Site icon Welcome to CYBER MITHRA

ನನ್ನ ಮುಖ, ನನ್ನ ಧ್ವನಿ… ನನ್ನ ಹಕ್ಕು! AI ಯುಗದಲ್ಲಿ ವ್ಯಕ್ತಿತ್ವ ಕಳ್ಳತನದ ಭೀತಿ

personality rights

ಇಂದು ಕೆಲವೇ ಕ್ಷಣಗಳಲ್ಲಿ ಯಾರಾದರೂ ನಟನ ಮುಖವನ್ನು AI ಡೀಪ್‌ಫೇಕ್ ಮೂಲಕ ಬದಲಿಸಿ ನಕಲಿ ವಿಡಿಯೋ ಮಾಡಬಹುದು. ಯಾರಾದರೂ ರಾಜಕಾರಣಿಯ/ಸ್ಟಾರ್ ಕಲಾವಿದನ ಧ್ವನಿಯನ್ನು ಹೋಲುವಂತೆ ಸಾಫ್ಟ್‌ವೇರ್ ಬಳಸಿ ಮಾತನಾಡಿಸಬಹುದು. ಒಬ್ಬ ಯೂಟ್ಯೂಬರ್ ಅಥವಾ ಇನ್‌ಸ್ಟಾಗ್ರಾಂ ಪುಟ, ಯಾವುದೋ ಪ್ರಸಿದ್ಧ ವ್ಯಕ್ತಿಯ ಫೋಟೋ ಬಳಸಿ “ಈ ಉತ್ಪನ್ನವನ್ನು ಇವರು ಶಿಫಾರಸು ಮಾಡಿದ್ದಾರೆ” ಎಂದು ಜಾಹೀರಾತು ಹಾಕಬಹುದು. ಒಮ್ಮೆ ಯೋಚಿಸಿ ನೋಡಿ — ನಿಮ್ಮ ಮುಖ, ನಿಮ್ಮ ಹೆಸರು, ನಿಮ್ಮ ಧ್ವನಿ, ನಿಮ್ಮ ವೈಯಕ್ತಿಕ ಗುರುತು, ಇವೆಲ್ಲವನ್ನೂ ನಿಮ್ಮ ಅನುಮತಿಯಿಲ್ಲದೆ ಯಾರಾದರೂ ಹಣ ಗಳಿಸಲು ಬಳಸಿದರೆ, ನೀವೇನು ಮಾಡಬಹುದು? ಇದನ್ನೇ ತಡೆಗಟ್ಟಲು ಕಾನೂನು “ಪರ್ಸನಾಲಿಟಿ ರೈಟ್ಸ್” ಅಥವಾ “ವ್ಯಕ್ತಿತ್ವ ಹಕ್ಕುಗಳು” ಎಲ್ಲರಿಗೂ ನೀಡುತ್ತದೆ. AI ಮತ್ತು ಡೀಪ್‌ಫೇಕ್ ಬಗ್ಗೆ ಹೆಚ್ಚು ತಿಳಿದುಕ್ಕೊಳ್ಳಲು ನೀವು ನನ್ನ ದ್ವಿಭಾಷಾ ಬ್ಲಾಗ್ ಸಂದರ್ಶಿಸಿ.

