Ganesha

ಗಣೇಶನ ದೇಹ ರಚನೆಯಿಂದ ಕಲಿಯಬಹುದಾದ  ಸೈಬರ್ ಸೆಕ್ಯೂರಿಟಿ ಪಾಠಗಳು

ಈ ಲೇಖನದಲ್ಲಿ ನಾನು ಗಣೇಶನ ದೇಹದ ಅಂಗಗಳು ಇಂದಿನ ಜಗತ್ತಿನ ಅತಿ ದೊಡ್ಡ ಕಂಟಕಗಳಲ್ಲಿ ಒಂದಾದ ಸೈಬರ್ ಅಪರಾಧ ಮತ್ತು ಸೈಬರ್ ಸುರಕ್ಷತೆಯ ಬಗ್ಗೆ ನಮಗೆ ಏನು ಪಾಠಗಳನ್ನು ಹೇಳುತ್ತದೆ ಎಂಬುದನ್ನು ತಿಳಿಸಿಕೊಡಲಿದ್ದೇನೆ.

ಕಳೆದ ವಾರ ನಾವೆಲ್ಲರೂ ಗೌರಿ ಗಣೇಶ ಹಬ್ಬವನ್ನು ಆಚರಿಸಿದೆವು. ನಮ್ಮ ಪುರಾಣಗಳಲ್ಲಿ ಶ್ರೀ ಗಣೇಶನನ್ನು ಜ್ಞಾನ, ವಿವೇಕ, ಬುದ್ಧಿವಂತಿಕೆ ಮತ್ತು ಅಡೆತಡೆಗಳನ್ನು ಜಯಿಸುವ ಸಾಮರ್ಥ್ಯವನ್ನು ಸಂಕೇತಿಸುವ ದೇವರಾಗಿ ಬಿಂಬಿಸಲಾಗಿದೆ. ಈ ಲೇಖನದಲ್ಲಿ ನಾನು ಗಣೇಶನ ದೇಹದ ಅಂಗಗಳು ಇಂದಿನ ಜಗತ್ತಿನ ಅತಿ ದೊಡ್ಡ ಕಂಟಕಗಳಲ್ಲಿ ಒಂದಾದ ಸೈಬರ್ ಅಪರಾಧ ಮತ್ತು ಸೈಬರ್ ಸುರಕ್ಷತೆಯ ಬಗ್ಗೆ ನಮಗೆ ಏನು ಪಾಠಗಳನ್ನು ಹೇಳುತ್ತದೆ ಎಂಬುದನ್ನು ತಿಳಿಸಿಕೊಡಲಿದ್ದೇನೆ.

1. ಗಣೇಶನ ಆನೆ ತಲೆ – ಬುದ್ಧಿವಂತಿಕೆ, ಸ್ಮರಣೆ ಮತ್ತು ತೀಕ್ಷ್ಣವಾದ ಗಮನಿಸುವಿಕೆಯನ್ನು ಪ್ರತಿನಿಧಿಸುತ್ತದೆ. ಸೈಬರ್ ಭದ್ರತೆಯ ಸಂದರ್ಭದಲ್ಲಿ, ಈ ಗುಣಗಳು ನಮಗೆ ಹೊಸ ಸೈಬರ್ ಅಪರಾಧಗಳು, ಪ್ರವೃತ್ತಿಗಳು ಮತ್ತು ಅನುಮನಾಸ್ಪದವಾದ ಚಟುವಟಿಕೆಗಳ ಬಗ್ಗೆ ಜ್ಞಾನವನ್ನು ಪಡೆಯಲು ಮತ್ತು ಜಾಗರೂಕರಾಗಿರಲು ತಿಳಿಸುತ್ತದೆ. ಇದಲ್ಲದೆ ಇದು ಎಲ್ಲಾ ಡಿಜಿಟಲ್ ವ್ಯವಹಾರದಲ್ಲೂ ನಾವು ತೀಕ್ಷ್ಣವಾದ ಗಮನಿಸುವಿಕೆಯನ್ನು ಬಳಸಲು, ಅಂದರೆ ಅದು (ಜಾಲತಾಣ/ಸಂದೇಶ/ಇಮೇಲ್) ಅಧಿಕೃತವಾಗಿದೆಯೇ ಎಂದು ಪರೀಕ್ಷಿಸಿ ನಂತರವೇ ಪ್ರತಿಕ್ರಿಯಿಸಲು ತಿಳಿಸುತ್ತದೆ.

