Site icon Welcome to CYBER MITHRA

ಹಣಕಾಸು ಕ್ಷೇತ್ರದಲ್ಲಿ AI ಕ್ರಾಂತಿ : ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್‌ಗಾಗಿ RBI ಸೂತ್ರಗಳು

RBI

ನಾವು ತಂತ್ರಜ್ಞಾನದ ಹೊಸ ಯುಗದಲ್ಲಿದ್ದೇವೆ. ಎಲ್ಲೆಡೆ ನೋಡಿದರೂ, ಕೃತಕ ಬುದ್ಧಿಮತ್ತೆ (Artificial Intelligence – AI) ಸಾಧನಗಳು ನಮ್ಮ ಜೀವನವನ್ನು ಸುಲಭ, ವೇಗ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತವೆ ಎಂದು ಭರವಸೆ ನೀಡುತ್ತಿವೆ. ವಂಚನೆ ಪತ್ತೆಹಚ್ಚುವುದು, ಕ್ರೆಡಿಟ್ ಕಾರ್ಡ್ ಖರ್ಚುಗಳಲ್ಲಿ ಅಸಂಗತತೆ ಕಂಡುಬಂದರೆ ಎಚ್ಚರಿಕೆ ಕೊಡುವುದು, ಇನ್ಶುರನ್ಸ್ ಕಂಪನಿಗಳ ಚಾಟ್‌ಬಾಟ್ ಮೂಲಕ ತಕ್ಷಣ ಉತ್ತರ ಪಡೆಯುವುದು, ಇವು AIಯಿಂದ ಸಾಧ್ಯವಾಗುತ್ತಿದೆ. ಆದರೆ ಈ ತಂತ್ರಜ್ಞಾನ ಸರಿಯಾಗಿ ಬಳಸದೇ ಇದ್ದರೆ, ಜನರಿಗೆ ಅನ್ಯಾಯವಾಗುವ ಅಪಾಯವಿದೆ. ಉದಾಹರಣೆಗೆ, AI ತಪ್ಪಾಗಿ ಯಾರಾದರೂ ಸಾಲ ಅರ್ಜಿ ತಿರಸ್ಕರಿಸಿದರೆ? ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅನುಮತಿ ಇಲ್ಲದೆ ಸಂಗ್ರಹಿಸಿ ಬೇರೆ ಕೆಲಸಕ್ಕೆ ಬಳಸಿದರೆ?, ಈ ಅಪಾಯಗಳನ್ನು ತಪ್ಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಏನು ಮಾಡುತ್ತಿದೆ ಎಂಬುದನ್ನು ನೋಡೋಣ.

