AI (ಕೃತಕ ಬುದ್ಧಿಮತ್ತೆ) ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಷಯವಾಗಿದೆ ಏಕೆಂದರೆ ಇದು ಎಲ್ಲಾ ಕ್ಷೇತ್ರಗಳಲ್ಲಿ ಉಂಟುಮಾಡಬಹುದಾದ ಪರಿಣಾಮವು ಹಾಗೆ ಅಗಾಧವಾಗಿದೆ. ಪ್ರಸಿದ್ಧ ಸಂಸ್ಥೆ OpenAI ಪ್ರಕಟಿಸದ “AI ನ ದುರುದ್ದೇಶಪೂರಿತ ಬಳಕೆಗಳನ್ನು ಅಡ್ಡಿಪಡಿಸುವುದು ಹೇಗೆ : ಜೂನ್ 2025” ಎಂಬ ಲೇಖನವನ್ನು ಓದಿದಾಗ ಅದರಲ್ಲಿರುವ ಕೆಲವು ವಿಷಯಗಳು ನನ್ನನ್ನು ಅಚ್ಚರಿಗೊಳಿಸಿತು, ಅದನ್ನು ನಿಮಗೆಲ್ಲಾ ತಿಳಿಸಬೇಕೆನಿಸಿತು. OpenAI ಸಂಸ್ಥೆ ನಾವೆಲ್ಲಾ ಒಮ್ಮೆಯಾದರೂ ಬಳಸಿರುವ ಪ್ರಸಿದ್ಧ ChatGPTಯನ್ನು ರಚಿಸಿದ ಸಂಸ್ಥೆಯಾಗಿರುತ್ತದೆ. AI ಒಂದು ಚಾಕುವಿನಂತೆ, ಇದನ್ನು ಮಾನವೀಯತೆಯ ಪ್ರಯೋಜನಕ್ಕಾಗಿ ಅಥವಾ ಹಾನಿ ಮಾಡಲು ಅಥವಾ ಈ ಲೇಖನದಲ್ಲಿ ಚರ್ಚಿಸಿದಂತೆ ಸೈಬರ್ ಅಪರಾಧದ ಸಾಮರ್ಥ್ಯ, ವ್ಯಾಪ್ತಿ ಮತ್ತು ಪ್ರಮಾಣವನ್ನು ಹೆಚ್ಚಿಸಲು ಬಳಸಬಹುದು. ಈ OpenAI ಲೇಖನದಲ್ಲಿ, ಸೈಬರ್ ಅಪರಾಧಗಳ ವಿಭಿನ್ನ ನಿದರ್ಶನಗಳಾದ – ಸೈಬರ್ ಬೇಹುಗಾರಿಕೆ, ನಕಲಿ ಉದ್ಯೋಗ ಯೋಜನೆಗಳು ಮತ್ತು AI ಬಳಸಿ ಮಾಡಿದ ಇತರ ಸೈಬರ್ ಹಗರಣಗಳ ಬಗ್ಗೆ ಮತ್ತು ಅವುಗಳನ್ನು ಅಡ್ಡಿಪಡಿಸಲು OpenAI ಏನು ಮಾಡುತ್ತಿದೆ ಎಂಬುದರ ಕುರಿತು ಮಾತನಾಡುತ್ತದೆ. ಆಸಕ್ತಿದಾಯಕರು ನನ್ನ ಹಿಂದಿನ ಲೇಖನಗಳಲ್ಲಿ, ದೇಶಗಳು ಸೈಬರ್ ಭಯೋತ್ಪಾದನೆಗಾಗಿ AI ಅನ್ನು ಹೇಗೆ ಬಳಸಲಾಗಿದೆ, ನವೀನ ಅಥವಾ ಸುಧಾರಿತ ಸೈಬರ್ ವಂಚನೆಗಳಿಗಾಗಿ ವಂಚಕರು AI ಬಳಸಿ ಹೇಗೆ ವಂಚಿಸುತ್ತಾರೆ ಎಂಬುದನ್ನು ತಿಳಿಯಲು ನೀವು ChatGPT ಅಪರಾಧಗಳು ಅಂಕಣ ದಲ್ಲಿ ಓದಬಹುದು. ಆ ಲೇಖನದಲ್ಲಿರುವ ಕೆಲವು ಅಪರಾಧಗಳನ್ನು, ಆ ಅಪರಾಧಕ್ಕೆ AI ಅನ್ನು ಹೇಗೆ ಬಳಸಲಾಯಿತು ಮತ್ತು ಅಂತಹ ಅಪರಾಧದ ಹಿಂದೆ ಯಾವ ದೇಶವಿದೆ ಎಂಬುದನ್ನು ನಾನು ಕೆಳಗೆ ತಿಳಿಸಿಕೊಡಲಿದ್ದೇನೆ.