2. ಗಣೇಶನ ದೊಡ್ಡ ಕಿವಿಗಳು – ಆಲಿಸುವಿಕೆ ಮತ್ತು ಅರಿವಿನ ಸಂಕೇತವಾಗಿದೆ. ಸೈಬರ್ ಭದ್ರತೆಯಲ್ಲಿ, ಇದು ನಮಗೆ ಸೈಬರ್ ತಜ್ಞರ ಮಾತುಗಳನ್ನು ಆಲಿಸುವುದು ಮತ್ತು ಅವರು ಸೂಚಿಸುವ ಉತ್ತಮ ಅಭ್ಯಾಸಗಳನ್ನು ಅನುಸರಿಸುವುದನ್ನು ಸಂಕೇತಿಸುತ್ತದೆ.

3. ಗಣೇಶನ ದಂತಗಳು – ಅಡೆತಡೆಗಳನ್ನು ಕಿತ್ತುಹಾಕುವುದನ್ನು ಮತ್ತು ರಕ್ಷಣೆಯನ್ನು ಪ್ರತಿನಿಧಿಸುತ್ತದೆ. ಇದು ನಮಗೆ ನಮ್ಮ ಡಿಜಿಟಲ್ ಜೀವನದ ಸುರಕ್ಷತೆಯನ್ನು ರಾಜಿ ಮಾಡಿಕೊಳ್ಳಬಹುದಾದ ಅಡೆತಡೆಗಳು ಅಥವಾ ದುರ್ಬಲತೆಗಳನ್ನು ಗುರುತಿಸಿ ತೆಗೆದುಹಾಕುವಲ್ಲಿ ಮತ್ತು ರಕ್ಷಣೆಗೆ ಸಾಫ್ಟ್ವೇರ್ ಆಂಟಿವೈರಸ್, VPN ಮತ್ತು ಫೈರ್ವಾಲ್ ಅನ್ನು ನಮ್ಮ ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನಿನಲ್ಲಿ ಅಳವಡಿಸುವುದರ ಬಗ್ಗೆ ಸಂಕೇತಿಸುತ್ತದೆ.

4. ಗಣೇಶನ ಸೊಂಡಿಲು – ಒಳ್ಳೆಯದನ್ನು ಮಾತ್ರ ಸ್ವೀಕರಿಸುವ ತಾರತಮ್ಯವನ್ನು ಪ್ರತಿನಿಧಿಸುತ್ತದೆ. ಇಂದು ಸೈಬರ್ ಪ್ರಪಂಚದಲ್ಲಿ ಎಲ್ಲರಿಗೂ ಎಲ್ಲಾ ರೀತಿಯ ವಿಷಯಗಳು ಒಂದು ಕ್ಲಿಕ್ ದೂರದಲ್ಲಿದೆ ಮತ್ತು ಯಾವುದು ನಮಗೆ ಒಳ್ಳೆಯದು ಮತ್ತು ಯಾವುದು ನಮಗೆ ತೊಂದರೆಯನ್ನುಂಟು ಮಾಡಬಹುದು ಎಂಬುದನ್ನು ತಿಳಿಸುವ ಉಪಕರಣ ಅಥವಾ ಮಾರ್ಗಸೂಚಿ ಇಲ್ಲದಿರುವುದರಿಂದ ನಾವು ಗಣೇಶನ ಸೊಂಡಲಿನ ತರಹ ನಮಗೆ ಉಪಯುಕ್ತ ಮತ್ತು ತೊಂದರೆಯುನ್ನುಂಟು ಮಾಡದ ವಿಷಯಗಳನ್ನು ಮಾತ್ರ ಸ್ವೀಕರಿಸಬೇಕು. ಅಪರಿಚಿತರು ಕಳುಹಿಸುವ ಸಂದೇಶದಲ್ಲಿರುವ ಲಿಂಕ್/QR ಕೋಡ್/ಆಪ್ ಗಳನ್ನು ಕ್ಲಿಕ್/ಸ್ಕ್ಯಾನ್/ಇನ್ಸ್ಟಾಲ್ ಮಾಡಬೇಡಿ ಮತ್ತು ಸುರಕ್ಷಿತವಲ್ಲದ ಜಾಲತಾಣಗಳಲ್ಲಿ ವ್ಯವಹರಿಸಬೇಡಿ.

