- ಸುರೇಶ ಒಂದು ಹೈಸ್ಕೂಲಿನಲ್ಲಿ ಗಣಿತದ ಶಿಕ್ಷಕ, ಅವರಿಗೆ ಒಂದು ದಿನ ಕರೆ ಬರುತ್ತದೆ. ಆ ಕಡೆಯ ವ್ಯಕ್ತಿ ತಾನು ಕೆನರಾ ಬ್ಯಾಂಕಿನ ಅಧಿಕಾರಿಯಾಗಿದ್ದು ನಿಮ್ಮ ಅಕೌಂಟನ್ನು ಫ್ರೀಜ್ ಮಾಡಲು ಪೊಲೀಸ್ ಸ್ಟೇಷನ್ ನಿಂದ ಕರೆ ಬಂದಿದೆ, ಅವರು ನಿಮಗೆ ಈಗ ಕರೆ ಮಾಡುತ್ತಾರೆ ಆ ಕರೆಯನ್ನು ನೀವು ಈ ಕರೆಗೆ ವಿಲೀನಗೊಳಿಸಿ(ಮರ್ಜ) ಎನ್ನುತ್ತಾರೆ, ಸುರೇಶನಿಗೆ ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ಕರೆ ಬರುತ್ತದೆ ಅವರು ಅದನ್ನು ಈ ಕರೆಗೆ ವಿಲೀನಗೊಳಿಸುತ್ತಾರೆ. ನಂತರ ಗೊತ್ತಾಗುತ್ತದೆ ಆ ಎರಡನೇ ಕರೆ OTP ತಿಳಿಸುವ ಕರೆಯಾಗಿದ್ದು ಮತ್ತು ತಮ್ಮ ಖಾತೆಯಿಂದ 2 ಲಕ್ಷ ರೂಪಾಯಿಗಳನ್ನು ವರ್ಗಾಯಿಸಲಾಗಿದೆ ಹಾಗು ತಾನು ಕಾಲ್ ಮರ್ಜ(ವಿಲೀನ) ಸೈಬರ್ ಅಪರಾಧಕ್ಕೆ ಬಲಿಯಾಗಿದ್ದೇ ಎಂದು.
- ಜೋಸೆಫ್ ಒಬ್ಬ ಉದ್ಯಮಿಯಾಗಿದ್ದು, ಸಣ್ಣ ಸಾಲಕ್ಕಾಗಿ ಟೆಲಿಗ್ರಾಂ ಆಪ್ ಮೂಲಕ ದೊರೆತ ಆನ್ಲೈನ್ ಸಾಲದ ಆಪ್ ಒಂದನ್ನು ತಮ್ಮ ಫೋನಿನಲ್ಲಿ ಇನ್ಸ್ಟಾಲ್ ಮಾಡುತ್ತಾರೆ, ನಂತರ ತಿಳಿಯುತ್ತದೆ ಅವರ ಖಾತೆಯಿಂದ 1.25 ಲಕ್ಷ ರೂಪಾಯಿಗಳನ್ನು ವರ್ಗಾಯಿಸಲಾಗಿದೆ ಹಾಗು ಆ ಸಾಲದ ಆಪ್ ತನ್ನ OTP sms ಅನ್ನು ಕದ್ದು ಓದಿತ್ತು ಎಂದು.
- ಇಕ್ಬಾಲ್ ಕ್ರೋಮಾ ಅಂಗಡಿಯಿಂದ ಲ್ಯಾಪ್ಟಾಪ್ ಖರೀದಿಸುತ್ತಾರೆ. ಮಾರನೇ ದಿನ ಅವರಿಗೆ ಒಂದು ಇಮೇಲ್ ಬರುತ್ತದೆ, ಅದರಲ್ಲಿ ಅವರು ಲಕ್ಕಿ ಡ್ರಾನಲ್ಲಿ ಹತ್ತು ಸಾವಿರ ಗೆದ್ದಿದ್ದಾರೆ ಮತ್ತು ಅದನ್ನು ಪಡೆಯಲು ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಮಾಹಿತಿಯನ್ನು ನೀಡಿ ಎಂದಿರುತ್ತದೆ. ಸಂತೋಷದಿಂದ ಇಕ್ಬಾಲ್ ಆ ಲಿಂಕ್ ಅನ್ನು ಕ್ಲಿಕ್ ಮಾಡುತ್ತಾರೆ. ಎರಡು ದಿನದ ನಂತರ ತಿಳಿಯುತ್ತದೆ ಅವರ ಖಾತೆಯಿಂದ 78 ಸಾವಿರ ರೂಪಾಯಿಗಳನ್ನು ವರ್ಗಾಯಿಸಲಾಗಿದೆ ಹಾಗು ಆ ಲಿಂಕ್ ಒಂದು ಮಾಲ್ವೇರ್ ಅನ್ನು ಅವರ ಫೋನಿನಲ್ಲಿ ಸ್ಥಾಪಿಸಿ ಅವರ OTP sms ಅನ್ನು ಕದ್ದು ಓದಿತ್ತು ಎಂದು.
