Identity Theft – ಗುರುತಿನ ಕಳ್ಳರಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಿ
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(NCRB) ಪ್ರಕಾರ “Identity Theft” ಅಥವಾ “ಗುರುತಿನ ಕಳ್ಳತನ” ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆಯಲ್ಲಿ ದೇಶದಲ್ಲೇ ನಮ್ಮ ಬೆಂಗಳೂರು ಅಗ್ರ ಸ್ಥಾನದಲ್ಲಿದೆ. ಸೈಬರ್ ಅಪರಾಧಿಗಳು ನಿಮ್ಮ ವೈಯಕ್ತಿಕ ಮಾಹಿತಿಗಳಾದ ಹೆಸರು, ಹುಟ್ಟಿದ ದಿನ, ಆಧಾರ್, ಪಾನ್ ಸಂಖ್ಯೆ, ಬ್ಯಾಂಕ್ ಅಕೌಂಟ್, ಕ್ರೆಡಿಟ್ ಕಾರ್ಡ್ ವಿವರಗಳನ್ನು ಕದಿಯುತ್ತಾರೆ ಮತ್ತು ಅದನ್ನು ಹೊಸ ಖಾತೆಗಳನ್ನು ತೆರೆಯಲು, ಖರೀದಿಗಳನ್ನು ಮಾಡಲು ಅಥವಾ ಇತರ ರೀತಿಯ ವಂಚನೆ ಮಾಡಲು ಈ ಮಾಹಿತಿಯನ್ನು ಬಳಸುತ್ತಾರೆ. ನಿಮ್ಮ ಹೆಸರಿನಲ್ಲಿ ಕಳ್ಳನು ಮಾಡುವ ಯಾವುದೇ ಸಾಲಗಳು ಅಥವಾ ಆರೋಪಗಳಿಗೆ ಸಹ ನೀವು ಜವಾಬ್ದಾರರಾಗಿರುತ್ತೀರಿ. ಹಣಕಾಸಿನ ಪರಿಣಾಮಗಳ ಜೊತೆಗೆ, ಗುರುತಿನ ಕಳ್ಳತನವು ನಿಮ್ಮ ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮಗಳ ಜೊತೆ ನಿಮ್ಮ ಕ್ರೆಡಿಟ್ ಸ್ಕೋರ್(CIBIL) ಹಾಗು ಸಾಮಾಜಿಕ ಘನತೆಯನ್ನು ಹಾನಿ ಉಂಟುಮಾಡಬಹುದು. ಗುರುತಿನ ಕಳ್ಳತನದ ಬಲಿಪಶುಗಳು ಉಲ್ಲಂಘನೆ, ಕೋಪ ಮತ್ತು ಹತಾಶೆಯ ಭಾವನೆಗಳನ್ನು ಅನುಭವಿಸಬಹುದು. ಗುರುತಿನ ಕಳ್ಳತನದ ಪ್ರಮುಖ ವಿಧಗಳು ಯಾವುದೆಂದರೆ ಕ್ರೆಡಿಟ್ ಕಾರ್ಡ್/ಸಾಲದ ವಂಚನೆ, ತೆರಿಗೆ ಅಥವಾ ಪ್ರಯೋಜನಗಳ ವಂಚನೆ, ಉದ್ಯೋಗ ವಂಚನೆ ಮತ್ತು ATM ಸ್ಕಿಮ್ಮಿಂಗ್.
ಗುರುತಿನ ಕಳ್ಳತನ ವಂಚನೆ ಹೇಗೇ ಮಾಡುತ್ತಾರೆ :-
ಸೈಬರ್ ಕಳ್ಳರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಈ ಮೂಲಕ ಪಡೆದುಕೊಳ್ಳುತ್ತಾರೆ:
- ಲಿಂಕ್ ಹೊಂದಿರುವ sms ಅಥವಾ ಸಾಮಾಜಿಕ ಮಾಧ್ಯಮ ಸಂದೇಶವನ್ನು ಕಳುಹಿಸುವುದು, ಅದನ್ನು ಕ್ಲಿಕ್ ಮಾಡುವುದರಿಂದ ನಿಮ್ಮ ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್ನಲ್ಲಿ ಕೀ ಲಾಗರ್ ನಂತಹ ವೈರಸ್ ಸೋಂಕು ತಗಲುತ್ತದೆ, ಕೀಬೋರ್ಡ್ ಬಳಸಿ ನೀವು ಟೈಪ್ ಮಾಡಿದ ಎಲ್ಲಾ ಅಕ್ಷರಗಳನ್ನು ಅದು ಕಳ್ಳರಿಗೆ ಕಳುಹಿಸುತ್ತದೆ. ಅವರು USB ಡ್ರೈವ್ಗಳು ಮತ್ತು ಮೆಮೊರಿ ಕಾರ್ಡ್ಗಳ ಮೂಲಕ ನಿಮ್ಮ ಕಂಪ್ಯೂಟರ್ಗೆ ಸೋಂಕು ತರಬಹುದು.
- ನೀವು ಅಪರಿಚಿತ ಜನರಿಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಫೋಟೋಗಳು ಅಥವಾ ಸ್ಕ್ಯಾನ್ ಮಾಡಿದ ಅಥವಾ ಜೆರಾಕ್ಸ್ ಪ್ರತಿಗಳನ್ನು ಕಳುಹಿಸಿದಾಗ ಅಥವಾ ಹಂಚಿಕೊಂಡಾಗ.
- ಎಟಿಎಂ ಅಥವಾ ಕಾರ್ಡ್ ಓದುವ ಯಂತ್ರಗಳಲ್ಲಿ ಕ್ಯಾಮೆರಾಗಳೊಂದಿಗೆ ಕಾರ್ಡ್ ಸ್ಕಿಮ್ಮಿಂಗ್ ಯಂತ್ರಗಳನ್ನು ಹುದಿಗಿರಿಸುತ್ತಾರೆ.
