ಕಳೆದ ವಾರ ನನಗೆ ಗೊತ್ತಿರುವ ಹಿರಿಯ ಓದುಗರೊಬ್ಬರು ಕರೆ ಮಾಡಿ, ನನಗೆ ಪೆನ್ಷನ್ ಡೈರೆಕ್ಟೊರೇಟ್ ಸಂಸ್ಥೆಯ ಅಧಿಕಾರಿ ಎಂದು ಗುರುತಿಸಿಕ್ಕೊಂಡ ವ್ಯಕ್ತಿಯೊಬ್ಬರು ಕರೆ ಮಾಡಿ ನಾನು ನಿಮ್ಮ ಜೇವನ ಪ್ರಮಾಣ ಪತ್ರದ ನವೀಕರಣಕ್ಕೆ ಕರೆ ಮಾಡಿದ್ದೇನೆ. ಆ ಕರೆಯಲ್ಲಿ ನನ್ನ ಪೂರ್ಣ ಹೆಸರು, ಪಿಂಚಣಿದಾರರ ಪಾವತಿ ಸಂಖ್ಯೆ, ಆಧಾರ್ ಸಂಖ್ಯೆ, ಅಡ್ರೆಸ್ ಎಲ್ಲ ಸರಿಯಾಗಿ ಹೇಳಿ ಅದನ್ನು ನನ್ನಿಂದ ದೃಡೀಕರಿಸಿ ನಿಮಗೆ ಒಂದು OTP ಬರುತ್ತೆ ಅದನ್ನು ಹೇಳಿ ಎಂದರು. ನೀವು ನಿಮ್ಮ ಲೇಖನಗಳಲ್ಲಿ ಯಾರೊಂದಿಗೂ OTP ಹಂಚಿಕ್ಕೊಳ್ಳಬೇಡಿ ಎಂದು ಬರೆದಿದ್ದು ಜ್ಞಾಪಕ ಬಂದು ಅವರಿಗೆ ನನ್ನ ದೂರವಾಣಿಗೆ OTP ಬಂದರು ನನಗೆ ಬಂದಿಲ್ಲ, ನಂತರ ಕರೆ ಮಾಡಲು ಹೇಳಿ ನಿಮಗೆ ಕರೆ ಮಾಡಿದ್ದೇನೆ, ನಾನು ಅವರಿಗೆ OTP ಕೊಡುವುದರಿಂದ ಏನು ತೊಂದರೆಯಾಗುವುದಿಲ್ಲವಾ ಎಂದು ಕೇಳಿದರು. ನಾನು ಆ OTP ಯನ್ನು ನನಗೆ ಕಳಿಸಲು ಹೇಳಿದೆ, ಅದರಲ್ಲಿ 27000 ಹಣ ವರ್ಗಾವಣೆ ಬಗ್ಗೆ ಬರೆದಿತ್ತು ಅದನ್ನು ಕೂಡಲೇ ಅವರಿಗೆ ತಿಳಿಸಿದೆ. ಈ ತರಹದ ಸೋಶಿಯಲ್ ಇಂಜಿನಿಯರಿಂಗ್ ಸೈಬರ್ ಅಪರಾಧಗಳು ತುಂಬ ಜಾಸ್ತಿಯಾಗುತ್ತಿವೆ, ಇದು ಅದರ ಒಂದು ನವೀನ ಮಾದರಿಯಷ್ಟೇ. ಇದರ ಬಗ್ಗೆ ಸುದೀರ್ಘವಾಗಿ ಹಿಂದೊಮ್ಮೆ ಬರೆದಿದ್ದೆ ಅದನ್ನು ನೀವು ಖಂಡಿತವಾಗಿ ಓದಿ.
ಅಂತರ್ಜಾಲದಲ್ಲಿ ಈ ಬಗೆಯ ಸೈಬರ್ ಅಪರಾಧಗಳ ಬಗ್ಗೆ ಹುಡುಕಿದಾಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಉತ್ತರ ಪ್ರದೇಶದ ರಾಜಧಾನಿಯಾದ ಲಕ್ನೋನ ಪೊಲೀಸರು ಈ ಸೈಬರ್ ಅಪರಾಧದ ಬಗ್ಗೆ ಪತ್ರಿಕೆಯಲ್ಲಿ ಕೊಟ್ಟ ಎಚ್ಚರಿಕೆ ವರದಿಯೊಂದು ಸಿಕ್ಕಿತು. ಅದರ ಪ್ರಕಾರ ಭಾರತಾದ್ಯಂತ ಪಿಂಚಣಿದಾರರಿಗೆ, ಅವರ ಜೇವನ ಪ್ರಮಾಣ ಪತ್ರದ ನವೀಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಅಪರಾಧಿಗಳಿಂದ ಅನೇಕ ಕರೆಗಳು ಬಂದಿವೆ ಮತ್ತು ಅದಕ್ಕೆ ಅನೇಕ ಹಿರಿಯ ನಾಗರಿಕರು ಬಲಿಯಾಗಿ ತಮ್ಮ ಅತ್ಯಮೂಲ್ಯ ಉಳಿತಾಯದ ಹಣವನ್ನು ಕಳೆದುಕ್ಕೊಂಡಿದ್ದರು. ಆಶ್ಚರ್ಯದ ಸಂಗತಿಯೇನೆಂದರೆ ಆ ಖದೀಮರ ಬಳಿ ಪಿಂಚಣಿದಾರರ ಪೂರ್ಣ ಹೆಸರು, ಪಿಂಚಣಿ ಪಾವತಿ ಸಂಖ್ಯೆ, ಆಧಾರ್ ಸಂಖ್ಯೆ, ಅಡ್ರೆಸ್, ನಿವೃತ್ತಿ ಹೊಂದಿದ ದಿನಾಂಕ, ಇಮೇಲ್ ವಿಳಾಸ, ಪಿಂಚಣಿ ಮೊತ್ತ ಮುಂತಾದ ಖಾಸಗಿ ಮಾಹಿತಿಯಿರುತ್ತದೆ, ಅದನ್ನು ಬಳಸಿ ಅವರು ತಾವು ಪಿಂಚಣಿ ಇಲಾಖೆಯಿಂದ ಅಥವಾ ಪೆನ್ಷನ್ ಡೈರೆಕ್ಟೊರೇಟ್ ಸಂಸ್ಥೆಯಿಂದ ಕರೆ ಮಾಡುತ್ತಿದ್ದೇನೆ ಎಂದು ಹೇಳಿ ಅವರ ನಂಬಿಕೆ ಗಳಿಸಿ ಅಥವಾ ನೀವು ಸಹಕರಿಸದಿದ್ದರೆ ನಿಮ್ಮ ಪಿಂಚಣಿ ಮೊತ್ತ ಬರುವುದು ನಿಲ್ಲುತ್ತದೆ ಅಥವಾ ಪಿಂಚಣಿ ಖಾತೆ ಬಂಧಾಗುತ್ತದೆ ಎಂದು ಹೆದರಿಸಿ ಅವರನ್ನು ವಂಚಿಸುತ್ತಾರೆ. ಇನ್ನೊಂದು ಸಂಬಂದಿತ ವಂಚನಾ ಮಾದರಿ ಪ್ರಕಾರ ಪಿಂಚಣಿದಾರರಿಗೆ sms, ಇಮೇಲ್ ಅಥವಾ ವಾಟ್ಸಪ್ಪ್ ಸಂದೇಶ ಬರುತ್ತದೆ, ಅದರಲ್ಲಿ ನೀವು http://jeevanpraman.online ಜಾಲತಾಣದಲ್ಲಿ ಮನೆಯಲ್ಲೇ ಕುಳಿತು ನಿಮ್ಮ ಜೀವನ ಪ್ರಮಾಣ ಪತ್ರವನ್ನು ಡಿಜಿಟಲೀ ಪಡೆಯಬಹುದು ಎಂದಿರತ್ತದೆ. ನೀವೇನಾದರು ಆ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ನಿಮ್ಮ ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್ ಹ್ಯಾಕ್ ಆಗಬಹುದು ಅಥವಾ ಆ ಜಾಲತಾಣದಲ್ಲಿ ನೀವು ಕೊಡುವ ನಿಮ್ಮ ಖಾಸಗಿ ಮಾಹಿತಿಯನ್ನು ನಿಮ್ಮನ್ನು ವಂಚಿಸಲು ಸೈಬರ್ ಖದೀಮರು ಬಳಸುತ್ತಾರೆ.
