ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸೈಬರ್ ಅಪರಾಧಗಳ ಸಂಖ್ಯೆ, ಅದರಲ್ಲೂ ಸೈಬರ್ ಹಣ ವರ್ಗಾವಣೆ ಹಗರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತಲೇ ಇದೆ. ಸರಕಾರ ಮತ್ತು ಅದರ ವಿವಿಧ ಸಂಸ್ಥೆಗಳು ಸೈಬರ್ ವಂಚನೆಗಳ ತಡೆಗಟ್ಟುವಿಕೆಯ ಬಗ್ಗೆ ಅನೇಕ ಕ್ರಮಗಳನ್ನು ಕಳೆದ ಕೆಲವು ವರ್ಷಗಳಿಂದ ತೆಗೆದುಕ್ಕೊಂಡಿದೆ. ಅದರಲ್ಲಿ ಪ್ರಮುಖವಾದವು ಸಂಚಾರ್ ಸಾಥಿ, ಸೈಬರ್ ಸಹಾಯವಾಣಿ, ಪ್ರತ್ಯೇಕ ಸೈಬರ್ ಪೊಲೀಸ್ ಠಾಣೆ, ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಮತ್ತು ಸೈಬರ್ ಅಪರಾಧ ದೂರು/ಸಹಾಯ ಜಾಲತಾಣ(www.cybercrime.gov.in), ಇವುಗಳ ಬಗ್ಗೆ ನಾನು ಸುದೀರ್ಘವಾಗಿ ಈ ಹಿಂದೆ ನನ್ನ ಸೈಬರ್ ಮಿತ್ರ ಅಂಕಣಗಳಲ್ಲಿ ಬರೆದಿದ್ದೇನೆ, ಅದನ್ನು ಸಂದರ್ಶಿಸಿ. ಇಂದಿನ ಅಂಕಣದಲ್ಲಿ ನಾನು ದೂರಸಂಪರ್ಕ ಇಲಾಖೆಯು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಲಹೆಯ ಮೇರೆಗೆ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಅಭಿವೃದ್ಧಿಪಡಿಸಿದ ಹಣಕಾಸು ವಂಚನೆ ಅಪಾಯ ಸೂಚಕವನ್ನು (FRI) ಬಗ್ಗೆ ತಿಳಿಸಿಕೊಡಲಿದ್ದೇನೆ.
“ಹಣಕಾಸು ವಂಚನೆ ಅಪಾಯ ಸೂಚಕ (FRI)” ಎಂದರೇನು?
ದೂರಸಂಪರ್ಕ ಇಲಾಖೆಯ ಡಿಜಿಟಲ್ ಇಂಟೆಲಿಜೆನ್ಸ್ ಯುನಿಟ್ (ಡಿಐಯು) ಮೇ 2025ರಲ್ಲಿ ಪ್ರಾರಂಭಿಸಿದ ಹಣಕಾಸು ವಂಚನೆ ಅಪಾಯ ಸೂಚಕ (FRI) ಅಪಾಯ ಆಧಾರಿತ ಮೆಟ್ರಿಕ್ ಆಗಿದ್ದು, ಇದು ನೀವು ಹಣ ಕಲಿಸುವ ಮೊಬೈಲ್ ಸಂಖ್ಯೆಯನ್ನು ಆರ್ಥಿಕ ವಂಚನೆ ಅಪಾಯದ ಆದರದ ಮೇಲೆ ಸಾಮಾನ್ಯ, ಮಾಧ್ಯಮ ಮತ್ತು ಹೆಚ್ಚು ಅಪಾಯಕಾರಿ ಎಂದು ವರ್ಗಿಕರಿಸಲಾಗುತ್ತದೆ. ಈ ವರ್ಗೀಕರಣ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C), ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (NCRP), ದೂರಸಂಪರ್ಕ ಇಲಾಖೆಯ ಚಕ್ಷು ಪ್ಲಾಟ್‌ಫಾರ್ಮ್ ಮತ್ತು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಹಂಚಿಕೊಂಡ ಗುಪ್ತಚರ ಸೇರಿದಂತೆ ವಿವಿಧ ಮಧ್ಯಸ್ಥಗಾರರಿಂದ ಪಡೆದ ಒಳಹರಿವಿನ ಫಲಿತಾಂಶವಾಗಿದೆ. ಇದು ಮಧ್ಯಸ್ಥಗಾರರಿಗೆ ವಿಶೇಷವಾಗಿ ಬ್ಯಾಂಕುಗಳು, ಎನ್‌ಬಿಎಫ್‌ಸಿಗಳು ಮತ್ತು ಯುಪಿಐ ಸೇವಾ ಪೂರೈಕೆದಾರರಿಗೆ – ಅಂತಹ ಹೆಚ್ಚು ಅಪಾಯಕಾರಿ ಮೊಬೈಲ್ ಸಂಖ್ಯೆಗೆ ಹಣ ವಿತರಣೆ ತಡೆಯಲು ಮತ್ತು ಹೆಚ್ಚುವರಿ ಗ್ರಾಹಕ ಸಂರಕ್ಷಣಾ ಕ್ರಮ ತೆಗೆದುಕೊಳ್ಳಲು ಅಧಿಕಾರ ನೀಡುತ್ತದೆ. ಅನುಮಾನಾಸ್ಪದ ವಹಿವಾಟುಗಳನ್ನು ಕಡಿಮೆ ಮಾಡುವುದು, ಗ್ರಾಹಕರಿಗೆ ಸೂಚಿಸುವುದು ಅಥವಾ ಎಚ್ಚರಿಕೆ ನೀಡುವುದು ಮತ್ತು ಹೆಚ್ಚಿನ ಅಪಾಯವೆಂದು ಗುರುತಿಸಲಾದ ವಹಿವಾಟುಗಳನ್ನು ವಿಳಂಬಗೊಳಿಸುವುದು ಇದರ ಮುಖ್ಯ ಗುರಿಯಾಗಿದೆ. ಫೋನ್ ಪೇ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಪೇಟಿಎಂ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಂತಹ ಪ್ರಮುಖ ಸಂಸ್ಥೆಗಳೊಂದಿಗೆ ಈ ವ್ಯವಸ್ಥೆಯ ಉಪಯುಕ್ತತೆ ಈಗಾಗಲೇ ಪ್ರದರ್ಶಿಸಲಾಗಿದೆ. ದೂರಸಂಪರ್ಕ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಶಂಕಿತ ವಂಚನೆಗಳ ವಿರುದ್ಧ ತ್ವರಿತ, ಗುರಿ ನಿಗದಿಪಡಿಸಿದ ಮತ್ತು ಸಹಕಾರಿ ಕ್ರಮಕ್ಕೆ FRI ಅವಕಾಶ ನೀಡುತ್ತದೆ.
“ಹಣಕಾಸು ವಂಚನೆ ಅಪಾಯ ಸೂಚಕ (FRI)” ಹೇಗೆ ಸೈಬರ್ ಅಪರಾಧ ತಡೆಗಟ್ಟಲು ಸಹಾಯ ಮಾಡುತ್ತದೆ?