AI ಬಳಸಿ ಮಾಡಿದ ಸೈಬರ್ ಅಪರಾಧಗಳು :-
- ನಕಲಿ ಉದ್ಯೋಗ ಯೋಜನೆಗಳು : ಇಲ್ಲಿ ChatGPT ಅನ್ನು ನಕಲಿ ಉದ್ಯೋಗಿಗಳನ್ನು ತಯಾರು ಮಾಡಲು ಬಳಸಲಾಗುತ್ತಿತ್ತು, ಉದಾಹರಣೆಗೆ ಅವರ ಶೈಕ್ಷಣಿಕ ಹಿನ್ನೆಲೆಗಳು, ಪ್ರಮುಖ ಕಂಪನಿಗಳಲ್ಲಿ ನಕಲಿ ಉದ್ಯೋಗ ಚರಿತ್ರೆಗಳು ಮತ್ತು ಉಲ್ಲೇಖಗಳನ್ನು ಹೊಂದಿರುವ ನಕಲಿ ರೆಸ್ಯೂಮ್‌ಗಳನ್ನು ರಚಿಸುವುದು. ಅದನ್ನು ಅಮೇರಿಕಾದಲ್ಲಿ ಮನೆಯಿಂದ ಕೆಲಸ ಅಥವಾ ರಿಮೋಟ್ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಬಳಸಲಾಗುತ್ತಿತ್ತು. ನಂತರ ChatGPT ಅನ್ನು ನೇಮಕಾತಿ ಪರೀಕ್ಷೆಗಳಿಗೆ ಉತ್ತರಿಸಲು (ಉದಾಹರಣೆಗೆ ಕೋಡಿಂಗ್ ನಿಯೋಜನೆಗಳು ಮತ್ತು ನೈಜ ಸಮಯದ ಸಂದರ್ಶನ ಪ್ರಶ್ನೆಗಳನ್ನು ಉತ್ತರಿಸಲು) ಬಳಸುತ್ತಿದ್ದರು. ಅವರು ಉದ್ಯೋಗಗಳನ್ನು ಪಡೆದಿರುವುದನ್ನು ಗಮನಿಸಲಾಯಿತು ಮತ್ತು ಸಂಸ್ಥೆ ನೀಡಲಾದ ಲ್ಯಾಪ್‌ಟಾಪ್‌ಗಳನ್ನು ಜಿಯೋಲೋಕಲೈಸೇಶನ್ ಮಾಸ್ಕಿಂಗ್ ಮತ್ತು ಎಂಡ್‌ಪಾಯಿಂಟ್ ಭದ್ರತಾ ತಪ್ಪಿಸಿಕೊಳ್ಳುವ ವಿಧಾನಗಳಿಂದ ಸಂಸ್ಥೆಗೆ ತಾವು ದೇಶೀಯವಾಗಿ ನೆಲೆಗೊಂಡಿರುವಂತೆ ಬಿಂಬಿಸಲು ಬೇಕಾಗುವ ಹಾಗೆ ಕಾನ್ಫಿಗರ್ ಮಾಡಲು ChatGPT ಅನ್ನು ಬಳಸುತ್ತಿದ್ದರು. ಇದರ ಹಿಂದಿರುವ ದೇಶವು ಉತ್ತರ ಕೊರಿಯಾ ಎಂದು ಪತ್ತೆಯಾಗಿದ್ದು, ಇದೊಂದು ಸೈಬರ್ ಬೇಹುಗಾರಿಕೆಯಾಗಿರಬಹುದು ಎಂದು ಊಹಿಸಲಾಗಿದೆ. OpenAI ಆ ಬಳಕೆದಾರರನ್ನು ನಿಷ್ಕ್ರಿಯಗೊಳಿಸಿತು ಮತ್ತು ಅಲ್ಲಿ ಬಳಸಿದ ಪ್ರಾಂಪ್ಟ್‌ಗಳನ್ನು ಪತ್ತೆಹಚ್ಚಲು ಮತ್ತು ಅವುಗಳನ್ನು ಫಿಲ್ಟರ್ ಮಾಡಲು, ನಂತರದ ಆವೃತ್ತಿಗಳಲ್ಲಿ ChatGPT ಮಾಡ್ಯೂಲ್‌ಗಳಿಗೆ ಬೇಕಾಗುವ ತರ್ಕವನ್ನು ಸೇರಿಸಿದೆ. ನನ್ನ ಹಿಂದಿನ ಲೇಖನ ಒಂದರಲ್ಲಿ, ವಿಶ್ವಾಸಾರ್ಹ ಉದ್ಯೋಗ ಜಾಹೀರಾತುಗಳು, ಉದ್ಯೋಗ ಆಫರ್ ಪತ್ರಗಳು ಮತ್ತು ಇಮೇಲ್‌ಗಳನ್ನು ನೀಡುವ ಮೂಲಕ ಜನರನ್ನು ವಂಚಿಸಲು AI ಅನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಕುರಿತು ನಾನು ತಿಳಿಸಿಕೊಟ್ಟಿದ್ದೆ.
- ಸಾಮಾಜಿಕ ಮಾಧ್ಯಮ ಪ್ರಚಾರ ಹಗರಣಗಳು: ಇಲ್ಲಿ AI ಸಹಾಯದಿಂದ ರಚಿಸಲಾದ ನಕಲಿ ಚಿತ್ರಗಳು/ವೀಡಿಯೊಗಳೊಂದಿಗೆ ChatGPT ಸಹಾಯದಿಂದ ರಚಿಸಲಾದ ವಿವರವಾದ ಲೇಖನಗಳು, ಅಭಿಪ್ರಾಯ ತುಣುಕುಗಳು, ಕಾಮೆಂಟ್‌ಗಳು ಇತ್ಯಾದಿಗಳನ್ನು, ತಮಗೆ ಸರಿ ಹೊಂದುವ ವಿಷಯಗಳನ್ನು ಬೆಂಬಲಿಸುವುದು ಅಥವಾ ತಮ್ಮ ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ಪರಿಣಾಮ ಬೀರುವ ವಿಷಯಗಳನ್ನು ವಿರೋಧಿಸುವುದಕ್ಕೆ Twitter/X, TikTok, Reddit, Instagram ಮತ್ತು FaceBook ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಳಸಲಾಗುತಿತ್ತು. OpenAI ಲೇಖನದಲ್ಲಿ USAID, ತೈವಾನ್‌ನ ಪ್ರಸಿದ್ಧ ಕಂಪ್ಯೂಟರ್ ಆಟ ರಿವರ್ಸ್ಡ್ ಫ್ರಂಟ್ ಮತ್ತು ಬಲೂಚಿಸ್ತಾನದಲ್ಲಿ ಚೀನಾದ ಚಟುವಟಿಕೆಗಳನ್ನು ವಿರೋದಿಸುವ ಪಾಕಿಸ್ತಾನಿ ಬಲೂಚ್ ಕಾರ್ಯಕರ್ತೆ ಮಹ್ರಾಂಗ್ ಬಲೂಚ್ ಅವರನ್ನು ವಿರೋಧಿಸುವ ಲೇಖನಗಳಂತ ಕೆಲವು ಉದಾಹರಣೆಗಳಲ್ಲಿ ಸೇರಿವೆ. ಇದರಲ್ಲಿ ಒಳಗೊಂಡಿರುವ ಹೆಚ್ಚಿನ ಹ್ಯಾಂಡಲ್‌ಗಳನ್ನು ಚೀನಾಕ್ಕೆ ಸೇರಿದವೆಂದು ಪತ್ತೆಹಚ್ಚಲಾಗಿದೆ. ಇದನ್ನು ಅಡ್ಡಿಪಡಿಸಲು, OpenAI