ಕಳೆದ ಕೆಲವು ವಾರಗಳಿಂದ ನಾನು AI ಮತ್ತು ಭಾರತದ ನ್ಯಾಯಾಂಗ ವ್ಯವಸ್ಥೆ ಕುರಿತು ಹತ್ತಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದೇನೆ, ಅದನ್ನು ನೀವು ಓದಲು ಈ ಹಿಂದೆ ಬರೆದ ಲೇಖನಗಳಾದ ಭಾರತದ ನ್ಯಾಯಾಂಗ ವ್ಯವಸ್ಥೆಯು ಮತ್ತು ಪೊಲೀಸ್ AI ಅನ್ನು ಹೇಗೆ ಬಳಸುತ್ತಿವೆ ಅನ್ನು ಸಂದರ್ಶಿಸಿ.. ಅದರ ಮುಂದಿನ ಬಾಗವಾಗಿ ಇನ್ನೊಂದು ಪ್ರಮುಖ ಆಡಳಿತ ಮತ್ತು ನಿಯಂತ್ರಕ ಅಂಗವಾದ RBI, AI ಕುರಿತು ಕಳೆದ ಆಗಸ್ಟ್ ತಿಂಗಳಲ್ಲಿ ತನ್ನ ನಿಲವು, ಹೊಣೆಗಾರಿಕೆ ಮತ್ತು ತನ್ನ ನಿಯಂತ್ರಣದಲ್ಲಿ ಬರುವ ಎಲ್ಲ ಸಂಸ್ಥೆಗಳು ಪಾಲಿಸಬೇಕಾದ ನಿಯಮಗಳ ಬಗ್ಗೆ “ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಮತ್ತು ನೈತಿಕ ಸಕ್ರಿಯಗೊಳಿಸುವಿಕೆ” ಎಂಬ ಒಂದು ಚೌಕಟ್ಟನ್ನು ಬಿಡುಗಡೆ ಮಾಡಿದ್ದು. ಈ ಲೇಖನದಲ್ಲಿ ಅದರ ಏಳು ಮೂಲ ತತ್ವಗಳೇನು ಮತ್ತು ಆ ತತ್ವಗಳನ್ನು ಸಾಕಾರಗೊಳಿಸಲು RBI ನಿಯಂತ್ರದಲ್ಲಿ ಬರುವ ಎಲ್ಲ ಹಣಕಾಸು ಸಂಸ್ಥೆಗಳು ಮಾಡಬೇಕಾದ ಪ್ರಮುಖ ಕೆಲಸಗಳ ಮತ್ತು ಆ ತತ್ವಗಳನ್ನು ಅನುಷ್ಠಾನಗೊಳಿಸಲು ಸೂಚಿಸಿರುವ ಆರು ಪ್ರಮುಖ ಸ್ತಂಭಗಳ ಬಗ್ಗೆ ಮತ್ತು ಜನ ಸಾಮಾನ್ಯರಿಗೆ ಇದರಿಂದ ಆಗುವ ಉಪಯೋಗಗಳ ಕಿರು ಪರಿಚಯ ನೀಡಲಿದ್ದೇನೆ.

ಹಣಕಾಸು ವಲಯದಲ್ಲಿ AI ಯಿಂದಾಗುವ ಲಾಭಗಳು :

