Site icon Welcome to CYBER MITHRA

ಕೃತಕ ಬುದ್ಧಿಮತ್ತೆ(Artificial Intelligence/AI) ಮತ್ತು ಕನ್ನಡ

Artificial Intelligence (AI)

ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(AI) ಈಗ ಸುದ್ದಿಯಲ್ಲಿರುವ ಪ್ರಮುಖ ವಿಷಯಗಳಲ್ಲಿ ಒಂದು, ಯಾಕೆಂದರೆ ಇದು ಶೀಘ್ರದಲ್ಲೇ ನಮ್ಮೆಲ್ಲರ ಜೀವನವನ್ನು ಒಂದೋ ವೃದ್ಧಿಗೊಳಿಸಲಿದೆ ಅಥವಾ ಬುಡಮೇಲು ಮಾಡಲಿದೆ. ಕಳೆದ ನವೆಂಬರ್ ೧, ಕನ್ನಡ ರಾಜ್ಯೋತ್ಸವವನ್ನು ನಾವೆಲ್ಲರೂ ಆಚರಿಸಿದ್ದೇವೆ ಮತ್ತು ನವೆಂಬರ್ ತಿಂಗಳಿಡೀ ಪ್ರತಿನಿಧಿ ಪತ್ರಿಕೆಯು ಕನ್ನಡ ಕುರಿತಾದ ವಿಷಯಗಳನ್ನು ಪ್ರಕಟಿಸುತ್ತಿದೆ. ಹಾಗಾಗಿ ನಾನು ಈ ಅಂಕಣದಲ್ಲಿ ಸಂಕ್ಷಿಪ್ತವಾಗಿ ಈ ಕೃತಕ ಬುದ್ದಿಮತ್ತೆ ಎಂದರೇನು, ಆಗುವ ಅನಾನುಕೂಲ/ಅನುಕೂಲಗಳು, ಇದು ನಮ್ಮ ಕನ್ನಡ ಭಾಷೆಯ ವಿಕಸನೆ, ಪ್ರಸರಣೆ ಮತ್ತು ಬಳಕೆಯನ್ನು ಹೆಚ್ಚುಮಾಡಲು ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ವಿವರಿಸಲು ಪ್ರಯತ್ನಿಸುತ್ತೇನೆ.
ನಾಯಿ, ಡಾಲ್ಫಿನ್ ಮತ್ತು ಚಿಂಪಾಂಜಿ ಮತ್ತಿತರ ಪ್ರಾಣಿಗಳಲ್ಲಿ ಜಾಣ್ಮೆ, ಕಲಿಯುವ ಶಕ್ತಿಯಿರುವುದನ್ನು ಮಾನವ ತಿಳಿದು ಅವುಗಳಿಂದ ತನ್ನ ಮನೋರಂಜನೆಗಾಗೋ ಅಥವಾ ತನ್ನ ಕೆಲಸ ಹಗುರ ಮಾಡಲಿಕ್ಕೋ ಅವುಗಳಿಗೆ ತರಬೇತಿ ಕೊಟ್ಟನು. ನಂತರ ತನ್ನ ಬುದ್ದಿ ಶಕ್ತಿಯಿಂದ ಯಂತ್ರಗಳನ್ನು ಸೃಷ್ಟಿಸಿ ಅವುಗಳಿಂದ ಪ್ರಾಣಿಗಳು ಮಾಡಲಾಗದ ಅಥವಾ ಇನ್ನು ಚೆನ್ನಾಗಿ ಅಥವಾ ಅಗ್ಗದಲ್ಲಿ ಆ ಕೆಲಸವನ್ನು ಮಾಡುವಂತೆ ಮಾಡಿದನು. ಕಂಪ್ಯೂಟರ್ ಸೃಷ್ಟಿಸಿದ ನಂತರ ಮನುಷ್ಯ ಅದಕ್ಕೆ ಕೃತಕ ಬುದ್ಧಿಮತ್ತೆಯನ್ನು ನೀಡಿದನು. ಕಳೆದ ಕೆಲವು ವರ್ಷಗಳಲ್ಲಿ ಕಂಪ್ಯೂಟರ್ ನಲ್ಲಿ ಆ ಕೃತಕ ಬುದ್ದಿಮತ್ತೆ ಸಾಮಾನ್ಯ ಮನುಷ್ಯನ ಬುದ್ಧಿಮತ್ತೆಯ ಮಟ್ಟಕ್ಕೆ ಬೆಳೆದಿರುವುದು, ಈ ಕೃತಕ ಬುದ್ಧಿಮತ್ತೆಯ ಬೆಳವಣಿಗೆಯ ಗತಿ, ವಿಸ್ತಾರ ಮತ್ತು ಅದರಿಂದ ಆಗುವ ಅನಾನುಕೂಲ/ಅನುಕೂಲಗಳ ಬಗ್ಗೆ ಚರ್ಚೆ ತೀವ್ರವಾಗಿದೆ.
ಸುಲಭ ಭಾಷೆಯಲ್ಲಿ ಹೇಳಬೇಕಾದರೆ – ಮನುಷ್ಯ ದೈಹಿಕ ಅಥವಾ ಬೌದ್ಧಿಕವಾಗಿ ನಿರ್ವಹಿಸಬಹುದಾದ ಕೆಲಸವನ್ನು ತಂತ್ರಜ್ಞಾನ ಆಧಾರಿತವಾದ ಸಾಧನಗಳ ಮೂಲಕ ಮಾಡುವಂತಹ ಅಥವಾ ಮಾಡಿಸುವಂತಹ ಆವಿಷ್ಕಾರವನ್ನೇ ಕೃತಕ ಬುದ್ಧಿಮತ್ತೆ (Artificial Intelligence/AI) ಎಂದು ಕರೆಯಬಹುದು. ಉದಾಹರಣೆಗೆ ಕ್ಯಾಲ್ಕೂಲೇಟರ್‌, ಕಂಪ್ಯೂಟರ್, ರೋಬೋಟ್ ಇತ್ಯಾದಿ. ಕೃತಕ ಸಾಮಾನ್ಯ ಬುದ್ಧಿಮತ್ತೆ ( Artificial General Intelligence/AGI ) ಎನ್ನುವುದು ಕೃತಕ ಬುದ್ಧಿಮತ್ತೆಯ ಒಂದು ವಿಧವಾಗಿದೆ, ಇದು ವ್ಯಾಪಕ ಶ್ರೇಣಿಯ ಅರಿವಿನ ಕಾರ್ಯಗಳಲ್ಲಿ ಮಾನವನ ಅರಿವಿನ ಸಾಮರ್ಥ್ಯಗಳನ್ನು ಹೊಂದಿರುತ್ತದೆ ಮತ್ತು ಅದು ಮಾನವನ ಅರಿವಿನ ಸಾಮರ್ಥ್ಯಗಳನ್ನು ಮೀರಿದರೆ ಅದನ್ನು ಕೃತಕ ಸೂಪರ್ ಬುದ್ದಿಮತ್ತೆ (Artificial Super Intelligence/ASI) ಎನ್ನುತ್ತಾರೆ. ಇಲ್ಲಿ ಸಂತೋಷದ ಅಥವಾ ಆತಂಕದ ವಿಷಯವೇನೆಂದರೆ, ಅನೇಕ ತಜ್ಞರ ಪ್ರಕಾರ ಆ ಸಮಯ ಇನ್ನು ಕೆಲವೇ ವರ್ಷಗಳಲ್ಲಿ ಬರಲಿರುವುದು. ಅಮೆರಿಕಾದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕಾರ್ತಿಯವರು 1956 ರಲ್ಲಿ ಮೊದಲ ಬಾರಿಗೆ ಎಐ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ – ಕೃತಕ ಬುದ್ಧಿಮತ್ತೆ) ಪದವನ್ನು ಬಳಕೆ ಮಾಡುತ್ತಾರೆ. ನಂತರದ ಬೆಳವಣಿಗೆಯಲ್ಲಿ ಸಂಶೋಧನೆಗಳಿಂದ ಇಂದು AI ತಂತ್ರಜ್ಞಾನ ಜಗತ್ತಿಗೆ ಹಬ್ಬಿದೆ.
ಇಲ್ಲಿ ಆತಂಕದ ವಿಷಯವೇನೆಂದರೆ, ಕೃತಕ ಬುದ್ಧಿಮತ್ತೆಯಿಂದ ಕೂಡಿರುವ ರೋಬೋಟ್ ಗಳು ಶಿಕ್ಷಣ, ವೈದ್ಯ, ವಿಜ್ಞಾನ, ವಾಣಿಜ್ಯ, ಸೇನೆ, ಸೇವೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಾನವನನ್ನು ಹಿಂದಿಕ್ಕಿ ಆ ಕ್ಷತ್ರಗಳಲ್ಲಿ ಮುಂದೆ ಅನೇಕರ ಈಗಿನ ಉದ್ಯೋಗಗಳನ್ನು ಕಸಿಯಲಿದೆ. ಇದಕ್ಕೆ ಮುಖ್ಯ ಕಾರಣ, ರೋಬೋಟ್ ಸಂಬಳ ಕೇಳದೆ, ರಜೆ ಹಾಕದೆ, ಗೊಣಗದೆ, ತಪ್ಪಿಲ್ಲದೆ ವರ್ಷಪೂರ್ತಿ ಹಗಲು-ರಾತ್ರಿ ಕೆಲಸ ಮಾಡುತ್ತದೆ ಮತ್ತು ಅವುಗಳ ಕಾರ್ಯಕ್ಷಮತೆ ಮತ್ತು ದಕ್ಷತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತದೆ. ಇನ್ನೊಂದು ಆತಂಕದ ವಿಷಯವೇನೆಂದರೆ, ಇದು ಮಾನವನ ಹಿಡಿತಕ್ಕೆ ಸಿಗದೇ ಮುಂದೊಂದು ದಿನ ಆಂಗ್ಲ ಭಾಷೆಯ ಟರ್ಮಿನೇಟರ್ ಚಿತ್ರದ ತರಹ ಮಾನವ ಕುಲದ ನಾಶಕ್ಕೆ ಕಾರಣವಾಗಬಹುದು. ನಾನು ಈ ಹಿಂದೆ ಕೃತಕ ಬುದ್ಧಿಮತ್ತೆಯನ್ನು(ChatGPT, DeepFake ಮತ್ತು ವಾಯ್ಸ್ ಕ್ಲೋನಿಂಗ್) ಸೈಬರ್ ಅಪರಾಧಿಗಳು ಹೇಗೆ ಸೈಬರ್ ಅಪರಾಧಗಳನ್ನು ಮಾಡುತ್ತಾರೆ. ಆದರೆ ಇದು ಮಾನವನಿಗೆ ಅನೇಕ ಅನುಕೂಲತೆಗಳನ್ನು ಕೂಡ ತರಲಿದೆ, ಉದಾಹರಣೆಗೆ ಎಲ್ಲರಿಗೂ ಒಳ್ಳೆಯ ಉಚಿತ/ಕಡಿಮೆ ವೆಚ್ಚದ ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಔಷಧಿಗಳ ಮತ್ತು ಉಪಚಾರಗಳ ಸೃಷ್ಟಿ, ಸ್ವಯಂ ಚಾಲಿತ ವಾಹನಗಳಿಂದ ಕಡಿಮೆ ವಾಹನ ದಟ್ಟಣೆ ಮತ್ತು ಅಪಘಾತ ಇತ್ಯಾದಿ. ಇದು ನೂರಾರು ಬಗೆಯ ಈಗಿನ ಉದ್ಯೋಗಗಳನ್ನು ಮಾನವನಿಂದ ಕಸಿಯಬಹುದು, ಆದರೆ ಅದು ಹಾಗೆಯೇ ನೂರಾರು ಹೊಸ ಬಗೆಯ ಉದ್ಯೋಗಗಳನ್ನು ಸೃಷ್ಟಿಸಲಿದೆ. ಉದಾಹರಣೆಗೆ ಎಲೆಕ್ಟ್ರಾನಿಕ್ ಸಿಂಥಸೈಜರ್ ಅಸ್ತಿತ್ವಕ್ಕೆ ಬಂದಾಗ ಇದು ಸಂಗೀತಕ್ಕೆ ಯಾವುದೇ ಹಾನಿಯನ್ನುಂಟು ಮಾಡಲಿಲ್ಲ ಅಂತೆಯೇ ಛಾಯಾಗ್ರಹಣ ಕೂಡ ಚಿತ್ರಕಲೆಯನ್ನು ನಾಶಮಾಡಲಿಲ್ಲ ಬದಲಿಗೆ ಇವುಗಳು ಹೊಸ ಬಗೆಯ ಕಲಾ ಪ್ರಕಾರವನ್ನು ವರ್ಧಿಸಿದವು. ಹೀಗಾಗಿ ಕೃತಕ ಬುದ್ಧಿಮತ್ತೆಯ ಮೂಲಕ ಹೊಸದಾದ ಪ್ರಕಾರವೊಂದು ಉಗಮಗೊಳ್ಳಬಹುದು.

ಕನ್ನಡ ಭಾಷೆಯ ವಿಕಸನೆ, ಪ್ರಸರಣೆ ಮತ್ತು ಬಳಕೆಗೆ ಕೃತಕ ಬುದ್ಧಿಮತ್ತೆಯ ಕೊಡುಗೆ :-

ಮೇಲೆ ತಿಳಿಸಿರುವ ವಿಷಯಗಳು ಕನ್ನಡದ ವಿಕಸನೆ, ಪ್ರಸರಣೆ ಮತ್ತು ಬಳಕೆಗೆ ಅನುವುಮಾಡಿಕ್ಕೊಳಲು ಕೃತಕ ಬುದ್ಧಿಮತ್ತೆಯು ಹೇಗೆ ಸಹಾಯ ಮಾಡಬಹುದು ಎಂಬುದರ ಕುರಿತು ನನ್ನ ಅರಿವಿಗೆ ಬಂದ ಕೆಲವು ವಿಚಾರಗಳು. ಇದರಲ್ಲಿ ಕೆಲವು ಆಗಲೇ ಬಳಕೆಗೆ ಬಂದಿದೆ ಮತ್ತು ಮಿಕ್ಕ ತಂತ್ರಜ್ಞಾನಗಳು ಸದ್ಯದಲ್ಲೇ ಸೃಷ್ಟಿಯಾಗಬಹುದು.

Exit mobile version