ಸಂಬಂಧಪಟ್ಟ ಖಾತೆಗಳನ್ನು ನಿಷೇಧಿಸಿದೆ ಮತ್ತು ಅಂತಹ ಸೂಚನೆಗಳನ್ನು ಪತ್ತೆಹಚ್ಚಿ ಅವುಗಳನ್ನು ನಿರ್ಬಂಧಿಸಲು ChatGPT AI ಮಾಡೆಲ್ ಅನ್ನು ಟ್ಯೂನ್ ಮಾಡುತ್ತಿದೆ. ಭಾರತದಲ್ಲಿ ಆಪರೇಷನ್ ಸಿಂಧೂರ್, ರೈತರ ಪ್ರತಿಭಟನೆಗಳು, WAQF ತಿದ್ದುಪಡಿ ಮಸೂದೆ ಮತ್ತು ಇತರ ಸಮಯಗಳಲ್ಲಿ ಇದೇ ರೀತಿಯ ನಕಲಿ ಸುದ್ದಿಗಳು, ಚಿತ್ರಗಳು, ವೀಡಿಯೊಗಳು, ಲೇಖನಗಳು ಮತ್ತು ಅಭಿಪ್ರಾಯ ತುಣುಕುಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಾವೆಲ್ಲಾ ಕಂಡಿದ್ದೇವೆ.
- ಸೈಬರ್ ಬೇಹುಗಾರಿಕೆ : ಈ ಪ್ರಕರಣದಲ್ಲಿ ಚೀನಾ ಮೂಲದ ಕೆಲವು ವ್ಯಕ್ತಿಗಳು, ತಮ್ಮನ್ನು ಟರ್ಕಿ ಮತ್ತು ಇತರ ಯುರೋಪ್ ಮೂಲದ ಸುದ್ದಿ ಸಂಸ್ಥೆ ಅಥವಾ ಜಿಯೋಪಾಲಿಟಿಕಲ್ ಸಂಸ್ಥೆಯೆಂದು ಗುರುತಿಸಿಕ್ಕೊಂಡು ಅಮೆರಿಕಾದ ಪ್ರಮುಖ ಆರ್ಥಿಕ ಹಾಗು ಹಣಕಾಸು ತಜ್ಞರಿಂದ ಗುಪ್ತ(ಕ್ಲಾಸಿಫೈಡ್) ಮಾಹಿತಿಯನ್ನು ಪಡೆಯಲು OpenAI ಸಂಸ್ಥೆಯ ChatGPTಯನ್ನು ಬಳಸಿದ್ದರು. ಈ ಸೈಬರ್ ಅಪರಾಧಗಳಲ್ಲಿ ಪ್ರಮುಖವಾಗಿ ಸೋಶಿಯಲ್ ಇಂಜಿನಿಯರಿಂಗ್ ತಂತ್ರವನ್ನು ಬಳಸಿದ್ದರು ಎಂದು ಗೊತ್ತಾಗಿದೆ, ಈ ತಂತ್ರದ ಬಗ್ಗೆ ಹಿಂದೊಮ್ಮೆ ನನ್ನ ಲೇಖನದಲ್ಲಿ ವಿಸ್ತಾರವಾಗಿ ಬರೆದಿದ್ದೆ. ಇಲ್ಲಿ ChatGPT ಯನ್ನು ಚೀನಾ ಭಾಷೆಯಿಂದ ಆಂಗ್ಲ ಭಾಷೆಗೆ ಅನುವಾದ ಮಾಡಲು, ಅಭಿಪ್ರಾಯ ಲೇಖನಗಳನ್ನು ಅಥವಾ ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ರಚಿಸಲು, ಸಂಬಂಧಿತ ಜಾಲತಾಣಗಳನ್ನು ರಚಿಸಲು ಬಳಸಲಾಯಿತು ಎಂದು ತನಿಖೆಯಲ್ಲಿ ತಿಳಿದುಬರುತ್ತದೆ. ಇದಲ್ಲದೆ ಇಲ್ಲಿ ನಕಲಿ ಸಾಮಾಜಿಕ ಮಾಧ್ಯಮ ಪ್ರಚಾರಗಳನ್ನು ಮಾಡಲು ಮತ್ತು ಬೇಹುಗಾರಿಕೆಗಾಗಿ ಸ್ಥಳೀಯ ವ್ಯಕ್ತಿಗಳನ್ನು ನೇಮಕಾತಿ ಮಾಡಲು ಕೂಡ ChatGPT ಯನ್ನು ಬಳಸಲಾಗಿತ್ತು. ಈ ತರಹದ ವರ್ತನೆಗಳು ಭಾರತದಲ್ಲೂ ನಡೆದಿರಬಹುದು, ಅಂತಹ ಕೆಲವು ಬೇಹುಗಾರಿಕೆ ನಡೆಸುತ್ತಿದ್ದ ವ್ಯಕ್ತಿಗಳನ್ನು ಇತ್ತೀಚಿನ ಆಪರೇಷನ್ ಸಿಂದೂರ್ ನಂತರ ಬಂಧಿಸಿದ್ದು ನಮೆಗೆಲ್ಲ ಗೊತ್ತಿದ್ದ ವಿಷಯವೇ. ಇದನ್ನು ನಿಷ್ಕ್ರಿಯಗೊಳಿಸಲು ಮತ್ತು ಮುಂದೆ ಹೀಗೆ ChatGPTಯ ದುರ್ಬಳಕೆ ತಡೆಯಲು OpenAI ಸಂಸ್ಥೆ ಸಂಬಂಧಪಟ್ಟ ಯೂಸರ್ ಅಕೌಂಟ್ ಗಳನ್ನು ನಿರ್ಬಂದಿಸಲಾಯಿತು ಮತ್ತು ChatGPTಯ ಅಲ್ಗೊರಿಥಮ್ ಗಳನ್ನು ಟ್ಯೂನ್ ಮಾಡಲಾಯಿತು.
- ಚುನಾವಣೆ ರಿಗ್ಗಿಂಗ್/ಮೋಸಗಳು : ಜೆರ್ಮನಿಯ 2025 ರ ಚುನಾವಣೆಯನ್ನು ರಿಗ್ ಅಥವಾ ಚುನಾವಣೆಯ ಪಲಿತಾಂಶವನ್ನು ತಮಗೆ ಬೇಕಾದ ಹಾಗೆ ಬದಲಿಸಲು OpenAI ಸಂಸ್ಥೆಯ ChatGPTಯನ್ನು ಬಳಸಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ. ಈ ಸೈಬರ್ ಕಾರ್ಯಾಚರಣೆಯಲ್ಲಿ ಚುನಾವಣೆ ಪಲಿತಾಂಶವನ್ನು ಬದಲಿಸಲು ಅಥವಾ ತಮಗೆ ಬೇಕಾದ ಅಭ್ಯರ್ಥಿ/ಪಕ್ಷವನ್ನು ಗೆಲ್ಲಿಸಲು ಅಥವಾ ಸೋಲಿಸಲು, ಆ ಅಭ್ಯರ್ಥಿ/ಪಕ್ಷಗಳ ಬಗ್ಗೆ ಮಾಹಿತಿ/ಸುದ್ದಿ ಸಂಗ್ರಹಿಸಲು ಮತ್ತು ಅದನ್ನು ಬಳಸಿ ತಮ್ಮ ಉದ್ದೇಶಕ್ಕೆ ಪೂರಕಯಾದ ನಕಲಿ ಸುದ್ದಿ, ಚಿತ್ರ ಮತ್ತು ವಿಡಿಯೋಗಳನ್ನು ಸೃಷ್ಟಿಸಲು OpenAI ಸಂಸ್ಥೆಯ ChatGPTಯನ್ನು ಬಳಸಿದ್ದರು. ಅದನ್ನು ಜೆರ್ಮನಿ ಸಂಬಂದಿತ Twitter/X, TikTok, Reddit, Instagram ಮತ್ತು