  1. ವೇಗದ ಸೇವೆ : ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ, ದಿನಗಟ್ಟಲೆ ಕಾಯುವ ಬದಲು, AI ಕೆಲವೇ ನಿಮಿಷಗಳಲ್ಲಿ ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಉತ್ತರ ನೀಡಬಹುದು.
  2. ಎಲ್ಲರಿಗೂ ಸಮಾನ ಅವಕಾಶ : ಹಳ್ಳಿಗಳಲ್ಲಿ ಅಥವಾ ಸಣ್ಣ ಪಟ್ಟಣಗಳಲ್ಲಿ ಇರುವವರಿಗೆ, ಸರಿಯಾದ ದಾಖಲೆಗಳಿಲ್ಲದವರಿಗೆ ಸಾಂಪ್ರದಾಯಿಕ ಬ್ಯಾಂಕುಗಳು ಸುಲಭವಾಗಿ ಸಾಲ ನೀಡುವುದಿಲ್ಲ. ಆದರೆ AI, ವ್ಯಕ್ತಿಯ ಮೊಬೈಲ್ ಬಳಕೆಯ ರೀತಿ, ಆನ್‌ಲೈನ್ ಖರೀದಿಗಳು, ಅಥವಾ ಯುಟಿಲಿಟಿ ಬಿಲ್ ಪಾವತಿಗಳನ್ನು ವಿಶ್ಲೇಷಿಸಿ ಅವರ ಸಾಲ ತೀರಿಸುವ ಸಾಮರ್ಥ್ಯವನ್ನು ಅಂದಾಜಿಸಬಹುದು. ಇದರಿಂದ, ಹಿಂದೆ ಬ್ಯಾಂಕಿಂಗ್ ಸೇವೆಯಿಂದ ವಂಚಿತರಾಗಿದ್ದ ಲಕ್ಷಾಂತರ ಜನರಿಗೆ ಸಹಾಯವಾಗುತ್ತದೆ.
  3. ಉತ್ತಮ ಗ್ರಾಹಕ ಸೇವೆ: ಬ್ಯಾಂಕಿಗೆ ಕರೆ ಮಾಡಿದಾಗ, “ಎಲ್ಲಾ ಸಿಬ್ಬಂದಿಗಳು ಬೇರೆ ಕರೆಯಲ್ಲಿ ವ್ಯಸ್ತರಾಗಿದ್ದಾರೆ” ಎಂಬ ಉತ್ತರ ಕೇಳಿ ಬೇಸರವಾಗಿದೆಯೇ? AI ಚಾಲಿತ ಚಾಟ್‌ಬಾಟ್‌ಗಳು 24/7 ನಮ್ಮ ಪ್ರಶ್ನೆಗಳಿಗೆ ತಕ್ಷಣವೇ ಉತ್ತರ ನೀಡಬಲ್ಲವು.
  4. ವಂಚನೆ ತಡೆಗಟ್ಟುವಿಕೆ: ಆನ್‌ಲೈನ್ ವಂಚನೆಗಳು ಹೆಚ್ಚಾಗುತ್ತಿರುವ ಈ ಕಾಲದಲ್ಲಿ, AI ಒಂದು ಕಾವಲುಗಾರನಂತೆ ಕೆಲಸ ಮಾಡುತ್ತದೆ. ನಮ್ಮ ಖಾತೆಯಲ್ಲಿ ನಡೆಯುವ ಪ್ರತಿಯೊಂದು ವ್ಯವಹಾರವನ್ನು ಗಮನಿಸಿ, ಯಾವುದಾದರೂ ಅನುಮಾನಾಸ್ಪದವಾಗಿ ಕಂಡರೆ ತಕ್ಷಣವೇ ನಮ್ಮನ್ನು ಎಚ್ಚರಿಸುತ್ತದೆ.
  5. ವೈಯಕ್ತಿಕ ಸಲಹೆ: ನಮ್ಮ ಖರ್ಚು-ವೆಚ್ಚಗಳನ್ನು ವಿಶ್ಲೇಷಿಸಿ, “ನೀವು ಇಲ್ಲಿ ಹೆಚ್ಚು ಖರ್ಚು ಮಾಡುತ್ತಿದ್ದೀರಿ, ಹೀಗೆ ಉಳಿತಾಯ ಮಾಡಬಹುದು” ಎಂಬಂತಹ ವೈಯಕ್ತಿಕ ಆರ್ಥಿಕ ಸಲಹೆಗಳನ್ನು AI ನೀಡಬಲ್ಲದು.

AI ಅಪಾಯಗಳು ಮತ್ತು ಸವಾಲುಗಳು:

ನಾಣ್ಯದ ಇನ್ನೊಂದು ಮುಖದಂತೆ, AI ಯಿಂದ ಕೆಲವು ಅಪಾಯಗಳೂ ಇವೆ.

