bitcoin

ಇತ್ತೀಚಿಗೆ ತುಂಬಾ ಸುದ್ದಿಯಲ್ಲಿರುವ ಬಿಟ್‌ಕಾಯಿನ್ ಬಗ್ಗೆ ಸ್ಥೂಲ ಪರಿಚಯ

ನನ್ನ ಈ ಅಂಕಣದಲ್ಲಿ ಬಿಟ್‌ಕಾಯಿನ್ ಬಗ್ಗೆ ಸ್ಥೂಲ ಪರಿಚಯ ಕೊಡುತ್ತಿದ್ದೇನೆ, ಇದರಲ್ಲಿ ಬಿಟ್‌ಕಾಯಿನ್ ಎಂದರೇನು, RBI ಮುದ್ರಿತ ಹಣಕ್ಕೂ ಬಿಟ್‌ಕಾಯಿನ್ ನಂತಹ ಕ್ರಿಪ್ಟೋಕರೆನ್ಸಿಗಳಿಗೂ ಇರುವ ಪ್ರಮುಖ ವ್ಯತ್ಯಾಸ, ಬಿಟ್‌ಕಾಯಿನ್ ವ್ಯವಹಾರ ಹೇಗೆ ನಡೆಯುತ್ತದೆ, ಬಿಟ್‌ಕಾಯಿನ್ ಉಪಯೋಗಗಳು ಮತ್ತು ಬಿಟ್‌ಕಾಯಿನ್ ಅಪಾಯಗಳು ಬಗ್ಗೆ ತಿಳಿಸಿಕೊಡುತ್ತದೆ.

ಮೂರು ವರ್ಷದ ಹಿಂದೆ ನಡೆದ ಬಿಟ್‌ಕಾಯಿನ್ ಹಗರಣದ ಕುರಿತು ಎಸ್‌ಐಟಿ ತನಿಖೆಗೆ ಕರ್ನಾಟಕ ಸರ್ಕಾರ ಆದೇಶಿಸಿದೆ ಎಂಬ ಸುದ್ದಿಯನ್ನು ನೀವೆಲ್ಲರೂ ಓದಿರುತ್ತೀರಿ. ಇಂದು ನಾವು ಸ್ಥೂಲವಾಗಿ ಈ ಬಿಟ್‌ಕಾಯಿನ್ ಅಂದರೆ ಏನು, ಅದಕ್ಕೂ RBI ಮುದ್ರಿತ ಹಣಕ್ಕೂ ಇರುವ ವ್ಯತ್ಯಾಸವೇನು, ಅದರಲ್ಲಿ ಹೇಗೆ ವ್ಯವಹರಿಸುವುದು, ಅದರ ಉಪಯೋಗ ಮತ್ತು ಅಪಾಯಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಬಿಟ್‌ಕಾಯಿನ್ ಎಂದರೇನು?

ಬಿಟ್ ಕಾಯಿನ್ ಡಿಜಿಟಲ್ ಯುಗದ ಒಂದು ಡಿಜಿಟಲ್ ಕರೆನ್ಸಿ ಅಥವಾ ಕ್ರಿಪ್ಟೋ ಕರೆನ್ಸಿ. ಇದಕ್ಕೆ ಮುದ್ರಣ ರೂಪ ಇಲ್ಲ. ಬಿಟ್ ಕಾಯಿನ್ ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿದ್ದು, ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದು ಇರುವುದಿಲ್ಲ. ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಅಕ್ಟೊಬರ್ 31, 2008 ರಂದು ಸತೋಷಿ ನಾಕಮೋಟೋ ಎಂಬ ಅನಾಮಿಕ ವ್ಯಕ್ತಿಯು ಬಿಟ್ ಕಾಯಿನ್ ನ ಆವಿಷ್ಕಾರ ಮಾಡಿದರು. ಬಿಟ್ ಕಾಯಿನ್ ಅನ್ನು 2009 ರಿಂದ ಒಪನ್ ಸೋರ್ಸ್ ತಂತ್ರಾಂಶದ ಮೂಲಕ ಬಿಡುಗಡೆ ಮಾಡಲಾಯಿತು. ಕ್ರಿಪ್ಟೋಕರೆನ್ಸಿಗಳ ಪೈಕಿ ಮೊದಲನೆಯದು ಬಿಟ್ ಕಾಯಿನ್. ಇದು ಇಂದಿಗೂ ಅತ್ಯಂತ ಜನಪ್ರಿಯವಾದ ಕ್ರಿಪ್ಟೋ ಕರೆನ್ಸಿ. ಜೊತೆಯಲ್ಲೇ ಸಾವಿರಾರು ಬಗೆಯ ಕ್ರಿಪ್ಟೋಕರೆನ್ಸಿಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅವುಗಳಲ್ಲಿ ಪ್ರಮುಖವಾದವು ಎಥೇರಿಯಮ್, ಲೈಟ್ ಕಾಯಿನ್, ರಿಪ್ಪಲ್ ಮತ್ತು ಡೌಜ್ ಕಾಯಿನ್. ‘ಬ್ಲಾಕ್‌ ಚೈನ್’ ಎಂಬ ತಂತ್ರಜ್ಞಾನ ಬಳಸಿ ಕ್ರಿಪ್ಟೋಕರೆನ್ಸಿಗೆ ಡಿಜಿಟಲ್ ರಕ್ಷಣೆ ನೀಡಲಾಗಿರುತ್ತದೆ. ಈ ಕರೆನ್ಸಿಯನ್ನು ಮೈನಿಂಗ್ ಅಥವಾ ತಯಾರಿಸಿ ವಿತರಿಸುವ ಹಲವು ಖಾಸಗಿ ಸಂಸ್ಥೆಗಳಿವೆ. ಆದ್ರೆ, ಸರ್ಕಾರವಾಗಲಿ, ಸರ್ಕಾರಿ ಸಂಸ್ಥೆಯಾಗಲಿ ಈ ವ್ಯವಹಾರ ನಡೆಸೋದಿಲ್ಲ ಹಾಗೂ ಭಾಗಿಯಾಗಿರುವುದಿಲ್ಲ.