FaceBook ನಂತಹ ಸಾಮಾಜಿಕ ಮಾಧ್ಯಮ ಗ್ರೂಪ್ ಗಳಲ್ಲಿ ಹರಿದುಬಿಡಲಾಯಿತು. ಇಷ್ಟಲ್ಲದೇ ಪ್ರಭಾವಿ ವ್ಯಕ್ತಿಗಳ ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಗಳನ್ನು ರಚಸಿ ಜೆರ್ಮನಿಯ ಮತದಾರರ ಅಭಿಪ್ರಾಯವನ್ನು ಬದಲಿಸಲು ಅಥವಾ ರಚಿಸಲು ಅಥವಾ ಧ್ರುವೀಕರಿಸಲು ಕೂಡ OpenAI ಸಂಸ್ಥೆಯ ChatGPTಯನ್ನು ಬಳಸಲಾಗಿತ್ತು. ಈ ಎಲ್ಲ ಕೆಲಸಗಳ ಹಿಂದಿರುವ ಯೂಸರ್ ಹ್ಯಾಂಡಲ್ ಅಥವಾ ಕಂಪ್ಯೂಟರ್ ಉಪಕರಣಗಳು/ನೆಟ್ವರ್ಕ್ಗಳು ತನಿಖೆಯಲ್ಲಿ ರಷ್ಯಾ ದೇಶಕ್ಕೆ ಟ್ರೇಸ್ ಮಾಡಲಾಯಿತು. ಇದೆ ತರಹದ ಚುನಾವಣಾ ಕಾರ್ಯಾಚರಣೆಗಳು ಕೆನಡಾ, ಅಮೇರಿಕ ಮತ್ತು ನಮ್ಮ ಭಾರತದಲ್ಲೂ ನಡೆಸಲಾಗಿತ್ತು ಎಂಬ ಸುದ್ದಿಗಳನ್ನು ನಾವೆಲ್ಲಾ ಅನೇಕ ಬಾರಿ ಕೇಳಿದ್ದೇವೆ/ನೋಡಿದ್ದೇವೆ. ಇದನ್ನು ನಿಷ್ಕ್ರಿಯಗೊಳಿಸಲು ಮತ್ತು ಮುಂದೆ ಹೀಗೆ ChatGPTಯ ದುರ್ಬಳಕೆ ತಡೆಯಲು OpenAI ಸಂಸ್ಥೆ ಸಂಬಂಧಪಟ್ಟ ರಶಿಯಾ ಮೂಲದ ಅಕೌಂಟ್ ಗಳನ್ನು ನಿರ್ಬಂದಿಸಲಾಯಿತು ಮತ್ತು ChatGPTಯ ಅಲ್ಗೊರಿಥಮ್ ಗಳನ್ನು ಟ್ಯೂನ್ ಮಾಡಲಾಯಿತು.
- ಸೈಬರ್ ಯುದ್ಧ/ಭಯೋತ್ಪಾದನೆ/ವಿನಾಶ : ಇಲ್ಲಿ OpenAI ಸಂಸ್ಥೆಯ ChatGPTಯನ್ನು ಬಳಸಿ ನಾವೆಲ್ಲ ಸಾಮಾನ್ಯವಾಗಿ ಬಳಸುವ ಮೈಕ್ರೋಸಾಫ್ಟ್ ವಿಂಡೋಸ್ ನ ವಿವಿದ ಮಾಲ್ವೇರ್ (ಒಂದು ರೀತಿಯ ಸಾಫ್ಟ್ವೇರ್ ಪ್ರೋಗ್ರಾಮ್) ಸೃಷ್ಟಿಸಲು, ಬಲಪಡಿಸಲು ಮತ್ತು ಅದನ್ನು ಪಸರಿಸಲು ಬೇಕಾದ ತಂತ್ರಗಳನ್ನು ರಚಿಸಲು ಬಳಸಲಾಗಿತ್ತು. ಆ ಮಾಲ್ವೇರ್ ಗಳು ಯಾವ ಕಂಪ್ಯೂಟರ್ ನಲ್ಲಿ ಸ್ಥಾಪಿಸಲಾಗುತ್ತದೋ ಅದರಿಂದ ಸೂಕ್ಷ್ಮ ಮಾಹಿತಿಯನ್ನು