ಕಳೆದ ವಾರದ ಅಂಕಣದಲ್ಲಿ ನಾನು 2024ರಲ್ಲಿ ಭಾರತದ ಜನಸಾಮಾನ್ಯರಿಗೆ ಮತ್ತು ಸಂಸ್ಥೆಗಳ ಮೇಲೆ ನಡೆದ ವಿವಿಧ ಸೈಬರ್ ಅಪರಾಧಗಳ ಅಂಕಿಅಂಶಗಳು ಮತ್ತು ಸರಕಾರ ಅದನ್ನು ತಡೆಯಲು ಮತ್ತು ನಿಯಂತ್ರಿಸಲು ಏನು ಮಾಡುತ್ತಿದೆ ಎಂಬುದರ ಕುರಿತು ತಿಳಿಸಿದ್ದೆ. ಇಂದಿನ ಅಂಕಣದಲ್ಲಿ ನಾನು ಉದ್ಯಮ ತಜ್ಞರು ಮತ್ತು ನನ್ನ ಅನಿಸಿಕೆ ಹಾಗು ಕಲಿಕೆಯ ಪ್ರಕಾರ 2025 ರಲ್ಲಿ ಯಾವ ರೀತಿಯ ಸೈಬರ್ ಅಪರಾಧಗಳು ಭಾರತದಲ್ಲಿ ಜನಸಾಮಾನ್ಯರನ್ನು ಕಾಡಲಿದೆ ಮತ್ತು ಅದನ್ನು ತಡೆಯಲು ನೀವು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ವಿವರಿಸಲಿದ್ದೇನೆ. ಒಂದು ವರದಿಯ ಪ್ರಕಾರ, 2025 ರಲ್ಲಿ ಸೈಬರ್ ಅಪರಾಧಿಗಳಿಂದ ವಿಶ್ವಕ್ಕೆ ಆಗುವ ನಷ್ಟ 10.5 ಟ್ರಿಲಿಯನ್ ಅಮೆರಿಕನ್ ಡಾಲರ್ ಅಂದರೆ ಅಂದಾಜು 800 ಲಕ್ಷ ಕೋಟಿ ರೂಪಾಯಿಗಳನ್ನು ದಾಟಲಿದೆ.
2025 ರ ಸೈಬರ್ ಅಪರಾಧಗಳ ಮುನ್ನೋಟಗಳು :-
ಈ ಸಮಯದಲ್ಲಿ ಪ್ರತಿ ವರ್ಷ, ಸೈಬರ್ ಉದ್ಯಮದ ತಜ್ಞರು ಮತ್ತು ವಿಶ್ಲೇಷಕರು ಮುಂದಿನ ವರ್ಷದ ಉನ್ನತ ಸೈಬರ್ ಸೆಕ್ಯುರಿಟಿ/ಅಪರಾಧಗಳ ಟ್ರೆಂಡ್‌ಗಳು, ಮುನ್ನೋಟಗಳು ಮತ್ತು ಸವಾಲುಗಳನ್ನು ವಿವರಿಸುತ್ತಾರೆ. 2025 ಕ್ಕೆ ಉದ್ಯಮ ತಜ್ಞರು ಏನನ್ನು ನಿರೀಕ್ಷಿಸುತ್ತಾರೆ ಎಂದರೆ :
೧. ಸೈಬರ್ ಅಪರಾಧಿಗಳು ಕೃತಕ ಬುದ್ಧಿಮತ್ತೆ(AI)ಯನ್ನು ಅಪರಾಧಗಳಿಗಾಗಿ ಇನ್ನೂ ಅಧಿಕವಾಗಿ ಬಳಸಲಿದ್ದಾರೆ. ಫಿಶಿಂಗ್, ಸೋಶಿಯಲ್ ಇಂಜಿನಿಯರಿಂಗ್, ಹ್ಯಾಕಿಂಗ್, ಪಾಸ್ವರ್ಡ್ ಕದಿಯಲು/ಮುರಿಯಲು, ಡೀಪ್ ಫೇಕ್ ಮತ್ತು ರಾನ್ಸಮ್‌ವೇರ್ ಸೈಬರ್ ಅಪರಾಧಗಳಲ್ಲಿ AI ಬಳಕೆ ಹೆಚ್ಚಾಗಲಿದೆ.