RBI ಮುದ್ರಿತ ಹಣಕ್ಕೂ ಬಿಟ್‌ಕಾಯಿನ್ ನಂತಹ ಕ್ರಿಪ್ಟೋಕರೆನ್ಸಿಗಳಿಗೂ ಇರುವ ಪ್ರಮುಖ ವ್ಯತ್ಯಾಸ :-

RBI ಮುದ್ರಿತ ಹಣಕ್ಕೂ ಬಿಟ್‌ಕಾಯಿನ್ ನಂತಹ ಕ್ರಿಪ್ಟೋಕರೆನ್ಸಿಗಳಿಗೂ ಇರುವ ಪ್ರಮುಖ ವ್ಯತ್ಯಾಸಗಳೇನೆಂದರೆ, ಕ್ರಿಪ್ಟೋಕರೆನ್ಸಿಗಳು ಯಾವುದೇ ಸರ್ಕಾರ ಅಥವಾ ಸಂಸ್ಥೆಯ ಸುಪರ್ದಿನಲ್ಲಿ ಇಲ್ಲಾ, ಹಾಗಾಗಿ ಅವುಗಳ ಬೆಲೆ, ಮುದ್ರಣದ ಸಂಖ್ಯೆ ಮತ್ತು ಚಲಾವಣೆಯ ನಿಯಮಗಳನ್ನು ಯಾವುದೇ ಸರ್ಕಾರ ಅಥವಾ ಅಂತಾರಾಷ್ಟ್ರೀಯ ಅಥವಾ ದೇಶಿಯ ಸಂಸ್ಥೆಗಳು ನಿರ್ಧರಿಸುವುದಿಲ್ಲ. ಕ್ರಿಪ್ಟೋ ಕರೆನ್ಸಿಯ ಮಾರುಕಟ್ಟೆ ದರವು ಬೇಡಿಕೆ ಹಾಗೂ ಲಭ್ಯತೆ ಆಧಾರದ ಮೇಲೆ ಏರಿಳಿಕೆಯಾಗುತ್ತೆ. ಅಂದರೆ, ಬೇಡಿಕೆ ಹೆಚ್ಚಾದಂತೆ ಬೆಲೆಯೂ ಹೆಚ್ಚಾಗುತ್ತೆ. ಕೆಲುವೊಮ್ಮೆ ದಿನಕ್ಕೆ 50% ಕಿಂತಲೂ ಅದರ ಮಾರುಕಟ್ಟೆ ದರದಲ್ಲಿ ಏರಿಳಿತ ಆಗಿದ್ದುಂಟು. RBI ಮುದ್ರಿತ ಹಣದಂತೆ ಕ್ರಿಪ್ಟೋಕರೆನ್ಸಿಗಳಿಗೆ ಯಾವುದೇ ಸರ್ಕಾರ ಅಥವಾ ಸಂಸ್ಥೆಯ ಗ್ಯಾರಂಟಿ ಅಥವಾ ಅಭಯ ಹಸ್ತವಿರುವುದಿಲ್ಲ ಆದರೆ ಬ್ಲಾಕ್ ಚೈನ್ ಮತ್ತು ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ತಂತ್ರಜ್ಞಾನ ಬಳಸಿ ಪ್ರತಿಯೊಂದು ಬಿಟ್‌ಕಾಯಿನ್ ವ್ಯವಹಾರದ ಲೆಕ್ಕ ಮತ್ತು ಮಾಲೀಕತ್ವ ವನ್ನು ಕಾಪಾಡಲಾಗುತ್ತದೆ.