ಭಾರತದಲ್ಲಿ ಈ ವ್ಯಕ್ತಿತ್ವ ಹಕ್ಕಿನ ಬಗ್ಗೆ ಈಗ ಭಾರೀ ಚರ್ಚೆ ನಡೆಯುತ್ತಿದೆ. ವಿಶೇಷವಾಗಿ AI, ಡೀಪ್‌ಫೇಕ್, ಸಾಮಾಜಿಕ ಜಾಲತಾಣಗಳು ಮತ್ತು ನಕಲಿ ಜಾಹೀರಾತುಗಳ ಯುಗದಲ್ಲಿ, ನ್ಯಾಯಾಲಯಗಳು ಈ ವಿಷಯವನ್ನು ಗಂಭೀರವಾಗಿ ನೋಡಲಾರಂಭಿಸಿವೆ. ನಟರಾದ ಅಮಿತಾಭ್ ಬಚ್ಚನ್, ಅನಿಲ್ ಕಪೂರ್, ಜಾಕಿ ಶ್ರಾಫ್, ಐಶ್ವರ್ಯ ರೈ, ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿ ಹಾಗು ಉದ್ಯಮಿಗಳಾದ ಅಮನ್ ಗುಪ್ತ, ರಾಜಕಾರಣಿ ಶಶಿ ತರೂರ್ ಸೇರಿದಂತೆ ಹಲವರು ಇತ್ತೀಚಿನ ವರ್ಷಗಳಲ್ಲಿ ಈ ಹಕ್ಕನ್ನು ಪಡೆಯಲು ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ. ಭಾರತದಲ್ಲಿ ವ್ಯಕ್ತಿತ್ವ ಹಕ್ಕುಗಳಾದ ಹೆಸರು, ಧ್ವನಿ, ಚಿತ್ರ, ಹೋಲಿಕೆ ಮತ್ತು ನಡವಳಿಕೆಗಳನ್ನು, ಅನಧಿಕೃತ ವಾಣಿಜ್ಯ ಶೋಷಣೆಯಿಂದ ರಕ್ಷಿಸಲು ಯಾವುದೇ ನಿರ್ದಿಷ್ಟ ಕಾನೂನು ಅಸ್ತಿತ್ವದಲ್ಲಿಲ್ಲದಿದ್ದರೂ, ಭಾರತೀಯ ನ್ಯಾಯಾಲಯಗಳು ಈ ಹಕ್ಕುಗಳನ್ನು ಸಂವಿದಾನ ನೀಡುವ ಆರ್ಟಿಕಲ್ 21 (ಗೌಪ್ಯತೆ/ಘನತೆಯ ಹಕ್ಕು), ಹಕ್ಕುಸ್ವಾಮ್ಯ ಕಾಯ್ದೆ, 1957 ಮತ್ತು ಸಾಮಾನ್ಯ ಕಾನೂನಿನ ಅಡಿಯಲ್ಲಿ ಗುರುತಿಸುತ್ತವೆ.

ವ್ಯಕ್ತಿತ್ವ ಹಕ್ಕು ಎಂದರೆ ಏನು?

ಸರಳವಾಗಿ ಹೇಳಬೇಕೆಂದರೆ — ನಿಮ್ಮ ಹೆಸರು, ಮುಖ (ಭಾವಚಿತ್ರ), ಧ್ವನಿ, ಸಹಿ, ಶೈಲಿ, ಮತ್ತು ನೀವು ಬಳಸುವ ವಿಶೇಷ ಶಬ್ದಗಳ ಮೇಲೆ ನಿಮಗೆ ಏಕಮೇವ ಒಡೆತನ ಇದೆ ಅಥವಾ ಹಕ್ಕಿದೆ, ಅದುವೇ ವ್ಯಕ್ತಿತ್ವ ಹಕ್ಕು ಅಥವಾ ಪರ್ಸನಾಲಿಟಿ ರೈಟ್ಸ್. ಇವುಗಳನ್ನು ಯಾರಾದರೂ ನಿಮ್ಮ ಅನುಮತಿ ಇಲ್ಲದೆ ವ್ಯಾಪಾರ, ಜಾಹೀರಾತು, ಮನರಂಜನೆ, ಅಥವಾ ತಪ್ಪು ಮಾಹಿತಿ ಹರಡಲು ಬಳಸಿಕೊಂಡರೆ — ಅದು ಅಪರಾಧವಾಗುತ್ತದೆ.

ಇದನ್ನು ಎರಡು ವಿಧಗಳಾಗಿ ವಿಂಗಡಿಸಬಹುದು:

೧. ಖ್ಯಾತಿ ಹಕ್ಕು (Right to Publicity): ನಿಮ್ಮ ಗುರುತನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ನಿಮ್ಮ ಒಪ್ಪಿಗೆ ಕಡ್ಡಾಯ.

೨. ನೈತಿಕ ಹಕ್ಕು (Moral Rights): ನಿಮ್ಮ ಖ್ಯಾತಿ ಅಥವಾ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಿಮ್ಮ ಗುರುತನ್ನು ಬಳಸಬಾರದು — ಅನುಮತಿ ಇದ್ದರೂ ಸಹ.

ಉದಾಹರಣೆಗೆ:

ಭಾರತದಲ್ಲಿ ಯಾವ ಕಾನೂನುಗಳ ಅಡಿ ಈ ವ್ಯಕ್ತಿತ್ವ ಹಕ್ಕು ದೊರೆಯುತ್ತದೆ?