5. ಗಣೇಶನ ದೊಡ್ಡ ಹೊಟ್ಟೆ – ಇದು ನಮಗೆ ಜೀವನದಲ್ಲಿ ಬರುವ ಎಲ್ಲಾ ಹಿತಕರ ಮತ್ತು ಅಹಿತಕರ ಅನುಭವಗಳನ್ನು ಸಮಚಿತ್ತದಿಂದ ಸ್ವೀಕರಿಸುವಂತೆ ಮತ್ತು ತೊಂದರೆಗಳಿಗೆ ಎದೆಗುಂದದೆ ದೈರ್ಯವಾಗಿ ಎದುರಿಸುವುದನ್ನು ಸಂಕೇತಿಸುತ್ತದೆ. ಇದು ಸೈಬರ್ ಜಗತ್ತಿನಲ್ಲಿ ಯಾರಾದರು ನಮನ್ನು ಬೆದರಿಸಿದರೆ ಅಥವಾ ಬ್ಲಾಕ್ಮೇಲ್ ಮಾಡಿದರೆ ಅಥವಾ ನಮ್ಮ ಹಣವನ್ನು ಲೂಟಿಮಾಡಿದರೆ ನಾವು ಆತ್ಮಹತ್ಯೆಗೆ ಶರಣಾಗದೆ ಅದನ್ನು ದೈರ್ಯವಾಗಿ ಶಾಂತ ಚಿತ್ತದಿಂದ ಎದುರಿಸಲು ಸೂಚಿಸುತ್ತದೆ.

6. ಗಣೇಶನ ವಿಶೇಷ ಆಕೃತಿ(ಮಾನವ ದೇಹ + ಆನೆ ತಲೆ) – ಹೊಂದಿಕೊಳ್ಳುವಿಕೆ ಮತ್ತು ನಮ್ಯತೆಯನ್ನು ಸೂಚಿಸುತ್ತದೆ. ಇದು ನಮಗೆ ತ್ವರಿತವಾಗಿ ಬದಲಾಗುತ್ತಿರುವ ಸೈಬರ್ ಜಗತ್ತಿನಲ್ಲಿ ನಾವು ಕೂಡ ಬದಲಾವಣೆಗೆ ಪೂರಕವಾಗಿ ಹೊಸ ತಂತ್ರಜ್ಞಾನ ಮತ್ತು ಉಪಕರಣಗಳಿಗೆ ಹೊಂದಿಕೊಂಡು ಅವುಗಳಿಂದ ನಮ್ಮ ಮಾಹಿತಿ ಸೋರಿಕೆಯಾಗದಂತೆ ಹೇಗೆ ಸುರಕ್ಷಿತವಾಗಿ ಬಳಸಲು ಬೇಕಾದ ನಮ್ಯತೆಯನ್ನು ಸೂಚಿಸುತ್ತದೆ.