ಕದಿಯಲು, ವಂಚಕರಿಗೆ ಸಂಸ್ಥೆಯ ನೆಟ್ವರ್ಕ್ ಗೆ ಪ್ರವೇಶಿಸಲು ಬಾಹ್ಯ ದ್ವಾರವನ್ನು ತೆರೆಯುವದು ಮತ್ತು ಆ ಕಂಪ್ಯೂಟರ್ ಮೇಲೆ ಸಂಪೂರ್ಣ ಹಿಡಿತ ಸ್ಥಾಪಿಸಲು ಸಹಾಯ ಮಾಡುತ್ತದೆ. ಇಲ್ಲಿ ಆತಂಕದ ವಿಷಯವೇನೆಂದರೆ ಸಾಮಾನ್ಯ ಹ್ಯಾಕರ್ ನಂತೆ ಕೇವಲ ಹಣದ ಅಥವಾ ಮಾಹಿತಿಯ ಕಳ್ಳತನವಷ್ಟೇ ಆ ಮಾಲ್ವೇರ್ ನ ಉದ್ದೇಶವಾಗಿರಲಿಲ್ಲ, ಇಲ್ಲಿ ಆ ಮಾಲ್ವೇರ್ ಸೋಂಕಿಗೆ ತುತ್ತಾದ ದೇಶದ ಮೇಲೆ ಸೈಬರ್ ಭಯೋತ್ಪಾದನೆ/ವಿನಾಶವನ್ನು ನಡೆಸಲು, ಆ ದೇಶದ ಪ್ರಮುಖ ಅತ್ಯವಶ್ಯಕ ಸಂಸ್ಥೆಗಳಿಗೆ ಈ ಮಾಲ್ವೇರ್ ಸೋಂಕನ್ನು ಪಸರಿಸಲು ಸೋಶಿಯಲ್ ಇಂಜಿನಿಯರಿಂಗ್ ತಂತ್ರದ ಮೂಲಕ ನಡೆಸಲಾಯಿತು, ಅದಕ್ಕೆ OpenAI ಸಂಸ್ಥೆಯ ChatGPTಯನ್ನು ಬಳಸಲಾಗಿತ್ತು. ಇದೆ ತರಹದ ಮಾಲ್ವೇರ್ ಸಹಾಯದಿಂದ ಇರಾನಿನ ನ್ಯೂಕ್ವೀರ್ ರಿಯಾಕ್ಟರ್ ಅನ್ನು ದ್ವಾಂಸ ಗೊಳಿಸಲು ಇಸ್ರೇಲ್ ಹಿಂದೆ ಪ್ರಯತ್ನಪಟ್ಟಿತ್ತು. ಇಲ್ಲಿ OpenAI ಸಂಸ್ಥೆ ಕೇವಲ ಸಂಬಂಧಪಟ್ಟ ಅಕೌಂಟ್ ಗಳನ್ನೂ ನಿರ್ಬಂಧಗೊಳಿಸುವುದಷ್ಟೇ ಅಲ್ಲದೆ ಆ ಮಾಲ್ವೇರ್ ಹೋಸ್ಟ್ ಮಾಡಿದ ಸಂಸ್ಥೆಯೊಂದಿಗೆ ಕೆಲಸ ಮಾಡಿ ಆ ಮಾಲ್ವೇರ್ ಅನ್ನು ನಿಷ್ಕ್ರಿಯಗೊಳಿಸಿತು.
ನಾನು ಆ ಲೇಖನದಲ್ಲಿರುವ ಕೆಲವು ಪ್ರಮುಖ AI ಬಳಸಿ ನಡೆಸಲಾದ ಸೈಬರ್ ಅಪರಾಧಗಳಷ್ಟೇ ಮೇಲೆ ಚರ್ಚಿಸಿದ್ದೇನೆ. ಇದರ ಸಾರಾಂಶವೇನೆಂದರೆ ಮೊದಲೇ ಹೇಳಿದಂತೆ AI ಚಾಕುವಿನಂತೆ, ಅದರ ಬಳಕೆಯನ್ನು ನಾವು ಸೂಕ್ತ ಕಾನೂನುಗಳು, ನಿಯಮಗಳು ಮತ್ತು ನಿಬಂಧನೆಗಳ ಮೂಲಕ ನಿಯಂತ್ರಿಸಬಹುದಷ್ಟೆ ಹೊರತು ದುರ್ಬಳಕೆಯನ್ನು ಪೂರ್ತಿಯಾಗಿ ತಡೆಯಲಾಗುವುದಿಲ್ಲಾ.