- ವಿನೀತ್ ಜೈನ ಅವರು ತಮ್ಮ ಮೊಬೈಲ್ ಬ್ಯಾಂಕಿಂಗ್ ಆಪ್ ಕೆಲಸ ಮಾಡುತ್ತಿಲ್ಲ ಎಂದು ಬ್ಯಾಂಕಿಗೆ ಗೂಗಲ್ ಸರ್ಚ್ ನಲ್ಲಿ ದೊರೆತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡುತ್ತಾರೆ, ಆ ಕಡೆಯ ವ್ಯಕ್ತಿ ನಿಮಗೆ ಸಹಾಯಮಾಡಲು anydesk ಎಂಬ ರಿಮೋಟ್ ಆಕ್ಸೆಸ್ ಆಪ್ ಅನ್ನು ಇನ್ಸ್ಟಾಲ್ ಮಾಡಲು ತಿಳಿಸಿ ಅವರಿಗೆ ನಿಯಂತ್ರಣ ನೀಡಲು ಹೇಳುತ್ತಾರೆ. ಕರೆ ಮುಗಿದ ನಂತರ ತಿಳಿಯುತ್ತದೆ ವಿನೀತ್ ಬ್ಯಾಂಕ್ ಖಾತೆಯಿಂದ 3.4 ಲಕ್ಷ ರೂಪಾಯಿಗಳನ್ನು ವರ್ಗಾಯಿಸಲಾಗಿದೆ ಹಾಗು ಆ ದೂರವಾಣಿ ಸಂಖ್ಯೆ ನಕಲಿ ಸಹಾಯವಾಣಿ ಸಂಖ್ಯೆಯಾಗಿದ್ದು ಸಹಾಯ ಮಾಡುವ ನೆಪದಲ್ಲಿ OTP ಯನ್ನು ಕದಿಯಲಾಗಿತ್ತು ಎಂದು.
ನಾವೆಲ್ಲರೂ ಅಪರಿಚಿತರಿಗೆ OTP ತಿಳಿಸಬಾರದು ಎಂದು ಚೆನ್ನಾಗಿ ಅರ್ಥಮಾಡಿಕೊಳ್ಳುವಷ್ಟರಲ್ಲಿ, ಸೈಬರ್ ಖದೀಮರು OTP ನಮ್ಮಿಂದ ಪಡೆಯದೆಯೇ ನಮ್ಮ ಹಣವನ್ನು ಹೇಗೆ ಕಡದಿಯುತ್ತಾರೆ ಎಂಬುದ್ದಕ್ಕೆ ಮೇಲೆ ನಾಲ್ಕು ಉದಾಹಣೆ ಕೊಟ್ಟಿದ್ದೇನೆ. ಇನ್ನೊಂದು ಮಾರ್ಗವಾದ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್(AEPS) ಕುರಿತು ಈ ಹಿಂದೆ ಬರೆದಿದ್ದೆ, ಅದನ್ನು ನೀವು ಓದಬಹುದು.
ಇಂತಹ OTP ಬೇಡದ ಸೈಬರ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು :
- ಯಾವಾಗಲೂ ಎಲ್ಲಾ ಡಿಜಿಟಲ್ ವಹಿವಾಟುಗಳಿಗೆ, ‘ತಾಳ್ಮೆ, ಶೂನ್ಯ ವಿಶ್ವಾಸ ಮತ್ತು ದೃಢೀಕರಣ’ ತತ್ವವನ್ನು ಅನುಸರಿಸುವುದು.