ಭಾರತದಲ್ಲಿ “ವ್ಯಕ್ತಿತ್ವ ಹಕ್ಕು” ಎಂಬ ಒಂದೇ ಒಂದು ಪ್ರತ್ಯೇಕ ಕಾಯ್ದೆ ಇಲ್ಲ. ಆದರೂ ಹಲವು ಕಾನೂನುಗಳ ಮೂಲಕ ಈ ಹಕ್ಕನ್ನು ಚಲಾಯಿಸಬಹುದು :-

೧. ಭಾರತದ ಸಂವಿಧಾನ :

೨. ಕೃತಿಸ್ವಾಮ್ಯ ಕಾಯ್ದೆ, ೧೯೫೭ :

೩. ಟ್ರೇಡ್‌ಮಾರ್ಕ್ ಕಾಯ್ದೆ, ೧೯೯೯ :

ಒಬ್ಬ ಪ್ರಸಿದ್ಧ ವ್ಯಕ್ತಿಯ ಹೆಸರು ಅಥವಾ ಚಿತ್ರವನ್ನು ಅವರ ಅನುಮತಿ ಇಲ್ಲದೆ ಟ್ರೇಡ್‌ಮಾರ್ಕ್‌ ಆಗಿ ನೋಂದಾಯಿಸಿ ಬಳಸಿಕೊಳ್ಳಬಾರದು.

ಧಾರಾ ೨(೧)(ಝೆಡ್‌ಬಿ) : “ಸುಪ್ರಸಿದ್ಧ ಟ್ರೇಡ್‌ಮಾರ್ಕ್” ಎಂಬ ಪರಿಕಲ್ಪನೆ — ಪ್ರಸಿದ್ಧ ಹೆಸರಿಗೆ ಹೆಚ್ಚಿನ ರಕ್ಷಣೆ.

೪. ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ, ೨೦೨೩ :

ಡಿಜಿಟಲ್ ಜಗತ್ತಿನಲ್ಲಿ ವ್ಯಕ್ತಿಗಳ ಹೆಸರು, ಫೋಟೋ, ಧ್ವನಿಮುದ್ರಣ — ಇವು “ವೈಯಕ್ತಿಕ ಡೇಟಾ” ಎಂದು ಪರಿಗಣಿಸಲ್ಪಡುತ್ತವೆ. ಈ ಡೇಟಾ ಸಂಗ್ರಹ ಮತ್ತು ಬಳಕೆಗೆ ಸಂಬಂಧಪಟ್ಟ ವ್ಯಕ್ತಿಯ ಅನುಮತಿ ತೆಗೆದುಕೊಳ್ಳಬೇಕು.

೫. ಭಾರತೀಯ ನ್ಯಾಯ ಸಂಹಿತೆ, ೨೦೨೩ :

ಧಾರಾ ೩೫೩, ೩೫೪ : ಮಾನ ನಷ್ಟ (Defamation) ಮತ್ತು ಗೌರವಕ್ಕೆ ಧಕ್ಕೆ ತರುವ ಕೃತ್ಯಗಳ ವಿರುದ್ಧ ಕ್ರಿಮಿನಲ್ ಕ್ರಮ.

೬. ಮಾಹಿತಿ ತಂತ್ರಜ್ಞಾನ ಕಾಯ್ದೆ, ೨೦೦೦/೨೦೦೮ :

ದೇಶದ ನ್ಯಾಯಾಲಯಗಳು ವ್ಯಕ್ತಿತ್ವ ಹಕ್ಕು ಬಗ್ಗೆ ಏನು ಹೇಳಿವೆ?

೧. ಆರ್. ರಾಜಗೋಪಾಲ್ vs. ತಮಿಳ್‌ನಾಡು ಸರ್ಕಾರ (೧೯೯೪) — ಸುಪ್ರೀಂ ಕೋರ್ಟ್: ಭಾರತದಲ್ಲಿ ವ್ಯಕ್ತಿತ್ವ ಹಕ್ಕಿನ ಬೀಜ ಬಿತ್ತಿದ್ದೆ ಈ ತೀರ್ಪಿನಿಂದ. “ಒಬ್ಬ ವ್ಯಕ್ತಿಯ ಜೀವನ ಕಥೆಯನ್ನು ಅವರ ಅನುಮತಿ ಇಲ್ಲದೆ ಪ್ರಕಟಿಸಿದರೆ ಗೌಪ್ಯತೆಯ ಉಲ್ಲಂಘನೆ ಆಗುತ್ತದೆ” ಎಂದು ಸ್ಪಷ್ಟಪಡಿಸಿತು.