  1. ಪಕ್ಷಪಾತ (Bias): AI ತಾನಾಗಿಯೇ ಏನನ್ನೂ ಕಲಿಯುವುದಿಲ್ಲ, ಅದಕ್ಕೆ ನಾವು ನೀಡಿದ ಮಾಹಿತಿಯ (ಡೇಟಾ) ಆಧಾರದ ಮೇಲೆ ಅದು ಕಲಿಯುತ್ತದೆ. ಒಂದು ವೇಳೆ, ನಾವು ನಗರ ಪ್ರದೇಶದ ಜನರ ಡೇಟಾವನ್ನೇ ಹೆಚ್ಚು ನೀಡಿ ತರಬೇತಿ ನೀಡಿದರೆ, ಆ AI ಹಳ್ಳಿಗಳ ಜನರಿಗೆ ಸಾಲ ನೀಡಲು ಹಿಂಜರಿಯಬಹುದು. ಇದು ತಾರತಮ್ಯಕ್ಕೆ ಕಾರಣವಾಗುತ್ತದೆ.
  2. “ಬ್ಲ್ಯಾಕ್ ಬಾಕ್ಸ್” ಸಮಸ್ಯೆ: ಕೆಲವೊಮ್ಮೆ, AI ಒಂದು ನಿರ್ಧಾರವನ್ನು (ಉದಾಹರಣೆಗೆ, ನಿಮ್ಮ ಸಾಲದ ಅರ್ಜಿಯನ್ನು ತಿರಸ್ಕರಿಸುವುದು) ಏಕೆ ತೆಗೆದುಕೊಂಡಿತು ಎಂದು ವಿವರಿಸಲು ಸಾಧ್ಯವಾಗುವುದಿಲ್ಲ. ಅದರ ಆಂತರಿಕ ಕಾರ್ಯವೈಖರಿ ನಿಗೂಢವಾಗಿರುತ್ತದೆ. ಇದನ್ನು “ಬ್ಲ್ಯಾಕ್ ಬಾಕ್ಸ್” ಸಮಸ್ಯೆ ಎನ್ನುತ್ತಾರೆ.
  3. ಡೇಟಾ ಸುರಕ್ಷತೆ: AI ಕೆಲಸ ಮಾಡಲು ಅಪಾರ ಪ್ರಮಾಣದ ಡೇಟಾ ಬೇಕು. ನಮ್ಮ ವೈಯಕ್ತಿಕ ಮತ್ತು ಆರ್ಥಿಕ ಮಾಹಿತಿಯನ್ನು ಅದು ಬಳಸಿಕೊಳ್ಳುವುದರಿಂದ, ಆ ಮಾಹಿತಿ ಸೋರಿಕೆಯಾಗುವ ಅಥವಾ ದುರ್ಬಳಕೆಯಾಗುವ ಅಪಾಯವಿರುತ್ತದೆ.
  4. ಸೈಬರ್ ದಾಳಿಗಳು: ಹ್ಯಾಕರ್‌ಗಳು AI ತಂತ್ರಜ್ಞಾನವನ್ನೇ ಬಳಸಿ, ಇನ್ನಷ್ಟು ಅಪಾಯಕಾರಿಯಾದ ಸೈಬರ್ ದಾಳಿಗಳನ್ನು ನಡೆಸಬಹುದು. ಉದಾಹರಣೆಗೆ, ನಿಮ್ಮ ಧ್ವನಿಯನ್ನು ನಕಲು ಮಾಡಿ (Deepfake) ಬ್ಯಾಂಕಿಗೆ ಕರೆ ಮಾಡಿ ಹಣ ವರ್ಗಾಯಿಸಲು ಪ್ರಯತ್ನಿಸಬಹುದು.
  5. ಅತಿಯಾದ ಅವಲಂಬನೆ: ಎಲ್ಲದಕ್ಕೂ AI ಮೇಲೆ ಅವಲಂಬಿತರಾದರೆ, ಅದರ ವ್ಯವಸ್ಥೆಯಲ್ಲಿ ಏನಾದರೂ ದೋಷ ಉಂಟಾದಾಗ ಇಡೀ ಆರ್ಥಿಕ ವ್ಯವಸ್ಥೆಯೇ ಕುಸಿಯುವ ಅಪಾಯವಿದೆ.

ಈ ಎಲ್ಲಾ ಅವಕಾಶಗಳು ಮತ್ತು ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು, RBI ಸಮಿತಿಯು ಒಂದು ಸಮತೋಲಿತ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸಿದೆ.