- ಯಾವುದೇ ಅಪರಿಚಿತ ವ್ಯಕ್ತಿಯಿಂದ sms ಸಂದೇಶ ಅಥವಾ ಇಮೇಲ್ನಲ್ಲಿ ಇರುವ ಯಾವುದೇ ಹೈಪರ್ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ ಅಥವಾ APK/ಅಪ್ಲಿಕೇಶನ್ಗಳನ್ನು ಸ್ಥಾಪಿಸಬೇಡಿ.
- ಬ್ಯಾಂಕ್ ಅಥವಾ ಯಾವುದೇ ಸಂಸ್ಥೆಯ ಸಹಾಯವಾಣಿಯನ್ನು ತಿಳಿಯಲು ಗೂಗಲ್ ಸರ್ಚ್ ಅನ್ನು ಬಳಸುವ ಬದಲು ಅಧಿಕೃತ ಜಾಲತಾಣದ URL ನೀವೇ ಟೈಪ್ ಮಾಡಿ ಅಥವಾ ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ನ ನ ಹಿಂಬದಿಯಲ್ಲಿರುವ ಸಂಖ್ಯೆ ಬಳಸಿ.
- ಅಪರಿಚಿತರೊಂದಿಗೆ ಆಧಾರ್, ಪ್ಯಾನ್ ಸಂಖ್ಯೆ ಅಥವಾ ಬ್ಯಾಂಕ್ ವಿವರಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ, ನಿಜವಾಗಿಯೂ ಅಗತ್ಯವಿದ್ದರೆ ಗುರುತಿಗಾಗಿ ಮತದಾರರ ಐಡಿ ಅಥವಾ ಚಾಲನಾ ಪರವಾನಗಿಯನ್ನು ಮಾತ್ರ ಹಂಚಿಕೊಳ್ಳಿ.
- ನಿಮ್ಮ ಆಧಾರ್ ಬಯೋಮೆಟ್ರಿಕ್ ಚೆಕ್ ಅನ್ನು ಆಧಾರ್ ವೆಬ್ಸೈಟ್ನಲ್ಲಿ (www.uidai.gov.in) ಅಥವಾ mAadhaar ಅಪ್ಲಿಕೇಶನ್ನಲ್ಲಿ ಲಾಕ್ ಮಾಡಿ ಮತ್ತು ನೀವು ಬಯೋಮೆಟ್ರಿಕ್ ಪರಿಶೀಲನೆಯನ್ನು ನಿರ್ವಹಿಸಬೇಕಾದಾಗ ಅನ್ಲಾಕ್ ಮಾಡಿ.
- ಅಪರಿಚಿತರಿಂದ ಬರುವ ಕಾಲ್ ಗಳನ್ನು ಮರ್ಜ ಅಥವಾ ವಿಲೀನಗೊಳಿಸಲು ಕೇಳಿದರೆ ನಿರಾಕರಿಸಿ.
ನೀವು ಇಂತಹ ವಂಚನೆಗೆ ಬಲಿಯಾಗಿದ್ದರೆ :-
ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ www.cybercrime.gov.in ಜಾಲತಾಣದಲ್ಲಿ ದೂರು ಸಲ್ಲಿಸಿ. ನೀವು ಯಾರೊಂದಿಗಾದರೂ ಆಧಾರ್ ಅನ್ನು ಹಂಚಿಕೊಂಡಿದ್ದರೆ, www.uidai.gov.in ಜಾಲತಾಣದಲ್ಲಿ ಅಥವಾ maadhaar ಆಪ್ನಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಿ. ಹಣವನ್ನು ಫ್ರೀಜ್ ಮಾಡಲು ಸಂಬಂಧಿಸಿದ ಬ್ಯಾಂಕ್ಗೆ ಕರೆ ಮಾಡಿ ಮತ್ತು ದೂರು ನೀಡಿ. ಬಹಿರಂಗಗೊಂಡ ಬ್ಯಾಂಕಿಂಗ್ ಖಾತೆಗಳ ಪಾಸ್ವರ್ಡ್ಗಳು/ಪಿನ್ಗಳನ್ನು ಬದಲಾಯಿಸಿ. QR ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ ಮಾಲ್ವೇರ್/ವೈರಸ್ ದಾಳಿಯ ಬಗ್ಗೆ ನಿಮಗೆ ಸಂದೇಹವಿದ್ದರೆ, ಸಾಧನವನ್ನು ಫಾರ್ಮ್ಯಾಟ್ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.
ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಪರಿಹಾರಗಳು :-
ನಿಮ್ಮ ಹತ್ತಿರದ ಸೈಬರ್ ಅಥವಾ ಸಾಮಾನ್ಯ ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ನೀವು ಕ್ರಿಮಿನಲ್ ಪ್ರಕರಣವನ್ನು ಈ ಕೆಳಗಿನ ಕಾನೂನು ಸೆಕ್ಷನ್ ಅಥವಾ ನಿಮ್ಮ ಪ್ರಕರಣದ ಆಧಾರದ ಮೇಲೆ ಪೊಲೀಸರು ಸೂಚಿಸಿದ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಿಸಬಹುದು:
- ಭಾರತೀಯ ನ್ಯಾಯ ಸಂಹಿತ (BNS) ಸೆಕ್ಷನ್ 303(ಕಳ್ಳತನ), 319 (ಸೋಗು ಹಾಕುವ ಮೂಲಕ ವಂಚನೆಗೆ ಶಿಕ್ಷೆ) 336ಮತ್ತು 318 (ವಂಚನೆ), ಸೆಕ್ಷನ್ 323(ಕಾನೂನುಬಾಹಿರವಾಗಿ ಡೇಟಾವನ್ನು ಹೊರತೆಗೆಯುವುದು), ಸೆಕ್ಷನ್ 329(ಕ್ರಿಮಿನಲ್ ಅತಿಕ್ರಮಣ), ಸೆಕ್ಷನ್ 338 (ಫೋರ್ಜರಿ), ಸೆಕ್ಷನ್ 337( ಫೋರ್ಜರಿ/ನಕಲಿಗಾಗಿ ಶಿಕ್ಷೆ), ಮತ್ತು ಸೆಕ್ಷನ್ 340 (ಫೋರ್ಜರಿ/ನಕಲಿ ದಾಖಲೆಯ ಬಳಕೆ).
- ಮಾಹಿತಿ ತಂತ್ರಜ್ಞಾನ ಕಾಯಿದೆ (IT) ಕಾಯಿದೆ 2000/08 ಸೆಕ್ಷನ್ 43 (ಕಂಪ್ಯೂಟರ್, ಕಂಪ್ಯೂಟಿಂಗ್ ಸಾಧನ ಇತ್ಯಾದಿಗಳಿಗೆ ಹಾನಿಗಾಗಿ ದಂಡ ಮತ್ತು ಪರಿಹಾರ), ಸೆಕ್ಷನ್ 65 (ಕಂಪ್ಯೂಟರ್ ಅನ್ನು ಹಾಳುಮಾಡುವುದು), ಸೆಕ್ಷನ್ 66 (ಕಂಪ್ಯೂಟರ್ ಸಂಬಂಧಿತ ಅಪರಾಧಗಳಿಗೆ ಶಿಕ್ಷೆ – ಡೇಟಾ ಕಳ್ಳತನ ಮಾಡುವ ವ್ಯಕ್ತಿ, ಸಿಸ್ಟಮ್ಗೆ ವೈರಸ್ ಹರಡುವುದು, ಡೇಟಾ ನಾಶಪಡಿಸುವುದು, ಹ್ಯಾಕಿಂಗ್ , ಅಥವಾ ಅಧಿಕೃತ ವ್ಯಕ್ತಿಗೆ ಕಂಪ್ಯೂಟರ್ ಅಥವಾ ನೆಟ್ವರ್ಕ್ಗೆ ಪ್ರವೇಶವನ್ನು ನಿರಾಕರಿಸುವುದು), ಸೆಕ್ಷನ್ 66C (ಇದು ಗುರುತಿನ ಕಳ್ಳತನಕ್ಕೆ ದಂಡವನ್ನು ಸೂಚಿಸುತ್ತದೆ ಮತ್ತು ವ್ಯಕ್ತಿಯ ಗುರುತಿನ ಮಾಹಿತಿಯನ್ನು ಮೋಸದಿಂದ ಅಥವಾ ಅಪ್ರಾಮಾಣಿಕವಾಗಿ ಬಳಸುವುದು) ಮತ್ತು ಸೆಕ್ಷನ್ 66D (ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ಸೋಗು ಹಾಕುವ ಮೂಲಕ ಮಾಡಿದ ವಂಚನೆಗೆ ಶಿಕ್ಷೆ).