ಬಿಟ್‌ಕಾಯಿನ್ ವ್ಯವಹಾರ ಹೇಗೆ ನಡೆಯುತ್ತದೆ :-

ಬಿಟ್‌ಕಾಯಿನ್ ವಹಿವಾಟು ಎಂದರೆ ಸುರಕ್ಷಿತ ಬ್ಲಾಕ್‌ಚೈನ್ ನೆಟ್‌ವರ್ಕ್‌ನಲ್ಲಿ ಒಬ್ಬ ವ್ಯಕ್ತಿಯ ಡಿಜಿಟಲ್ ವ್ಯಾಲೆಟ್ ನಿಂದ ಇನ್ನೊಬನ  ಡಿಜಿಟಲ್ ವ್ಯಾಲೆಟ್ ಗೆ ಬಿಟ್‌ಕಾಯಿನ್ ಕಳುಹಿಸುವುದು. ಬಿಟ್‌ಕಾಯಿನ್ ಗಳನ್ನು ನೀವು ಪ್ರಮುಖವಾಗಿ ಎರಡು ವಿಧಾನಗಳಲ್ಲಿ ವ್ಯವಹರಿಸಬಹುದು. ಮೊದಲನೇ ಮಾರ್ಗದಲ್ಲಿ ನೀವು ದಲ್ಲಾಳಿಗಳು ಅಥವಾ ಕ್ರಿಪ್ಟೋ ಆನ್ಲೈನ್ ಬ್ರೋಕರ್ ಬಳಿ ನೀವು ಖರೀದಿಸಬಹುದು ಅಥವಾ ನಿಮ್ಮ ಡಿಜಿಟಲ್ ವ್ಯಾಲೆಟ್ ನಲ್ಲಿರುವ ಬಿಟ್‌ಕಾಯಿನ್ ಗಳನ್ನು ಮಾರಬಹುದು. ಎರೆಡನೆ ವಿಧಾನದಲ್ಲಿ ನೀವು ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳಲ್ಲಿ ನೇರವಾಗಿ ವ್ಯವಹರಿಸಬಹುದು. ಇಲ್ಲಿ ನೀವು ಬಿಟ್‌ಕಾಯಿನ್ ಗಳನ್ನು ಖರೀದಿಸಲು ನಿಮ್ಮ ಬ್ಯಾಂಕ್ ಖಾತೆಯಿಂದ ದಲ್ಲಾಳಿ ಅಥವಾ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಕ್ಕೆ ಹಣವನ್ನು ಕಳುಹಿಸುತ್ತೀರಾ ಅವರು ನಿಮ್ಮ ಡಿಜಿಟಲ್ ವ್ಯಾಲೆಟ್ ಗೆ ಬಿಟ್‌ಕಾಯಿನ್ ಕಳುಹಿಸುತ್ತಾರೆ ಅಥವಾ  ನೀವು ಬಿಟ್‌ಕಾಯಿನ್ ಮಾರಿದಾಗ ನಿಮ್ಮ ಬ್ಯಾಂಕ್ ಖಾತೆಗೆ, ದಲ್ಲಾಳಿ ಅಥವಾ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರ ಹಣವನ್ನು ಕಳುಹಿಸುತ್ತದೆ.