ಜೀವನ ಪ್ರಮಾಣ ಪತ್ರ ವಂಚನೆಯಿಂದ ರಕ್ಷಿಸಿಕೊಳ್ಳಲು ನೀವು :-
- ಎಲ್ಲಾ ಡಿಜಿಟಲ್ ವಹಿವಾಟುಗಳಿಗೆ ‘ಶೂನ್ಯ ಟ್ರಸ್ಟ್, ತಾಳ್ಮೆ ಮತ್ತು ದೃಢೀಕರಣ’ ತತ್ವವನ್ನು ಯಾವಾಗಲೂ ಅನುಸರಿಸಿ, ಮೂಲಭೂತವಾಗಿ ಪರಿಶೀಲನೆಯ ನಂತರವೇ ಪ್ರತಿಕ್ರಿಯಿಸಿ.
- ಯಾವ ಪಿಂಚಣಿ ಅಥವಾ ಪೆನ್ಷನ್ ಡೈರೆಕ್ಟೊರೇಟ್ ಇಲಾಖೆಯಿಂದಲು ಕರೆ ಬಂದರು, ನೀವು ಯಾವುದೇ ಖಾಸಗಿ ಮಾಹಿತಿ ಅಥವಾ OTP ಹಂಚಿಕ್ಕೊಳ್ಳಬೇಡಿ.
- ಜೀವನ ಪ್ರಮಾಣ ಪತ್ರ ಕುರಿತು ಯಾವುದೇ ಪ್ರಶ್ನೆಗಳಿಗೆ, ನಿಮ್ಮ ಬ್ಯಾಂಕ್ ಅಥವಾ ಅಧಿಕೃತ ಪಿಂಚಣಿ ಇಲಾಖೆ (CPAO) ವೆಬ್ಸೈಟ್ ಅನ್ನು ಸಂಪರ್ಕಿಸಿ.
- ಅಪರಿಚಿತರು ಕಳುಹಿಸಿದ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ ಅಥವಾ ಯಾವುದೇ ಅಪ್ಲಿಕೇಶನ್ ಅನ್ನು ಸ್ಥಾಪಿಸಬೇಡಿ.
- ಆಧಾರ್ ಅಥವಾ ಪ್ಯಾನ್ ವಿವರಗಳು ಅಥವಾ ನಿಮ್ಮ ಬ್ಯಾಂಕ್ ಖಾತೆ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳಂತಹ ವೈಯಕ್ತಿಕ ಸೂಕ್ಷ್ಮ ಮಾಹಿತಿಯನ್ನು ಎಂದಿಗೂ ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ.
ಜೀವನ ಪ್ರಮಾಣ ಪತ್ರ ವಂಚನೆಗೆ ನೀವು ಬಲಿಯಾಗಿದ್ದರೆ :-
ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ವೆಬ್ಸೈಟ್ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ನೀವು ಆಧಾರ್ ಕಾರ್ಡ್ ಮಾಹಿತಿ ಅಥವಾ ನಕಲು ಪ್ರತಿಯನ್ನು ಹಂಚಿಕೊಂಡಿದ್ದರೆ, ನಿಮ್ಮ ಆಧಾರ್ ಕಾರ್ಡ್ ಅನ್ನು ಆಧಾರ್ ವೆಬ್ಸೈಟ್ ಅಥವಾ mAadhaar ಅಪ್ಲಿಕೇಶನ್ನಲ್ಲಿ ನಿರ್ಬಂಧಿಸಿ. ನಿಮ್ಮ ಸಾಧನವು ಮಾಲ್ವೇರ್ ಸೋಂಕಿಗೆ ಒಳಗಾಗಿದೆ ಎಂದು ನೀವು ಭಾವಿಸಿದರೆ, ಅದನ್ನು ಬ್ಯಾಕಪ್ ತೆಗೆದುಕೊಂಡ ನಂತರ ಫಾರ್ಮ್ಯಾಟ್ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.