- ನಿಮ್ಮ ಬ್ಯಾಂಕಿಂಗ್ ಅಥವಾ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನಂತೆಯೇ ನಕಲಿ ವೆಬ್‌ಸೈಟ್ ಅನ್ನು ರಚಿಸಿ.
ನಂತರ ಕಳ್ಳರು ಇದನ್ನು ಬಳಸಿ ಮೇಲೆ ಹೇಳಿದ ಅಪರಾಧಗಳನ್ನು ಮಾಡುತ್ತಾರೆ.
ಗುರುತಿನ ಕಳ್ಳತನ ವಂಚನೆಯಿಂದ ಹೇಗೆ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು :-
- ಯಾರೊಂದಿಗೂ ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡಿನ ಚಿತ್ರವನ್ನು ಹಂಚಿಕೊಳ್ಳಬೇಡಿ, ಹಾಗೊಂದು ರೀತಿ ಕೊಡಲೇಬೇಕಾದರೆ ಅದರ ಜೆರಾಕ್ಸ್ ಕಾಪಿಯ ಚಿತ್ರವನ್ನು ಕೊಡಿ ಮತ್ತು ಯಾವ ಕಾರಣಕ್ಕೆ ಕೊಡುತ್ತಿರುವಿರೆಂದು ದಿನಾಂಕದೊಂದಿಗೆ ಬರೆಯಿರಿ.
- ನಿಮ್ಮ ಹೆಸರು, ವಯಸ್ಸು ಅಥವಾ ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಮತ್ತು ಪಾನ್ ಬದಲು ಡ್ರೈವಿಂಗ್ ಲೈಸನ್ಸ್ ಅಥವಾ ವೋಟರ್ ID ಬಳಸಿ.
- ನಿಮ್ಮ CIBIL ಸ್ಕೋರ್ ಮತ್ತು ವರದಿಯನ್ನು, ಆದಾಯ ತೆರಿಗೆ ಜಾಲತಾಣದಲ್ಲಿ AIS ವರದಿಯನ್ನು ಹಾಗು ಆಧಾರ್ ದೃಢೀಕರಣ ಇತಿಹಾಸವನ್ನು ನಿಯಮಿತವಾಗಿ ಅನಿರೀಕ್ಷಿತ ಟ್ರಾನ್ಸಾಕ್ಷನ್ ಬಗ್ಗೆ ಪರೀಕ್ಷಿಸುತ್ತಿರಿ.
- ನಿಮಗೆ ಜಾಲತಾಣದ URL ಅಥವಾ ಮುಖಪುಟದಲ್ಲಿ ಏನಾದರೂ ಸಂಶಯ ಬಂದರೆ, ಕೂಡಲೇ ಸೂಕ್ಷ್ಮವಾಗಿ ಇದು ಅಸಲಿ ಜಾಲತಾಣವೇ ಹಾಗು ಸೆಕ್ಯೂರ್(ಬ್ರೌಸರ್ರ್ನಲ್ಲಿ https ಯಿಂದ ಶುರುವಾಗ್ತಾ ಇದೆಯ ಅಥವಾ ಬೀಗ ಮುದ್ರೆ) ಇದೆಯ ಎಂದು ಪರೀಕ್ಷಿಸಿ.
- ನಿಮ್ಮ ಬ್ಯಾಂಕ್ , ಇಮೇಲ್ ಮತ್ತಿತರ ಮುಖ್ಯ ವೆಬ್ಸೈಟುಗಳಲ್ಲಿ ಡಬಲ್ ಫ್ಯಾಕ್ಟರ್ ಆಥೆಂಟಿಕೇಷನ್ ಇದ್ದರೆ ತಕ್ಷಣ ಅದನ್ನು ಅಳವಡಿಸಿ.
- ಎಟಿಎಂ ಅಥವಾ ಕಾರ್ಡ್ ಸ್ವೈಪಿಂಗ್ ಯಂತ್ರವನ್ನು ಬಳಸುವ ಮೊದಲು, ಅದನ್ನು ಹಾಳುಮಾಡಲಾಗಿದೆಯೇ ಎಂದು ಪರೀಕ್ಷಿಸಿ.
- ಯಾವುದೇ ಸಂಶಯಾಸ್ಪದವಾದ ಇಮೇಲ್ ಅಥವಾ sms ಮೆಸೇಜನ್ನು ತೆರೆಯದೆ ನಷ್ಟಗೊಳಿಸಿರಿ, ಅಂತಹ ಮೆಸೇಜಿನಲ್ಲಿರುವ ಯಾವುದೇ ಹೈಪರ್-ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ ಹಾಗು ಆಂಟಿವೈರಸ್ ಬಳಸಿರಿ.
ನೀವು ಗುರುತಿನ ಕಳ್ಳತನ ವಂಚನೆಗೆ ಒಳಗಾಗಿದ್ದರೆ :-
ಕೂಡಲೇ ನೀವು 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ದೂರು ದಾಖಲಿಸಿ. ಆಧಾರ್ ಹಂಚಿಕೊಂಡಿದ್ದರೆ ನಿಮ್ಮ ಆಧಾರ್ ಕಾರ್ಡನ್ನು uidai.gov.in ಜಾಲತಾಣದಲ್ಲಿ ಲಾಕ್ ಮಾಡಿ. ಅಕೌಂಟ್ ತೆರೆದ ಅಥವಾ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಕೊಟ್ಟ ಬ್ಯಾಂಕಿನಲ್ಲೂ ದೂರು ದಾಖಲಿಸಿ ಹಾಗು ಕಾನೂನು ಕ್ರಮ ಜರಗಿಸಿ.