೨. ಸೈಬರ್ ದಾಳಿ ಮಾಡಲು ಬೇಕಾಗುವ ಸಾಫ್ಟ್ವೇರ್ ಉಪಕರಣಗಳು(ಪ್ರೊಗ್ರಮ್ಸ್/ಆಪ್ಸ್) ಬಾಡಿಗೆಗೆ/ಖರೀದಿಗೆ ಸಿಗಲಿದೆ, ಇದು ಅತ್ಯಾಧುನಿಕ ವೃತ್ತಿಪರ ಸೈಬರ್ ಅಪರಾಧಗಳನ್ನು ಮಾಡುವಾಗ ಸಾಮಾನ್ಯ ಸೈಬರ್ ಅಪರಾಧಿಗಳನ್ನು ಹೆಚ್ಚು ಸಂಪನ್ಮೂಲ, ಬುದ್ಧಿವಂತ ಮತ್ತು ದಕ್ಷರನ್ನಾಗಿ ಮಾಡುತ್ತದೆ.
೩. IoT ಅಥವಾ ಸ್ಮಾರ್ಟ್ ಸಾಧನಗಳ ಮೇಲೆ/ಬಳಸಿಕೊಂಡು ನಡೆಯುವ ಸೈಬರ್ ಅಪರಾಧಗಳ ಸಂಖ್ಯೆ/ಗಾತ್ರ ಹೆಚ್ಚಾಗಲಿದೆ. ಮನೆ, ಅಂಗಡಿ ಮತ್ತು ಕಾರ್ಖಾನೆಗಳಲ್ಲಿ ಸ್ಮಾರ್ಟ್ ಸಾಧನಗಳ ಬಳಕೆ ಹೆಚ್ಚಾಗಿದೆ, ಸೈಬರ್ ಖದೀಮರು ಇದನ್ನು ಅರಿತು ಅದರಲ್ಲಿರುವ ಭದ್ರತಾ ಲೋಪದೋಷಗಳನ್ನು ಬಳಸಿ ಅಪರಾಧವನ್ನೆಸಗುತ್ತಾರೆ.
೪. ಸೈಬರ್ ಅಪರಾಧಿಗಳ ನಡುವಿನ ಆಟೋಮೇಷನ್(ಯಾಂತ್ರೀಕೃತಗೊಂಡ) ಮತ್ತು ಸಹಯೋಗವು ಅವರಲ್ಲಿಯೇ ವಿಶೇಷತೆಯತ್ತ ಸಾಗುತ್ತಿದೆ, ಇದು ಹೆಚ್ಚು ನಂಬಲರ್ಹ ಮತ್ತು ಸಂಕೀರ್ಣ ಸೈಬರ್ ಅಪರಾಧಗಳನ್ನು ಕಾರ್ಯಗತಗೊಳಿಸಲು ಕಾರಣವಾಗುತ್ತದೆ.
೫. ಸರಕಾರಿ ಅಥವಾ ಭಯೋತ್ಪಾದಕ ಅಥವಾ ಸಂಘಟಿತ ಅಪರಾಧಿ ಸಂಸ್ಥೆಗಳಿಂದ ಆಯೋಜಿತ ಸೈಬರ್ ಅಪರಾಧಗಳ ಸಂಖ್ಯೆ ಜಾಸ್ತಿಯಾಗಲಿದೆ.
2025ರಲ್ಲಿ ಸೈಬರ್ ಅಪರಾಧಗಳನ್ನು ತಡೆಯಲು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳು :-
- ಅಪರಿಚಿತ ಸಂಖ್ಯೆಗಳಿಂದ ಬರುವ ಎಲ್ಲಾ ಕರೆ/ಸಂದೇಶಗಳು/ಆಮಂತ್ರಣ ಮತ್ತು ಡಿಜಿಟಲ್ ವಹಿವಾಟುಗಳಲ್ಲಿ ಯಾವಾಗಲೂ ‘ಶೂನ್ಯ ವಿಶ್ವಾಸ, ತಾಳ್ಮೆ ಮತ್ತು ದೃಢೀಕರಣ’ ತತ್ವವನ್ನು ಅನುಸರಿಸಿ.
- ಅಪರಿಚಿತರಿಂದ ಬರುವ ಸಂದೇಶದಲ್ಲಿನ ಹೈಪರ್ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ ಅಥವಾ ಸಂದೇಶ/ಇಮೇಲ್ನಲ್ಲಿ ಒದಗಿಸಲಾದ ಯಾವುದೇ ಅಪ್ಲಿಕೇಶನ್ ಅನ್ನು ಸ್ಥಾಪಿಸಬೇಡಿ.
- ನಿಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಅನ್ನು ಲಾಕ್ ಮಾಡಿ ಅಥವಾ ಖಾಸಗಿಯಾಗಿ ಇರಿಸಿ.
- ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸದೆ ಬರುವ ಸ್ನೇಹಿತರ ವಿನಂತಿಗಳನ್ನು ಸ್ವೀಕರಿಸಬೇಡಿ.
- ಉತ್ತಮ ಆಂಟಿವೈರಸ್, ಫೈರ್ವಾಲ್ ಮತ್ತು vpn ಸಾಫ್ಟ್ವೇರ್ ಅನ್ನು ಉಪಯೋಗಿಸಿ ಮತ್ತು ಅದನ್ನು ನಿಯಮಿತವಾಗಿ ನವೀಕರಿಸಿ.
- ಆಫರ್ ನಲ್ಲಿ ಸೂಚಿಸಿದ ಆದಾಯವು ನಿಯಮಿತ ಹೂಡಿಕೆಗಳಿಗಿಂತ ನಂಬಲಾಗದಷ್ಟು ಹೆಚ್ಚಿದ್ದರೆ, ಅದು ವಂಚನೆಯಾಗಿರಬಹುದು.
- ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರಗಳು ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳನ್ನು ಅಪರಿಚಿತರೊಂದಿಗೆ ಅಥವಾ ನೀವು ಮೊದಲ ಬಾರಿಗೆ ವ್ಯವಹರಿಸುತ್ತಿರುವ ವೆಬ್ಸೈಟ್ಗಳು ಅಥವಾ ಅಪ್ಲಿಕೇಶನ್ಗಳಲ್ಲಿ ಹಂಚಿಕೊಳ್ಳಬೇಡಿ.
- ಯಾವಾಗಲೂ Google Playstore ಅಥವಾ Apple ಸ್ಟೋರ್ನಿಂದ ಮಾತ್ರ, ವಿಮರ್ಶೆ ಕಾಮೆಂಟ್ಗಳು ಮತ್ತು ರೇಟಿಂಗ್ ಅನ್ನು ಪರಿಶೀಲಿಸಿದ ನಂತರವೆ ಅಪ್ಲಿಕೇಶನ್ ಅನ್ನು ಸ್ಥಾಪಿಸಿ.
- ವೆಬ್ಸೈಟ್ URL ಮತ್ತು ವೆಬ್ಸೈಟ್ನ ನೈಜತೆಯನ್ನು ಪರಿಶೀಲಿಸಿ – ನಕಲಿ/ಕ್ಲೋನ್ ಮಾಡಿದ ವೆಬ್ಸೈಟ್ URL ಸಾಮಾನ್ಯವಾಗಿ “https” ಬದಲಿಗೆ “http” ನೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಅಂತಹ ವೆಬ್ಸೈಟ್ ಕೆಲವು ಕಾಗುಣಿತ/ವ್ಯಾಕರಣ ದೋಷಗಳನ್ನು ಹೊಂದಿರಬಹುದು.
- ಅಪರಿಚಿತರು ಹಣವನ್ನು ವರ್ಗಾಯಿಸಲು ಅಥವಾ ಅನಗತ್ಯವಾಗಿ ಏನನ್ನಾದರೂ ಮಾಡಲು ನಿಮ್ಮನ್ನು ಅನಾವಶ್ಯಕವಾಗಿ ಆತುರಪಡಿಸಿದರೆ ಅದು ವಂಚನೆಯಾಗಿರಬಹುದು.
- ಹಣ ಕಳುಹಿಸಿದವರ ಹೆಸರನ್ನು ಖಚಿತಪಡಿಸಿಕ್ಕೊಳಲು Googlepay ನಲ್ಲಿ ಅಥವಾ ಟ್ರೂಕಾಲರ್ ಅಪ್ಲಿಕೇಶನ್ನಲ್ಲಿ ಆ ಸಂಖ್ಯೆಯನ್ನು ಟೈಪ್ ಮಾಡುವ ಮೂಲಕ ದೃಢೀಕರಿಸಿ.
- ನಿಮಗೆ ಬಂದ ಸುದ್ದಿ ಅಥವಾ ಮಾಹಿತಿಯ ಮೇಲೆ ಕಾರ್ಯನಿರ್ವಹಿಸುವ ಮೊದಲು ಯಾವಾಗಲೂ ಮೂಲವನ್ನು ಪರಿಶೀಲಿಸಿ ಮತ್ತು ಸುದ್ದಿ ಅಸಲಿ ಅಥವಾ ನಕಲಿಯೇ ಎಂದು ಪರಿಶೀಲಿಸಿ.