೨. ಕೆ.ಎಸ್. ಪುಟ್ಟಸ್ವಾಮಿ vs. ಭಾರತ ಸರ್ಕಾರ (೨೦೧೭) — ಸುಪ್ರೀಂ ಕೋರ್ಟ್: ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಸರ್ವಾನುಮತದಿಂದ ತೀರ್ಪು ನೀಡಿತು: “ಗೌಪ್ಯತೆಯ ಹಕ್ಕು ಮೂಲಭೂತ ಹಕ್ಕು.” ಅನುಚ್ಛೇದ ೨೧ರ ಅಡಿ ಪ್ರತಿಯೊಬ್ಬ ನಾಗರಿಕನೂ ತನ್ನ ಗುರುತಿನ ಮೇಲೆ ಹಕ್ಕು ಹೊಂದಿದ್ದಾನೆ ಎಂದು ದೃಢಪಡಿಸಿತು. ಇದು ಎಲ್ಲ ವ್ಯಕ್ತಿತ್ವ ಹಕ್ಕಿನ ಮೊಕದ್ದಮೆಗಳ ಆಧಾರ ಶಿಲೆ.

೩. ಕೃಷ್ಣ ಕಿಶೋರ್ ಸಿಂಗ್ vs. ಸರ್ಲಾ ಎ. ಸರಾಓಗಿ (೨೦೨೧) — ಸುಪ್ರೀಂ ಕೋರ್ಟ್: “ಖ್ಯಾತಿ ಹಕ್ಕು” ಮತ್ತು “ಗೌಪ್ಯತೆ ಹಕ್ಕು” ಎರಡೂ ಪ್ರತ್ಯೇಕ ಎಂದು ಸ್ಪಷ್ಟಪಡಿಸಿತು. ಸಾರ್ವಜನಿಕ ವ್ಯಕ್ತಿಗಳಿಗೂ ಖ್ಯಾತಿ ಹಕ್ಕಿದೆ ಮತ್ತು ಅದು ಅವರ ವಾರಸುದಾರರಿಗೂ ಸಂದಾಯವಾಗಬಹುದು ಎಂದಿತು.

೪. ಅನಿಲ್ ಕಪೂರ್ ಪ್ರಕರಣ (ಸೆಪ್ಟೆಂಬರ್ ೨೦೨೩) — ದೆಹಲಿ ಹೈಕೋರ್ಟ್: ನಟ ಅನಿಲ್ ಕಪೂರ್ ಅವರ ಹೆಸರು, ಮುಖ, ಮತ್ತು “ಝಕಾಸ್!” ಎಂಬ ಅವರ ಸಿಗ್ನೇಚರ್ ಡೈಲಾಗ್ ಅನ್ನು ಅನೇಕ ಇ-ಕಾಮರ್ಸ್ ತಾಣಗಳು ಅನುಮತಿ ಇಲ್ಲದೆ ಬಳಸಿಕೊಂಡಿದ್ದವು. ದೆಹಲಿ ಹೈಕೋರ್ಟ್ ಅದಕ್ಕೆ ತಡೆ ನೀಡಿ ಸ್ಪಷ್ಟಪಡಿಸಿತು: “ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಯಾವುದೇ ವಿಶಿಷ್ಟ ಲಕ್ಷಣವನ್ನು ವಾಣಿಜ್ಯಕ್ಕಾಗಿ ಬಳಸಿಕೊಳ್ಳಬಾರದು — ಅದು ಹಾಸ್ಯ ಅಥವಾ ವ್ಯಂಗ್ಯ ಆಗಿದ್ದರೆ ತಡೆ ಇಲ್ಲ, ಆದರೆ ವಾಣಿಜ್ಯ ಶೋಷಣೆ ಸಲ್ಲ.”