ಬಿಟ್‌ಕಾಯಿನ್ ಉಪಯೋಗಗಳು :-

ಬಿಟ್‌ಕಾಯಿನ್ ಉಪಯೋಗಗಳು ಈ ಕೆಳಗಿನಂತಿವೆ:

  • ಹಣದುಬ್ಬರದಿಂದ ರಕ್ಷಣೆ – ಬಿಟ್‌ಕಾಯಿನ್ ಗಳ ಸಂಖ್ಯೆ ಮುದ್ರಿತ ಹಣದಂತೆ ಪ್ರತಿ ವರ್ಷವು ಹೆಚುತ್ತಿರುವುದಿಲ್ಲ, ಹಾಗಾಗಿ ಅದರ ಮೌಲ್ಯ ಕುಸಿಯುದಿಲ್ಲಾ.
  • ಭದ್ರತೆ ಮತ್ತು ಗೌಪ್ಯತೆ ಕ್ರಿಪ್ಟೋಕರೆನ್ಸಿಯ ಪ್ರಮುಖ ಕಾಳಜಿಯಾಗಿದೆ.
  • ಬಿಟ್‌ಕಾಯಿನ್ ಅನ್ನು ಸುಲಭವಾಗಿ ಮತ್ತು ತ್ವರಿತವಾಗಿ ನಿಮ್ಮ ಸ್ಮಾರ್ಟ್ ಫೋನಿಂದಲೇ ವ್ಯವಹರಿಸಬಹುದು.
  • ಸರಕಾರಗಳು ಇದರ ಮೌಲ್ಯವನ್ನು ಇದ್ದಕಿದ್ದ ಹಾಗೆ ಕಡಿಮೆ ಮಾಡಲಾಗುವುದಿಲ್ಲ.
  • ಇದರಲ್ಲಿ ಕರೆನ್ಸಿ ಎಕ್ಸ್ಚೇಂಜ್ ಅಥವಾ ಟ್ರಾನ್ಸಾಕ್ಷನ್ ಶುಲ್ಕವಿರುವುದಿಲ್ಲಾ.

ಬಿಟ್‌ಕಾಯಿನ್ ಅಪಾಯಗಳು :-

ಬಿಟ್‌ಕಾಯಿನ್ ನಿಂದ ಇರುವ ಅಪಾಯಗಳು ಈ ಕೆಳಗಿನಂತಿವೆ:

  • ಭಾರತ ಮತ್ಯಾವುದೇ ಪ್ರಮುಖ ದೇಶಗಳು ಬಿಟ್‌ಕಾಯಿನ್ ಕರೆನ್ಸಿಯನ್ನು ಮಾನ್ಯ ಮಾಡಿಲ್ಲಾ.
  • ಇದು ಅಕ್ರಮ ವಹಿವಾಟುಗಳಿಗೆ ಬಳಕೆಯಾಗಬಹುದು.
  • ವಿಕೇಂದ್ರೀಕೃತವಾಗಿದ್ದರೂ ಇನ್ನೂ ಕೆಲವು ಸಂಸ್ಥೆಗಳಿಂದ ನಿರ್ವಹಿಸಲ್ಪಡುತ್ತದೆ, ಹಾಗಾಗಿ ಭದ್ರತೆ ಮತ್ತು ಗೌಪ್ಯತೆಯ ಖಾತಿರಿ ಇಲ್ಲಾ.
  • ಕ್ರಿಪ್ಟೋಕರೆನ್ಸಿ ಮೈನಿಂಗ್(ತಯಾರಿಕೆ ಮತ್ತು ಬುಕ್ಕೀಪಿಂಗ್) ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
  • ಕಳ್ಳತನ ಮತ್ತು ನಷ್ಟವಾದಲ್ಲಿ ದೂರು ದಾಖಲಿಸಲು ಅಥವಾ ನ್ಯಾಯ ಕೇಳಲು ಸಂಸ್ಥೆಗಳ ಕೊರತೆ.
ಬಿಟ್‌ಕಾಯಿನ್

ಈ ಅಂಕಣ ನಿಮಗೆ ಉಪಯುಕ್ತವೆನ್ನಿಸಿದ್ದರೆ ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೇ ಈ ಅಂಕಣವನ್ನೋ ಅಥವಾ ಪೋಸ್ಟರನ್ನೋ ಅಥವಾ ಯೌಟ್ಯೂಬ್ ವೀಡಿಯೋವನ್ನೂ ಹಂಚಿಕೊಳ್ಳಿ.
ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಯನ್ನು, ಅಭಿಪ್ರಾಯವನ್ನು ಮತ್ತು ನಿಮಗಾದ ಏನಾದರೂ ಇದೆ ತರಹದ ಅನುಭವಗಳನ್ನು ಅಥವಾ ನಿಮಗೆ ಬೇಕಾದ ಯಾವುದಾದರು ವಿಷ್ಯದ ಬಗ್ಗೇ ನಾನು ಬರೆಯ ಬೇಕೆಂದರೆ ಕೆಳಗಿನ ಕಮೆಂಟ್ ಸೆಕ್ಷನ್ ನಲ್ಲಿ ಹಂಚಿಕೊಳ್ಳಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