RBI ನ AI ರೂಪರೇಷೆಯ ಮುಖ್ಯ ತತ್ವಗಳು :-

  1. ನಂಬಿಕೆಯೇ ಅಡಿಪಾಯ : ಹಣಕಾಸು ವ್ಯವಸ್ಥೆಯು ನಂಬಿಕೆಯ ಮೇಲೆ ನಿಂತಿದೆ ಮತ್ತು AI ಅನ್ನು ಈ ನಂಬಿಕೆಯನ್ನು ಬಲಪಡಿಸುವ ರೀತಿಯಲ್ಲಿ ಮಾತ್ರ ಬಳಸಬೇಕು. 
  2. ಮನುಷ್ಯ ಮೊದಲು : AI ಒಂದು ಸಾಧನವೇ ಹೊರತು ನಿರ್ಣಯಗಳನ್ನು ತೆಗೆದುಕೊಳ್ಳುವ ಅದಿಕಾರಿಯಲ್ಲಾ. AI ಮನುಷ್ಯರಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಬೇಕಷ್ಟೇ, ಅಂತಿಮ ತೀರ್ಪು ಯಾವಾಗಲೂ ಮನುಷ್ಯನ ಕೈಯಲ್ಲಿರಬೇಕು.
  3. ಅತಿಯಾದ ನಿರ್ಬಂಧಗಳಿಗಿಂತ ನಾವೀನ್ಯತೆಗೆ ಪ್ರಾಮುಖ್ಯತೆ : RBI AI ಬಳಕೆಯನ್ನು ಉತ್ತೇಜಿಸಲು ಬಯಸುತ್ತದೆ, ಜವಾಬ್ದಾರಿಯುತ ನಾವೀನ್ಯತೆಯನ್ನು ಪೋಷಿಸುವುದು RBI ನ ಗುರಿಯಾಗಿರುತ್ತದೆ.
  4. ಸಮಾನತೆ : AI ವ್ಯವಸ್ಥೆಗಳನ್ನು ಯಾವುದೇ ವ್ಯಕ್ತಿ ಅಥವಾ ಗುಂಪಿನ ವಿರುದ್ಧ ತಾರತಮ್ಯ ಮಾಡದಂತೆ, ನ್ಯಾಯಸಮ್ಮತ ಮತ್ತು ಪಕ್ಷಪಾತರಹಿತವಾಗಿ ವಿನ್ಯಾಸಗೊಳಿಸಬೇಕು ಪರೀಕ್ಷಿಸಬೇಕು. ಇದನ್ನು ಹಣಕಾಸು ಸೇವೆಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಬಳಸಬೇಕು.
  5. ಹೊಣೆಗಾರಿಕೆ : ಒಂದು ಹಣಕಾಸು ಸಂಸ್ಥೆ AI ಬಳಸಿದರೆ, ಸಂಸ್ಥೆಯೇ ಎಲ್ಲಾ AI ನಿರ್ಧಾರಗಳಿಗೆ ಸಂಪೂರ್ಣವಾಗಿ ಜವಾಬ್ದಾರಿಯಾಗಿರುತ್ತದೆ. ಅಂದರೆ, AI ತಪ್ಪು ಮಾಡಿದರೆ ಬ್ಯಾಂಕ್ “ಸಿಸ್ಟಮ್ ತಪ್ಪುಮಾಡಿತು” ಎಂದು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
  6. ಪಾರದರ್ಶಕತೆ : AI ಯಾವ ರೀತಿಯಲ್ಲಿ ನಿರ್ಧಾರ ಕೈಗೊಂಡಿತು ಎಂಬುದನ್ನು ಗ್ರಾಹಕರು ತಿಳಿಸಬೇಕು. ಉದಾಹರಣೆಗೆ, ನಿಮ್ಮ ಕ್ರೆಡಿಟ್ ಮಿತಿ ಏಕೆ ಬದಲಾಯಿತೆಂದು ಬ್ಯಾಂಕ್ ಸರಳವಾಗಿ ವಿವರಿಸಬೇಕು.
  7. ಮಾಹಿತಿ ಗೌಪ್ಯತೆ, ಅನುಮತಿ ಮತ್ತು ಭದ್ರತೆ : ನಿಮ್ಮ ವೈಯಕ್ತಿಕ ಮಾಹಿತಿಯನ್ನು  ಬಳಸುವ ಮೊದಲು ನಿಮ್ಮ ಅನುಮತಿ ಪಡೆಯಬೇಕು. AI ಅದನ್ನು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲಾ. ಸಂಸ್ಥೆಗಳೇ ನಿಮ್ಮ ಮಾಹಿತಿಯ ಗೌಪ್ಯತೆಯ ಸಂಪೂರ್ಣ ಭದ್ರತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. 