7. ಗಣೇಶನ ಶಾಂತ ಮತ್ತು ತಾಳ್ಮೆಯ ವರ್ತನೆ – ಇದು ನಮಗೆ ಎಲ್ಲಾ ಡಿಜಿಟಲ್ ವ್ಯವಹಾರದಲ್ಲೂ ತಾಳ್ಮೆಯಾಗಿರಲು, ಮತ್ತು ಶಾಂತತೆಯಿಂದ ಪರಿಶೀಲಿಸಿ ನಂತರವೇ ಪ್ರತಿಕ್ರಿಯಿಸಲು ಸೂಚಿಸುತ್ತದೆ. ಸೈಬರ್ ಖದೀಮರು ನಮಗೆ ಆತುರತೆಯಿಂದ ಅವರಿಗೆ ಬೇಕಾದ ಕ್ರಮಕೈಗೊಳ್ಳಲು(OTP ನೀಡಲು, ಹಣ ಸಂದಾಯಿಸಲು) ಪ್ರೇರೇಪಿಸುತ್ತಾರೆ, ನಾವು ಗಣೇಶನಂತೆ ತಾಳ್ಮೆ ತೋರಿಸಿ ಅವರ ಜಾಲಕ್ಕೆ ಬೀಳದಂತೆ ನೋಡಿಕ್ಕೊಳಬೇಕು.

8. ಮೂಷಿಕ ವಾಹನನಾದ ಗಣೇಶ – ನಮಗೆ ನಮ್ರತೆ ಮತ್ತು ಸಹಯೋಗವನ್ನು ಸಂಕೇತಿಸುತ್ತದೆ. ಸೈಬರ್ ಅಪರಾಧಕ್ಕೆ ಬಲಿಯಾದವರಲ್ಲಿ ಹೆಚ್ಚಿನವರು ತುಂಬ ಓದಿದವರೇ ಅಥವಾ ಒಳ್ಳೆ ಹುದ್ದೆಯಲ್ಲಿರುವವರೇ, ಇಲ್ಲಿ ನನಗೆಲ್ಲಾ ಗೊತ್ತು, ನನನ್ನು ಯಾರು ಮೋಸ ಮಾಡಲು ಸಾಧ್ಯವಿಲ್ಲಾ ಎಂಬುವವರೇ ಜಾಸ್ತಿ ಓದಿಲ್ಲದ ಸೈಬರ್ ಅಪರಾಧಿಗಳ ಕೈಯಲ್ಲಿ ಮೋಸಹೋಗುವುದು. ಹಾಗಾಗಿ ಗಣೇಶ ನಮಗೆ ನಮ್ರತೆ ಮತ್ತು ಸಂಸ್ಥೆ/ಸರಕಾರ/ಆಡಳಿತ ಅಧಿಕಾರಿಗಳು ಸೂಚಿಸುವ ಸಲಹೆಗಳನ್ನು ಪಾಲಿಸಿ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಸಹಯೋಗ ಕೊಡಲು ಸೂಚಿಸುತ್ತದೆ.

9. ಗಣೇಶನ ಮಂತ್ರ “ಓಂ ಗಣೇಶಾಯ ನಮಃ” – ಸೈಬರ್ ಸುರಕ್ಷತೆಯ ಉತ್ತಮ ಅಭ್ಯಾಸಗಳಿಗೆ ಘೋಷಣಾ ವಾಕ್ಯವಾಗಿ ಬಳಸಬಹುದು:

– “ಓಂ” ತಿಳುವಳಿಕೆ ಮತ್ತು ಜಾಗೃತರಾಗಿ ಉಳಿಯುವ ಪ್ರಾಮುಖ್ಯತೆಯನ್ನು ಪ್ರತಿನಿಧಿಸುತ್ತದೆ

– “ಗಣೇಶಾಯ” ಅಡೆತಡೆಗಳು ಮತ್ತು ಬೆದರಿಕೆಗಳನ್ನು ತೆಗೆದುಹಾಕುವುದನ್ನು ಸಂಕೇತಿಸುತ್ತದೆ – “ನಮಃ” ನಮ್ಮ ಆನ್‌ಲೈನ್ ಚಟುವಟಿಕೆಗಳಲ್ಲಿ ನಮ್ರತೆ ಮತ್ತು ಜಾಗರೂಕರಾಗಿರಲು ನಮಗೆ ನೆನಪಿಸುತ್ತದೆ.

ಗಣೇಶ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