ ಮಾಲೀಕರು) ನಂತಹ ಕಂಪನಿಗಳನ್ನು ಪ್ರತಿನಿಧಿಸುವ ‘ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ’, ಈ ನಿಯಮಗಳ ವ್ಯಾಪ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸೈಬರ್ ಕಾನೂನು ತಜ್ಞರು ಮತ್ತು ಡಿಜಿಟಲ್ ಹಕ್ಕುಗಳ ಹೋರಾಟಗಾರರು, ಈ ನಿಯಮಗಳು ಸರ್ಕಾರದ ಕಣ್ಗಾವಲನ್ನು ಹೆಚ್ಚಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದು ಮುಂದೆ ಕೇವಲ ಮೆಸೇಜಿಂಗ್ ಆ್ಯಪ್‌ಗಳಲ್ಲದೆ, ಇ-ಕಾಮರ್ಸ್, ಫಿನ್-ಟೆಕ್ ಮತ್ತು ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನೂ ಒಳಗೊಳ್ಳುವ ಸಾಧ್ಯತೆಯಿದೆ. ಈ ಹೊಸ ವ್ಯವಸ್ಥೆಯನ್ನು ಅಳವಡಿಸಲು ಭಾರಿ ಪ್ರಮಾಣದ ತಾಂತ್ರಿಕ ಬದಲಾವಣೆಗಳು ಮತ್ತು ಹೂಡಿಕೆಯ ಅಗತ್ಯವಿದೆ. ಮುಂದಿನ 3 ತಿಂಗಳಲ್ಲಿ ವಾಟ್ಸಾಪ್, ಟೆಲಿಗ್ರಾಮ್ ಮುಂತಾದ ಮೆಸೇಜಿಂಗ್ ಆ್ಯಪ್‌ಗಳು ಈ ನಿಯಮಕ್ಕೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ. ನಾಗರಿಕರಾಗಿ, ಈ ಸುರಕ್ಷತಾ ಕ್ರಮಗಳಿಗೆ ಸಹಕರಿಸುವುದು ಮತ್ತು ಜಾಗರೂಕರಾಗಿರುವುದು ನಮ್ಮ ಜವಾಬ್ದಾರಿಯಾಗಿದೆ.