ಹಣಕಾಸು ಸಂಸ್ಥೆಗಳು ಪಾಲಿಸಬೇಕಾದ ನಿಯಮಗಳು :-

RBI ನ 7 ತತ್ವಗಳ ಅನುಷ್ಠಾನಕ್ಕೆ 6 ಸ್ತಂಭಗಳು :-

RBIಯ ಹೊಣೆಗಾರಿಕೆಯ AI ಚೌಕಟ್ಟಿನ 7 ತತ್ವಗಳಾದ “ವಿಶ್ವಾಸ, ಜನಪ್ರಥಮ, ನವೀನತೆ, ಸಮಾನತೆ, ಹೊಣೆಗಾರಿಕೆ, ಪಾರದರ್ಶಕತೆ, ಮಾಹಿತಿ ಗೌಪ್ಯತೆ, ಅನುಮತಿ ಮತ್ತು ಭದ್ರತೆ” ಅನ್ನು ನೆಲೆಗೆ ತರಲು 6 ಸ್ತಂಭಗಳ ಮೂಲಕ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು AI ತಂತ್ರಜ್ಞಾನವನ್ನು ನೀತಿ, ನ್ಯಾಯ, ಪಾರದರ್ಶಕತೆಗಳೊಂದಿಗೆ ಬಳಸುವಂತೆ ನೋಡಿಕೊಳ್ಳಲಿದೆ. ಈ 6 ಸ್ತಂಭಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ AI ಬಳಕೆಯನ್ನು ಉತ್ತೇಜಿಸುವ ಮೊದಲ ಮೂರು ಸ್ತಂಭಗಳು, ಮತ್ತು ಅದರಿಂದಾಗುವ ಅಪಾಯಗಳನ್ನು ತಗ್ಗಿಸುವ ನಂತರದ ಮೂರು ಸ್ತಂಭಗಳು.

1. ಮೂಲಸೌಕರ್ಯ : ಇದರಲ್ಲಿ ಉತ್ತಮ ಗುಣಮಟ್ಟದ ಡೇಟಾಗಾಗಿ ಹಣಕಾಸು ಡೇಟಾ ಸರೋವರ ಮತ್ತು ಅದನ್ನು ಬಳಸಲು AI ಪ್ರಯೋಗಾಲಯಗಳ ಸ್ಥಾಪನೆ, ಆರ್ಥಿಕ ಪ್ರೋತ್ಸಾಹ ಮತ್ತು ತಾಂತ್ರಿಕ ನೆರವು ನೀಡುವುದು, ಇದನ್ನೆಲ್ಲಾ ಬಳಸಿ ನಮ್ಮ ದೇಶದ ಅಗತ್ಯಗಳಿಗೆ ತಕ್ಕಂತೆ ವಿಶೇಷವಾದ AI ಮಾದರಿಗಳನ್ನು ಅಭಿವೃದ್ಧಿಪಡಿಸುವುದಾಗಿದೆ.

2. ನೀತಿ : AI ತಂತ್ರಜ್ಞಾನ ವೇಗಕ್ಕೆ ಹೊಂದಿಕೊಳ್ಳುವ ನಿಯಮಗಳು, ಎಲ್ಲರ ಆರ್ಥಿಕ ಸೇರ್ಪಡೆಗೆ ನಿಯಮದಲ್ಲಿ ಸ್ವಲ್ಪ ಸಡಿಲಿಕೆ ಮತ್ತು AI ಅಳವಡಿಕೆಯಲ್ಲಿ ಆಗುವ ತಪ್ಪುಗಳಿಗೆ ನ್ಯಾಯಯುತ ಹೊಣೆಗಾರಿಕೆಯನ್ನು ಪಾಲಿಸುವುದಾಗಿರುತ್ತದೆ.