೫. ಅರಿಜಿತ್ ಸಿಂಗ್ vs. ಕೊಡಿಬಲ್ ವೆಂಚರ್ಸ್ (೨೦೨೪) — ಬಾಂಬೆ ಹೈಕೋರ್ಟ್: ಜನಪ್ರಿಯ ಗಾಯಕ ಅರಿಜಿತ್ ಸಿಂಗ್ ಅವರ ಧ್ವನಿಯನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ನಕಲು ಮಾಡಿ ಹಾಡು ತಯಾರಿಸಲು ಅನೇಕ ವೇದಿಕೆಗಳು ಅವಕಾಶ ಮಾಡಿಕೊಟ್ಟಿದ್ದವು. ಬಾಂಬೆ ಹೈಕೋರ್ಟ್ ಇದಕ್ಕೆ ತಡೆ ನೀಡಿ ಐತಿಹಾಸಿಕ ಮಾತು ಹೇಳಿತು: “AI ಪರಿಕರಗಳ ಮೂಲಕ ಇನ್ನೊಬ್ಬರ ಧ್ವನಿ ನಕಲು ಮಾಡಲು ಅವಕಾಶ ಕಲ್ಪಿಸುವ ತಂತ್ರಜ್ಞಾನ ಕಂಪನಿಗಳೂ ಹೊಣೆಗಾರರು.”

ಬೇರೆ ದೇಶಗಳು ಈ ವ್ಯಕ್ತಿತ್ವ ಹಕ್ಕನ್ನು ಹೇಗೆ ಕಾಪಾಡುತ್ತವೆ ?

ಸಾಮಾನ್ಯ ಜನರಿಗೂ ಈ ವ್ಯಕ್ತಿತ್ವ ಹಕ್ಕು ಇದೆಯೇ?

“ಇದೆಲ್ಲ ಸಿನಿಮಾ ಸ್ಟಾರ್‌ಗಳಿಗೆ ಮತ್ತು ಪ್ರಸಿದ್ಧ ವ್ಯಕ್ತಿಗಳಿಗೆ ಮಾತ್ರ ಅಲ್ಲವೇ?” ಎಂದು ಕೇಳಬಹುದು. ಖಂಡಿತ ಇಲ್ಲ! ಒಬ್ಬ ಸಾಮಾನ್ಯ ವ್ಯಕ್ತಿಯ ಫೋಟೊ ತೆಗೆದು ಅದನ್ನು ಯಾರಾದರೂ ಅಶ್ಲೀಲ ಜಾಲತಾಣದಲ್ಲಿ ಹಾಕಿದರೆ — ಅದು ವ್ಯಕ್ತಿತ್ವ ಹಕ್ಕಿನ ಉಲ್ಲಂಘನೆ. ನಿಮ್ಮ ಊರಿನ ವ್ಯಾಪಾರಿ ನಿಮ್ಮ ಫೋಟೊ ಹಾಕಿ ಅದನ್ನು ಜಾಹೀರಾತಾಗಿ ಬಳಸಿದರೆ — ಅದು ಅಪರಾಧ. ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಹೆಸರಿನ ನಕಲಿ ಖಾತೆ ತೆರೆದು ಮೋಸ ಮಾಡಿದರೆ — ಐಟಿ ಕಾಯ್ದೆ ಧಾರಾ ೬೬ಡಿ ಅಡಿ ಶಿಕ್ಷೆ ನೀಡಬಹುದು.

ಈ ವ್ಯಕ್ತಿತ್ವ ಹಕ್ಕಿನ ವ್ಯಾಪ್ತಿ ಏನು?

ನಿಮ್ಮ ವ್ಯಕ್ತಿತ್ವ ಹಕ್ಕು ಈ ಎಲ್ಲ ವಿಷಯಗಳಲ್ಲಿ ರಕ್ಷಿಸಲ್ಪಡುತ್ತದೆ :

ನಿಮ್ಮ ಹಕ್ಕು ಉಲ್ಲಂಘನೆ ಆದರೆ ಏನು ಮಾಡಬೇಕು?

೧. ಪುರಾವೆ ಸಂಗ್ರಹ : ಉಲ್ಲಂಘನೆಯ ಸ್ಕ್ರೀನ್‌ಶಾಟ್, ಲಿಂಕ್, ಅಥವಾ ಇತರ ದಾಖಲೆ ಸಂಗ್ರಹ. ತಾರೀಖು ಮತ್ತು ಸಮಯ ದಾಖಲಿಸಿ.

೨. ನೋಟೀಸ್ ಕಳಿಸಿ : ಕಾನೂನು ತಜ್ಞರ ಮೂಲಕ “Cease and Desist” ನೋಟೀಸ್ ಕಳಿಸಿ — ಇದು ಕಾನೂನು ಕ್ರಮ ತೆಗೆದುಕೊಳ್ಳುವ ಮೊದಲ ಎಚ್ಚರಿಕೆ.