FRI ಅನ್ನು ಮೊದಲು ಅಳವಡಿಸಿಕೊಂಡ ಸಂಸ್ಥೆಗಳಲ್ಲಿ ಒಬ್ಬರಾದ PhonePe, ಅತಿ ಹೆಚ್ಚಿನ FRI ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ವಹಿವಾಟುಗಳನ್ನು ನಿರಾಕರಿಸಲು ಮತ್ತು PhonePe ಪ್ರೊಟೆಕ್ಟ್ ವೈಶಿಷ್ಟ್ಯದ ಭಾಗವಾಗಿ ಆನ್-ಸ್ಕ್ರೀನ್ ಎಚ್ಚರಿಕೆಯನ್ನು ಪ್ರದರ್ಶಿಸಲು ಇದನ್ನು ಬಳಸಿದೆ. PhonePe ಹಂಚಿಕೊಂಡ ದತ್ತಾಂಶವು, FRI ಪರಿಣಾಮಕಾರಿತ್ವವನ್ನು ಸೂಚಿಸುತ್ತದೆ ಏಕೆಂದರೆ ಹೆಚ್ಚಿನ ಸೈಬರ್ ವಂಚನೆ ಪ್ರಕರಣಗಳಲ್ಲಿ FRI ಸೂಚಿಸಿದ ಹೆಚ್ಚು ಅಪಾಯಕಾರಿ ಮೊಬೈಲ್ ಸಂಖ್ಯೆಗಳೇ ಬಾಗಿಯಾಗಿದ್ದು ಕಂಡುಬಂದಿದೆ. ಬಾಕಿ ಪ್ರಮುಖ UPI ಸೇವಾ ಪೂರೈಕೆದಾರ ಸಂಸ್ಥೆಗಳಾದ GooglePay ಮತ್ತು PayTM ಕೂಡ FRI ತಂತ್ರವನ್ನು ಅಳವಡಿಸಲು ಶುರು ಮಾಡಿದ್ದು, ಅವು FRI ಸೂಚಿಸುವ ಅಪಾಯಕಾರಿ ಸಂಖ್ಯೆಗಳಿಗೆ ಹಣಕಾಸು ವರ್ಗಾವಣೆ ವಿಳಂಬ ಮಾಡುವುದು, ಬಳಕೆದಾರರಿಗೆ ಎಚ್ಚರಿಕೆ ನೀಡುವುದು ಮತ್ತು ಅವರಿಂದ ಹಣಕಾಸು ವರ್ಗಾವಣೆಗೆ ಅನುಮೋದನೆ ಪಡೆಯುವುದು ಮುಂತಾದ ಕ್ರಮಗಳನ್ನು ತಮ್ಮ ಆಪ್ಗಳಲ್ಲಿ ಅಳವಡಿಸಲು ಪ್ರಾರಂಭಿಸಿದೆ. ಭಾರತೀಯ ರೆಸೆರ್ವ್ ಬ್ಯಾಂಕ್ (RBI) ತನ್ನ ಜೂನ್ 30,2025 ಅಧಿಸೂಚನೆಯಲ್ಲಿ, ಎಲ್ಲಾ ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ FRI ಅನ್ನು ತಮ್ಮ ಹಣಕಾಸು ವ್ಯವಸ್ಥೆಗಳಲ್ಲಿಅಳವಡಿಸಲು ನಿರ್ದೇಶಿಸಿದೆ. ದೂರಸಂಪರ್ಕ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಶಂಕಿತ ವಂಚನೆಗಳ ವಿರುದ್ಧ ತ್ವರಿತ, ಗುರಿ ನಿಗದಿಪಡಿಸಿದ ಮತ್ತು ಸಹಕಾರಿ ಕ್ರಮಕ್ಕೆ FRI ಅವಕಾಶ ನೀಡುತ್ತದೆ. ಗ್ರಾಹಕ-ಮುಖಿ ವ್ಯವಸ್ಥೆಗಳಲ್ಲಿ FRI ಯ ಏಕೀಕರಣವು ಒಂದು ಉದ್ಯಮ ಮಾನದಂಡವಾಗುವ ನಿರೀಕ್ಷೆಯಿದೆ, ಇದು ಭಾರತದ ಡಿಜಿಟಲ್ ಹಣಕಾಸು ಪರಿಸರ ವ್ಯವಸ್ಥೆಗೆ, ಸೈಬರ್ ಹಣಕಾಸು ವಂಚನೆಗಳನ್ನು ತಡೆಗಟ್ಟುವ ವ್ಯವಸ್ಥಿತ ಸ್ಥಿತಿಸ್ಥಾಪಕತ್ವವನ್ನು ತರುವ ನೀರೀಕ್ಷೆಯಿದೆ.