3.  ಸಾಮರ್ಥ್ಯ ವೃದ್ಧಿ : ಇದರಲ್ಲಿ ಎಲ್ಲರಿಗೂ AI ತಂತ್ರಜ್ಞಾನ ಮತ್ತು ಅದರಿಂದಾಗುವ ಅಪಾಯಗಳ ಬಗ್ಗೆ ತರಬೇತಿ ನೀಡುವುದು, ಅನುಭವ/ಜ್ಞಾನ ಹಂಚಿಕೆಗಾಗಿ ವೇದಿಕೆ ನೀಡುವುದು, ಉತ್ತಮ AI ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸುವುದು ಸೇರಿದೆ.

4. ಆಡಳಿತ : ಪ್ರತಿಯೊಂದು ಸಂಸ್ಥೆಗೆ ಅದರದೇ ಆದ AI ನೀತಿ, ಗ್ರಾಹಕರ ಮಾಹಿತಿ ನಿರ್ವಹಣೆಗಾಗಿ ಕಟ್ಟುನಿಟ್ಟಾದ ನಿಯಮ ಮತ್ತು AI ವ್ಯವಸ್ಥೆಗಳ ಮೇಲ್ವಿಚಾರಣೆ ವ್ಯವಸ್ಥೆ ಸ್ಥಾಪನೆ.

5. ರಕ್ಷಣೆ : AI ನಿರ್ಧಾರಗಳಿಂದ ಗ್ರಾಹಕರ ಹಿತರಕ್ಷಣೆಗಾಗಿ ದೂರು ವೇದಿಕೆ  ಹಾಗು AI ವ್ಯವಸ್ಥೆಗಳ ಸೈಬರ್ ಸುರಕ್ಷತೆಗಾಗಿ ರೆಡ್ ಟೀಮಿಂಗ್ ಸ್ಥಾಪನೆ.

6. ಭರವಸೆ : ಪ್ರತಿಯೊಂದು ಸಂಸ್ಥೆಯು ತನ್ನದೇ ಆದ AI ದಾಸ್ತಾನು ಸ್ಥಾಪಿಸಬೇಕು, AI ವ್ಯವಸ್ಥೆಗಳು ಸರಿಯಾಗಿ, ನ್ಯಾಯಯುತವಾಗಿ ಮತ್ತು ನಿಯಮಗಳ ಪ್ರಕಾರ ಕೆಲಸ ಮಾಡುತ್ತಿವೆಯೇ ಎಂಬುದನ್ನು ಪರೀಕ್ಷಿಸಲು ನಿಯಮಿತ ಲೆಕ್ಕಪರಿಶೋಧನೆ ಮತ್ತು ತಮ್ಮ ವಾರ್ಷಿಕ ವರದಿಗಳಲ್ಲಿ AI ಬಳಕೆಯ ಬಗ್ಗೆ ಪಾರದರ್ಶಕತೆಯಿಂದ ಬಹಿರಂಗಪಡಿಸಬೇಕು.

ಸಾಮಾನ್ಯ ಜನರಿಗೆ ಆಗುವ ಉಪಯೋಗಗಳು :-

ಕಡೆಯದಾಗಿ, RBI ನ ಈ ಚೌಕಟ್ಟು AI ಎಂಬ ಎರಡು ಅಲಗಿನ ಕತ್ತಿಯನ್ನು ಹೇಗೆ ಜಾಗರೂಕತೆಯಿಂದ ಮತ್ತು ಮಾನವೀಯತೆಯ ಸ್ಪರ್ಶದೊಂದಿಗೆ ಬಳಸಬಹುದು ಎಂಬುದಕ್ಕೆ ಒಂದು ದಿಕ್ಸೂಚಿಯಾಗಿದೆ. ಇದು ತಂತ್ರಜ್ಞಾನ ಮತ್ತು ಮನುಷ್ಯರ ನಡುವೆ ಒಂದು ಸೇತುವೆಯನ್ನು ನಿರ್ಮಿಸಿ, ಭಾರತದ ಆರ್ಥಿಕ ಪ್ರಗತಿಗೆ ಹೊಸ ದಿಕ್ಕನ್ನು ನೀಡುವ ಒಂದು ದಿಟ್ಟ ಹೆಜ್ಜೆಯಾಗಿದೆ.

Exit mobile version