೩. ವೇದಿಕೆಗೆ ದೂರು : ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಅಮೆಜಾನ್ ಮುಂತಾದ ವೇದಿಕೆಗಳಲ್ಲಿ “Report/Flag” ಆಯ್ಕೆ ಮೂಲಕ ದೂರು ಸಲ್ಲಿಸಿ. ಕೃತಿಸ್ವಾಮ್ಯ ಉಲ್ಲಂಘನೆ ಆಗಿದ್ದರೆ “DMCA Takedown” ನೋಟೀಸ್ ಕಳಿಸಬಹುದು.

೪. ಪೊಲೀಸ್ ದೂರು : ಐಟಿ ಕಾಯ್ದೆ ಧಾರಾ ೬೬ಇ ಅಥವಾ ಬಿಎನ್‌ಎಸ್ ಧಾರಾ ೩೫೩ ಅಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ.

೫. ನ್ಯಾಯಾಲಯದ ಮೊರೆ : ಹೈಕೋರ್ಟ್‌ನಲ್ಲಿ ತಡೆ ಆಜ್ಞೆ (Injunction) ಕೋರಿ ಅರ್ಜಿ ಸಲ್ಲಿಸಬಹುದು. ಅತಿ ತ್ವರಿತ ಪರಿಸ್ಥಿತಿಯಲ್ಲಿ “Ex-parte Injunction” — ಅಂದರೆ ಆರೋಪಿಗೆ ಮೊದಲೇ ತಿಳಿಸದೆ ತಡೆ ಕೋರಬಹುದು.

೬. ಪರಿಹಾರ ಕೋರಿ : ಮಾನಸಿಕ ಹಿಂಸೆ, ಖ್ಯಾತಿಗೆ ಹಾನಿ, ಆರ್ಥಿಕ ನಷ್ಟಕ್ಕಾಗಿ ಪರಿಹಾರ ಕೋರಬಹುದು.

ಕೊನೆಯ ಮಾತು :-

ಒಂದು ಕಾಲದಲ್ಲಿ ಮನುಷ್ಯನ ಆಸ್ತಿ ಎಂದರೆ ಮನೆ, ಜಮೀನು, ಹಣ ಎಂದುಕೊಳ್ಳಲಾಗುತ್ತಿತ್ತು, ಆದರೆ ಡಿಜಿಟಲ್ ಯುಗದಲ್ಲಿ ನಿಮ್ಮ ಹೆಸರು, ಮುಖ, ಧ್ವನಿ, ವ್ಯಕ್ತಿತ್ವ — ಇವೆಲ್ಲವೂ ಈಗ ವ್ಯಾಪಾರಿಕ ಮೌಲ್ಯ ಹೊಂದಿವೆ. ನಿಮ್ಮ ವ್ಯಕ್ತಿತ್ವ ಹಕ್ಕುಗಳು ನಿಮ್ಮ ಅನನ್ಯ ಗುರುತಿನ ಭಾಗವಾಗಿದೆ ಮತ್ತು ಅವುಗಳನ್ನು ರಕ್ಷಿಸುವುದು ನಿಮ್ಮ ಹಕ್ಕಾಗಿದೆ. ಆದ್ದರಿಂದ, ಈ ಕುರಿತು ಅರಿವು ಮೂಡಿಸಿಕೊಳ್ಳಿ ಮತ್ತು ಅಗತ್ಯವಿದ್ದಲ್ಲಿ ಕಾನೂನು ಸಹಾಯ ಪಡೆಯಿರಿ. ಭಾರತ ಸರ್ಕಾರ ಈಗ “ಡಿಜಿಟಲ್ ಇಂಡಿಯಾ ಕಾಯ್ದೆ” (Digital India Act) ರೂಪಿಸುತ್ತಿದೆ. ಅದರಲ್ಲಿ ಡೀಪ್‌ಫೇಕ್, AI ವಾಯ್ಸ್ ಕ್ಲೋನಿಂಗ್, ಮತ್ತು ವ್ಯಕ್ತಿತ್ವ ಹಕ್ಕಿಗೆ ಸ್ಪಷ್ಟ ನಿಯಮಗಳು ಬರಲಿವೆ ಎಂಬ ನಿರೀಕ್ಷೆ ಇದೆ.

Exit mobile version