ಜೀವನ ಪ್ರಮಾಣ ಪತ್ರ ವಂಚನೆ ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಪರಿಹಾರಗಳು :-
ನಿಮ್ಮ ಹತ್ತಿರದ ಸೈಬರ್ ಅಥವಾ ಸಾಮಾನ್ಯ ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ನೀವು ಕ್ರಿಮಿನಲ್ ಪ್ರಕರಣವನ್ನು ಈ ಕೆಳಗಿನ ಕಾನೂನು ಸೆಕ್ಷನ್ ಅಥವಾ ನಿಮ್ಮ ಪ್ರಕರಣದ ಆಧಾರದ ಮೇಲೆ ಪೊಲೀಸರು ಸೂಚಿಸಿದ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಿಸಬಹುದು :
- ಭಾರತೀಯ ನ್ಯಾಯ ಸಂಹಿತ (BNS) ಸೆಕ್ಷನ್ 303(ಕಳ್ಳತನ), 319 (ಸೋಗು ಹಾಕುವ ಮೂಲಕ ವಂಚನೆಗೆ ಶಿಕ್ಷೆ) 336ಮತ್ತು 318 (ವಂಚನೆ), ಸೆಕ್ಷನ್ 323(ಕಾನೂನುಬಾಹಿರವಾಗಿ ಡೇಟಾವನ್ನು ಹೊರತೆಗೆಯುವುದು), ಸೆಕ್ಷನ್ 329(ಕ್ರಿಮಿನಲ್ ಅತಿಕ್ರಮಣ), ಸೆಕ್ಷನ್ 338 (ಫೋರ್ಜರಿ), ಸೆಕ್ಷನ್ 337( ಫೋರ್ಜರಿ/ನಕಲಿಗಾಗಿ ಶಿಕ್ಷೆ), ಮತ್ತು ಸೆಕ್ಷನ್ 340 (ಫೋರ್ಜರಿ/ನಕಲಿ ದಾಖಲೆಯ ಬಳಕೆ).
- ಮಾಹಿತಿ ತಂತ್ರಜ್ಞಾನ ಕಾಯಿದೆ (IT) ಕಾಯಿದೆ 2000/08 ಸೆಕ್ಷನ್ 43 (ಕಂಪ್ಯೂಟರ್, ಕಂಪ್ಯೂಟಿಂಗ್ ಸಾಧನ ಇತ್ಯಾದಿಗಳಿಗೆ ಹಾನಿಗಾಗಿ ದಂಡ ಮತ್ತು ಪರಿಹಾರ), ಸೆಕ್ಷನ್ 65 (ಕಂಪ್ಯೂಟರ್ ಅನ್ನು ಹಾಳುಮಾಡುವುದು), ಸೆಕ್ಷನ್ 66 (ಕಂಪ್ಯೂಟರ್ ಸಂಬಂಧಿತ ಅಪರಾಧಗಳಿಗೆ ಶಿಕ್ಷೆ – ಡೇಟಾ ಕಳ್ಳತನ ಮಾಡುವ ವ್ಯಕ್ತಿ, ಸಿಸ್ಟಮ್ಗೆ ವೈರಸ್ ಹರಡುವುದು, ಡೇಟಾ ನಾಶಪಡಿಸುವುದು, ಹ್ಯಾಕಿಂಗ್ , ಅಥವಾ ಅಧಿಕೃತ ವ್ಯಕ್ತಿಗೆ ಕಂಪ್ಯೂಟರ್ ಅಥವಾ ನೆಟ್ವರ್ಕ್ಗೆ ಪ್ರವೇಶವನ್ನು ನಿರಾಕರಿಸುವುದು), ಸೆಕ್ಷನ್ 66C (ಇದು ಗುರುತಿನ ಕಳ್ಳತನಕ್ಕೆ ದಂಡವನ್ನು ಸೂಚಿಸುತ್ತದೆ ಮತ್ತು ವ್ಯಕ್ತಿಯ ಗುರುತಿನ ಮಾಹಿತಿಯನ್ನು ಮೋಸದಿಂದ ಅಥವಾ ಅಪ್ರಾಮಾಣಿಕವಾಗಿ ಬಳಸುವುದು) ಮತ್ತು ಸೆಕ್ಷನ್ 66D (ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ಸೋಗು ಹಾಕುವ ಮೂಲಕ ಮಾಡಿದ ವಂಚನೆಗೆ ಶಿಕ್ಷೆ).